ಬಂಡಾಯ
ವ್ಯಾಸರಾಯ ಬಲ್ಲಾಳರ ’ಬಂಡಾಯ’-ವರ್ಗಸಂಘರ್ಷಕ್ಕೊಂದು ವ್ಯಾಖ್ಯೆ
ಕಾದಂಬರಿಯ ಹಿನ್ನೆಲೆ:
ಕಾರ್ಮಿಕ ಚಳವಳಿ ಮತ್ತು ಮಾಲಿಕ-ಉದ್ಯೋಗಿಗಳ ಸಂಘರ್ಷವನ್ನೇ ವಸ್ತುವಾಗಿರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳು ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ವಿರಳ. ಇದಕ್ಕೆ ಕಾರ್ಮಿಕ ಸಂಘಗಳ ಬಗ್ಗೆ ಸಮಾಜದಲ್ಲಿ ಬೇರೂರಿರುವ ಪೂರ್ವಗ್ರಹ, ಅವುಗಳ ಕುರಿತಾದ ಅಸ್ಪಷ್ಟ ತಿಳಿವಳಿಕೆ ಮತ್ತು ಓದುಗರಲ್ಲಿ ಈ ವಿಷಯದ ಬಗ್ಗೆ ಆಸಕ್ತಿ ಇರಬಹುದೇ ಎಂಬ ಸಂಶಯ ಮುಖ್ಯ ಕಾರಣಗಳಿರಬಹುದೆಂದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ ವ್ಯಾಸರಾಯ ಬಲ್ಲಾಳರ ’ಬಂಡಾಯ’ ಕಾದಂಬರಿ ಕಾರ್ಮಿಕ ಸಂಘಗಳ ಉದ್ದೇಶ, ಅವುಗಳ ಕಾರ್ಯವೈಖರಿ, ನಾಯಕರ ಧೋರಣೆಗಳು ಮತ್ತು ಉದ್ಯೋಗಪತಿಗಳ ಗುರಿಗಳು ಮುಂತಾದ ವಿಷಯಗಳ ಬಗ್ಗೆ ಮುಕ್ತ ವಿಶ್ಲೇಷಣೆ ನಡೆಸುವ ಒಂದು ಅನನ್ಯವಾದ ಕೃತಿ.
ಕಾದಂಬರಿಯ ಬಗ್ಗೆ ಬರೆಯುವುದರ ಮೊದಲು ಅದು ಬರೆಯಲ್ಪಟ್ಟ ಸಂದರ್ಭದ ಕುರಿತು ಉಲ್ಲೇಖಿಸುವುದು ಅಗತ್ಯ. ಕಳೆದ ಶತಮಾನದಲ್ಲಿ ಮುಂಬಯಿಯಲ್ಲಿ ಬೃಹತ್ ಉದ್ದಿಮೆಗಳು ಬೆಳೆದು, ಉತ್ಪಾದನೆ, ಸರಕು ಸಾಗಾಟ, ಧಕ್ಕೆ, ಹಣಕಾಸು, ವಿಮೆ, ವ್ಯಾಪಾರ ಮುಂತಾದ ವಿಭಿನ್ನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿ, ಕಾರ್ಮಿಕ ವರ್ಗವು ನಗರದ ಪ್ರಮುಖ ವಾಹಿನಿಯಾಗಿ ಹೊರಹೊಮ್ಮಿತು. ಇದರೊಂದಿಗೆ, ಕಾರ್ಮಿಕರ ಸಂಘಟನೆಗಳು ಹುಟ್ಟಿದವು. ಸಂಘಶಕ್ತಿ ಹೆಚ್ಚಿದಂತೆ, ಉದ್ಯೋಗಪತಿಗಳಿಂದ ಸಂಘಟಿಸುವ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನಗಳು ಆರಂಭವಾದವು. ಇದಕ್ಕೆ ಪ್ರತಿಯಾಗಿ ಆ ಶತಮಾನದ ಉತ್ತರಾರ್ಧದಲ್ಲಿ ಕಾರ್ಮಿಕ ಚಳವಳಿಯಲ್ಲಿಯೂ ಧರಣಿ, ’ಘೇರಾವೊ’ ಮುಂತಾದ ಹೊಸ ರೀತಿಯ ಪ್ರತಿಭಟನೆಗಳು ಹುಟ್ಟಿಕೊಂಡವು. ತೀವ್ರಗಾಮಿ ಕಾರ್ಮಿಕ ನಾಯಕರು ಮುಂಚೂಣಿಗೆ ಬಂದು, ಸಂಘರ್ಷ ಕಾಣತೊಡಗಿತು. ಒಂದು ಕಾಲಕ್ಕೆ ಜಾರ್ಜ್ ಫರ್ನಾಂಡಿಸ್ ಮುಂಬಯಿಯ ಕಾರ್ಮಿಕ ವರ್ಗದ ಅನಭಿಷಿಕ್ತ ದೊರೆಯಾಗಿ ೧೯೭೪ರಲ್ಲಿ ಇಡೀ ದೇಶದಲ್ಲಿ ಅನಿರ್ದಿಷ್ಟಾವಧಿಯ ರೈಲ್ವೇ ಮುಷ್ಕರವನ್ನು ನಡೆಸಿ ಕೇಂದ್ರ ಸರಕಾರವನ್ನು ಅಲುಗಾಡಿಸಿದ್ದರು. ೧೯೮೦ರ ಆದಿಯಲ್ಲಿ, ವೃತ್ತಿಯಿಂದ ವೈದ್ಯರಾದ ದತ್ತಾ ಸಾಮಂತ್ ಒಬ್ಬ ತೀವ್ರಗಾಮಿ ಸಂಘಟಕರಾಗಿ ಮಿಂಚಿ ಮುಂಬಯಿಯ ಗಿರಣಿ ಕಾರ್ಮಿಕರ ಒಂದು ವರ್ಷದ ಮುಷ್ಕರವನ್ನೇ ನಡೆಸಿದರು. ಅನೇಕ ಗಿರಣಿಗಳು ಮುಂಬಯಿಯಿಂದ ಸ್ಥಳಾಂತರಗೊಳ್ಳಲು ಅವರ ತಡೆಯಿಲ್ಲದ ಚಳವಳಿಯೇ ಕಾರಣ ಎಂಬ ಮಾತೂ ಕೇಳಿ ಬರುತ್ತಿತ್ತು. (ಅದೇ ಸಾಮಂತ್ ೧೯೯೭ರಲ್ಲಿ ಹಿಂಸೆಗೇ ಬಲಿಯಾದುದು ವ್ಯವಸ್ಥೆಯ ವೈಪರೀತ್ಯ.) ಒಟ್ಟಿನಲ್ಲಿ ಕಾರ್ಮಿಕ ಮಾಲಿಕರ ನಡುವೆ ಉಂಟಾದ ಸಂಘರ್ಷದ ಪರಿಸ್ಥಿತಿ ತಾರಕಕ್ಕೇರಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ ಸಂದರ್ಭ ಅದು.
ಈ ವರ್ಗಸಂಘರ್ಷದ ಇನ್ನೊಂದು ರೂಪ ೧೯೬೦ ಮತ್ತು ೧೯೭೦ರ ದಶಕಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶಗಳಲ್ಲಿ ಅಧಿಕಾರಿಶಾಹಿ ವ್ಯವಸ್ಥೆಯ ವಿರುದ್ದ ತಲೆ ಎತ್ತಿದ, ಹಿಂಸೆಯೇ ಮೂಲಮಂತ್ರವಾದ ನಕ್ಸಲ್ ವಾದಿಗಳ ಉಗ್ರ ಹೋರಾಟವಾಗಿತ್ತು. ಇದನ್ನು ಹತ್ತಿಕ್ಕಲು ಪ್ರಭುತ್ವ ಎಪ್ಪತ್ತರ ದಶಕದಲ್ಲಿಯೇ ಪ್ರತಿಹಿಂಸೆಯಲ್ಲಿ ತೊಡಗಿತ್ತು.
ಕಾರ್ಮಿಕ ಚಳವಳಿಯಲ್ಲಿ ಸಾಮೂಹಿಕ ಪ್ರತಿಭಟನೆಯೇ ದಾರಿ. ಅಲ್ಲಿ ಹಿಂಸೆಗೆ ಜಾಗವಿರಲಿಲ್ಲವೆಂದಲ್ಲ; ಸಂಘದಲ್ಲಿ ಆಂತರಿಕ ವೈಷಮ್ಯ ಹುಟ್ಟಿದಾಗ ಒಂದು ತಂಡ ತನ್ನ ಪ್ರಾಬಲ್ಯವನ್ನು ತೋರಿಸಲು ಅಥವಾ ಬೆದರಿಕೆ ಹುಟ್ಟಿಸಲು ಇನ್ನೊಂದು ಪಂಗಡದ ಮೇಲೆ ಹಲ್ಲೆ ನಡೆಸಿದ ಸಂದರ್ಭಗಳಿವೆ. ಅಧಿಕಾರಿವರ್ಗದ ಮೇಲೆ ದೈಹಿಕ ಹಲ್ಲೆ ಅಥವಾ ಆಸ್ತಿಯ ಮೇಲೆ ವಿಧ್ವಂಸಕ ಕೃತ್ಯ ನಡೆಸಿದ ಸನ್ನಿವೇಶಗಳೂ ಇವೆ. ಆದರೆ ಅಧಿಕಾರಿವರ್ಗದವರು, ಪ್ರತಿಭಟಿಸುವ ಕಾರ್ಮಿಕರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವುದು, ಕಾರ್ಯಕರ್ತರ ಮೇಲೆ ಮಾನಸಿಕ ಹಿಂಸೆ ನಡೆಸುವದು, ಭೇದೋಪಾಯದಿಂದ ಅವರೊಳಗೆ ಕಚ್ಚಾಟವನ್ನು ಹುಟ್ಟು ಹಾಕುವದು ಸಾಮಾನ್ಯವಾಗಿತ್ತು.
ಈ ವಿಶಿಷ್ಟ ಕ್ಯಾನ್ವಾಸಿನಲ್ಲಿ೧೯೮೫ರಲ್ಲಿ ರಚಿತವಾದ ಒಂದು ಅಪರೂಪದ ಕಾದಂಬರಿ, ’ಬಂಡಾಯ’, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆಯಿತು. ಅವರು ಕೃತಿ ರಚಿಸಿ ಮೂರು ದಶಕಗಳೇ ಸಂದಿದ್ದರೂ ಬಲ್ಲಾಳರು ಸಮಕಾಲೀನ ಚರ್ಚಾವಸ್ತುವಾದ ವರ್ಗ ಸಂಘರ್ಷ ಮತ್ತು ಹಿಂಸೆಯನ್ನು ತಳಕು ಹಾಕುವುದರ ಮೂಲಕ ಪುಸ್ತಕವು ಇಂದಿಗೂ ಪ್ರಸ್ತುತವಾಗುವಂತೆ ರಚಿಸಿದ್ದಾರೆ. ಈ ಮರು ಓದಿನಲ್ಲಿ ಗಮನಿಸಿದ ವೈಶಿಷ್ಟ್ಯಗಳ ಬಗ್ಗೆ ಈ ಲೇಖನ.
ಕಾದಂಬರಿಯ ಸಾರಾಂಶ:
ಕೃತಿಯ ಸಮಗ್ರ ವಿಶ್ಲೇಷಣೆಯ ಮೊದಲು ಅದರ ಕಥಾಭಾಗವನ್ನು ಗ್ರಹಿಸುವುದು ಅಗತ್ಯ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ರಾಜಶೇಖರ ಸೋಮಯಾಜುಲು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ದೂರೀಕರಿಸುವ ಕನಸು ಕಂಡು ನಕ್ಸಲ್ ವಾದಿಯಾಗುತ್ತಾನೆ. ಆ ದಾರಿಗೆ ಪ್ರತಿಹಿಂಸೆ ಅಡ್ಡವಾಗಿ ತನ್ನವರನ್ನು ಕಳಕೊಂಡು ಗುರಿ ಮುಟ್ಟಲು ಅಸಾಧ್ಯವಾದಾಗ ತನ್ನ ಸ್ವರೂಪವನ್ನೇ ಬದಲಾಯಿಸಿ ಮುಂಬಯಿಗೆ ಬಂದು ರಾಜೀವನಾಗಿ ಜನಪ್ರಿಯ ಕಾರ್ಮಿಕ ನಾಯಕನಾಗುತ್ತಾನೆ. ತಮ್ಮ ಕಂಪೆನಿಗಳಲ್ಲೂ ಬೀಸಲಾರಂಭಿಸಿದ ಸಂಘಶಕ್ತಿಯ ಬಿರುಗಾಳಿಯನ್ನು ನಿಯಂತ್ರಿಸಬಹುದೆಂಬ ಉದ್ದೇಶದಿಂದ ಶರ್ಮ ಸಮೂಹ ಕಂಪೆನಿಗಳ ಒಡೆಯ ಸತೀಶ, ತಂದೆ ನಾಗೇಶ ಶರ್ಮನ ಸಲಹೆಯಂತೆ ಇನ್ನೂ ಶರ್ಮಾ ಕಂಪೆನಿಗಳನ್ನು ಪ್ರವೇಶಿಸಿರದ ರಾಜೀವನ ಮೂಲಕ ತಮ್ಮ ಅಪಾಂಗ ಕಲ್ಯಾಣ ಕೇಂದ್ರದ ಉದ್ಘಾಟನೆ ಮಾಡಿಸುತ್ತಾನೆ.
ಒಂದು ಕಾರ್ಮಿಕ ಪ್ರತಿಭಟನೆಯಲ್ಲಿ ಅಲ್ಲಿದ್ದ ಯಾಮಿನಿ ಮತ್ತು ಅಲ್ಲಿಗೆ ಆಕಸ್ಮಿಕವಾಗಿ ಬಂದ ರಾಜೀವ ಭೇಟಿಯಾಗುತ್ತಾರೆ. ಸಮಾನ ಆಸಕ್ತಿ ಮತ್ತು ಮನಸ್ಥಿತಿ ಹೊಂದಿದ ಇಬ್ಬರೂ ಸಮೀಪವಾಗಿ ಆಕೆ ಅವನ ಸಹಾಯಕಳಾಗಿ ನಾಯಕತ್ವದ ಗುಣಗಳನ್ನು ಮೈಗೂಡಿಸಿ ಮುಂದೆ ಬರುತ್ತಾಳೆ. ಪೋಲಿಯೋ ಪೀಡಿತ ಗಂಡ ಶ್ರೀಕಾಂತನಿಂದಾಗುವ ದೈನಂದಿನ ಮಾನಸಿಕ ಹಿಂಸೆಯ ಜೊತೆಗೇ ಜೀವನ ನಡೆಸುತ್ತಿದ್ದ ಯಾಮಿನಿಯ ಬಾಳಿಗೆ ಹೊಸ ತಿರುವು ಸಿಗುತ್ತದೆ.
ರಾಜೀವನ ಸಂಪರ್ಕ ಸ್ಥಾಪಿಸಿದರೂ ಸತೀಶನ ಕಂಪೆನಿಗಳಲ್ಲಿ ಕೈಗಾರಿಕಾ ಅಶಾಂತಿ ಹರಡುತ್ತದೆ. ’ದಾದಾ’ ಅನ್ನಿಸಿಕೊಂಡ ತಿವಾರಿಯ ಹತ್ಯೆಯಾಗುತ್ತದೆ. ಉದ್ದಿಮೆಯ ಕಾರ್ಮಿಕವರ್ಗದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸಲು ಹೊಸ ನಾಯಕ ದೇಶಪಾಂಡೆ ಕೆಲಸಗಾರರ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರದ ಕರೆ ನೀಡುತ್ತಾನೆ. ದೇಶಪಾಂಡೆಯ ಕರೆಯನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಸತೀಶ ತನ್ನ ನೆಚ್ಚಿನ ಅಧಿಕಾರಿ ರಘು ಪಾಟಣಕರನನ್ನು ’ಸೂಟ್ ಕೇಸ್’ ನ ಸಹಿತ ರಾಜೀವನಲ್ಲಿಗೆ ಕಳುಹಿಸುತ್ತಾನೆ. ರಘುವಿನ ದೌತ್ಯ ವಿಫಲವಾಗುತ್ತದೆ. ಮುಷ್ಕರ ಅನಿವಾರ್ಯವಾಗುತ್ತದೆ. ಅಲ್ಪ ಸಮಯದಲ್ಲೇ ರಘುವನ್ನು ಇರಿದು ಕೊಲ್ಲಲಾಗುತ್ತದೆ. ಕಂಪೆನಿ, ಕಾರ್ಖಾನೆಗಳಿಗೆ ’ಬೀಗಮುದ್ರೆ ಜಡಿಯುತ್ತದೆ.
ರಾಜೀವನ ಅನುಪಸ್ಥಿತಿಯಲ್ಲಿ ಗಂಡ ಶ್ರೀಕಾಂತನ ಅಪಮೃತ್ಯುವಾದಾಗ ಧೃತಿಗೆಡದ ಯಾಮಿನಿ ರಾಜೀವ ಹಾಕಿದ ದಾರಿಯಲ್ಲಿ ಮುಂಬಯಿಯ ಕಾರ್ಮಿಕ ಚಳವಳಿಯನ್ನು ಮುನ್ನಡೆಸುತ್ತಾಳೆ. ಶ್ರಮಜೀವಿಗಳ ಕಷ್ಟಸುಖಗಳಲ್ಲಿ ಬೆರೆಯುತ್ತಾ ಅವರ ಆದರವನ್ನು ಗಳಿಸುತ್ತಾಳೆ.
ರಘುವಿನ ಹತ್ಯೆಯಲ್ಲಿ ನಾಯಕ ದೇಶಪಾಂಡೆಯ ಕೈವಾಡ ಇದೆಯೆಂಬ ಆರೋಪ ಹೊರಿಸಿ ಅವನನ್ನೂ, ಅವನ ಸಮೀಪವರ್ತಿಗಳನ್ನೂ ಪೊಲೀಸರು ಬಂಧಿಸುತ್ತಾರೆ. ಈ ’ಕಾರ್ಮಿಕ ವಿರೋಧಿ’ ಕ್ರಮಕ್ಕೆ ಪ್ರತಿಭಟನೆಯಾಗಿ ಮುಂಬಯಿಯ ಸಂಘಗಳು ಸಾರ್ವತ್ರಿಕ ಬಂದಿನ ಕರೆ ನೀಡುತ್ತವೆ. ಕಾರ್ಮಿಕರ ಒಗ್ಗಟ್ಟಿನ ಅನಿವಾರ್ಯತೆಯನ್ನು ಒತ್ತಿ ಹೇಳಿ ರಾಜೀವ, ಶರ್ಮಾ ಕಂಪೆನಿಗಳ ಸಂಘಗಳೂ ಬಂದಿನಲ್ಲಿ ಭಾಗವಹಿಸುವ ಸಲಹೆ ನೀಡುತ್ತಾನೆ. ಅವನ ಸಲಹೆಯನ್ನು ತಿರಸ್ಕರಿಸಿ ಶರ್ಮಾ ಕಂಪೆನಿಯ ಸಂಘಗಳು ಬಂದಿನಿಂದ ಹೊರಗುಳಿಯುತ್ತವೆ. ಬಂದಿನ ಬಳಿಕ ಮುಷ್ಕರ ಮತ್ತೆ ಮುಂದುವರಿಯುತ್ತದೆ. ಅದರ ಅಂತ್ಯ ಕಾಣುವುದು ಪೊಲೀಸರ ಮುಷ್ಕರದ ಹಿನ್ನೆಲೆಯಲ್ಲಿ ದೇಶಪಾಂಡೆಯ ಬಿಡುಗಡೆಯಾಗಿ ಕಾರ್ಖನೆಯಲ್ಲಿ ಬೆಂಕಿ ಹತ್ತಿಕೊಂಡಾಗ.
ಇನ್ನೊಬ್ಬ ಮುಂದಾಳುವನ್ನು ಗುರುತಿಸಿ ಬದಲಾವಣೆಯ ಜವಾಬ್ದಾರಿಯನ್ನು ಆಕೆಗೆ ನೀಡಿದ ರಾಜೀವ, ಮತ್ತೆ ನಕ್ಸಲೈಟ್ ಆಗಲು ರಂಗದಿಂದ ನಿರ್ಗಮಿಸುತ್ತಾನೆ.
ಏಳುವ ಪ್ರಶ್ನೆಗಳು:
’ಬಂಡಾಯ’ವನ್ನು ಓದುತ್ತಿದ್ದಂತೆ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಏಳುತ್ತವೆ. ಕಾದಂಬರಿಯ ವಸ್ತುವನ್ನು ತಾವೇ ಅತೀ ಸಮೀಪದಿಂದ ಗ್ರಹಿಸಿದ ಲೇಖಕರನ್ನೂ ಅವು ಕಾಡಿವೆ ಎಂದು ನನ್ನ ನಂಬಿಕೆ. ದುಡಿಯುವ ಮತ್ತು ದುಡಿಸಿಕೊಳ್ಳುವ ಎರಡು ವರ್ಗಗಳ ನಡುವೆ ಸಾಮರಸ್ಯವನ್ನು ಕಾಪಾಡಲು ಸಮರ್ಪಕವಾದ ವ್ಯವಸ್ಥೆ ಎಂಬುದು ಇದೆಯೇ? ಸಂಬಂಧಗಳಲ್ಲಿ ಬಿರುಕು ಹುಟ್ಟಿದರೆ ಪರಿಹಾರವೇನು? ಮುಷ್ಕರವೇ? ಹಿಂಸೆಯೇ?
ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋದಂತೆ ನೈತಿಕ ಮತ್ತು ಸೈದ್ಧಾಂತಿಕ ನೆಲೆಯ ಪ್ರಶ್ನೆಗಳೂ ನಮ್ಮನ್ನು ಕಾಡುತ್ತವೆ. ಕಾರ್ಮಿಕ ಸಂಘಗಳ ಔಚಿತ್ಯವೇನು? ಮಾಲಿಕ-ಕಾರ್ಮಿಕರ ಸಂಬಂಧದ ತಳಹದಿ ಹೇಗಿರಬೇಕು? ಅಲ್ಲಿ ನೈತಿಕತೆ ಅಗತ್ಯವೇ? ವರ್ಗ ಸಂಘರ್ಷಕ್ಕೆ ಯಾರು ಹೊಣೆ-ಕಾರ್ಮಿಕರೇ, ಉದ್ದಿಮೆದಾರರೇ ಅಥವಾ ಉಳ್ಳವರೇ? ಸಮಾಜದಲ್ಲಿ ಹಿಂಸೆ ಹೇಗೆ ಹುಟ್ಟುತ್ತದೆ? ಅದಕ್ಕೆ ಪರಿಹಾರ ಪ್ರತಿಹಿಂಸೆಯೇ? ಬಂಡಾಯದಿಂದ ವ್ಯವಸ್ಥೆಯನ್ನು ಬದಲಿಸಬಹುದೇ?
ಕಾದಂಬರಿ ಈ ಪ್ರಶ್ನೆಗಳಿಗೆ ನೇರ ಉತ್ತರಗಳನ್ನು ಕೊಡಲು ಯತ್ನಿಸುವುದಿಲ್ಲ. ಬದಲಾಗಿ ಪರಸ್ಪರ ಪೂರಕವಾದ ಘಟನೆಗಳು ಮತ್ತು ಪಾತ್ರಗಳ ಮೂಲಕ ಓದುಗರನ್ನು ಚಿಂತನಶೀಲನರನ್ನಾಗಿಸಿ, ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಗಳ ಹುಡುಕಾಟದತ್ತ ಉತ್ತೇಜಿಸುತ್ತದೆ. ಇದರ ಸುಳುಹನ್ನು ಬಲ್ಲಾಳರು ಕಾದಂಬರಿಯ ಮುನ್ನುಡಿಯಲ್ಲಿ ತಮ್ಮ ಗಂಭೀರವಾದ ಒಂದು ಜಿಜ್ಞಾಸೆಯ ಮೂಲಕ ನೀಡುತ್ತಾರೆ:
’ವ್ಯವಸ್ಥೆಯ ವಿರುದ್ಧ ಹೂಡುವ ಬಂಡಾಯದಲ್ಲಿ ಪ್ರಕಟವಾಗುವ ಹಿಂಸೆಯನ್ನು ನಕ್ಸಲೀಯ ಹಿಂಸೆಯೆಂದು ಹೆಸರಿಸುವಾಗ ನಾವು ’ಹೆಸರಿಸು’ವುದರಲ್ಲೇ ಹಿಂಸೆಯ ಎಲ್ಲ ಆಯಾಮಗಳನ್ನು ತಿಳಿದುಕೊಂಡಂತಾಗುವುದೇ ಎಂಬ…ಜಿಜ್ಞಾಸೆಯಲ್ಲಿ ಈ ಕಾದಂಬರಿಯ ಶಿಲ್ಪವನ್ನು ಕಡೆದಿದ್ದೇನೆ’.
ವರ್ಗಸಂಘರ್ಷ ಮತ್ತು ’ಬಂಡಾಯ’ದ ಪ್ರಸ್ತುತತೆ:
ನಾಯಕನ ನಿರ್ಗಮನದೊಂದಿಗೆ ಕಾದಂಬರಿ ಮುಗಿದರೂ, ವರ್ಗ ಸಂಘರ್ಷ ಎಂದೂ ಮುಗಿಯದ ಕಥೆ. ೧೮ನೇ ಶತಮಾನದಲ್ಲಿ ಯಂತ್ರಗಳ ಆವಿಷ್ಕಾರ, ಉಗಿಶಕ್ತಿ, ಬಂಡವಾಳ ಹೂಡಿಕೆ ಮುಂತಾದ ಪ್ರಕ್ರಿಯೆಗಳ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ನಡೆದ ಕ್ರಾಂತಿ, ಇಂಗ್ಲಂಡಿನ ವಸಾಹತುಗಳೂ ಸೇರಿದಂತೆ ಅನೇಕ ದೇಶಗಳಲ್ಲಿ ಮೂಲಭೂತ ಬದಲಾವಣೆಗಳಿಗೆ ನಾಂದಿ ಹಾಡಿತು. ಆರ್ಥಿಕ ಪ್ರಗತಿಯೊಂದಿಗೇ ಅಸಮಾನತೆಗಳೂ ಹೆಚ್ಚಿದವು. ದುಡಿಯುವ ಮತ್ತು ದುಡಿಸುವ ವರ್ಗಗಳ ಅಂತರ ಆಳವಾದಷ್ಟೂ ವೈಷಮ್ಯಗಳು ಉಲ್ಬಣಗೊಂಡವು. ಆರ್ಥಿಕತೆ ಬಲವಾದಂತೆ ಶೋಷಣೆ ಮತ್ತು ದಬ್ಬಾಳಿಕೆಗಳೂ ತೀವ್ರವಾಗಿ, ಸಂಘಟಿತ ಹೋರಾಟಕ್ಕೆ ಆಸ್ಪದ ನೀಡಿದವು.
ಕಾರ್ಮಿಕರ ಸಂಘಟಿತ ಹೋರಾಟ ೨೦ನೇ ಶತಮಾನದ ಮಧ್ಯಭಾಗದಲ್ಲಿ ಪ್ರಬಲವಾಗಿ, ಕಾನೂನು ರೀತ್ಯಾ ಅನೇಕ ಸುಧಾರಣೆಗಳು ನಡೆದವು. ಸುಧಾರಣೆಗಳು ಮುಂದುವರಿದಂತೆ ಅರ್ಥವ್ಯವಸ್ಥೆಯಲ್ಲಿಯೂ ಬದಲಾವಣೆಗಳಾಗುತ್ತಾ ಬಂದವು. ೨೧ನೇ ಶತಮಾನದಲ್ಲಿ ಶೋಷಣೆಯ ರೂಪವೂ ಭಿನ್ನವಾಗತೊಡಗಿತು. ಇದಕ್ಕೆ ಪ್ರತಿಯಾಗಿ ಪ್ರತಿಭಟನೆಗಳೂ ವಿಭಿನ್ನ ರೂಪವನ್ನು ತಾಳಿದವು. ಜಾಗತಿಕ ಆರ್ಥಿಕ ವೇದಿಕೆಯ (World Economic Forum) ವಿರುದ್ಧ ಜಾಗತಿಕ ಸಾಮಾಜಿಕ ವೇದಿಕೆ (World Social Forum), ಮುಕ್ತ ಆರ್ಥಿಕ ವ್ಯವಸ್ಥೆಯನ್ನೇ ಶ್ರೇಷ್ಠವೆಂದು ಹೇಳುವ ಅಮೆರಿಕದಲ್ಲಿ ನಡೆದ ವಾಲ್ ಸ್ಟ್ರೀಟಿನ ಮುತ್ತಿಗೆ (Occupy Wall Street) ಎಂಬ ಪ್ರತಿಭಟನೆ, ವಾಲ್ ಮಾರ್ಟ್ ಮತ್ತು ಮೆಕ್ ಡೊನಾಲ್ಡ್ಸ್ ಕಂಪೆನಿಗಳ ಗುತ್ತಿಗೆ ಕಾರ್ಮಿಕರ ಪ್ರತಿಭಟನೆಗಳು ಮತ್ತು ಇತ್ತೀಚೆಗಷ್ಟೇ ಐರೋಪ್ಯದೇಶಗಳಲ್ಲಿ ಅಮಝಾನ್ ಕಂಪೆನಿಯ ವಿರುದ್ಧಕಾರ್ಮಿಕರು ನಡೆಸಿದ ಪ್ರತಿಭಟನೆ, ಜಗತ್ತಿನಲ್ಲಿ ವರ್ಗಸಂಘರ್ಷ ಮುಂದುವರಿಯುತ್ತಿದೆ ಎಂಬುದನ್ನು ಒತ್ತಿ ಹೇಳುತ್ತವೆ.
ಭಾರತದಲ್ಲಿಯೂ ಈ ಸಂಘರ್ಷದ ಘಟನೆಗಳು ನಮ್ಮ ಕಣ್ಮುಂದೆಯೇ ನಡೆದಿವೆ. ೨೦೦೨ರಲ್ಲಿ ನಡೆದ ತಮಿಳುನಾಡಿನ ಸರಕಾರಿ ನೌಕರರ ಮುಷ್ಕರ ಮತ್ತು ಅಂದಿನ ಜಯಲಲಿತಾ ಸರಕಾರ ಅವರ ಮೇಲೆ ನಡೆಸಿದ ದಬ್ಬಾಳಿಕೆ, ೨೦೦೫ರಲ್ಲಿ ಗುರ್ಗಾಂವ್ ನ ಹೋಂಡ ಮೋಟರ್ ಸೈಕಲ್ ಕಂಪೆನಿಯಲ್ಲಿ ನಡೆದ ಮುಷ್ಕರ, ಪೊಲೀಸ್ ದೌರ್ಜನ್ಯ ಮತ್ತು ’ಲಾಕ್ ಔಟ್’ ಮತ್ತು ೨೦೧೨ರಲ್ಲಿ ಮಾರುತಿ ಕಾರಿನ ಮನೆಸರ ಘಟಕದಲ್ಲಿ ನಡೆದ ಹಿಂಸೆಗಳು ಮತ್ತು ಕಾರ್ಮಿಕರನ್ನು ವಿಚಾರಣೆಯಿಲ್ಲದೆ ದೀರ್ಘ ಕಾಲ ಜೈಲಿಗೆ ತಳ್ಳಿದುದು, ಹಣಕಾಸು ಮತ್ತು ವಿಮಾರಂಗಗಳಲ್ಲಿ ಅನೇಕ ಬಾರಿ ನಡೆದ ಮುಷ್ಕರಗಳು ಮತ್ತು ಅಧಿಕಾರಿವರ್ಗಗಳ ದಬ್ಬಾಳಿಕೆಗಳು, ಕಾರ್ಖಾನೆಗಳಿಗೆ ಬೀಗಮುದ್ರೆ ಹಾಕಿದ ಸನ್ನಿವೇಶಗಳು-ಇವುಗಳೆಲ್ಲಾ ಮುಗಿಯದ ಸಂಘರ್ಷಕ್ಕೆ ನಿದರ್ಶನಗಳು. ಛತ್ತೀಸಗಢದ ದಾಂತೆವಾಡದ ನಕ್ಸಲರ ಹಿಂಸೆ ಒಂದೆಡೆ, ಅದಕ್ಕೆ ಪ್ರತೀಕಾರವೆಂಬಂತೆ ಅಧಿಕಾರಿವರ್ಗ ಸಂಶಯದ ಆಧಾರದಲ್ಲೇ ಅಮಾಯಕ ಆದಿವಾಸಿಗಳ ಮೇಲೆ ನಡೆಸುವ ದಬ್ಬಾಳಿಕೆ, ನಕ್ಸಲರ ಬಗ್ಗೆ ಒಲವು ಇದೆಯೆಂದು ಆಪಾದಿಸಿ ಡಾ.ವಿನಾಯಕ ಸೇನರಿಗೆ ಜೈಲುವಾಸ, ಆದಿವಾಸಿ ಕಾರ್ಯಕರ್ತೆ ಸೋನಿ ಸೋರಿಯ ಬಂಧನ ಮತ್ತು ಚಿತ್ರಹಿಂಸೆ, ಪ್ರೊ.ಸಾಯಿಬಾಬ ಅವರ ದಸ್ತಗಿರಿ ಮುಂತಾದ ಸನ್ನಿವೇಶಗಳು ಹಿಂಸೆಯ ಬಳಕೆಯನ್ನು ವೈಭವೀಕರಿಸಿವೆ.
’ಬಂಡಾಯ’ದ ಸೃಷ್ಟಿ ಮೂವತ್ತು ವರ್ಷಗಳ ಹಿಂದೆ ಆಗಿತ್ತು. ಅಂದಿನ ಮುಂಬಯಿಯ ಉದ್ದಿಮೆರಂಗದ ಪರಿಸ್ಥಿತಿ ಮತ್ತು ಹರಡುತ್ತಿದ್ದ ನಕ್ಸಲ್ ಚಳವಳಿ ಬಲ್ಲಾಳರ ಕೃತಿಗೆ ಪ್ರೇರಣೆ ನೀಡಿದ್ದವು. ಆದರೆ ಮೇಲೆ ಹೇಳಿದಂಥ ಬೆಳವಣಿಗೆಗಳನ್ನು ಗಮನಿಸಿದಾಗ ಕಾದಂಬರಿ ಇಂದಿಗೂ ಪ್ರಸ್ತುತವಾಗಿಯೇ ಉಳಿಯುತ್ತದೆ.
ವ್ಯವಸ್ಥೆಯ ವಿಪರ್ಯಾಸಗಳು:
ನಮ್ಮ ಸಮಾಜದ ಮತ್ತು ಅರ್ಥವ್ಯವಸ್ಥೆಯ ವಿಪರ್ಯಾಸಗಳನ್ನು ಕಾದಂಬರಿಯಲ್ಲಿ ಹಲವು ಕಡೆ ಲೇಖಕರು ದಾಖಲಿಸುತ್ತಾರೆ. ಅವುಗಳನ್ನು ಜಾಗತೀಕರಣದ ಈ ಕಾಲಘಟ್ಟದಲ್ಲಿ ನಾವು ಮತ್ತೆ ಮತ್ತೆ ಕಾಣುತ್ತೇವೆ. ಒಂದೆಡೆ ಅಭಿವೃದ್ಧಿಯ ಸಂಕೇತಗಳಾದ ಹೊಗೆ ಮತ್ತು ಬೆಂಕಿ; ಮತ್ತೊಂದೆಡೆ ಕಾಲ್ದಾರಿಯಲ್ಲಿ ಆ ಬೆಂಕಿಯಿಂದ ಕಾಯಿಸುವ ರೊಟ್ಟಿ (ಪುಟ ೫೭):
ದೈತ್ಯಾಕಾರದ ಎಣ್ಣೆಯ ಟ್ಯಾಂಕುಗಳು… ತೈಲಶುದ್ಧೀಕರಣದ ಕಾರ್ಖಾನೆಗಳು…ದಿನದ ೨೪ ತಾಸುಗಳೂ ಹೊಗೆಕಾರುವ, ಆ ಹೊಗೆಯಲ್ಲೇ ಕಾರ್ಖಾನೆಯ ಜೀವಂತತೆಯ ಬೆಳಕನ್ನು ಬೀರುವ ಪ್ರಾಯೋಗಿಕ ಸಂಕೇತ ಜ್ವಾಲೆಗಳು… ಹೊಗೆ…ಬೆಂಕಿ…ಶಹರದ ಹಾಗೆಯೇ ರಾಷ್ಟ್ರದ ವ್ಯವಸ್ಥೆಗೆ ಜೀವದಾನ ಮಾಡುವ ಶಕ್ತಿಯ ಉತ್ಪಾದನೆಯ ಸರಕುಗಳು…
ಪಕ್ಕದ ಕಾಲ್ದಾರಿಯಲ್ಲಿ ನೂರಾರು ಅಗ್ಗಿಷ್ಟಿಕೆಗಳು, ಸಣ್ಣ ಸಣ್ಣ ಅಗ್ಗಿಷ್ಟಿಕೆಗಳು, ಝೋಪಡಿಯಲ್ಲಿ ಬದುಕು ಸಾಗಿಸುವಾಗ ರೊಟ್ಟಿ ಕಾಯಿಸಲು, ಅನ್ನ ಬೇಯಿಸಲು ಬೆಂಕಿ…
ಈ ಅಗ್ಗಿಷ್ಟಿಕೆಗಳು ನಾಯಕ ರಾಜೀವನಿಗೆ ’ಬರೀ ಹಣತೆಗಳಷ್ಟೆ. ಅವು ಬೆಂಕಿಯ ಪ್ರಚಂಡ ಶಕ್ತಿಯಾಗಿ ವ್ಯವಸ್ಥೆಯನ್ನು ಭಸ್ಮಮಾಡುವುದಿಲ್ಲ.’ ವಿಪರ್ಯಾಸಗಳು ಬಂಡಾಯದ ಬೀಜವನ್ನು ಬಿತ್ತಿದರೂ ವ್ಯವಸ್ಥೆಯನ್ನು ಬದಲಿಸುವ ಮಟ್ಟಕ್ಕೆ ತಲಪುವುದಿಲ್ಲ.
ಅಭಿವೃದ್ಧಿಯ ಪ್ರತೀಕಗಳಾದ ಕಾರ್ಖಾನೆಗಳು ಒಂದು ವರ್ಗಕ್ಕೆ ತಮ್ಮ ಪ್ರತಿಷ್ಠೆಯನ್ನು ಮೆರೆಸುವ ದಾರಿ. ಅಪಾಂಗ ಕಲ್ಯಾಣ ಕೇಂದ್ರದ ಉದ್ಘಾಟನೆಗೆ ಬಂದ ಆಮಂತ್ರಿತರ ನಡವಳಿಕೆ ಇದನ್ನು ಬಿಂಬಿಸುತ್ತದೆ. ಅಲ್ಲಿಗೆ ಬಂದ ಯಾಮಿನಿ, ’ಅಲ್ಲಿರುವ ಹಲವಾರು ಪ್ರತಿಷ್ಠಿತರ, ಪತ್ರಿಕೋದ್ಯಮಿಗಳ ಮುಂದಿದ್ದ ಬಿಯರ್ ಗ್ಲಾಸುಗಳನ್ನೇ ನೋಡುತ್ತಿದ್ದಳು (ಪು೧೭೮). ಆದರೆ ಲೇಖಕರ ದೃಷ್ಟಿಯಲ್ಲಿ ಅವು ಸಾವಿರಾರು ಜನರಿಗೆ ಬದುಕಿನ ಅರ್ಥ ತಿಳಿಯುವ ಕುತೂಹಲವನ್ನೂ ಹುಟ್ಟಿಸಲು ಅವಕಾಶ ಕೊಡದಂತಹ ಕಾರ್ಖಾನೆಗಳು. (ಪು.೧೮೦)
ಉದ್ದಿಮೆದಾರರ ಧೋರಣೆಗಳೂ ಈ ವಿಪರ್ಯಾಸಗಳನ್ನು ತೀವ್ರಗೊಳಿಸುತ್ತವೆ. ಮಾಲಿಕ ಸತೀಶನ ಬಗ್ಗೆ ಬರೆಯುತ್ತಾ ಬಲ್ಲಾಳರು ಹೇಳುತ್ತಾರೆ (ಪು೨೭೮): ’ಕೆಲಸಗಾರರಿಂದ ಸಾಧ್ಯವಾದಷ್ಟು ಹೆಚ್ಚು ಕೆಲಸ ಪಡೆಯುವಲ್ಲಿ ಎಂಥ ತಂತ್ರ ಕುತಂತ್ರಗಳನ್ನು ಉಪಯೋಗಿಸಿದರೂ ಸರಿಯೇ ಎಂದು ಆತನ ಭಾವನೆ.’
ಈ ವ್ಯವಸ್ಥೆಯ ಇನ್ನೊಂದು ಮುಖವನ್ನೂ ಕೃತಿ ತೆರೆದಿಡುತ್ತದೆ. ಉದ್ದಿಮೆದಾರರ ಪ್ರಕಾರ ’ನಾಲ್ಕು ಜನರಿಗೆ ಸರಿಕಾಣೋದು ನ್ಯಾಯ…ಕಾಯಿದೆ ದೃಷ್ಟಿಯಲ್ಲಿ ಸರಿಯೆನಿಸಿಕೊಳ್ಳುವುದು ನ್ಯಾಯ…ಸಮಾಜ ಒಪ್ಪಿಕೊಳ್ಳೋದು ನ್ಯಾಯ…’ (ಪು.೨೩೩). ಈ ವಾದವನ್ನು ಒಪ್ಪಿಕೊಳ್ಳದವರು ತಿರಸ್ಕೃತರಾಗುತ್ತಾರೆ. ’ಈ ಜಗತ್ತಿನಲ್ಲಿ ನ್ಯಾಯ ಅನ್ನೋದೇ ಇಲ್ಲ…ಇರೋದು ಮನುಷ್ಯನ ಸ್ವಾರ್ಥ, ಕ್ರೌರ್ಯ ಮತ್ತು ಹಿಪಾಕ್ರಸಿ ಮಾತ್ರ,’ ಎನ್ನುವ ತಂಗಿ ನಯನಾ, ಸತೀಶನಿಗೆ ನಿಕೃಷ್ಟವಾಗುತ್ತಾಳೆ.ಈ ಧೋರಣೆಗಳೇ ಸಂಘರ್ಷದ ಬೀಜವನ್ನು ಬಿತ್ತುತ್ತವೆ.
ಸತೀಶನ ದೃಷ್ಟಿಯಲ್ಲಿ ಯಾರನ್ನಾದರೂ ಹಣಕೊಟ್ಟು ತಮ್ಮೆಡೆಗೆ ಸೇರಿಸಲು ಸಾಧ್ಯ. ಆ ನಂಬಿಕೆಯಿಂದಲೇ ತನ್ನ ಕಂಪೆನಿಯ ನೌಕರರ ಮುಷ್ಕರವನ್ನು ಮುರಿಯಲು ಅವನು ರಾಜೀವನಿಗೆ ನಾಯಕತ್ವದ ಮತ್ತು ಹಣದ ಆಮಿಷ ನೀಡುತ್ತಾನೆ. ತನ್ನ ಅಧಿಕಾರಿಗಳೊಂದಿಗೆ ಮುಷ್ಕರದ ಬಗ್ಗೆ ಚರ್ಚೆ ನಡೆಸುವಾಗ ವಿವೇಕದ ಮಾತುಗಳನ್ನು ಕೇಳುವ ಸಹನೆ ಆತನಿಗಿಲ್ಲ. ಎಲ್ಲರೂ ಹೌದಪ್ಪಗಳೇ ಆಗಿರುವಾಗ ಪರಿಸ್ಥಿತಿಯ ಬದಲಾವಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಸೂಚ್ಯವಾಗಿ ಲೇಖಕರು ನಮ್ಮ ಮುಂದಿಡುತ್ತಾರೆ. (ಪು. ೨೯೨-೩). ಮಾನವ ಸಂಬಂಧಗಳನ್ನು ಬೆಳೆಸಿ ವರ್ಗ ಸಾಮರಸ್ಯವನ್ನು ಭದ್ರಗೊಳಿಸಲು ಮುಕ್ತ ಮನಸ್ಸು ಅಗತ್ಯ.
ಕಂಪೆನಿಗಳ ಹಿರಿಯ ಅಧಿಕಾರಿಗಳ ಇಬ್ಬಂದಿತನದಿಂದಾಗಿ ವೈಷಮ್ಯ ಗಂಭೀರವಾಗುತ್ತದೆ. ಕಾರ್ಖಾನೆಯಲ್ಲಿಯೇ ಸಂಭವಿಸಿದ ಅಪಘಾತದಲ್ಲಿ ಕೈಕಳೆದುಕೊಂಡ ಉದ್ಯೋಗಿಗೆ ಸೂಕ್ತ ಪರಿಹಾರವನ್ನು ಕೊಡಲು ಸತೀಶ ತಯಾರಿಲ್ಲ. ಆದರೆ ಲಕ್ಷಗಟ್ಟಲೆ ಖರ್ಚುಮಾಡಿ ಅಪಾಂಗಕಲ್ಯಾಣ ಕೇಂದ್ರ ಸ್ಥಾಪಿಸಿ ಅದರ ಉದ್ಘಾಟನೆಯನ್ನು ಕಾರ್ಮಿಕ ನಾಯಕನಿಂದಲೇ ನೆರವೇರಿಸುತ್ತಾನೆ ಸತೀಶ! ಆರಂಭದಲ್ಲಿ ದ್ವಿಪಕ್ಷೀಯ ಮಾತುಕತೆಗೆ ನಿರಾಕರಿಸಿದ ಕಂಪೆನಿ, ಆ ಬಳಿಕ ಕಾರ್ಮಿಕ ಆಯುಕ್ತರ ಒತ್ತಾಯಕ್ಕೆ ಮತ್ತು ಉಳಿದ ಸಂಘಗಳ ಸಹಾನುಭೂತಿಯ ಮುಷ್ಕರದ ಬೆದರಿಕೆಗೆ ಮಣಿದು ಸಂಘದ ಮುಂದಾಳುಗಳೊಂದಿಗೆ ಮಾತುಕತೆಗೆ ಮುಂದಾಗುತ್ತದೆ ಇದರ ಬಗ್ಗೆ ಬಲ್ಲಾಳರ ಟಿಪ್ಪಣಿ ಉಲ್ಲೇಖನೀಯ (ಪು.೭೨):
’ಸ್ವಾರ್ಥಕ್ಕೆ ಅಂಟಿಕೊಂಡು, ಅಧಿಕಾರದ ರುಚಿಯಿಂದ ಶೋಷಣೆಯೇ ಲಾಭಕ್ಕಾಗಿ ಏಕಮೇವ ಜೀವನ ಧರ್ಮವೆಂದು ನಂಬಿದ್ದ ಕಂಪೆನಿಯ ವರಿಷ್ಠ ಅಧಿಕಾರಿಗಳಿಗೆ ತಿಳಿವಳಿಕೆ ಬರಲು ೧೮ ದಿನ ಕಾಯಬೇಕಾಯಿತು.
ಮುಷ್ಕರ, ಕೊಲೆ, ಬಂಧನ, ಬಂದ್ ಇಷ್ಟೆಲ್ಲಾ ನಡೆದರೂ ಮಾತುಕತೆಗೆ ತಯಾರಿಲ್ಲದ ಸತೀಶ, ನಾಯಕನ ಬಿಡುಗಡೆ ಮತ್ತು ಕಾರ್ಖಾನೆಗೆ ಬೆಂಕಿ ಬೀಳುವ ತನಕ ಕಾದು ಆ ಬಳಿಕ ಕಾರ್ಮಿಕರ ಬೇಡಿಕೆಗೆ ಮಣಿಯಲು ಸಾಧ್ಯವೆಂದಾದರೆ ಆರಂಭದಲ್ಲೆ ದ್ವಿಪಕ್ಷೀಯ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಪ್ರಯತ್ನ ಮಾಡಬಹುದಿತ್ತು. ಇದು ಬೆಂಕಿ ಬಿದ್ದಾಗಲಷ್ಟೇ ಬಾವಿ ತೋಡುವ ನೀತಿಗೆ ಒಂದು ನಿದರ್ಶನ. ಈ ಧೋರಣೆ, ಇಂದಿಗೂ ಕಾರ್ಮಿಕ-ಮಾಲಿಕರ ಸಾಮರಸ್ಯ ಕಾಪಾಡುವಲ್ಲಿ ತೊಡಕಾಗಿಯೇ ಉಳಿದಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಕಿ ಮತ್ತು ಹೊಗೆಯನ್ನು ೨೪ ಗಂಟೆಯೂ ಪರಿಸರಕ್ಕೆ ಉಗುಳುತ್ತಿರುವ ದೈತ್ಯ ತೈಲಶುದ್ಧೀಕರಣದ ಮತ್ತು ಉಷ್ಣ ವಿದ್ಯುತ್ ಸ್ಥಾವರಗಳು, ಅನಿಲವನ್ನು ಸಾಗಿಸುವ ’ಬುಲ್ಲೆಟ್’ ಟ್ಯಾಂಕರುಗಳು, ಫಲವತ್ತಾದ ಭೂಮಿಯನ್ನು ಸೀಳಿ ನೂರಾರು ಕಿಲೋಮೀಟರು ದೂರ ದ್ರವ ಅನಿಲವನ್ನು ಕೊಂಡೊಯ್ಯುವ ಬೃಹತ್ ಪೈಪುಗಳು ಒಂದೆಡೆ; ಇನ್ನೊಂದೆಡೆ, ಕಾರ್ಖಾನೆಯ ಹೊರವಲಯಗಳಲ್ಲಿ ಎದ್ದ ಝೋಪಡಿಗಳಲ್ಲಿ ನೆಲೆಸಿ, ಬೆಂಕಿಯಲ್ಲಿ ರೊಟ್ಟಿ ಬೇಯಿಸಿ, ಯಾವುದೋ ಭಾಷೆ ಮಾತನಾಡುವ ದೂರದ ಒಡಿಸ್ಸಾ, ಝಾರ್ಖಂಡ ಮೂಲದ ಕಾರ್ಮಿಕರು- ಗುತ್ತಿಗೆದಾರರ ’ಪಿಕಪ್’ ವಾಹನಕ್ಕೆ ಕಾಯುವ, ಆ ವಾಹನ ಬಜಪೆಯ ಜೋಕಟ್ಟೆಯ ತಿರುವಿನಲ್ಲಿ ಅಡಿಮೇಲಾಗಿ ಬಿದ್ದು ದರಿದ್ರ ಬದುಕಿಗೇ ಹೊಡೆತ ಸಿಕ್ಕಿ ಅಥವಾ ಕಾರ್ಖಾನೆಯಲ್ಲಿಯೇ ಬೆಂಕಿಯ ಅವಘಡಕ್ಕೆ ಇಲ್ಲವೇ ಸ್ಫೋಟಕ್ಕೆ ಸಿಲುಕಿ ಪರಿಹಾರದ ಆಸೆಯೂ ಇಲ್ಲದ ಅನಾಮಿಕ ಶ್ರಮಿಕರು- ಇಂದು ನಾವು ದಿನಾ ನೋಡುವ ಈ ಚಿತ್ರದ ಕಲ್ಪನೆ ಬಲ್ಲಾಳರಿಗೆ ಅಂದೇ ಇತ್ತು.
ಕಾದಂಬರಿಯಲ್ಲಿ ಕಾಣುವ ಅಪಾಂಗ ಕಲ್ಯಾಣ ಕೇಂದ್ರವನ್ನು ಸ್ಥಾಪಿಸಿದ ಶರ್ಮಕಂಪೆನಿಯಂತೆ ಇಂದು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ (Corporate social responsibility) ಸೋಗಿನಲ್ಲಿ ನಗರದ ಶ್ರೀಮಂತ ಸೇವಾ ಸಂಘಗಳಿಗೆ ಅನುದಾನ ನೀಡುವ ಕಂಪೆನಿಗಳು ತಮ್ಮ ಕಾರ್ಖಾನೆಯಲ್ಲಿ ಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಲ್ಯಾಣಕ್ಕೆ ತಾವು ಹೊಣೆಯಲ್ಲ ಎಂದು ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತವೆ.
ತಮ್ಮ ಸಂಸ್ಥೆಯಲ್ಲಿ ಉನ್ನತ ಅಧಿಕಾರಿಗಳು ನಡೆಸಿದ ಅಕ್ರಮಗಳ ಬಗ್ಗೆ ಶಾಸನಬದ್ಧ ಅಧಿಕಾರಿಗೆ ದೂರು ನೀಡಿದರೆ ಅವರ ಮೇಲೆಯೇ ಶಿಸ್ತುಕ್ರಮ ಕೈಗೊಂಡು ಉದ್ಯೋಗಿಗಳ ಮುಷ್ಕರಕ್ಕೆ ಕಾರಣವಾಗಿ ದಿನಗಟ್ಟಲೆ ಕಾಲಹರಣ ನಡೆಸಿ ಆ ಬಳಿಕ ದ್ವಿಪಕ್ಷೀಯ ಮಾತುಕತೆಗೆ ಮುಂದೆ ಬರುವ ಬ್ಯಾಂಕುಗಳೂ ಇವೆ.
ನಮ್ಮ ಮುಂದೆ ಆಗಾಗ ಕಾಣಿಸಿಕೊಳ್ಳುವ ಈ ಸನ್ನಿವೇಶಗಳಿಗೂ ಬಲ್ಲಾಳರ ಕಲ್ಪನೆಯ ಪರಿಸ್ಥಿತಿಗಳಿಗೂ ಹತ್ತಿರದ ಸಾಮ್ಯ ಇದ್ದು ಕಾದಂಬರಿಯ ವಸ್ತು ಜ್ವಲಂತವಾಗುತ್ತದೆ.
ಕಾರ್ಮಿಕ ಚಳವಳಿ ಮತ್ತು ಅದರ ಮಿತಿಗಳು:
ಒಂದು ಸಂದರ್ಭದಲ್ಲಿ ಯಶಸ್ವೀ ಉದ್ಯೋಗಪತಿ ಒಬ್ಬರು ಹೇಳಿದ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ’ಯಾವುದೇ ಕಾರ್ಮಿಕ, ಮುಷ್ಕರ ನಡೆಸಲೆಂದು ಒಂದು ಉದ್ಯೋಗಕ್ಕೆ ಸೇರುವುದಿಲ್ಲ; ಅವನ ಕೆಲವು ಕನಸುಗಳನ್ನು ನನಸಾಗಿಸುವ ಆಶೆಯಿಂದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾನೆ.’ ಹಾಗಿದ್ದರೆ ಕಾರ್ಮಿಕರು ಏಕೆ ಸಂಘಟಿಸುತ್ತಾರೆ? ಅವರ ನಾಯಕ ಹೇಗೆ ಹುಟ್ಟುತ್ತಾನೆ? ಅವನ ಜವಾಬ್ದಾರಿ ಏನು?
ವ್ಯವಸ್ಥೆಯಲ್ಲಿ ಅಡಕವಾಗಿರುವ ಅನ್ಯಾಯಗಳಿಂದ ಬಿಡುಗಡೆ ಪಡೆಯಲು ಕಾರ್ಮಿಕರು ಸಂಘಟಿಸುತ್ತಾರೆ. ಈ ಸಂಘಟನೆಯ ಕೇಂದ್ರ ಬಿಂದು ನಾಯಕನೇ. ತಮ್ಮಲ್ಲೇ ಒಬ್ಬನನ್ನು ಅಥವಾ ಹೊರಗಿನವನನ್ನು ಅವರು ನಾಯಕನನ್ನಾಗಿ ಆಯ್ಕೆ ಮಾಡಬಹುದು. ಅವನ ಬದ್ಧತೆ, ಪಾರದರ್ಶಕತೆ, ಸ್ವಾರ್ಥತ್ಯಾಗ, ವ್ಯಾವಹಾರಿಕ ದೃಷ್ಟಿ ಮತ್ತು ಸದಸ್ಯರ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ಗುಣ ಸಂಘಕ್ಕೆ ಬಲವನ್ನು ನೀಡುತ್ತವೆ. ಕಾದಂಬರಿಯ ರಾಜೀವ ಮತ್ತು ಯಾಮಿನಿ ಕಾರ್ಮಿಕರಿಗೆ ಆಪ್ತರಾಗುವುದು ಈ ಕಾರಣಗಳಿಂದಾಗಿಯೇ.
ಆದರೆ ಮಧ್ಯಮವರ್ಗದ ಕಾರ್ಮಿಕರ ಸಂಘಶಕ್ತಿಯಲ್ಲಿಯೇ ದೌರ್ಬಲ್ಯವೂ ಅಡಕವಾಗಿದೆ. ಇದನ್ನು ಬಲ್ಲಾಳರು ರಾಜೀವನ ಮೂಲಕ ಹೇಳುತ್ತಾರೆ. (ಪು ೬೫): ’ಮಧ್ಯಮವರ್ಗದ, ಬಡ ಮಧ್ಯಮವರ್ಗದ ಸಂಘಟನೆಯಲ್ಲೆಲ್ಲ ಮುತ್ತುತ್ತಿದ್ದುದು ನಿರುತ್ಸಾಹವೇ… ಅರ್ಥವಾಗದ ಸಾಮಾನ್ಯ ಆಸೆಗಳಲ್ಲೇ ಅವರು ತೃಪ್ತಿ ಕಾಣುತ್ತಾರೆ.’ ಇನ್ನೊಂದೆಡೆ ಇದು ಮತ್ತೂ ಸ್ಪಷ್ಟವಾಗುತ್ತದೆ. ಅವರಿಗೆ ಸಂಘಟನೆಯ ಆದರ್ಶಕ್ಕಿಂತಲೂ ಸಂಘಟನೆ ದೊರಕಿಸಿ ಕೊಡುವ ಸವಲತ್ತು ಹೆಚ್ಚು ಮಹತ್ವದವು. (ಪು.೭೪) ಇದಕ್ಕೆ ಮತ್ತೊಂದು ಉದಾಹರಣೆಯನ್ನು ಕಾಣುತ್ತೇವೆ. ಬ್ಯಾಂಕುಗಳ ಕೆಲಸಗಾರರ ಆದ್ಯತೆ ಇರುವುದು ಲಭಿಸಿದ ಸೌಲಭ್ಯಗಳ ಕುರಿತೇ. ಸಭಾಂಗಣದಲ್ಲಿ ವಿಜಯೋತ್ಸವ ಆಚರಿಸಿ ಹೊರಗೆ ಹೊರಡುವ ಬ್ಯಾಂಕಿಂಗ್ ಕಾರ್ಮಿಕರು ವಿಜಯದ ಉಬ್ಬಿನಿಂದ ಮುಂದುವರಿಯುವುದು ಅವರವರ ಬ್ಯಾಂಕು ಖಾತೆಗಳನ್ನು ನೆನೆಸಿಕೊಂಡೆ! (ಪು೨೬೩-೪). ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ ಎಂಬುದು ಒಂದು ಕಟು ವಾಸ್ತವ.
ಈ ವಾಸ್ತವದಿಂದಾಗಿ ಸಂಘಟನೆಗಳ ಹೋರಾಟಗಳು ಉದಾತ್ತವಾದ ಗುರಿಯನ್ನು ತಲಪುವುದೇ ಇಲ್ಲ. ಒಂದು ಬೇಡಿಕೆಗಾಗಿ ಹೋರಾಡಿ ವಿಜಯ ಗಳಿಸಿದರೆ ಅದು ಅಂತ್ಯವೆಂದು ಭಾವಿಸುವಲ್ಲೇ ಸಂಘಗಳು ಎಡವುತ್ತವೆ. ಬಲ್ಲಾಳರ ವಿಶ್ಲೇಷಣೆ ಕಾರ್ಮಿಕ ಸಂಘಗಳ ಈ ತೆರನಾದ ಸಂಕುಚಿತ ಮನೋವೃತ್ತಿಯನ್ನು ತೆರೆದಿಡುತ್ತದೆ. (ಪು.೨೬೪):
ಯಾವ ಸಂಘಟನೆಯೂ ತನಗೆ ಸಂಬಂಧಿಸಿದ ವಿಜಯ ಒಂದು ಅಪೂರ್ಣ ಹೋರಾಟದ ಗತಿಯನ್ನಷ್ಟೇ ಸೂಚಿಸುತ್ತದೆ ಎಂದು ತಿಳಿಯದೆ ಹೋದರೆ ಅದು ಸಂಘಟನೆಯಾಗುವುದಿಲ್ಲ, ಸಮಯಸಾಧಕರ ತಂಡವಾಗುತ್ತದೆ… ಅದರ ದೃಷ್ಟಿ ಸಂಘಟನೆಯಿಂದ ಹೊರಗಡೆ ಹರಡಿ, ಇತಿಹಾಸದ ಗತಿಯನ್ನು ಗಮನಿಸಿದರೆ ಮಾತ್ರ…ಅದರ ಹೋರಾಟಕ್ಕೆ ಅರ್ಥ..
ಕಾರ್ಮಿಕ ನಾಯಕನ ಪ್ರಶ್ನಾರ್ಹ ವರ್ತನೆಯೂ ಸಂಘದ ನೈತಿಕ ಶಕ್ತಿಯನ್ನು ಕುಂಠಿತಗೊಳಿಸಬಹುದು. ಸದಸ್ಯರು ತಮ್ಮ ದೇಣಿಗೆಯಿಂದ ಕೊಡಿಸಿದ ಕಾರಿನಲ್ಲೇ ನಾಯಕ ದೇಶಪಾಂಡೆ, ಅಂಗರಕ್ಷಕನೊಂದಿಗೆ ಓಡಾಡುವ ದೃಶ್ಯ (ಪು.೨೭೦), ಕಾರ್ಮಿಕ ಮುಂದಾಳುಗಳಲ್ಲಿ ಕಾಣಬಹುದಾದ ಅನೈತಿಕತೆಗೆ ಹಿಡಿದ ಕನ್ನಡಿ.
ಇನ್ನೊಂದು ದೌರ್ಬಲ್ಯ ಇದಕ್ಕಿಂತಲೂ ಅಪಾಯಕಾರಿ. ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಆ ಆರೋಪವನ್ನು ಕಾನುಸಿಂಗನ ಮೇಲೆ ಹೊರಿಸಿ, ಮುಷ್ಕರಕ್ಕೆ ಪ್ರೇರೇಪಿಸಿದ್ದ ಪಾಂಡು ಗಾಯಕವಾಡ ಮತ್ತೆ ಅದೇ ಮಾರ್ಗ ಹಿಡಿದ ಸುದ್ದಿ ಬಂದಾಗ ರಾಜೀವ ಕೇಳುತ್ತಾನೆ (ಪು.೮೧): ’ಕ್ರಾಂತಿಯ ಹರಿಕಾರರಾದ ಶ್ರಮಜೀವಿಗಳಲ್ಲೇ ಯಾಕೆ ಮಾನವೀಯ ದೌರ್ಬಲ್ಯಗಳೇ ಕಣ್ಣ ಮುಂದಿದ್ದರೂ ಕಾಣಿಸದೆ ಹೋಗುತ್ತದೆ?’
ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದು ಕ್ರಾಂತಿಯ ಹರಿಕಾರನಾಗಿ ಹೊಸ ಬಾಳಿಗೆ ನಾಂದಿ ಹಾಡಬೇಕಾಗಿದ್ದ ಕಾರ್ಮಿಕ ಈ ತರದ ದೌರ್ಬಲ್ಯಗಳಿಗೆ ಬಲಿಯಾದಾಗ ಬದಲಾವಣೆ ರಾಜೀವನ ದೃಷ್ಟಿಯಲ್ಲಿ ಕನಸಾಗಿಯೇ ಉಳಿಯುತ್ತದೆ (ಪು.೧೦೯).
ಭಾರತದ ಕಾರ್ಮಿಕ ಚಳವಳಿಯ ಇಂದಿನ ಪರಿಸ್ಥಿತಿ ಈ ತರದ ದೌರ್ಬಲ್ಯಗಳಿಂದ ಹೊರತಾಗಿಲ್ಲ.
ಜೀವಂತ ಪಾತ್ರಗಳು:
ಆದರ್ಶ ಮತ್ತು ವಾಸ್ತವಗಳ ನಡುವಿನ ಅಂತರವನ್ನು ಸರಿಯಾಗಿ ಅರ್ಥಮಾಡಿಕೊಂಡ ರಾಜೀವ ಮತ್ತು ಯಾಮಿನಿ ಇಬ್ಬರ ಪಾತ್ರಗಳೂ ಜೀವಂತವಾಗಿ ಮೂಡಿಬಂದಿವೆ. ಅವರ ಮಾತು, ವರ್ತನೆ, ಕೆಲವು ಘಟನೆಗಳಿಗೆ ಅವರಿಂದ ಬರುವ ಪ್ರತಿಕ್ರಿಯೆಗಳು ಈ ಜೀವಂತಿಕೆಯನ್ನು ಸಾಬೀತುಪಡಿಸುತ್ತವೆ.
ಬಂಡಾಯದ ಮೂಲಕವೇ ವ್ಯವಸ್ಥೆಯನ್ನು ಬದಲಾಯಿಸಬೇಕೆಂದು ನಂಬುವ ರಾಜೀವನ ಹಿಂದಿನ ಜೀವನದ ಅನುಭವವು ಅವನ ಇಂದಿನ ದೃಷ್ಟಿಕೋನವನ್ನು ಬದಲಾಯಿಸಿದ್ದು ಹಲವೆಡೆ ಸ್ಪಷ್ಟವಾಗುತ್ತದೆ. ಯಾಮಿನಿ ಕಂಡಂತೆ (ಪು.೧೦೫):
ಅವನ ಮಾತು…ಎಲ್ಲರನ್ನೂ ಆಕರ್ಷಿಸುವ ಬಗೆಯರಿತು, ಅಗತ್ಯವೆನಿಸುವ ರೀತಿಯಲ್ಲೇ ಮಾತನಾಡುತ್ತಿದ್ದ…ಒಂದೆಡೆ ಉದ್ವೇಗ, ಒಂದೆಡೆ ಎಚ್ಚರ…ಒಂದೆಡೆ ತಾಳ್ಮೆಯ ಪ್ರತಿಮೂರ್ತಿಯಾಗಿ ಸಮಾಧಾನ ಕೊಡುವ ರೀತಿಯಲ್ಲೆ ಸ್ನೇಹದ ಸಲಹೆ..ಒಂದೆಡೆ ಜ್ವಾಲಾಮುಖಿ…ಇನ್ನೊಂದೆಡೆ ಪ್ರಶಾಂತವಾದ ಸಾಗರ…
ಮತ್ತೊಂದೆಡೆ ರಾಜೀವ ವ್ಯವಸ್ಥೆಯ ಕೊಂಡಿಗಳನ್ನು ಕೂಡಿಸಿಯೇ ಸಂಬಂಧಗಳನ್ನು ಬೆಸೆಯಬೇಕು ಎನ್ನುತ್ತಾನೆ (ಪು.೧೧೪). ಹಾಗೆಯೇ ಸಂಘಟನೆಯ ಮೂಲಕ ಆತ್ಮವಿಶ್ವಾಸ ಬೆಳೆಸಿದರೆ ಜೀವನಮಟ್ಟ ತುಸುವಾದರೂ ಸುಧಾರಿಸುವ ಆಶಾವಾದ ಅವನದು. (ಪು.೧೫೪). ಇದು ಅವನ ವ್ಯಾವಹಾರಿಕ ದೃಷ್ಟಿಯಾದರೆ, ನಮ್ಮ ದೀನ ದಲಿತರ ನಿಜವಾದ ಉದ್ಧಾರ ಯಾವಾಗ ಸಾಧ್ಯ ಎಂಬ ಕಲ್ಪನೆ ಅವನ ಸೈದ್ಧಾಂತಿಕ ನಿಲುವಿಗೆ ಪೂರಕವಾಗಿದೆ (ಪು ೧೭೫.):
ನಮ್ಮ ದೀನರ, ದಲಿತರ, ಅಪಾಂಗರ, ವಿಕಲಾಂಗರ ಉದ್ಧಾರ, ನಮ್ಮ ಶ್ರೀಮಂತ ವರ್ಗ ತಿಂದುಳಿದ ಎಂಜಲಿನಿಂದ, ಈ ತುಣುಕು ರೊಟ್ಟಿಗಳಿಂದ ಸಾಧ್ಯವಾಗುವುದಿಲ್ಲ. ಅದು ಸಾಧ್ಯವಾಗಬೇಕಾದದ್ದು ಇಡೀ ಸಮಾಜವೇ ಬದಲಾಗುವಾಗ, ಸಮಾಜವೇ ತನ್ನ ಹೊಣೆಗಾರಿಕೆಯರಿತುಕೊಳ್ಳುವ ದಿನ ಬಂದಾಗ…
ಮೂವತ್ತು ವರ್ಷಗಳ ಹಿಂದೆಯೇ ಬಲ್ಲಾಳರು ಮುಕ್ತಮಾರುಕಟ್ಟೆಯ ’ಟ್ರಿಕ್ಲ್ ಡೌನ್ ಇಫೆಕ್ಟ್’ (trickle down effect) ಬಡತನ ನೀಗುವಲ್ಲಿ ಪರಿಣಾಮಕಾರಿಯಾಗಲಾರದು ಎಂಬ ಆತಂಕವನ್ನು ರಾಜೀವನ ಮೂಲಕ ವ್ಯಕ್ತಪಡಿಸಿದರು ಎಂಬುದು ಈ ಮಾತಿನಿಂದ ಸ್ಪಷ್ಟವಾಗುತ್ತದೆ ಕೂಡಾ.
ತನ್ನ ಬೆಂಬಲಿಗರಿಂದ ವ್ಯಕ್ತಿಪೂಜೆಗೆ ಅರ್ಹತೆ ಗಳಿಸಿದರೂ ಆದರ್ಶಗಳ ಬೆನ್ನು ಹತ್ತಿದಾಗ ರಾಜಿಮಾಡಿಕೊಳ್ಳುವ ಪ್ರಶ್ನೆ ರಾಜೀವನಲ್ಲಿ ಏಳುವುದೇ ಇಲ್ಲ. ದೇಶಪಾಂಡೆ ತನ್ನ ಕಾರ್ಮಿಕ ಬಂಧುಗಳ ದೇಣಿಗೆಯಲ್ಲಿ ಪಡೆದ ಕಾರಿನಲ್ಲಿ ಭದ್ರತಾ ಸಿಬ್ಬಂದಿಯನ್ನು ಕಾರಿನಲ್ಲಿ ಕೂರಿಸಿ ಬೀಗಿದರೆ, ರಾಜೀವನಿಗೆ ಆ ಪ್ರತಿಷ್ಠೆ ಬೇಕಿಲ್ಲ; ಮುಂಬಯಿಯ ಎಲ್ಲೆಡೆ ಸಂಚರಿಸಲು ’ಬೆಸ್ಟ್’ ಅಥವಾ ’ಸಿಡ್ಕೊ’ ಬಸ್ಸು, ಇಲ್ಲ ಟಾಕ್ಸಿಗಳ ಚಾಲಕ ಸಂಗಾತಿಗಳ ಪ್ರೀತಿಯೇ ತನಗೆ ಸಾಕು ಎನ್ನುತ್ತಾನೆ (ಪು ೨೬೧). ತಾನು ’ದೇವದೂತನಲ್ಲ’ವೆಂದರೂ ಈ ವರ್ತನೆಗಳಿಂದಾಗಿ ರಾಜೀವ ಲಕ್ಷಾಂತರ ಕಾರ್ಮಿಕರ ಹೃದಯಕ್ಕೆ ತಲಪುತ್ತಾನೆ.
ಬಂಗಾಳ ಮತ್ತು ಆಂಧ್ರದಲ್ಲಿ ಪಡೆದ ಅನುಭವ ರಾಜೀವನನ್ನು ಕ್ರಾಂತಿಯ ಗತಿಯ ಬಗ್ಗೆ ಎಚ್ಚರ ವಹಿಸುವಂತೆಯೂ ಮಾಡುತ್ತದೆ. ಲಕ್ಷ ಲಕ್ಷ ಕಾರ್ಮಿಕರನ್ನು ಸಂಘಟನೆಯ ಯಜ್ಞದಲ್ಲಿ ತೊಡಗಿಸಿದರೂ ಕ್ರಾಂತಿಗೆ ಅವಸರದ ಗತಿ ತರುವುದು ಕಷ್ಟದ ಪರಿಶ್ರಮ; ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಸುಲಭದ ಮಾತಲ್ಲ (ಪು.೩೪೫). ಇದಕ್ಕೆ ಅವನೇ ಮೊದಲೊಮ್ಮೆ ಪ್ರತಿಕ್ರಿಯಿಸಿದಂತೆ, ಶ್ರಮಜೀವಿಗಳ ಮಾನವೀಯ ದೌರ್ಬಲ್ಯಗಳೇ ಕಾರಣವಿರಬಹುದೇ?
ನಾಯಕನಲ್ಲಿರಬೇಕಾದ ವಾಸ್ತವದ ಅರಿವು ರಾಜೀವನಲ್ಲಿತ್ತು. ಯಾಮಿನಿಯ ಗಂಡ ಶ್ರೀಕಾಂತನ ಮರಣದ ಸುದ್ದಿ ತಿಳಿದಾಗ ಅವನಿಗೆ ಮೈಯೆಲ್ಲ ನಡುಗಿದಂಥ ಅನುಭವ. ತಾನೂ ಯಾಮಿನಿಯೂ ಎಷ್ಟೇ ಆಪ್ತರಾಗಿದ್ದರೂ, ಆಕೆ ಮತ್ತು ಶ್ರೀಕಾಂತನ ಸಂಬಂಧದ ಎಳೆಗಳು ಸಾವಿನಲ್ಲಿ ಮತ್ತೆ ಅಂಟಿಕೊಳ್ಳುತ್ತವೆ ಎಂಬ ವಾಸ್ತವ ಅವನನ್ನು ಎಚ್ಚರಿಸುತ್ತದೆ (ಪು.೩೪೮). ತನ್ನ ಮತ್ತು ಅವಳ ಸಾಂಗತ್ಯ ಟ್ರೇಡ್ ಯೂನಿಯನ್ ಬಾಂಧವ್ಯಕ್ಕಿಂತಲೂ ಮುಂದೆ ಹೋಗಿ ಅವಳ ಬಗ್ಗೆ ಮಾನವ ಸಹಜ ಕಾಳಜಿಯೂ ಆತನಿಗಿದೆ. ತಾನು ರಾಜೀವನೇ ಅಲ್ಲ ಎಂದು ಹೇಳಿದರೂ, ಸತ್ಯ ಯಾಮಿನಿಗೆ ತಿಳಿದರೆ ಅದರಿಂದ ಅವಳಿಗೆ ಕಷ್ಟವಾಗಬಹುದು; ಆಕೆ ಪೊಲೀಸರಿಂದ ಯಾವ ಕಿರುಕುಳವನ್ನು ಅನುಭವಿಸಬಹುದು ಎಂಬ ಅರಿವು ಸತ್ಯವನ್ನು ಮರೆಮಾಚಲು ಅವನನ್ನು ಪ್ರೇರೇಪಿಸುತ್ತದೆ. ಅಷ್ಟೇ ಅಲ್ಲ ತಾನು ಹೋಗುವ ದಾರಿ ಗಂಡಾಂತರಕಾರಿ ಎಂಬ ಸ್ಪಷ್ಟ ಕಲ್ಪನೆಯೂ ಅವನಿಗಿದ್ದು, ಯಾಮಿನಿಗೆ ಆ ಮಾರ್ಗ ಸೂಕ್ತವಲ್ಲ ಎಂಬ ಪ್ರಜ್ಜೆ ಅವನಿಗಿದೆ. ಈ ಸನ್ನಿವೇಶಗಳಲ್ಲಿ ರಾಜೀವನ ಪಾತ್ರ ಇನ್ನೂ ಮೇಲ್ಮಟ್ಟಕ್ಕೇರುತ್ತದೆ.
ಯಾಮಿನಿಯ ನೇತೃತ್ವದಲ್ಲಿ ಚಳವಳಿಗೆ ಒಂದು ರೂಪವನ್ನು ಕೊಟ್ಟು, ಅದನ್ನು ಬೆಳೆಸುವುದರಲ್ಲಿ ಯಶಸ್ಸು ಗಳಿಸಿದ ಮೇಲೆ ತನ್ನ ಅಗತ್ಯವಿಲ್ಲ ಎಂದು ತಿಳಿದು ರಂಗದಿಂದ ದೂರ ಹೋಗುವ ನಿರ್ಧಾರವೂ ರಾಜೀವನ ಪಾತ್ರಕ್ಕೆ ಮತ್ತಷ್ಟು ಕಳೆ ನೀಡುತ್ತದೆ.
ರಾಜೀವನ ಪಾತ್ರದಷ್ಟೇ ಉತ್ತಮವಾದ ಶಿಲ್ಪ ಯಾಮಿನಿಯದು. ಅವಳು ಎದುರಿಸುತ್ತಿರುವ ಸ್ವಂತ ಬದುಕಿನ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಸಂಘಟಿತ ಪ್ರಯತ್ನದ ಯಶಸ್ಸಿನ ಕನಸು. ವ್ಯವಸ್ಥೆಯ ಬಂಧನದ ಒಳಗೆ ಇದ್ದೇ ಬಾಹ್ಯ ಜಗತ್ತನ್ನು ಎದುರಿಸುವ ಸ್ಥೈರ್ಯ ಅವಳದು. ’ಭೋಸುಡೀ!, ಯಾವ ಮಿಂಡನ ಜತೆಗಿದ್ದೆ ಇಷ್ಟು ಹೊತ್ತು?’ ಎಂದು ಕೇಳುವ ವಿಕಲಾಂಗ ಗಂಡನ ಸಂಬಂಧ ವ್ಯವಸ್ಥೆಗೆ ಹೊಂದಿಕೊಂಡಿದೆ.; ಅವಳಿಗೆ ಅದು ಅಗತ್ಯ ಕೂಡಾ ಯಾಕೆಂದರೆ ಸಾಯುವುದು ಸಾಧ್ಯವಿಲ್ಲವೆಂದಾದ ಮೇಲೆ ಬದುಕಲೇಬೇಕಲ್ಲ! (ಪು.೯೦)
ನಾಟಕದ ಮೂಲಕ ಪರಿಚಯವಾಗಿ ಮೆಚ್ಚಿ ಮದುವೆಯಾದ ಶ್ರೀಕಾಂತ, ಪೋಲಿಯೋ ಬಡಿದು ಅಪಾಂಗನಾಗಿ ಅವನ ನಡತೆಯಲ್ಲಿ ಅಸಹ್ಯವಾದ ಬದಲಾವಣೆಯಾದಾಗ ಅವಳ ಹತಾಶೆ ಸ್ವಾಭಾವಿಕ, ದಿಂಬಿನಲ್ಲಿ ಒಂದೊಂದು ಹನಿ ಕಣ್ಣೀರು ಉದುರುವಾಗ ಮಾತ್ರ ಅವಳಿಗೆ ತಾತ್ಕಾಲಿಕ ಬಿಡುಗಡೆ. ’ಪರದೆಯೇ ಇರದ ಈ ರಂಗದಲ್ಲಿ ಮುಗಿಯದ ನಾಟಕದಲ್ಲಿ ಭಾಗವಹಿಸುವಾಗ ’ವಿಂಗ್ಸ್’ ಯಾವಾಗ ಸೇರಿಯೇನು’ ಎಂದು ಅವಳು ಕಳವಳ ಪಡುತ್ತಿದ್ದಾಗ ರಾಜೀವನ ರಂಗಪ್ರವೇಶವಾಗುತ್ತದೆ.
ಶರ್ಮಾ ಕಂಪೆನಿಯ ಅಪಾಂಗ ಕಲ್ಯಾಣ ಸಂಸ್ಥೆಯ ಉದ್ಘಾಟನೆಯನ್ನು ರಾಜೀವನಿಂದ ಮಾಡಿಸಿದ ಉದ್ದೇಶವನ್ನು ಗ್ರಹಿಸುವಷ್ಟು ಪಕ್ವತೆ ಯಾಮಿನಿಯಲ್ಲಿದೆ; ಆಕೆಯ ಪ್ರಕಾರ ಅವನು ಆ ಆಮಂತ್ರಣಕ್ಕೆ ಒಪ್ಪಿದ್ದು ಒಂದು ದೌರ್ಬಲ್ಯದ ಚಿಹ್ನೆ. ಅವಳಿಗೆ ಅದು ಭಯವನ್ನೂ ಉಂಟುಮಾಡುತ್ತದೆ- ರಾಜೀವ ಪ್ರಚಾರದ ಆಮಿಷಕ್ಕೆ ಬಲಿಯಾದನೇ ಅಥವಾ ತನ್ನತನವನ್ನು ಕಳೆದುಕೊಂಡನೇ ಎಂದು. ರಾಜೀವನ ವ್ಯಕ್ತಿತ್ವದ ಪೂರ್ಣ ಪರಿಚಯ ಅವಳಿಗೆ ಇನ್ನೂ ಆಗಿಲ್ಲದ ಸಂದರ್ಭ ಅದು.
ಮುಂದೆ ಅವನ ಗರಡಿಯಲ್ಲಿ ಪಳಗಿದ ಮೇಲೆ ಅವಳು ಇನ್ನೂ ಎತ್ತರಕ್ಕೆ ಬೆಳೆಯುತ್ತಾಳೆ. ರಾಜೀವನ ಸಂಬಂಧ ತುಂಬ ಆತ್ಮೀಯವಾದರೂ ಶ್ರೀಕಾಂತನ ಕುರಿತಾಗಿದ್ದ ತನ್ನ ಉತ್ತರದಾಯಿತ್ವಕ್ಕೆ ಬೆಲೆ ನೀಡುತ್ತಾಳೆ. ಅವನ ಮರಣ ಈ ಪ್ರಜ್ಞೆಗೆ ಒರೆಗಲ್ಲಾಗುತ್ತದೆ. ಆದರೆ ಘಟನೆಯಿಂದಾಗುವ ನೋವಿಗೆ ಸಾಂತ್ವನ ರಾಜೀವನೊಬ್ಬನೇ ನೀಡಬಲ್ಲ. ಲಕ್ಷ ಲಕ್ಷ ಹಿಂಬಾಲಕರಿದ್ದರೂ ಅವಳು ಏಕಾಂಗಿ.
ಈ ಏಕಾಂಗಿತನದ ನಡುವೆಯೂ, ವೈಯಕ್ತಿಕ ನೋವನ್ನು ಹತ್ತಿಕ್ಕಿ ತನ್ನ ಕಾರ್ಯಕ್ಷೇತ್ರದ ಕಡೆಗೆ ಗಮನ ಕೊಡುವಂಥ ಗಟ್ಟಿ ಹೃದಯ ಯಾಮಿನಿಯದು (ಪು.೩೫೧). ಮಾತ್ರವಲ್ಲ ತಮ್ಮ ಶಕ್ತಿಯಲ್ಲೇ ನಂಬಿಕೆ ಇಟ್ಟು ಕಾರ್ಯೋನ್ಮುಖರಾಗಬೇಕೆನ್ನುವ ಸ್ಥಿತಪ್ರಜ್ಞೆ ಆಕೆ. ತನಗೆ ಸರಿ ಎಂದು ಕಂಡಾಗ, ರಾಜೀವನನ್ನೂ ಧಿಕ್ಕರಿಸುವ ಎದೆಗಾರಿಕೆ ಅವಳದು. ಸಂಘದ ಕಾರ್ಯಕರ್ತರ ವರ್ತನೆಯಲ್ಲಿಯೂ ಶಿಸ್ತು ಅವಳಿಗೆ ಬೇಕು. ದೇಶಪಾಂಡೆಯ ಬಂಧನದ ವಿರುದ್ಧದ ಬಂದ್ ನಲ್ಲಿ ತಮ್ಮ ಸಂಘವೂ ಭಾಗವಹಿಸಬೇಕೆಂದು ರಾಜೀವ ಅಭಿಪ್ರಾಯಪಟ್ಟಾಗ ಮಾನೆ ಕ್ರುದ್ಧನಾಗಿ ದೇಶಪಾಂಡೆಯ ವಿರುದ್ಧ ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಾನೆ. ಆಗ ಯಾಮಿನಿ ಗಂಭೀರವಾಗಿ ಮಾನೆಯನ್ನು ಎಚ್ಚರಿಸುತ್ತಾಳೆ (ಪು೩೫೫). ಮಾನೆಯನ್ನು ಎಚ್ಚರಿಸುತ್ತಾ ಯಾಕೆ ತಮ್ಮ ಸಂಘಗಳು ವಿಶ್ವಾಸಘಾತ ಮಾಡಿದ ದೇಶಪಾಂಡೆ ಮತ್ತಿತರರ ಬಂಧನದ ವಿರುದ್ಧದ ಪ್ರತಿಭಟನಾತ್ಮಕ ಬಂದಿನಲ್ಲಿ ಭಾಗವಹಿಸಬಾರದೆಂದು ರಾಜೀವನ ಎದುರೇ ಸಕಾರಣವಾಗಿ ವಿವರಿಸುತ್ತಾಳೆ. ತನ್ನ ವೈಯಕ್ತಿಕ ದುರಂತದ ನೋವಿನ ಎಳೆಗಳನ್ನು ಕಡಿದುಕೊಳ್ಳುತ್ತಲೇ, ಮುಂಬಯಿಯ ಕಾರ್ಮಿಕರಂಗದ ಅರ್ಥವಾಗದ ಜೀವಂತತೆಯ ಪ್ರತಿನಿಧಿಯಂತೆ ಆಕೆ ಮಾತನಾಡಬಹುದೆಂದು ರಾಜೀವ ಯೋಚಿಸಿರಲಿಲ್ಲ.
ಸಂಘಟನಾತ್ಮಕ ಚಳವಳಿಯಲ್ಲಿ ತೊಡಗಿರುವ ಕಾರ್ಯಕರ್ತರಿಗೆ ರಾಜೀವ ಮತ್ತು ಯಾಮಿನಿಯರ ಸಂವೇದನಾಶೀಲತೆ, ಉದ್ದೇಶಕ್ಕೆ ಬದ್ಧತೆ, ವಸ್ತುನಿಷ್ಠತೆ ಅನಿವಾರ್ಯ ಎಂದು ಬಲ್ಲಾಳರು ಸೂಚನೆ ನೀಡುತ್ತಾರೆ. ಈ ಸಲಹೆ ಇಂದಿಗೂ ಪ್ರಸ್ತುತ.
ಇನ್ನಿಬ್ಬರ ಪಾತ್ರಗಳ ಬಗ್ಗೆಯೂ ಇಲ್ಲಿ ಹೇಳಬೇಕು. ಸತೀಶನ ತಂಗಿ ನಯನಾ ಬಂಡಾಯದ ಪ್ರತೀಕ. ಅಪ್ಪನ ಪ್ರೀತಿ ಎಷ್ಟೇ ಗಾಢವಾಗಿದ್ದರೂ ವ್ಯವಸ್ಥೆಯ ಹೊಲಸು ಮತ್ತು ಅಣ್ಣನ ’ಹಿಪಾಕ್ರಸಿ’ ಅವಳಿಗೆ ಸಹ್ಯವಲ್ಲ. ಅಮ್ಮನ ಸಂಶಯಾಸ್ಪದ ರೀತಿಯ ಆಕಸ್ಮಿಕ ಸಾವು ಅವಳ ಮತ್ತು ಅಣ್ಣನ ಸಂಬಂಧಕ್ಕೆ ಮತ್ತಷ್ಟು ಹುಳಿ ಹಿಂಡುತ್ತದೆ. ಅತ್ತಿಗೆ ಲಕ್ಷ್ಮಿಯ ಆತ್ಮೀಯತೆ ಮತ್ತು ಅಪ್ಪನ ಮಮತೆ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ವಿಫಲವಾಗುತ್ತವೆ. ಅವಕಾಶ ಸಿಕ್ಕಿದಾಗೆಲ್ಲ ಅಣ್ಣನ ಧೋರಣೆಯನ್ನು ಖಡಕ್ಕಾಗಿ ಪ್ರಶ್ನಿಸುತ್ತಾಳೆ. ಬದಲಾವಣೆ ಅಸಾಧ್ಯವೆಂದನಿಸಿದಾಗ ವ್ಯವಸ್ಥೆಯಿಂದಲೇ ದೂರ ಹೋಗುತ್ತಾಳೆ.
ಇನ್ನೊಂದು ಪಾತ್ರ ಅನಂತ ಮಾನೆಯದು. ಅವನು ಒಬ್ಬ ಸಾಮಾನ್ಯ ಸಂಗಾತಿ. ತಾನು ಒರಟನೆಂಬ ಕೀಳರಿಮೆ ಅವನಿಗಿದೆ. ಹೀಗಿದ್ದೂ ಸೂಕ್ಷ್ಮ ಸನ್ನಿವೇಶವನ್ನು ಅರಿತುಕೊಳ್ಳುವ ಮಾನವ ಗುಣ ಅವನಲ್ಲಿದೆ. ಶ್ರೀಕಾಂತನ ನಿಧನದ ನಂತರ ಯಾಮಿನಿ ಮತ್ತು ರಾಜೀವರ ಮುಖಾಮುಖಿಯ ಸಂದರ್ಭದಲ್ಲಿ ಮಾನೆಯ ಹೃದಯವಂತಿಕೆ ಮತ್ತು ಭಾವುಕತೆ ಬಲ್ಲಾಳರ ಪಾತ್ರಚಿತ್ರಣದ ಕೌಶಲವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸುತ್ತದೆ.(ಪು.೩೫೦):
…ತನ್ನೆಲ್ಲ ವರ್ತನೆಯೂ ಒರಟೇ, ಅದರಲ್ಲೇನು ಕೇಡು ಎಂದು ಪ್ರಾಮಾಣಿಕವಾಗಿ ತಿಳಿದಿದ್ದ ಮಾನೆ. ರಾಜೀವ ಯಾಮಿನಿಯರ ಸಖ್ಯವನ್ನು, ಅನ್ಯೋನ್ಯತೆಯನ್ನು ಆತ ನೋಡುತ್ತಿದ್ದುದು ಟ್ರೇಡ್ ಯೂನಿಯನ್ ಕಾರ್ಯಕರ್ತನ ಕಣ್ಣುಗಳಿಂದ ಮಾತ್ರ. ಇಂದು ಮಾತ್ರ ಯಾಕೋ ರಾಜೀವ ಯಾಮಿನಿಯನ್ನು ಸಂತೈಸುವಾಗ ತಾನಲ್ಲಿರಬಾರದು ಎಂದು ತೋರಿ…. ಯಾಮಿನಿಯ ಅಣ್ಣನೊಂದಿಗೆ ಹೊರಗೆ ಹೋಗುತ್ತಾನೆ…
ನಯನಾ ಓರ್ವ ’ರಿಬೆಲ್’ ಆಗಿ ಮತ್ತು ಸಾಮಾನ್ಯ ಕಾರ್ಯಕರ್ತ ಮಾನೆ ಒಬ್ಬ ಅಸಾಮಾನ್ಯ ಮಾನವನಾಗಿಯೂ ನೆನಪಿನಲ್ಲಿ ಉಳಿಯುತ್ತಾರೆ.
ಬಲ್ಲಾಳರು ಹೇಳಿಕೊಂಡಂತೆ ಕಾದಂಬರಿ ಒಂದು ಕೌಟುಂಬಿಕ ಕಥಾನಕವಲ್ಲ. ಆದರೆ ಮಾನವ ಸಹಜ ಗುಣಗಳನ್ನು ತಮ್ಮ ಶಿಲ್ಪಗಳಲ್ಲಿ ತುಂಬಿಸಿ ಮನುಷ್ಯ-ಮನುಷ್ಯನ ಸಂಬಂಧಕ್ಕೆ ಮಹತ್ವವನ್ನು ನೀಡಿದ್ದಾರೆ. ಅದರ ಜೊತೆಯಲ್ಲಿಯೇ ಆ ಸಂಬಂಧಗಳು ಸಂಘಶಕ್ತಿಯ ಮೇಲ್ಮೆಗೆ ಭದ್ರ ತಳಪಾಯ ನೀಡುತ್ತವೆ ಎಂದೂ ಸೂಚಿಸುತ್ತಾರೆ.
ನಿರೂಪಣಾ ತಂತ್ರ:
ಬಲ್ಲಾಳರ ನಿರೂಪಣಾ ಶೈಲಿ ಕಾದಂಬರಿಯ ಒಟ್ಟು ಮೌಲ್ಯವನ್ನು ಹೆಚ್ಚಿಸಿದೆ. ವರ್ತಮಾನಕ್ಕೆ ಭೂತಕಾಲದ ಘಟನೆಗಳ ತಳಕು ಹಾಕುತ್ತಾ ನಮ್ಮೆದುರಿನ ವಿಪರ್ಯಾಸಗಳನ್ನು ಕತೆಯ ಭಾಗವಾಗಿ ಉಲ್ಲೇಖಿಸುತ್ತಾ, ಬಡಿದೆಬ್ಬಿಸುವ ವ್ಯಂಗ್ಯದ ಮೂಲಕ, ನಡುನಡುವೆ ತಿಳಿಹಾಸ್ಯದ ಲೇಪ ನೀಡಿ ಕಥೆಯನ್ನು ಬೆಳೆಸುತ್ತಾರೆ. ಚಹಾದ ಕಪ್ಪು-ಸಾಸರ್ ಗಳ ಚಕಮಕಿಯ ಸದ್ದು ರಾಜೀವನಿಗೆ ಪೊಲೀಸರ ಚಕಮಕಿಯಲ್ಲಿ ಅವನ ಕಾಮ್ರೇಡ್ ಜೆಪಿ ತೀರಿಕೊಂಡದ್ದನ್ನು ನೆನಪಿಸುತ್ತದೆ. ಅರ್ಥಜಗತ್ತಿನ ಶಕ್ತಿಯ ಪ್ರತೀಕವಾದ ರಿಸರ್ವ್ ಬ್ಯಾಂಕಿನ ಕಟ್ಟಡವನ್ನು ನೋಡಿದಾಗ ಒಮ್ಮಿಂದೊಮ್ಮೆಗೇ ಡೈನಮೈಟ್ ನೆನಪಾಗುತ್ತದೆ. ಯಾಮಿನಿಯಲ್ಲಿ ರಾಜೀವ ತನ್ನ ಹಿಂದಿನ ದಿನಗಳ ಪದ್ಮಾ ಮತ್ತು ಮೈತ್ರೇಯಿಯರನ್ನು ಕಾಣುತ್ತಾನೆ. ಈ ಕೊಂಡಿಗಳು ತನ್ನಿಂದ ತಾನಾಗಿಯೇ ಅನಾವರಣಗೊಂಡು ಕಥಾನಕವನ್ನು ಶ್ರೀಮಂತಗೊಳಿಸುತ್ತದೆ. ಪರಸ್ಪರ ಜೋಡಿಕೊಂಡಿರುವ ಘಟನೆಗಳು, ಗಂಭೀರ ವಸ್ತುವಾದರೂ ಕಾದಂಬರಿಯನ್ನು ಕುತೂಹಲದಿಂದ ಓದುವಂತೆ ಉತ್ತೇಜಿಸುತ್ತವೆ.
ಕ್ರಾಂತಿಯ ದಾರಿಯನ್ನು ತ್ಯಜಿಸಿ ಬಂದ ರಾಜೀವನಿಗೆ ಕೆಂಪು ಬಣ್ಣ ಕಂಡಾಗಲೆಲ್ಲ ಅದರ ನೆನಪಾಗುತ್ತದೆ, ಯಾಮಿನಿಯ ಇಪ್ಪತ್ತೈದು ಪೈಸೆ ಅಗಲದ ಕೆಂಪು ಬೊಟ್ಟು, ಕೂಡುರಸ್ತೆಯ ಕೆಂಪು ದೀಪ, ಪ್ರತಿಭಟನೆಯಲ್ಲಿ ಕಾಣುವ ಕೆಂಪು ಬಾವುಟಗಳು-ಇವುಗಳೆಲ್ಲಾ ಕ್ರಾಂತಿಯ ಸಂಕೇತಗಳು. ಆದರೆ ಕಲ್ಪನೆಯ ಆ ಕ್ರಾಂತಿ ಅಸಂಭವವೆನಿಸಿದಾಗ ತನ್ನ ದೌರ್ಬಲ್ಯ ಅವನನ್ನು ಕ್ಷಣಿಕವಾಗಿ ಅಧೀರನನ್ನಾಗಿ ಮಾಡುತ್ತದೆ. ಆಗೆಲ್ಲಾ ಜೆಪಿ ಹೇಳಿದ ಕೃಷ್ಣನ ’ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್’ ಮಾತು ಜ್ಞಾಪಕಕ್ಕೆ ಬರುತ್ತದೆ. ಮಾತ್ರವಲ್ಲ ಆಂಧ್ರದ ಹಳ್ಳಿ ಮುಳ್ಳಿವೀಡಿನ ದೊಂಬಿಯ ದೃಶ್ಯ ಕಾಡುತ್ತದೆ. ಆದರೆ ’ಜಾತಸ್ಯಹಿ ಧ್ರುವಂ ಮೃತ್ಯು’-ಹುಟ್ಟಿದವನಿಗೆ ಸಾವು ನಿಶ್ಚಿತ ಎಂಬ ಮಾತು ಸಮಾಧಾನ ನೀಡುತ್ತದೆ. ಗತಕಾಲದ ಘಟನೆಗಳು ಮತ್ತು ಮುಂದಿರುವ ಸಂಕೇತಗಳಿಗೆ ಪರಸ್ಪರ ಸಂಬಂಧವನ್ನು ಕಲ್ಪಿಸುತ್ತಾ ನಿರೂಪಣೆ ಸಾಗುತ್ತದೆ.
ಹಿಂಸೆಯನ್ನು ಕಂಡು, ಅನುಭವಿಸಿ ಹೃದಯ ಕಲ್ಲಾದರೂ ಯಾಮಿನಿಯ ಸಾಂಗತ್ಯ ಅವನನ್ನು ಹೂವಿಗಿಂತ ಮೃದುಗೊಳಿಸುತ್ತದೆ. ಸಹಜವಾಗಿ ಅವಳ ಸಾಮೀಪ್ಯವನ್ನು ಬಯಸುತ್ತಾನೆ.
೧೯೮೦ರ ದಶಕದಲ್ಲಿ ಇನ್ನೂ ಉದಾರೀಕರಣದ ಗಾಳಿ ಆರಂಭವಾಗಿರಲಿಲ್ಲ. ಆದರೆ ಅದರಲ್ಲಿ ಒಳಗೊಂಡ ಅಭಿವೃದ್ಧಿಯ ಕಲ್ಪನೆ ಬಲ್ಲಾಳರಿಗೆ ಆಗಲೇ ಇತ್ತು ಎಂದು ನಗರೀಕರಣದ ಬಗ್ಗೆ ಅವರು ಮಾಡುವ ಚಿತ್ರಣದಿಂದ ನಿಚ್ಚಳವಾಗುತ್ತದೆ. ರಾಜೀವ ಹೋಗುತ್ತಿದ್ದಂತೆ ಬುಲ್ ಡೋಜರ್ ಸಾವಿರ ಜೋಪಡಿಗಳನ್ನು ನಿರ್ನಾಮ ಮಾಡಲೆಂದು ಕೆಲಸ ಮಾಡುತ್ತಿತ್ತು. ಆದರೆ ಬಾಂದ್ರದಲ್ಲಿದ್ದ ಜೋಪಡಿಗಳು ನೆಲಸಮವಾದರೆ, ಗೋರೆಗಾಂವ್ ನಲ್ಲಿ ಅಂಥವೇ ಬೇರೆ ಜೋಪಡಿಗಳು ಹುಟ್ಟುತ್ತವೆ. ಕೆಲವೇ ಉಳ್ಳವರಿಗೆ ಆಸರೆ ನೀಡಲು ಸಾವಿರಾರು ಮಂದಿಯನ್ನು ನಿರಾಶ್ರಿತಗೊಳಿಸುವ ಪ್ರವೃತ್ತಿ ಅನೇಕ ಮಹಾನಗರಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಇಂದು ನಡೆಯುತ್ತಿದೆ. ಇರುವ ಆಸರೆಗಳೇ ಜೀರ್ಣಾವಸ್ಥೆಯಲ್ಲಿವೆ; ಅವುಗಳೂ ನೆಲಸಮವಾದಾಗ ಹೊಸ ನೆಲೆಯನ್ನು ಆಶ್ರಯರಹಿತರು ಕಂಡುಕೊಳ್ಳುತ್ತಾರೆ; ಆದರೆ ಅಲ್ಲಿಯೂ ಅವರ ನೆಲೆ ತಾತ್ಕಾಲಿಕ- ಯಾಕೆಂದರೆ ಅಭಿವೃದ್ಧಿಯ ಗಾಳಿ ಅಲ್ಲಿಗೆ ತಲಪಿದಾಗ ಆ ನೆಲೆಯೂ ನೆಲಸಮವಾಗುತ್ತದೆ. ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯ ಮಾದರಿ ಸಮಾಜದ ಮುಂದೆ ಇನ್ನೂ ಬಂದಿಲ್ಲ.
ತಮ್ಮಲ್ಲೇ ಏಳುವ ಮೂಲಭೂತ ಜಿಜ್ಞಾಸೆಯನ್ನು ಲೇಖಕರು ಕಥಾನಾಯಕನ ಮಾತಿನಲ್ಲಿ ಮುಂದಿಡುತ್ತಾರೆ: ’ಹಿಂಸೆಯಿಂದ ಶಕ್ತಿಯೋ? ಶಕ್ತಿಯಿಂದ ಹಿಂಸೆಯೋ? ವ್ಯವಸ್ಥೆ ದೋಷಪೂರ್ಣವಾದಾಗ ಅದರ ವಿರುದ್ಧ ಬಂಡಾಯ ಅಗತ್ಯ. ಆದರೆ ಬಂಡಾಯ ಹೂಡಿದ ಜೆಪಿಯನ್ನು ಪೊಲೀಸರ ಗುಂಡಿನಿಂದ ಉಳಿಸಿಕೊಳ್ಳಲಾಗಲಿಲ್ಲ…ಅಷ್ಟೇ ಅಲ್ಲ ಯಾರು ಎಷ್ಟೇ ನೆರವಿತ್ತರೂ, ಗುಂಡಿಡುವ ಪೊಲೀಸರನ್ನು ಪೋಷಿಸುವ ವ್ಯವಸ್ಥೆಗೆ ಗುಂಡಿಟ್ಟು ಅದನ್ನು ಸಾಯಿಸಲಾಗಲಿಲ್ಲ.. ಆಂಧ್ರ, ಬಂಗಾಳ, ಕೇರಳ...ಎಲ್ಲೂ (ಪು.೧೧೨). ಈ ವಾಸ್ತವ, ’ಕಟ್ಟುವ ಕೆಲಸ ಮಾಡುವವರು ಬುಲ್ ಡೋಜರ್ ಕಡೆ ನೋಡುವುದಿಲ್ಲ ಎಂಬ ನೀತಿಯತ್ತ ನಮ್ಮನ್ನು ವಾಲಿಸುವಂತೆ ಕಾದಂಬರಿ ಮಾಡುತ್ತದೆ.
ಕೃತಿ ಇಂದಿಗೂ ಪ್ರಸ್ತುತ:
ಮೇಲ್ನೋಟಕ್ಕೆ ಮೂವತ್ತು ವರ್ಷಗಳ ಹಿಂದಿನ ಕಾರ್ಮಿಕ ಚಳವಳಿಯ ಮೇಲೆ ಕ್ಷ-ಕಿರಣ ಬೀರುವಂತೆ ತೋರಿದರೂ ಕಾದಂಬರಿಯ ವಸ್ತು ಆಧುನಿಕ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನೇ ನಗ್ನಗೊಳಿಸುತ್ತದೆ. ಓದುಗರನ್ನು ವ್ಯವಸ್ಥೆಯ ಮತ್ತು ಅದರ ಸುಧಾರಣೆಯ ಬಗ್ಗೆ ವಿಮರ್ಶಾದೃಷ್ಟಿಯಿಂದ ಪ್ರಶ್ನಿಸುವಂತೆ ಮಾಡುತ್ತದೆ. ಹೀಗಾಗಿ ಕೃತಿ ಇಂದಿಗೂ ಪ್ರಸ್ತುತವೆನಿಸುತ್ತದೆ.
(ಪುಸ್ತಕವನ್ನು ಕರ್ನಾಟಕ ಸರಕಾರ ೨೦೧೧ರ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಮರುಮುದ್ರಿಸಿದೆ. ಈ ಲೇಖನದಲ್ಲಿ ೧೯೮೫ರ ಆವೃತ್ತಿಯನ್ನೇ ಆಕರವಾಗಿರಿಸಿಕೊಂಡಿದ್ದೇನೆ-ಲೇ.)