ಬ್ರಹ್ಮಚರ್ಯವೆಂದರೇನು? - 3

ಬ್ರಹ್ಮಚರ್ಯವೆಂದರೇನು? - 3

   ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ ಮತ್ತು ತಿರುಚಿದ ಇತಿಹಾಸದ ಕಲಿಕೆ! ನೈತಿಕ ಶಿಕ್ಷಣ, ಮೌಲ್ಯಗಳಿಗೆ ಅಲ್ಲಿ ಅವಕಾಶವೇ ಇಲ್ಲ, ಎಲ್ಲವೂ ವ್ಯವಹಾರ, ಹಣವೇ ಅಳತೆಗೋಲು! ಭಾರತೀಯರು ಮೆಕಾಲೆ ಹಿಂದೆ ನುಡಿದಿದ್ದ ಭವಿಷ್ಯದಂತೆ ಕರಿಚರ್ಮದ ಪಾಶ್ಚಾತ್ಯರಾಗಿದ್ದಾರೆ! ಇಷ್ಟಾಗಿಯೂ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುವ ಉದ್ದೇಶವೆಂದರೆ ಮುಂದೆ ತಮ್ಮ ಮಕ್ಕಳು ಡಾಕ್ಟರೋ, ಇಂಜನಿಯರೋ ಆಗಿ ಲಕ್ಷ ಲಕ್ಷ ಸಂಪಾದಿಸಲಿ ಎಂದು! ಶಿಕ್ಷಣವಿಂದು ವ್ಯಾಪಾರವಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣದ ಮೂಲ ಉದ್ದೇಶವೇ ನಾಶವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದ, ಶಿಕ್ಷಕರ ಕೊರತೆಯಿರುವ, ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿನಾಲಿ ಮಾಡುವವರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. 

     ನೈತಿಕ ಶಿಕ್ಷಣವಿಲ್ಲದಿರುವುದರಿಂದ ಮತ್ತು ಎಲ್ಲೆಲ್ಲೂ ಸ್ಪರ್ಧಾತ್ಮಕ ಮನೋಭಾವವಿರುವುದರಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕಡಿಮೆ ಅಂಕ ಬಂದರೆ ಬಯಸಿದ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದರೂ ಮುಂದೆ ನೌಕರಿ ಸಿಗುವ ಸಾಧ್ಯತೆ ಕಡಿಮೆ. ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಬಯಸಿದ ಶಿಕ್ಷಣ ಕೊಡಿಸಬಹುದು, ಬಡವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿರುವುದು ಅನುಮಾನ. ಹೀಗೆ ಶಿಕ್ಷಣದ ಮೂಲ ಉದ್ದೇಶವೇ ಅರ್ಥ ಕಳೆದುಕೊಂಡಿದೆ.      ಮಕ್ಕಳು ಇಂದು ಎಷ್ಟು ಒತ್ತಡದಲ್ಲಿರುತ್ತಾರೆಂದರೆ, ಪರೀಕ್ಷೆಗೆ ಮುನ್ನವೇ ಅಥವ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಬರುವ ಮುನ್ನವೇ ಅಥವ ನಿರೀಕ್ಷಿತ ಫಲಿತಾಂಶ ಬಾರದಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಆತ್ಮಸ್ಥೈರ್ಯವನ್ನೇ ಕಲಿಸದ ಶಿಕ್ಷಣವನ್ನು ಶಿಕ್ಷಣವೆನ್ನಬಹುದೇ? ಇದು ಒಂದು ಮಗ್ಗುಲಾದರೆ ಇನ್ನೊಂದು ಕರಾಳ ಮುಖವೂ ಇದೆ. ಅದೆಂದರೆ ಮಕ್ಕಳು ನೈತಿಕವಾಗಿ ಹಾದಿ ತಪ್ಪುತ್ತಿರುವುದು. ಚಿಕ್ಕ ವಯಸ್ಸಿನಲ್ಲೇ ಸಿಗರೇಟು ಸೇದುವುದು, ಮಾದಕದ್ರವ್ಯಗಳ ಸೇವನೆ, ಡ್ರಗ್ಸ್ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಪೋಷಕರ ನಿರ್ಲಕ್ಷ್ಯವೂ ಇವುಗಳಿಗೆ ಕೊಡುಗೆ ನೀಡಿದೆಯೆಂದರೆ ತಪ್ಪಲ್ಲ. ಹಣ ಕೊಟ್ಟು ಪದವಿ, ಡಾಕ್ಟರೇಟ್ ಕೊಂಡುಕೊಳ್ಳಬಹುದೆನ್ನುತ್ತಾರೆ. ನೈತಿಕತೆ ಕೊಡದ ಶಿಕ್ಷಣ ಒಂದು ಶಿಕ್ಷಣವೇ?

     ಹಾಗಾದರೆ ಇದಕ್ಕೆ ಪರಿಹಾರವೇನು? ಶಿಕ್ಷಣಪದ್ಧತಿಯಲ್ಲಿ ಸೂಕ್ತ ಪರಿವರ್ತನೆಯಾಗದೆ, ಪೋಷಕರ ಮನೋಭಾವ ಬದಲಾಗದೆ ಪರಿಹಾರ ಕಷ್ಟಸಾಧ್ಯ. ಹಿಂದಿನ ಬ್ರಹ್ಮಚರ್ಯಾಶ್ರಮ, ಗುರುಕುಲ ಪದ್ಧತಿಯ ಶಿಕ್ಷಣದ ಮಹತ್ವದ ಮತ್ತು ಉತ್ತಮ ಅಂಶಗಳನ್ನು ಒಳಗೊಂಡಂತೆ ಹೊಸ ಶಿಕ್ಷಣ ಪದ್ಧತಿ ಜಾರಿಗೆ ತರುವುದೇ ಇರುವ ಉತ್ತಮ ಪರಿಹಾರವಾಗಿದೆ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಭಾರತ ಮೂಲತಃ ಆಧ್ಯಾತ್ಮಿಕ ಪ್ರಧಾನ ದೇಶವಾಗಿದ್ದು, ಆಧ್ಯಾತ್ಮಿಕತೆಗೆ ಬಲ ಬಂದರೆ ಪುನಃ ಪರಿಸ್ಥಿತಿ ಬದಲಾಗಬಹುದು. ವಿವೇಕಾನಂದರು ಹೇಳಿದಂತೆ ಕೆಲವೊಮ್ಮೆ ಆಧ್ಯಾತ್ಮಿಕತೆ ಮೇಲುಗೈ ಪಡೆದರೆ, ಕೆಲವೊಮ್ಮೆ ಭೋಗವಾದ ಮೇಲುಗೈ ಪಡೆಯುತ್ತದೆ. ಸಮುದ್ರದ ಅಲೆಗಳಂತೆ ಒಂದನ್ನೊಂದು ಹಿಂಬಾಲಿಸುತ್ತವೆ. ಹೀಗಾಗಲೆಂದು ಹಾರೈಸೋಣ. ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಪ್ರತಿಷ್ಠೆಗಳನ್ನು ಬದಿಗಿಟ್ಟು ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಆದರೆ, ವೈಚಾರಿಕತೆ ನಮ್ಮ ಮೂಲಮಂತ್ರ ಆಗಬೇಕು. ಈ ಮಂತ್ರ ಹೇಳುವುದು ಇದನ್ನೇ: ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ| ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತ || (ಋಕ್.೫.೫೫.೮) ಹೇ ಮಾನವರೇ, ಯಾವುದು ಪ್ರಾಚೀನವೋ ಅದನ್ನೂ ಗಮನಿಸಿರಿ. ಇತಿಹಾಸದಿಂದ ಪಾಠ ಕಲಿಯಿರಿ. ಯಾವುದು ನೂತನವೋ ಅದನ್ನೂ ಕೇಳಿರಿ. ಯಾವುದು ಶಾಸ್ತ್ರ ರೂಪದಲ್ಲಿ ಹೇಳಿದೆಯೋ ಅದನ್ನೂ ಕೇಳಿ. ನಿಮ್ಮ ಅಂತರಂಗ ನಿಮಗೆ ಏನು ಹೇಳುತ್ತದೋ ಅದನ್ನೂ ಕೇಳಿ. ಯಾರು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೋ ಅವರ ಹಿಂದೆಯೇ ನಿಮ್ಮ ಜೀವನ ರಥಗಳೂ ಸಾಗಲಿ. ವಿವೇಚನೆ ಮಾಡಿ ಮುನ್ನಡೆಯಿರಿ ಎನ್ನುವ ಈ ಉದಾತ್ತತೆ ನಮ್ಮಲ್ಲಿ ಬೆಳೆಯಬೇಕು.

     ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯)      ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಜನರೇ, ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಸತ್ಯವನ್ನು ಕಂಡುಕೊಳ್ಳಿರಿ, ಅದನ್ನು ಹೊರಕ್ಕೆ ತನ್ನಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಶಕ್ತಿಯಿಂದ ತೊಡೆದುಹಾಕಿ. ಜಗತ್ತಿನಲ್ಲಿ ಇರುವ ಸುಮಾರು ೮೪ ಲಕ್ಷ ಜೀವಜಂತುಗಳ ಪೈಕಿ ಮಾನವನಿಗೆ ಮಾತ್ರ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದನ್ನು ಬಳಸಿಕೊಂಡು ಸತ್ಯ ಯಾವದು, ಒಳ್ಳೆಯದು ಯಾವುದು ಎಂಬುದನ್ನು ಕಂಡುಕೊಂಡು ಕೆಟ್ಟದ್ದನ್ನು ದೂರ ಮಾಡಲು ನೀಡುವ ಕರೆ ಎಷ್ಟು ಸುಂದರ ಅಲ್ಲವೇ? ನೈತಿಕತೆಯನ್ನು ಬಲಪಡಿಸುವ, ಆತ್ಮಸ್ಥೈರ್ಯವನ್ನು ಕೊಡುವಂತಹ, ದೇಶ ಹಾಗೂ ಸಮಾಜದ ಹಿತ ಬಯಸುವ ಸತ್ಪ್ರಜೆಗಳನ್ನು ನಿರ್ಮಿಸುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ. ಆ ನಿಟ್ಟಿನಲ್ಲಿ ಜನನಾಯಕರು, ಪೋಷಕರು, ಮನೋಶಾಸ್ತ್ರಜ್ಞರು, ಶಿಕ್ಷಣತಜ್ಞರು ಚಿಂತಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ಕಾಲವೀಗ ಬಂದಿದೆ. 

-ಕ.ವೆಂ.ನಾಗರಾಜ್.