ನಾನು ನೋಡಿದ ಚಿತ್ರ- ಹೊಟೆಲ್ ರವಾಂಡ(Hotel Rwanda)

ನಾನು ನೋಡಿದ ಚಿತ್ರ- ಹೊಟೆಲ್ ರವಾಂಡ(Hotel Rwanda)

IMDb:  https://www.imdb.com/title/tt0395169/?ref_=nv_sr_1

 
 
 
 
 
 
 
 
 
 
 
 
 
  ಆಫ್ರಿಕಾ ಎಂದ ಕೂಡಲೆ ನಮಗೆ ಥಟ್ಟನೆ ನೆನಪಾಗುವುದು ಎರಡು. ಕಾಡಿನ ಸಫಾರಿ ಮತ್ತು ಅಲ್ಲಿನ ಜನರ ಬಡತನ, ಹಸಿವು. ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳನ್ನು ನೋಡುವ ಹವ್ಯಾಸ ಉಳ್ಳವರಿಗೆ ಅಲ್ಲಿನ ಕೆಲವು ಆಂತರಿಕ ಸಮಸ್ಯೆಗಳ ಬಗ್ಗೆ ಸ್ಥೂಲವಾಗಿ ಒಂದು ಚಿತ್ರಣವೂ ಇರಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳು ಅಬ್ಬರದಿಂದ ವರದಿಯಾಗುವಂತೆ, ಆಫ್ರಿಕಾದ ದೇಶಗಳ ಬಗ್ಗೆಯೂ ವರದಿ ಆದರೆ ಎಷ್ಟೋ ಜೀವಹಾನಿ ತಪ್ಪಿಸಬಹುದು. ಆದರೆ ಅದೊಂದು ಶಾಪಗ್ರಸ್ತ ನಾಡು ಎನಿಸುತ್ತದೆ. ಅಲ್ಲಿರುವ ಜನರು ಮನುಷ್ಯರೇ ಅಲ್ಲವೇನೋ ಎಂಬ ಉದಾಸೀನದ ಭಾವನೆ ಹೊರಗಿನ ಜಗತ್ತಿಗೆ ಮೇಲ್ನೋಟಕ್ಕಲ್ಲದಿದ್ದರೂ ಇದ್ದೇ ಇದೆ. ಯಾರೂ ಅಲ್ಲಿನ ದೇಶಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.
  ಜಗತ್ತಿನ, ಅದರಲ್ಲೂ ವಿಶ್ವಸಂಸ್ಥೆಯ ನಿರ್ಲಕ್ಷ್ಯದಿಂದ, ತಪ್ಪಿಸಬಹುದಾಗಿದ್ದಂತ ಒಂದು ದುರಂತ 1994ರಲ್ಲಿ ನಡೆದೇ ಹೋಯಿತು. ಆಫ್ರಿಕಾದಲ್ಲಿ ಉಗಾಂಡದ ದಕ್ಷಿಣಕ್ಕೆ ಇರುವ ಈ ಪುಟ್ಟ ದೇಶದಲ್ಲಿ 1994ರಲ್ಲಿ ನಡೆದ ಜನಾಂಗೀಯ ಘರ್ಷಣೆಯಿಂದ ಸುಮಾರು 8 ಲಕ್ಷ ಜನರ ಬಲಿಯಾಯಿತು. ರವಾಂಡದಲ್ಲಿ ಎರಡು ಪಂಗಡಗಳು- ಹುಟು ಮತ್ತು ತೂಟ್ಸಿ(Hutu and Tutsi). ಐತಿಹಾಸಿಕವಾಗಿ ತೂಟ್ಸಿ ಜನಗಳು ಅಲ್ಪಸಂಖ್ಯಾತರಾಗಿದ್ದರೂ, ಆಳುವ ಪಂಗಡವಾಗಿತ್ತು. ಹುಟು ಜನರು ಬಹುಸಂಖ್ಯಾತರಾಗಿದ್ದು ರೈತರು, ಕೂಲಿ ಕಾರ್ಮಿಕರು ಮತ್ತು ಇತರೆ ಆರ್ಥಿಕವಾಗಿ ದುರ್ಬಲ ಜನರನ್ನು ಒಳಗೊಂಡಿತ್ತು. ಈ ಇಬ್ಬರ ನಡುವಿನ ವ್ಯತ್ಯಾಸ ಕೇವಲ ಆಳುವವರು ಮತ್ತು ಆಳಲ್ಪಡುವವರು ಎಂದಷ್ಟೇ ಆಗಿತ್ತು. ಹಾಗಾಗಿ ಯಾರಾದರೂ ಹುಟುವೊಬ್ಬ ಆರ್ಥಿಕವಾಗಿ ಬೆಳೆದರೆ ಅವನು ನಿಧಾನವಾಗಿ ಸಾಮಾಜಿಕ ಸ್ಥಾನಮಾನ ಗಳಿಸುತ್ತ ತೂಟ್ಸಿ ಗುಂಪಿಗೆ ಸೇರಿಕೊಳ್ಳುತ್ತಿದ್ದ. ಇಷ್ಟು ಸರಳವಾಗಿದ್ದ ಈ ಒಂದು ವ್ಯತ್ಯಾಸವನ್ನು ಜಟಿಲಗೊಳಿಸಿದ್ದು, ಜರ್ಮನ್ ಮತ್ತು ಬೆಲ್ಜಿಯನ್ ರಾಜಾಡಳಿತ. ಸ್ವಾತಂತ್ರ್ಯ ಪೂರ್ವದಲ್ಲಿ ರವಾಂಡ ಬೆಲ್ಜಿಯಂ ದೇಶದ ವಸಾಹತಾಗಿತ್ತು. ಮೊದಲನೆ ವಿಶ್ವಯುದ್ಧ ಮುಗಿದ ಮೇಲೆ ವರ್ಸೆಯ ಒಪ್ಪಂದದಂತೆ(treaty of Versaille), ಜರ್ಮನಿಯ ಆಡಳಿತದಲ್ಲಿದ್ದ ರವಾಂಡ-ಉರುಂಡಿ(Rwanda-Urundi) ಎಂಬ ವಸಾಹತನ್ನು ಬೆಲ್ಜಿಯಂ ದೇಶಕ್ಕೆ ಒಪ್ಪಿಸಲಾಗುತ್ತದೆ. ತಮ್ಮ ಆಡಳಿತ ಭದ್ರಪಡಿಸಿಕೊಳ್ಳಲು ಮತ್ತು ಹೆಚ್ಚಿನ ಜನರ ಮೇಲೆ ನಿಯಂತ್ರಣ ಕಾಯ್ದುಕೊಳ್ಳಲು ಬೆಲ್ಜಿಯನ್ ರಾಜಾಡಳಿತ ತೂಟ್ಸಿ ರಾಜಮನೆತನಗಳಿಗೆ ಮಣೆಹಾಕಿ ಅವರಿಗೆ ಪಾಶ್ಚಾತ್ಯ ಶಿಕ್ಷಣ, ಉಡುಗೆ-ತೊಡುಗೆ ಎಲ್ಲವನ್ನೂ ಕೊಟ್ಟಿತು. ಇದು ಸಾಲದೆಂಬಂತೆ 1926ರಲ್ಲಿ ಹುಟು ಮತ್ತು ತೂಟ್ಸಿ ಜನಗಳನ್ನು ಗುರುತಿಸಲು ಗುರುತಿನ ಚೀಟಿಗಳನ್ನು ವಿತರಿಸಲು ಆರಂಭಿಸಿತು. ಬೆಲ್ಜಿಯನ್ ರಾಜಾಡಳಿತ ಒಬ್ಬನನ್ನು ಹುಟು ಅಥವಾ ತೂತ್ಸಿಯೆಂದು ದೃಢಪಡಿಸಲು ಮೂಗಿನ ಅಳತೆ, ಮುಖದ ಉದ್ದ ಹೀಗೆ ಏನೇನೋ ಮಾನದಂಡಗಳನ್ನು ತಂದಿತು. ಈ ಒಂದು ಘಟನೆ ಅಲ್ಲಿಯ ತನಕ ಎರಡೂ ಗುಂಪುಗಳ ನಡುವೆ ಇದ್ದ ಸರಳ ಆರ್ಥಿಕ ವ್ಯತ್ಯಾಸವನ್ನು ಸಂಕೀರ್ಣಗೊಳಿಸಿ ಅವರ ನಡುವೆ ಇದ್ದ ಗೆರೆಯನ್ನು ಗೋಡೆಯಾಗಿ ಬದಲಿಸಿತು. ಇದರಿಂದ ಹುಟುಗಳಿಗೆ ತೂಟ್ಸಿ ರಾಜಮನೆತನಗಳ ಮೇಲಿದ್ದ ಸಿಟ್ಟು, ಅಸಹನೆ ಜನಾಂಗಿಯ ದ್ವೇಷಕ್ಕೆ ತಿರುಗಿ ತಲೆತಲಾಂತರಗಳವರೆಗೂ ಮುಂದುವರೆಯುವಂತೆ ಮಾಡಿತು. ಸ್ವಾತಂತ್ರ್ಯ ಸಿಕ್ಕ ನಂತರ(1961-62) ರವಾಂಡ ಮತ್ತು ಬುರುಂಡಿ ಎಂದು ಎರಡು ದೇಶಗಳಾಗಿ, ರವಾಂಡದಲ್ಲಿ ಹುಟು ಕ್ರಾಂತಿಯಾಗಿ ಹುಟು ಬಹುಸಂಖ್ಯಾತ ಆಡಳಿತ ಸ್ಥಾಪಿತವಾಯಿತು ಮತ್ತು ಬುರುಂಡಿಯಲ್ಲಿ ತೂಟ್ಸಿ ಆಡಳಿತ ಉಳಿಯಿತು. ಸ್ವಾತಂತ್ರ್ಯಾನಂತರ ಹಲವಾರು ತೂಟ್ಸಿಗಳು(ಹೆಚ್ಚಾಗಿ ರಾಜಮನೆತನದವರು ಮತ್ತು ಇತರ ಪ್ರಭಾವಿ ಕುಟುಂಬಗಳು) ರವಾಂಡ ದೇಶವನ್ನು ತೊರೆದು ಉಗಾಂಡ ದೇಶ ಸೇರಿ ಅಲ್ಲಿಂದ ಮತ್ತೆ ರವಾಂಡದ ಮೇಲೆ ನಿಯಂತ್ರಣ ಪಡೆಯಲು ಹೋರಾಟ ಮುಂದುವರೆಸುತ್ತಾರೆ. 

 
 
 
 
 
 
 
 
 
 
 
 
ರವಾಂಡ ದೇಶದಲ್ಲಿ ಕೊಡಲಾಗುತ್ತಿದ್ದ ಗುರುತಿನ ಚೀಟಿ
  ಸುಮಾರು ಮೂವತ್ತು ವರ್ಷಗಳ ಕಾಲ ಈ ಎರಡೂ ಗುಂಪುಗಳ ನಡುವೆ ಸಂಘರ್ಷ ಆಗುತ್ತಲೇ ಇರುತ್ತದೆ. 90ರ ದಶಕದ ಹೊತ್ತಿಗೆ ತೂಟ್ಸಿ ಗುಂಪಿನ ರವಾಂಡನ್ ಪೇಟ್ರಿಯಾಟಿಕ್ ಫ್ರಂಟ್(FPR- Front Patriotique Rwandais/ Rwandan Patriotic Front) ರವಾಂಡ ದೇಶದ ಮೇಳೆ ದಾಳಿ ಮಾಡಿ ಉತ್ತರದ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾರೆ. ಫ್ರೆಂಚ್ ಮತ್ತು ಜೈರಿಯನ್(ಈಗಿನ ಕಾಂಗೋ) ಪಡೆಗಳ ಸಹಾಯದೊಂದಿಗೆ ರವಾಂಡ ಸರ್ಕಾರ ಮತ್ತು RPF ನಡುವೆ ಕದನ ವಿರಾಮ ಘೋಷಣೆಯಾಗುತ್ತದೆ. ಅಲ್ಲಿಂದ 93ರವರೆಗೆ ರವಾಂಡ ಅಧ್ಯಕ್ಷ ಜುವೆನಿಲ್ ಹಬ್ಯಾರಿಮಾನ ತೂಟ್ಸಿ RPF ಬಂಡುಕೋರರನ್ನು ಹತ್ತಿಕ್ಕಲು ಇಂಟರ್ ಹಾಮ್ವೆ(Interhamve- “Those who stand together”) ಎಂಬ ಸಶಸ್ತ್ರ ನಾಗರೀಕ ಪಡೆಯನ್ನು ಸೃಷ್ಟಿಸಿ ತರಬೇತಿ ಕೊಡುತ್ತಾನೆ. ಇದರ ಜೊತೆಜೊತೆಯಲ್ಲೇ ರವಾಂಡದಲ್ಲಿ ಬಹುಪಕ್ಷೀಯ(ಹುಟು-ತೂಟ್ಸಿ ಒಳಗೊಂಡ) ಸರ್ಕಾರದ ಸೃಷ್ಟಿಯನ್ನು ತಡೆಯುತ್ತಾನೆ. ಫೆಬ್ರವರಿ 93ರ ಅವಧಿಗೆ RPF ಪಡೆ ರಾಜಧಾನಿ ಕಿಗಾಲಿಯ ಹೊರವಲಯಕ್ಕೆ ತಲುಪಿದಾಗ ಹಲವಾರು ತಿಂಗಳ ಮಾತುಕತೆ ನಡೆಸಿ ಆಗಸ್ಟ್ 93ರಲ್ಲಿ ಅಧ್ಯಕ್ಷ ಹಬ್ಯಾರಿಮಾನ ಮತ್ತು RPF ನಡುವೆ ಶಾಂತಿ ಒಪ್ಪಂದ ಸಹಿ ಹಾಕಲಾಗುತ್ತದೆ. ಇದರನ್ವಯ ರವಾಂಡದಿಂದ ವಲಸೆ ಹೋಗಿದ್ದ ಜನರಿಗೆ(ಹುಟು ಮತ್ತು ತೂಟ್ಸಿ) ಮರಳಿ ಬರಲು ಅವಕಾಶ ಮಾಡಿಕೊಡಲಾಗುತ್ತದೆ. ಇದೆಲ್ಲವನ್ನೂ ವಿಶ್ವಸಂಸ್ಥೆಯ ಪಡೆಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ. ಇಷ್ಟಾದರೂ ಹಬ್ಯಾರಿಮಾನ ಬಹುಪಕ್ಷೀಯ ಸರ್ಕಾರ ರಚನೆಯಾಗುವುದನ್ನು ಮಾರ್ಚ್ 94ರವರೆಗೆ ತಡೆಯುತ್ತಾನೆ. ಇನ್ನೇನು ಅಂತರ್ಯುದ್ಧ ಆರಂಭವಾಗುತ್ತದೆ ಎಂದು ಸೂಚನೆ ಸಿಕ್ಕ ಹಲವಾರು ಮಾನವ ಹಕ್ಕು ಹೋರಾಟಗಾರರು ರವಾಂಡ ಬಿಟ್ಟು ವಲಸೆ ಹೋಗುತ್ತಾರೆ. ಏಪ್ರಿಲ್ 6, 1994ರಲ್ಲಿ ಕಿಗಾಲಿ ಏರ್ಪೋರ್ಟ್ ನ ಬಳಿ ಹಬ್ಯಾರಿಮಾನ ಮತ್ತು ಬುರುಂಡಿಯ ಅಧ್ಯಕ್ಷ ಸಿಪ್ರಿಯೆನ್ ಎಂಟಾರ್ಯಮಿರ(Cyprien Ntaryamira) ಇದ್ದ ವಿಮಾನವನ್ನು ಹೊಡೆದುರುಳಿಸಲಾಗುತ್ತದೆ. ಈ ಒಂದು ಘಟನೆಯಿಂದ ಮದ್ದಿನ ರಾಶಿಗೆ ಕಿಡಿ ಹಾರಿಸಿದಂತಾಗುತ್ತದೆ. ವಿಮಾನದ ಮೇಲೆ ದಾಳಿ ಮಾಡಿದವರು ಯಾರು ಎಂದು ತಿಳಿಯದಿದ್ದರೂ, ಒಂದು ಗುಂಪು ಇನ್ನೊಂದನ್ನು ದೂಷಿಸಿ ಯುದ್ಧ ಪ್ರಾರಂಭವಾಗಲು ಅವಕಾಶ ಮಾಡಿಕೊಡುತ್ತದೆ. ತೂಟ್ಸಿ ಮತ್ತು ಮಧ್ಯಮಾರ್ಗಗಾಮಿ(moderate) ಹುಟುಗಳನ್ನು ಕೊಲ್ಲಲು ರೇಡಿಯೋದಲ್ಲಿ ಹುಟು ತೀವ್ರವಾದಿಗಳು ಜನಗಳಿಗೆ ಸಂದೇಶ ಕೊಡುತ್ತಾರೆ. ಏಪ್ರಿಲ್ 7, 1994ರಿಂದ ರವಾಂಡದಲ್ಲಿ ಜನಾಂಗಿಯ ಅಂತರ್ಯುದ್ಧ ಪ್ರಾರಂಭವಾಗುತ್ತದೆ. ಇಂಟರ್ ಹಾಮ್ವೆ ಮತ್ತು ರವಾಂಡ ಸಶಸ್ತ್ರ ಪಡೆ(FAR- Forces armées rwandaises/ Rwandan Armed Forces) ಸೇರಿ ರೋಡ್ ಬ್ಲಾಕ್ ಗಳನ್ನು ನಿರ್ಮಿಸಿ ಮನೆ ಮನೆಗೂ ಹೋಗಿ ತೂಟ್ಸಿ ಮತ್ತು ಮಧ್ಯಮಾರ್ಗಗಾಮಿ ಹುಟುಗಳನ್ನು ಕೊಲ್ಲಲು ಪ್ರಾರಂಭಿಸುತ್ತಾರೆ. ಇಲ್ಲಿ ಶುರುವಾಗುವುದೇ ಹೊಟೆಲ್ ರವಾಂಡ ಸಿನೆಮಾದ ಕಥೆ.
  ಈ ಸಿನೆಮಾದ ಬಗ್ಗೆ ನನಗೆ ಇಷ್ಟವಾದ ವಿಷಯವೆಂದರೆ, ಹಾಲಿವುಡ್ ನವರು ಆಫ್ರಿಕಾದ ಒಂದು ಪುಟ್ಟ ದೇಶದ ಸಮಸ್ಯೆಯೊಂದರ ಬಗ್ಗೆ ಇಷ್ಟು ದೊಡ್ಡ ಸಿನೆಮಾ ಮಾಡಿ, ಈ ದೇಶದ ಬಗ್ಗೆಯೇ ಗೊತ್ತಿರದ ಜನಗಳಿಗೆ(ನನ್ನನ್ನೂ ಒಳಗೊಂಡಂತೆ) ಈ ಜನಾಂಗೀಯ ಘರ್ಷಣೆಯ ಪರಿಚಯ ಮಾಡಿಸಿದ್ದು. ಈ ಚಿತ್ರ ಹೊಟೆಲ್ ಮಿ ಕೊಲ್ಲೀನ್(Hotel Mille Colline) ನ ಮ್ಯಾನೇಜರ್ ಆಗಿದ್ದ ಪಾಲ್ ರುಸೆಸಬಗಿನ(Paul Rusesabagina) ಬರೆದಿರುವ “An Ordinary Man” ಪುಸ್ತಕದ ಮೇಲೆ ಆಧರಿಸಿದೆ. ಸ್ವತಃ ತಾನು ಹುಟುವಾಗಿದ್ದರೂ ಆಶ್ರಯ ಬೇಡಿ ಬಂದ ಸುಮಾರು 1268 ತೂಟ್ಸಿ ಮತ್ತು ಇತರ ಜನಗಳಿಗೆ ಪಾಲ್ ಹೊಟೆಲ್ ನಲ್ಲಿ ಬಚ್ಚಿಟ್ಟು ಕಾಪಾಡಿದ ಕಥೆ. ಹಾಲಿವುಡ್ ನ ‘ಸಹಜ’ ಶೈಲಿಯಲ್ಲಿ ಒಬ್ಬ ನಾಯಕನನ್ನು ಸೃಷ್ಟಿಸಿ(ಪಾಲ್ ರುಸೆಸಬಗಿನ ಪಾತ್ರದಲ್ಲಿ ಡಾನ್ ಕೀಡಲ್), ಆತ ಅಸಾಧ್ಯ ಪರಿಸ್ಥಿತಿಗಳಲ್ಲೂ ಎಲ್ಲವನ್ನು ಮೀರಿ ಗೆದ್ದು ಬರುವಂತೆ ಚಿತ್ರಿಸಲಾಗಿದೆ. ಹಾಗಾಗಿ ನೈಜತೆಯನ್ನು ನಿಖರವಾಗಿ ತೋರಿಸುವಲ್ಲಿ ಸ್ವಲ್ಪ ಎಡವಿರಬಹುದು(eg., ಪಾಲ್ ಈ ಗಲಭೆ ಆರಂಭವಾದನಂತರ ಹೊಟೆಲ್ ಮಿ ಕೊಲ್ಲೀನ್ ಗೆ ಸೇರಿಕೊಳ್ಳುವುದು. ಆದರೆ ಚಿತ್ರದಲ್ಲಿ ಆತ ಗಲಭೆಗೂ ಮುಂಚಿನಿಂದಲೇ ಅಲ್ಲಿ ಕೆಲಸ ಮಾಡುತ್ತಿರುತ್ತಾನೆ ಎಂದು ತೋರಿಸಲಾಗಿದೆ.) ಮತ್ತು ಈ ಚಿತ್ರ ಕೇವಲ ಪಾಲ್ ನ ದೃಷ್ಟಿಕೋನದಿಂದಷ್ಟೇ ಚಿತ್ರಿಸಿಲಾಗಿರುವುದರಿಂದ ಈ ಸಂಘರ್ಷದಲ್ಲಿ ಪಾಲ್ ನ ಹೊರತಾಗಿ ಬೇರೆಯವರ ಅನುಭವ ಹೇಗಿತ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಅಸ್ಪಷ್ಟತೆಯನ್ನು ಗೊಂದಲಮಯವಾಗಿಸುವ, ಪಾಲ್ ನ ಕಥೆಯ ಸಂಪೂರ್ಣ ವಿರುದ್ಧದ ದೃಷ್ಟಿಕೋನದ, ಅದೇ ಹೊಟೆಲ್ ನಲ್ಲಿ ಆಶ್ರಯ ಪಡೆದ ತೂಟ್ಸಿಯೊಬ್ಬನ ಪುಸ್ತಕವೂ ಉಂಟು(Inside The Hotel Rwanda – Edouard Kayihura). ಮತ್ತು ವಿಶ್ವಸಂಸ್ಥೆಯ ಪರವಾಗಿ ನಿಯೋಜಿತಗೊಂಡ, ರವಾಂಡದ ಅಂತರ್ಯುದ್ಧದ ಅವಧಿಯಲ್ಲಿ ಎಲ್ಲವನ್ನೂ ಅಸಹಾಯಕರಾಗಿ ನಿಂತು ನೋಡಿದ, ಕೆನೆಡಾದ ಜನರಲ್ ರೋಮಿಯೋ ಡಲೈರ್(Lt.Gen. Romeo Dallaire) ರ ಪುಸ್ತಕ “Shake Hands With The Devil” ಕೂಡ ಈ ಘಟನೆಯ ಮೇಲೆ ಅವರದೇ ದೃಷ್ಟಿಕೋನದಿಂದ ಬೆಳಕು ಚೆಲ್ಲುತ್ತದೆ. ಅದೇನೇ ಇದ್ದರೂ ಜನಾಂಗೀಯ ಯುದ್ಧ ನಡೆದದ್ದು ಮತ್ತು ಅದರ ಬಗ್ಗೆ ಸರಿಯಾದ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದ್ದು ಮಾತ್ರ ನಿಜ. ಇದಿಷ್ಟನ್ನು ಈ ಚಿತ್ರ ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದೆ.
   ಚಿತ್ರ RTLM ರೇಡಿಯೋದಲ್ಲಿ ತೂಟ್ಸಿಗಳನ್ನು ದೇಶ ಬಿಟ್ಟು ಕಳಿಸಬೇಕು ಎನ್ನುವ ಸಂದೇಶ ಬಿತ್ತರವಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ನಿಧಾನವಾಗಿ ದೃಶ್ಯ 1994ರ ಕಿಗಾಲಿಯ ರಸ್ತೆಗಳ ದೃಶ್ಯದೊಂದಿಗೆ ತೆರೆದುಕೊಳ್ಳುತ್ತದೆ. ನಮ್ಮ ಭಾರತದ ಮಾರುಕಟ್ಟೆ ಬೀದಿಗಳಲ್ಲಿ ಇರುವಂತೆಯೇ ಇಕ್ಕಟ್ಟು, ಟ್ರಾಫಿಕ್ಕು. ಪಾಲ್ ತನ್ನ ಸಹಾಯಕ ದೂಬೆನೊಂದಿಗೆ ಕಿಗಾಲಿ ಏರ್ಪೋರ್ಟ್ ಗೆ ತೆರಳಿ ಅಲ್ಲಿ ತನ್ನ ಹೊಟೆಲ್ಲಿಗಾಗಿ ಬಂದಂತ ಕೆಲವು ವಸ್ತುಗಳನ್ನು ತರಲು ಹೊರಟಿರುತ್ತಾನೆ. ಏರ್ಪೋರ್ಟ್ ತಲುಪುತ್ತಿದ್ದಂತೆ ಅಲ್ಲಿನ ಕಾವಲುಪಡೆಯ ಅಧಿಕಾರಿ ಪಾಲ್ ನತ್ತ ತಿರುಗಿ ನಗುತ್ತಲೇ, ಪಾಲ್ ಅವನಿಗೆ ಸ್ವಲ್ಪ ಹಣ ಕೊಟ್ಟು ಮೆಚ್ಚಿಸುತ್ತ ಮುಂದೆ ಸಾಗುತ್ತಾನೆ. ಮತ್ತೆ ವಿಮಾನದಿಂದ ಸಾಮಾನು ಇಳಿಸಿಕೊಟ್ಟವನಿಗೂ ಕೈ ಬೆಚ್ಚಗೆ ಮಾಡಿ ದೂಬೆನೊಂದಿಗೆ ಹೊರಡುತ್ತಾನೆ. ಕಾರಿನಲ್ಲಿ ತಾನು ಕ್ಯೂಬಾದಿಂದ ತರಿಸಿದ ಸಿಗಾರ್ ಗಳಿಗೆ ಒಂದಕ್ಕೆ 10000 ಫ್ರಾಂಕ್ ಗಳ ಬೆಲೆಯಿದ್ದು ಆದರೆ ತನಗೆ ಅವು ಇನ್ನೂ ಬೆಳೆಬಾಳುವಂತವು ಎಂದಾಗ ಪಾಲ್ ಸಹಾಯಕ ಬೆರಗಾಗಿ ಯಾಕೆ ಎಂದು ಕೇಳುತ್ತಾನೆ. ಶ್ರೀಮಂತರಿಗೆ ಸುಮ್ಮನೆ 10000 ಫ್ರಾಂಕ್ ಬೆಲೆಬಾಳುವ ಸಿಗಾರ್ ಎಂದರೆ ಅವರಿಗೆ ಅದು ದೊಡ್ದದೆನಿಸುವುದಿಲ್ಲ. ಆದರೆ ಅದೇ ಆ ಸಿಗಾರ್ ಜಗತ್ತಿನ ಅತ್ಯುತ್ತಮ ಕೊಹಿಬಾ ಸಿಗಾರ್ ಎಂದು ಹೇಳಿ ಕೊಟ್ಟರೆ ಮೆಚ್ಚಿ ಅದನ್ನು ಸೇದುತ್ತಾರೆ. ಆಗ ಅದನ್ನು ತಮ್ಮ ಸ್ಟೈಲ್ ಎನ್ನುವಂತೆ ಶ್ರೀಮಂತರು ಭಾವಿಸಿ ಬಳಸುತ್ತಾರೆ ಎಂದು ಪಾಲ್ ತನ್ನ ಹೊಟೆಲ್ ವ್ಯಾಪಾರದ ಚತುರತೆಯನ್ನು ತೋರಿಕೊಳ್ಳುತ್ತಾನೆ. ಅಲ್ಲಿಂದ ಇಬ್ಬರೂ ತಮ್ಮ ಹೊಟೆಲ್ಲಿಗೆ ಬೇಕಾದ ಇನ್ನಷ್ಟು ಸಾಮಾನು ತರಲು ವ್ಯಾಪಾರಿ ಜಾರ್ಜ್ ರುಟಗಾಂಡ ಬಳಿಗೆ ಹೋಗುತ್ತಾರೆ. ಜಾರ್ಜ್ ಮಾತನಾಡುತ್ತ ಪಾಲ್ ಗೆ ಪಾಲಿಟಿಕ್ಸ್ ಸೇರಲು ಅದು ಒಳ್ಳೆಯ ಕಾಲವೆಂದೂ, ಪಾಲ್ ಗೂ ಅವನೊಡನೆ ಇಂಟರ್ ಹಾಮ್ವೆಯ ಪ್ರಚಾರ ಮೆರವಣಿಗೆಗಳಿಗೆ ಬರಬೇಕು ಎಂದು ಹೇಳುತ್ತಾನೆ. ಅದಕ್ಕೆ ಪಾಲ್ ತನಗೆ ಹೊಟೆಲಿನಲ್ಲಿ ಬಹಳ ಕೆಲಸವಿದ್ದು ಇಂತಹ ವಿಷಯಗಳಿಗೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ಜಾರ್ಜ್ ನ ಸಲಹೆಯನ್ನು ಸೂಕ್ಷ್ಮವಾಗಿ ತಳ್ಳಿಹಾಕುತ್ತಾನೆ. ಹೊಟೆಲ್ಲಿಗೆ ಬೇಕಾದ ಬಿಯರ್ ಅನ್ನು ಗಾಡಿಗೆ ಲೋಡ್ ಮಾಡಲು ಹುಡುಗರೆಲ್ಲ ಕೆಲಸ ಮಾಡುತ್ತಿದ್ದಾಗ ಒಬ್ಬ ಒಂದು ದೊಡ್ಡ ಡಬ್ಬ ಬೀಳಿಸಿ ಅದರಲ್ಲಿ ಇದ್ದ ಮಚ್ಚುಗಳೆಲ್ಲ ಹೊರೆಗೆ ಬೀಳುತ್ತದೆ. ಅದನ್ನು ನೋಡಿ ಗಾಬರಿಯಾದರೂ ತೋರಿಕೊಳ್ಳದ ಪಾಲ್ ಇದೆಲ್ಲ ಏನು ಎಂಬಂತೆ ಜಾರ್ಜ್ ಕಡೆಗೆ ನೋಡಿದಾಗ, ಜಾರ್ಜ್ ಇವನ್ನು ಚೀನಾದಿಂದ ಬಹಳ ಕಡಿಮೆ ದರಕ್ಕೆ ತರಿಸಿದ್ದು, ಇವನ್ನು ಮುಂದಾಗಲಿರುವ ಕ್ರಾಂತಿಯಲ್ಲಿ ಬಳಸುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಲ್ಲಿಂದ ಹೊರಟ ಮೇಲೆ ದೂಬೆ ಜಾರ್ಜ್ ಒಬ್ಬ ಕೆಟ್ಟ ಮನುಷ್ಯ ಎಂದಾಗ ಪಾಲ್ ಇಂತವರು ಬಹಳ ದಿನ ಹೀಗೆ ಮುಂದುವರೆಯಲು ಸಾಧ್ಯವಿಲ್ಲ, ಇವೆಲ್ಲಕ್ಕೂ ಒಂದು ಮುಕ್ತಾಯ ಬೇಗ ಬರಲಿದೆ ಎಂದು ಹೇಳಿ ಏನಿದ್ದರೂ ಅವನೊಡನೆ ನಮ್ಮದು ವ್ಯಾಪರವಷ್ಟೇ ಎಂದು ಹೇಳುತ್ತಾನೆ. ಬೀದಿಯಲ್ಲಿ ಇಂಟರ್ ಹಾಮ್ವೆ ಮೆರವಣಿಗೆ ನೋಡಿ ದೂಬೆ ಗಾಬರಿಗೊಂಡು ಆ ಮೆರವಣಿಗೆಯಲ್ಲಿ ತನ್ನ ಅಕ್ಕ ಪಕ್ಕದ ಮನೆಯವರೂ ಇದ್ದು ಅವರಿಗೆ ತಾನು ಒಬ್ಬ ತೂಟ್ಸಿ ಎಂದು ಗೊತ್ತು, ಹಾಗಾಗಿ ತನಗೆ ಏನಾದರೂ ಮಾಡಿಯಾರು ಎಂದು ಹೆದರಿ ಕಾರಿನಲ್ಲೇ ಅಡಗಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಪಾಲ್ ಅವನಿಗೆ ಧೈರ್ಯ ಹೇಳಿ ಬಚ್ಚಿಟ್ಟು ಕೊಂಡರೆ ಅವರಿಗೆ ಅನುಮಾನ ಬರುತ್ತದೆ, ಹಾಗಾಗಿ ಸುಮ್ಮನೆ ಅವರತ್ತ ನಗುತ್ತ ಕೂರು, ಅವರೆಲ್ಲ ಹೊರಟುಹೋಗುತ್ತಾರೆ ಎಂದು ಸಮಾಧಾನ ಹೇಳಿ ಮೆರವಣಿಗೆ ಮುಗಿದ ಮೇಲೆ ಅಲ್ಲಿಂದ ಹೊರಟು ಹೊಟೆಲ್ ತಲುಪುತ್ತಾರೆ. ಅಲ್ಲಿ ಪಾಲ್ ಹೊಟೆಲ್ ಗೆ ಬಂದ ಜನರಲ್ ಬಿಜಿಮನ್ಗು ಮತ್ತು ವಿಶ್ವಸಂಸ್ಥೆಯ ಕರ್ನಲ್ ಆಲಿವರ್(ಜನರಲ್ ರೋಮಿಯೋ ಡಲೈರ್ ರನ್ನು ಕರ್ನಲ್ ಆಲಿವರ್ ಎಂಬ ಕಾಲ್ಪನಿಕ ಪಾತ್ರದಲ್ಲಿ ತೋರಿಸಲಾಗಿದೆ) ಅವರನ್ನು ವಿಚಾರಿಸಿಕೊಂಡು ಜನರಲ್ ಬಿಜಿಮನ್ಗುಗಾಗಿ ಎರಡು ಸ್ಕಾಚ್ ಬಾಟಲಿಗಳನ್ನು ತೆಗೆದಿಟ್ಟು ಮನೆಗೆ ತೆರಳುತ್ತಾನೆ.
  ಮನೆಗೆ ಬಂದು ತನ್ನ ಹೆಂಡತಿ, ಮಕ್ಕಳು ಮತ್ತು ಮನೆಗೆ ಬಂದಿದ್ದ ಹೆಂಡತಿಯ ತಮ್ಮನ ಕುಟುಂಬ ಎಲ್ಲರನ್ನೂ ಮಾತನಾಡಿಸುತ್ತಾನೆ. ರಾತ್ರಿ ಊಟ ಮುಗಿದ ನಂತರ ಪಾಲ್ ತನ್ನ ಹೆಂಡತಿ ತಾತಿಯಾನ ಮತ್ತು ಆಕೆಯ ಸಹೋದರ ಮತ್ತು ಆತನ ಹೆಂಡತಿಯ ಜೊತೆ ಕುಳಿತಿದ್ದಾಗ ಪಾಲ್ ನ ಮಗ ಬಂದು ಹೊರಗೆ ಸೈನಿಕರು ಬಂದಿದ್ದಾರೆ ಎಂದು ಭಯದಿಂದ ಬಂದು ಹೇಳುತ್ತಾನೆ. ಎಲ್ಲರೂ ಗಾಬರಿಗೊಂಡು ಹೋಗಿ ಮೆಲ್ಲಗೆ ಗೇಟ್ ತೆರೆದು ಹೊರಗೆ ನಡೆಯುತ್ತಿರುವುದನ್ನು ಇಣುಕಿ ನೋಡುತ್ತಾರೆ. ಎದುರು ಮನೆಯ ವಿಕ್ಟರ್ ಒಬ್ಬ ತೂಟ್ಸಿಯಾಗಿದ್ದು, ತೂಟ್ಸಿ ಬಂಡುಕೋರರಿಗೆ ಗೂಢಚಾರಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವನನ್ನು ಮನೆಯಿಂದ ಹೊರಗೆಳೆದು ಸೈನಿಕರು ಹೊಡೆಯುತ್ತಿರುತ್ತಾರೆ. ಇದನ್ನು ನೋಡಿ ಎಲ್ಲರೂ ಗಾಬರಿಯಾಗಿ ಒಳಬಂದು ಸೇರಿಕೊಳ್ಳುತ್ತಾರೆ. ವಿಕ್ಟರ್ ನನ್ನು ತನಗೆ ಗೊತ್ತಿರುವ ಆರ್ಮಿಯ ಅಧಿಕಾರಿಗಳ ಸಹಾಯ ಕೇಳಿ ಬಿಡಿಸಲಾಗುವುದಿಲ್ಲವೇ ಎಂದು  ಹೆಂಡತಿ ಕೇಳಿದಾಗ ಪಾಲ್ ಇಂತಹ ವಿಷಯಗಳಲ್ಲಿ ತಾನು ಅಸಹಾಯಕ ಎಂದು ಹೇಳುತ್ತಾನೆ. ತಾನು ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳನ್ನು ಮೆಚ್ಚಿಸುವುದು ನಾಳೆ ತನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ಅವರ ಸಹಾಯ ಕೇಳಲು. ಬೇರೆಯವರಿಗಾಗಿ ಸಹಾಯ ಕೇಳಿದರೆ ನನ್ನ ಕುಟುಂಬಕ್ಕೆ ನಾಳೆ ಸಹಾಯ ಸಿಗದಿರಬಹುದು. ತನಗೆ ತನ್ನ ಕುಟುಂಬದ ಸುರಕ್ಷತೆ ಬಹಳ ಮುಖ್ಯ ಎಂದು ಹೆಂಡತಿಯನ್ನು ಸಮಾಧಾನಪಡಿಸುತ್ತಾನೆ.
  ಎರಡೂ ಗುಂಪುಗಳ ನಡುವೆ ಶಾಂತಿ ಏರ್ಪಟ್ಟಿದ್ದು, ಈ ಶಾಂತಿ ಒಪ್ಪಂದವನ್ನು ಅಧ್ಯಕ್ಷ ಹಬ್ಯಾರಿಮಾನ ತಾನ್ಜೆನಿಯ ದೇಶದಲ್ಲಿ ಸಹಿ ಹಾಕುತ್ತಿದ್ದಾರೆ ಎಂದು ಕರ್ನಲ್ ಆಲಿವರ್ ಮಿ ಕೊಲ್ಲೀನ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳುತ್ತಾರೆ. ವಿಶ್ವಸಂಸ್ಥೆಯ ಪರಿಶ್ರಮದಿಂದ ರವಾಂಡದಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂದು ಹೇಳುತ್ತಾರೆ. ತೂಟ್ಸಿಗಳನ್ನು ಹತ್ಯೆ ಮಾಡಲಾಗುತ್ತದೆ ಎಂಬ ವದಂತಿಗಳಿಗೆ ಹೆದರಿ ಪಾಲ್ ಹೆಂಡತಿಯ ಸಹೋದರ ಥಾಮಸ್ ಮತ್ತು ಆತನ ಹೆಂಡತಿ ಪಾಲ್ ಗೆ ತಾವು ಊರು ಬಿಟ್ಟು ಹೋಗುತ್ತಿರುವುದಾಗಿಯೂ, ತಮ್ಮೊಡನೆ ಪಾಲ್ ತನ್ನ ಹೆಂಡತಿ ತಾತಿಯಾನಳನ್ನೂ ಕಳಿಸುವಂತೆ ಕೇಳಿಕೊಳ್ಳುತ್ತಾರೆ. ಹುಟುವಾದ ಪಾಲ್ ಗೆ ಏನೂ ಆಗದು ಆದರೆ ತೂಟ್ಸಿಗಳಾದ ತಮಗೆ ಏನಾದರು ಅಪಾಯ ಆಗಬಹುದು ಎಂದು ಹೇಳಿದಾಗ ಅದನ್ನೆಲ್ಲ ಅಲ್ಲಗಳೆದು ಪಾಲ್ ಈಗ ವಿಶ್ವಸಂಸ್ಥೆ ಮತ್ತು ವಿಶ್ವ ಪತ್ರಿಕಾ ಸಮೂಹ ನೋಡುತ್ತಿರುವಾಗ ಇಂತಹ ಘಟನೆಗಳು ಆಗುವುದಿಲ್ಲ ಎಂದು ಸಮಾಧಾನ ಹೇಳಿ ಅವರನ್ನು ಊರು ಬಿಡದಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿ ಅವರಿಬ್ಬರೂ ಮನೆಗೆ ತೆರಳುತ್ತಾರೆ. ರಾತ್ರಿ ಕೆಲಸ ಮುಗಿಸಿ ವಿದ್ಯುತ್ ಇಲ್ಲದೆ ಕತ್ತಲೆಯಾಗಿದ್ದ ರಸ್ತೆಯಲ್ಲಿ ಮನೆಗೆ ಬರುವಾಗ ರೇಡಿಯೋ ಸಂಪೂರ್ಣ ಮೌನವಾಗಿದ್ದು ಕೆಲವು ಹುಟು ತೀವ್ರವಾದಿಗಳು ಎಲ್ಲರಿಗೂ ಮನೆಯೊಳಗಡೆಯೇ ಇರುವಂತೆ ಮೈಕ್ ನಲ್ಲಿ ಕೂಗುತ್ತ ಹೋಗುತ್ತಿರುತ್ತಾರೆ ಮತ್ತು ಕೆಲವು ಮನೆಗೆ ಬೆಂಕಿ ಹಾಕಲಾಗಿರುತ್ತದೆ. ಹೆದರಿ ಪಾಲ್ ಮನೆ ಸೇರಿ ಮೆಲ್ಲಗೆ ತನ್ನ ಟಾರ್ಚ್ ತೆಗೆದು ಮನೆಯೊಳಗೆ ನಡೆದು ನೋಡಿದಾಗ ಒಂದು ಕೋಣೆಯಲ್ಲಿ ಹೆಂಡತಿಯ ಜೊತೆ ಅಕ್ಕ ಪಕ್ಕದ ಮನೆಯವರೆಲ್ಲರೂ ಸೇರಿ ಮೂಲೆಯಲ್ಲಿ ಕುಳಿತಿರುತ್ತಾರೆ. ಯಾಕೆ ಹೀಗೆ ಎಲ್ಲಾ ಕುಳಿತಿದ್ದೀರಿ ಎಂದು ಪಾಲ್ ಕೇಳಿದಾಗ ನ್ಯೂಸ್ ನಲ್ಲಿ ಯಾರೋ ಅಧ್ಯಕ್ಷರ ವಿಮಾನ ಹೊಡೆದುರುಳಿಸಿದರು ಎಂದು ಪ್ರಸಾರವಾಯಿತು ಎಂದಾಗ ಎಲ್ಲ ಹೆದರಿ ಇಲ್ಲಿ ಸೇರಿದೆವು ಎಂದು ಹೇಳುತ್ತಾರೆ. ಎಲ್ಲರನ್ನೂ ಹೊರೆಗಿನ ಕೋಣೆಯಲ್ಲಿ ಕೂರಲು ಹೇಳಿ ಪಾಲ್ ಹೆಂಡತಿಗೆ ಯಾಕೆ ಇವರೆಲ್ಲ ಹೀಗೆ ನನ್ನ ಬಳಿ ಓಡಿಬರುತ್ತಾರೆ ಎಂದು ಕೇಳಿದಾಗ ಆಕೆ ಇವರೆಲ್ಲ ನಂಬುವ ಏಕೈಕ ಹುಟು ನೀನೊಬ್ಬನೇ ಎಂದು ಹೇಳಿ ಸಮಾಧಾನಪಡಿಸುತ್ತಾಳೆ. ಮಾರನೆ ದಿನ ಆರ್ಮಿಯ ಕೆಲ ಸೈನಿಕರು ಒಬ್ಬ ಕ್ಯಾಪ್ಟನ್ ನೇತೃತ್ವದಲ್ಲಿ ಪಾಲ್ ಮನೆಗೆ ಬಂದು ಒಳಗಿದ್ದವರೆನ್ನೆಲ್ಲ ಹೊರಗೆ ಕರೆದಾಗ, ಎಲ್ಲರೂ ಇನ್ನೂ ತಮ್ಮ ಕಥೆ ಮುಗಿದೇಹೋಯಿತು ಎಂದು ಹೆದರುತ್ತಾರೆ. ಆಗ ಪಾಲ್ ಹೊರ ಬಂದು ಆ ಕ್ಯಾಪ್ಟನ್ ನನ್ನು ಏನೆಂದು ವಿಚಾರಿಸಿದಾಗ, ಪಾಲ್ ನ ಗುರುತಿನ ಚೀಟಿ ನೋಡಿ ಆತ ಈ ಮುಂಚೆ ಹೊಟೆಲ್ ಡಿಪ್ಲೋಮ್ಯಾಟ್ನಲ್ಲಿ  ಕೆಲಸ ಮಾಡುತ್ತಿದ್ದ ಎಂದು ತಿಳಿದು ತನಗೆ ಅಲ್ಲಿನ ಸೇಫ್ ನಲ್ಲಿ ಇಟ್ಟಿರುವ ಎಲ್ಲಾ ರೂಮ್ ಕೀಲಿಕೈ ತೆಗೆದುಕೊಡಲು ತನ್ನೊಡನೆ ಬರುವಂತೆ ಹೇಳುತ್ತಾನೆ. ಅದಕ್ಕೆ ಪಾಲ್ ತನ್ನ ಕುಟುಂಬ ಬಿಟ್ಟು ಬರಲು ಸಾಧ್ಯವಿಲ್ಲ ಎಂದಾಗ ಅವರನ್ನೂ ಒಂದು ಕಾರಿನಲ್ಲಿ ಕರೆತರಲು ಅಪ್ಪಣೆ ಕೊಡುತ್ತಾನೆ. ಹೊಟೆಲ್ ನಲ್ಲಿ ತನಗೆ ಬೇಕಾದ್ದು ಸಿಕ್ಕ ನಂತರ ಕ್ಯಾಪ್ಟನ್ ಪಾಲ್ ಜೊತೆಗೆ ಬಂದವರಲ್ಲಿ ತೂಟ್ಸಿಗಳು ಇದ್ದಾರೆಂದೂ, ಪಾಲ್ ಅವರಿಗೆ ಆಶ್ರಯ ಕೊಟ್ಟು ದೇಶದ್ರೋಹದ ಕೆಲಸ ಮಾಡುತ್ತಿದ್ದಾನೆಂದು ಹೊಡೆಯುತ್ತಾನೆ. ಪಾಲ್ ಏನೇನೋ ಹೇಳಿ ಕಡೆಗೆ ಅವರನ್ನೆಲ್ಲ ಉಳಿಸಿದರೆ ದುಡ್ಡು ಕೊಡುವುದಾಗಿ ಹೇಳಿ, ಹೇಳಿದಂತೆ ದುಡ್ಡು ಕೊಟ್ಟು ಅವರನ್ನೆಲ್ಲ ಬಿಡಿಸಿಕೊಂಡು ಹೊಟೆಲ್ ಮಿ ಕೊಲ್ಲೀನ್ ಗೆ ಕರೆದೊಯ್ಯುತ್ತಾನೆ. ತನಗೆ ಇಷ್ಟವಿಲ್ಲದಿದ್ದರೂ ಹೆಂಡತಿ ಇವರನ್ನೆಲ್ಲ ತನ್ನೊಡನೆ ಕರೆದುಕೊಂಡು ಬಂದಳಲ್ಲ ಎಂದು ಪಾಲ್ ಕಣ್ ಸಂಜ್ಞೆಯಲ್ಲೇ ಹೆಂಡತಿಗೆ ಬಯ್ಯುತ್ತಾನೆ.
  ಹೊಟೆಲ್ ತಲುಪಿ ತನ್ನ ಕುಟುಂಬಕ್ಕೆ ಮತ್ತು ಜೊತೆಗೆ ಬಂದ ನೆರೆಹೊರೆಯವರಿಗೆ ರೂಮುಗಳನ್ನು ಕೊಡಿಸಿ ಹೊಟೆಲ್ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಒಬ್ಬ ಕೆಲಸಗಾರ ಗ್ರೆಗ್ವಾರ್ (Gregoire), ಹೊಟೆಲ್ ಉಸ್ತುವಾರಿ ವಹಿಸಿದ್ದ ಯುರೋಪಿಯನ್ ಮ್ಯಾನೇಜರ್ ಬೇರೊಂದು ಹೊಟೆಲ್ ನೋಡಿಕೊಳ್ಳಲು ಹೋದನಂತರ ಎಲ್ಲ ಕೆಲಸ ಬಿಟ್ಟು ಪ್ರೆಸಿಡೆನ್ಶಿಯಲ್ ಸ್ವೀಟ್ ಗೆ ಹೋಗಿ ಸೇರಿಕೊಂಡಿರುತ್ತಾನೆ. ಇದನ್ನು ತಿಳಿದ ಪಾಲ್ ವಿಚಾರಿಸಲು ಹೋದಾಗ ಗ್ರೆಗ್ವಾರ್ ಪಾಲ್ ಹೊಟೆಲಿನಲ್ಲಿ ತೂಟ್ಸಿ ‘ಜಿರಳೆ’ಗಳನ್ನ ಬಚ್ಚಿಟ್ಟಿರುವುದನ್ನ ಹೊರಗೆ ಹೇಳಬೇಕಾಗುತ್ತದೆ ಎಂದ ಮೇಲೆ ಪಾಲ್ ಸುಮ್ಮನೆ ವಾಪಸ್ಸಾಗುತ್ತಾನೆ. ಇಷ್ಟರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಮೇಡಂ ಆರ್ಚರ್ ಒಂದು ಅನಾಥಾಶ್ರಮದಿಂದ ಕೆಲವು ಮಕ್ಕಳನ್ನು ಕರೆತಂದು ಪಾಲ್ ಸುಪರ್ದಿಗೆ ಒಪ್ಪಿಸಿ ಅವರನ್ನು ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾಳೆ. ಇನ್ನೂ ಹತ್ತಾರು ಮಕ್ಕಳಿದ್ದು, ಅವರನ್ನು ಕರೆತರಲು ಮತ್ತೆ ಹೋಗುತ್ತಿರುವುದಾಗಿ ಹೇಳುತ್ತಾಳೆ. ಆಗ ಪಾಲ್ ಆಕೆಗೆ ಸಾಧ್ಯವಾದರೆ, ದಾರಿಯಲ್ಲಿ ಹಾಗೆ ತನ್ನ ಭಾಮೈದ ಥಾಮಸ್ ಮತ್ತು ಅವನ ಕುಟುಂಬದ ಬಗ್ಗೆ ವಿಚಾರಿಸಿ ಅವರು ಸಿಕ್ಕರೆ ತನ್ನೊಡನೆ ಕರೆತರಲು ಕೇಳಿಕೊಳ್ಳುತ್ತಾನೆ. ಪಾಲ್ ಮಕ್ಕಳನ್ನೆಲ್ಲ ಒಂದು ಕೋಣೆಯಲ್ಲಿರಿಸಿ ಅವರಿಗೆ ಸ್ನಾನಮಾಡಿಸಿ ಉಪಚರಿಸಲು ಕೆಲವು ಕೆಲಸಗಾರರನ್ನು ನೇಮಿಸುತ್ತಾನೆ.
  ಹೊರಗೆ ಕರ್ನಲ್ ಆಲಿವರ್ ನ ಇಂಟರ್ವ್ಯೂ ಮಾಡಿದ ನಂತರ ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಜ್ಯಾಕ್ ದಗ್ಲಿಶ್ (Joaquin Phoenix) ಹೊಟೆಲ್ ಹೊರಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಬರುವ ಎಂದು ತನ್ನ ರಿಪೋರ್ಟರ್ ಸಹೋದ್ಯೋಗಿಯನ್ನು ಕೇಳಿದಾಗ ಆತ, ಹೊರಗೆ ಬಹಳ ಅಪಾಯಕಾರಿಯಾಗಿದ್ದು ವಿಶ್ವಸಂಸ್ಥೆಯವರು ಹೊರಗೆ ಸುರಕ್ಷಿತ ಎಂದು ಹೇಳುವವರೆಗೂ ಹೋಗುವುದು ಬೇಡ ಎಂದು ಹೇಳುತ್ತಾನೆ. ಆದರೆ ಇದನ್ನು ಕೇಳದ ಜ್ಯಾಕ್ ತನ್ನ ಸಹಾಯಕನೊಂದಿಗೆ ಹೊಟೆಲ್ ಹೊರಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ರೆಕಾರ್ಡ್ ಮಾಡಿತರಲು ಹೋಗುತ್ತಾನೆ. ಪಾಲ್ ಕರ್ನಲ್ ಆಲಿವರ್ ಗೆ ಹೊಟೆಲಿಗೆ ಈಗ ಬಂದಿರುವ ನಿರಾಶ್ರಿತರನ್ನೆಲ್ಲ ಕರೆದುಕೊಂಡು ತನ್ನ ನಿರಾಶ್ರಿತರ ಶಿಬಿರಗಳಿಗೆ ಕರೆದೊಯ್ಯುವಂತೆ ಕೇಳಿಕೊಳ್ಳುತ್ತಾನೆ. ಆದರೆ ಅದಕ್ಕೊಪ್ಪದ ಕರ್ನಲ್ ಅಲ್ಲಿ ಎಲ್ಲೂ ಜಾಗವಿಲ್ಲವೆಂದೂ, ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಿರಾಶ್ರಿತರನ್ನು ಕರೆದೊಯ್ಯುವುದಾಗಿ ಭರವಸೆ ಕೊಡುತ್ತಾನೆ. ಕೆಲಸ ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಕೆಲಸಗಾರರಿಗೆ ಹೋಗಿ ಕೆಲಸ ಮಾಡಲು ಪಾಲ್ ದಬಾಯಿಸಿದಾಗ ಯಾರೂ ಆತನನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆಗ ಪಾಲ್ ಬೆಲ್ಜಿಯಂನಲ್ಲಿದ್ದ ಹೊಟೆಲ್ ಮುಖ್ಯಸ್ಥರಿಗೆ ಕರೆ ಮಾಡಿ ಸಧ್ಯದ ಪರಿಸ್ಥಿತಿಯನ್ನೆಲ್ಲಾ ವಿವರಿಸಿ ಹೊಟೆಲ್ ಜವಾಬ್ದಾರಿ ತನಗೊಪ್ಪಿಸಿರುವುದಕ್ಕೆ ಒಂದು ಅಧಿಪತ್ರ ಕಳಿಸಿಕೊಡಲು ಕೇಳಿಕೊಳ್ಳುತ್ತಾನೆ. ಈ ಗಲಭೆ ಉಂಟಾಗಿರುವುದಕ್ಕೆ ಹೊಟೆಲ್ ಮಂಡಳಿ ಹೊಟೆಲನ್ನು ತಾತ್ಕಾಲಿಕವಾಗಿ ಮುಚ್ಚಿಬಿಡಲು ಯೋಚಿಸಿತ್ತಿರುವುದಾಗಿ ಹೊಟೆಲ್ ಮುಖ್ಯಸ್ಥ ಹೇಳಿದಾಗ, ಪಾಲ್ ಅವರಿಗೆ ಹಾಗೆ ಮಾಡುವುದು ಹೊಟೆಲ್ ಹೆಸರಿಗೆ ಧಕ್ಕೆ ತರುವುದು ಎಂದು ಹೇಳಿ ಹೊಟೆಲ್ ಮುಚ್ಚದಿರಲು ಕೇಳಿಕೊಳ್ಳುತ್ತಾನೆ. ಪಾಲ್ ಮಾತನ್ನು ಒಪ್ಪಿ ಹೊಟೆಲ್ ಮುಖ್ಯಸ್ಥ ಅವನಿಗೆ ಮತ್ತೇನಾದರೂ ಬೇಕಿದ್ದಲ್ಲಿ ಕರೆ ಮಾಡುವಂತೆ ಹೇಳುತ್ತಾರೆ. ಪಾಲ್ ಪಡೆದ ಅಧಿಪತ್ರ ನೋಡಿದ ನಂತರ ಎಲ್ಲರೂ ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
  ಒಂದು ದಿನ ಇದ್ದಕ್ಕಿದ್ದಂತೆ ಮತ್ತೊಂದಿಷ್ಟು ನಿರಾಶ್ರಿತರು ಗುಂಡೇಟು ತಪ್ಪಿಸಿಕೊಂಡು ವಿಶ್ವಸಂಸ್ಥೆಯ ಯೋಧರ ಸಹಾಯದೊಂದಿಗೆ ಹೊಟೆಲ್ ಮಿ ಕೊಲ್ಲೀನ್ ಗೆ ಓಡಿಬರುತ್ತಾರೆ. ಈಗಾಗಲೇ ಹೊಟೆಲ್ ತುಂಬಿಹೋಗಿದ್ದು, ಇವರನ್ನು ಇಟ್ಟುಕೊಳ್ಳುವುದು ಕಷ್ಟ ಎಂದು ಪಾಲ್ ಕರ್ನಲ್ ಗೆ ಹೇಳಿದಾಗ, ಹುಟು ತೀವ್ರವಾದಿಗಳು ಪ್ರೈಮ್ ಮಿನಿಸ್ಟರ್ ಜೊತೆಗೆ ಹತ್ತು ಬೆಲ್ಜಿಯನ್ ಸೈನಿಕರನ್ನೂ ಕೊಂದಿದ್ದಾರೆಂದು ಕರ್ನಲ್ ಹೇಳುತ್ತಾನೆ. ಹಾಗಾಗಿ ಇದನ್ನು ಹತ್ತಿಕ್ಕಲು ಹಲವು ದೇಶಗಳ ಒಂದು ಪಡೆ ರಚನೆಯಾಗುತ್ತಿದ್ದು, ಅವರು ಬರುವ ತನಕ ಈ ನಿರಾಶ್ರಿತರನ್ನು ಕಾಪಾಡಲು ಪಾಲ್ ಗೆ ಕರ್ನಲ್ ಕೇಳಿಕೊಳ್ಳುತ್ತಾನೆ. ಪಾಲ್ ಭೇಟಿಯಾಗಲು ಬಂದ ಮೇಡಂ ಆರ್ಚರ್ ಪಾಲ್ ಹೇಳಿದ ಮನೆಯಲ್ಲಿ ಯಾರೂ ಇಲ್ಲವೆಂದು, ಪಕ್ಕದ ಮನೆಯ ಹೆಂಗಸೊಬ್ಬಳು ಅವರಿಬ್ಬರ ಮಕ್ಕಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿರುವುದಾಗಿ ಹೇಳುತ್ತಾಳೆ. ಅವರನ್ನು ಹೇಗಾದರೂ ಹೊಟೆಲಿಗೆ ಕರೆತರಲು ಸಾಧ್ಯವೇ ಎಂದು ಕೇಳಿದಾಗ, ಮೇಡಂ ಆರ್ಚರ್, ಎಲ್ಲ ಕಡೆ ಇಂಟರ್ ಹಾಮ್ವೆ ರೋಡ್ ಬ್ಲಾಕ್ ನಿರ್ಮಿಸಿದ್ದು ಅವರನ್ನು ಕರೆತರುವುದು ತುಂಬಾ ಕಷ್ಟವಾಗಿದೆ ಎಂದು ಹೇಳುತ್ತಾಳೆ. ತಾನು ಎರಡನೇ ಬಾರಿ ಅನಾಥಾಶ್ರಮದಿಂದ ಮಕ್ಕಳನ್ನು ಕರೆತರಲು ಹೋದಾಗ ಅಲ್ಲಿಗೆ ಆಗಲೇ ಬಂದಿದ್ದ ಇಂಟರ್ ಹಾಮ್ವೆ ಗುಂಪು ಮಕ್ಕಳನ್ನೂ ಕೊಲ್ಲಲು ಪ್ರಾರಂಭಿಸಿದ್ದರಲ್ಲದೆ, ತನ್ನನ್ನು ಅಲ್ಲಿಯೇ ತಡೆದು ಆ ಕೊಲೆಯನ್ನು ನೋಡುವಂತೆ ಮಾಡಿದರು ಎಂದು ಅಳುತ್ತಾಳೆ.
  ಹತ್ತು ಜನ ಬೆಲ್ಜಿಯನ್ ಸೈನಿಕರು ಸಾಯುವಷ್ಟು ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದು, ಪಾಶ್ಚಾತ್ಯ ದೇಶಗಳ ಒಕ್ಕೂಟ ಒಂದು ಪಡೆಯನ್ನು ಕಳಿಸಿದ್ದು ನೋಡಿ ಎಲ್ಲರೂ ಸಂತೋಷಪಡುತ್ತಾರೆ. ಆದರೆ ಆ ಸಂತೋಷ ಕೇವಲ ಅಲ್ಪಕಾಲ ಮಾತ್ರ, ಏಕೆಂದರೆ ಅವರು ಬಂದದ್ದು, ರವಾಂಡದಲ್ಲಿ ನೆಲೆಸಿದ್ದ ಬಿಳಿಯರನ್ನೆಲ್ಲ ಆ ದೇಶದಿಂದ ಸುರಕ್ಷಿತವಾಗಿ ಮರಳಿ ಕರೆದೊಯ್ಯಲು ಮಾತ್ರ. ಇದನ್ನು ತಿಳಿದ ಪಾಲ್ ಅಲ್ಲಿಯ ತನಕ ತನ್ನನ್ನು ತಮ್ಮೊಳಗೊಬ್ಬ ಎಂದು ಬಿಳಿಯರು ಹೇಳುತಿದ್ದನ್ನು ಕೇಳಿ ತಾನು ತನ್ನತನವನ್ನೇ ಮರೆತು ಅವರಂತೆಯೇ ತಾನೂ ಎಂದು ತಿಳಿದಿದ್ದೆನಲ್ಲ ಎಂದು ಬೇಸರಪಟ್ಟುಕೊಳ್ಳುತ್ತಾನೆ. ಕರ್ನಲ್ ಆಲಿವರ್ ಕೂಡ ತೀವ್ರ ಬೇಸರದಿಂದ ಹೇಗೆ ಪಾಶ್ಚಾತ್ಯ ದೇಶಗಳು ಆಫ್ರಿಕನ್ನರನ್ನು ಧೂಳಿಗಿಂತ ಕಡೆಯಾಗಿ ಕಾಣುತ್ತಾರೆ ಎಂದು ಪಾಲ್ ನ ಬಳಿ ತನ್ನ ಅಸಹಾಯಕತೆ ತೋಡಿಕೊಳ್ಳುತ್ತಾನೆ. ಬಿಳಿಯರೆಲ್ಲ ದೇಶ ಬಿಟ್ಟು ಹೋಗುತ್ತಿದ್ದಂತೆ, ಆರ್ಮಿಯ ಸೈನಿಕರು ಮತ್ತೆ ಹೊಟೆಲಿಗೆ ಬಂದು ಅಲ್ಲಿ ನೆಲೆಸಿರುವ ತೂಟ್ಸಿ ಜಿರಲೆಗಳ ಹೆಸರು ಕೊಡುವಂತೆಯೂ, ಇಲ್ಲದಿದ್ದರೆ ಎಲ್ಲರನ್ನೂ ಕೊಲ್ಲುವುದಾಗಿ ಪಾಲ್ ಗೆ ಹೆದರಿಸುತ್ತಾರೆ. ಆದರೆ ಅವರನ್ನು ಹೇಗೋ ಪುಸಲಾಯಿಸಿ, ಸ್ವಲ್ಪ ಸಮಯ ಕೇಳಿ ತನ್ನ ಹೊಟೆಲ್ ಮುಖ್ಯಸ್ಥನಿಗೆ ಕರೆ ಮಾಡಿ ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಹೊಟೆಲ್ ಮುಖ್ಯಸ್ಥ ತನ್ನ ಪ್ರಭಾವ ಬಳಸಿ ಆರ್ಮಿಯ ಸೈನಿಕರು ಅಲ್ಲಿಂದ ಹೊರಡುವಂತೆ ಮಾಡುತ್ತಾನೆ. ಪಾಲ್ ತನ್ನ ಹೊಟೆಲಿನಲ್ಲಿ ಇದ್ದ ಎಲ್ಲ ಪ್ರಭಾವಿ ನಿರಾಶ್ರಿತ ವ್ಯಕ್ತಿಗಳಿಗೆ ತಮಗೆ ಬೇರೆ ದೇಶದಲ್ಲಿ ಗೊತ್ತಿರುವ ಎಲ್ಲರಿಗೂ ಕರೆ ಮಾಡಿ ತಮ್ಮನ್ನು ಕಾಪಾಡಲು ಸಹಾಯ ಕೇಳಲು ಹೇಳುತ್ತಾನೆ. ಪಾಲ್ ಭೇಟಿಯಾಗಲು ಬಂದ ಜನರಲ್ ಬಿಜಿಮನ್ಗುವಿಗೆ ಉಪಚರಿಸಿ ಹೊಟೆಲ್ ಕಾವಲಿಗೆ ಕೆಲವು ಪೋಲಿಸ್ ಪೇದೆಗಳನ್ನು ನಿಯೋಜಿಸುವಂತೆ ಕೇಳುತ್ತಾನೆ. ಬೆಲ್ಜಿಯನ್ ಆಸ್ತಿಗಳನ್ನು ಕಾಪಾಡುವುದರಲ್ಲಿ ಸಹಾಯ ಮಾಡಿದವರಿಗೆ ಹೊಟೆಲ್ ಮ್ಯಾನೇಜ್ಮೆಂಟ್ ಬಹುಮಾನ ಕೊಡುವುದಾಗಿಯೂ ಪಾಲ್ ಬಿಜಿಮನ್ಗುವಿಗೆ ಹೇಳುತ್ತಾನೆ. ತಾನು ಅಮೇರಿಕ ರಾಜತಾಂತ್ರಿಕ ಮತ್ತು ಕರ್ನಲ್ ನಡುವೆ ನಡೆದ ಸಂಭಾಷಣೆಯ ರಹಸ್ಯ ಮಾಹಿತಿ ಕೊಡುವವನಂತೆ ಪಾಲ್ ಬಿಜಿಮನ್ಗುವಿಗೆ ಅಮೆರಿಕಾದ ಸ್ಯಾಟಲೈಟ್ ಗಳು ಆತನನ್ನು ಗಮನಿಸುತ್ತಿದ್ದು, ಹುಷಾರಾಗಿರಲು ಹೇಳುತ್ತಾನೆ. ಇದನ್ನ ನಂಬುವ ಬಿಜಿಮನ್ಗು ಅದಕ್ಕಾಗಿ ಪಾಲ್ ಗೆ ಧನ್ಯವಾದ ಹೇಳಿ ಪಾಲ್ ಕೋರಿಕೆಯಂತೆ ಹೊಟೆಲ್ ಕೆಲಸಗಾರ ಗ್ರೆಗ್ವಾರ್ ಗೆ ಚಳಿ ಬಿಡಿಸಿ ಕೆಲಸಕ್ಕೆ ಮರಳಲು ಕಳುಹಿಸಿ ಹೊರಡುತ್ತಾನೆ. ಪಾಲ್ ಹೊಟೆಲಿಗೆ ಬೇಕಾದ ಸಾಮಾನು ತರಲು ಮತ್ತೆ ಜಾರ್ಜ್ ಬಳಿ ಹೋದಾಗ ಜಾರ್ಜ್ ಪಾಲ್ ಗೆ ಈ ವ್ಯವಹಾರ ಕೇವಲ ಪಾಲ್ ಹೊಟೆಲಿನಲ್ಲಿ ಇರುವ ತೂಟ್ಸಿಗಳ ದುಡ್ಡು ಖಾಲಿಯಾಗುವವರೆಗೂ ಮಾತ್ರ ಎಂದು ಹೇಳುತ್ತಾನೆ. ಆನಂತರ ಕೊಬ್ಬಿದ ಕುರಿಯನ್ನು ಕೊಚ್ಚುವಂತೆ ಅವರನ್ನೆಲ್ಲ ಸಾಯಿಸಲು ಇಂಟರ್ ಹಾಮ್ವೆ ಬರುವುದಾಗಿ ಜಾರ್ಜ್ ಹೇಳುತ್ತಾನೆ. ತನಗೆ ಹೊಟೆಲಿನಲ್ಲಿರುವ ಕೆಲವು ದೇಶದ್ರೋಹಿಗಳನ್ನು ಹಿಡಿದುಕೊಡುವುದಾದರೆ ಪಾಲ್ ಗೆ ತನಗೆ ಬೇಕಾದ ಕೆಲವರನ್ನು ಉಳಿಸಿಕೊಳ್ಳಲು ಬಿಡುವುದಾಗಿ ಜಾರ್ಜ್ ಹೇಳುತ್ತಾನೆ. ಅದಕ್ಕೆ ನಯವಾಗಿ ಪಾಲ್ ನಿರಾಕರಿಸಿ ಹೊರಡುತ್ತಾನೆ. ಜಾರ್ಜ್ ಪಾಲ್ ಗೆ ಹೊಟೆಲಿಗೆ ಹಿಂದಿರುಗಿಹೋಗಲು ನದಿ ಪಕ್ಕದ ದಾರಿ ಸುರಕ್ಷಿತವಾಗಿದ್ದು ಆ ಮಾರ್ಗವಾಗಿ ಹೊಟೆಲ್ ತಲುಪುವಂತೆ ಹೇಳುತ್ತಾನೆ. ಅದರಂತೆ ಬೆಳಗಿನ ಮಂಜಿನಲ್ಲಿ ಪಾಲ್ ಗ್ರೆಗ್ವಾರ್ ಜೊತೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರು ಎಲ್ಲೋ ಕಾಡು ದಾರಿ ಹಿಡಿದಂತೆ ಅಡ್ಡಾದಿಡ್ಡಿ ಚಲಿಸತೊಡಗುತ್ತದೆ. ಮಂಜಿನಲ್ಲಿ ದಾರಿ ಕಾಣದೆ ನದಿಯೊಳಕ್ಕೆ ಕಾರು ಹೊರಟಿದೆಯೇ ಎಂದು ನೋಡಲು ಕಾರು ನಿಲ್ಲಿಸಿ ಕೆಳಗಿಳಿದು ನೋಡಿದಾಗ, ಕಾರು ದಾರಿಯಲ್ಲೇ ಬರುತ್ತಿದ್ದು, ಅಲ್ಲಿ ಬಿದ್ದಿದ್ದ ಹೆಣಗಳ ಮೇಲೆ ಕಾರು ಚಲಿಸಿ ಹೀಗಾಯಿತು ಎಂದು ತಿಳಿದಾಗ ಪಾಲ್ ಗೆ ಹೊಟ್ಟೆ ಕಿವುಚಿದಂತಾಗುತ್ತದೆ. ನೋಡಿದ್ದನ್ನು ಯಾರಿಗೂ ಹೇಳದಂತೆ ಗ್ರೆಗ್ವಾರ್ ಗೆ ತಾಕೀತು ಮಾಡಿ ಹೊಟೆಲ್ ತಲುಪಿ ಕೋಣೆಯಲ್ಲಿ ಒಬ್ಬನೇ ಕುಳಿತು ಅಳತೊಡಗುತ್ತಾನೆ.
  ಈ ಹಿಂದೆ ಹೊಟೆಲಿನಲ್ಲಿ ಇದ್ದ ಪ್ರಭಾವಿ ನಿರಾಶ್ರಿತರು ಮಾಡಿದ ಕರೆಗಳು ಫಲಿಸಿ, ಅನೇಕರಿಗೆ ರವಾಂಡ ಬಿಟ್ಟು ತೆರಳಲು ವೀಸಾ ಸಿಕ್ಕಿ ಕರ್ನಲ್ ಆಲಿವರ್ ಅವರನ್ನೆಲ್ಲ ಕರೆದೊಯ್ಯಲು ಬರುತ್ತಾನೆ. ಇದರಲ್ಲಿ ಪಾಲ್ ಕುಟುಂಬವೂ ಸೇರಿರುತ್ತದೆ. ವೀಸಾ ಸಿಕ್ಕವರನ್ನು ಲಾರಿಗಳಿಗೆ ಹತ್ತಿಸಿ ಪಾಲ್ ತಾನೂ ತನ್ನ ಕುಟುಂಬದವರೊಡನೆ ಹೋಗುವುದು ಬಿಟ್ಟು, ಹೆಂಡತಿ ಮಕ್ಕಳನ್ನು ಮಾತ್ರ ಕಳಿಸಿ, ಹೊಟೆಲಿನಲ್ಲಿ ಉಳಿದುಕೊಂಡ ಇತರರ ಜೊತೆ ಉಳಿದುಕೊಳ್ಳುತ್ತಾನೆ. ಇದೆಲ್ಲ ನಡೆಯುತ್ತಿರುವಾಗಲೇ ಗ್ರೆಗ್ವಾರ್ ಹೊರ ಹೋಗಿ ಇಂಟರ್ ಹಾಮ್ವೆ ಸದಸ್ಯರಿಗೆ ಹೀಗೆ ವಿಶ್ವಸಂಸ್ಥೆಯ ಲಾರಿಗಳಲ್ಲಿ ಕೆಲವು ತೂಟ್ಸಿಗಳನ್ನು ಏರ್ಪೋರ್ಟ್ ಗೆ ಕರೆದೊಯ್ಯಲಾಗುತ್ತಿದೆ ಎಂದು ಸುದ್ದಿ ಮುಟ್ಟಿಸುತ್ತಾನೆ. ಇಂಟರ್ ಹಾಮ್ವೆ ಈ ಸುದ್ದಿಯನ್ನು ರೇಡಿಯೋದಲ್ಲಿ ಬಿತ್ತರಿಸಿ ಆ ಗಾಡಿಗಳನ್ನು ತಡೆದು ಅವರನ್ನೆಲ್ಲ ಸಾಯಿಸುವಂತೆ ಸಂದೇಶ ಕೊಡುತ್ತದೆ. ಇದೇ ಸುದ್ದಿಯನ್ನು ಪಾಲ್ ಕೇಳಿಸಿಕೊಂಡು ತಕ್ಷಣವೇ ಜನರಲ್ ಬಿಜಿಮನ್ಗುವಿಗೆ ಕರೆ ಮಾಡಿ ಅವರನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಅಷ್ಟರಲ್ಲಿ ವಿಶ್ವಸಂಸ್ಥೆಯ ಗಾಡಿಗಳನ್ನು ಇಂಟರ್ ಹಾಮ್ವೆ ಸದಸ್ಯರು ಮುತ್ತಿಕೊಂಡು ಒಳಗಿದ್ದ ತೂಟ್ಸಿಗಳನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ತಲುಪುವ ಆರ್ಮಿಯ ಸೈನಿಕರು ಪರಿಸ್ಥಿತಿಯನ್ನು ಹತೋಟಿಗೆ ತಂದು ಗಾಡಿಗಳನ್ನು ಮತ್ತೆ ಹೊಟೆಲಿಗೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾರೆ. ಬೇರೆ ಮಾರ್ಗ ಕಾಣದೆ ಕರ್ನಲ್ ಆಲಿವರ್ ಮತ್ತೆ ಹೊಟೆಲಿಗೆ ಅವರನ್ನು ಕರೆದೊಯ್ಯುತ್ತಾನೆ. ಸುರಕ್ಷಿತವಾಗಿ ಮರಳಿದ ಹೆಂಡತಿ ಮಕ್ಕಳನ್ನು ನೋಡಿ ಪಾಲ್ ಸಮಾಧಾನವಾದರೂ, ದಿನವೂ ಆಗುತಿದ್ದ ಈ ದಾಳಿಗಳನ್ನು ತಡೆಯಲು ಕೆಲವು ಪೋಲಿಸರನ್ನು ನಿಯೋಜಿಸಲು ಜನರಲ್ ಬಿಜಿಮನ್ಗುವಿಗೆ ಪಾಲ್ ಕೇಳಿಕೊಳ್ಳುತ್ತಾನೆ. ಆದರೆ ಲಂಚದ ರುಚಿ ಹತ್ತಿದ್ದ ಬಿಜಿಮನ್ಗು ಪಾಲ್ ತನಗೆ ಬೇಕಾದ್ದು ಕೊಡುವವರೆಗೂ ಏನೂ ಮಾಡುವುದಿಲ್ಲ ಎಂದು ಹೇಳಿ ಪಾಲ್ ನೊಡನೆ ದಿಪ್ಲೋಮ್ಯಾಟ್ ಹೊಟೆಲಿಗೆ ಹೋಗಿ ಅಲ್ಲಿನ ಸೇಫ್ ನಲ್ಲಿದ್ದ ಹಲವಾರು ದುಬಾರಿ ಮದ್ಯಗಳನ್ನು ಬಿಜಿಮನ್ಗು ಪಾಲ್ ನಿಂದ ಪಡೆಯುತ್ತಾನೆ. ಆದರೆ ಬಿಜಿಮನ್ಗು ಪಾಲ್ ಮರಳಿ ಹೊಟೆಲಿಗೆ ಹೋಗದಿರುವುದೇ ಒಳಿತೆಂದು ಹೇಳುತ್ತಾನೆ. ತಾವು ಅಲ್ಲಿಗೆ ತಲುಪುವುದರಲ್ಲಿ ಇಂಟರ್ ಹಾಮ್ವೆ ಅಲ್ಲಿರುವ ಜನರನ್ನೆಲ್ಲ ಕೊಂದುಹಾಕಿರುತ್ತಾರೆ ಎಂದು ಹೇಳುತ್ತಾನೆ ಮತ್ತು ತನ್ನೊಡನೆ ಗಿಟರಾಮದಲ್ಲಿನ ಆರ್ಮಿ ಹೆಡ್ ಕ್ವಾರ್ಟರ್ಸ್ ಗೆ ಬರುವಂತೆ ಹೇಳುತ್ತಾನೆ. ಅದಕ್ಕೊಪ್ಪದ ಪಾಲ್ ತನ್ನ ಜೊತೆ ಬಂದು ಅವರನ್ನೆಲ್ಲ ರಕ್ಷಿಸಲು ಸಹಾಯ ಮಾಡದಿದ್ದರೆ, ಬಿಜಿಮನ್ಗು ಒಬ್ಬ ವಾರ್ ಕ್ರಿಮಿನಲ್ ಎಂದೂ ಆದ ಹತ್ಯಾಕಾಂಡಕ್ಕೆಲ್ಲ ಅವನೇ ಕಾರಣಕರ್ತ ಎಂದು ಅಮೆರಿಕನ್ನರಿಗೆ ಹೇಳುವುದಾಗಿ ಹೆದರಿಸಿ ಬಿಜಿಮನ್ಗುವನ್ನು ಹೊಟೆಲಿಗೆ ಕರೆದೊಯ್ಯುತ್ತಾನೆ. ಇಷ್ಟವಿಲ್ಲದಿದ್ದರೂ ಪಾಲ್ ನ ಈ ಬೆದರಿಕೆಗೆ ಮಣಿದು ಬಿಜಿಮನ್ಗು ಹೊಟೆಲಿಗೆ ಬಂದು ಅಲ್ಲಿದ್ದ ಇಂಟರ್ ಹಾಮ್ವೆ ದಾಳಿಕೋರರನ್ನು ಓಡಿಸುತ್ತಾನೆ.
  ಕಡೆಗೂ ಎಲ್ಲರನ್ನು ಒಟ್ಟುಮಾಡಿ ಹೊಟೆಲಿಗೆ ಬೀಗ ಹಾಕಿ ಪಾಲ್, ಕರ್ನಲ್ ಆಲಿವರ್ ಸಹಾಯದೊಂದಿಗೆ ಮತ್ತೆ ವಿಶ್ವಸಂಸ್ಥೆಯ ಲಾರಿ ಹತ್ತಿ ಎಲ್ಲರೊಡನೆ ನಿರಾಶ್ರಿತ ಶಿಬಿರ ತಲುಪುತ್ತಾನೆ. ಮತ್ತೆ ದಾರಿಯಲ್ಲಿ ಇಂಟರ್ ಹಾಮ್ವೆ ಎದುರಾದರೂ ಅಲ್ಲಿಗಾಗಲೇ ಧಾವಿಸಿದ್ದ ತೂಟ್ಸಿ ಬಂಡುಕೋರ ಪಡೆಯ ನೆರವಿನಿಂದ ಎಲ್ಲರೂ ಸುರಕ್ಷಿತವಾಗಿ ಶಿಬಿರ ಸೇರುತ್ತಾರೆ. ಕರ್ನಲ್ ಆಲಿವರ್, ಹೊಟೆಲಿನ ಎಲ್ಲರಿಗೂ ತಾನ್ಜೆನಿಯ ತಲುಪಲು ಶಿಬಿರದ ಇನ್ನೊಂದು ತುದಿಯಲ್ಲಿ ಬಸ್ಸುಗಳನ್ನು ಏರ್ಪಾಡು ಮಾಡಿರುವುದಾಗಿ ಪಾಲ್ ಗೆ ಹೇಳಿ ತನ್ನ ಕೆಲಸಗಳಿಗೆ ಮರಳುತ್ತಾನೆ. ಪಾಲ್ ಮತ್ತು ಆತನ ಹೆಂಡತಿ, ಭಾಮೈದ ಥಾಮಸನ ಕುಟುಂಬಕ್ಕಾಗಿ ಹುಡುಕಾಡಿದರೂ ಯಾರೂ ಸಿಗದೇ ಬಸ್ಸು ಹತ್ತಿ ಕೂರುತ್ತಾರೆ. ಅಷ್ಟರಲ್ಲಿ ಹೊಟೆಲ್ ಮಿ ಕೊಲ್ಲೀನ್ ನ ನಿರಾಶ್ರಿತರು ಅಲ್ಲಿಗೆ ಬಂದಿರುವುದನ್ನು ತಿಳಿದ ಮೇಡಂ ಆರ್ಚರ್ ಓಡಿ ಹೋಗಿ ಹೊರಟಿದ್ದ ಬಸ್ಸು ನಿಲ್ಲಿಸಿ ಪಾಲ್ ನನ್ನು ಕರೆತಂದು ಶಿಬಿರದಲ್ಲಿದ್ದ ಥಾಮಸನ ಮಕ್ಕಳನ್ನು ಹುಡುಕಿಕೊಡುತ್ತಾಳೆ. ಅಲ್ಲಿಗೆ ಎಲ್ಲರೂ ಒಂದಾಗಿ ಹೊಸ ಜೀವನ ಕಟ್ಟಿಕೊಳ್ಳಲು ತಾನ್ಜೆನಿಯ ಕಡೆಗೆ ಹೊರಡುತ್ತಾರೆ.
  ಸರಿಯಾದ ಸಮಯದಲ್ಲಿ ವಿಶ್ವಸಂಸ್ಥೆ ಈ ಘರ್ಷಣೆಯನ್ನು “ಜೆನೊಸೈಡ್” ಎಂದು ಕರೆದಿದ್ದರೆ, ವಿಶ್ವಸಂಸ್ಥೆಗೆ ನಿಯಮಗಳ ಪ್ರಕಾರ ಶಾಂತಿ ಕಾಪಾಡಲು ಪಡೆಗಳನ್ನು ಕಳಿಸಲೇಬೇಕಾಗಿತ್ತು. ಆದರೆ ಯಾವ ಪಾಶ್ಚಾತ್ಯ ದೇಶಕ್ಕೂ ಇದರಲ್ಲಿ ಆಸಕ್ತಿಯಿರಲ್ಲಿಲ್ಲವಾದ್ದರಿಂದ ಮತ್ತು ಅಮೆರಿಕಾಗೆ ಸೋಮಾಲಿಯಾದಲ್ಲಿ ಅಷ್ಟು ಹೊತ್ತಿಗೆ ಸಾಕಷ್ಟು ಪೆಟ್ಟುಬಿದ್ದಿದ್ದರಿಂದ, ಶಾಂತಿ ಪಡೆಗಳನ್ನು ಕಳಿಸುವಲ್ಲಿ ಸಾಕಷ್ಟು ತಡ ಮಾಡಿದರು. ಅದನ್ನು “ಜೆನೊಸೈಡ್” ಎಂದು ಕರೆಯುವಷ್ಟರಲ್ಲಿ ಸಾಕಷ್ಟು ಅನಾಹುತ ಆಗಿಹೋಗಿತ್ತು. ಈಗಲೂ ಈ ಜಗಳ ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಲೇ ಇದೆ.

  1. ಶೇಕ್ ಹ್ಯಾಂಡ್ಸ್ ವಿತ್ ದಿ ಡೆವಿಲ್ (ರೋಮಿಯೋ ಡಲೈರ್ ನ ಅನುಭವದ ಡಾಕ್ಯುಮೆಂಟರಿ) - https://www.youtube.com/watch?v=9CAOnJrxmKk
  2. ಹುಟು ಮತ್ತು ತೂಟ್ಸಿ ನಡುವಿನ ವ್ಯತ್ಯಾಸದ ಬಗ್ಗೆ ಪತ್ರಿಕಾ ವರದಿ - https://www.independent.co.uk/news/world/guide-to-the-zaire-crisis-the-difference-between-a-hutu-and-a-tutsi-1352558.html
  3. ರವಾಂಡದ ಇತಿಹಾಸದ ಮಹತ್ವದ ದಿನಗಳು - https://www.pbs.org/wgbh/pages/frontline/shows/rwanda/etc/cron.html

-ವಿಶ್ವನಾಥ್

Rating
No votes yet

Comments