ಕಗ್ಗ ದರ್ಶನ – 25 (1)
ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ
ಹೀನಮಾವುದುವಿಲ್ಲ ಜಗದ ಗುಡಿಯೂಳಿಗದೆ
ತಾಣ ನಿನಗಿಹುದಿಲ್ಲಿ - ಮಂಕುತಿಮ್ಮ
“ಏನಾದರೂ ಕೆಲಸ ಮಾಡುತ್ತಿರು; ಸೋಮಾರಿಯಾಗಿ ಕೂತಿರಬೇಡ. ನಿನ್ನ ಕೈಗೆ ಸಿಕ್ಕಿದ ಯಾವುದೇ ಕೆಲಸವನ್ನಾದರೂ ಮಾಡು” ಎಂಬ ಸಾರ್ವಕಾಲಿಕ ಸಂದೇಶದೊಂದಿಗೆ ಈ ಮುಕ್ತಕವನ್ನು ಆರಂಭಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಕೆಲವರು ಪದವಿ ಮುಗಿಸಿದ ಬಳಿಕ, ಸ್ನಾತಕೋತ್ತರ ಪದವಿ ಮಾಡಬೇಕೆಂದು ಬಯಸುತ್ತಾರೆ, ಆದರೆ, ತಮಗೆ ಬೇಕಾದ ವಿಷಯದಲ್ಲಿ ಅಥವಾ ತಮಗೆ ಬೇಕಾದ ಕಾಲೇಜಿನಲ್ಲಿ ಪ್ರವೇಶ ಸಿಗಲಿಲ್ಲ ಎಂಬ ಕಾರಣಕ್ಕಾಗಿ, (ಪದವಿಯ ಅಂತರ) ಒಂದು ವರುಷ ವೃಥಾ ಕಾಲಹರಣ ಮಾಡುತ್ತಾರೆ. ಬದುಕಿನ ಅತ್ಯಮೂಲ್ಯ ಒಂದು ವರುಷವನ್ನೇ ಹೀಗೆ ಹಾಳು ಮಾಡುತ್ತಾರೆ. ಅದರ ಬದಲಾಗಿ, ತಾವು ಬಯಸಿದ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ವಿಷಯದಲ್ಲಿ ಸ್ನಾತಕೋತ್ತರ ಕಲಿಕೆ ಸಾಧ್ಯವಿಲ್ಲವೇ? ಅಥವಾ ಇನ್ನೊಂದು ಕಾಲೇಜಿನಲ್ಲಿ ಅಧ್ಯಯನ ಮುಂದುವರಿಸಲಾಗದೇ?
“ನಾನೇನು ಹುಲುಕಡ್ಡಿ, ನನ್ನಿಂದ ಏನಾದೀತು ಎಂಬ ಮಾತು ಬೇಡ.” ಇಂತಹ ನಕಾರಾತ್ಮಕ ಭಾವನೆಯಿಂದ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು ಎಂಬುದು ಮಾನ್ಯ ಡಿವಿಜಿಯವರ ಇನ್ನೊಂದು ಸಂದೇಶ. ೧೯೮೦ರಲ್ಲಿ ಮಂಗಳೂರಿನಲ್ಲಿ “ಬಳಕೆದಾರರ ವೇದಿಕೆ” ಆರಂಭಿಸಿದಾಗಿನಿಂದ ಮೂರು ಸಾವಿರದಷ್ಟು ಪ್ರಕರಣಗಳಲ್ಲಿ ನೊಂದವರಿಗೆ ಮಾರ್ಗದರ್ಶನ ನೀಡಿದ ಸಮಾಧಾನ ನನಗಿದೆ. ನನ್ನಿಂದೇನಾದೀತು ಎಂದು ಕೈಚೆಲ್ಲಿ ಕೂತಿದ್ದರೆ ಇದಾಗುತ್ತಿತ್ತೇ?
ಈ ಜಗತ್ತು ಒಂದು ಗುಡಿ; ಇದರ ಸೇವೆ(ಊಳಿಗ)ಯಲ್ಲಿ ಯಾವುದೂ ಹೀನವಲ್ಲ; ಎಲ್ಲ ಕೆಲಸವೂ ಉತ್ತಮ ಎನ್ನುತ್ತಾರೆ ಡಿ.ವಿ. ಗುಂಡಪ್ಪನವರು. ಕೆಲಸದಲ್ಲಿ ಮೇಲು-ಕೀಳು ಎಂಬುದು ನಮ್ಮ ಭಾವನೆ, ಅಷ್ಟೇ. ಮನೆಯಿರಲಿ, ಕಚೇರಿಯಿರಲಿ, ಕಾರ್ಖಾನೆಯಿರಲಿ, ಸಂಸ್ಥೆಯಿರಲಿ ಅಲ್ಲಿ ಎಲ್ಲ ಕೆಲಸವೂ ಉತ್ತಮ ಹಾಗೂ ಅವಶ್ಯ. ಅಧಿಕಾರಿಗಳ ಕೆಲಸ ಮೇಲು; ಕಾರಕೂನರ, ಗುಮಾಸ್ತರ, ಸಹಾಯಕರ, ಕೂಲಿಗಳ, ಶುಚಿ ಮಾಡುವವರ ಕೆಲಸ ಕೀಳು ಎಂಬ ಭಾವವೇ ಸರಿಯಲ್ಲ.
ಯಾಕೆಂದರೆ, ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನ(ತಾಣ)ವಿದೆ; ಅದರೊಂದಿಗೆ ಜವಾಬ್ದಾರಿಯೂ ಇದೆ. ಅದನ್ನು ತಿಳಿದುಕೊಂಡು, ಮನೆಯಲ್ಲಿ, ಕಚೇರಿಯಲ್ಲಿ, ಕಾರ್ಖಾನೆಯಲ್ಲಿ, ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ತನ್ನ ಹೊಣೆ ಹೊತ್ತರೆ ಜಗತ್ತಿನಲ್ಲಿ ಎಲ್ಲವೂ ಸುಗಮ, ಅಲ್ಲವೇ?
Comments
ಉ: ಕಗ್ಗ ದರ್ಶನ – 25 (1)
ಏನಾನುಮಂ ಮಾಡು ..
ಹೀನಮಾವುದುವಿಲ್ಲ! . . . ಸಾರ್ವಕಾಲಿಕ ಸಂದೇಶ!!!!