ಕಗ್ಗ ದರ್ಶನ – 22 (2)

ಕಗ್ಗ ದರ್ಶನ – 22 (2)

ಇಷ್ಟಗಳನೊಡೆಯುವುದು ಕಷ್ಟಗಳ ನೀಡುವುದು
ದುಷ್ಟ ಸಾಸದೆ ಶಿಷ್ಟತನವ ಪರಿಕಿಪುದು
ಎಷ್ಟ ನೀಂ ಸೈಸಲಹುದೆನ್ನುವನು ವಿಧಿರಾಯ
ಶಿಷ್ಟ ಶೋಧಕನವನು – ಮರುಳ ಮುನಿಯ
ವಿಧಿರಾಯ ವಿಧಿಸುವ ಅಗ್ನಿಪರೀಕ್ಷೆಗಳನ್ನು ಈ ಮುಕ್ತಕದಲ್ಲಿ ಸೂಚಿಸಿದ್ದಾರೆ ಮಾನ್ಯ ಡಿ.ವಿ.ಜಿ.ಯವರು. ನಮಗೆ ಇಷ್ಟವಾಗಿರುವುದನ್ನು ನಾಶ ಮಾಡುವುದು; ಸಾಲುಸಾಲಾಗಿ ಕಷ್ಟಗಳನ್ನು ನೀಡುವುದು; ದುಷ್ಟ ಸಾಹಸಗಳ ಮೂಲಕ ನಮ್ಮ ಒಳ್ಳೆಯತನವನ್ನು ಪರೀಕ್ಷೆಗೊಡ್ಡುವುದು; ಇಂತಹ ಸಂಕಟಗಳನ್ನೆಲ್ಲ ನಾವು ಎಷ್ಟು ಸಹಿಸಬಲ್ಲೆವು ಎಂದು ಪರೀಕ್ಷಿಸುವುದು ವಿಧಿರಾಯನ ಉದ್ದೇಶ. ಈ ಜಗತ್ತಿನ ಸಜ್ಜನ(ಶಿಷ್ಟ)ರ ಪತ್ತೆಗೆ ಆತ ಬಳಸುವ ಮಾರ್ಗಗಳು ಇವು.
ಆದ್ದರಿಂದ ಇಂತಹ ಪರೀಕ್ಷೆಗಳನ್ನೆಲ್ಲ ಸಮಚಿತ್ತದಿಂದ ಎದುರಿಸುವ ಬದುಕು ನಮ್ಮದಾಗಬೇಕು. ಇದನ್ನು ಹೇಳುವುದು ಸುಲಭ. ಆದರೆ ಮಾಡಿ ತೋರಿಸಿದವರಿದ್ದಾರೆಯೇ?
ಹೌದು, ಇದ್ದಾರೆ, ಮುಂಬಯಿಯಲ್ಲಿ ಪ್ರದೀಪ್ ತನ್ನಾ ಮತ್ತು ದಮಯಂತಿ ದಂಪತಿ. ಸಿಹಿತಿಂಡಿಗಳ ಅಂಗಡಿಯ ಮಾಲೀಕ ಪ್ರದೀಪ್ ಅವರ ಬದುಕು ಆಗಸ್ಟ್ ೨೦೧೧ರ ವರೆಗೆ ಸಿಹಿಯಾಗಿಯೇ ಇತ್ತು. ಆಗ ಮಗ ನಿಮಿಷ್ ವಯಸ್ಸು ೨೨. ಮನೆಯೆಲ್ಲ ಹರುಷ ತುಂಬಿ ತುಳುಕಿತ್ತು. ಫೋಟೋಗ್ರಾಫಿಯನ್ನು ವೃತ್ತಿಯಾಗಿ ಆಯ್ದುಕೊಂಡ ನಿಮಿಷ್, ಅದರ ಸಲುವಾಗಿ ಸಭೆಯೊಂದಕ್ಕೆ ಹಾಜರಾಗಿ ರಾತ್ರಿ ತಡವಾಗಿ ಮನೆಗೆ ಬರುತ್ತೇನೆಂದು ಫೋನ್ ಮಾಡಿ ತಿಳಿಸಿ, ಲೋಕಲ್ ಟ್ರೈನ್ ಏರಿದ್ದ. ಆಗ ಅದೇನಾಯಿತೋ? ಜನದಟ್ಟಣೆಯಿದ್ದ ರೈಲು ಬೋಗಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಪ್ರಾಣ ಕಳಕೊಂಡ. ಹೆತ್ತವರ ದುಃಖ ಹೇಳಲುಂಟೇ? ಮುಂದಿನ ಒಂದೂವರೆ ವರುಷ ಬದುಕೇ ಮುದುಡಿತ್ತು.
ಅದೊಂದು ದಿನ ಅಮ್ಮ ದಮಯಂತಿ ದುಃಖವನ್ನೆಲ್ಲ ಕೊಡವಿ ಎದ್ದರು. ತನ್ನ ಮಗ ನಿಮಿಷ್ ಮಾಡುತ್ತಿದ್ದ ಒಳ್ಳೆಯ ಕೆಲಸವನ್ನು ನೆನೆದರು. ನಿರಾಶ್ರಿತರಿಗೆ, ವೃದ್ಧರಿಗೆ ಮಗ ಸಹಾಯ ಮಾಡುತ್ತಿದ್ದ. ಅದನ್ನೇ ಮುಂದುವರಿಸಲು ನಿರ್ಧರಿಸಿದರು. ಮುಂಬೈನ ಮುಲುಂದದಲ್ಲಿ ಕಾಯಿಲೆಗಳಿಂದ ನರಳುವ, ರಸ್ತೆ ಬದಿಯಲ್ಲೇ ಬದುಕುವ ವೃದ್ಧರನ್ನೂ, ನಿರಾಶ್ರಿತರನ್ನೂ ಗುರುತಿಸಿದರು. ಅವರಿಗೆ ತಾವೇ ಅಡುಗೆ ಮಾಡಿ, ಬಾಕ್ಸುಗಳಲ್ಲಿ ಆಹಾರ ನೀಡಲು ಶುರು ಮಾಡಿದರು. ಈ ಒಳ್ಳೆಯ ಕೆಲಸಕ್ಕೆ ಕೈಜೋಡಿಸಿದರು ಪತಿ ಪ್ರದೀಪ್. ಬಿಸಿ ಆಹಾರ ತಿನ್ನುವ ಆ ನಿರಾಶ್ರಿತರ ಧನ್ಯತಾ ಭಾವ ಕಾಣುತ್ತಾ, ಈ ಒಳ್ಳೆಯ ಕೆಲಸದ ವ್ಯಾಪ್ತಿ ವಿಸ್ತರಿಸಲು ನಿರ್ಧರಿಸಿ, ಅದಕ್ಕಾಗಿ ನಿಮಿಷ್ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ.
ಈಗ ಹತ್ತು ಹಲವು ಒಳ್ಳೆಯ ಕೆಲಸಗಳು ಆ ಟ್ರಸ್ಟಿನಿಂದ ನಡೆಯುತ್ತಿವೆ: ಪ್ರತಿ ತಿಂಗಳೂ ನಿರಾಶ್ರಿತರಿಗೆ ಔಷಧಿ ಒದಗಣೆ; ಎರಡು ವನವಾಸಿ ಹಳ್ಳಿಗಳ ಬಡ ಕುಟುಂಬಗಳಿಗೆ ಆಹಾರ ವಿತರಣೆ. ವಿಧಿರಾಯ ಎಂತಹ ಶೋಧಕ! ತನ್ನಾ ದಂಪತಿಯ ಮಗನನ್ನೇ ಕಿತ್ತುಕೊಂಡ. ಆ ದುಃಖ ಮರೆಯಲಿಕ್ಕಾಗಿ ನೊಂದವರ ನೆರವಿಗೆ ನಿಂತಿದ್ದಾರೆ ಇವರು. 
   
 

Comments