ಸಿಹಿಮೊಗೆಯ ಹುಡುಗಿ ನಿ'ನಿಲ್ಲದೆ' ಹೋದ ದಿನಗಳೀಗ ಭಾರವಾಗಿವೆ.!

ಸಿಹಿಮೊಗೆಯ ಹುಡುಗಿ ನಿ'ನಿಲ್ಲದೆ' ಹೋದ ದಿನಗಳೀಗ ಭಾರವಾಗಿವೆ.!

ಶರಂಪರ ಜೋರು ಮಳೆ. ಬಿಟ್ಟು ಬಿಡದೆ ಸೆಕೆಂಡಿಗೊಮ್ಮೆ ಸರಿಯುವ ಗಡಿಯಾರದ ದೊಡ್ಡ ಮುಳ್ಳು. ಸಿಲಿಕಾನ್ ಸಿಟಿಯ ಎತ್ತರದ ಬಂಗಲೆಗಳಿಗಂಟಿದ ಲೈಟಿನ ಬೆಳಕಲ್ಲಿ ಕೋಲ್ಮಿಂಚು ಅಸ್ಪಷ್ಟವಾಗಿತ್ತು. ಸಂಜೆ ಸರಿದದ್ದು ಗೊತ್ತಾಗುವಷ್ಟರಲ್ಲಿ ಮೊಬೈಲ್ ನಲ್ಲಿ ಸಣ್ಣ ಬೆಳಕು. ಅವಳಿಂದ ಕರೆ - ಆ ಕಡೆಯಿಂದ - ಎಲ್ಲಿದಿಯಾ ಕೋತಿ ? ಹೊರಗೆ ಜೋರು ಮಳೆ.!

ರಸ್ತೆ ಪೂರಾ ನೀರು. ಉಟ್ಟ ಬಟ್ಟೆ ತೋಯಿಸಿಕೊಂಡು ಹಸಿಯಾಗಿತ್ತು. "ಬಸ್ ಸ್ಟಾಪ್ ಲ್ಲಿ ಇದಿನಿ ಬೇಗ ಬಾ" ಎಂದದ್ದಷ್ಟೆ ಸ್ವಲ್ಪ ಕ್ಷಣಗಳ ನಂತರ ಅಲ್ಲಿ ಮಳೆಯಿಂದಾಗಿ ಭಾನು - ಭೂಮಿಯ ನಡುವೆ ಬೆಸೆದ ಸಂಕಲನ ಅಚ್ಚುಕಟ್ಟಾಗಿ ನಮ್ಮಿಬ್ಬರ ನಡುವೆ ನೆರವೇರಿತ್ತು. ಯಾವತ್ತೂ ನನ್ನೊಂದಿಗೆ ವಿಹರಿಸಿದವಳಲ್ಲ. ಆ ದಿನ ಭಾವಗಳು ಬೆಸೆದಿದ್ದವು. ಎದೆಯಲ್ಲಿ ಸಣ್ಣ ಮೋಡ. ಹೊರಗಿನ ಮಳೆಯೊಂದಿಗೆ ಕಣ್ಣು ತೇವ ಆಗಿದ್ದು ಕೈ - ಕೈ ಬೆಸೆದುಕೊಂಡು ಅದೆ ಜೋರಾದ ಮಳೆಯಲಿ ಕೊಡೆಯಿಲ್ಲದೆ ತುಸು ದೂರ ನಡೆದಾಗಲೆ.!

ಅಲ್ಲಿ ಎಷ್ಟೊಂದು ಸೊಗಸಾಗಿತ್ತಲ್ಲವೆ?
ರೊಜ್ಜು - ರಾಡಿ - ಗೊಜ್ಜಿನ ನಡುವೆ ಹಸಿ ನೆಲ ,ಹಸಿ ಹನಿ , ಹಸಿ ಗಿಡ ,ಹಸಿ ಎದೆ , ಹಸಿ ಮನ , ಹಸಿ ಮೈ ಜೊತೆ ಜೊತೆಯಲ್ಲಿ ಬಿಸಿ ಬೆಚ್ಚನೆಯ ಭಾವ.!

ನಮ್ಮ ಮೊದಲ ಸುತ್ತಾಟ ಪ್ರಕೃತಿಯೊಡನೆ ಬೆರೆತು ಇಷ್ಟೊಂದು ಸೊಗಸಾಗಿರುವುದೆಂದು ಊಹೆಯಲ್ಲೂ ಇರಲಿಲ್ಲ. ಭಾವ ಒಂದಾಗಿ ಬೆರಳ ಬೆಸೆದು ಜೊತೆಯಾಗಿ ಹೆಜ್ಜೆ ಹಾಕಿದ್ದಕ್ಕೆ ಎಷ್ಟು ಧನ್ಯವಾದ ನಾ ಹೇಳಲಿ.? ಹೇಳಿ ಬಿಡು ಇಳಿ ಸಂಜೆಗೆ ಒಕ್ಕರಿಸಿಕೊಂಡು ಬರುವ ನಿನ್ನ ನೆನಪುಗಳಿಗೆ ಏನೆಂದು ಸಬೂಬು ನಾ ಹೇಳಲಿ? ಮಳೆಯಾದಾಗೆಲ್ಲಾ ಕಣ್ಣಲ್ಲಿ ಸಣ್ಣ ತೇವ ಯಾರಿಗೂ ಕಾಣದು ಇದು ನಿನಗಿನ್ನೂ ಅರ್ಥವಾಗಿಲ್ಲ ಎಂದರೆ ಈ ಹೃದಯ ನಂಬುವುದಾದರು ಹೇಗೆ ? ಸ್ನೇಹ ಗಾಢವಾಗಿ ಪ್ರೀತಿಯೆಡೆಗೆ ವಾಲುವಾಗ ನಿನ್ನ ಮೇಲಿನ ಕ್ರಶ್ ಗೆ ಏನೆಂದು ಹೆಸರಿಡಲಿ ?

ಬಾ ಮತ್ತೆ ಅದೆ ರಸ್ತೆ ತುದಿಯವರೆಗೂ ನಡೆದುಬಿಡುವ. ಕತ್ತಲಾವರಿಸುವ ಹೊತ್ತಿಗೆ ಬೆಳಕ ಹುಡುಕುತ ಬೆರಳ ಬೆಸೆದು ಮನಸು ಹೊಸೆದು ಕನಸನೂರಿಗೆ ಒಲವ ದಾರಿ ಹಿಡಿದು ಪಯಣ ಮಾಡುವ.!ಎಲ್ಲಿಂದಲೊ ತೂರಿ ಬರುವ ತಂಪು ಗಾಳಿ ಮೆಲ್ಲಗೆ ಹೊದ್ದು ಮಲಗಿದ ನೆನಪುಗಳಿಗೆ ಚಳಿ ಹಿಡಿಸುತ್ತಿದೆ.

ಸಿಹಿಮೊಗೆಯ ( ಶಿವಮೊಗ್ಗ) ಹುಡುಗಿ ನಿ'ನಿಲ್ಲದೆ' ಹೋದ ದಿನಗಳೀಗ ಭಾರವಾಗಿವೆ.ಕ್ಷಣವೆಲ್ಲ ಯುಗವಾಗಿ ಮುಂದೆ ನಿಂತು ನಗುತಿದೆ. ಸುರಿವ ಮಳೆ ನೋಡಿದಾಗಲೆಲ್ಲಾ ಮುಗಿಲ ನಯನದಿ ಉದುರಿದ ಹನಿಯೆಂದೆನಿಸಲು ಶುರುವಾಗಿದೆ.!

ಇರಲಿ ಬಿಡು ಕ್ರಶ್ಶಾದರೇನಂತೆ ಕಪ್ ಕಾಫಿಗೆ ಜೊತೆಯಾಗಬಾರದೆ? ಈ ಒಲವೆಂಬುವುದು ಪ್ರೇಮಿಗಳಿಗೆ ಮಾತ್ರ ಮೀಸಲೆ? ಬಂದು ಬಿಡು ಲೆಕ್ಕಿಸದೆ ಸಂತಸದ ಬೀದಿಯಲಿ ನಿನ್ನದೆ ನೆನಪು ಹರವಿಕೊಂಡು ನಿನ್ನಯ ಬರುವಿಕೆಗೆ ಕಾದು ಕೂತ ಈ ಇನಿಯನ 'ಅರಸಿ'..!

ಇಂತಿ
ಒಲವಿನೂರಿನ ಕನಸುಗಾರ
8970870271