ಯಶಸ್ಸಿಗೆ ಐದು ಸೂತ್ರಗಳು

ಯಶಸ್ಸಿಗೆ ಐದು ಸೂತ್ರಗಳು

ಯಾವ ಕೆಲಸದಲ್ಲೇ ಆಗಲಿ, ಯಶಸ್ಸು ಸಾಧಿಸಲು ಕೆಲವು ಸೂತ್ರಗಳನ್ನು ಅನುಸರಿಸ ಬೇಕಾಗುತ್ತದೆ. ಒಂದು ಯುದ್ಧದಲ್ಲಿ ಗೆಲುವು ಸಾಧಿಸಬೇಕಾದರೆ ಏನೆಲ್ಲ ಅಗತ್ಯವೆಂದು ಯೋಚಿಸಿ: ನಿಖರ ಮಾಹಿತಿ ಸಂಗ್ರಹ, ಯೋಧರ ಸನ್ನದ್ಧತೆ, ಆಯುಧ-ಪರಿಕರಗಳ ಕ್ಷಮತೆ, ಪೂರ್ವಸಿದ್ಧತೆ, ವ್ಯೂಹ ರಚನೆ, ಕಾರ್ಯತಂತ್ರಗಳು, ಕದನೋತ್ಸಾಹ, ಮುನ್ನುಗ್ಗುವಿಕೆ, ಹಿಮ್ಮೆಟ್ಟದ ಛಲ, ಯೋಜನೆಯಂತೆ ಕಾರ್ಯಾಚರಣೆ – ಇವೆಲ್ಲ ಅವಶ್ಯ, ಅಲ್ಲವೇ?
ಹಾಗೆಯೇ, ಉತ್ಪಾದನಾ ಘಟಕ, ವ್ಯಾಪಾರ ಮಳಿಗೆ, ಸಂಸ್ಥೆ ಅಥವಾ ಸಂಘಟನೆಯ ಮುನ್ನಡೆ ಹಾಗೂ ಯಶಸ್ಸಿಗೆ ಹತ್ತಾರು ಸೂತ್ರಗಳನ್ನು ಪಟ್ಟಿ ಮಾಡಬಹುದು. ಅವುಗಳಲ್ಲಿ ಮುಖ್ಯವಾದ ಐದು ಸೂತ್ರಗಳ ಬಗ್ಗೆ ಪುಟ್ಟ ವಿವರಣೆ ನೀಡುವುದು ಈ ಲೇಖನದ ಉದ್ದೇಶ.

1) ನಮ್ಮ ಗುರಿಯ ಬಗ್ಗೆ ಸ್ಪಷ್ಟ ಅರಿವು.
ಒಂದು ಘಟಕ ಅಥವಾ ಸಂಸ್ಥೆ ಸ್ಥಾಪಿಸುವಾಗ “ಇದು ಯಾತಕ್ಕಾಗಿ?” ಎಂಬುದರ ಬಗ್ಗೆ ಸ್ಪಷ್ಟತೆ ಬೇಕು. ಇಲ್ಲವಾದರೆ ಗೊಂದಲ ಮೂಡುತ್ತದೆ, ಗುರಿ ಸಾಧನೆಗೆ ತೊಡಕಾಗುತ್ತದೆ. ಕಿಂಗ್ಫಿಷರ್ ಏರ್ಲೈನ್ಸಿನ ಉದ್ದೇಶ ಏನಾಗಿತ್ತು? ಅತ್ಯುತ್ತಮ ವಾಯುಯಾನ ಸೇವೆ ಒದಗಿಸುವುದು. “ಗ್ರಾಹಕರನ್ನು ನಮ್ಮ ಮನೆಯ ಅತಿಥಿಯಂತೆ ಸತ್ಕರಿಸುತ್ತೇವೆ” ಎಂದು ಪ್ರತಿಯೊಂದು ವಿಮಾನ ಹಾರಾಟದಲ್ಲಿಯೂ ಅದರ ಮಾಲೀಕರಾದ ವಿಜಯ ಮಲ್ಯರು ಘೋಷಿಸುತ್ತಿದ್ದರು. ಗ್ರಾಹಕರಿಗೆ ಅತ್ಯುತ್ತಮ ಯಾನದ ಅನುಭವ ಒದಗಿಸಬೇಕಾದರೆ, ಹಲವಾರು ಬಾಬ್ತುಗಳಿಗೆ ಖರ್ಚು ಮಾಡಲೇ ಬೇಕು. ಆದರೆ, ಡೆಕ್ಕನ್ ಏರ್ವೇಸ್ ಖರೀದಿಸಿದಾಗ ಸಮಸ್ಯೆ ಶುರುವಾಯಿತು. ಯಾಕೆಂದರೆ, ಡೆಕ್ಕನ್ ಏರ್ವೇಸ್ನ ಉದ್ದೇಶ ಕಡಿಮೆ ವೆಚ್ಚದಲ್ಲಿ ವಿಮಾನ ಯಾನಸೇವೆ ಒದಗಿಸುವುದು. ಹೀಗೆ ಉದ್ದೇಶಗಳ ತಾಕಲಾಟದಿಂದಾಗಿ, ಕಿಂಗ್ಫಿಷರ್ ಏರ್ಲೈನ್ಸ್ ಪತನ. ಈಗ ಬ್ಯಾಂಕುಗಳಿಗೆ ಅದರಿಂದ ರೂ.7,000 ಕೋಟಿ ಸಾಲ ಬಾಕಿ.

2)ಮಾಡಬೇಕಾದ್ದನ್ನು ಮಾತ್ರ ಮಾಡುವುದು.
ಯಶಸ್ಸು ಸಾಧಿಸಬೇಕಾದರೆ, ಅದಕ್ಕಾಗಿ ಮಾಡಬೇಕಾದ್ದನ್ನೇ ಮಾಡಬೇಕು ವಿನಃ ಮಾಡಬಾರದ್ದಕ್ಕೆ ಕೈಹಾಕಬಾರದು. ಮಹಾತ್ಮಾ ಗಾಂಧಿಯವರು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೇಗೆ ಮುನ್ನಡೆಸಿದರು ಎಂಬುದನ್ನು ಅಧ್ಯಯನ ಮಾಡಿದರೆ ನಮಗೆ ಈ ಸೂತ್ರ ಚೆನ್ನಾಗಿ ಅರ್ಥವಾಗುತ್ತದೆ. ಅವರು ಮಾಡಬೇಕಾದ್ದನ್ನೇ ಮಾಡುತ್ತ ಹೋದರು. ಹೋರಾಟಕ್ಕಾಗಿ ಅವರು ಆಯ್ಕೆ ಮಾಡಿದ್ದು ಅಹಿಂಸೆಯ ಹಾದಿ. ಅದರಲ್ಲೇ ಮುಂದೆ ಸಾಗಿದರು. ತಮ್ಮ ಅನುಯಾಯಿಗಳು ಹಿಂಸೆಯ ಹಾದಿಯಲ್ಲಿ ಹೆಜ್ಜೆಯುಟ್ಟಾಗ ಖಂಡಿಸಿದರು. ಮಾತ್ರವಲ್ಲ, ಅನುಯಾಯಿಗಳ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಉಪವಾಸ ಮಾಡಿ ತನ್ನನ್ನೇ ದಂಡಿಸಿಕೊಂಡರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಗಳಿಸಿ ಕೊಟ್ಟ ನಂತರ, ತನಗೆ ಅಧಿಕಾರ ಬೇಡ ಎಂದು ಹಿಂದೆ ಸರಿದರು. ಸಮಾಜದ ಉದ್ಧಾರದ ಕೆಲಸಗಳಲ್ಲಿ ತೊಡಗಿಸಿಕೊಂಡರು. ಮಾಡಬೇಕಾದ್ದನ್ನೇ ಮಾಡುವುದಕ್ಕೆ ಅವರ ಜೀವನವೇ ಮಾದರಿ.

3)ಕಾರ್ಯದಕ್ಷತೆ
ಯಶಸ್ಸು ಬೇಕಿದ್ದರೆ, ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಕೆಲಸ ಯಾವುದೇ ಇರಲಿ, ಶ್ರದ್ಧೆಯಿಂದ, ದಕ್ಷತೆಯಿಂದ ಮಾಡಿದರೆ ಅಚ್ಚುಕಟ್ಟಾಗಿರುತ್ತದೆ. ಕೊಂಕಣ ರೈಲ್ವೇ ಮತ್ತು ಢೆಲ್ಲಿ ಮೆಟ್ರೋ ರೈಲು – ಇವು ಇಂದು ಇಂಜಿನಿಯರಿಂಗ್ ಕಾರ್ಯದಕ್ಷತೆಗೆ ಇಡೀ ಜಗತ್ತಿನಲ್ಲೇ ಮಾದರಿಯಾಗಿವೆ. ಈ ಎರಡೂ ಯೋಜನೆಗಳನ್ನು ಕಾರ್ಯಗತಗೊಳಿಸಿದವರು ಶ್ರೀ ಶ್ರೀಧರನ್. ಅವರ ಕಾರ್ಯದಕ್ಷತೆಯಿಂದಾಗಿ ಈ ಯೋಜನೆಗಳಲ್ಲಿ ಎದುರಾದ ಎಲ್ಲ ಎಡರುತೊಡರುಗಳನ್ನು ನಿವಾರಿಸಿ, ಯೋಜಿತ ಅವಧಿಗಿಂತ ಮುಂಚೆಯೇ ಅವನ್ನು ಪೂರ್ತಿ ಮಾಡಲು ಸಾಧ್ಯವಾಯಿತು. ಅವರ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಗಳು ಯಶಸ್ಸಿಗಾಗಿ ಹಂಬಲಿಸುವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಾದ ಗುಣಗಳು. ಮಂಗಳೂರಿನಲ್ಲಿ ಅರ್ಧ ಕಿಲೋಮೀಟರಿನ ಒಂದು ಮೇಲ್ ಸೇತುವೆ ಕಟ್ಟಿ ಮುಗಿಸಲು ಎಂಟು ವರುಷ ತಗಲಿದೆ. ಗೋವಾದಲ್ಲಿ ಕಟ್ಟಿದ ಒಂದು ದೊಡ್ಡ ಸೇತುವೆ ಕೆಲವೇ ವರುಷಗಳಲ್ಲಿ ಮುರಿದು ಬಿದ್ದಿದೆ. ಇವನ್ನು ಗಮನಿಸಿದಾಗ ಶ್ರೀಧರನ್ ಅವರ ಕಾರ್ಯದಕ್ಷತೆಯ ಮೌಲ್ಯ ನಮಗೆ ಮನದಟ್ಟಾಗುತ್ತದೆ.

4)ಆದ್ಯತೆಯ ನಿರ್ಧಾರ
ಯಶ ಸಾಧನೆಗಾಗಿ ಮಾಡಬೇಕಾದ ಕೆಲಸಗಳು ಹತ್ತು ಹಲವು. ಅವುಗಳಲ್ಲಿ ಮೊದಲು ಮಾಡಬೇಕಾದ್ದು ಯಾವುದೆಂದು ಆದ್ಯತಾ ಪಟ್ಟಿ ನಿರ್ಧರಿಸುವುದು ಅತ್ಯಗತ್ಯ. ಮನೆ ಕಟ್ಟಬೇಕಾದರೆ ಅಡಿಪಾಯ ಮೊದಲು ಕಟ್ಟಬೇಕಲ್ಲವೇ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಪ್ರಪ್ರಥಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ 15 ಆಗಸ್ಟ್ 2014ರಂದು ಮಾಡಿದ ಮುಖ್ಯ ಘೋಷಣೆ ಏನು? “ಮುಂದಿನ ಸ್ವಾತಂತ್ರ್ಯ ದಿನದಂದು ನಮ್ಮ ದೇಶದಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಒಂದೇ ಒಂದು ಶಾಲೆಯೂ ಇರಬಾರದು”. ಭಾರತದ ಉದ್ದಗಲದಲ್ಲಿ ಎಂಟೂವರೆ ಲಕ್ಷ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ, 15 ಆಗಸ್ಟ್ 2015ರಲ್ಲಿ ಆ ಗುರಿ ಸಾಧಿಸಲಾಯಿತು. ಸ್ವಾತಂತ್ರ್ಯಾ ನಂತರದ 67 ವರುಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಒಂದೇ ವರುಷದಲ್ಲಿ ಸಾಧಿಸಿದ್ದು ವಿಶೇಷ.

5)ನಿಮ್ಮ ಜೊತೆಗಾರರಿಗೆ ಕನಸುಗಳನ್ನು ಕಟ್ಟಿ ಕೊಡಿ.
ಯಾಕೆಂದರೆ ಕನಸುಗಳು ವ್ಯಕ್ತಿಗಳನ್ನು ಸಾಧನೆಯತ್ತ ಮುನ್ನುಗ್ಗಿಸುತ್ತವೆ. ಇತ್ತೀಚೆಗೆ ನಮ್ಮನ್ನಗಲಿದ ಜನಪ್ರಿಯ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕನಸುಗಳ ಬಗ್ಗೆ ಹೇಳಿದ ಮಾತು ನಮ್ಮ ದೇಶದಲ್ಲೀಗ ಮನೆಮಾತು:   “ನಿಮಗೆ ನಿದ್ದೆಯಲ್ಲಿ ಕಾಣುವುದು ಕನಸುಗಳಲ್ಲ. ನಿಮಗೆ ನಿದ್ದೆ ಮಾಡಲು ಬಿಡದಿರುವ ಸಂಗತಿಗಳೇ ಕನಸುಗಳು.” ಮೇ 2014ರಲ್ಲಿ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರಿಗೊಂದು ಕನಸಿತ್ತು: ಭಾರತದ ಪ್ರತಿಯೊಂದು ಕುಟುಂಬದಲ್ಲಿ ಕನಿಷ್ಠ ಒಬ್ಬರಾದರೂ ಒಂದು ಬ್ಯಾಂಕ್ ಖಾತೆ ಹೊಂದಿರಬೇಕೆಂಬ ಕನಸು. ಅದರ ಅಗಾಧತೆ ಯಾರನ್ನೂ ಅಧೀರರಾಗಿಸುವಂತಿತ್ತು. ಯಾಕೆಂದರೆ ಅದು 15 ಕೋಟಿ ಹೊಸ ಬ್ಯಾಂಕ್ ಅಕೌಂಟುಗಳನ್ನು ತೆರೆಯುವ ಗುರಿ: 2014ರ ಸ್ವಾತಂತ್ರ್ಯ ದಿನದಿಂದ ತೊಡಗಿ, 2015ರ ಪ್ರಜಾಪ್ರಭುತ್ವ ದಿನದ ವರೆಗಿನ ಕೇವಲ ಐದು ತಿಂಗಳ ಅವಧಿಯಲ್ಲಿ. “ಇದು ಸಾಧ್ಯವೇ?” ಎಂದು ಪ್ರಶ್ನಿಸಿದವರಿಗೆ ಉತ್ತರವಾಗಿ ಅವರು ಘೋಷಿಸಿದ್ದು “ಪ್ರಧಾನಮಂತ್ರಿ ಜನಧನ ಯೋಜನೆ”. ಅದರ ಅನುಸಾರ, ಕೇವಲ ಐದು ತಿಂಗಳಲ್ಲಿ 17.5 ಕೋಟಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆದ ಸಾಧನೆ, ಕನಸುಗಳ ತಾಕತ್ತಿನ ಪುರಾವೆ.

ಈ ಐದು ಸೂತ್ರಗಳು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಖಂಡಿತವಾಗಿ ಸಹಕಾರಿ. ಇವನ್ನು ಕೃತಿಗಿಳಿಸುವಾಗ, ಆಯಾ ಸನ್ನಿವೇಶಕ್ಕೆ ಅನುಗುಣವಾಗಿ ನಾಯಕನಾದವನು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ನೆನಪಿರಲಿ: ಕಟ್ಟಿಕೊಟ್ಟ ಬುತ್ತಿ ಮುಗಿದೇ ಮುಗಿಯುತ್ತದೆ. ನಿಮ್ಮ ಬದುಕಿನ ಪಯಣದಲ್ಲಿ, ಪ್ರತಿಯೊಂದು ಅನುಭವದಿಂದ ಕಲಿಯುತ್ತ, ತಪ್ಪುಗಳನ್ನು ತಿದ್ದಿಕೊಳ್ಳುತ್ತ ಮುನ್ನಡಿ ಇಡುತ್ತಿದ್ದರೆ, ಯಶಸ್ಸು ನಿಮ್ಮದಾಗುತ್ತದೆ. ಆಗ, ಯಶಸ್ಸಿನ ಅಮಲು ತಲೆಗೇರದಂತೆ ಸಮತೋಲನ ಕಾಯ್ದುಕೊಳ್ಳುವುದು ಮುಂದಿನ ಯಶಸ್ಸುಗಳಿಗೆ ರಹದಾರಿ.