ಭಾಗ - ೪ ಭೀಷ್ಮ ಯುಧಿಷ್ಠಿರ ಸಂವಾದ: ದೀರ್ಘದರ್ಶಿ, ಪ್ರಾಪ್ತಕಾಲಜ್ಞ ಮತ್ತು ದೀರ್ಘಸೂತ್ರಿಗಳ ವೃತ್ತಾಂತ

ಭಾಗ - ೪ ಭೀಷ್ಮ ಯುಧಿಷ್ಠಿರ ಸಂವಾದ: ದೀರ್ಘದರ್ಶಿ, ಪ್ರಾಪ್ತಕಾಲಜ್ಞ ಮತ್ತು ದೀರ್ಘಸೂತ್ರಿಗಳ ವೃತ್ತಾಂತ

        ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುಧಿಷ್ಠಿರನಿಗೆ ಸಲಹೆ ಕೊಡುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
       ಯುಧಿಷ್ಠಿರನು ಹೀಗೆಂದು ಕೇಳಿದನು, "ಪಿತಾಮಹಾ! ಒಂದು ಪ್ರಶ್ನೆ. ಮುಂದೊದಗಬಹುದಾದ ಸಂಕಟ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು? ಯಾರ ಸಹಾಯದಿಂದ ನಾನು ಆಪತ್ತುಗಳಿಂದ ರಕ್ಷಿಸಲ್ಪಟ್ಟು ದಡ ಸೇರಿ ಕ್ಷೇಮವಾಗಿರಬಲ್ಲೆ? ಯಾರನ್ನು ನನ್ನ ಸಹಾಯಕರನ್ನಾಗಿ ನಿಯಮಿಸಿಕೊಂಡರೆ, ನಾನು ಮತ್ತು ನನ್ನ ಸಹಾಯಕರು ದೇಶವು ಸುರಕ್ಷಿತವಾಗಿರಲು ಕೈಗೊಳ್ಳುವ ಕೃಷಿಯು ಸತ್ಫಲಿತವನ್ನೀಯಬಲ್ಲುದು?"
       ಬೀಷ್ಮನು ಹೀಗೆ ಉತ್ತರವನ್ನಿತ್ತನು. "ಧರ್ಮಜ್ಞನೇ! ಸಂಕಟಸ್ಥಿತಿಯು ಒದಗಿದಾಗ ಮತ್ತು ಸಮಸ್ಯೆಗಳು ದಶದಿಕ್ಕುಗಳಿಂದಲೂ ಆವರಿಸಿದಾಗ ಸಾಕಷ್ಟು ಮುಂಚಿತವಾಗಿಯೇ ಜಾಗೃತರಾಗಿ ದೇಶವನ್ನೂ ಅದರ ಮೂಲಕ ತನ್ನನ್ನೂ ರಕ್ಷಿಸಿಕೊಳ್ಳಬಲ್ಲವನನ್ನೇ ’ದೀರ್ಘದರ್ಶಿ’ ಎನ್ನುತ್ತಾರೆ. ಆ ಸಮಯದಲ್ಲಿ ಏನೋ ಒಂದು ಉಪಾಯ ಮಾಡಿ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರೋಪಾಯಗಳನ್ನು ಏರ್ಪಡಿಸಿಕೊಳ್ಳುವವನನ್ನು ’ಪ್ರಾಪ್ತಕಾಲಜ್ಞ’ನೆನ್ನುತ್ತಾರೆ. ಈ ವಿಧವಾದ ವ್ಯಕ್ತಿಗಳಿಬ್ಬರೂ ಅದು ಹೇಗೋ ಸಮಸ್ಯೆಗಳಿಂದ ನಮ್ಮನ್ನು ಪಾರುಮಾಡಬಲ್ಲರೇನೋ ಆದರೆ ಮತ್ತೊಂದು ವಿಧವಾದ ವ್ಯಕ್ತಿಯೊಬ್ಬನಿರುತ್ತಾನೆ. ಅವನನ್ನು”ದೀರ್ಘಸೂತ್ರಿ’ ಎಂದು ಹೇಳುತ್ತಾರೆ. ಪ್ರತಿಯೊಂದು ಕೆಲಸದಲ್ಲಿಯೂ ಆಲಸ್ಯತನದಿಂದಿರುವುದೇ ಅವನ ಲಕ್ಷಣ. ಆಪತ್ತಿನ ಸಮಯದಲ್ಲಿ ಸೂಕ್ತವಾದ ಉಪಾಯವನ್ನು ಆಲೋಚಿಸುವುದನ್ನು ಬಿಟ್ಟು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸವನ್ನು ಮಾಡುತ್ತಾನೆ ದೀರ್ಘಸೂತ್ರಿಯಾದವನು. ಇದಕ್ಕೆ ದೃಷ್ಟಾಂತವಾಗಿರುವ ಒಂದು ಕಥೆಯನ್ನು ನಿನಗೆ ಹೇಳುತ್ತೇನೆ ಕೇಳು" ಎಂಬುದಾಗಿ ಧರ್ಮನಂದನನಿಗೆ ಭೀಷ್ಮನು ಈ ಕಥೆಯನ್ನು ಹೇಳಿದನು.
        "ಒಂದು ಕೆರೆಯಲ್ಲಿ ಬಹಳಷ್ಟು ಮೀನುಗಳಿದ್ದವು. ಆ ಕೆರೆಯಲ್ಲಿ ಸಾಕಷ್ಟು ನೀರು ಇರಲಿಲ್ಲ. ಆ ಕೆರೆಯಲ್ಲಿ ಮೂರು ಮೀನುಗಳು ಒಂದಕ್ಕೊಂದು ಸ್ನೇಹಿತರಾಗಿದ್ದವು. ಮೊದಲನೆಯದರ ಹೆಸರು ದೀರ್ಘದರ್ಶಿ, ಎರಡನೆಯದರ ಹೆಸರು ಪ್ರಾಪ್ತಕಾಲಜ್ಞ ಮತ್ತು ಮೂರನೆಯದರ ಹೆಸರು ದೀರ್ಘಸೂತ್ರಿ."
        "ಬೇಸಿಗೆ ಕಾಲವು ಆಸನ್ನವಾಗಿದೆ. ಕೆರೆಯು ಒಣಗಿ ಹೋಗುತ್ತಿದೆ. ಮಿತ್ರರೇ, ನಾವು ಮುಂಚಿತವಾಗಿ ಏನೋ ಒಂದು ಉಪಾಯವನ್ನು ಆಲೋಚಿಸಬೇಕು, ಇಲ್ಲದಿದ್ದರೆ ನಾವು ತೊಂದರೆಗೊಳಗಾಗುತ್ತೇವೆ" ಎಂದು ದೀರ್ಘದರ್ಶಿಯು ಹೇಳಿತು. ಅದಕ್ಕೆ ಪ್ರಾಪ್ತಕಾಲಜ್ಞನು ನಕ್ಕು ಹೀಗೆ ಉತ್ತರಿಸಿತು - "ಗೆಳೆಯಾ! ಏತಕ್ಕಾಗಿ ಇಷ್ಟೊಂದು ಭಯ? ಸಮಸ್ಯೆ ಎದುರಾದಾಗ ಪರಿಷ್ಕಾರವನ್ನು ಕಂಡುಕೊಳ್ಳೋಣ. ಈಗಲೇ ಅದಕ್ಕೇಕೆ ಇಷ್ಟು ಆತುರ?’ ಇನ್ನು ದೀರ್ಘಸೂತ್ರಿಯು ಹೀಗೆ ಹೇಳಿತು - ನಿನಗಿರುವ ಅನುಮಾನವಾದರೂ ಏನು? ಇಲ್ಲಿ ಇಷ್ಟೊಂದು ನೀರು ಸಮುದ್ರದ ಹಾಗೆ ಪುಷ್ಕಲವಾಗಿ ಇರುವಾಗ ನಮಗೆ ಭಯವಾದರೂ ಏತಕ್ಕೆ?"
       ದೀರ್ಘದರ್ಶಿಯು ವಿಷಯವನ್ನು ಗ್ರಹಿಸಿತು. ಇವರೊಂದಿಗಿದ್ದರೆ ನನ್ನ ಕಥೆ ಮುಗಿದಂತೆಯೇ ಎಂದು ಅದು  ಭಾವಿಸಿತು. ಇಷ್ಟು ದಿವಸಗಳವರೆಗೆ ಈ ಕೆರೆಯನ್ನು ನಂಬಿಕೊಂಡಿದ್ದೆ. ಈಗ ಈ ಕೆರೆಯು ಒಣಗಿ ಹೋಗುತ್ತಿರುವುದರಿಂದ ಇಲ್ಲಿದ್ದು ಲಾಭವಿಲ್ಲವೆಂದುಕೊಂಡು ಅದು ಆ ಕರೆಯಿಂದ ಸಣ್ಣದಾಗಿ ಹರಿಯುತ್ತಿದ್ದ ಕಾಲುವೆಯ ಪ್ರವಾಹದ ಮೂಲಕ ಈಜುತ್ತಾ ಮತ್ತೊಂದು ಕೆರೆಯನ್ನು ಸೇರಿಕೊಂಡಿತು. ಆದರೆ ಅದರ ಮಿತ್ರರಿಬ್ಬರೂ ಅದೇ ಕೆರೆಯಲ್ಲಿ ಉಳಿದುಕೊಂಡರು.
       ಕೆಲವು ದಿನಗಳು ಕಳೆದ ನಂತರ ಬೆಸ್ತರು ಅಲ್ಲಿಗೆ ಬಂದೇ ಬಂದರು. ಮೀನುಗಳನ್ನು ಹಿಡಿಯಲು ಅವರು ದೊಡ್ಡ ಬಲೆಯನ್ನು ಬೀಸಿದರು. ಇದನ್ನು ಪ್ರಾಪ್ತಕಾಲಜ್ಞನು ಗಮನಿಸಿದನು. ಅವನು ಬಲೆಯಲ್ಲಿ ಸಿಲುಕದೆ ಚಟಕ್ಕನೆ ಪಕ್ಕಕ್ಕೆ ಎಗರಿ ತಪ್ಪಿಸಿಕೊಂಡ. ಆದರೆ ಮಾರ್ಗವೇನು? ಅದು ಬಲೆಯ ದಾರಗಳನ್ನು ಹೊರಗಿನಿಂದ ಬಂದು ಹಿಡಿದುಕೊಂಡಿತು. ಬೆಸ್ತರು ತಮ್ಮ ಬಲೆಗಳನ್ನು ಝಾಡಿಸಿ ಮತ್ತೊಂದು ಕೆರೆಯೊಳಗೆ ಅದನ್ನು ಬೀಸಿದರು. ಬಲೆಯನ್ನು ಹೊರಗಿನಿಂದ ಕಚ್ಚಿ ಹಿಡಿದುಕೊಂಡಿದ್ದ ಪ್ರಾಪ್ತಕಾಲಜ್ಞವು ಇದೇ ಸೂಕ್ತ ಸಮಯವೆಂದರಿತು ನೀರಿನೊಳಗೆ ಜಾರಿಕೊಂಡಿತು.             "ದಮ್ಮಯ್ಯ! ಪ್ರಾಣಾಪಾಯದಿಂದ ಅದು ಹೇಗೋ ತಪ್ಪಿಸಿಕೊಂಡೆ. ದೀರ್ಘದರ್ಶಿ ಮುಂದಾಲೋಚನೆಯಿಂದ ಒಳ್ಳೆಯ ಕೆಲಸವನ್ನೇ ಮಾಡಿದ! ಎಂದು ಮನಸ್ಸಿನಲ್ಲಿ ಅಂದುಕೊಂಡಿತು. 
        ದೀರ್ಘಸೂತ್ರಿಯ ವಿಷಯವನ್ನು ಹೇಳುವುದಕ್ಕೇನಿದೆ? ಬೆಸ್ತರು ಬಲೆಯನ್ನು ಬೀಸಿದರು. ನಮಗೆ ಭಯವೇತಕ್ಕೆ ಎಂದು ಹಾಯಾಗಿ ನಿದ್ರಿಸುತ್ತಿದ್ದ ದೀರ್ಘಸೂತ್ರಿ ಬಲೆಯಲ್ಲಿ ಸಿಲುಕಿತು. ಬಲೆಯಲ್ಲಿ ಸಿಕ್ಕಿಹಾಕಿಕೊಂಡ ನಂತರವೂ ಸಹ, "ಈಗಲೇ ಏನು ಮುಳುಗಿ ಹೋಯಿತು" ಎನ್ನುವುದು ದೀರ್ಘಸೂತ್ರಿಯ ಅಭಿಪ್ರಾಯ!" ಬೆಸ್ತರು ಬಲೆಯನ್ನು ಸೆಳೆದುಕೊಂಡಾಗ ದೀರ್ಘಸೂತ್ರಿ ಹಾಗೂ ಅದರಂತಹ ಇತರೆ ಮೀನುಗಳನ್ನು ಹಿಡಿದುಕೊಂಡು ಹೋದರು. ದೀರ್ಘಸೂತ್ರಿ ಯಾರಿಗೋ ಆಹಾರವಾಗಿ ಉಪಯೋಗಕ್ಕೆ ಬಂದ. 
        "ಒತ್ತರಿಸಿಕೊಂಡು ಬರುತ್ತಿರುವ ಪ್ರಮಾದವನ್ನು ಗುರುತಿಸದೆ ಮೂರ್ಖರಂತೆ, ಚೈತನ್ಯರಹಿತರಾಗಿ ಇರುವ ಬುದ್ಧಿಹೀನ ವ್ಯಕ್ತಿಗಳು ದೀರ್ಘಸೂತ್ರಿಯಂತೆ ಮೃತ್ಯುವಿನ ಪಾಲಾಗುತ್ತಾರೆ. ಇದಕ್ಕೆ ಸಂಶಯ ಬೇಡ". 
        "ನಾನು ಕಾರ್ಯಕುಶಲವುಳ್ಳವನು, ಸಮಸ್ಯೆಗಳು ಎದುರಾದಾಗ ಅವನ್ನು ಪರಿಷ್ಕರಿಸಿಕೊಳ್ಳಬಲ್ಲ ಸಾಮರ್ಥ್ಯವು ನನಗಿದೆ ಎಂದುಕೊಳ್ಳುವ ಬಡಾಯಿಕೋರರು ಪ್ರಾಪ್ತಕಾಲಜ್ಞದಂತೆ ಅನುಕ್ಷಣವೂ ಪ್ರಾಣಾಪಾಯ ಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಅವರು ಯಾವಾಗಲೂ ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡೇ ಬದುಕ ಬೇಕಾಗುತ್ತದೆ". 
         ಪ್ರಮಾದವು ಬರುವ ಮುಂಚೆಯೇ ಅದನ್ನು ಗ್ರಹಿಸಿ ಅದಕ್ಕೆ ಬೇಕಾಗುವ ಸೂಕ್ತ ವ್ಯವಸ್ಥೆಯನ್ನು ಹಾಗು ಮುಂಜಾಗ್ರತಾ ಕ್ರಮಗಳನ್ನು ಯಾರು ಆಲೋಚಿಸಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ಯಾರು ಕೈಗೊಳ್ಳುತ್ತಾರೋ ಅವರು ದೀರ್ಘದರ್ಶಿಯಂತೆ ಸುಖ ಸಂತೋಷಗಳಿಂದ ಜೀವಿಸಬಹುದು. 
         "ಆದ್ದರಿಂದ, ಧರ್ಮನಂದನನೇ! ಚೊಕ್ಕವಾಗಿ ಹಿಂದೆ ಮುಂದೆ ಆಲೋಚಿಸಿ, ಒಳಿತು ಕೆಡುಕುಗಳನ್ನು ಪರಿಶೀಲಿಸಿ ದೇಶಕಾಲಗಳಿಗೆ ಉಚಿತವಾಗಿ ವ್ಯವಹರಿಸುವ ವ್ಯಕ್ತಿಗಳನ್ನು ನಿನ್ನ ಸಹಾಯಕರಾಗಿ ಆರಿಸಿಕೊ. ಅಂತಹವರಿಂದಲೇ ನಿನಗೆ ಕ್ಷೇಮವು ಉಂಟಾಗುತ್ತದೆ" ಎಂದು ಭೀಷ್ಮನು ತನ್ನ ಮಾತುಗಳನ್ನು ಮುಗಿಸಿದನು. 
****
         ನಮ್ಮ ರಾಜಕೀಯ ನಾಯಕರಲ್ಲೂ ಸಹ ದೀರ್ಘದರ್ಶಿಗಳಿರುತ್ತಾರೆ. ಅವರನ್ನು ರಾಜಕಾರಣಿಗಳೆನ್ನದೆ ಅವರನ್ನು ರಾಜನೀತಜ್ಞರು ಅಥವಾ ಮುತ್ಸುದ್ಧಿಗಳೆಂದು ಕರೆಯುವುದು ಹೆಚ್ಚು ಸೂಕ್ತವಾಗುತ್ತದೆ. They are not politicians, they are Statesmen. ಅವರು ಮುಂದಿನ ಪೀಳಿಗೆಯನ್ನು ಕುರಿತು ಆಲೋಚಿಸುತ್ತಾರೆ. ಇನ್ನೂ ಕೆಲವು ನಾಯಕರು ಪ್ರಾಪ್ತಕಾಲಜ್ಞರು. ಇವರು ಮುಂಬರುವ ಚುನಾವಣೆಗಳಲ್ಲಿ ತಾವು ಯಾವ ವಿಧವಾಗಿ ಗೆಲ್ಲಬಹುದೋ ಎನ್ನುವುದನ್ನು ಆಲೋಚಿಸುತ್ತಿರುತ್ತಾರೆ. ಅವರಿಗೆ ದೇಶವೇನಾದರೇನು, ಮುಂದಿನ ಪೀಳಿಗೆ ಹಾಳಾದರೇನು, ತಾನು ಮಾತ್ರ ಗೆಲ್ಲಬೇಕು ಎಂದು ಭಾವಿಸುತ್ತಾರೆ. ಇವರು ರಾಜಕಾರಣಿಗಳಲ್ಲದೆ (Politicians) ಮತ್ತೇನೂ ಅಲ್ಲ. ಇನ್ನೂ ಕೆಲವರು ಇದೇನನ್ನೂ ಆಲೋಚಿಸುವುದಿಲ್ಲ. ಅವರು ತಾವು ಏತಕ್ಕೆ ಚುನಾವಣೆಗೆ ನಿಲ್ಲುತ್ತೇವೆಯೇ ಎನ್ನುವ ಕನಿಷ್ಠ ಪರಿಜ್ಞಾನವೂ ಇರುವುದಿಲ್ಲ, ಅವರಿಗೆ ಯಾವ ಉದ್ದೇಶವೂ ಇರುವುದಿಲ್ಲ. ಅಂತಹವರು ದೀರ್ಘಸೂತ್ರಿಗಳು. 
         ಇದೇ ವಿಧವಾಗಿ ಮತದಾರರನ್ನೂ ಸಹ ವಿಭಜಿಸಬಹುದು. ಚುನಾವಣೆಗಳ ಘೋಷಣೆಗಳು, ವ್ಯಕ್ತಿಗಳ ಆಶ್ವಾಸನೆಗಳು, ಮೊದಲಾದವುಗಳಿಗೆ ಬಲಿಯಾಗದೆ ದೀರ್ಘಕಾಲಿಕವಾದ ಸಾಮಾಜಿಕ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರು ಮತದಾನವನ್ನು ಮಾಡುತ್ತಾರೋ ಅವರೇ ದೀರ್ಘದರ್ಶಿಗಳು. ಚುನಾವಣೆಯ ಹಮ್ಮು-ಬಿಮ್ಮುಗಳಿಗೆ ಮಾರುಹೋಗಿ, ರಾಜಕೀಯ ನೇತಾರರ ಆಶ್ವಾಸನೆಗಳನ್ನು ಕುರುಡಾಗಿ ನಂಬಿ ಅಥವಾ ಪ್ರಲೋಭನೆಗೆ ಸಿಲುಕಿ ತಾತ್ಕಾಲಿಕ ಪ್ರಯೋಜನಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಯಾರು ಮತವನ್ನು ಚಲಾಯಿಸುತ್ತಾರೋ ಅವರು ಪ್ರಾಪ್ತಕಾಲಜ್ಞರು. ಮತದ ಬೆಲೆಯನ್ನು ತಿಳಿದುಕೊಳ್ಳದೆ, ಅಸಲಿಗೆ ನಾನು ಯಾರಿಗೂ ಓಟು ಹಾಕುವುದಿಲ್ಲ, ನಾನು ಓಟು ಹಾಕದಿದ್ದರೆ ಸಾಮ್ರಾಜ್ಯವೇನೂ ಮುಳುಗಿ ಹೋಗುವುದಿಲ್ಲ ಎಂದು ಭಾವಿಸುವ ಅಥವಾ NOTA ಚಲಾಯಿಸುತ್ತೇನೆ ಎನ್ನುವ ಬುದ್ಧಿಹೀನರೇ ದೀರ್ಘಸೂತ್ರಿಗಳು.
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  

ಹಿಂದಿನ ಲೇಖನ ಭಾಗ - ೩ ಭೀಷ್ಮ ಯುಧಿಷ್ಠಿರ ಸಂವಾದ: ಸಮಯಸಾಧಕತನ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%AD...
 

 

Rating
No votes yet

Comments

Submitted by makara Tue, 09/18/2018 - 06:21

ಈ ಲೇಖನದ ಮುಂದಿನ ಭಾಗ - ೫ "ಭೀಷ್ಮ ಯುಧಿಷ್ಠಿರ ಸಂವಾದ: ಬೂರುಗ ವೃಕ್ಷದ ವೃತ್ತಾಂತವು" ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%AD...

Submitted by makara Wed, 09/26/2018 - 16:25

ಭೀಷ್ಮ ಯುಧಿಷ್ಠಿರ ಸಂವಾದ ಸರಣಿಯ ಈ ಲೇಖನವನ್ನು ವಾರದ ವಿಶೇಷ ಬರಹವಾಗಿ ಆಯ್ಕೆ ಮಾಡಿ ಲೇಖನಗಳನ್ನು ಬರೆಯಲು ಉತ್ತೇಜನ ನೀಡುತ್ತಿರುವ ಸಂಪದ ನಿರ್ವಹಣಾ ಮಂಡಳಿ ಮತ್ತು ನಾಡಿಗರಿಗೆ ಧನ್ಯವಾದಗಳು. ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದದ ವಾಚಕ ಮಿತ್ರರಿಗೂ ಕೃತಜ್ಞತೆಗಳು :)