ಮಂಗಳೂರಿನ ಹಲಸು ಹಬ್ಬದಲ್ಲಿ ಜನಸಾಗರ

ಮಂಗಳೂರಿನ ಹಲಸು ಹಬ್ಬದಲ್ಲಿ ಜನಸಾಗರ

ಜುಲಾಯಿ ೧೫, ೨೦೧೮ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತಿರದ ಬಾಳಂಭಟ್ ಸಭಾಂಗಣಕ್ಕೆ ದಿನವಿಡೀ ಪ್ರವಾಹದಂತೆ ಬಂದರು ಮಂಗಳೂರಿಗರು – ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೩ನೇ ಹಲಸು ಹಬ್ಬದಲ್ಲಿ ಪಾಲ್ಗೊಳ್ಳಲು.

ಬೆಳಗ್ಗೆ ೭ ಗಂಟೆಗೆ ಸರಿಯಾಗಿ ದೀಪ ಬೆಳಗಿಸಿ ಹಲಸು ಹಬ್ಬವನ್ನು ಉದ್ಘಾಟಿಸಿದರು ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್. ಆಗಲೇ ಕಾದು ನಿಂತಿದ್ದ ಸಾರ್ವಜನಿಕರಿಂದ ವಿವಿಧ ಮಳಿಗೆಗಳಲ್ಲಿ ಖರೀದಿ ಶುರು.

ಬೆಂಗಳೂರು ಗ್ರಾಮೀಣ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆ ಹೋಬಳಿಯ ಹಲಸು ಬೆಳೆಗಾರರ ಸಂಘದಿಂದ ಅಲ್ಲಿನ ಸುಪ್ರಸಿದ್ಧ ಹಲಸಿನ ಮಾರಾಟ ಈ ಬಾರಿಯ ವಿಶೇಷ. ಅವರದು ದೇಶದಲ್ಲೇ ಅಂತಹ ಮೊದಲ ಸಂಘಟನೆ. ಆ ಸಂಘದ ಸದಸ್ಯರ ಸಂಖ್ಯೆ ೧೪೦. ಅಲ್ಲಿನ ೭೪ ಗ್ರಾಮಗಳಲ್ಲಿ ೩,೫೦೦ ಹಲಸಿನ ಮರಗಳಿದ್ದು, ಆಯ್ದ ಮರಗಳಿಂದ ಮಂಗಳೂರಿಗೆ ಮಾರಾಟಕ್ಕಾಗಿ ಅವರು ತಂದ ಹಲಸು ಎರಡು ಟನ್.

ಸಂಘದ ಕಾರ್ಯದರ್ಶಿ ಎಂ.ಜಿ. ರವಿಕುಮಾರ್ ಮತ್ತು ಮೂವರು ಸಂಗಡಿಗರು ಕ್ಷಣವೂ ಬಿಡುವಿಲ್ಲದೆ ಹಲಸಿನ ಹಣ್ಣು ಹಾಗೂ ಹಲಸಿನ ತೊಳೆಗಳನ್ನು ಮಾರಿದರು (ಒಂದು ಡಜನ್ ತೊಳೆಗೆ ರೂ.೫೦) ಅವರು ತಂದಿದ್ದ ಕೆಂಪು ತೊಳೆಯ ರುದ್ರಾಕ್ಷಿ ಹಲಸಿಗೆ ಭಾರೀ ಬೇಡಿಕೆ. ಸಂಜೆ ಐದು ಗಂಟೆಗೆ ಎರಡು ಟನ್ ಹಲಸಿನ ಹಣ್ಣುಗಳೆಲ್ಲವೂ ಮಾರಾಟವಾಗಿದ್ದವು! ನಿರಂತರವಾಗಿ ಹಲಸಿನ ತೊಳೆಗಳನ್ನು ಬಿಡಿಸಿ ಕೊಡುತ್ತಿದ್ದ ಅವರನ್ನು ಮಧ್ಯಾಹ್ನ ಊಟ ಮಾಡಬೇಕೆಂದು ಒತ್ತಾಯಿಸಿದಾಗ, ರವಿಕುಮಾರ್ ಅವರ ಉದ್ಗಾರ, “ಮಂಗಳೂರಿನವರಿಗೆ ಕೆಂಪು ತೊಳೆ ಹಲಸು ತಿನ್ನಿಸಬೇಕನ್ನೋದು ನಮ್ಮ ಆಶೆ ಸಾರ್. ಈಗ ಒಂದ್ ಲೋಟ ನೀರು ಕುಡಿದರೆ ಸಾಕು, ಊಟ ರಾತ್ರಿ ಮಾಡಿದರಾಯಿತು.”

ಶಿವಮೊಗ್ಗದ ರಿಪ್ಪನ್ ಪೇಟೆಯ ಅಂಕುರ್ ನರ್ಸರಿಯ ಅನಂತಮೂರ್ತಿ ಜವಳಿ ಮತ್ತು ಅವರ ಮಗ ಅಮೋಘ ಜವಳಿ ಅವರಿಂದ ವಿವಿಧ ಹಲಸಿನ ತಳಿಗಳ ಕಸಿಸಸಿಗಳ ಮಾರಾಟ ಅಂದಿನ ಇನ್ನೊಂದು ವಿಶೇಷ. ಮೇಣರಹಿತ ಹಲಸು, ಹಳದಿ ರುದ್ರಾಕ್ಷಿ, ಭದ್ರಾವತಿ ಹಳದಿ, ಪ್ರಕಾಶಚಂದ್ರ, ಮಲೇಶ್ಯಾ ಮೂಲದ ಗಟ್ಟಿ ತೊಳೆ ಹಲ್ಸು, ಸಿಂಗಪುರ ಮೂಲದ ಚಂದ್ರ ಬಕ್ಕೆ, ಥಾಯ್ಲೆಂಡ್ ಮೂಲದ ಕೆಂಪು ತೊಳೆಯ ರೆಡ್ ಸೂಪರ್, ಬ್ರೆಜಿಲ್ ಮೂಲದ ವರುಷವಿಡೀ ಫಲ ನೀಡುವ ಬಿ-೩೬೫ – ಈ ತಳಿಗಳ ಕಸಿಸಸಿಗಳನ್ನು ಅವರು ತಂದಿದ್ದರು. ಮಧ್ಯಾಹ್ನ ಎರಡು ಗಂಟೆಗೆ ಅವರ ೨೦೦ ಹಲಸಿನ ಸಸಿಗಳೆಲ್ಲವೂ ಮಾರಾಟವಾಗಿದ್ದವು. ಅನಂತಮೂರ್ತಿ ಜವಳಿಯವರಿಂದ ಸಸಿಗಳನ್ನು ಹೇಗೆ ನೆಡಬೇಕು, ಹೇಗೆ ಪೋಷಿಸಬೇಕು, ಎಷ್ಟು ವರುಷದಲ್ಲಿ ಫಲ ಬರಲಿದೆ ಎಂಬಿತ್ಯಾದಿ ವಿವರಣೆಯೇ ಜನರನ್ನು ಸೆಳೆಯುತಿತ್ತು. ಅಲ್ಲಿ ಹಲಸಿನ ಕಸಿಸಸಿಗಳನ್ನು ಮಾರಾಟ ಮಾಡಿದ ಇನ್ನೊಬ್ಬರು ಪುತ್ತೂರಿನ ರಾಮಣ್ಣ.

ಹಲಸಿನ ಐಸ್-ಕ್ರೀಮ್ ಮಂಗಳೂರಿನ ಹಲಸು ಹಬ್ಬದ ಮತ್ತೊಂದು ಆಕರ್ಷಣೆ. ಪುತ್ತೂರಿನ ಮರಿಕೆಯ ಎ.ಪಿ. ಸುಹಾಸ್ ಮತ್ತು ಉಪ್ಪಿನಂಗಡಿಯ ಇಳಂತಿಲದ ಕೈಲಾರು ಮೂಲಿಕಾವನದ ಆದರ್ಶ್ – ಈ ಇಬ್ಬರು ಯುವಕರಿಂದ ಹಲಸಿನ ಐಸ್-ಕ್ರೀಮಿನ ಬಿರುಸಿನ ಮಾರಾಟ. ಸುಹಾಸರಿಂದ ಅಡಿಕೆ ಹಾಳೆಯ ಪುಟ್ಟ ತಟ್ಟೆಯಲ್ಲಿ ಐಸ್-ಕ್ರೀಮ್ ಸರಬರಾಜು.

ಈ ಹಲಸು ಹಬ್ಬದಲ್ಲಿದ್ದ ಮಳಿಗೆಗಳ ಸಂಖ್ಯೆ ೪೦. ಹಲಸಿನ ಖಾದ್ಯಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಳಿಗೆಗಳ ಸಂಖ್ಯೆ ೨೨. ಏಳು ಮಳಿಗೆಗಳಲ್ಲಿ ಹಲಸಿನ ಗಟ್ಟಿ, ಪೋಡಿ, ಗಾರಿಗೆ, ಮುಳುಕ, ದೋಸೆ, ಬನ್ಸ್, ಬೋಂಡಾ, ಮಂಚೂರಿ, ಕಬಾಬ್, ಚಿಲ್ಲಿ, ಘೀರೋಸ್ಟು –ಇವನ್ನು ಬಿಸಿಬಿಸಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ. ಹಲಸಿನ ಹಪ್ಪಳ, ಚಿಪ್ಸ್, ಸೋಂಟೆ, ಹಲ್ವ, ಜಾಮ್, ಸ್ಕ್ವಾಷ್ ಮಳಿಗೆಗಳಲ್ಲಿ ಭರ್ಜರಿ ವಹಿವಾಟು. ಹಲಸಿನ ಹೋಳಿಗೆಯಂತೂ ಜನಮನ ಗೆದ್ದಿತು. ಕೆಲವರು ಮನೆಯಲ್ಲಿ ತಯಾರಿಸಿ ತಂದು ಮಾರಿದರೆ, ಇನ್ನಿಬ್ಬರು ಸ್ಥಳದಲ್ಲೇ ತಯಾರಿಸಿ ಮಾರಿದರು. ಹಲಸಿನ ಪಾಯಸ ಮತ್ತು ಹಲಸಿನ ಬೀಜದ ಪಾಯಸದ ಮಾರಾಟವೂ ಜೋರಾಗಿತ್ತು.

ಹಲಸಿನ ಖಾದ್ಯ, ತಿನಿಸು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಎರಡು ಮುಖ್ಯ ಷರತ್ತುಗಳನ್ನು ಸಾವಯವ ಕೃಷಿಕ ಗ್ರಾಹಕ ಬಳಗ ವಿಧಿಸಿತ್ತು: ಎಲ್ಲವನ್ನೂ ಶುದ್ಧ ತೆಂಗಿನೆಣ್ಣೆಯಲ್ಲಿಯೇ ತಯಾರಿಸಬೇಕು ಮತ್ತು ಖಾದ್ಯ/ ತಿನಿಸು ತಯಾರಿಸುವಾಗ ಮೈದಾ ಬಳಸಬಾರದು. ಅದಲ್ಲದೆ, ಆಹಾರವಸ್ತುಗಳಲ್ಲಿ ಕೃತಕ ಬಣ್ಣ, ಆಹಾರ ಕೆಡದಂತಹ ರಾಸಾಯನಿಕಗಳನ್ನು ಬಳಸಬಾರದೆಂದೂ ತಿಳಿಸಲಾಗಿತ್ತು. ತಿನಿಸಿನ ಮಳಿಗೆಗಳಿಗೆ ಮುಗಿ ಬೀಳುತ್ತಿದ್ದ ಸಾರ್ವಜನಿಕರನ್ನು ಈ ಷರತ್ತುಗಳ ಬಗ್ಗೆ ಧ್ವನಿವರ್ಧಕದಲ್ಲಿ ಘೋಷಿಸಿ ಎಚ್ಚರಿಸಲಾಗುತ್ತಿತ್ತು.

ಅಲ್ಲಿ ದಿನವಿಡೀ ಹಬ್ಬದ ವಾತಾವರಣ. ಬೆಳಗ್ಗೆ ಅಲ್ಲೇ ಉಪಾಹಾರ ಚಪ್ಪರಿಸಿದವರು ನೂರಾರು ಜನರು – ಹಲಸಿನ ಗಟ್ಟಿ, ಗಾರಿಗೆ, ಬನ್ಸ್, ಪೋಡಿ ಇತ್ಯಾದಿ. ಇವನ್ನು ಪೊಟ್ಟಣದಲ್ಲಿ ಮನೆಗೆ ಒಯ್ದವರು ಇನ್ನು ಹಲವರು. ಮಧ್ಯಾಹ್ನ ಅಲ್ಲೇ ಹಲಸಿನ ಊಟ (ಹಲಸಿನ ಪಲ್ಯ, ಸಾಂಬಾರು, ಪಾಯಸ ಸಹಿತ) ಸವಿದವರ ಸಂಖ್ಯೆ ನೂರರ ಹತ್ತಿರ.

ಮಂಗಳೂರಿನ ಮೂರನೇ ಹಲಸು ಹಬ್ಬಕ್ಕೆ ಜನಸ್ಪಂದನ ಅಭೂತಪೂರ್ವ. ಅಂದಾಜು ಎಂಟು ಸಾವಿರ ಜನರ ಆಗಮನ. ತೂಬಗೆರೆಯ ಎರಡು ಟನ್ ಹಲಸು ಮಾತ್ರವಲ್ಲದೆ ಸ್ಥಳೀಯ ಒಂದು ಟನ್ ಹಲಸು ಒಂದೇ ದಿನದಲ್ಲಿ ಮಾರಾಟವಾದದ್ದು ದಾಖಲೆ. ಮೂಲೆಗುಂಪಾಗಿದ್ದ ಹಲಸು ಮುನ್ನೆಲೆಗೆ ಬಂದಿರುವುದಕ್ಕೆ ಹಲಸಿನ ಹಬ್ಬಕ್ಕೆ ಹರಿದು ಬಂದ ಜನಸಾಗರವೇ ಪುರಾವೆ. ಈ ಆಸಕ್ತಿ ಬೆಳೆಯಬೇಕಾದರೆ ಆಗಬೇಕಾದ್ದು: ವರುಷವಿಡೀ ಅಡುಗೆಗಾಗಿ ಕಾಯಿಹಲಸು ಮತ್ತು ತಿನ್ನಲು ಹಣ್ಣುಹಲಸು ಸಿಗುವಂತೆ ಮಾಡುವುದು; ಜೊತೆಗೆ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಗುಣಮಟ್ಟ ಹಾಗೂ ಪ್ಯಾಕಿಂಗ್ ಸುಧಾರಿಸುವುದು. ಈ ಸವಾಲು ಸಣ್ಣದಲ್ಲ. ಇದನ್ನು ಯಶಸ್ವಿಯಾಗಿ ನಿಭಾಯಿಸುವುದೇ “ಅಡಿಕೆ ಪತ್ರಿಕೆ” ಆರಂಭಿಸಿದ “ಭವಿಷ್ಯದ ಬೆಳೆ ಹಲಸು” ಆಂದೋಲನದ ಯಶಸ್ಸಿನ ಕೀಲಿಕೈ, ಅಲ್ಲವೇ?