ಭಾಗ - ೯ ಭೀಷ್ಮ ಯುಧಿಷ್ಠಿರ ಸಂವಾದ: ಒಂಟೆಯ ಉಪಾಖ್ಯಾನ

ಭಾಗ - ೯ ಭೀಷ್ಮ ಯುಧಿಷ್ಠಿರ ಸಂವಾದ: ಒಂಟೆಯ ಉಪಾಖ್ಯಾನ

ಚಿತ್ರ

         ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
      ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜನಾದವನು ಏನು ಮಾಡಬೇಕು? ಏನು ಮಾಡಿದರೆ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಒಳಿತಾಗುತ್ತದೆ? ನಿರ್ಣಯವನ್ನು ತೆಗೆದುಕೊಳ್ಳುವುದು ಸುಲಭವಾದರೂ ಸಹ ಅದನ್ನು ಅನುಷ್ಠಾನಕ್ಕೆ ತರುವುದು ಸುಲಭ ಸಾಧ್ಯವಲ್ಲ. ಅದನ್ನು ಜಾರಿಗೊಳಿಸಬೇಕಾದಾಗ ಅನೇಕ ವಿಧವಾದ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ, ಅನೇಕ ಸಾಧಕ-ಬಾಧಕಗಳಿರುತ್ತವೆ. ಆದ್ದರಿಂದ ರಾಜನಾದವನು ಅನುಸರಿಸಬಹುದಾದ ಸೂಕ್ತವಾದ ಮಾರ್ಗವನ್ನು ಬೋಧಿಸುವಂತಹವರಾಗಿ!" 
       ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮಜನೇ! ಪ್ರಭುತ್ವಾಧಿಕಾರವನ್ನು ಹೊಂದಿದವನು, ಏನು ಮಾಡಬೇಕು, ಏನು ಮಾಡದೇ ಇರಬೇಕೋ ಎನ್ನುವುದನ್ನು ತಿಳಿಸುತ್ತೇನೆ, ಕೇಳುವಂತಹವನಾಗು. ಮುಖ್ಯವಾಗಿ ಅದರ ಕುರಿತು ಒಂದು ಒಂಟೆಯ ಉಪಾಖ್ಯಾನವಿದೆ. ಆ ಒಂಟೆಯಂತೆ ಮಾತ್ರ ನೀನು ವ್ಯವಹರಿಸಬೇಡ". 
       "ಕೃತಯುಗದ ಕಥೆಯಿದು. ಆಗ ಒಂದು ದೊಡ್ಡದಾದ ಒಂಟೆಯಿದ್ದಿತು. ಅದಕ್ಕೆ ಪೂರ್ವಜನ್ಮಸ್ಫುರಣೆಯಿದ್ದಿತು. ಅದು ಕಠೋರ ನಿಯಮಗಳನ್ನು ಪಾಲಿಸುತ್ತಾ ತಪಸ್ಸನ್ನಾಚರಿಸಲಾರಂಭಿಸಿತು. ಅದರ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು ವರವೊಂದನ್ನು ಬೇಡಿಕೊಳ್ಳಲು ಹೇಳಿದ. ಆಗ ಆ ಒಂಟೆಯು ಒಂದು ವರವನ್ನು ಬೇಡಿಕೊಂಡಿತು, "ಭಗವಂತ! ನನ್ನ ಕುತ್ತಿಗೆಯು ನೂರು ಯೋಜನದಷ್ಟು ಉದ್ದವಾಗುವಂತೆ ವರವನ್ನು ಕರುಣಿಸು. ನಾನು ಎಲ್ಲಿಗೇ ಹೋದರೂ ಸಹ ನನ್ನ ಕುತ್ತಿಗೆಯನ್ನು ಚಾಚಿ ನೂರು ಯೋಜನಗಳವರೆಗೆ ನೋಡಬಲ್ಲ ಶಕ್ತಿ ನನಗೆ ಇದರಿಂದ ಉಂಟಾಗುತ್ತದೆ!"
         "ತಥಾಸ್ತು" ಎಂದು ಬ್ರಹ್ಮದೇವರು ಅದಕ್ಕೆ ವರವನ್ನು ಕರುಣಿಸಿದ. 
         "ಒಂಟೆ ಕಾಡಿನೊಳಗೆ ಹೊರಟು ಹೋಯಿತು. ಉದ್ದವಾದ ಕುತ್ತಿಗೆ ಬಂದ ಮೇಲೆ ವಸ್ತುಗಳು ಅದೆಷ್ಟು ದೂರವಿದ್ದರೇನು ಅದನ್ನು ಒಂಟೆಯು ಗ್ರಹಿಸಬಲ್ಲುದಾಗಿತ್ತು. ಅದಕ್ಕೆ ಎಲ್ಲಿಗೂ ಹೋಗುವ ಅವಶ್ಯಕತೆಯೇ ಉಂಟಾಗಲಿಲ್ಲ. ಕಾಲನ್ನೂ ಆ ಕಡೆಯಿಂದ ಈ ಕಡೆ ಎತ್ತಿ ಇಡುವ ಅವಶ್ಯಕತೆ ಇರಲಿಲ್ಲ. ಎಲ್ಲವೂ ತನ್ನ ಸಮೀಪಕ್ಕೆ ಬರುತ್ತಿದ್ದವು, ಇನ್ನೇನು ಬೇಕು ಆ ಒಂಟೆಗೆ? "ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡಿ ಹಿಡಿಸಿದನಂತೆ" ಎನ್ನುವಂತಹ ಸ್ಥಿತಿಯುಂಟಾಯಿತು ಆ ಒಂಟೆಗೆ. ಎಲ್ಲವೂ ತನ್ನ ಕಣ್ಣಂಚಿನಲ್ಲೆ ಇದೆ ಎಂದು ಒಂಟೆಯು ಹಿಗ್ಗಿ ಹೀರೇಕಾಯಿಯಾಯಿತು."
"ಒಂದು ದಿನ ಒಂಟೆ ನೂರು ಯೋಜನಗಳ ದೂರಕ್ಕೆ ತನ್ನ ಕುತ್ತಿಗೆಯನ್ನು ಚಾಚಿ, ಆ ಕಡೆ ಈ ಕಡೆ ಮೇಯತೊಡಗಿತು. ಅದರ ಕುತ್ತಿಗೆ ಬಹಳ ಉದ್ದವಿದ್ದುದರಿಂದ ಅಷ್ಟು ದೂರದಲ್ಲಿ ಮೇಯುವುದಕ್ಕೆ ಅದಕ್ಕೆ ಯಾವುದೇ ವಿಧವಾದ ಕಷ್ಟವುಂಟಾಗಲಿಲ್ಲ. ಅಷ್ಟರಲ್ಲಿ ಬಿರುಗಾಳಿ ಬೀಸಿತು, ಗಿಡಗಂಟಿಗಳು, ಮರಬಳ್ಳಿಗಳು ಬುಡಸಮೇತ ಕಿತ್ತುಹೋಗುವಂತಹ ಸುಂಟರಗಾಳಿ ಏರ್ಪಟ್ಟಿತು. ಆಗ ಒಂಟೆಯು, ತನ್ನ ಕುತ್ತಿಗೆಯನ್ನು ಗಾಳಿಯಿಂದ ರಕ್ಷಿಸಿಕೊಳ್ಳಲು ಒಂದು ಗುಹೆಯೊಳಗೆ ತನ್ನ ತಲೆಯನ್ನು ತೂರಿಸಿತು. ಸ್ವಲ್ಪ ಹೊತ್ತಿಗೆ ಚಂಡಮಾರುತದೊಂದಿಗೆ ದೊಡ್ಡದಾಗಿ ಕುಂಭದ್ರೋಣ ಮಳೆಯೂ ಸುರಿಯತೊಡಗಿತು. ಆಗ ಅಡವಿಯೆಲ್ಲಾ ಜಲಮಯವಾಯಿತು."
         "ಧಾರಾಕಾರಾವಾಗಿ ಮಳೆಯಾಗುತ್ತಿದ್ದುದರಿಂದ ಹಸಿವಿನಿಂದ ಕಂಗಾಲಾಗಿದ್ದ ಒಂದು ತೋಳವು ತನ್ನ ಸಂಸಾರದೊಂದಿಗೆ ಆ ಗುಹೆಯನ್ನು ಹೊಕ್ಕಿತು. ಎತ್ತ ನೋಡಿದರತ್ತ ನೀರು, ಚಳಿಗೆ ಮೈಯ್ಯೆಲ್ಲಾ ಗದಗದ ನಡುಗುತ್ತಿದೆ. ಅದು ಎಷ್ಟೇ ಆಗಲಿ ನರಿ ಮಾಂಸಾಹಾರಿಯಲ್ಲವೇ? ಅದು ಅತ್ತ ಇತ್ತ ನೋಡಿತು, ಅದಕ್ಕೆ ಒಂಟೆಯ ಕುತ್ತಿಗೆ ಸಿಕ್ಕಿತು. ಅದು ಒಂಟೆಯ ಕುತ್ತಿಗೆಯನ್ನು ಕಚ್ಚಿ ತಿನ್ನಲು ಮೊದಲು ಮಾಡಿತು. ಒಂಟೆಗೆ ತನ್ನ ಕುತ್ತಿಗೆಯನ್ನು ಯಾರೋ ಕಚ್ಚಿ ತಿನ್ನುತ್ತಿದ್ದಾರೆನ್ನುವುದು ಅರಿವಿಗೆ ಬಂದಿತು. ಅದು ನೋವಿನಿಂದ ಬಾಧೆಗೊಳಗಾಯಿತು, ಅದು ಥಟ್ಟನೆ ತನ್ನ ಕುತ್ತಿಗೆಯನ್ನು ಹಿಂದಕ್ಕೆಳೆದುಕೊಳ್ಳಲು ಪ್ರಯತ್ನಿಸಿತು. ಅದಕ್ಕೋಸ್ಕರ ಅದು ತನ್ನ ಕುತ್ತಿಗೆಯನ್ನು ಮೇಲೆ ಕೆಳಗೆ ಆಡಿಸಲು ಆರಂಭಿಸಿತು. ಅಷ್ಟರಲ್ಲಿ ಆ ತೋಳ ಮತ್ತು ಅದರ ಸಂಸಾರವು ಒಂಟೆಯ ಕುತ್ತಿಗೆಯನ್ನು ಚಕಚಕನೇ ತಿಂದು ತೇಗಿದವು. ಒಂಟೆ ಸತ್ತು ಹೋಯಿತು. ಬಿರುಗಾಳಿ ಶಾಂತವಾಗಿ, ಮಳೆಯೂ ನಿಂತಿತು. ತೋಳ ತನ್ನ ದಾರಿ ಹಿಡಿದು ಹೊರಟಿತು"
        "ಒಂಟೆಯ ಆಲಸ್ಯತನಕ್ಕೆ ದೊರೆತ ಫಲವಿದು. ಆಲಸ್ಯತನವು ಏಕೆ ಉಂಟಾಯಿತು? ಒಂಟೆಯ ಮೂರ್ಖತ್ವವೇ ಅದಕ್ಕೆ ಕಾರಣ! ಇಲ್ಲದಿದ್ದರೆ ಬೇಡಿಕೊಳ್ಳಬೇಕಾಗಿದ್ದ ವರವೇ ಅದು? ತನ್ನ ಕುತ್ತಿಗೆ ಉದ್ದವಾಯಿತೆಂದು ಅದು ಬೀಗಿತೇ ಹೊರತು, ಹಾಗೆ ಕುತ್ತಿಗೆಯನ್ನು ಹೊರಚಾಚುವುದರಿಂದ ಆಗುವ ದುಷ್ಪರಿಣಾಮಗಳೇನು ಎನ್ನುವ ಮುಂದಾಲೋಚನೆ ಅದಕ್ಕೆ ಇಲ್ಲದೇ ಹೋಯಿತು!" 
      "ಅಧಿಕಾರದಲ್ಲಿದ್ದವರು ತಮ್ಮ ಕುತ್ತಿಗೆಯನ್ನು ಉದ್ದಮಾಡಿಕೊಳ್ಳುವ ಸಾಮರ್ಥ್ಯ ತಮಗಿದೆ ಎಂದು ಎಲ್ಲದರಲ್ಲೂ ಮೂಗು ತೂರಿಸಿದರೆ ಖಂಡಿತವಾಗಿಯೂ ಅದರಿಂದ ಅವರು ಘಾಸಿಗೊಳಗಾಗುತ್ತಾರೆ ಎನ್ನುವುದು ದಿಟ. ಅವರು ಸ್ವಲ್ಪ ಬುದ್ಧಿವಂತಿಕೆಯನ್ನೂ ಉಪಯೋಗಿಸಬೇಕು. ಬಾಹುಬಲವಿದೆ ಎಂದು ಸಂಭ್ರಮಿಸಬಾರದು. ತೋಳುಗಳನ್ನು ಮೇಲೇರಿಸಿ ಕೆಲಸ ಮಾಡಿಸಿಕೊಳ್ಳಬಲ್ಲವೆಂಬ ಅಹಂಕಾರವಿರಬಾರದು. ಬಾಹುಬಲವು ಮಧ್ಯಮ ತರಗತಿಯದು, ಕಾಲಿನ ಬಲವು ಅಧಮವು ಮತ್ತು ಬುದ್ಧಿಬಲದಿಂದ ಕೈಗೊಳ್ಳುವ ಕಾರ್ಯವು ಉತ್ತಮವಾದುದು. ಕಾರ್ಯದಕ್ಷತೆಗೆ ಬುದ್ಧಿಬಲದ ಅವಶ್ಯಕತೆಯಿದೆ. ವಿಜಯಕ್ಕೂ ಸಹ ಬುದ್ಧಿಬಲವೇ ಕಾರಣ!" 
         "ಯಾರು ತನ್ನ ಸಹಚರರ ಮಂತ್ರಬಲವನ್ನು ಸಂಪಾದಿಸಿಕೊಳ್ಳುವನೋ ಮತ್ತು ತನ್ನ ಅನುಚರರ ಅಂಗಬಲವನ್ನು ಕ್ರೋಢೀಕರಿಸಿಕೊಳ್ಳಬಲ್ಲನೋ ಅಂತಹವನಿಗೆ ಅರ್ಥಬಲವೂ ಒಲಿಯುತ್ತದೆ" ಎಂದು ವಿವರಿಸಿದ ಪಿತಾಮಹನಾದ ಭೀಷ್ಮ. 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರ ಕೃಪೆ:  ಗೂಗಲೇಶ್ವರ - ಮಿತ್ರರೆ, ಒಂಟೆಯ ಚಿತ್ರದ ಬದಲು ಜಿರಾಫೆಯ ಚಿತ್ರವಿದೆ ಅದಕ್ಕೆ ಕ್ಷಮೆಯಿರಲಿ :)
 
ಹಿಂದಿನ ಲೇಖನ ಭಾಗ - ೮ ಭೀಷ್ಮ ಯುಧಿಷ್ಠಿರ ಸಂವಾದ: ಕರ ಸಂಗ್ರಹದ ವಿಧಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%AD...

Rating
Average: 1 (1 vote)

Comments

Submitted by makara Wed, 09/26/2018 - 16:19

ಈ ಲೇಖನದ ಮುಂದಿನ ಭಾಗ - ೧೦ ಭೀಷ್ಮ ಯುಧಿಷ್ಠಿರ ಸಂವಾದ: ಶರಭಮೃಗದ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...