ಕಗ್ಗ ದರ್ಶನ – 30 (1)
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ
ಕಳೆವುವದರಲಿ ನಮ್ಮ ಜನುಮಜನುಮಗಳು
ಗೆಲವಾರ್ಗೊ! ಸೋಲಾರ್ಗೊ! ಲೆಕ್ಕ ನೋಡುವುದೆಂದೊ!
ಪಲವು ಬರಿಯಾಟವೆಲೊ - ಮಂಕುತಿಮ್ಮ
ಈ ಜಗತ್ತಿನ ಆಟ ಮೊದಲು ಕೊನೆಯಿಲ್ಲದ ಆಟ. ಅದು ಯಾವತ್ತೂ ನಿಲ್ಲುವುದಿಲ್ಲ; ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದರಲ್ಲಿ ಕಳೆಯುತ್ತವೆ ನಮ್ಮ ಜನುಮಜನುಮಗಳು ಎಂಬ ಸರಳಸತ್ಯವನ್ನು ಈ ಮುಕ್ತಕದಲ್ಲಿ ತಿಳಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪ. ಅದೇ ಚಿಂತನಾ ಸರಣಿ ಮುಂದುವರಿಸುತ್ತಾ ಮೂರು ಮೂಲಭೂತ ಪ್ರಶ್ನೆ ಎತ್ತುತ್ತಾರೆ. ಈ ಆಟದಲ್ಲಿ ಗೆಲುವು ಯಾರಿಗೆ? ಸೋಲು ಯಾರಿಗೆ? ಈ ಸೋಲುಗೆಲುವಿನ ಲೆಕ್ಕ ನೋಡುವುದು ಯಾವಾಗ?
ಈ ಜಗತ್ತನ್ನೇ ಗೆದ್ದು ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತೇವೆ ಎಂಬ ದುರಹಂಕಾರಿಗಳು ಎರಡು ಜಾಗತಿಕ ಯುದ್ಧ ನಡೆಸಿದರು: ೧೯೧೪-೧೮ರಲ್ಲಿ ಮೊದಲನೆಯ ಮತ್ತು ೧೯೩೯-೪೫ರಲ್ಲಿ ಎರಡನೆಯ ಜಾಗತಿಕ ಯುದ್ದ. ಕೊನೆಗೆ ಗೆಲುವು ಯಾರಿಗೆ? ಸೋಲು ಯಾರಿಗೆ? ಎಂದು ಯೋಚಿಸಿದರೆ ದಿಕ್ಕೆಟ್ಟು ಹೋಗುತ್ತೇವೆ. ಈ ಯುದ್ಧಗಳಿಂದಾಗಿ ಆದದ್ದೇನು? ಲಕ್ಷಗಟ್ಟಲೆ ಸೈನಿಕರ ಹಾಗೂ ಅಸಹಾಯಕ ಜನರ ಕಗ್ಗೊಲೆ. ಕೋಟಿಗಟ್ಟಲೆ ರೂಪಾಯಿ ಬೆಲೆಬಾಳುವ ಸೊತ್ತು ನಾಶ. ಅಸಂಖ್ಯ ಕುಟುಂಬಗಳು ದಿಕ್ಕಾಪಾಲು. ದೇಶದೇಶಗಳ ಜನಜೀವನ ವರುಷಗಟ್ಟಲೆ ಅಲ್ಲೋಲ ಕಲ್ಲೋಲ. ಜಾಗತಿಕ ಯುದ್ಧ ಆರಂಭಿಸಿದ ಮತಿಗೆಟ್ಟ ನಾಯಕರು ಸಾಧಿಸಿದ್ದೇನು? ಇದು ಎಂದಿಗೂ ಉತ್ತರಿಸಲಾಗದ ಪ್ರಶ್ನೆ.
ನಮ್ಮ ದೇಶದ ಚರಿತ್ರೆಯನ್ನೇ ಗಮನಿಸಿದರೆ…. ೧೫ ಆಗಸ್ಟ್ ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದ ಬಳಿದ ಸುಮಾರು ಆರು ದಶಕಗಳ ಕಾಲ ಒಂದೇ ರಾಜಕೀಯ ಪಕ್ಷ ಆಡಳಿತ ಸೂತ್ರ ಹಿಡಿದಿತ್ತು. ಈ ದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅವಕಾಶಗಳನ್ನು ಸುಧಾರಿಸುವುದರಲ್ಲಿ ಮತ್ತೆಮತ್ತೆ ಎಡವಿತು. ಕೊನೆಗೆ, ೨೦೧೪ರ ಮಹಾಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಸೋತಿತು. ಆ ಪಕ್ಷ, ಆ ಸೋಲಿನಿಂದ ಪಾಠ ಕಲಿಯಿತೇ? ಈಗ ಕೆಲವೇ ರಾಜ್ಯಗಳಲ್ಲಿ ಆಡಳಿತದ ಗದ್ದುಗೆ ಏರಿರುವ ಆ ಪಕ್ಷ ಕರ್ನಾಟಕದಲ್ಲಿ ಏನು ಮಾಡುತ್ತಿದೆ? ಮೇ ೨೦೧೮ರಲ್ಲಿ ಜರಗಿದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ೩೭ ಮತಕ್ಷೇತ್ರಗಳಲ್ಲಿ ಗೆದ್ದ ಇನ್ನೊಂದು ರಾಜಕೀಯ ಪಕ್ಷದ ಜೊತೆ ಸೇರಿ ಸರಕಾರ ರಚಿಸಿ, ಅಧಿಕಾರದ ಗದ್ದುಗೆ ಏರಿದೆ. ಆ ಇನ್ನೊಂದು ಪಕ್ಷದ ಅಭ್ಯರ್ಥಿಗಳು ೧೧೯ ಕ್ಷೇತ್ರಗಳಲ್ಲಿ ಇಡುಗಂಟನ್ನೇ ಕಳೆದುಕೊಂಡಿದ್ದರು! ಅಂದರೆ, ಆ ಇನ್ನೊಂದು ರಾಜಕೀಯ ಪಕ್ಷವನ್ನು ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಅಧಿಕಾರದ ಲಾಲಸೆಗಾಗಿ ಅಂತಹ ರಾಜಕೀಯ ಪಕ್ಷದೊಂದಿಗೆ ಕೈಜೋಡಿಸುವುದೆಂದರೆ…. ಜನಪರ ಆಡಳಿತ ನೀಡುವ ಬದಲಾಗಿ ಇಂತಹ ಸರ್ಕಸ್ ನಡೆದಿದೆ. ಅದಕ್ಕಾಗಿಯೇ ಡಿವಿಜಿಯವರು ಹೇಳುತ್ತಾರೆ: ಅಂತಿಮವಾಗಿ, ಈ ಜಗತ್ತಿನಲ್ಲಿ ಆಟ ಆಡಿದ್ದೇ ಫಲ.