ಅಪ್ಪ ಅಂದರೆ ಅಪ್ಪನೇ!!
ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ ನೆನಪುಗಳು ಉಮ್ಮಳಿಸಿ ಬರುವಂತೆ ಮಾಡುವಲ್ಲಿ ಗೀತೆಯ ಸಾಹಿತ್ಯ ಯಶಸ್ವಿಯಾಗಿದೆ. ಈ ಲೇಖನದ ವಿಷಯಕ್ಕೂ ಇದೇ ಪ್ರೇರಣೆ. ಭೋಗವಾದ, ಕೊಳ್ಳುಬಾಕತನ, ಸ್ವಾರ್ಥಪರತೆಯೇ ಆದ್ಯತೆಯಾಗಿ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರರಲ್ಲಿ ಬಾಂಧವ್ಯಗಳನ್ನು ನೆನಪಿಸುವ, ಬೆಸೆಯುವ ಇಂತಹ ಪ್ರಯತ್ನಗಳು ಅಭಿನಂದನೀಯ. ತಂದೆ-ತಾಯಿ-ಮಕ್ಕಳ ನಡುವಿನ ಸಂಬಂಧಗಳಿರಲಿ, ಗಂಡ-ಹೆಂಡಿರ ಸಂಬಂಧಗಳೂ ಅರ್ಥ, ಪಾವಿತ್ರ್ಯ ಕಳೆದುಕೊಳ್ಳುತ್ತಿರುವುದು ಸಮಾಜ ನೈತಿಕ ದಿವಾಳಿತನದತ್ತ ಜಾರುತ್ತಿದೆಯೇನೋ ಎಂದು ಭಾವಿಸುವಂತೆ ಮಾಡುತ್ತಿರುವ ದಿನಗಳಲ್ಲಿ ಇಂತಹ ಪ್ರಯತ್ನ ಕಾರ್ಮೋಡಗಳ ನಡುವಿನ ಮಿಂಚಿನಂತಿದೆ.
ಅಪ್ಪ ಎನ್ನುವ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಕೇವಲ ಮಕ್ಕಳಿಗೆ ತಂದೆ ಎಂಬ ಅರ್ಥವಲ್ಲದೆ ಹಿರಿಯ, ಶ್ರೇಷ್ಠ, ಗುರು, ಸ್ವಾಮಿ, ದೇವರು ಇತ್ಯಾದಿ ಅರ್ಥಗಳಲ್ಲೂ ಈ ಪದ ಬಳಸಲ್ಪಡುತ್ತಿದೆ. ತಾಯಿಯನ್ನು ಭೂಮಿಗೆ ಹೋಲಿಕೆ ಮಾಡುವಂತೆ ತಂದೆಯನ್ನು ಆಕಾಶಕ್ಕೆ ಹೋಲಿಸುವ ಪರಿಪಾಠವೂ ಇದೆ. ಈ ಹೋಲಿಕೆಗಳು ಆದರ್ಶ ತಂದೆ-ತಾಯಿಗಳಿಗೆ ಅನ್ವಯವಾಗುತ್ತದೆ. ಸಕಲ ಜೀವಿಗಳಿಗೆ ಭೂಮಿ ಹೇಗೆ ಆಧಾರಪ್ರಾಯವಾಗಿದೆಯೋ ಹಾಗೆಯೇ ತಾಯಿ ತನ್ನ ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೂ ಅವರ ಪಾಲನೆ-ಪೋಷಣೆಗೆ ಹೆಚ್ಚಿನ ಗಮನ ನೀಡುತ್ತಾಳೆ. ಈ ಕಾರ್ಯಕ್ಕೆ ತಂದೆ ಆಧಾರಪ್ರಾಯನಾಗಿ, ಪೋಷಕನಾಗಿ ನಿಲ್ಲುತ್ತಾನೆ. ಅಮ್ಮನ ಮಹತ್ವ ಮಕ್ಕಳಿಗೆ ಹುಟ್ಟಿನ ಕ್ಷಣದಿಂದ ಅನುಭವಕ್ಕೆ ಬರುತ್ತದೆ. ಆದರೆ ಅಪ್ಪನ ಮಹತ್ವ ಮಕ್ಕಳಿಗೆ ತಿಳಿಯುವುದು ಅವರು ಸ್ವತಃ ಅಪ್ಪಂದಿರಾದ ನಂತರವೇ! ಆಕಾಶ ಹೇಗೆ ಭೂಮಿಯೂ ಸೇರಿದಂತೆ ಬ್ರಹ್ಮಾಂಡದ ಸಕಲ ಕಾಯಗಳಿಗೂ ಹೇಗೆ ಆಧಾರ ಮತ್ತು ಆಶ್ರಯಪ್ರಾಯವಾಗಿದೆಯೋ, ಹಾಗೆ ತಂದೆಯಾದವನು ಕುಟುಂಬಕ್ಕೆ ಆಶ್ರಯ ಮತ್ತು ಆಧಾರದಾತನಾಗಿರುತ್ತಾನೆ. ಆಕಾಶದ ಇರುವಿಕೆ ಹೇಗೆ ಗಮನಕ್ಕೆ ಬರುವುದಿಲ್ಲವೋ, ಹಾಗೆಯೇ ತಂದೆಯ ಮಹತ್ವ ಅಷ್ಟಾಗಿ ಮಕ್ಕಳ ಗಮನಕ್ಕೆ ಬರುವುದು ಕಡಿಮೆ.
ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರಗಳು ಪರಸ್ಪರ ಪೂರಕವಾಗಿರುವುದು ವಿಶೇಷವೇ ಸರಿ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ಪರಿಚಯಿಸಿದರೆ ತಂದೆ ಪ್ರಪಂಚವನ್ನು ಮಕ್ಕಳಿಗೆ ಪರಿಚಯಿಸುತ್ತಾನೆ. ತಾಯಿಯಿಂದ ಜೀವ, ತಂದೆಯಿಂದ ಜೀವನ! ಮಕ್ಕಳು ಕಷ್ಟಪಡಬಾರದೆಂದು ತಾಯಿ ಬಯಸಿದರೆ, ತಂದೆ ಕಷ್ಟಗಳನ್ನು ಎದುರಿಸಿ ಮುಂದೆಬರಲು ಹುರಿದುಂಬಿಸುತ್ತಾನೆ. ಮಕ್ಕಳು ಒಂದು ಹಂತಕ್ಕೆ ಬರುವವರೆಗೆ ತಾಯಿ ಅವರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದರೆ, ಅದಕ್ಕೆ ಪೋಷಕವಾಗಿ ಹಿನ್ನೆಲೆಯಲ್ಲಿ ತಂದೆಯ ಶ್ರಮವಿರುತ್ತದೆ. ತಾಯಿಯದು ಮಧುರಗಾನವಾದರೆ, ಗಾನಕ್ಕೆ ಕಳೆಕಟ್ಟುವ ಹಿಮ್ಮೇಳ ತಂದೆಯದು! ಈ ತಾಳ-ಮೇಳಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಮತ್ತು ಸಂಸಾರ ಹದಗೆಡುತ್ತದೆ.
ಎಲ್ಲಾ ವಿಷಯಗಳಿಗೂ ಅಪವಾದವಿರುತ್ತದೆಯಾದರೂ, ಹೆಚ್ಚಿನ ಕುಟುಂಬಗಳಲ್ಲಿ ಕುಟುಂಬದ ಸದಸ್ಯರುಗಳ ಭದ್ರತೆ, ಅಭಿವೃದ್ಧಿಗಳ ಬಗ್ಗೆ ತಂದೆಯ ಪಾತ್ರ ಪ್ರಧಾನವಾಗಿರುತ್ತದೆ. ಇರಲೊಂದು ಸೂರು, ಮಕ್ಕಳಿಗೆ ಶಿಕ್ಷಣ, ಅವರಗಳು ಸ್ವಂತ ಕಾಲಿನ ಮೇಲೆ ನಿಲ್ಲಿಸಲು ಶ್ರಮಪಡುವ ತಂದೆಯರು ಕುಟುಂಬದ ಮುಖ್ಯಸ್ಥರೆಂದೇ ಪರಿಗಣಿಸಲ್ಪಡುತ್ತಾರೆ. ಮಕ್ಕಳ ಮದುವೆಯಾಗಿ ಅವರುಗಳದೇ ಆದ ಸಂಸಾರ ಪ್ರಾರಂಭವಾದ ಮೇಲೆ ಅಪ್ಪಂದಿರ ಪಾತ್ರ ಅಷ್ಟೊಂದು ಗಣನೆಗೆ ಬರದೆ ಉಳಿದುಬಿಡುವುದನ್ನೂ ಕಾಣುತ್ತೇವೆ. ಎಲ್ಲರನ್ನೂ ದಡ ಸೇರಿಸುವಲ್ಲಿ ಸಫಲನಾಗುವ ಹೊತ್ತಿಗೆ ಹಣ್ಣಾಗಿರುವ ಅಪ್ಪನಿಗೆ ತಲೆಯಲ್ಲಿ ಬಿಳಿಕೂದಲು ಕಾಣಿಸಿಕೊಂಡಿರುತ್ತದೆ. ಹೊಳೆ ದಾಟಿದ ಮೇಲೆ ಅನ್ನುವ ಪರಿಸ್ಥಿತಿ ಬಾರದ ಅಪ್ಪಂದಿರೇ ಭಾಗ್ಯವಂತರು.
ಅಪ್ಪನ ಸ್ಥಾನ ವಿವಾದಗಳಿಗೆ ತುತ್ತಾಗುವ ಉದಾಹರಣೆಗಳೂ ಸಿಗುತ್ತವೆ. ಅಕ್ರಮ ಸಂಬಂಧದಿಂದ ಜನಿಸುವ ಮಕ್ಕಳಿಗೆ ಅಪ್ಪನೆನಿಸಿಕೊಳ್ಳಲು ಹಿಂದೇಟು ಹಾಕುವವರು, ಅತ್ಯಾಚಾರ, ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಸಂಬಂಧಗಳಿಂದ ಜನಿಸುವ ಮಕ್ಕಳ ಅಪ್ಪಂದಿರು ಯಾರೆಂದು ತಿಳಿಯದ ಪ್ರಸಂಗಗಳು ಕಂಡುಬರುತ್ತಿರುತ್ತವೆ. ಪ್ರತಿಷ್ಠಿತರೆನಿಸಕೊಂಡವರೇ ಅಕ್ರಮ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಸೌಲಭ್ಯಗಳನ್ನು ಗುಟ್ಟಾಗಿ ಮಾಡಿಕೊಟ್ಟರೂ ಅವರನ್ನು ತಮ್ಮ ಮಕ್ಕಳೆಂದು ಒಪ್ಪಿಕೊಳ್ಳದ ಪ್ರಕರಣ, ಪಿತೃತ್ವ ಸಾಬೀತಿಗೆ ಮಕ್ಕಳೇ ನ್ಯಾಯಾಲಯದ ಮೆಟ್ಟಲೇರಿದ ಪ್ರಕರಣಗಳೂ ಇವೆ. ನೋವಿನ ಸಂದರ್ಭಗಳಲ್ಲಿ ಅಪ್ಪನೊಬ್ಬ ತನ್ನ ಮಕ್ಕಳಿಗೆ, ನಿಮಗಾಗಿ ಎಷ್ಟು ಕಷ್ಟಪಟ್ಟಿದ್ದೇನೆ, ಗೊತ್ತೆ? ಎಂಬರ್ಥದ ಮಾತುಗಳನ್ನು ಆಡಿದಾಗ ಪ್ರತಿಯಾಗಿ ಕೇಳಬಾರದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುವುದೂ ಇದೆ. ಇಂತಹವನ್ನು ಒತ್ತಟ್ಟಿಗಿಟ್ಟು ಸಾಮಾನ್ಯ ಅಪ್ಪಂದಿರ ಬಗ್ಗೆ ನೋಡೋಣ.
ಒಬ್ಬ ಸಾಮಾನ್ಯ ಅಪ್ಪ ತನ್ನ ಕೈಯಲ್ಲಿ ಮಾಡಲಾಗದಿದ್ದ ಕೆಲಸಗಳನ್ನು ಮಕ್ಕಳು ಮಾಡಲೆಂದು ಬಯಸುತ್ತಾನೆ. ತಾನು ಆಸೆಪಟ್ಟು ಪಡೆಯಲಾಗದಿದ್ದುದನ್ನು ಮಕ್ಕಳಾದರೂ ಪಡೆಯಲೆಂದು ಆಶಿಸುತ್ತಾನೆ. ಅದರ ಸಲುವಾಗಿ ತಾನು ಮಾಡಬಹುದಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತಾನೆ, ಕಷ್ಟಪಡುತ್ತಾನೆ. ಅವರುಗಳ ಏಳಿಗೆಗಾಗಿ ಸ್ವಂತದ ಅವಶ್ಯಕತೆಗಳನ್ನು ತ್ಯಾಗ ಮಾಡುತ್ತಾನೆ. ಈ ಗುಣವೇ ಅಪ್ಪ-ಅಮ್ಮಂದಿರನ್ನು ಸಜ್ಜನರನ್ನಾಗಿ ರೂಪಿಸುವುದು, ಆದರ್ಶರನ್ನಾಗಿಸುವುದು. ನಮ್ಮ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಮರು ಹೇಳುತ್ತಿದ್ದ ಈ ಮಾತು ಪಾಲನೀಯವಾಗಿದೆ: "ಒಂದು ದೇಶ ಭ್ರಷ್ಠಾಚಾರ ಮುಕ್ತವಾಗಬೇಕಾದರೆ, ಸುಂದರ ಮನಸ್ಸುಗಳಿಂದ ಕೂಡಿರಬೇಕೆಂದಾದರೆ ಮೂವರಿಂದ ಮಾತ್ರ ಸಾಧ್ಯ. ಆ ಮೂವರೆಂದರೆ ಅಪ್ಪ, ಅಮ್ಮ ಮತ್ತು ಶಿಕ್ಷಕ." ಈ ಮೂವರಲ್ಲಿ ಕುಟುಂಬದ ಮುಖ್ಯಸ್ಥನಾಗಿ ಅಪ್ಪನ ಜವಾಬ್ದಾರಿಯೂ ಹೆಚ್ಚಿನದಾಗಿದೆ. ಅವನ ನಡವಳಿಕೆ, ಮೇಲ್ಪಂಕ್ತಿ, ತೆಗೆದುಕೊಳ್ಳುವ ನಿರ್ಧಾರಗಳು ಗುರುತರವಾದ ಬದಲಾವಣೆ ತರಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಅವನು ನೋಡಿಕೊಳ್ಳಬೇಕಿದೆ.
ಮಕ್ಕಳ ದೃಷ್ಟಿಯಲ್ಲಿ ಅಪ್ಪ ಮಾದರಿಯಾಗಿರುತ್ತಾನೆ. ಮಕ್ಕಳ ಬೇಕು-ಬೇಡಗಳನ್ನು ಗಮನಿಸುವುದು, ಅವರ ರಕ್ಷಣೆ, ಭದ್ರತೆ ವಿಚಾರಗಳಿಗೆ ಗಮನ ಕೊಡುವುದು, ಇತ್ಯಾದಿಗಳಿಂದಾಗಿ ಅವರ ದೃಷ್ಟಿಯಲ್ಲಿ ಅವನೇ ಹೀರೋ ಆಗಿರುತ್ತಾನೆ. ಏನು ಆಗಿರದಿದ್ದರೂ, ತಾವು ಏನಾಗಬೇಕು ಎಂಬುದಕ್ಕೆ ಅಪ್ಪನೇ ಅವರಿಗೆ ಮಾರ್ಗದರ್ಶಿ, ಮಾನದಂಡ ಆಗಿರುತ್ತಾನೆ. ಅಪ್ಪ ಅನ್ನಿಸಿಕೊಳ್ಳುವುದೇ ಹೆಮ್ಮೆಯ ವಿಷಯ, ಅದರಲ್ಲೂ ಒಳ್ಳೆಯ ಅಪ್ಪ ಅನ್ನಿಸಿಕೊಂಡರೆ ಅದೊಂದು ಶ್ರೇಷ್ಠ ಸಾಧನೆಯೇ ಸರಿ. ದೇಶ ಸಧೃಢವಾಗಿರಬೇಕಾದರೆ ರಾಜ್ಯಗಳು ಸಧೃಢವಾಗಿರಬೇಕು. ರಾಜ್ಯಗಳು ಸಮೃದ್ಧಿಯಾಗಿರಬೇಕೆಂದರೆ ಜಿಲ್ಲೆಗಳು, ಜಿಲ್ಲೆಗಳಿಗೆ ತಾಲ್ಲೂಕುಗಳು, ತಾಲ್ಲೂಕುಗಳಿಗೆ ನಗರ, ಹಳ್ಳಿಗಳು! ನಗರ, ಹಳ್ಳಿಗಳು ಮಾದರಿ ಎನ್ನಿಸಿಕೊಳ್ಳಬೇಕಾದರೆ ಅಲ್ಲಿರುವ ಕುಟುಂಬಗಳು ನಾಗರಿಕ ಪ್ರಜ್ಞೆ ಹೊಂದಿರಬೇಕು. ಕುಟುಂಬಗಳು ಹೀಗಿರಬೇಕಾದರೆ ಆ ಕುಟುಂಬಗಳ ಮುಖ್ಯಸ್ಥರು, ಅಂದರೆ ಅಪ್ಪಂದಿರುಗಳು ಸುಯೋಗ್ಯರಾಗಿರಬೇಕು. ಒಟ್ಟಾರೆಯಾಗಿ, ದೇಶಕ್ಕೆ ಒಳ್ಳೆಯದಾಗಬೇಕೆಂದರೆ, ಕುಟುಂಬದ ಆಧಾರಗಳಾದ ಅಪ್ಪ-ಅಮ್ಮಂದಿರುಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
-ಕ.ವೆಂ.ನಾಗರಾಜ್.