ಪಾದ ಪುರಾಣ
ಭೂಮಿತಾಯಿ ಜೀವಿಗಳ ಪಾದಸ್ಪರ್ಷದಿಂದ ಪುಲಕಿತಳಾಗುತ್ತಾಳೆ! ಭೂಮಿಯೊಂದಿಗೆ ಅತ್ಯಂತ ನಿಕಟ ಮತ್ತು ಅತ್ಯಂತ ದೀರ್ಘಕಾಲ ಸಂಪರ್ಕ ಹೊಂದಿರುವ ಅಂಗ ಪಾದಗಳೇ ಆಗಿವೆ! ಬೆಳಿಗ್ಗೆ ಎದ್ದ ತಕ್ಷಣ ಕೆಲವರು 'ಕರಾಗ್ರೇ ವಸತೇ ಲಕ್ಷ್ಮೀ . .' ಮಂತ್ರ ಪಠಿಸುತ್ತಾ ಕರಗಳನ್ನು ನೋಡಿಕೊಂಡು ಕಣ್ಣಿಗೆ ಸ್ಪರ್ಷಿಸುತ್ತಾರೆ. ಹಾಗೆಯೇ ಭೂಮಿತಾಯಿಯನ್ನು ನೆನೆಯುತ್ತಾ 'ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ತಮ್ಮ ಪಾದಗಳು ಭೂಮಿತಾಯಿಯನ್ನು ಸ್ಪರ್ಷಿಸುತ್ತಿರುವುದಕ್ಕೆ ಕ್ಷಮೆಯಿರಲಿ ಎಂದು ವಿನೀತರಾಗಿ ಪ್ರಾರ್ಥಿಸುತ್ತಾರೆ. ಹಾಗೆಂದು ಪಾದಗಳು ಭೂಮಿಯನ್ನು ಸ್ಪರ್ಷಿಸದೆ ಇರುವುದಕ್ಕೆ ಸಾಧ್ಯವೇ? ಪಾದಗಳು ಇರುವುದೇ ಆ ಕಾರ್ಯಕ್ಕಾಗಿ! ಕೈಯಿಂದ, ತಲೆಯಿಂದ ನಡೆಯುವುದಕ್ಕೆ ಆಗುತ್ತದೆಯೇ? ನೀವು ಹೆಮ್ಮೆಯಿಂದ ತಲೆ ಎತ್ತಿ ನಿಂತಿರಬಹುದು, ನಿಮ್ಮ ಕಣ್ಣುಗಳು ಆಕಾಶದಲ್ಲಿನ ಚಂದ್ರ, ನಕ್ಷತ್ರಗಳನ್ನು ದಿಟ್ಟಿಸುತ್ತಿರಬಹುದು, ನಿಮ್ಮ ಬಾಹುಗಳು ಚಾಚಿಕೊಂಡು ಎಲ್ಲವನ್ನೂ ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಿರಬಹುದು. ಆದರೆ, ಇವೆಲ್ಲವೂ ನಿಮಗೆ ಸಾಧ್ಯವಾಗುವುದು ನಿಮ್ಮ ಪಾದಗಳು ಭದ್ರವಾಗಿ ನೆಲದ ಮೇಲೆ ಊರಿ ನಿಂತಿರುವುದರಿಂದ ಎಂಬುದನ್ನು ಮರೆಯಲಾಗದು.
ಆಹಾ! ಪಾದಗಳ ಹಿರಿಮೆಯೇ ಹಿರಿಮೆ! ಹಿರಿಯರಿಗೆ, ಗೌರವ ಸಲ್ಲಿಸಲು ಅರ್ಹರಾದವರಿಗೆ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ಸಂಪ್ರದಾಯ. ಅವರ ಕಾಲುಗಳನ್ನು ತೊಳೆದು ಪೂಜಿಸುವವರೂ ಇದ್ದಾರೆ. ಯಾರಾದರೂ ತಲೆಗೆ, ಹೊಟ್ಟೆಗೆ, ಬೆನ್ನಿಗೆ, ಕೈಕಾಲುಗಳಿಗೆ ನಮಸ್ಕಾರ ಮಾಡುತ್ತಾರೆಯೇ? ಯಾರಾದರೂ ಸತ್ತರೆ ದೇವರ ಪಾದ ಸೇರಿದ ಅನ್ನುತ್ತಾರೆ. ರಾಮ ವನವಾಸಕ್ಕೆ ಹೋದ ಸಂದರ್ಭದಲ್ಲಿ ಭರತ ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ತಂದು ರಾಮನ ಪ್ರತಿನಿಧಿಯೆಂಬಂತೆ ಅವನು ಬರುವವರೆಗೂ ರಾಜ್ಯವಾಳಿದ್ದ. 'ಕ್ಷಮಿಸುವವರೆಗೂ ನಿಮ್ಮ ಕಾಲು ಬಿಡುವುದಿಲ್ಲ' ಎಂದು ಬೇಡುವವರನ್ನೂ ಕಂಡಿದ್ದೇವೆ. ಅಪರಾಧ ಮಾಡಿದವರು ಕಾಲು ಹಿಡಿದುಕೊಂಡರೆ ಕ್ಷಮೆ ಸಿಕ್ಕೀತು! ತಲೆಯನ್ನೋ ಮತ್ತೇನನ್ನೋ ಹಿಡಿದರೆ ಏಟುಗಳು ಬಿದ್ದಾವು! ನಮ್ಮ ರಾಜಕೀಯ ಪುಡಾರಿಗಳನ್ನೇ ನೋಡಿ, ಅವರು ಬಿದ್ದರೆ ಕಾಲು ಹಿಡಿಯುತ್ತಾರೆ, ಎದ್ದರೆ ಎದೆಗೇ ಒದೆಯುತ್ತಾರೆ! ಎರಡರಲ್ಲೂ ಪ್ರಧಾನವಾಗಿರುವುದು ಕಾಲುಗಳೇ! ಇಂತಹ ಮಹಾಮಹಿಮ ಕಾಲುಗಳಿಗೆ ನಮಸ್ಕಾರ!
ಹಿಂದೆ ಅವರವರ ವೃತ್ತಿ, ಕರ್ಮಗಳನ್ನು ಅನುಸರಿಸಿ ನಾಲ್ಕು ವರ್ಣಾಶ್ರಮಗಳನ್ನು -ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ- ಎಂದು ವಿಂಗಡಿಸಿದ್ದರು. ಯಾವುದೋ ನಮಗೆ ಗೊತ್ತಿಲ್ಲದಷ್ಟು ಹಿಂದಿನ ಕಾಲದಲ್ಲಿ ಇದು ವಿರೂಪಗೊಂಡು ಜಾತಿಗಳಾಗಿಬಿಟ್ಟವು. ವರ್ಣವ್ಯವಸ್ಥೆಯನ್ನು ಕುರೂಪಗೊಳಿಸಿ, ಸ್ವಾರ್ಥಕ್ಕೆ ಆದ್ಯತೆ ನೀಡಿ, ವ್ಯಕ್ತಿಯ ಘನತೆ ಗಾಂಭೀರ್ಯಗಳನ್ನು ಕಡೆಗಣಿಸಿ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯ ಕೊಟ್ಟಿರುವ ಇಂದಿನ ಜಾತಿಪದ್ಧತಿಗೂ, ವೈಜ್ಞಾನಿಕವೂ, ಬುದ್ಧಿಸಂಗತವೂ ಆದ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. ಮುಖದಿಂದ ಬ್ರಾಹ್ಮಣರೂ, ಉದರದಿಂದ ವೈಶ್ಯರೂ, ಬಾಹುಗಳಿಂದ ಕ್ಷತ್ರಿಯರೂ ಮತ್ತು ಪಾದಗಳಿಂದ ಶೂದ್ರರು ಜನಿಸಿದರೆಂದು ಹೇಳಿದ್ದರು. ಈ ವಿಭಾಗಗಳನ್ನು ಜಾತಿಸೂಚಕವಾಗಿ ನೋಡಬಾರದು. ಇದೊಂದು ರೂಪಕವಷ್ಟೆ. ಈ ಅಂಗಗಳಿಂದ ಜೀವಿಗಳ ಜನನವಾಗುವುದಿಲ್ಲವೆಂಬುದು ಸಿದ್ಧಸಂಗತಿ. ಪ್ರಪಂಚದಲ್ಲಿ ವಿಭಿನ್ನತೆ ಅನ್ನುವುದು ಸಹಜವಾದ ಸಂಗತಿ. ಎಲ್ಲರೂ ಒಂದೇ ರೀತಿಯ, ಒಂದೇ ಆಕಾರದ, ಒಂದೇ ವಿಚಾರದವರು ಇರಲು ಸಾಧ್ಯವಿದೆಯೇ? ವಿಭಿನ್ನತೆಯಲ್ಲಿ ಏಕತೆ, ಸಮಾನತೆಗಳನ್ನು ರೂಢಿಸಿಕೊಂಡಾಗಲೇ ಸಮಾಜ ಸ್ವಸ್ಥವಾಗಿರುತ್ತದೆ. ನಾಸ್ತಿಕವಾದದ ಕಮ್ಯೂನಿಸ್ಟ್ ದೇಶಗಳಲ್ಲಿ ಸಹ ವಿದ್ಯಾವಂತರು, ವ್ಯಾಪಾರಿಗಳು, ಸೈನಿಕರು ಮತ್ತು ಶ್ರಮಜೀವಿಗಳು ಇದ್ದೇ ಇರುತ್ತಾರೆ. ಅವರುಗಳಿಗೂ ಮೇಲೆ ಹೇಳಿದ ನಾಲ್ಕು ವಿಭಾಗಗಳು ಅನ್ವಯವಾಗುತ್ತದೆಯಲ್ಲವೇ? ಬ್ರಾಹ್ಮಣ, ಶೂದ್ರ ಇತ್ಯಾದಿ ಪದಗಳ ಬಳಕೆ ಅಪಥ್ಯವೆನಿಸಿದರೆ ಈ ನಾಲ್ಕು ವಿಭಾಗಗಳ ಹೆಸರನ್ನೇ ಇಟ್ಟುಕೊಳ್ಳಬಹುದು. ಶ್ರಮ ಅಥವ ಕರ್ಮ ಪ್ರಧಾನವಾದ ಸಂಗತಿಗಳಿಗೆ ಪಾದಗಳು ಅತ್ಯಾವಶ್ಯಕ. ಆಗಿರುವುದರಿಂದಲೇ ಉಳಿದ ವಿಭಾಗಗಳಿಗೆ ಬೆಲೆ ಅಥವ ಗೌರವ ಸಾಧ್ಯ. ಒಂದು ಕಟ್ಟಡ ಸುಂದರವಾಗಿರಬೇಕಾದರೆ ತಳಪಾಯ ಭದ್ರವಾಗಿರಬೇಕು. ಪಾದಗಳೂ ಸಹ ಶರೀರವೆಂಬ ಅರಮನೆಯ ತಳಪಾಯವೇ ಆಗಿವೆ. ಪಾದಗಳನ್ನು ಕೀಳು ಎಂಬ ಭಾವನೆಯಿಂದ ನೋಡಿದರೆ, ಅರ್ಥ ಮಾಡಿಕೊಂಡರೆ ಅದು ಅಲ್ಪಜ್ಞಾನದ ಸಂಕೇತವಲ್ಲದೆ ಮತ್ತೇನೂ ಅಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಯಾವುದೂ ಕೀಳಲ್ಲ, ಯಾರೂ ಕೀಳಲ್ಲ. ಎಲ್ಲವೂ ಉತ್ತಮವೇ, ಎಲ್ಲರೂ ಉತ್ತಮರೇ.
ಸಮಾನತೆಯ ಪಾಠವನ್ನು ನಮ್ಮ ನಡೆಯುವ ರೀತಿ ನಮಗೆ ಕಲಿಸುತ್ತಿದೆ. ಒಂದು ಕಾಲು ಮುಂದಿಡಬೇಕಾದರೆ ಇನ್ನೊಂದು ಕಾಲು ನೆಲವನ್ನು ಭದ್ರವಾಗಿ ಊರಿ ಸಹಕರಿಸುತ್ತದೆ. ನಂತರದಲ್ಲಿ ಮುಂದೆ ಹೋದ ಕಾಲು ಊರಿ ನಿಂತು ಹಿಂದಿನ ಕಾಲನ್ನು ಮುಂದೆ ಹೋಗಲು ಅನುವು ಮಾಡಿಕೊಡುತ್ತದೆ. ಎಂತಹ ಹೊಂದಾಣಿಕೆ! ನಾವು ಮುಂದುವರೆಯಬೇಕು. ಜೊತೆಜೊತೆಗೆ ಹಿಂದಿರುವವರನ್ನು ಮುಂದೆ ಬರಲು ಸಹಕಾರ ನೀಡಬೇಕು, ಮತ್ತೆ ಮುಂದೆ ಹೋಗಬೇಕು, ಮತ್ತೆ ಹಿಂದಿರುವವರನ್ನು ಮುಂದೆ ಬರಲು ಪ್ರೇರಿಸಬೇಕು. ಇದು ನೈಜ ಸಮಾನತೆಯ ರೀತಿ. ಸಮಾನತೆ ಎಂದರೆ ಎಲ್ಲರೂ ಒಂದೇ ಕಡೆ ನಿಲ್ಲುವುದಲ್ಲ ಆಥವ ಮುಂದೆ ಹೋಗುವವರನ್ನು ತಡೆದು ನಿಲ್ಲಿಸುವುದಲ್ಲ. ಅಭಿವೃದ್ಧಿ ಹೊಂದಲು ಮುಂದೆ ಹೋಗಲೇಬೇಕು, ಹಿಂದುಳಿದವರನ್ನು ಮುಂದೆ ಬರಲು ಸಹಕರಿಸಲೇಬೇಕು. ಸಮಾಜದ ವಿಭಿನ್ನ ಅಂಗಗಳ ಪ್ರತಿನಿಧಿಗಳು ಪೂರ್ವಾಗ್ರಹ ಪೀಡಿತ ವಿಚಾರಗಳನ್ನು ಬದಿಗಿರಿಸಿ, ಪರಸ್ಪರ ದ್ವೇಷಿಗಳಂತೆ ನೋಡದೆ ಒಬ್ಬರು ಇನ್ನೊಬ್ಬರಿಗೆ ಪೂರಕ ಅಥವ ಆಧಾರವಾಗಿದ್ದೇವೆಂಬುದನ್ನು ಕಂಡುಕೊಂಡರೆ ಸಮಾಜದಲ್ಲಿ ನೆಮ್ಮದಿ, ಶಾಂತಿ ನೆಲೆಸೀತು!
ಕಾಲುಗಳ ಮಹಿಮೆಯನ್ನು ಹೇಳುವ ಕೆಲವು ಪದಬಳಕೆಗಳನ್ನು ಗಮನಿಸೋಣ. ಕಾಲೆಳೆಯುವುದು ಅಂದರೆ ಪ್ರಗತಿಗೆ ಅಡ್ಡಿಯಾಗುವುದು, ಕಾಲಿಗೆ ಬೀಳುವುದು ಅಂದರೆ ಶರಣಾಗುವುದು, ಅಡ್ಡಗಾಲು ಹಾಕುವುದು/ಕಾಲು ಕೊಡುವುದು ಅಂದರೆ ತೊಂದರೆ ಕೊಡುವುದು, ಕಾಲು ಮುರೀತೀನಿ ಅಂದರೆ ನನ್ನ ತಂಟೆಗೆ ಬಂದರೆ ಹುಷಾರ್ ಎನ್ನುವುದು, ಕಾಲು ಕಟ್ಟಿಕೊಳ್ಳುವುದು ಅಂದರೆ ಉಪಕಾರ ಬಯಸಿ ಬೇಡಿಕೊಳ್ಳುವುದು, ಕಾಲು ಚಾಚು ಅಂದರೆ ಆರಾಮವಾಗಿರುವುದು, ಹೆಜ್ಜೆಗೆ ಹೆಜ್ಜೆ ಸೇರಿಸು ಅಂದರೆ ಜೊತೆಯಾಗಿ ಹೋಗುವುದು, ಸ್ವಂತ ಕಾಲಿನ ಮೇಲೆ ನಿಲ್ಲುವುದು ಅಂದರೆ ಪರಾವಲಂಬಿಯಾಗದಿರುವುದು- ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಅವನು ಕಾಲಿಟ್ಟ ಕಡೆ ಸ್ಮಶಾನವಾಗುತ್ತದೆ ಎಂದು ದುಷ್ಟರ ಕುರಿತು ಹೇಳುವಂತೆ, ಅವರು ಕಾಲಿಟ್ಟಲ್ಲಿ ಒಳ್ಳೆಯ ಮಳೆ, ಬೆಳೆ ಆಗುತ್ತದೆ ಎಂದು ಸತ್ಪುರುಷರ ಕುರಿತು ಹೇಳುತ್ತಾರೆ. ಒಟ್ಟಿನಲ್ಲಿ ಕರ್ಮಯೋಗಿ ಪಾದಗಳು ನಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಕಾಲುಗಳನ್ನು ಇಡುವ ಮುನ್ನ ಅದು ಸರಿಯಾದ ಸ್ಥಳವೇ ಎಂದು ಪರೀಕ್ಷಿಸಿ ಭದ್ರವಾಗಿ ಕಾಲೂರಿ ಮುಂದುವರೆಯೋಣ. ಆಗ ಸ್ವರ್ಗ ಕೇವಲ ನಮ್ಮ ತಲೆಯ ಮೇಲೆ ಮಾತ್ರ ಅಲ್ಲ, ನಮ್ಮ ಕಾಲುಗಳ ಅಡಿಯೂ ಇದೆ ಎಂಬ ಅರಿವು ಮೂಡದಿರದು.
-ಕ.ವೆಂ.ನಾಗರಾಜ್.