ಕಗ್ಗ ದರ್ಶನ – 31 (1)

ಕಗ್ಗ ದರ್ಶನ – 31 (1)

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು
ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ
ಗೋಳ್ಕರೆದೇನು ಫಲ? ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ
ಬದುಕಿನಲ್ಲಿ ನೂರೆಂಟು ಎಡರುತೊಡರುಗಳುಂಟು, ಸಂಕಟಗಳುಂಟು; ಅವನ್ನು ನಾವು ಒಪ್ಪಿದರೂ (ಕೇಳ್ಕೆ) ಒಪ್ಪದಿದ್ದರೂ (ಮಾಣ್ಕೆ) ಅವು ಒಂದಿಷ್ಟೂ ಬದಲಾಗುವುದಿಲ್ಲ. ಅವೆಲ್ಲ ಅಡ್ಡಿಗಳನ್ನೂ ನೋವುಗಳನ್ನೂ ಅನುಭವಿಸಿಯೇ ತೀರಬೇಕು. “ಅಯ್ಯೋ, ಆ ಭಗವಂತ ಹೀಗೆ ಮಾಡಿದನಲ್ಲ; ನನಗೇ ಹೀಗೆ ಮಾಡಿದನಲ್ಲ” ಎಂದು ಗೋಳಾಡಿದರೆ ಪ್ರಯೋಜನವಿದೆಯೇ? ಜೀವನದಲ್ಲಿ ಎದುರಾಗುವ ತೊಡಕುಗಳೊಡನೆ, ಬೆಂಬಿಡದ ಸಂಕಟಗಳೊಡನೆ ಗುದ್ದಾಡಿದರೆ ಉಪಯೋಗವಿದೆಯೇ? ಇಲ್ಲವೆನ್ನುತ್ತಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು.
ಕರ್ನಾಟಕದಲ್ಲಿ ೨೦೧೬ರಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಆತ್ಮಹತ್ಯಾ ಪ್ರಕರಣಗಳನ್ನು ಗಮನಿಸಿ. ಅವರಿಬ್ಬರೂ ಹಿರಿಯ ಹುದ್ದೆಯಲ್ಲಿದ್ದರು – ಅದೂ ಪೊಲೀಸ್ ಇಲಾಖೆಯಲ್ಲಿ. ಉತ್ತಮ ಶಿಕ್ಷಣ ಹಾಗೂ ತರಬೇತಿ ಪಡೆದಿದ್ದರು. ಸರಕಾರಿ ವೃತ್ತಿಯಲ್ಲಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಸಂಸಾರ ನಡೆಸಿದ್ದರು.
ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗರ ಮೇಲೆ ಬಂದ ಆಪಾದನೆ: ಕಿಡ್ನಾಪ್ ಆಗಿದ್ದ ಯುವಕನೊಬ್ಬನ ಬಿಡುಗಡೆಗಾಗಿ ಪವನ್ ಎಂಬಾತ ಪಾವತಿಸಿದ್ದ ರೂಪಾಯಿ ಹತ್ತು ಲಕ್ಷದ ಬಗ್ಗೆ. ಆ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಪತ್ನಿ ಮತ್ತು ಮಗುವಿನೊಂದಿಗೆ ಅವರು ಧಾವಿಸಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು ಗ್ರಾಮದ ಮಾವನ ಮನೆಗೆ. ಮರುದಿನ ೭ ಜುಲಾಯಿ ೨೦೧೬ರಂದು ಬೆಳಗ್ಗೆ ಅಲ್ಲೇ ನೇಣು ಹಾಕಿಕೊಂಡು ಅವರ ಆತ್ಮಹತ್ಯೆ.
ಡಿವೈಎಸ್ಪಿಯಾಗಿ ಭಡ್ತಿ ಪಡೆದು ಬೆಂಗಳೂರಿನಿಂದ ಮಂಗಳೂರಿನ ಐಜಿ ಕಚೇರಿಗೆ ವರ್ಗವಾಗಿದ್ದ ಎಂ.ಕೆ. ಗಣಪತಿ (೫೧) ಅವರು ೭ ಜುಲಾಯಿ ೨೦೧೬ರಂದು ಮಡಿಕೇರಿಗೆ ಹೋಗಿ, ವಸತಿಗೃಹದಲ್ಲಿ ರೂಂ ಮಾಡಿದ್ದರು. ಅನಂತರ ಸ್ಥಳೀಯ ಸುದ್ದಿವಾಹಿನಿಗೆ ಹೋಗಿ, ೨೦ ನಿಮಿಷಗಳ ಸಂದರ್ಶನದಲ್ಲಿ ತನಗೆ ಕಿರುಕುಳ ನೀಡುತ್ತಿರುವ ಒಬ್ಬ ಸಚಿವರ ಮತ್ತು ಇಬ್ಬರು ಮೇಲಧಿಕಾರಿಗಳ ಹೆಸರು ಬಹಿರಂಗ ಪಡಿಸಿದ್ದರು. ಬಳಿಕ ವಸತಿಗೃಹಕ್ಕೆ ಹಿಂತಿರುಗಿ ನೇಣು ಬಿಗಿದು ಅವರ ಆತ್ಮಹತ್ಯೆ. ಬದುಕಿನಲ್ಲಿ ಬಿರುಗಾಳಿ ಎದ್ದಾಗ ಹತಾಶರಾಗದೆ, ಅವನ್ನು ಹಲ್ಲು ಕಿರಿದು ತಾಳಿಕೊಳ್ಳುವುದೇ ಸರಿಯಾದ ಪ್ರತಿಕ್ರಿಯೆ ಎಂಬುದು ಈ ಮುಕ್ತಕದ ಸಂದೇಶ.