ಅಮ್ಮ ಎಂಬ ಮಾಯಾವಿ
ಕಿನ್ನರ ಲೋಕದಿಂದ ಇಳಿದು ಬರುವ ಅಪ್ಸರೆ ತನ್ನ ಮಂತ್ರದಂಡದಿಂದ ಮಾಡುವ ಆಶ್ಚರ್ಯಪಟ್ಟು ಒಮ್ಮೆ ಅವಳನ್ನು ನೋಡಬೇಕು ಅನ್ನಿಸುವ ನಮಗೆ,ನಮ್ಮ ಕಣ್ಣಮುಂದೆಯೇ ಇರುವ ಮಾಯಾವಿ ಯಾಕೋ ಅದೃಶ್ಯಳಾಗಿಯೇ ಉಳಿದು ಬಿಡುತ್ತಾಳೆ. ಯಾವುದೋ ಮಂತ್ರ ಹೇಳಿ,ಕಣ್ಕಟ್ಟು ವಿದ್ಯೆ ಪ್ರದರ್ಶಿಸಿ ಮಾಯಾ-ಮಂತ್ರ ಮಾಡೋ ಮಾಯಾವಿ ಇವಳಲ್ಲ.ಆದರೆ ನಮ್ಮಂತೆಯೇ ಎರಡೇ ಕೈ, ಎರಡೇ ಕಾಲು ಇದ್ದರೂ ನಮಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡಿ, ಎಲ್ಲವನ್ನೂ ನಿಭಾಯಿಸೋ ಅದ್ಭುತ ಶಕ್ತಿ.
ಆ ಕಡೆ ಅಡುಗೆ ಮಾಡ್ತಾ, ಈ ಕಡೆ ಮಕ್ಕಳನ್ನೂ ಸಂಭಾಳಿಸುತ್ತಾ, ವಾಶಿಂಗ್ ಮಷೀನ್ ಗೆ ಬಟ್ಟೆ ಹಾಕ್ತಾ, ಒಂದು ಕಿವಿಯನ್ನು ಮೊಬೈಲ್ ಗೆ ಕೊಟ್ಟು, ಮತ್ತೊಂದರಲ್ಲಿ ಮನೆಯ ಎಲ್ಲರ ಬೇಕು-ಬೇಡಗಳಿಗೆ ಓಗೊಡುತ್ತಾ ನಾಳೆಗೂ ಸಿದ್ದತೆ ಮಾಡಿಕೊಳ್ಳುವ ಸರ್ವಾಂತರ್ಯಾಮಿ ಅಮ್ಮ.
ತಲೆನೋವು ಅಂದಾಗ ಒಂದು ಲೋಟ ಸ್ಟ್ರಾಂಗ್ ಕಾಫಿ ಮಾಡಿಕೊಟ್ಟು ತಲೆನೋವು ಮಾಯಮಾಡೋ ಯಕ್ಷಿಣಿ, ಮಕ್ಕಳಿಗೆ ಸ್ವಲ್ಪ ಹುಷಾರಿಲ್ಲದೇ ಇದ್ದರೂ, ಎಷ್ಟೇ ದೂರದಲ್ಲಿದ್ದರೂ ಧ್ವನಿ ಕೇಳಿಯೇ ಗುರುತಿಸಿ ಕಾಳಜಿ ಮಾಡುವ ಮಮತಾಮಯಿ. ಮನಸ್ಸಿನ ಎಲ್ಲಾ ಬೇಜಾರುಗಳನ್ನೂ ತನ್ನ ನಿಷ್ಕಲ್ಮಶ ನಗು ಎನ್ನುವ ಮಾಯಾದಂಡದಿಂದ ಮಾಯ ಮಾಡಿಬಿಡುವ ಕಿನ್ನರಿ.ಯಾವುದಾದರೂ ಕಾರ್ಯಕ್ರಮಗಳಿಗೋ, ಸಮಾರಂಭಗಳಿಗೋ ಹೊರಟಾಗ ಹೇಗೆ ಕಾಣಿಸ್ತಾ ಇದ್ದೀವಿ ಅಂತಾ ಮೊದಲು ಕಾಂಪ್ಲಿಮೆಂಟ್ ಕೊಡೋ ಗೆಳತಿ. ಮಕ್ಕಳನ್ನು ದೂರಕ್ಕೆ ಕಳುಹಿಸುವ ಸಂದರ್ಭದಲ್ಲಿ ಮುಖದ ಮೇಲೆ ಬಲವಂತದ ನಗು ಇಟ್ಟುಕೊಂಡು,ಮನದ ತುಂಬಾ ನೋವು, ಕಣ್ಣ ತುಂಬಾ ನೀರು ತುಂಬಿಕೊಳ್ಳೋ ಅಳುಬುರುಕಿ.
ಅಮ್ಮನ ರೂಪಗಳೂ ಹಲವು. ಅದಕ್ಕೇ ಹೇಳಿದ್ದು ನಾನು ಅಮ್ಮ ಮಾಯಾವಿ ಅಂತಾ.ಸ್ಕೂಲಿಗೆ ಮೊದಲ ದಿನ ಅಳ್ತಾ,ಅಳ್ತಾ ಹೋಗಿ ಹಠ ಮಾಡಿಕೊಂಡು ನಿಂತಾಗ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೈಯ್ಯ ಹಿಡಿತದಲ್ಲಿ ಅಮ್ಮನ ಧೈರ್ಯ ಇರುತ್ತದೆ. ಅಳು ನಿಲ್ಲಿಸದೇ ಇದ್ದಾಗ ಗದರದೇ ರಮಿಸಿ, ಚಾಕೋಲೇಟ್ ಕೊಟ್ಟು ಶಾಲೆ ಬಗ್ಗೆ ಆಸಕ್ತಿ ಮೂಡಿಸೋ ಶಿಕ್ಷಕಿಯಲ್ಲಿಅಮ್ಮ ಕಾಣ್ತಾಳೆ. ಕ್ಲಾಸ್ ಅಲ್ಲಿ ಪಕ್ಕ ಕುಳಿತುಕೊಂಡು ಧೈರ್ಯ ತುಂಬೋ, ಊಟ ಮಾಡುವಾಗ ಜೊತೆಯಲ್ಲಿ ಹಂಚಿ ತಿನ್ನೋ ಗೆಳತಿಯಲ್ಲಿ ಅಮ್ಮ ಇರ್ತಾಳೆ.
ಎಷ್ಟೇ ಕೀಟಲೆ ಮಾಡಿದರೂ ದೂರದೇ, ಅವಳಿಗೆ ಕೊಟ್ಟಿದ್ದರಲ್ಲೇ ಒಂದು ಪಾಲನ್ನು ಮುಚ್ಚಿಟ್ಟು ಕೊಡುವ ಅಕ್ಕನಲ್ಲಿ ಅಮ್ಮನ ಪ್ರೀತಿ ಇರುತ್ತೆ.ಎಷ್ಟೇ ಜಗಳ ಮಾಡಿದರೂ,ಬೈದು-ಹೊಡೆದಾಡಿದರೂ ಮತ್ತೆ-ಮತ್ತೆ ಹಿಂದೆ-ಹಿಂದೆ ಬಂದು ಮಾತಾಡಿಸೋ ಮುಗ್ಧತೆಯಲ್ಲಿ ಅಮ್ಮ ಇರುತ್ತಾಳೆ.
ಆಟ ಆಡುವಾಗ ಬಿದ್ದು ಅಳ್ತಾ ಇರುವಾಗ,ಓಡಿಬಂದು ಎತ್ತಿ "ಏಟಾಯ್ತಾ" ಅಂತಾ ಕಕ್ಕುಲಾತಿಯಿಂದ ವಿಚಾರಿಸಿ, "ನೋಡಿಕೊಂಡು ಆಟ ಆಡಬಾರದಾ?" ಎಂದು ಅಕ್ಕರೆಯಿಂದ ಬಯ್ಯುವ ಹಿತೈಷಿಯ ಬೈಗುಳದಲ್ಲಿ ಅಮ್ಮ ಧ್ವನಿಸುತ್ತಾಳೆ.
"ಹುಷಾರು","ಮನೆ ತಲುಪಿದ್ಯಾ?","ಮೊದಲು ಊಟ ಮಾಡು, ಆಮೇಲೆ ಕೆಲಸ", "ನೀನು ಮೊದಲು ತಿನ್ನು", "ಖುಷಿ ಆಯ್ತಾ?", "ಜಾಸ್ತಿ ನಿದ್ದೆಗೆಡಬೇಡ", "ಚೆನ್ನಾಗಿ ಓದ್ಕೋ", "ನಿಂಗಿಷ್ಟ ಅಂತಾ ತಂದೆ", "ನಿನಗೆ ಇಷ್ಟ ಆಗುತ್ತೆ ಅಂತಾ ಗೊತ್ತಿತ್ತು, ಅದಕ್ಕೇ ಆರಿಸಿದೆ" ಇನ್ನೂ ಹೀಗೇ ಹಲವಾರು ಇಷ್ಟ-ಕಷ್ಟಗಳನ್ನು ಅರಿತು ಕಾಳಜಿ ಮಾಡೋ ಪ್ರತಿಯೊಬ್ಬರಲ್ಲೂ ಅಮ್ಮನ ಛಾಯೆ ಇರುತ್ತೆ.
ಪ್ರೀತಿಯಲ್ಲಿ ಸೋತು ತಲೆ ಮೇಲೆ ಕೈಯಿಟ್ಟುಕೊಂಡು ಕೂತಿದ್ದಾಗ "ಪ್ರೀತಿ ಅಂದ್ರೆ ಅದಲ್ಲ, ನಿಜವಾದ ಪ್ರೀತಿ ಅಂದ್ರೆ ಅಮ್ಮನ ಪ್ರೀತಿ" ಅಂತಾ ತಿಳಿ ಹೇಳಿ ತಿದ್ದುವ ಗೆಳತಿ ಥೇಟ್ ಅಮ್ಮನಂತೇ ಕಾಣಿಸ್ತಾಳೆ. "ನೀನು ಹೀಗೇ ಇದ್ರೆ ಮುಗೀತು ಕಥೆ, ನಿನಗೆ ಹಠ-ಛಲ ಇದ್ದರೆ ಆಡಿಕೊಳ್ಳೂವವರ ಮುಂದೆ ಗೆದ್ದು ತೋರಿಸು" ಅಂತಾ ಛಾಲೆಂಜ್ ಮಾಡಿ, ಬೈಯ್ಯುತ್ತಾ ಬೈಯ್ಯುತ್ತಲೇ ಆತ್ಮಸ್ಥೈರ್ಯ ತುಂಬುವ ಜೊತೆಗಾತಿಯಲ್ಲಿ ಅಮ್ಮ ಕಾಣಸಿಕ್ತಾಳೆ. ಬೈದು ಬುದ್ದಿ ಹೇಳಿ ಸರಿದಾರಿಯಲ್ಲಿ ನಡೆಸುವ ಗೆಳತಿಯ ನಿಸ್ವಾರ್ಥತೆಯಲ್ಲಿ ಅಮ್ಮನ ಕಾಳಜಿ ತುಂಬಿರುತ್ತೆ.
ಸ್ನೇಹಿತರ ಅಮ್ಮಂದಿರ ಕೈರುಚಿಯಲ್ಲಿ ಅಮ್ಮ ನೆನಪಾಗ್ತಾಳೆ. ಭೇಧ-ಭಾವ ತೋರಿಸದೆ ತನ್ನ ಮಕ್ಕಳಂತೆಯೇ ನೋಡಿಕೊಳ್ಳುವ ಚಿಕ್ಕಮ್ಮ-ದೊಡ್ಡಮ್ಮಂದಿರು ಅಮ್ಮನ ಪ್ರತಿರೂಪವೇ ಸರಿ. ಅಷ್ಟೇ ಯಾಕೆ, ಮುದ್ದು-ಮುದ್ದು ಮಾತಾಡುವ ಪುಟಾಣಿಯ ಪ್ರಶ್ನೆಗಳ ಕೌತುಕದಲ್ಲಿ ಅಮ್ಮ ಕಾಣ್ತಾಳೆ.
ಇಷ್ಟೆಲ್ಲಾ ಕಡೆ ಕಾಣಿಸಿ, ಪ್ರೀತಿ ಹಂಚಿ, ಧೈರ್ಯ ನೀಡಿ, ಸ್ಥೈರ್ಯ ತುಂಬಿ ಬಾಳಿಗೇ ದಾರಿದೀಪ ಆಗುವ ಅಮ್ಮ ಮಾಯಾವಿ ಅಲ್ಲದೇ ಮತ್ತೇನು?
-ವಿಭಾ ವಿಶ್ವನಾಥ್
Comments
ಉ: ಅಮ್ಮ ಎಂಬ ಮಾಯಾವಿ
ಅಮ್ಮನಿಗೆ ಅಮ್ಮನೇ ಸಾಟಿ!
In reply to ಉ: ಅಮ್ಮ ಎಂಬ ಮಾಯಾವಿ by kavinagaraj
ಉ: ಅಮ್ಮ ಎಂಬ ಮಾಯಾವಿ
ಧನ್ಯವಾದಗಳು