ಕಗ್ಗ ದರ್ಶನ – 26 (2)

ಕಗ್ಗ ದರ್ಶನ – 26 (2)

ಎಲೆ ಹಸಿರು ಹೂ ಬಿಳ್ಪು ಜಾಜಿಯೊಂದರೊಳೆಂತು
ಹುಳಿಸಿಹಿಗಳೊಂದೆ ಮಾವಿನ ಕಾಯೊಳೆಂತು
ಒಳಿತು ಕೆಡುಕಂತು ಮಾಯಾಯಂತ್ರವೊಂದರಿನೆ
ನೆಲವೊಂದು ಬೆಳೆ ಹಲವು – ಮರುಳ ಮುನಿಯ
ಜಾಜಿ ಹೂವಿನ ಬಳ್ಳಿಯಲ್ಲಿ ಎಲೆ ಹಸಿರು, ಹೂ ಬಿಳಿ, ಇದೆಂತು? ಹಾಗೆಯೇ, ಮಾವು ಕಾಯಾಗಿದ್ದಾಗ ಹುಳಿ, ಹಣ್ಣಾದಾಗ ಸಿಹಿ, ಇದು ಹೇಗೆ? ಎಂಬ ಪ್ರಶ್ನೆಗಳ ಮೂಲಕ ಪ್ರಕೃತಿಯ ವಿಚಿತ್ರ್ಗಳನ್ನು ಎತ್ತಿ ತೋರಿಸುತ್ತಾ, ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ, ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು. ಈ ಭೂಮಿಯಲ್ಲಿರುವುದು ಒಂದೇ ನೆಲ. ಆದರೆ ಅದರಲ್ಲಿ ಬೆಳೆಯುವ ಬೆಳೆ ಹಲವು: ಭತ್ತ, ಗೋಧಿ, ರಾಗಿ, ಸಿರಿಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹೂಗಳು ಇತ್ಯಾದಿ. ಹಾಗೆಯೇ, ಒಂದೇ ಮಾಯಾಯಂತ್ರದಿಂದ ಒಳಿತು ಮತ್ತು ಕೆಡುಕು ಮೂಡಿ ಬರುತ್ತಿವೆ ಎಂದು ವಿವರಿಸುತ್ತಾರೆ.
ಅದೇ ಮಳೆ – ಜಗದ ಜೀವಿಗಳನ್ನೆಲ್ಲ ಬದುಕಿಸುವ ಜೀವಜಲ ಧಾರೆ ಎರೆಯುತ್ತದೆ. ಆದರೆ ಅದು ಅತಿಯಾದರೆ….. ಕೇದಾರನಾಥದಲ್ಲಿ, ಶ್ರೀನಗರದಲ್ಲಿ, ೨೦೧೫ರ ಡಿಸೆಂಬರಿನಲ್ಲಿ ಚೆನ್ನೈಯಲ್ಲಿ ಆದಂತೆ ಜೀವನಾಶಕ್ಕೆ ಕಾರಣ.
ಒಂದೇ ಅಣುಶಕ್ತಿ – ಅದರಿಂದ ವಿದ್ಯುತ್ ಉತ್ಪಾದಿಸಿದರೆ ಜನಜೀವನಕ್ಕೆ ಒಳಿತು. ಆದರೆ ವಿನಾಶಕ್ಕೆ ಬಳಸಿದರೆ….. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಣುಬಾಂಬ್ ಎಸೆದಾಗ ಆದಂತೆ, ಲಕ್ಷಗಟ್ಟಲೆ ಜನರ ಸಾವು; ಸೊತ್ತು ನಾಶ ಮತ್ತು ದಶಕಗಳ ಕಾಲ ವಿಕಿರಣದ ಅಪಾಯ. ರಷ್ಯಾದ ಚೆರ್ನೊಬಿಲ್ನಲ್ಲಿ ಆದಂತೆ ಅಣುಶಕ್ತಿಯ ಅವಘಡ ಆದರೆ, ಸುತ್ತಲಿನ ಇನ್ನೂರು ಕಿಮೀ ಪ್ರದೇಶದಲ್ಲಿ ವಿಕಿರಣದಿಂದ ಸರ್ವನಾಶ.
ವಾಹನಗಳು, ವಿಮಾನಗಳು, ಮೊಬೈಲ್ ಫೋನುಗಳು, ಸ್ಮಾರ್ಟ್ ಫೋನುಗಳು, ಕಂಪ್ಯೂಟರುಗಳು, ಇಂಟರ್ನೆಟ್ – ಇವೆಲ್ಲ ತಂತ್ರಜ್ನಾನದಿಂದ ಒಳಿತೂ ಇದೆ, ಕೆಡುಕೂ ಇದೆ. ವಾಹನಗಳ ವೇಗ ಮಿತಿ ಮೀರಿದರೆ ಕಾದಿರುತ್ತದೆ ಅಪಘಾತ. ಮೊಬೈಲ್ ಮತ್ತು ಇಂಟರ್ನೆಟ್ ಮೂಲಕ ವದಂತಿ, ಪ್ರಚೋದನಕಾರಿ ಹೇಳಿಕೆ, ತಿರುಚಿದ ಚಿತ್ರಗಳನ್ನು ಪ್ರಚಾರ ಮಾಡಿದರೆ ತೊಂದರೆ ಖಂಡಿತ. ಆನ್-ಲೈನ್ ವ್ಯವಹಾರದಿಂದ ಸಾವಿರಾರು ಜನರಿಗೆ ಒಂದೇಟಿಗೆ ಮೋಸವಾದೀತು. ಭಾರೀ ವೇಗದ ವಿಮಾನವೊಂದು ದುರುಳನೊಬ್ಬನ ಕೈಗೆ ಸಿಕ್ಕರೆ ನ್ಯೂಯಾರ್ಕಿನಲ್ಲಿ ಆದಂತೆ, ಗಗನಚುಂಬಿ ಕಟ್ಟಡ ಧ್ವಂಸ ಮಾಡುವ ಸಾಧನವಾದೀತು. ಆದ್ದರಿಂದ ಒಳಿತು, ಕೆಡುಕುಗಳ ಬಗ್ಗೆ ನಿರಂತರ ಚಿಂತನೆ, ವಿವೇಚನೆ ಅಗತ್ಯ.
 

Comments