ಅಂತರ್ಜಾಲದಲ್ಲಿ ಸುದ್ದಿಯಾದ ಮಂಗಟ್ಟೆ ಹಕ್ಕಿ ಕುಟುಂಬದ ಕತೆ

ಅಂತರ್ಜಾಲದಲ್ಲಿ ಸುದ್ದಿಯಾದ ಮಂಗಟ್ಟೆ ಹಕ್ಕಿ ಕುಟುಂಬದ ಕತೆ

“ನಾನು ಪ್ರಾಣ ಬಿಟ್ಟಿದ್ದೇನೆ, ಆದರೆ ನನ್ನ ಕೊಕ್ಕನ್ನು ಹತ್ತಿರದಿಂದ ನೋಡು. ಕೊಕ್ಕಿನೊಳಗಿವೆ ಹಣ್ಣುಗಳು – ನನ್ನ ಸಂಗಾತಿಗಾಗಿ ಮತ್ತು ನಾನು ನೋಡದ ನನ್ನ ಪುಟಾಣಿ ಮರಿಗಾಗಿ ನಾನು ಹುಡುಕಿ ತಂದ ಹಣ್ಣುಗಳು. ನಿನ್ನ (ವಾಹನದ) ವೇಗ ನನ್ನನ್ನು ಮಾತ್ರವಲ್ಲ, ಇನ್ನೂ ಎರಡು ಜೀವಿಗಳನ್ನು ಕೊಂದಿದೆ” – ಇದು ಎಪ್ರಿಲ್ ೨೦೧೮ರಲ್ಲಿ ಪಕ್ಷಿ ವೀಕ್ಷಕ ಬೈಜು ವಾಸುದೇವನ್ ಎಂಬವರು ಫೇಸ್-ಬುಕ್ಕಿನಲ್ಲಿ ಬರೆದ ನೋವಿನ ಸಂದೇಶ. ಆ ದಿನ ಬೆಳಗ್ಗೆ ಅವರು ಕೇರಳದ ರಾಜ್ಯ ಹೆದ್ದಾರಿ ೨೧ರ ಪಕ್ಕದಲ್ಲಿ ಸತ್ತು ಬಿದ್ದಿದ್ದ ಬೂದುಬಣ್ಣದ ಮಲಬಾರ್ ಮಂಗಟ್ಟೆ ಹಕ್ಕಿಯ ಫೋಟೋ ತೆಗೆದಿದ್ದರು. ಅದು ಕೇರಳದ ತ್ರಿಶ್ಶೂರಿನ ಅಥಿರಪಳ್ಳಿ – ವಜಚಾಲ್ ರಕ್ಷಿತ ಅರಣ್ಯದ ನಡುವೆ ಹಾದು ಹೋಗುವ ಹೆದ್ದಾರಿ.

“ನಾನು ಆ ಫೋಟೋ ಜೂಮ್ ಮಾಡಿ ನೋಡಿದಾಗ ಗಂಡು ಮಂಗಟ್ಟೆ ಹಕ್ಕಿಯ ಕೊಕ್ಕಿನೊಳಗೆ ಹಣ್ಣುಗಳನ್ನು ಕಂಡೆ” ಎಂದು ನೆನಪು ಮಾಡಿಕೊಳ್ಳುತ್ತಾರೆ ವಾಸುದೇವನ್. ಗಮನಿಸಿ: ಮರದ ಕಾಂಡದ ಪೊಟರೆಯೊಳಗೆ ಮುಚ್ಚಿದ ಗೂಡಿನಲ್ಲಿ ಹೆಣ್ಣು ಮಂಗಟ್ಟೆ ಹಕ್ಕಿ ಮೊಟ್ಟೆಯಿಟ್ಟು ಮರಿ ಮಾಡುವ ಅವಧಿಯಲ್ಲಿ ಸಂಗಾತಿ ಮತ್ತು ಮರಿಗೆ ಆಹಾರ ಒದಗಿಸುವುದು ಗಂಡು ಹಕ್ಕಿ ಮಾತ್ರ. ಪೊಟರೆಯಲ್ಲಿ ಮೊಟ್ಟೆಯಿಡಲು ಕೂರುವ ಹೆಣ್ಣು ಮಂಗಟ್ಟೆ ಹಕ್ಕಿ, ಸಣ್ಣ ತೂತನ್ನು ಬಿಟ್ಟು, ಆ ಪೊಟರೆಯ ಬಾಯಿಯನ್ನು ತನ್ನ ಹಿಕ್ಕೆಯಿಂದಲೇ ಮುಚ್ಚುತ್ತದೆ. ಮುಂದಿನ ಮೂರು ತಿಂಗಳು ಅಲ್ಲೇ ಅದರ ವಾಸ. ಅಲ್ಲೇ ಮೊಟ್ಟೆಯಿಟ್ಟು, ಗರಿ ಕಳಚಿ, ಮೊಟ್ಟೆಯಿಂದ ಹೊರಬರುವ ಪುಟ್ಟ ಮರಿಗಳನ್ನು ಅದು ಸಾಕುತ್ತದೆ.

ಫೇಸ್-ಬುಕ್ಕಿನಲ್ಲಿ ಈ ಸಂದೇಶ ಓದಿದ ಇನ್ನೊಬ್ಬ ಪಕ್ಷಿವೀಕ್ಷಕರ ಪ್ರತಿಕ್ರಿಯೆ ಹೀಗಿತ್ತು: “ಹಣ್ಣು ಹೊತ್ತೊಯ್ದ ಆ ಗಂಡು ಮಂಗಟ್ಟೆ ಹಕ್ಕಿ, ವಾಹನಕ್ಕೆ ಢಿಕ್ಕಿಯಾಗುವಷ್ಟು ಕೆಳಕ್ಕೆ ಹಾರಲು ಕಾರಣ: ಅದರ ಸಂಗಾತಿ ಹಕ್ಕಿಯ ಗೂಡು ಅಲ್ಲೇ ಹತ್ತಿರದಲ್ಲಿ ಇರುವುದು!” ಅದನ್ನೋದಿ, ಮರುದಿನವೇ ಮಂಗಟ್ಟೆ ಹಕ್ಕಿ ರಕ್ಷಕರ ತಂಡ ಘಟನಾ ಸ್ಥಳದಲ್ಲಿ ಜಮಾಯಿಸಿತು: ಕಾಡಾರ್ ಬುಡಕಟ್ಟು ಸಮುದಾಯದ ಜನರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವಾಸುದೇವನ್. ಅವರು ಹುಡುಕಾಡಿ, ಕೊನೆಗೂ ಆ ಹೆಣ್ಣು ಮಂಗಟ್ಟೆ ಹಕ್ಕಿಯ ಗೂಡು ಪತ್ತೆ ಹಚ್ಚಿದರು. ಅಮ್ಮ ಮತ್ತು ಮರಿ ಮಂಗಟ್ಟೆ ಹಕ್ಕಿಗೆ ಆಹಾರ ನೀಡುವ ಜವಾಬ್ದಾರಿಯನ್ನು ಅರಣ್ಯ ಇಲಾಖೆ ವಹಿಸಿಕೊಂಡಿತು. ಈ ವೃತ್ತಾಂತ ಕೇರಳದ ಪ್ರಕೃತಿಪ್ರೇಮಿಗಳ ವಲಯದಲ್ಲಿ ದೊಡ್ಡ ಸುದ್ದಿಯಾಯಿತು.

ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ವಿಸ್ತರಿಸುತ್ತಿರುವಾಗ, ವನ್ಯಜೀವಿ ಹಾಗೂ ಪ್ರಕೃತಿ ರಕ್ಷಣೆಯ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಾಹಿತಿ ವಿನಿಮಯ, ವನ್ಯಜೀವಿಗಳು ಎದುರಿಸುವ ಅಪಾಯದ ಪ್ರಕಟಣೆ ಹಾಗೂ ಸ್ವಯಂಸೇವಕರನ್ನು ಸಂಘಟಿಸಲು ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿ ಸಾಧನಗಳಾಗುತ್ತಿವೆ.
ಉದಾಹರಣೆಗೆ ೨೦೨೧೫ರಲ್ಲಿ, ಅಳಿವಿನಂಚಿನಲ್ಲಿರುವ ಒಂದು ಸಸ್ಯ ಉಳಿದಿರುವ ಪ್ರದೇಶವೊಂದು ಫೇಸ್-ಬುಕ್ ಮೂಲಕ ಬೆಳಕಿಗೆ ಬಂತು. ಆ ಸಸ್ಯದ ಹೆಸರು ಸನ್-ಡ್ಯೂ (ಸೂರ್ಯಬಿಂದು). ಬ್ರೆಜಿಲ್ ದೇಶದ ಪರ್ವತವೊಂದರ ತುದಿಯಲ್ಲಿ ಬೆಳೆಯುತ್ತಿದ್ದ ಅದರ ಫೋಟೋಗಳನ್ನು ಸಂಶೋಧಕನೊಬ್ಬ ತೆಗೆದು ಫೇಸ್-ಬುಕ್ಕಿನಲ್ಲಿ ಪ್ರಕಟಿಸಿದ್ದ. ಅದನ್ನು ಗಮನಿಸಿದ ವಿಜ್ನಾನಿಗಳಿಗೆ, ಈ ಹೊಸ ಶೋಧ ದೊಡ್ದ ಸುದ್ದಿ.

ಭಾರತದಲ್ಲಿಯೂ ಇಂತಹ ಉದಾಹರಣೆಗಳಿವೆ. ಬೆಂಗಳೂರಿನ ಅಶೋಕ ಟ್ರಸ್ಟಿನ ಚಂದ್ರಿಮಾ ಹೋಮ್ ಫೇಸ್-ಬುಕ್ ತಂಡಮೊಂದನ್ನು ಶುರು ಮಾಡಿದರು: ಕಾಡುಪ್ರಾಣಿಗಳ ಮೇಲೆ ಸಾಕುನಾಯಿಗಳು ಧಾಳಿ ಮಾಡುವ ಬಗ್ಗೆ ಮಾಹಿತಿ ಸಂಗ್ರಹಿಸಲಿಕ್ಕಾಗಿ. ೨೦೧೧ರಿಂದ ೨೦೧೬ರ ಅವಧಿಯಲ್ಲಿ, ಆ ತಂಡದ ಪ್ರಕಟಣೆಗಳ ಮೂಲಕ ಇಂತಹ ೨೭ ಧಾಳಿಗಳ ಬಗ್ಗೆ ಮಾಹಿತಿ ಪಡೆಯಲು ಅವರಿಗೆ ಸಾಧ್ಯವಾಯಿತು.

ಸಾಮಾಜಿಕ ಜಾಲತಾಣಗಳು ಪ್ರಾಕೃತಿಕ ರಕ್ಷಣೆಗಾಗಿ ಸ್ವಯಂಸೇವಕರನ್ನು ತುರ್ತಾಗಿ ಸಂಘಟಿಸಲಿಕ್ಕೂ ಸಹಕಾರಿ. ಉದಾಹರಣೆಗೆ ವಾಸುದೇವನ್ ಫೇಸ್-ಬುಕ್ಕಿನಲ್ಲಿ ವಿನಂತಿಯೊಂದನ್ನು ಪ್ರಕಟಿಸಿದರು: ಅಥಿರಪಳ್ಳಿ ಕಾಡಿನಲ್ಲಿ ಅಲ್ಲಲ್ಲಿ ಬೆಂಕಿ ಬೀಳುತ್ತಿದ್ದು, ಅದನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಕರಿಸಬೇಕೆಂದು. ಇದರಿಂದಾಗಿ ಸುಮಾರು ೧೦೦ ಸ್ವಯಂಸೇವಕರು ಬೆಂಕಿ ನಂದಿಸಲು ಮುಂದಾದರು. ಚೆನ್ನೈಯ ಪರಿಸರವಾದಿಗಳ ಪ್ರತಿಷ್ಠಾನದ ಅರುಣ್ ಕೃಷ್ಣಮೂರ್ತಿ ಅಲ್ಲಿನ ಸಮುದ್ರ ತೀರದಲ್ಲಿ ಚೆಲ್ಲಿದ ಕಚ್ಚಾತೈಲ ಶುಚಿ ಮಾಡಲಿಕ್ಕೂ ಸಾಮಾಜಿಕ ಜಾಲತಾಣಗಳ ಮೂಲಕ ಸ್ವಯಂಸೇವಕರನ್ನು ಆಹ್ವಾನಿಸಿದ್ದರು.

ಆದರೆ, ಇಂತಹ ಉದ್ದೇಶಗಳಿಗಾಗಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಅಪಾಯಗಳೂ ಇವೆ. ಉದಾಹರಣೆಗೆ, ಅಪರೂಪದ ಪಕ್ಷಿ ಎಲ್ಲಿದೆಯೆಂದು ತಿಳಿದಾಗ, ಅದರ ಫೋಟೋ ತೆಗೆಯಲು ನೂರಾರು ಜನರು ಮುಗಿಬೀಳುತ್ತಾರೆ. ಕೆಲವರಂತೂ, ಆ ಹಕ್ಕಿಯನ್ನು ತಮ್ಮತ್ತ ಆಕರ್ಷಿಸಲಿಕ್ಕಾಗಿ ಆಹಾರ ನೀಡುವುದು ಅಥವಾ ಹಕ್ಕಿಯ ಸ್ವರದ ಅನುಕರಣೆ ಮಾಡುವುದು ಇತ್ಯಾದಿ ಆಕ್ಷೇಪಾರ್ಹ ವಿಧಾನಗಳನ್ನು ಬಳಸುತ್ತಾರೆ. ಫೇಸ್-ಬುಕ್ಕಿನಲ್ಲಿ “ಲೈಕ್” ಗಳಿಸುವ ಚಟಕ್ಕೆ ಬಿದ್ದವರು, ಗಮನ ಸೆಳೆಯುವ ಫೋಟೋ ತೆಗೆಯಲಿಕ್ಕಾಗಿ ವನ್ಯಜೀವಿಗಳಿಗೆ ಅಪಾಯವನ್ನೇ ತಂದೊಡ್ಡುತ್ತಾರೆ. ಉದಾಹರಣೆಗೆ, ಅಪರೂಪದ ಕಪ್ಪೆಗಳನ್ನು ಕೈಗಳಿಂದ ಹಿಡಿದು ಫೋಟೋ ತೆಗೆದವರಿದ್ದಾರೆ. ಇಂತಹ ವಿವೇಚನೆಯಿಲ್ಲದ ಕೆಲಸದಿಂದಾಗಿ, ಆ ಕಪ್ಪೆಗಳಿಗೆ ಫಂಗಸ್ ಸೋಂಕು ತಗಲಿ, ಅವು ಸತ್ತು ಹೋಗಬಹುದು!

ಅಥಿರಪಳ್ಳಿಯ ಬೂದುಬಣ್ಣದ ಮಲಬಾರ್ ಮಂಗಟ್ಟೆ ಹೆಣ್ಣುಹಕ್ಕಿಗೆ ಕೊನೆಗೆ ಏನಾಯಿತು? ಸಾಮಾಜಿಕ ಜಾಲತಾಣಗಳಲ್ಲಿ ಅದರ ಸುದ್ದಿ ಹರಡಿದಾಗಿನಿಂದ, ಅದರ ಡಾಕ್ಯುಮೆಂಟರಿ ತೆಗೆಯಲಿಕ್ಕಾಗಿ ಹಲವು ಸುದ್ದಿವಾಹಿನಿಗಳ ಛಾಯಾಗ್ರಾಹಕರು ಸ್ಪರ್ಧೆಗಿಳಿದರು! ಹಾಗಾಗಿ, ಅವರ ಪ್ರವೇಶಕ್ಕೆ ಅಲ್ಲಿನ ವಲಯ ಅರಣ್ಯಾಧಿಕಾರಿ ನಿಷೇಧ ಹೇರಬೇಕಾಯಿತು. ಕೆಲವು ಛಾಯಾಗ್ರಾಹಕರಂತೂ, ಆ ಮಂಗಟ್ಟೆ ಹಕ್ಕಿಯ ಪೊಟರೆಯಲ್ಲೇ ತಮ್ಮ ಕೆಮರಾಗಳನ್ನಿಟ್ಟರು! ಪಿನ್-ಹೋಲ್ ಕೆಮರಾದಿಂದ ತೆಗೆದ ಆ ಹೆಣ್ಣುಮಂಗಟ್ಟೆ ಹಕ್ಕಿ ಮತ್ತು ಪುಟ್ಟ ಮರಿಯ ವಿಡಿಯೋ ಫೇಸ್-ಬುಕ್ಕಿನಲ್ಲಿ ಸುತ್ತಾಡುತ್ತಿದೆ.

ಮನುಷ್ಯರು ಆಹಾರ ಕೊಟ್ಟ ಕಾರಣ, ಆ ಹೆಣ್ಣುಮಂಗಟ್ಟೆ ಹಕ್ಕಿ ಉಳಿಯಿತು ಎನ್ನಬಹುದು. ಆದರೆ, ಹಾಗೆ ಆಹಾರ ಕೊಟ್ಟ ಕಾರಣದಿಂದಲೇ ಆ ಹಕ್ಕಿ ತನ್ನ ಪುಟಾಣಿ ಮರಿಯನ್ನು ತೊರೆದು ಹೋಯಿತು; ಅನಂತರ ತನ್ನ ಮರಿಗೆ ಆಹಾರ ನೀಡಲು ಅದು ಮರಳಿ ಬಾರದ ಕಾರಣ, ಕೊನೆಗೆ ಆ ಮರಿ ಸತ್ತೇ ಹೋಯಿತು. ಈ ಭೂಮಿಯಲ್ಲಿರುವ ಪ್ರತಿಯೊಂದು ಹಕ್ಕಿಗೂ ಆಹಾರ ನೀಡಲು ನಮ್ಮಿಂದ ಸಾಧ್ಯವಿಲ್ಲ. ಪ್ರಕೃತಿಯೇ ಅವನ್ನು ರಕ್ಷಿಸಬೇಕು, ಅಲ್ಲವೇ?
 

Comments