614. ಅನ್ಯಾಯದ ವಿರುದ್ಧ ಯುವಶಕ್ತಿ ಧ್ವನಿ ಎತ್ತಿದರೆ ತಡೆಯುವವರು ಯಾರು?
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ!
ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಈ ಜಗತ್ತು ಭಿನ್ನತೆಗಳ ಗೂಡು. ಭಿನ್ನತೆಯಿಂದಲೇ ಜಗತ್ತು ನಡೆಯಲು ಸಾಧ್ಯ. ಎಲ್ಲರೂ ಬುದ್ಧಿವಂತರು, ಜ್ಞಾನವಂತರಾಗಬೇಕು ಎಂದು ಬಯಸಿದರೂ ಅದು ಸಾಧ್ಯವಿಲ್ಲ. ಎಲ್ಲರೂ ಆರೋಗ್ಯವಂತರಾಗಿರುತ್ತಾರೆಯೇ? ಎಲ್ಲರೂ ಶಕ್ತಿವಂತರಾಗಿರುತ್ತಾರೆಯೇ? ಎಲ್ಲರೂ ವ್ಯಾಪಾರಿಗಳಾಗಲು ಸಾಧ್ಯವೇ? ಎಲ್ಲರೂ ಧೃಢಕಾಯರಾಗಿರುವ ಯೋಧರಾಗಬೇಕೆಂದು ಇಷ್ಟಪಟ್ಟರೂ ಆಗುತ್ತದೆಯೇ? ಹೀಗಿರುವಾಗ ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಪರಸ್ಪರ ಪೂರಕರಾಗಿ ಕೆಲಸ ಮಾಡಿದರೆ ದೇಶಕ್ಕೆ ಒಳಿತಲ್ಲವೇ? ಇವರೆಲ್ಲರನ್ನೂ ಸಮನ್ವಯದಿಂದ ಕರೆದೊಯ್ಯಬಲ್ಲ ಆಡಳಿತವೇ ಉತ್ತಮ ಆಡಳಿತವೆನಿಸಿಕೊಳ್ಳುತ್ತದೆ. ಸ್ವಾರ್ಥಕ್ಕಾಗಿ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಆಡಳಿತದ ಚುಕ್ಕಾಣಿ ಹಿಡಿದರೆ ಅಥವ ಅಂತಹವರೇ ಆಡಳಿತಗಾರರಿಗೆ ಸಲಹೆ ಕೊಡುವವರಾದರೆ ದೇಶ ಅಧಃಪತನದ ಹಾದಿ ಹಿಡಿದಂತೆಯೇ! ಆಡಳಿತ ಮಾಡುವ ಸ್ಥಾನದಲ್ಲಿರುವವರು ತಾವು ಪ್ರತಿನಿಧಿಸುವ ಸಮೂಹದ ಅಥವ ಜನಾಂಗದ ಅಥವ ತಮ್ಮನ್ನು ಬೆಂಬಲಿಸುವವರ ಹಿತವನ್ನು ಮಾತ್ರ ಪ್ರಧಾನವಾಗಿರಿಸಿಕೊಂಡರೆ ಉಳಿದವರು ಸಹಜವಾಗಿ ಅಸಂತುಷ್ಟರಾಗುತ್ತಾರೆ. ಶಾಸನಾಧೀಶರು ಇಡೀ ಸಮಾಜದ ಹಿತವನ್ನು ಸಮಾನವಾಗಿ ನೋಡುವವರಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ಅಣ್ಣಾ ಹಜಾರೆಯವರು ಭ್ರಷ್ಠಾಚಾರದ ವಿರುದ್ಧ ದ್ವನಿಯೆತ್ತಿದಾಗ ದೇಶದ ವಿದ್ವಜ್ಜನರು ಮತ್ತು ಪ್ರಚಂಡ ಯುವಶಕ್ತಿ ಅವರ ಬೆನ್ನಿಗೆ ನಿಂತಿತ್ತು. ದೇಶದಲ್ಲಿ ಏನೋ ಬದಲಾವಣೆ ಆಗಿಬಿಡುತ್ತದೆಂದು ಬಹುಜನರು ನಿರೀಕ್ಷಿಸಿದ್ದರು. ಆದರೆ ಆಡಳಿತಶಾಹಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿ ಚಳುವಳಿಯನ್ನು ಹತ್ತಿಕ್ಕಿಬಿಟ್ಟಿತು. ಅದರ ಪರಿಣಾಮವನ್ನು ಆಡಳಿತ ಪಕ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಸೋಲುವ ಮೂಲಕ ಅನುಭವಿಸಿತು.
ಅಧಿಕಾರದ ಬಲದಿಂದ ಬಹುಜನರ ಅಭಿಪ್ರಾಯಗಳನ್ನು ಮೀರಿ ನಡೆದುಕೊಳ್ಳುವ ನಡವಳಿಕೆಗಳನ್ನು ಆಡಳಿತಗಾರರಲ್ಲಿ ಕಾಣುತ್ತಿದ್ದೇವೆ. ಭ್ರಷ್ಠಾಚಾರದ ಆರೋಪಗಳನ್ನು ಹೊತ್ತ ಮಂತ್ರಿಗಳು, ಶಾಸಕರನ್ನು ರಾಜಾರೋಷಾಗಿ ಸಮರ್ಥಿಸಿಕೊಳ್ಳಲಾಗುತ್ತದೆ. ಎಲ್ಲರನ್ನೂ ಸಮನಾಗಿ ಕಾಣಬೇಕಾದ ಕಾನೂನುಗಳನ್ನು ಸರ್ಕಾರದ ಕ್ರಮಗಳನ್ನು ಒಪ್ಪದವರ ವಿರುದ್ಧ ಕಠಿಣವಾಗಿ ಬಳಸುವುದನ್ನು ಮತ್ತು ಸಮರ್ಥಕರ ಅಪರಾಧಗಳನ್ನು ಕಾಣದಂತಿರುವುದು ಅಥವ ಮುಚ್ಚಿ ಹಾಕುವ ಪ್ರಯತ್ನಗಳನ್ನು ಎಗ್ಗಿಲ್ಲದೆ ಮಾಡುವುದನ್ನು ಕಾಣುತ್ತಿದ್ದೇವೆ. ಭ್ರಷ್ಠಾಚಾರ ತಡೆಯಬೇಕಾದ ಲೋಕಾಯುಕ್ತ ಸಂಸ್ಥೆಯೇ ಭ್ರಷ್ಠಾಚಾರದ ಕೂಪವಾಗುವುದಕ್ಕೆ ಆಡಳಿತದಲ್ಲಿರುವವರು ಸಹಕಾರಿಗಳಲ್ಲವೆಂದು ಹೇಳಲಾಗುವುದಿಲ್ಲ. ತನಿಖಾ ಸಂಸ್ಥೆಗಳು, ಆಯೋಗಗಳು ಆಡಳಿತದ ಮರ್ಜಿಯಂತೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡೂ ಕಾಣದಂತೆ ಇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಗೆ ಆಡಳಿತಗಾರರಿಗೆ ಸಲಹೆ ಕೊಡುವವರ, ಅವರ ಬೆನ್ನಿಗೆ ನಿಂತಿರುವ ಸ್ವಹಿತಾಸಕ್ತಿ ಪ್ರಧಾನ ಶಕ್ತಿಗಳ ಕುಮ್ಮಕ್ಕು ಇರುವುದು ಗುಟ್ಟಾಗಿ ಉಳಿದಿಲ್ಲ. ಕೆಲವು ಮಾಧ್ಯಮಗಳೂ ಸಹ ಪಕ್ಷಪಾತದಿಂದ ವರ್ತಿಸುತ್ತಿವೆ. ಇಂದು ಅಸಹನೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಅಸಹನೆ ಅನ್ನುವುದು ಒಮ್ಮುಖವಾಗಿಲ್ಲ ಎಂಬುದನ್ನು ಅಸಹನೆಯನ್ನು ದಾಳವಾಗಿ ಬಳಸುತ್ತಿರುವವರ ವಿರುದ್ಧದ ಅಸಹನೆಯೂ ಪ್ರಖರವಾಗಿರುವುದು ತೋರಿಸುತ್ತಿದೆ.
ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಇಂದು ಅಂತರ್ಜಾಲ ತಾಣಗಳು ಪ್ರಭಾವಿಯಾಗಿವೆ. ಸಮಯಸಾಧಕರ ಬಂಡವಾಳಗಳು ಬಯಲಾಗುತ್ತಿವೆ. ಇದರ ಮುಂದೆ ಎಷ್ಟೋ ಸಲ ಮಾಧ್ಯಮಗಳೂ ಮಂಕಾಗಿವೆ. ನಮ್ಮ ಗೋಳು ಕೇಳುವವರಾರು ಎಂದು ಹತಾಶೆಗೊಳ್ಳುತ್ತಿದ್ದ ಸ್ಥಿತಿ ಈಗ ಬದಲಾಗುತ್ತಿದೆ. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.