ಹೂಗಳ ಅರಳುಬಾಳು ಇಮ್ಮಡಿ ಆದೀತೇ?
ಹೂಗಳು ಬಾಡುವುದನ್ನು ನಿಧಾನಗೊಳಿಸುವ ವಿಧಾನ ಶೋಧಿಸಿರುವುದಾಗಿ ಜಪಾನಿನ ವಿಜ್ನಾನಿಗಳು ಘೋಷಿಸಿದ್ದಾರೆ. ಇದರಿಂದಾಗಿ, ಹೂಗಳು ದೀರ್ಘ ಸಮಯ ತಾಜಾ ಆಗಿರಲು ಸಾಧ್ಯ.
ಇದನ್ನು ಶೋಧಿಸಿದವರು ಟೋಕಿಯೋದ ಪೂರ್ವದ ಸುಕುಬಾದಲ್ಲಿರುವ ರಾಷ್ಟ್ರೀಯ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆಯ ಸಂಶೋಧಕರು. “ಮಾರ್ನಿಗ್ ಗ್ಲೋರಿ” ಹೂವಿನ ಒಂದು ಜಪಾನಿ ತಳಿಯ ಅಲ್ಪಕಾಲದ ಅರಳುವಿಕೆಗೆ ಕಾರಣವಾದ ಜೀನನ್ನು ಪತ್ತೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಮುಂಜಾನೆ ಅರಳಿ ಸಂಜೆ ಬಾಡಿ ಹೋಗುವ ಈ ಜನಪ್ರಿಯ ಹೂಗಳ ಹೆಸರು ಮಾರ್ನಿಂಗ್ ಗ್ಲೋರಿ (ಮುಂಜಾವದ ಪ್ರಭೆ). ಇದರ ಸಸ್ಯಶಾಸ್ತ್ರೀಯ ಹೆಸರು ಐಪೊಮಿಯಾ ಪರ್ಪುರಿಯಾ. ಈ ಹೂಗಳಲ್ಲಿ ನೂರಾರು ತಳಿಗಳು.
ಈ ಹೂಗಳು ಬಾಡಲು ಕಾರಣ “ಎಫೆಮೆರಾಲಿ” ಹೆಸರಿನ ಜೀನ್. “ಇದು ನಿಷ್ಕ್ರಿಯವಾಗುವಂತೆ ಮಾಡಿದ್ದರಿಂದಾಗಿ ಹೂಗಳು ಅರಳಿಕೊಂಡಿದ್ದ ಸಮಯ ಇಮ್ಮಡಿಯಾಯಿತು” ಎನ್ನುತ್ತಾರೆ, ಈ ಸಂಶೋಧನಾ ತಂಡರ ಪ್ರಮುಖರಲ್ಲಿ ಒಬ್ಬರಾದ ಕೆನಿಚಿ ಶಿಬುಯಾ. ದಕ್ಷಿಣ ಜಪಾನಿನ ಕಾಗೊಷಿಮಾ ವಿಶ್ವವಿದ್ಯಾಲಯದ ಜೊತೆಗೂಡಿ, ಆ ರಾಷ್ಟ್ರೀಯ ಸಂಸ್ಥೆ ಈ ಸಂಶೋಧನೆ ನಡೆಸಿತ್ತು.
ಜೈವಿಕವಾಗಿ ಮಾರ್ಪಡಿಸಿದ ಹೂಗಳು 24 ಗಂಟೆ ಅರಳಿಕೊಂಡಿದ್ದವು; ಆದರೆ ಹಾಗೆ ಮಾರ್ಪಡಿಸದ ಹೂಗಳು ಅರಳಿದ 13 ಗಂಟೆಗಳ ಬಳಿಕ ಬಾಡಲು ಶುರುವಾದವು ಎಂದು ಅವರು ವಿವರಿಸುತ್ತಾರೆ.
“ಹೂಗಳ ದಳಗಳು ಬಾಡಲು ಆ ಜೀನ್ ಕಾರಣ ಎಂದು ನಾವು ನಿರ್ಧರಿಸಿದೆವು” ಎನ್ನುತ್ತಾರೆ ಶಿಬುಯಾ. ಈ ಸಂಶೋಧನೆಯಿಂದ ಬಿಡಿ ಹೂಗಳ ಬಾಳ್ವಿಕೆ ಹೆಚ್ಚಿಸಲು ಸಾಧ್ಯವಾದೀತು ಎಂಬುದು ಅವರ ಆಶಯ. “ಎಲ್ಲಾ ಹೂಗಳ ಜೀನ್ ಮಾರ್ಪಡಿಸುವುದು ಕಷ್ಟಸಾಧ್ಯ. ಆದರೆ ಆ ಜೀನನ್ನು ನಿಷ್ಕ್ರಿಯಗೊಳಿಸಲು ಇತರ ವಿಧಾನಗಳನ್ನು ಅನುಸರಿಸಬಹುದು. ಉದಾಹರಣೆಗೆ ಆ ಜೀನ್ ಸಕ್ರಿಯವಾಗುವುದನ್ನು ತಡೆಯುವ ದ್ರಾವಣವನ್ನು ಬಿಡಿ ಹೂಗಳು ಹೀರಿಕೊಳ್ಳುವಂತೆ ಮಾಡಬಹುದು.”
“ಕಾರ್ನೇಷನ್ ಇನ್ನಿತರ ಹೂಗಳು ಬಾಡುವುದನ್ನು ನಿಧಾನವಾಗಿಸಲು ಹೂಬೆಳೆಗಾರರು ಈಗ ರಾಸಾಯನಿಕಗಳನ್ನು ಪ್ರಯೋಗಿಸುತ್ತಿದ್ದಾರೆ; ಇದಕ್ಕೆ ಒಂದು ನಿದರ್ಶನ: ಹೂಗಳು ಬಾಡಲು ಕಾರಣವಾಗಿರುವ ಎಥಿಲೀನ್ ಎಂಬ ಪ್ರಚೋದಕವನ್ನು ನಿಷ್ಕ್ರಿಯಗೊಳಿಸಲು ರಾಸಾಯನಿಕಗಳ ಬಳಕೆ. ಅದೇನಿದ್ದರೂ, ಲಿಲ್ಲಿ, ಟ್ಯುಲಿಪ್ ಮತ್ತು ಐರಿಸ್ ಇಂತಹ ಜನಪ್ರಿಯ ಹೂಗಳು ಬೇಗನೇ ಬಾಡಲು ಎಥಿಲೀನ್ ಕಾರಣವಲ್ಲ. ಎಫೆಮೆರಾಲಿಯಂತಹ ಬೇರೊಂದು ಜೀನ್, ಈ ಹೂಸಸ್ಯಗಳ ಹೂದಳಗಳು ಬಾಡಲು ಕಾರಣವಾಗಿರಬಹುದು” ಎಂಬುದು ಶಿಬುಯಾ ಅವರ ವಿವರಣೆ.
ಮನಸ್ಸು ಅರಳಿಸುವ ಸುಂದರ ಹೂಗಳು ದಿನಗಟ್ಟಲೆ ತಾಜಾ ಆಗಿದ್ದರೆ ಎಷ್ಟು ಚೆನ್ನ, ಅಲ್ಲವೇ?