ದ್ರಾವಿಡ ನುಡಿಗಳಿಗೆ ಬೇಕು ರೋಮಿ ಲಿಪಿ

ದ್ರಾವಿಡ ನುಡಿಗಳಿಗೆ ಬೇಕು ರೋಮಿ ಲಿಪಿ

 
ಒದುಗರಿಗೆ ನಮಸ್ಕಾರಗಳು. ದ್ರಾವಿಡ ನುಡಿಗಳೆಂದಾಗ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ನುಡಿಗಳು ನೆನಪಿಗೆ ಬರುವುವು. ಇವಲ್ಲದೇ ತುಳು, ಗೊಂಡಿ, ಬ್ರಾಹುಇ ಮುಂತಾದ ನುಡಿಗಳು ಈ ಗುಂಪಿಗೆ ಸೇರುವುವು. ಈ ನುಡಿಗಳಿಗೆ ತಮ್ಮದೇ ಆದ ವ್ಯಾಕರಣವು ಇರುವುದ್ರಲ್ಲದೆ ಈ ಎಲ್ಲಾ ನುಡಿಗಳ ವ್ಯಾಕರಣಗಳು ಹೆಚ್ಚು ಕಡಿಮೆ ಒಂದೇ ಬಗೆಯಾದವೆನ್ನಬಹುದು. ಆದರೆ ಲಿಪಿಯ ಮಾತು ಬಂದಾಗ ಒಂದೇ ಲಿಪಿಯಿಲ್ಲದೇ ನಾಲ್ಕೋ ಐದೋ ಲಿಪಿಗಳಲ್ಲಿ ಬರೆಯಲ್ಪಡುತ್ತವೆ. ಈ ಲಿಪಿಗಳು ನುಡಿಯ ಸೊಬಗನ್ನು ಹೆಚ್ಚಿಸಿವೆ. ಆದಕಾರಣ ಇವುಗಳು ಇರಬೇಕು.
 
ಇತ್ತೀಚಿನ ದಿನಗಳಲ್ಲಿ ತೆಂಕಣ ಭಾರತದಲ್ಲಿ ವಲಸಿಗರು ಹೆಚ್ಚಾಗುತ್ತಿದ್ದು, ನೆರೆಹೊರೆಯ ರಾಜ್ಯಗಳಿಂದ ಬಂದಿರುವವರಲ್ಲಿ ಕನ್ನಡವನ್ನು ಕಲಿಯುವ ಹಂಬಲವಿರುವುದು ಕಾಣುತ್ತಿದೆ. ಇದೇ ಬಗೆಯಲ್ಲಿ ಕರ್ನಾಟಕದಿಂದ ನೆರರಾಜ್ಯಗಳಿಗೆ ಹೋಗಿರುವವರಿಗೆ ಆಯಾ ರಾಜ್ಯಗಳ ನುಡಿಗಳನ್ನು ಕಲಿಯಬೇಕೆನಿಸಬಹುದು. ನುಡಿಯನ್ನು ಕಲಿಯುವುದರ ಜೊತೆಗೆ ಲಿಪಿಯನ್ನು ಕಲಿಯುವ ಭಾರವು ಕಲಿಯುವವನ ಮೇಲಿರುತ್ತದೆ. ಹೀಗಾಗಿ ಎಲ್ಲರಿಗೂ ಗೊತ್ತಿರುವಂತಹ ಒಂದು ಲಿಪಿಯು ಇದ್ದರೆ ಒಳಿತು. ಇದಕ್ಕೋಸ್ಕರ ರೋಮಿ ಲಿಪಿಯು ಎಲ್ಲಕ್ಕಿಂತಲೂ ಒಳ್ಳೆಯದಾದುದು ಎಂಬುದು ನನ್ನ ಅನಿಸಿಕೆಯು.
 
ರೋಮಿ ಲಿಪಿಯೇ ಏಕೆ ಎನ್ನುವುದಕ್ಕೆ ಕೆಲ ಕಾರಣಗಳನ್ನು ಕೆಳಗೆ ಕೊಟ್ಟಿರುವೆನು:
 
1. ರೋಮಿ ಲಿಪಿಯಲ್ಲಿ ಇಂಗ್ಲೀಶ್ ನುಡಿಯನ್ನು ಬರೆಯಲಾಗುತ್ತದೆ. ಇಂಗ್ಲೀಶ್ ನುಡಿಯು ಎಲ್ಲೆಲ್ಲೂ ಹರಡಿದ್ದು, ಓದಿಗೂ, ಕೆಲಸಕ್ಕೂ ಬೇಕಾದುದಲ್ಲದೇ ಅಂತರ್ಜಾಲದಲ್ಲಿಯೂ ಇದರ ಬಳಕೆಯು ಎಲ್ಲಾ ನುಡಿಗಳ ಪೈಕಿ ಹೆಚ್ಚಿನದ್ದು ಆಗಿದೆ. ಇಂಗ್ಲೀಶ್ ಅಲ್ಲದೇ ಬೇರೆ ನುಡಿಗಳಿಗೆ ಈ ಲಿಪಿಯನ್ನು ಬಳಸುವುದುಂಟು.
 
2. ರೋಮಿ ಲಿಪಿಯ ಕೀಲಿಮಣೆಗಳು ಸರಳವಾಗಿ ಸಿಗಬಲ್ಲವು.
 
3. ರೋಮಿ ಲಿಪಿಯಲ್ಲಿ ಸ್ವರ ಹಾಗೂ ವ್ಯಂಜನಗಳಿಗೆ ಬೇರೆ ಅಕ್ಷರಗಳಿದ್ದು, ಅಡಿ ಅಕ್ಷರಗಳ ಇಲ್ಲವೇ ಒತ್ತಕ್ಷರಗಳ ಬೇಕುಗಳಿರವು.
 
4. ರೋಮಿ ಲಿಪಿಗಳಿಗೆ ಅನೇಕ ಬಗೆಯ ಸಾಫ್ಟ್‌ವೇರ್ ಗಳು ಸಿಗಬಲ್ಲವು. ಇದರಿಂದ ಅಕ್ಷರಗಳನ್ನು ಇಲ್ಲವೇ ಪದಗಳನ್ನು ಸರಿಪಡಿಸುವುದು, ತಿದ್ದುವುದು, ನಕಲಿಗೊಳಿಸುವುದು, ತೆಗೆಯುವುದು ಮುಂತಾದವುಗಳನ್ನು ಅಚ್ಚುಕಟ್ಟಾಗಿ ಮಾಡಬಹುದು.
 
5. ನುಡಿಮಾರಿಕೆಗೂ ಇದು ನೆರವನ್ನು ಕೊಡುವಂತಹದು.
 
6. ದ್ರಾವಿಡ ನುಡಿಗಳಲ್ಲಿ ಇರದ, ಇಂಗ್ಲೀಶ್ ನುಡಿಯಲ್ಲಿನ ಕೆಲ ಸದ್ದುಗಳಿಗೆ ಬೇಕಾಗುವ ಅಕ್ಷರಗಳು ರೋಮಿ ಲಿಪಿಯಲ್ಲಿವೆ.
 
ಇವಲ್ಲದೇ ಇಂಗ್ಲೀಶ್ ಲಿಪಿಯಲ್ಲಿ ಕನ್ನಡ ಮುಂತಾದ ಭಾರತೀಯ ನುಡಿಗಳನ್ನು ಮೊಬೈಲ್ ಇಲ್ಲವೇ ಎಣ್ಣುಕ (ಕಂಪ್ಯೂಟರ್)ಗಳಲ್ಲಿ ಬಳಸುವುದನ್ನು ಈಗಾಗಲೇ ನೀವು ನೋಡಿರಬಹುದು. ಆದರೆ ಎಲ್ಲರೂ ಒಂದೇ ಬಗೆಯಲ್ಲಿ ಬರೆಯುವುದಿಲ್ಲ. ಇದಕ್ಕೆ ಕಾರಣಗಳು ಇಂತಿವೆ:
 
1. ರೋಮಿ ಲಿಪಿಯಲ್ಲಿ 26 ಅಕ್ಷರಗಳಿವೆ. ಆದರೆ ಕನ್ನಡ ಮುಂತಾದ ನುಡಿಗಳಲ್ಲಿ ಅಕ್ಷರಗಳ (ಸದ್ದುಗಳ) ಎಣಿಕೆ ಜಾಸ್ತಿ ಇದೆ.
 
2. ರೋಮಿ ಲಿಪಿಯಲ್ಲಿ ಯಾವ ಅಕ್ಷರವನ್ನು ಯಾವ ಸದ್ದಿಗೆ ಬಳಸಬೇಕೆಂಬುದು ಕೆಲವೊಮ್ಮೆ ಗೊಂದಲ ಮಾಡುತ್ತದೆ. ಎತ್ತುಗೆಗಾಗಿ 'c' ಅಕ್ಷರವು 'ಕ' ಸದ್ದು ಮಾಡಬಹುದು ಇಲ್ಲವೇ 'ಸ' ಸದ್ದು ಮಾಡಬಹುದು.
 
3. 'ಣ' ಮುಂತಾದ ಸದ್ದುಗಳಿಗೆ ಯಾವ ಅಕ್ಷರಗಳು ಬರಬೇಕೆಂಬುದರ ಬಗ್ಗೆ ಗೊಂದಲವಿರಬಹುದು.
 
4. ಅನುಸ್ವಾರ, ವಿಸರ್ಗ, ಅನುನಾಸಿಕಗಳಿಗೆ ಯಾವ ಅಕ್ಷರಗಳಿರಬೇಕೆಂಬುದು ಗೊಂದಲವಾಗಬಹುದು.
 
ಈ ಬಗ್ಗೆ ಒಂದು ಬಗೆಯಿಲ್ಲ. ಕೆಲವರು 'ಕನ್ನಡ'ವನ್ನು "kannada"ಎಂದೂ, ಇನ್ನೂ ಕೆಲವರು "kannaDa" ಎಂದೂ ಬರೆಯುತ್ತಾರೆ. ಕೊಂಕಣಿ ನುಡಿಯಲ್ಲಿ ರೋಮಿ ಲಿಪಿಯಯನ್ನು ಗೋವದಲ್ಲಿ ಕೆಲವರು ಬಳಸುವುದುಂಟು. ಈ ಲಿಪಿಯಲ್ಲಿ ಬರೆಯುವುದಾದರೆ "kon'nodda" ಎಂದಾಗುತ್ತದೆ.
 
ಒಂದು ಬಗೆ ಇರುವುದರಿಂದ ಈ ಗೊಂದಲಗಳು ಅಳಿದು ಹೋಗುವುವು.
 
ರೋಮಿ ಲಿಪಿಯ ಅಗತ್ಯಕ್ಕೆ ಇನ್ನೊಂದು ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ತೆಂಕಣ ಭಾರತೀಯರು ಹೊರನಾಡುಗಳಿಗೆ ವಲಸೆ ಹೋಗುವುದು ಹೆಚ್ಚಾಗಿದೆ. ಹೀಗೆ ಹೋದವರ ಮಕ್ಕಳು ತಾಯಿ ನುಡಿಯನ್ನು ಬಳಸುವುದು ಕಮ್ಮಿಯಾಗುತ್ತಿದೆ. ಇದಕ್ಕೆ ಲಿಪಿ ಒಂದು ಮುಖ್ಯ ಕಾರಣವೆನ್ನಬಹುದು. ರೋಮಿ ಲಿಪಿ ಇದ್ದರೆ, ನುಡಿ ಗೊತ್ತಿದ್ದರೆ ಸಾಕು. ಓದು ಬರಹ ತಾನಾಗಿಯೇ ಬರುವುದು.
 
ಜೊತೆಗೆ ಬರಹಗಾರರಿಗೂ ತಮ್ಮ ಬರಹಗಳನ್ನು ಹೊರನಾಡಿನಲ್ಲಿ ಮಾರುವುದರಲ್ಲಿ ಇದು ನೆರವನ್ನು ಕೊಡಬಲ್ಲದು.
 
ಹೀಗಿರುವಾಗ ದ್ರಾವಿಡ ನುಡಿಗಳ ಒಲವಿಗಳು ಒಗ್ಗೂಡಿ ಒಂದು ಬಗೆಯ ಲಿಪಿ ಬಗೆಯನ್ನು ಮುಂತರಬೇಕೆಂಬುದು ನನ್ನ ನಿಲುವಾಗಿದೆ.
 
ದ್ರಾವಿಡ ನುಡಿಗಳ ರೋಮೀಕರಣದ ಕೆಲಸವು ಆಗಲಿ. ದ್ರಾವಿಡ ನುಡಿಗಳು ಉಳಿಯಲಿ, ಬೆಳೆಯಲಿ.