ಕನ್ನಡಕ್ಕೆ ಹೊಸದೊಂದು ಅಕ್ಷರ ಮಾಲೆ

ಕನ್ನಡಕ್ಕೆ ಹೊಸದೊಂದು ಅಕ್ಷರ ಮಾಲೆ

 
 
ಒದುಗರಿಗೆ ನಮಸ್ಕಾರಗಳು. ಪ್ರಸ್ತುತ ಕನ್ನಡ ವರ್ಣಮಾಲೆಯು ಸಂಸ್ಕೃತ ವರ್ಣಮಾಲೆಯಿಂದ ನಕಲಿಗೊಂಡಿದ್ದು, ಕನ್ನಡೇತರ ಸದ್ದುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮಹಾಪ್ರಾಣಗಳೂ, 'ಷ'ಕಾರಗಳೂ ಕೂಡಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಗತಿಪರ ಚಿಂತಕರು, ಭಾಷಾ ವಿಜ್ಞಾನಿಗಳು 'ಎಲ್ಲರ ಕನ್ನಡ'ವೆಂಬ ಹೊಸ ಬರಹದ ಬಗೆಯನ್ನು ಕೆಲ ಜಾಲತಾಣಗಳಲ್ಲಿ ಬಳಸಲಾರಂಭಿಸಿದ್ದಾರೆ. ಇದರಲ್ಲಿ ಮಹಾಪ್ರಾಣಗಳನ್ನೂ, 'ಷ'ಕಾರಗಳನ್ನೂ, 'ಋ'ಕಾರಗಳನ್ನೂ ಬಳಸುವುದಿಲ್ಲ. ಈ ಬಗೆಯನ್ನು ನೋಡಿ ಓದಿ ಸಂತೋಷವಾಯಿತು. ಆದರೆ ಈ ಬಗೆಯಲ್ಲಿ ಕೆಲವು ಕೊರತೆಗಳಿದ್ದು, ಈ ಕೊರತೆಗಳು ಬರಹಕ್ಕೆ ತೊಂದರೆಯನ್ನುಂಟು ಮಾಡುತ್ತಿವೆಯೆಂಬುದು ನನ್ನ ಅನಿಸಿಕೆಯು. ಇದಕ್ಕೆ ಕಾರಣಗಳನ್ನು ಕೆಳಗೆ ಕೊಟ್ಟಿರುವೆನು.
 
1. ಸಂಸ್ಕೃತ ಶಬ್ದಗಳಿಗೂ ಕನ್ನಡ ಶಬ್ದಗಳಿಗೂ ಯಾವುದೇ ಅಂತರಗಳಿಲ್ಲದಿರುವುದು.
ಉದಾ : ದನ (ಹಸು) ಹಾಗೂ ದನ (ಧನ - ಕಾಸು).
ಎರಡೂ ಅಕ್ಷರಗಳ ಅರ್ಥಗಳು ಬೇರೆಯಾಗಿದ್ದು, ಮೂಲ ಅರ್ಥವನ್ನು ತಿಳಿಯುವುದು ಕಷ್ಟವಾಗುವುದು.
 
2. ಇಂಗ್ಲೀಶ್ ಮುಂತಾದ ನುಡಿಗಳ ಪದಗಳ ಸದ್ದುಗಳಿಗೆ ಅಕ್ಷರಗಳಿಲ್ಲದಿರುವುದು.
ಇತ್ತೀಚಿನ ದಿನಗಳಲ್ಲಿ ಇಂಗ್ಲೀಶ್ ನುಡಿಯ ಸಾಲಪದಗಳು ಕನ್ನಡದಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ಈ ಪದಗಳಲ್ಲಿ ಬಳಸಲಾಗಿರುವ ಕೆಲ ಸದ್ದುಗಳಿಗೆ ಅಕ್ಷರಗಳಿಲ್ಲ.
ಉದಾ : ಪ್ಯಾನ್, ಜೀಬ್ರ, ವಿಜನ್.
ನೋಡತಕ್ಕ ಸಂಗತಿಯೇನೆಂದರೆ, ಪ್ಯಾನ್ ಎಂಬುವುದು pan ಆಗಿರಬಹುದು ಇಲ್ಲವೇ fan ಆಗಿರಬಹುದು. ಅಲ್ಲದೇ pan ಅನ್ನು ಪ್ಯಾನ್ ಆಗಿ ಬರೆಯುವುದು ಹೊಲಸಾಗಿ ಕಾಣುವುದು.
 
ಅಚ್ಚ ಕನ್ನಡದ ಪದಗಳನ್ನು ಬಳಸುವುದು ಒಳ್ಳೆಯದೇ. ಆದರೆ, ಸಾಲಪದಗಳನ್ನು ಬಳಸುವುದರಿಂದ ನುಡಿಯ ಬಾಳ್ವಿಕೆಯು ಹೆಚ್ಚುವುದರಲ್ಲದೇ, ಬರಹಕ್ಕೂ, ಮಾತಿಗೂ ಹೊಂದಾಣಿಕೆಯಿರುವುದು. ಆದುದರಿಂದ, ಹೊಚ್ಚ ಹೊಸ ಬರಹ ಬಗೆಯ ಅಕ್ಷರ ಮಾಲೆಯೊಂದನ್ನು ಕೆಳಗೆ ಕೊಟ್ಟಿರುವೆನು.
 
ಸ್ವರಗಳು :
 
ಅ ಆ
ಇ ಈ
ಉ ಊ
ಎ ಏ
ಒ ಓ
 
ಅ̆ ಆ̆
̆
ಐ ಔ
 
ಅಂ ಅಃ
 
ಋ (ಬೇಕಿದ್ದಲ್ಲಿ)
 
ವ್ಯಂಜನಗಳು :
 
ಕ ಗ ಙ
ಚ ಜ ಞ
ಟ ಡ ಣ
ತ ದ ನ
ಪ ಬ ಮ
 
ಸ ಝ
ವ ಫ

ಶ ಷ
ರ ೞ
ಲ ಳ
 


 
ಮೇಲಿನ ಅಕ್ಷರಮಾಲೆಯಲ್ಲಿನ ಗುಣಗಳು ಹೀಗಿವೆ :
 
1. ('ವ' ಮತ್ತು 'ಅ' ಅಕ್ಷರಗಳನ್ನು ಹೊರತುಪಡಿಸಿ) ಒಂದು ಅಕ್ಷರವು ಒಂದೇ ಸದ್ದು ಮಾಡುವುದು.

2. ಒಂದು ಸದ್ದಿಗೆ ಒಂದೇ ಅಕ್ಷರವಿರುವುದು.

3. ('ಅ̆ ' ಮತ್ತು 'ಆ̆ ' ಅಕ್ಷರಗಳನ್ನು ಹೊರತುಪಡಿಸಿ) ಯಾವುದೇ ಹೊಸ ಅಕ್ಷರವನ್ನು ಸೇರಿಸದಿರುವುದು.

4. ಬಹುತೇಕ ಎಲ್ಲಾ ನುಡಿಗಳ (ಸಂಸ್ಕೃತ, ಉರ್ದು, ಇಂಗ್ಲೀಶ್, ತಮಿಳು, ಮಳಯಾಳಂ) ಸದ್ದುಗಳಿಗೆ ಅಕ್ಷರಗಳಿರುವುದು.

5. ಇಂದಿನ ಕನ್ನಡ ಲಿಪಿಗೆ ಹೋಲಿಸುವುದಾದರೆ ಅಕ್ಷರಗಳ ಎಣಿಕೆ ಕಮ್ಮಿಯಾಗಿರುವುದು.

6. ವ್ಯಂಜನಗಳನ್ನು ಅಚ್ಚುಕಟ್ಟಾಗಿ ಗುಂಪಿಸಲಾಗಿರುವುದು.
 
ಜೊತೆಗೆ ಕೆಲವು ಸೂಚನೆಗಳು :
 
1. ಮಹಾಪ್ರಾಣಗಳಿಗೆ ಬೇರೆ ಅಕ್ಷರಗಳಿಲ್ಲ. ಖಡ್ಗ ಎನ್ನುವುದನ್ನು ಕ್ಹಡ್ಗ ಎಂಬುದಾಗಿಯೂ, ಭೂಮಿ ಎನ್ನುವುದನ್ನು ಬ್ಹೂಮಿ ಎಂಬುದಾಗಿಯೂ ಬರೆಯಲಾಗುವುದು. ಇದು ಒದುವುದಕ್ಕೂ, ಬರೆಯುವುದಕ್ಕೂ ಬಹಳ ಸುಲಭವಾದುದು.

2. 'ಝ' ಅಕ್ಷರವು ಇಂಗ್ಲೀಶ್ ನುಡಿಯ 'z' ಅಕ್ಷರ ಮಾಡುವ ಸದ್ದು ಮಾಡುವುದು. ಇದು ಉರ್ದು ನುಡಿಯಲ್ಲಿಯೂ ಉಂಟು.

3. 'ಫ' ಅಕ್ಷರವು ಇಂಗ್ಲೀಶ್ ನುಡಿಯ 'f' ಅಕ್ಷರ ಮಾಡುವ ಸದ್ದು ಮಾಡುವುದು. ಇದು ಉರ್ದು ನುಡಿಯಲ್ಲಿಯೂ ಉಂಟು.

4. 'ಷ' ಅಕ್ಷರವು ಇಂಗ್ಲೀಶ್ ನುಡಿಯ 'vision' ಪದದ 's' ಅಕ್ಷರ ಮಾಡುವ ಸದ್ದು ಮಾಡುವುದು.

5. ಇಂದಿನ ಕನ್ನಡ ಲಿಪಿಯಲ್ಲಿರುವ ಸಂಸ್ಕೃತ ಅಕ್ಷರಗಳಾದ 'ಷ' ಹಾಗೂ 'ೠ' ಅಕ್ಷರಗಳನ್ನು ತೆಗೆಯಲಾಗಿದೆ. ಈ ಪದ್ಧತಿಯು 'ಎಲ್ಲರ ಕನ್ನಡ'ದಲ್ಲಿ ಈಗಾಗಲೇ ಇದೆ.

6. 'ಋ' ಅಕ್ಷರದ ಇರುವಿಕೆಯ ಬಗ್ಗೆ ವಿಚಾರ ಮಾಡಬಹುದು.

7. ಹಳಗನ್ನಡದ ಅಕ್ಷರವಾದ 'ೞ' ಅನ್ನು ಇಡಲಾಗಿದೆ. ಈ ಅಕ್ಷರವು ತಮಿಳು ಹಾಗೂ ಮಳಯಾಳಂ ನುಡಿಗಳಲ್ಲಿ ಇನ್ನೂ ಬಳಕೆಯಲ್ಲಿದೆ.

8. ಮತ್ತೊಂದು ಹಳಗನ್ನಡದ ಅಕ್ಷರವಾದ 'ಱ' ಅನ್ನು ಕೈಬಿಡಲಾಗಿದೆ. ಇದರ ಜಾಗದಲ್ಲಿ 'ರ್ರ'ದ ಬಳಕೆಯನ್ನು ಮಾಡಲಾಗುವುದು.

9. 'ಅ̆ ' ಅಕ್ಷರವು ಇಂಗ್ಲೀಶ್ ನುಡಿಯ 'cat' ಪದದ 'a' ಅಕ್ಷರ ಮಾಡುವ ಸದ್ದು ಮಾಡುವುದು. ಈ ಪದ್ಧತಿಯು ಮರಾಠಿಯಲ್ಲಿ ಈಗಾಗಲೇ ಇದೆ.

10. 'ಆ̆ ' ಅಕ್ಷರವು ಇಂಗ್ಲೀಶ್ ನುಡಿಯ 'caught' ಪದದ 'au' ಅಕ್ಷರಗಳು ಮಾಡುವ ಸದ್ದು ಮಾಡುವುದು. ಈ ಪದ್ಧತಿಯು ಮರಾಠಿಯಲ್ಲಿ ಈಗಾಗಲೇ ಇದೆ. ಕೆಲ ಕಡೆ ಕನ್ನಡದಲ್ಲಿಯೂ ಇದನ್ನು ಬಳಸುವುದುಂಟು.

ಮೇಲಿನ ಅಕ್ಷರಮಾಲೆಯ ಕೊರತೆಗಳು :
 
1. ಇಂಗ್ಲೀಶ್ ನುಡಿಯ 'v' ಮತ್ತು 'w' ಅಕ್ಷರಗಳು ಮಾಡುವ ಸದ್ದುಗಳಿಗೆ 'ವ' ಒಂದೇ ಅಕ್ಷರವಿದೆ.

2. 'ಜರ್ಮನ್' ಎಂಬ ಪದವನ್ನು ಇಂಗ್ಲೀಶ್ ನುಡಿಯಲ್ಲಿ ಬರೆಯುವಾಗ 'ಜ'ದ ಕೊನೆಗೆ ಬರುವ ಸ್ವರಕ್ಕೆ ಬೇರೆ ಅಕ್ಷರವಿಲ್ಲ. 'ಅ' ಅಕ್ಷರವೇ ಬಳಸಲಾಗಿದೆ.
ಮೇಲಿನ ಎರಡು 'ಕೊರತೆಗಳು' ಇಂದಿನ ಕನ್ನಡ ಲಿಪಿಯಲ್ಲಿಯೂ, 'ಎಲ್ಲರ ಕನ್ನಡ'ದಲ್ಲಿಯೂ ಕಂಡುಬರುವುವು.