ಸತ್ಯದ ಸತ್ಯ ಇದರ ಅನ್ವೇಷಣೆ

ಸತ್ಯದ ಸತ್ಯ ಇದರ ಅನ್ವೇಷಣೆ

ವಿಜ್ಞಾನವು ಅಧುನಿಕ ಯುಗದ ಬೆಳವಣಿಗೆಗೆ ಕಾರಣವಾಗಿದೆ. ಮಾನವನು ತನ್ನ ಸೌಕರ್ಯಕ್ಕಾಗಿ ಅನೇಕ ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾನೆ ಮತ್ತು ಇದಕ್ಕೆಲ್ಲಾ ವಿಜ್ಞಾನದ ಕೊಡುಗೆಯೇ ಕಾರಣ. ಕೈಗಾರಿಕಾ ಕ್ರಾಂತಿಯಿಂದ ಪ್ರಾರಂಭವಾದ ಪುನರುಜ್ಜೀವನ ಮತ್ತು ನವೋದಯ ಯುಗವು ಮುಂದುವರಿದು ಮನುಷ್ಯನಿಗೆ ಅಗತ್ಯವಾದ ಎಲ್ಲಾ ಕ್ಷೇತ್ರಗಳಲ್ಲಿ ಸಂಶೋದನೆ ಮಾಡಿ ತಂತ್ರಜ್ಞಾನ ಪಡೆದುಕೊಂಡಿದೆ. ಈಗ ಮಾನವನು ಈ ಭೂಮಿಯಲ್ಲಿ ಸಮತಲ, ಪಾತಾಳ ಮತ್ತು ಆಕಾಶ ಇದರ ರಚನೆಯ ಬಗ್ಗೆ ಸಮಗ್ರ ಸಂಶೋದನೆ ನಡಸಿ, ಮುಂದುವರಿದು ಅಂತರಿಕ್ಷ ಕಾಯಗಳ ಬಗ್ಗೆಯೂ ಸಂಶೋದನೆ ಮಾಡಿದ್ದಾನೆ. ಭೂಮಿಯ ಹೊರಗೆ ಇರುವ ಗ್ರಹಕ್ಕೆ ಸ್ವತಃ ಭೇಟಿ ಕೊಟ್ಟು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡಿ ತನ್ನ ಒಂದು ವಾಮನ ಪಾದವನ್ನು ಅಲ್ಲಿಯೂ ಇಡುವ ಪ್ರಯತ್ನದಲ್ಲಿ ಯಶಸ್ಸು ಕಂಡು ಕೊಳ್ಳುತಿದ್ದಾನೆ. ಅನೇಕ ಜೀವಜಂತುಗಳ ಸ್ವರೂಪ ಮತ್ತು ಜೀವಕೋಶಗಳ ರಚನೆ ಮತ್ತು ಕಾರ್ಯಗಳನ್ನು ಕಂಡು ಹಿಡಿದಿದ್ದಾನೆ. ಪ್ರಾಣಿಗಳು ಮತ್ತು ಮನುಷ್ಯನ ದೇಹ ರಚನೆ ಮತ್ತು ಅಂಗಾಂಗಗಳ ಕಾರ್ಯ ಮತ್ತು ಆರೋಗ್ಯಕ್ಕೆ ಸಂಬಂದಿಸಿದಂತಹ ಎಲ್ಲಾ ವಿಷಯಗಳಲ್ಲೂ ಮಹತ್ತರವಾದ ಸಂಶೋದನೆ ಮಾಡಿ ರೋಗರುಜಿನಗಳ ಕಾರಣ ಮತ್ತು ಅವುಗಳನ್ನು ನಿವಾರಿಸುವ ಮತ್ತು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಲಸಿಕೆಗಳನ್ನು ಔಷದಗಳನ್ನು ಕಂಡುಹಿಡಿದಿದ್ದಾನೆ. ದೇಹದ ಒಳಗೆ ಹೊಕ್ಕು ಅಂಗಾಂಗಗಳ ಶಸ್ತ್ರಚಿಕೆತ್ಸೆ ಮತ್ತು ಅವುಗಳ ಕಸಿ ಮಾಡುವಷ್ಟರ ಮಟ್ಟಿಗೆ ಮುಂದುವರೆದಿದ್ದಾನೆ. ವೀರ್ಯಾಣು ಮತ್ತು ಅಂಡಾನು ಇದನ್ನು ಕ್ರತಕವಾಗಿ ಸೇರಿಸಿ ಪ್ರಾಣಿ ಮತ್ತು ಮನುಷ್ಯನ ಸ್ರಷ್ತಿಗೆ ಮುಂದಾಗಿದಾನೆ. ಅಣು ವಿಜ್ಞಾನದಲ್ಲಿ ಮುಂದುವರಿದು ಈಗ ‘ದೇವ ಕಣ’’ (God Particle) ಇದರ ಅಸ್ತಿತ್ವ ಮತ್ತು ರಹಸ್ಯದ ಬಗ್ಗೆ ಬ್ರಹತ್ ಸಂಶೋದನೆ ಮಾಡುವ ನಿಟ್ಟಿನಲ್ಲಿ ಜಗತ್ತಿನ ಶ್ರೇಷ್ಠ ಬೌತಶಾಸ್ತ್ರ ವಿಜ್ನಾನಿಗಳೆಲ್ಲ ಒಂದೆಡೆ ಒಟ್ಟಾಗಿದ್ದಾರೆ. ಈ ದೇವಕಣದ ರಹಸ್ಯ ಬಹಿರಂಗಗೊಳ್ಳುತ್ತಲೇ ಮಾನವನಿಗೆ ಸ್ರಷ್ಟಿಯ ರಹಸ್ಯ ತಿಳಿಯುವುದಂತೆ! . ಹೀಗೆ ಮನುಷ್ಯ ತನ್ನ ದೇಹದ ಒಳಗೆ ಮತ್ತು ಹೊರಗೆ ಬೌತಿಕವಾಗಿ ಅನ್ವೇಷಣೆ ನಡೆಸಿದ್ದಾನೆ. ಯಾವುದೇ ವಿಷಯವಾಗಲಿ ವಸ್ತುವಾಗಲಿ ಅದಕ್ಕೆ ವಿಜ್ಞಾನದ ಪ್ರಮಾಣ ಇದ್ದರಷ್ಟೇ ಅದನ್ನು ಸತ್ಯ ಎಂದು ಒಪ್ಪಿಕೊಳ್ಳುತ್ತಾನೆ. ಯಾವುದನ್ನು ವೈಜ್ಞಾನಿಕ ದ್ರಷ್ಟಿಕೊನದಿಂದ ಸಮರ್ಥಿಸಲು ಸಾಧ್ಯವಿಲ್ಲವೋ ಅವೆಲ್ಲವೂ ಅವೈಜ್ಞಾನಿಕ ಎಂದು ಬಹಳಷ್ಟು ಜನರ ವಿಚಾರ ಹಾಗು ಸಿದ್ದಾಂತ ಮತ್ತು ಸಮರ್ಥನೆ ಕೂಡ. ಆದರೆ ಒಂದು ವಿಷಯದಲ್ಲಿ ಮಾತ್ರ ವೈಜಾನಿಕವಾಗಿ ಉತ್ತರ ಕಂಡುಕೊಳ್ಳಲು ಅವನು ಅತ್ಯಂತ ದಯನೀಯವಾಗಿ ಸೋಲು ಕಂಡಿದ್ದಾನೆ. . ಅದೇನೆಂದರೆ ಆತ ತನ್ನನ್ನು ತಾನು ತಿಳಿಯುವುದರಲ್ಲಿ ಅಸಮರ್ಥನಾಗಿದ್ದಾನೆ. ಅರರೆ ಈಗಷ್ಟೇ ಹೇಳಿದಿರಿ ಮನುಷ್ಯ ತನ್ನ ದೇಹದ ಒಳಗೆ ಮತ್ತು ಹೊರಗೆ ತಿಳಿದುಕೊಂಡಿದ್ದಾನೆ ಅಂತ . ಮತ್ತೇಕೆ ಈ ಅಪಸ್ವರ ಎಂದು ಪ್ರಶ್ನೆ ಮಾಡ ಬಹುದು. ಇದಕ್ಕೆ ಉತ್ತರ ಇಷ್ಟೇ. ನಿಮಗೆ ಬೌತಿವಾಗಿ ಎಲ್ಲವೂ ಗೊತ್ತು. ಆದರೆ ಈ ಎಲ್ಲಾ ಬೌತಿಕ ರಚನೆ ಹೇಗಾಯಿತೆಂದು ನಿಮಗೆ ಗೊತ್ತಿದೆಯೇ? ಉತ್ತರ ಇಲ್ಲ. ನೀವು ಮಹಾ ಸ್ಪೋಟ ಸಿದ್ದಾಂತ(Big Bang Theory) ಇದರ ಬಗ್ಗೆ ಹೇಳುತ್ತಿರಿ. ಇದಕ್ಕಿಂತ ಮೊದಲು ಏನಿತ್ತು ಎನ್ನುವುದು ನಿಮಗೆ ತಿಳಿದಿದೆಯೇ? ಉತ್ತರ ಇಲ್ಲ.  ಆದರೆ ಈ ಸತ್ಯ ಆದುನಿಕ ವಿಜ್ಞಾನ ಪ್ರಾರಂಬವಾಗುದಕ್ಕೆ ಮೊದಲೇ ಭಾರತೀಯರಿಗೆ ತಿಳಿದಿತ್ತು. ಅದು ನಾಸದೀಯ ಸೂಕ್ತದಲ್ಲಿ ವ್ಯಕ್ತವಾಗಿದೆ. ಇದನ್ನು ನಾವು ನೀವೆಲ್ಲ “ಭಾರತ್ ಕಿ ಖೋಜ್’ ದೂರದರ್ಶನ ಸರಣಿಯಲ್ಲಿ ನೋಡಿರಬಹುದು ಮತ್ತು ಕೇಳಿರಬಹುದು. ಅದೇ  “ ಸ್ರಷ್ಟಿ ಸೇ ಪಹಲೇ ಸತ್ ನಹಿ ಥಾ ಅಸತ್ ಭಿ ನಹೀ ಅಂತರಿಕ್ಷ ಭಿ ನಹಿ ಆಕಾಶ್ ಭಿ ನಹಿ ಥಾ .....”.  ಯಾವುದು ಆಧುನಿಕ ವಿಜ್ಞಾನಕ್ಕೆ ಈಗಲೂ ತಿಳಿದಿಲ್ಲವೋ ಅದು  ಭರತವರ್ಷಖಂಡದ ವಿಜ್ಞಾನಿಗಳಾದ ಋಷಿ ಮುನಿಗಳಿಗೆ ಮೊದಲೇ ತಿಳಿದಿತ್ತು. ಹಾಗಾದರೆ ಈಗಿನ ಆಧುನಿಕ ವಿಜ್ಞಾನಕ್ಕೆ ಒಂದು ಸೀಮಿತ ಇದೆ ಎಂದಾಯಿತು. ಎಲ್ಲ ಪ್ರಶ್ನೆಗಳಿಗೂ ಈ  ವಿಜ್ಞಾನದಿಂದ ಉತ್ತರ ಸದ್ಯಕ್ಕಂತೂ ಸಿಗುವುದಿಲ್ಲ ಎನ್ನುದು ಸಿದ್ದವಾಯಿತು. ಇದು ಒಂದು ಸೋಲು.
 
ಇನ್ನೊದು ಪಶ್ನೆ ನೋಡೋಣ. ಈ ಜಗತ್ತಿನಲ್ಲಿ ಹಲವಾರು ಪ್ರಕಾರ ಮತ್ತು ಪ್ರಬೇದವಿರುವ ಅಸಂಖ್ಯಾತ ಜೀವಿಗಳಿವೆ. ಇದರ ಮೂಲ ಶಕ್ತಿಗೆ ಮನುಷ್ಯ ಯಾವುದೇ ಮತಭೇದವಿಲ್ಲದೆ ಇದನ್ನು ಜೀವ ಅಥವಾ ಪ್ರಾಣ (Life) ಎಂದು ಹೆಸರಿಟ್ಟಿದ್ದಾನೆ. ಜೀವ ಅಥವಾ ಪ್ರಾಣ ಇರುವ ಬೌತಿಕ ದೇಹಕ್ಕೆ ಜೀವಿ ಅಥವಾ ಪ್ರಾಣಿ ( Living Beings) ಎಂದು ಸಾರ್ವತ್ರಿಕವಾಗಿ ಎಲ್ಲರೂ ಕಂಡುಕೊಂಡಿದ್ದೇವೆ. ಒಂದು ಬ್ಯಾಕ್ಟೀರಿಯಾದಿಂದ ಹಿಡಿದು ಮನುಷ್ಯನವರಗೆ ಎಲ್ಲಾ ಜೀವಕಣಗಳು ಮತ್ತು ಜೀವಜಂತುಗಳು ಹಾಗು ವಿಚಾರಶಕ್ತಿ ಇರುವ ಮನುಷ್ಯ ಹೀಗೆ ಎಲ್ಲರ ಅಸ್ತಿತ್ವ ಕೇವಲ ಒಂದೇ ಸೂತ್ರದ ತಳಹದಿಯ ಮೇಲೆ ನಿಂತಿರುವದನ್ನು ಕಂಡರೆ ಬಹಳ ಆಶ್ಚರ್ಯವಾಗುತ್ತದೆ. ಇದು ಯಾವುದೋ ರೀತಿಯ ಒಂದು ಚೇತನ ( Spirit ) ಎಲ್ಲೆಡೆ ಹರಡಿಕೊಂಡಿದ್ದು ನಮಗೆ ಗೊತ್ತಿರುವ ಈ ಭೂ ಮಂಡಲದಲ್ಲಿ ಸರ್ವವ್ಯಾಪಿಯಾಗಿ ಎಲ್ಲಾ ಜೀವಿಗಳನ್ನು ಇದು ಹೊಕ್ಕಿದೆ. ಈ ಚೇತನವನ್ನು ನಾವು ಪ್ರಾಣ (life) ಎಂದು ಸಾಮಾನ್ಯವಾಗಿ ಗುರುತಿಸಿದ್ದೇವೆ ಎಂದು ಎಲ್ಲರಿಗೂ ತಿಳಿದ ವಿಷಯ. ಈ ಪ್ರಾಣ ಇದ್ದರೆ ಶರೀರ ಜೀವಿಸುತ್ತದೆ ಇಲ್ಲವಾದರೆ ಸಾಯುತ್ತದೆ ಎಂದು ಕೂಡ ಸಾಮನ್ಯಾವಾಗಿ ತಿಳಿದಿರುವ ವಿಷಯ. ಈ ಪ್ರಾಣ ಹೇಗೆ ಬಂತು ಮತ್ತು ಇದರ ಸ್ವರೂಪವೇನು ಎನ್ನುವ ವಿಷಯದಲ್ಲಿ ಆಧುನಿಕ ವಿಜ್ಞಾನವು ಉತ್ತರ ಕೊಡುವುದಿಲ್ಲ . ಏನೇ ಸಂಶೋದನೆಗಳು ನಡೆದಿದ್ದರೂ ಕೂಡ ವಿಜ್ಞಾನವು ಈ ಪ್ರಶ್ನೆಗೆ ಪ್ರಮಾಣ ಸಹಿತ ಯಾವ ಉತ್ತರವನ್ನು ಕೊಡಲಾರದು. ಒಂದು ವೇಳೆ ಹಾಗೇನಾದರು ವಿಜ್ಞಾನಕ್ಕೆ ಈ ಪ್ರಾಣದ ಬಗ್ಗೆ ಗೊತ್ತಿದ್ದಲ್ಲಿ ಯಾವ ಮನುಷ್ಯನಿಗೂ ಸಾವು ಎಂಬುದು ಇರುತ್ತಿರಲಿಲ್ಲ. ಹುಟ್ಟು ಮತ್ತು ಸಾವು ಇದರ ಹಿಂದಿರುವ ಶಕ್ತಿ ಅಥವಾ ಚೇತನದ ಗುಟ್ಟು ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ. ಇಲ್ಲೇ ವಿಜ್ಞಾನದ ಮಹಾ ಸೋಲು.  ಆದ್ದರಿಂದ ನಮಗೆ ಈಗ ತಿಳಿಯಿತು ವಿಜ್ಞಾನ ಸೀಮಿತವಾದದ್ದು ಮತ್ತು ಅದಕ್ಕೆ ಮಿತಿ ಇದೆ ಎಂದು. ಮತ್ತೆ ಹೇಗಪ್ಪಾ ಈ ಪ್ರಾಣದ ವಿಜ್ಞಾನವನ್ನು ತಿಳಿಯುವುದು? ಮತ್ತೆ ಹುಟ್ಟು ಮತ್ತು ಸಾವು ಈ ವಿಜ್ಞಾನದ ರಹಸ್ಯ ತಿಳಿಯುವುದು ಹೇಗೆ ? How to know the secret science of Life and Death?. ಮನುಷ್ಯ ಇಲ್ಲೂ ಉತ್ತರ ಕಂಡುಕೊಂಡಿದ್ದಾನೆ . ಆದರೆ ಈ ವಿಜ್ಞಾನ ಕೇವಲ ವಿಚಾರ ಶಕ್ತಿ ಇರುವ ಮನುಷ್ಯನಿಗೆ ಮಾತ್ರ ಸೀಮಿತ ಮತ್ತು ಇತರೇ ಜೀವಿಗಳಿಗೆ ಇದನ್ನು ಅರಿತುಕೊಳ್ಳುವ ಸಾದ್ಯತೆ ಇಲ್ಲವೇ ಇಲ್ಲ. ಹಾಗಾಗಿ ಮನುಷ್ಯ ಜನ್ಮ ಎಂಬುದು ಬಹಳ ಶ್ರೇಷ್ಠ. ಮನುಷ್ಯ ಈ ವಿಜ್ಞಾನವನ್ನು ಹೇಗೆ ಕಂಡು ಕೊಳ್ಳಬಲ್ಲನು ಮತ್ತು ಕಂಡುಕೊಂಡಿದ್ದಾನೆ? ಈ ವಿಷಯವೇ ಆಧ್ಯಾತ್ಮ ವಿಜ್ಞಾನದ ವಸ್ತು. ಇಲ್ಲಿ ಬೌತಿಕ ವಿಜ್ಞಾನದ ಪ್ರವೇಶ ಅಸಾದ್ಯ ಮತ್ತು ಅದರ ನಡೆ ನಿಂತು ದಾರಿ ಕಾಣದಾಗುತ್ತದೆ. ವಿಜ್ಞಾನವು ವ್ಯಕ್ತವಾಗಿರುವ ಜಗತ್ತಿನ ಬಗ್ಗೆ ಮಾತನಾಡಬಲ್ಲದೆ ಹೊರತು ಜೀವಿಗಳಲ್ಲಿರುವ ಅವ್ಯಕ್ತ ಜೀವಶಕ್ತಿಯ (Life Force) ಬಗ್ಗೆ ಮಾತನಾಡಲು ಸಾಧ್ಯವಾಗದು. ಆಗ ಪ್ರಾರಂಭವಾಗುವುದೇ ಆಧ್ಯಾತ್ಮ ವಿಜ್ಞಾನದ ದಾರಿ. ಎಲ್ಲಿ ವಿಜ್ಞಾನವು ಕೊನೆಯಾಗುತ್ತದೆಯೋ ಅಲ್ಲಿ ಆಧ್ಯಾತ್ಮ ಪ್ರಾರಂಭವಾಗುತ್ತದೆ( The end of Science is the beginning of Spirituality – Bhagawan Sri Sathya Sai Baba).
 
ಗ್ರೀಕರು ಮತ್ತು ಅವರ ದಾರ್ಶನಿಕರು ಹೇಳಿದರು “Know Thyself “ , “ನಿನ್ನನ್ನು ನೀನು ತಿಳಿ” ಎಂದು. ಆದರೆ ಅವರಿಗೆ ಮುಂದುವರೆಯಲು ಸಾಧ್ಯವಾಗಲಿಲ್ಲ. ಪಾಶ್ಚಾತ್ಯ ದಾರ್ಶನಿಕರು ಬುದ್ದಿ , ಮನಸ್ಸು ಮತ್ತು ಶರೀರ ಇದರ ಬಗ್ಗೆ ವಿಚಾರಣೆ ನಡೆಸಿದರು. ಅಮೇರಿಕಾದ ತತ್ವಜ್ಞಾನಿ ಎಮರ್ಸನ್ ಹೇಳುತ್ತಾನೆ - “Truth is within one self”. ಇವರ ವಿಚಾರಗಳಲ್ಲಿ ಭಗವದ್ಗೀತೆಯ ಪ್ರಭಾವ ಕಾಣುತ್ತದೆ ಎಂದು ಹೇಳುತ್ತಾರೆ. ಆದರೆ ಪಾಶ್ಚಾತ್ಯರು ತಮ್ಮದೇ ಆದ ನಿಲುವಿನಿಂದ ಪ್ರಾಣ, ಆತ್ಮ ಮತ್ತು ಪರಮಾತ್ಮ ಇವುಗಳ ಶಬ್ದಾರ್ಥ ಪ್ರಭಂದಗಳ ನಿರ್ಮಾಣ ಮಾಡಿದರೆ ಹೊರತು ಅವುಗಳ ಆಳ ಮತ್ತು ವ್ಯಾಪ್ತಿ ಇದನ್ನು ಗ್ರಹಿಸಲಾರದೆ ಹೋದರು. . ಈ ನಿಟ್ಟಿನಲ್ಲಿ ಸನಾತನ ಆಧ್ಯಾತ್ಮಿಕ ಪರಂಪರೆ ಯುಗ ಯುಗಗಳಿಂದ ಅನುಭವದ ಸಿದ್ದಿಯನ್ನು ಪಡೆದು ವೇದ ಹಾಗು ಉಪನಿಷತ್ತುಗಳಲ್ಲಿ ಆಧ್ಯಾತ್ಮದರ್ಶನವನ್ನು ಅಚ್ಚು ಹೊಡೆದು ನಮಗಾಗಿ ಜ್ನಾನಸಮುದ್ರ ಭಂಡಾರವನ್ನೇ ತೆರೆದಿಟ್ಟಿದ್ದಾರೆ. ಭಗವದ್ಗೀತೆಯಂತು ಎಲ್ಲಾ ಉತ್ಕೃಷ್ಠ ಉಪನಿಷತ್ತುಗಳ ಸಾರವಾಗಿದೆ. ಹಾಗಾಗಿ ಭಾರತೀಯರು ಇವೆಲ್ಲವನ್ನು ಒಳಗಣ್ಣಿನಿಂದ ನೋಡಿ ತಿಳಿದುಕೊಂಡ ಮೊದಲ ದಾರ್ಶನಿಕರಾದರು. ಹಾಗಾಗಿ ಆಧ್ಯಾತ್ಮ ವಿಜ್ಞಾನವನ್ನು ಸನಾತನ ದ್ರಷ್ಟಿಕೊನದಿಂದ ಮಾತ್ರ ಸಂಪೂರ್ಣವಾಗಿ ತಿಳಿಯಲು ಸಾದ್ಯ.
ಈ ವಿಶ್ವವೆಲ್ಲ ಪಂಚ ಮಹಾ ಭೂತಗಳಿಂದ ಕೂಡಿದೆ. ಪ್ರಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಇವೇ ಈ ಪಂಚಭೂತಗಳು. ಇವುಗಲ್ಲಿ ಪ್ರಥ್ವಿ , ಜಲ ಮತ್ತು ಅಗ್ನಿ ಇವುಗಳಿಗೆ ರೂಪವಿದೆ ಮತ್ತು ಗುಣಗಳಿವೆ. ವಾಯು ಮತ್ತು ಆಕಾಶ ಇವುಗಳಿಗೆ ರೂಪವಿಲ್ಲ ಆದರೆ ಗುಣಗಳಿವೆ. ವಿಜ್ಞಾನದ ಪ್ರಕಾರ ಈ ವಿಶ್ವವೆಲ್ಲ ಚಲಿಸುತ್ತಲೇ ಇರುತ್ತದೆ. ಭೂಮಿ ಚಲಿಸುವುದಿಲ್ಲವೇ ? ಹಾಗೆ. ವಿಶ್ವದಲ್ಲಿರುವ ಎಲ್ಲಾ ಅಂತರಿಕ್ಷ ಕಾಯಗಳು ನಾಶವಾಗುತ್ತಲೇ ಇರುತ್ತದೆ, ಹೊಸ ನಕ್ಷತ್ರ ಮಂಡಲಗಳು ಹುಟ್ಟುತ್ತಲೇ ಇರುತ್ತದೆ ಮತ್ತು ಅವೆಲ್ಲ ಚಲಿಸುತ್ತಲೇ ಇರುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಎಲ್ಲಿ ನೋಡಿದರು ವಿಶ್ವವೆಲ್ಲಾ ಪಂಚಭೂತಗಳಿಂದ ಕೂಡಿದ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಆದರೆ ಈ ವಿಶ್ವಕ್ಕೆಲ್ಲಾ ಚಲನಶೀಲತೆ ಶಕ್ತಿ ಯಾವುದು ? ಇದರ ಸೃಷ್ಟಿ, ಸ್ಥಿತಿ, ಲಯ ಮಾಡುವ ಶಕ್ತಿ ಯಾವುದು?
ನಮ್ಮ ದೇಹವೂ ಕೂಡ ಈ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಈ ದೇಹವು ಪ್ರಾಣಕ್ಕೆ ಉಪಾದಿಯಾಗಿದೆ. ತೈತ್ತಿರಿಯೋಪನಿಷತ್ ಹೇಳುತ್ತದೆ - “ ಶರೀರೇ ಪ್ರಾಣಃ ಪ್ರತಿಷ್ಟಿತಃ”. ಈ ಶರೀರದಲ್ಲಿ ಜೀವಚೈತನ್ಯವಾದ ಪ್ರಾಣ ನಿಂತಿದೆ. ಪ್ರಾಣಕ್ಕೆ ದೇಹ ಆವಶ್ಯಕ ಮತ್ತು ದೇಹಕ್ಕೆ ಪ್ರಾಣವೇ ತ್ರಾಣ. ಈ ಪ್ರಾಣವೆಂಬ ಶಕ್ತಿಯು ದೇಹಕ್ಕೆ ಚಲನಶೀಲತೆಯನ್ನು ಕೊಡುತ್ತದೆ. ಈ ಪ್ರಾಣವೆಂಬುದು ಒಂದು ರೀತಿಯ ವಿದ್ಯುತ್ತು(like Electric Current). ಇದು ಎಲ್ಲಿಯವರೆಗೆ ದೇಹದಲ್ಲಿ ಸಂಚರಿಸುತ್ತಾ ಇರುವುದೋ ಅಲ್ಲಿಯವರೆಗೆ ದೇಹ ಅಥವಾ ಶರೀರ ಚಲನಶೀಲತೆಯಿಂದ ಕೂಡಿರುತ್ತದೆ. ಯಾವಾಗ ಈ ಶಕ್ತಿಯೇ ಇಲ್ಲವಾಗುತ್ತದೆಯೋ ಆಗ ಈ ದೇಹ ಪಂಚಭೂತದಲ್ಲಿ ಲೀನವಾಗುವ ಶಾಶ್ವತವಲ್ಲದ ವಸ್ತುವಾಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ಈ ದೇಹಕ್ಕೆ ಪ್ರಾಣ ಬಹಳ ಮುಖ್ಯವಾದ ಶಕ್ತಿ ಎನ್ನುವುದು ಸಿದ್ದವಾಯಿತು . ಈ ಆದ್ಯಶಕ್ತಿಯ ಮೂಲಕ ಎಲ್ಲಾ ಜೀವರಾಶಿಗಳು ಕಂಪಿಸುತ್ತವೆ. ಈ ಪ್ರಾಣ ಕೂಡ ಐದು ಪ್ರಕಾರವಾಗಿದೆ ಎಂದು ಶ್ರುತಿಗಳು ಹೇಳುತ್ತವೆ. ಇವು ಪ್ರಾಣ, ಅಪಾನ , ವ್ಯಾನ , ಉದಾನ ,ಮತ್ತು ಸಮಾನ ಹೀಗೆ ಐದು ಪ್ರಾಣಗಳು. ನಾವು ಪ್ರಾಣದ ಸ್ವರೂಪವನ್ನು ತಿಳಿಯಬೇಕಾದರೆ ಮೊದಲು ಛಾಂದೋಗ್ಯ , ಪ್ರಶ್ನ ಮತ್ತು ಕೇನ ಇತ್ಯಾದಿ ಉಪನಿಷತ್ತುಗಳನ್ನು ದಾಟಿ ಬರಬೇಕಾಗುತ್ತದೆ. ಪ್ರಾಣ ಎನ್ನುವುದು ಹೇಗೆ ಹುಟ್ಟಿತು ಮತ್ತು ಯಾವುದರಿಂದ ಹುಟ್ಟಿತು? ಅದು ಶರೀರಕ್ಕೆ ಹೇಗೆ ಪ್ರವೇಶ ಮಾಡಿತು? ಹೇಗೆ ಅದು ಐದು ಪ್ರಕಾರಗಳಾಗಿ ಇದೆ ? ಇದು ಎಲ್ಲಿಂದ ಹೊರಟಿತ್ತು? ಹೊರ ಜಗತ್ತಿನಲ್ಲಿ ಹೇಗೆ ಇರುವನು ಮತ್ತು ದೇಹದ ಒಳಗೆ ಹೇಗೆ ಧಾರಣೆ ಮಾಡಿರುವನು? .... ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸ ಬೇಕಾಗುತ್ತದೆ.
 
ಸ್ವಾಮಿ ವಿವೇಕಾನಂದರು ಒಂದು ಕಡೆ ಹೇಳುತ್ತಾರೆ - ‘ ಪ್ರಾಣ ಎಂದರೆ ಏನು? ಪ್ರಾಣ ಎಂದರೆ ಸ್ಪಂದನ’. ಜಗತ್ತನ್ನೆಲ್ಲ ಕಂಪಿಸುತ್ತಿರುವ ಈ ಶಕ್ತಿ ಪ್ರಾಣವಲ್ಲದೆ ಮತ್ತೇನು? ಕಠೋಪನಿಷತ್ತು ಇದನ್ನು ಸುಂದರವಾಗಿ ವರ್ಣಿಸುತ್ತದೆ - “ ಯದಿದಂ ಕಿಂಚ ಜಗತ್ ಸರ್ವಂ ಪ್ರಾಣ ಏಜತಿ ನಿಹ್ಸ್ಮ್ರತಂ”. ಈ ಜಗತ್ತಿನಲ್ಲಿ ಎಲ್ಲೆಡೆ ಪ್ರಾಣ ಕಂಪಿಸುತ್ತಿದೆ. ಹೀಗೆ ಶ್ರುತಿಗಳು ಸ್ವತಃ ಈ ಪ್ರಶ್ನೆ ಮಾಡಿ ಉತ್ತರವನ್ನು ಅವೇ ಕೊಡುತ್ತವೆ. ಪ್ರಾಣವೆನ್ನುವುದು ವಿಶ್ವವ್ಯಾಪಿಯಾದ ಸತ್ಯವೇ. ಇದನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಪ್ರಾಣವೇ ಸತ್ಯವೆಂಬುದು ಸಿದ್ದವಾಯಿತು.
 
ಆದರೆ ಕೇನ ಪ್ರಶ್ನೆ ಕೇಳುತ್ತದೆ – (ಕನ್ನಡ ರೂಪಾಂತರ)
ಆವ ಚೇತನವದು ಮನಕೆ ಪ್ರೇರಣವಿತ್ತಿಹುದು ?
ಅದಾವ ಮೊದಲ ಚೇತನದಿಂದೆಸೆ ಜೀವದ ನಾಡಿ ತುಡಿದು ಮಿಡಿದಿಹುದು ? ।
ಆವ ಚೈತನ್ಯ ಪ್ರಚೋದಿಸಿಹುದು ಇಂತೆಲ್ಲ ನುಡಿಗೆ ?
ಅದಾವ ಚೈತನ್ಯ ಪ್ರೇರಿಸಿಹುದು ಕಣ್ ಕಿವಿಗಳನು ಇಹ ವೃತ್ತಿಗೆ ? || ೧ ||
'ನಾ ಕಂಡಂತೆ ಚೇತನ - ಬಾಗ – ೨’, ಕೇನ - ಮೊದಲನೆಯ ಖಂಡ © ಸಾಯಿನಾಥ ಬಾಲಕೃಷ್ಣ.
“ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ ” ಈ ಪ್ರಶ್ನೆಗೆ ಉತ್ತರ ಕೊಡಬೇಕಾಗುತ್ತದೆ . ಇದಕ್ಕೆ ಉತ್ತರವನ್ನು ಬಲ್ಲವರು ತಿಳಿಸಿ ಹೇಳಿದ್ದಾರೆ.
 
ಸ್ವಾಮಿ ವಿವೇಕಾನಂದರು ಹೇಳುತ್ತಾರೆ - The theory of creation is that matter is subject to five conditions: ether, luminous ether, gaseous, liquid, and solid. They are all evoked out of one primal element, which is very finest ether.
The name of the energy in the universe is Prana, which is the force residing in these elements. Mind is the great instrument for using the Prana. Mind is material. Behind the mind is Atman which takes hold of the Prana. Prana is the driving power of the world, and can be seen in every manifestation of life. The body is mortal and the mind is mortal; both, being compounds, must die. Behind all is the Atman which never dies. The Atman is pure intelligence controlling and directing Prana. But the intelligence we see around us is always imperfect. When intelligence is perfect, we get the Incarnation—the Christ. Intelligence is always trying to manifest itself, and in order to do this it is creating minds and bodies of different degrees of development. In reality, and at the back of all things, every being is equal.
Mind is very fine matter; it is the instrument for manifesting Prana. Force requires matter for manifestation.”. (Complete Works of Swami Vivekananda).
 
ಪ್ರಾಣ ಎಲ್ಲಿಂದ ಹುಟ್ಟಿತು ಮತ್ತು ಶರೀರಕ್ಕೆ ಹೇಗೆ ಬರುತ್ತದೆ ಎನ್ನುವುದಕ್ಕೆ ಪ್ರಶ್ನೋಪನಿಷತ್ ಉತ್ತರ ಕೊಡುತ್ತದೆ –
ಆತ್ಮತ ಏಷ ಪ್ರಾಣೋ ಜಾಯತೇ । ಯಥೈಷಾ ಪುರುಷೇ ಛಾಯ ಏತಸ್ಮಿನ್ನೇತದಾತತಮ್ । ಮನೋಕೃತೇನಾಯಾತ್ಯಸ್ಮಿನ್ ಶರೀರೇ ॥ ೩॥
- ಆತ್ಮನಿಂದಲೇ ಪ್ರಾಣಹುಟ್ಟುತ್ತದೆ. ಅದು ಆತ್ಮನ ನೆರಳಿನಂತೆ ಇರುತ್ತಾನೆ. ಕರ್ಮಫಲದಂತೆ ಮತ್ತೆ ಶರೀರಕ್ಕೆ ಆತ್ಮ ಪ್ರವೇಶ ಮಾಡುತ್ತಾನೆ.
 
ಕೇನ ಮತ್ತೆ ಹೇಳುತ್ತದೆ – (ಕನ್ನಡ ರೂಪಾಂತರ)
ನಾಸಿಕಗಳು ಉಸಿರ ದೆಸೆ ಘ್ರಾಣಿಸಿ ಕಲ್ಪಿಸಲಾಗದ ಚೈತನ್ಯವದು,
ನಾಸಿಕಗಳು ಘ್ರಾಣಿಸಲು ಸೆಳೆವ ಉಸಿರ ಪ್ರಾಣಕೆ ಚೇತನವಾಗಿಹ ಮೊದಲುಸಿರದು ।
ತಿಳಿ ನೀ ಇದು ಘ್ರಾಣಿಸಿ ತಿಳಿದು ಭಜಿಸುವ ನಿಜ ಚೈತನ್ಯವಲ್ಲವೆಂದು,
ತಿಳಿ ನೀ ಇದಲ್ಲದ ಅದುವೇ ಅವ್ಯಕ್ತ ನಿರಾಕಾರ ಶುದ್ದ ಚೈತನ್ಯವೆಂದು ॥೯॥
'ನಾ ಕಂಡಂತೆ ಚೇತನ - ಬಾಗ – ೨’, ಕೇನ - ಮೊದಲನೆಯ ಖಂಡ © ಸಾಯಿನಾಥ ಬಾಲಕೃಷ್ಣ.
 
ಈ ಆತ್ಮನನ್ನು ನಾವು ಮನಸ್ಸಿನಿಂದ ಹಿಡಿಯಲು ಸಾದ್ಯವೇ? ಮಾತು ಮತ್ತು ಮನಸ್ಸು ಅದನ್ನು ಮುಟ್ಟಲಾರದೆ ಹಿಂದಿರುಗುತ್ತದೆಯೆಂದು ಹೇಳುತ್ತಾರೆ. ಕಣ್ಣುಗಳಿಂದ ಅದನ್ನು ನೋಡಲಾರೆವು. ಹಾಗಾದರೆ ಈ ಆತ್ಮದ ಅಸ್ತಿತ್ವವನ್ನು ನಾವು ಕಂಡುಕೊಳ್ಳುವ ಬಗೆ ಹೇಗೆ? ಇದು ಆತ್ಮ ವಿದ್ಯೆ. ನಚಿಕೇತನು ಯಮಧರ್ಮನಿಂದ ವರಪಡೆದು ತಿಳಿದುಕೊಂಡು ಜಗತ್ತಿಗೆ ನೀಡಿದ ವಿದ್ಯೆ. ನಚಿಕೇತನ ಮೂರನೆಯ ಪ್ರಶ್ನೆ ಕೂಡ ಆತ್ಮದ ಅಸ್ತಿತ್ವದ ಬಗ್ಗೆಯೇ ಆಗಿರುತ್ತದೆ. ಯಮಧರ್ಮರಾಯನು ಮೊದಲು ಇದಕ್ಕೆ ಉತ್ತರ ನೀಡಲು ಹಿಂಜರಿದು ನಚಿಕೇತನಿಗೆ ಹಲವಾರು ಆಸೆ ಆಮಿಷ ತೋರಿಸುತ್ತಾನೆ . ಈತನು ಇದನ್ನು ತಿಳಿಯಲು ಯೋಗ್ಯನೇ ಎಂದು ಪರೀಕ್ಷಿಸುತ್ತಾನೆ. ಇಂತಹ ಆತ್ಮವಿದ್ಯೆಯನ್ನು ನಾವು ಅನುಭವದಿಂದ ಕಂಡುಕೊಳ್ಳಲು ಮಾತ್ರ ಸಾದ್ಯ. ಯಾವುದೇ ತರ್ಕದಿಂದ ಸೂತ್ರದಿಂದ ಇದರ ಅಸ್ತಿತ್ವವನ್ನು ಗ್ರಹಿಸಲು ಸಾದ್ಯವೇ ಇಲ್ಲ. ಇದು ಒಂದು ರೀತಿಯಲ್ಲಿ pure conciousness ಆಗಿದೆ. ಪ್ರಾಣಕ್ಕೂ ಇದೇ ಚೇತನವಾಗಿದೆ . ಈ ಆತ್ಮನು ನಮ್ಮೊಳಗೇ ಇರುವುದರಿಂದ ಇದನ್ನ ಗ್ರಹಿಸಲು ವಿಶೇಷವಾದ ಪ್ರಜ್ನಾಸ್ತಿತಿ ಬೇಕಾಗುತ್ತದೆ. ಏಕೆಂದರೆ ಈ ಆತ್ಮನು ಅಲ್ಲಿಯೇ ಗೋಚರನಾಗುತ್ತಾನೆ.
 
ಶ್ರೀ ಶಂಕರರು ‘ಮನೀಷಾ ಪಂಚಕ’ ‘ ದಲ್ಲಿ ಹೇಳುತ್ತಾರೆ -
ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಪುಟತರಾ ಯಾ ಸಂವಿದುಜ್ಜೃಂಭತೇ .
ನೋಡಿ. ಈ ಆತ್ಮನು ನಮ್ಮ ಮೂರು ಅವಸ್ತೆಯ ಹಿಂದೆ ನಿಂತಿದ್ದಾನೆ. ಈ ಮೂರೂ ಸ್ತಿತಿಯ ಹಿನ್ನೆಲೆಯಾದ ತುರಿಯಾವಸ್ಥೆಯಲ್ಲಿ ನಾವು ಈ ಆತ್ಮನ ಹೆಜ್ಜೆ ಗುರುತನ್ನ ಕಾಣುತ್ತೇವೆ ಮತ್ತು ಆ ಸ್ತಿತಿಯಲ್ಲಿ ಆತ್ಮನೊಂದಿಗೆ ಇದ್ದು ನಾವೇ ನಾವಾಗಿರುತ್ತೇವೆ. ಅದು ನಾನೇ ಮತ್ತು ನಾನೇ ಅದು ಎಂದು ತಿಳಿಯುವ ಸ್ತಿತಿಯೇ ಅದು.
 
ಬ್ರಹದಾರಣ್ಯಕವು ಹೇಳಿತು –  'ಸತ್ಯಸ್ಯ ಸತ್ಯಮಿತಿ; ಪ್ರಾಣಾ ವೈ ಸತ್ಯಂ, ತೇಷಾಮೇಷ ಸತ್ಯಂ||. ಪ್ರಾಣವು ಸತ್ಯ. ಈ ಪ್ರಾಣದ ಸತ್ಯ ಬೇರೆ ಯಾವುದೂ ಅಲ್ಲ. ಈ ಸತ್ಯವು ಆತ್ಮವೇ ಆಗಿದೆ. ಆದ್ದರಿಂದ ಸತ್ಯದ ಸತ್ಯ ಆತ್ಮವೇ ಆಗಿದೆ.
 
ಛಾಂದೋಗ್ಯ ಉಪನಿಷತ್ತು ಹೇಳಿತು –
“ ಸ ಯಾ ಏಷೋ ಅಣಿಮಾ ಐತತ್ ಆತ್ಮಮಿದಂ ಸರ್ವಂ ; ತತ್ ಸತ್ಯಂ ಸ ಆತ್ಮಾ ತತ್ ತ್ವಂ ಅಸಿ ಶ್ವೆತಕೇತೋ ...... .
“ ಈ ವಿಶ್ವವೆಲ್ಲಾ ಅತಿ ಸೂಕ್ಷ್ಮವಾಗಿ ಇರುವ ಆತ್ಮವಾಗಿದೆ. ಅದು ಸತ್ಯ. ಮತ್ತು ಆ ಸತ್ಯವೇ ಆತ್ಮ. ಓ ಶ್ವೆತಕೇತೋ ನೀನೆ ಅದು. ತತ್ವಮಸಿ ಎಂದು ಉಪನಿಷತ್ತು ಅದ್ವೈತದ ಮಹಾವಾಕ್ಯವನ್ನು ಇಲ್ಲಿ ಹೇಳಿದೆ. ಉದ್ದಾಲಕ ಅರುಣಿ ತನ್ನ ಪುತ್ರ ಶ್ವೆತಕೇತುವಿಗೆ ಆತ್ಮದ ರಹಸ್ಯ ಮತ್ತು ಸತ್ಯ ಏನೆಂದು ತಿಳಿಸುತ್ತಿದ್ದಾನೆ.
 
ಇದು ಮೊದಲೇ ಇತ್ತು. ಏಕೆಂದರೆ ಐತರೇಯ ಕೂಡ ಹೇಳಿದೆ –
'ಆತ್ಮಾ ವಾ ಇದಮೇಕ ಏವಾಗ್ರ ಆಸೀತ್| '.
ಇದು ಮತ್ತು ಅದು ಎನ್ನುವ ಎಲ್ಲಕ್ಕಿಂತ ಮೊದಲು ಆತ್ಮವೇ ಇತ್ತು. ಬ್ರಹದಾರಣ್ಯಕ ಇಷ್ಟಕ್ಕೆ ನಿಲ್ಲದೆ ಉಪನಿಷತ್ತಿನ ಆದೇಶ ಎಂದು ಹೀಗೆ ಹೇಳಿತು -
‘ ತತ್ ಏತತ್ ಬ್ರಹ್ಮ ಅಪೂರ್ವಂ ಅನಪರಂ ಅನಂತರಂ ಅಬಾಹ್ಯಂ, ಅಯಮಾತ್ಮಾ ಬ್ರಹ್ಮ ಸರ್ವಾನುಭೂಃ, ಇತ್ಯಾನುಶಾಸನಮ್||'.
 - ಆತ್ಮನೇ ಬ್ರಹ್ಮ ಮತ್ತು ಇದೇ ಉಪದೇಶ ಮತ್ತು ಆದೇಶ ಕೂಡ.
 
ಮಾಂಡುಕ್ಯ ಉಪನಿಷತ್ತು ಹೇಳುತ್ತದೆ – “ ಸರ್ವಂ ಹೈತದ್ಬ್ರಹ್ಮಾಯಮಾತ್ಮಾ ಬ್ರಹ್ಮ”. ಅಯಮಾತ್ಮಾ ಬ್ರಹ್ಮ ಎನ್ನುವ ಅಥರ್ವವೇದದ ಮಹಾವಾಕ್ಯ ನಮಗೆ ಇಲ್ಲಿ ಸಿಗುತ್ತದೆ. ಈ ಆತ್ಮನೇ ಬ್ರಹ್ಮ ಎನ್ನುವುದು ಅದ್ವೈತ ಶಾಸ್ತ್ರದ ನಿಲುವು.
 
ಈ ಆತ್ಮನು ಅವಿನಾಶಿ ಎಂದು ಶ್ರೀ ಕೃಷ್ಣ ಪರಮಾತ್ಮನು ಗೀತೆಯಲ್ಲಿ ಹೀಗೆ ಹೇಳಿದ್ದಾನೆ.
ಶಸ್ತ್ರದಿ ತುಂಡರಿಸಲಾಗದ ಚೇತನವದು
ಬೆಂಕಿಯ ಬೇಗೆಯೂ ಸುಡಲಾರದ ಅಶರೀರವದು
ನೀರಲಿ ನೆನೆಯದದು, ಮುಳಗದ ವ್ಯಾಪ್ತವದು
ಅಂತೆಯೆ ಗಾಳಿಗೆ ಒಣಗದ ಚಿರಂತನವದು ॥ ೨ ೩ ॥
ಅಳಿಸಲಾಗದ, ಸುಡಲಾಗದ, ತೊಯ್ಯದ, ಒಣಗದ ನಿತ್ಯವದು,
ಬದಲಾಗದ ಸ್ಥಿರಸ್ಥಾಯೀ ನಿರಂತರವದು,
ಸನಾತನವದು, ಅನಂತ ಚಿರ ಚೇತನವದು ॥ ೨ ೪ ॥
ಆಧಾರ ಗ್ರಂಥ : ಸಾಂಖ್ಯ ಯೋಗ , ಭಗವದ್ಗೀತಾ
Sankhya Yoga - Shloka 23 and 24- Verse in Kannada by Sainath Balakrishna.
 
 
ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಬುದ್ದಿ ಹೇಳುತ್ತಾನೆ – ಈ ಆತ್ಮನಿಗೆ ಹುಟ್ಟು ಮತ್ತು ಸಾವು ಇಲ್ಲ ಮತ್ತು ಶರೀರ ನಾಶವಾದರೂ ಆತ್ಮನು ಅವಿನಾಶಿ.
ನ ಜಾಯತೇ ಮ್ರಿಯತೇ ವಾ ಕದಾಚಿತ್
ನಾಯಂ ಭೂತ್ವಾಭ ವಿತಾ ವಾ ನ ಭೂಯಃ |
ಅಜೋ ನಿತ್ಯ: ಶಾಶ್ವತೋಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ||
 
ಶ್ರೀ ಕೃಷ್ಣ ಪರಮಾತ್ಮನು ತನ್ನ ಲೀಲೆ ಮತ್ತು ಅತ್ಯಂತ ಪ್ರಮುಖವಾದ ವಿಭೂತಿಯನ್ನು ಅರ್ಜುನನಿಗೆ ಹೇಳುತ್ತಾನೆ – ನಾನೇ ಎಲ್ಲಾ ಜೀವಿಗಳ ಹ್ರದಯಲಿರುವ ಆತ್ಮವಾಗಿದ್ದೇನೆ. ಎಲ್ಲಾ ಜೀವಿಗಳ ಆದಿ, ಮಧ್ಯ ಮತ್ತು ಅಂತ್ಯ ಕೂಡಾ ನಾನೇ ಆಗಿದ್ದೇನೆ.
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ತಿತಃ |
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ||
ಜೀವಿಗಳಲ್ಲಿ ಇರುವ ಆತ್ಮ ಪರಮಾತ್ಮನ ಅಂಶವಾಗಿದೆ . ಕೇವಲ ಅನುಭವದಿಂದ ಮಾತ್ರ ಈ ದಿವ್ಯಾತ್ಮದ ಪರಿಚಯ ಮಾಡಿಕೊಳ್ಳಬಹುದು. ಪರಮಾತ್ಮನ ಅಂಶವಾಗಿದ್ದರೂ ಅಲ್ಲಿ ಪರಮಾತ್ಮನೇ ನೆಲಿಸಿರುತ್ತಾನೆ. ನಾನು ಎಲ್ಲಾ ಜೀವಿಗಳ ಹ್ರದಯದಲ್ಲಿ ಸೂಕ್ಷ್ಮರೂಪದಲ್ಲಿ ಇದ್ದೇನೆ - “ ಸರ್ವಸ್ಯ ಚಾಹಂ ಹ್ರದಿ ಸಂನಿವಿಷ್ಟೋ “ ಎಂದು ಹೇಳುತ್ತಾನೆ. ಗೀತಾಚಾರ್ಯ ಶ್ರೀ ಕೃಷ್ಣ ಪರಮಾತ್ಮನು ಈ ವಿಶ್ವದಲ್ಲಿ ತನ್ನ ವಿಳಾಸ ಯಾವುದು ಎನ್ನುವುದನ್ನು ನಮಗೆ ಭೋದಿಸುತ್ತಾನೆ. ಭಗವಂತನ ವಾಸಸ್ಥಾನ ಹ್ರದಯದ ಅಂತರಂಗದಲ್ಲಿ ಇದೆ. – “ ಈಶ್ವರಃ ಸರ್ವಭೂತಾನಾಂ ಹ್ರದ್ದೇಶೇ ಅರ್ಜುನ ತಿಷ್ಟತಿ” . ಅಡ್ರೆಸ್ ನಿಮಗೆ ಸಿಕ್ಕಿದೆ. ದಾರಿ ಕೂಡ ಗೀತೆಯಲ್ಲಿಯೇ ಇದೆ. ನಿಮಗೆ ಯಾವುದು ಸುಲಭ ಎಂದೆನಿಸುವುದೋ ಅದನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಭಕ್ತಿಯೇ ಅತ್ಯಂತ ಸುಲಭ ಮಾರ್ಗ ಎಂದು ಹೇಳಿದ್ದಾನೆ.
 
2014 ರಲ್ಲಿ ಉತ್ತರಾದಿ ಶ್ರೀ ಗಳ ಚಾತುರ್ಮಾಸ ವ್ರತ ಉಡುಪಿಯಲ್ಲಿ ಇತ್ತು. ದಿನಾ ಸಂಜೆ ರಾಜಾಂಗಣದಲ್ಲಿ ಶ್ರೀಗಳ ಉಪನ್ಯಾಸ ಕಾರ್ಯಕ್ರಮ ಇರುತಿತ್ತು. ನಾನು ಕೂಡ ಈ ಜ್ನಾನಗಂಗೆಯಲ್ಲಿ ಸಿಕ್ಕುವ ಸಕ್ಕರೆಯ ಒಂದು ಹರಳನ್ನಾದರೂ ಏಕೆ ಪ್ರಸಾದ ರೂಪದಲ್ಲಿ ಪಡೆಯಬಾರದು ಎಂದುಕೊಂಡು ಹೋಗುತಿದ್ದೆ. ಒಂದು ದಿನ ನಾನು ಸ್ವಲ್ಪ ತಡವಾಗಿ ಹೋಗಿದ್ದೆ. ನಾನು ರಾಜಾಂಗಣಕ್ಕೆ ಹೋದ ಸ್ವಲ್ಪ ಸಮಯದಲ್ಲಿ  ಶ್ರೀ ಗಳು ಒಂದು ಮಾತನ್ನು ಹೇಳಿದರು – ಇದು ಸತ್ಯ ಇದು ಸತ್ಯ ಇದು ಸತ್ಯ ಎಂದು. ತಡವಾಗಿ ಹೋದದ್ದರಿಂದ ವಿಷಯದ ಪೂರ್ವಾಪರ ಏನೆಂದು ನನಗೆ ತಿಳಿಯಲಿಲ್ಲ. ಸಂಪೂರ್ಣ ರಾಜಾಂಗಣ ನಿಶಭ್ಬವಾಗಿತ್ತು. ಶ್ರೀ ಉಕ್ತಿಗೆ ಸಾಂಧರ್ಬಿಕ ಕಾರಣ ಮತ್ತು ವಿಷಯ ಏನು ಎಂದು ನನಗೆ ತಿಳಿಯದಿದ್ದರೂ ಏನೋ ಗಹನವಾದ ವಿಷಯದ ಬಗ್ಗೆ ಹೇಳಿದಂತೆ ಅನ್ನಿಸಿತ್ತು.   ಮತ್ತೆ ಅದೇ ಉಪನ್ಯಾಸದಲ್ಲಿ ಶ್ರೀ ಗಳು ಹೇಳಿದರು – ಈ ಗಣೇಶನಲ್ಲೂ ಕೃಷ್ಣನಿದ್ದಾನೆ. ನಿಮ್ಮ ನಮ್ಮ ಎಲ್ಲರಲ್ಲೂ ಕೃಷ್ಣನಿದ್ದಾನೆ ಎಂದು. ಬಹಳ ಒತ್ತು ಕೊಟ್ಟು ಹೇಳಿದ್ದರು.  ಅದನ್ನು ಕೇಳಿ ರಾಜಾಂಗಣದಲ್ಲಿನ ಪಂಡಿತರು ಮತ್ತು ಜನರ ಕರಾಡತನ ಮುಗಿಲು ಮುಟ್ಟಿತ್ತು. ನನ್ನ ಪಾಲಿಗೆ ಅದು ಮರೆಯಲಾಗದಂತಹ ಉಕ್ತಿ.  ಆದರೆ ಆ ದಿನ ನನ್ನ ಮನಸ್ಸು ಮತ್ತು ಅಂತರಾತ್ಮ ಬಹಳ ಸಂತೋಷದಲ್ಲಿತ್ತು . ಏಕೆ ಎಂದರೆ ಏನೇ ಸಿದ್ಧಾಂತಗಳಿರಲಿ, ಮತಭೇದಗಳಿರಲಿ, ಇವುಗಳೆಲ್ಲದರ ಸಮನ್ವಯ ಶ್ರೀ ಕೃಷ್ಣ ಪರಮಾತ್ಮನ ಪಾದಗಳಲ್ಲಿ  ಮಾತ್ರ.
 
ಶ್ರೀ ಕೃಷ್ಣ ಪರಮಾತ್ಮನು ಮನುಷ್ಯನಿಗೆ ಕರೆಕೊಡುತ್ತಾನೆ. ಅದು ಆದೇಶ ಕೂಡ. ‘ನನಗೆ ಶರಣಾಗು. ಯಾವುದೇ ಅಪೇಕ್ಷೆಯಿಲ್ಲದೆ ನನ್ನಲ್ಲಿಗೆ ಬಾ. ಶೋಕಿಸಬೇಡ. ಎಲ್ಲಾ ಪಾಪಗಳಿಂದ ಬಿಡುಗಡೆ ಕೊಟ್ಟು ಮೋಕ್ಷವನ್ನು ಕರುಣಿಸುತ್ತೇನೆ ಎಂದು ಅಭಯ ನೀಡುತ್ತಾನೆ. ಹುಟ್ಟು ಮತ್ತು ಸಾವು ಚಕ್ರದಿಂದ ಬಿಡುಗಡೆಯಾಗಿ ಮೋಕ್ಷ ಸಾದಿಸುವುದೇ ಆತ್ಮವಿದ್ಯೆ, ಬ್ರಹ್ಮವಿದ್ಯೆ ಅಥವಾ ವೇದಾಂತಗಳ ಉದ್ದೇಶ ಮತ್ತು ಗುರಿ. ಎಲ್ಲಾ ಧರ್ಮಗಳೂ ಭಗವಂತನೇ ಸತ್ಯ, ನಿತ್ಯ ಮತ್ತು ಅವನಿಗೆ ಶರಣಾಗಿ ಎಂದು ಕರೆ ಕೊಡುತ್ತವೆ. ಎಲ್ಲಾ ಧರ್ಮಗಳು ಇದನ್ನೇ ಗುರಿಯಾಗಿಟ್ಟುಕೊಂಡಿದೆ. ಅಂತಹ ಭಗವಂತನಿಗೆ ನಾಮಗಳು ಹಲವಿದ್ದರೂ ಅವನು ಒಬ್ಬನೇ ಆಗಿದ್ದಾನೆ ಇದೇ ಪರಮ ಸತ್ಯ .
 
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಯೋಗೇಶ್ವರ, ಗೀತಾಚಾರ್ಯ ಇವನ ಆಗಮನವನ್ನು ಎದುರು ನೋಡುತ್ತಿದ್ದೇವೆ ಮತ್ತು ಆತನ ಬರವಿಗೆ ಕಾದು ಉಪವಾಸವ್ರತ, ನಾಮಸ್ಮರಣೆ, ಭಜನೆ ಇತ್ಯಾದಿ ಭಗವತ್ ಚಿಂತನೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಿರುತ್ತೇವೆ. ಮಕ್ಕಳಿಗೆ ಕ್ರಷ್ಣನ ಉಡುಪು ಅಲಂಕಾರ ಮಾಡಿ ಕೃಷ್ಣನ ರೂಪವನ್ನು ಆ ಮಕ್ಕಳಲ್ಲಿ ನೋಡಿ ಕಣ್ತುಂಬ ಆನಂದಿಸುತ್ತೇವೆ. ಇದು ಕ್ರಷ್ಣನ ಮೇಲೆ ನಮಗಿರುವ ಭಕ್ತಿ ಮತ್ತು ಪ್ರೇಮದ ಪ್ರತೀಕ. ಶ್ರೀ ಕೃಷ್ಣನು ವೇದಮಾತೆ. ಕೊಳನೂದುತ್ತ ನಮ್ಮೆಲ್ಲರನ್ನು ಜ್ಞಾನದ ಹಾಲನ್ನುಣಿಸಲು ನಮಗೆಲ್ಲಾ ಬರಹೇಳಿರುವನು . ನಾವೆಲ್ಲಾ ಗೋವುಗಳಾಗೋಣ . ಈ ಗೋವಿನ ಮಂದೆಯಲ್ಲಿ ನಾನು ಒಂದು ಚಿಕ್ಕ ಕರು ಮತ್ತು ವೇದಮಾತೆಯು ನೀಡುವ ವೇದಾಮ್ರತದಲ್ಲಿ ಒಂದು ಹನಿ ಸಿಗುವುದೇನೋ ಎನ್ನುವ ತವಕ. ನಮ್ಮನ್ನು ಕರೆವುದು ಬಿಡುವುದು ಹಾಲುಣಿಸುವುದು ಆ ಗೋಪಾಲಕೃಷ್ಣನ ಚಿತ್ತ.
 
ಅಲ್ಲಲ್ಲಿ ಗೂಗಲ್ ಬೆರಳಚ್ಚು ಸರಿ ಬರದೆ ಶಬ್ದಗಳು ತಪ್ಪಾಗಿ ಮೂಡಿರಬಹುದು. ಅಂತಹ ತಪ್ಪುಗಳನ್ನು ಮನ್ನಿಸಬೇಕೆಂದು ನನ್ನ ಪ್ರಾರ್ಥನೆ. ನನ್ನ ಕೈ ಹಿಡಿದು ಬರೆಯಿಸಿದ ಅಗೋಚರ ಗುರುವಿಗೆ ನಮನಗೈದು, ಅರಿವಿಲ್ಲದೆ ಹೊರಬಂದಂತಹ ಈ ಕೃತಿಯನ್ನು, ನನ್ನ ಹೃದಯಪುಷ್ಪವೆಂದೆಣಿಸಿ, ಜಗತ್ತಿಗೇ ದಾರಿದೀಪವಾಗಿ, ಜಗದ ಜಗದ್ಗುರು ಶ್ರೀ ಕೃಷ್ಣನ ಪಾದಗಳಲ್ಲಿ ಸಮರ್ಪಿಸಿ, ಅರ್ಚಿಸಿ ಶರಣಾಗಿದ್ದೇನೆ. ಸರಸ್ವತಿಯ ಪ್ರತಿರೂಪವೇ ಆಗಿರುವಂತಹ ಜಗನ್ನಿಯಾಮಿಕೆ ಮೂಕಾಂಬಿಕೆಗೆ ವಂದಿಸುತ್ತಾ, ಈ ಲೇಖನವನ್ನು ತಮ್ಮೆಲ್ಲರ ಮುಂದೆ ತರುವ ಸಾಹಸ ಮಾಡಿದ್ದೇನೆ. ನನ್ನ ಈ ಪ್ರಯತ್ನದಲ್ಲಿ, ಒಂದೇ ಒಂದು ಸಾಲು, ತಮಗೆ ಹಿತವೆನಿಸಿದಲ್ಲಿ ನಾನು ಧನ್ಯನು.
 
ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಂ ವಂದೇ ಜಗದ್ಗುರುಂ . ಶ್ರೀ ಕೃಷ್ಣಾರ್ಪಣಮಸ್ತು .
 
ಇಂತಿ ಸಪ್ರೇಮ ಪ್ರಣಾಮಗಳನ್ನು ಅರ್ಪಿಸುವ,
                                                सायिनाथ बालक्रष्ण                                                                                   
                                            ಸಾಯಿನಾಥ ಬಾಲಕೃಷ್ಣ, ಬೆಂಗಳೂರು.                                                                       
                                                 ದಿನಾಂಕ 14.08.2017
 
 

Comments

Submitted by sainathbalakrishna Sun, 07/01/2018 - 22:46

ಗೂಗಲ್ ಬೆರಳಚ್ಚು ಇಲ್ಲಿ ತಪ್ಪಾಗಿತ್ತು. ಕ್ಷಮಿಸಿ.

“ಮತ್ತೆ ಅದೇ ಉಪನ್ಯಾಸದಲ್ಲಿ ಶ್ರೀ ಗಳು ಹೇಳಿದರು – ಈ ಗಣೇಶನಲ್ಲೂ ಕೃಷ್ಣನಿದ್ದಾನೆ. ನಿಮ್ಮ ನಮ್ಮ ಎಲ್ಲರಲ್ಲೂ ಕೃಷ್ಣನಿದ್ದಾನೆ ಎಂದು. ಬಹಳ ಒತ್ತು ಕೊಟ್ಟು ಹೇಳಿದ್ದರು. ಅದನ್ನು ಕೇಳಿ ರಾಜಾಂಗಣದಲ್ಲಿನ ಪಂಡಿತರು ಮತ್ತು ಜನರ ಕರತಾಡನ ಮುಗಿಲು ಮುಟ್ಟಿತ್ತು.”

Submitted by kavinagaraj Fri, 07/06/2018 - 16:10

ಸತ್ಯಾನ್ವೇಷಣೆ ಸದಾ ಕಾಲಕ್ಕೆ ನಡೆಯುತ್ತಿರಬೇಕಾದ ಕೆಲಸ. ಚಿಂತನ, ಮಂಥನ, ಮನನಗಳ ಮೂಲಕ ಅನ್ವೇಷಣೆ ಸಾಗುತ್ತಲೇ ಇರಬೇಕು. ಈ ಅನ್ವೇಷಣೆ ಅಂತರ್ಮುಖವಾದಷ್ಟೂ ಸತ್ಯಕ್ಕೆ ಹತ್ತಿರವಾಗುತ್ತಾ ಹೋಗುತ್ತೇವೆ. ಉತ್ತಮ ತಾರ್ಕಿಕ ಲೇಖನ. ಅಭಿನಂದನೆಗಳು.