ದಲಿತತ್ವದಿಂದ ಉನ್ನತಿಯೆಡೆಗೆ! - 8

ದಲಿತತ್ವದಿಂದ ಉನ್ನತಿಯೆಡೆಗೆ! - 8

     ಸಮಾನತೆಯ ಇನ್ನೊಂದು ಘೋರ ಶತ್ರು ಲಿಂಗ ತಾರತಮ್ಯ. ಕೇವಲ ನಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಮಾತ್ರ ನೋಡದೆ ಪ್ರಪಂಚದ ಎಲ್ಲೆಡೆ ಗಮನ ಹರಿಸಿದರೆ ಈ ತಾರತಮ್ಯದ ಪರಿಣಾಮ ಎಷ್ಟು ಅಸಹನೀಯ ಎಂಬುದು ಬಹುಷಃ ಅನುಭವಿಸಿದವರಿಗಷ್ಟೇ ತಿಳಿದೀತು. ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ಸಮಯದಿಂದ ತಾರತಮ್ಯ ಪ್ರಾರಂಭವಾಗುತ್ತದೆ. ಹೆಣ್ಣಿನ ಶೋಷಣೆ ಮಾಡುವುದರಲ್ಲಿ ಹೆಣ್ಣೂ ಸಹ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನೂ ತಳ್ಳಿಹಾಕಲಾಗದು. ಜಾತಿ, ಧರ್ಮದ ಕಟ್ಟುಪಾಡುಗಳಲ್ಲಿ ಆಕೆಯನ್ನು ಕಟ್ಟಿಹಾಕಿ ಶಿಕ್ಷಣ ಪಡೆಯುವ ಹಕ್ಕಿನಿಂದಲೂ ಅವರು ವಂಚಿತರಾಗಿರುವುದು ಸುಳ್ಳಲ್ಲ. ಅವರು ಧರಿಸುವ ವಸ್ತ್ರಗಳ ಬಗ್ಗೆ ಸಹ ಮತಾಂಧರು ಕಟ್ಟುನಿಟ್ಟು ಮಾಡಿರುವುದು ತಿಳಿದ ವಿಷಯ. ಹೆಣ್ಣು ಎಷ್ಟು ಸುರಕ್ಷಿತ ಎಂಬುದು ಈಗ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೇ ಸಾಕ್ಷಿ ಹೇಳುತ್ತಿವೆ. ಅನೇಕ ಕಾರಣಗಳಿಂದಾಗಿ ಲಿಂಗಸಮಾನತೆ ಸಾಧ್ಯವಿರದಿರಬಹುದು, ಆದರೆ ಸಮಾನ ಅವಕಾಶಗಳಿಂದ ಹೆಣ್ಣು ವಂಚಿತಳಾಗಬಾರದು. ಇಲ್ಲಿ ಹಿಂದಿನ ಸಂಗತಿಗಳಲ್ಲಿ ವಿಶ್ಲೇಷಿಸಿದಂತೆ ಸಮಾನತೆ ಎಂದರೆ ಸಮಾನ ಅವಕಾಶಗಳು ಎಂದು. ಸಮಾನ ಅವಕಾಶಗಳಿದ್ದು ಹೆಣ್ಣು ಎಷ್ಟು ಸಾಧನೆ ಮಾಡಲು ಸಾಧ್ಯವೋ ಮಾಡಲು ಸಾಧ್ಯವಾಗುವಂತಾಗಬೇಕು.

     ಈ ವೇದಮಂತ್ರದ ಆಶಯ ಉದಾತ್ತವಾದುದಾಗಿದೆ: ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. 5.59.6] - ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ ಎಂಬುದು ಇದರ ಅರ್ಥ.

     ಸಮಾನತೆಯ ಬಗ್ಗೆ ಮಾತನಾಡುವಾಗ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕಿದೆ. ಅದೆಂದರೆ ಯಾವುದೇ ವ್ಯಕ್ತಿ ಈಗ ತಾನು ಇರುವುದಕ್ಕಿಂತ ಮೇಲಿನ ಸ್ಥಿತಿಗೆ ತಲುಪಲು ಪ್ರಯತ್ನಿಸುತ್ತಲೇ ಇರುತ್ತಾನೆ. ಕಟು ವಾಸ್ತವವೆಂದರೆ ಮೊದಲು ನಾವು ನಮ್ಮನ್ನು ಇಷ್ಟಪಡುತ್ತೇವೆ, ನಂತರ ಬೇರೆಯವರನ್ನು! ಸಮಾನತೆಯನ್ನು ಯಾರೂ ಕೊಡುವುದಿಲ್ಲ, ನಾವು ಗಳಿಸಬೇಕು. ಬಡವ ಶ್ರೀಮಂತನಾಗಲು, ಆಟಗಾರ ಶ್ರೇಷ್ಠ ಆಟಗಾರನಾಗಲು, ಇರುವುದಕ್ಕಿಂತ ಉನ್ನತ ಅಧಿಕಾರ ಹೊಂದಲು ಬಯಸುತ್ತಲೇ ಇರುತ್ತಾರೆ. ಸಮಾನತೆಯೆಂದರೆ ಎಲ್ಲರೂ ಒಂದು ಹಂತದಲ್ಲೇ ಉಳಿದು ಸಮನಾಗಿ ಬಾಳುವುದಲ್ಲ. ಪದೇ ಪದೇ ಒತ್ತಿ ಹೇಳುತ್ತಿರುವಂತೆ ಇಲ್ಲೂ ಸಹ ಉನ್ನತ ಸ್ಥಿತಿ ತಲುಪಲು ಎಲ್ಲರಿಗೂ ಸಮಾನ ಅವಕಾಶವಿರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ. ಆದರೆ ಈಗೇನಾಗುತ್ತಿದೆ? ಭ್ರಷ್ಟಾಚಾರ ಈ ಎಲ್ಲಾ ಸಮಾನ ಅವಕಾಶಗಳಿಗೆ ಕೊಕ್ಕೆ ಹಾಕಿದೆ. ಅಪಮಾರ್ಗಗಳನ್ನು ಬಳಸಿ ಮೇಲೇರುವ ಪ್ರಯತ್ನ, ಇತರರನ್ನು ಮುಂದೆ ಬರದಂತೆ ತಡೆಯುವ ಪ್ರಯತ್ನಗಳು ಮೇಲುಗೈ ಸಾಧಿಸಿವೆ. ಸಮಾನತೆ, ವಿಶ್ವಭ್ರಾತೃತ್ವದ ಕನಸು ಕಾಣುವವರು ಮೊದಲು ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಿದೆ. ಆಗ ಇತರರಿಗೆ ಅವರು ಮಾರ್ಗದರ್ಶಿಯಾಗಬಲ್ಲರು.

ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು

ಇರುವುದಾದರೆ ಪಾಪ ದುರ್ಬಲತೆಯೊಂದೆ |

ದುರ್ಬಲತೆ ಪಾಪ ದುರ್ಬಲತೆಯೇ ಸಾವು

ವಿವೇಕವಾಣಿಯಿದು ನೆನಪಿರಲಿ ಮೂಢ ||

     ಭಾರತ ರತ್ನ ಅಂಬೇಡ್ಕರರು ಸಾಮಾಜಿಕ ತಾರತಮ್ಯದ ವಿರುದ್ಧ ಪ್ರಬಲ ದ್ವನಿ ಎತ್ತುವುದರೊಡನೆ ಶಿಕ್ಷಣ ಮತ್ತು ಸ್ವಾಭಿಮಾನದ ಮಹತ್ವವನ್ನೂ ಒತ್ತಿ ಹೇಳಿದ್ದಾರೆ. ದಲಿತರು ತಮ್ಮನ್ನು ಬೇರೆಯವರು ಉದ್ಧಾರ ಮಾಡಲಿ ಎಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಇತರರು ಮೊದಲು ತಮ್ಮ ಉದ್ಧಾರ ನೋಡಿಕೊಂಡು ದಲಿತರ ಹೆಸರಿನಲ್ಲಿ ಲಾಭ ಪಡೆಯುವರಷ್ಟೇ ಹೊರತು ದಲಿತರಿಗೆ ಅದರಿಂದ ಪ್ರಯೋಜನ ಕಡಿಮೆ. ಬಲಶಾಲಿಯಾದವರು ಉಳಿಯುತ್ತಾರೆ ಎಂಬುದು ಪ್ರಕೃತಿ ನಿಯಮ. ದೇಶದ ಪ್ರಥಮ ಪ್ರಧಾನಿ ನೆಹರೂರವರ ವಿಷಯವನ್ನೇ ಪ್ರಾಸಂಗಿಕವಾಗಿ ಉದಾಹರಿಸುವುದಾದರೆ ಇತಿಹಾಸವನ್ನು ತಿರುಚುವುದಕ್ಕೆ ಅವಕಾಶ ಮಾಡಿಕೊಟ್ಟು, ಗಾಂಧಿ ಮತ್ತು ನೆಹರೂರವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂಬ ಅಂಶಕ್ಕೆ ಒತ್ತು ಕೊಟ್ಟಿದ್ದರು. ಇಂದು ಯಾರನ್ನೇ ಕೇಳಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎಂಬ ಪ್ರಶ್ನೆಗೆ ಗಾಂಧೀಜಿ ಎಂಬ ಉತ್ತರ ಥಟ್ಟನೆ ಬಂದುಬಿಡುತ್ತದೆ. ದೇಶಕ್ಕಾಗಿ ಪ್ರಾಣ ತೆತ್ತ ಅಸಂಖ್ಯ ಶೂರ ವೀರರ ನೆನಪುಗಳನ್ನು ಉದ್ದೇಶಪೂರ್ವಕ ಮರೆಮಾಚುವಲ್ಲಿ ಅಧಿಕಾರಬಲದಿಂದ ನೆಹರೂ ಸಂತತಿ ಯಶಸ್ವಿಯಾಯಿತು.. ಸಂಗೊಳ್ಳಿ ರಾಯಣ್ಣ, ದೊಂಡಿಯವಾಘ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ, ರಾಣಾ ಪ್ರತಾಪ, ಶಿವಾಜಿ, ಭಗತಸಿಂಹ, ರಾಜಗುರು, ಚಂದ್ರಶೇಖರ ಆಜಾದ್, ಸಾವರ್ಕರ್, ಆಶ್ಫಾಕ್ ಉಲ್ಲಾ, ಮದನಲಾಲ ಧಿಂಗ್ರ, ವಾಸುದೇವ ಬಲವಂತ ಫಡಕೆ, ಉಧಮ್ ಸಿಂಗ್ ಮೊದಲಾದ ಸಹಸ್ರ ಸಹಸ್ರ ಬಲಿದಾನಿಗಳ ಕುರಿತು ವಿವರಗಳನ್ನು ಶಾಲೆಗಳಲ್ಲಿ ಕಲಿಸಿ ದೇಶಾಭಿಮಾನ ಬೆಳೆಸುವ ಕೆಲಸ ಆಗಿದೆಯೇ? ಆಗುವುದೇ? ಅದೆಷ್ಟೋ ಜನರ ಹೆಸರುಗಳೇ ತಿಳಿಯದಷ್ಟರ ಮಟ್ಟಿಗೆ ಇತಿಹಾಸದ ಮೇಲೆ ಪರದೆ ಎಳೆದುಬಿಟ್ಟಿದ್ದಾರೆ. ದೇಶಕ್ಕಾಗಿ ಇವರುಗಳು ಮಾಡಿದ ಬಲಿದಾನವನ್ನು ನೆನೆಸಿಕೊಳ್ಳದಿದ್ದರೆ ಅದು ನಮ್ಮ ಕೃತಘ್ನತೆಯಾಗುವುದಿಲ್ಲವೇ? ಕೆಲವರ ಸ್ವಾರ್ಥಕ್ಕಾಗಿ  ಇವರುಗಳ ನಿಸ್ವಾರ್ಥ ಸೇವೆಗೆ ಮಸಿ ಬಳಿಯಬೇಕೇ? ಜಾತ್ಯಾತೀತತೆಯ ಲೇಪ ಕೊಡುವ ಸಲುವಾಗಿ ಸತ್ಯಸಂಗತಿಗಳನ್ನು ತಿರುಚಬೇಕೆ? ಸತ್ಯ ಇತಿಹಾಸ ಬೆಳಕಿಗೆ ಬರಲಿ ಎಂದು ಅಪೇಕ್ಷಿಸಿದರೆ ಅದನ್ನು ಕೇಸರೀಕರಣ ಎಂಬ ಕಾಲ್ಪನಿಕ ಗುಮ್ಮನನ್ನು ಛೂ ಬಿಟ್ಟು ಅದುಮಿಡುವ ಪ್ರಯತ್ನ ಮಾಡುತ್ತಾರೆ. ನಮಗೆ ಬೇಕಿರುವುದು ಕೇಸರೀಕರಣವೂ ಅಲ್ಲ, ಹಸಿರೀಕರಣವೂ ಅಲ್ಲ, ಕೆಂಪು ಛಾಯೆಯೂ ಅಲ್ಲ, ಇರುವುದನ್ನು ಇದ್ದಂತೆ ಇತಿಹಾಸವನ್ನು ತಿಳಿಯುವ ಹಕ್ಕು ಅಷ್ಟೆ. ಈ ಧ್ವನಿ ದುರ್ಬಲವಾದರೆ ಅದನ್ನು ಯಾರೂ ಕೇಳುವುದಿಲ್ಲ. ಪ್ರಬಲವಾದರೆ, ಸತ್ಯ ಪುಟಕ್ಕಿಟ್ಟ ಚಿನ್ನದಂತೆ ಹೊರಬರುತ್ತದೆ. ಅದೇ ರೀತಿ ದಲಿತರು ಮುಂದೆ ಬರಬೇಕೆಂದರೆ ದಲಿತರೇ ಸ್ವಾಭಿಮಾನದ ಕೆಚ್ಚಿನಿಂದ ಮುಂದೆ ಬರುವ ಮನಸ್ಸು ಮಾಡಿದರಷ್ಟೇ ಸಾಧ್ಯ. ಸ್ವಾಮಿ ವಿವೇಕಾನಂದರು ಸಾರಿದ್ದೂ ಇದನ್ನೇ - ಏಳು, ಎದ್ದೇಳು, ಬಲಶಾಲಿಯಾಗು! ಆಗ ಜಗತ್ತು ನಿನ್ನ ಮಾತು ಕೇಳುತ್ತದೆ!

ಸೋತೆನೆಂದೆನಬೇಡ ಸೋಲು ನೀನರಿತೆ

ಬಿದ್ದೆನೆಂದೆನಬೇಡ ನೋವು ನೀನರಿತೆ|

ಸೋಲರಿತು ನೋವರಿತು ಹಸಿವರಿತು

ಜಗವರಿಯೆ ನೀನೇ ಗೆಲುವೆ ಮೂಢ||

(ಮುಂದುವರೆಯುವುದು)

-ಕ.ವೆಂ.ನಾಗರಾಜ್.