ಮೂಢ ಉವಾಚ - 400

ಮೂಢ ಉವಾಚ - 400

ಚಿತ್ರ

     ಇದು 400ನೆಯ ಮೂಢ ಉವಾಚ! ಮೂಢ ಉವಾಚಗಳನ್ನು ಇದುವರೆಗೆ ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ ಮೂಢನ ಕೃತಜ್ಞತೆಗಳು. ಇವೆಲ್ಲವೂ ಮೂಢನ ಸ್ವಗತಗಳು, ತನಗೆ ತಾನೇ ಹೇಳಿಕೊಂಡವುಗಳು. ಏಕೆಂದರೆ ಇನ್ನೊಬ್ಬರಿಗೆ ಹೇಳುವಷ್ಟು ಪ್ರೌಢನಿವನಲ್ಲ. ಎಲ್ಲವೂ ಸಮಾಜ ಅವನಿಗೆ ನೀಡಿದ ಅನುಭವಗಳು, ಜ್ಞಾನಿಗಳು ಹೇಳಿದ ಮಾತುಗಳು, ಜ್ಞಾನ ಭಂಡಾರದಿಂದ ಸಿಕ್ಕಿದವು, ತನ್ನ ಬುದ್ದಿಯ ಮಿತಿಗೆ ಒಳಪಟ್ಟು ತಿಳಿದದ್ದು ಎಂದು ಅಂದುಕೊಂಡದ್ದು. ಸ್ವಂತದ್ದು ಏನೂ ಇಲ್ಲ. ಅವನ್ನು ತನಗೆ ತಿಳಿದಂತೆ, ತಾನು ಅರ್ಥೈಸಿಕೊಂಡಂತೆ, ಇದು ಹೀಗೆ, ಅದು ಹಾಗೆ, ನೀನು ಹೀಗಿರು ಎಂದು ತನಗೆ ತಾನೇ ಗುನುಗಿಕೊಂಡದ್ದು! ಅಗುಳು ಕಂಡರೆ ಕಾಗೆ ತನ್ನ ಬಳಗವನ್ನು ಕಾ, ಕಾ ಎಂದು ಕೂಗಿ ಕರೆದಂತೆ, ತನಗೆ ಸಂತೋಷ ಕಂಡದ್ದನ್ನು, ತಾನು ತಿಳಿದಿದ್ದನ್ನು ಇತರರಲ್ಲಿ ಹಂಚಿಕೊಳ್ಳುವ ಮನೋಭಾವದಿಂದ ಬರೆದದ್ದು. ತನ್ನದೇ ಸರಿ, ತಾನು ಹೇಳಿದ್ದೇ ಸರಿ ಎಂಬ ಉದ್ಧಟತನ, ಪಂಡಿತನ ಹೆಮ್ಮೆ ಖಂಡಿತಾ ಇಲ್ಲ. ತಿಳಿಯಬೇಕಾದುದು ಬಹಳ, ತಿಳಿದುದು ಅತ್ಯಲ್ಪ ಎನ್ನುವ ಅರಿವು ಅವನಿಗೆ ಸದಾ ಜಾಗೃತವಿದೆ. ಈ 400ನೆಯ ಉವಾಚ ಒಂದು ರೀತಿಯಲ್ಲಿ ಅವನ ಸ್ವಪರಿಚಯವಾಗಿದೆ. 

ಒಳಿತನಾರೇ ಪೇಳಲ್ ಕಿವಿಯೊಡ್ಡಿ ಕೇಳುವನು
ಬೆರಗುಗಣ್ಣಿನಲಿ ಮೆಚ್ಚುಗೆಯ ಸೂಸುವನು |
ಪಂಡಿತನು ಇವನಲ್ಲ ಪಾಂಡಿತ್ಯ ಇವಗಿಲ್ಲ
ಮೂಢರಲಿ ಮೂಢನಿವ ಪರಮ ಮೂಢ |

Rating
No votes yet