ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು?
ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.
ಯುದಿಷ್ಠಿರನು ಕೇಳಿದನು, "ಪಿತಾಮಹಾ! ಪ್ರಪಂಚದಲ್ಲಿ ಎಲ್ಲರೂ ಸೌಶೀಲ್ಯವಂತರಾದ ವ್ಯಕ್ತಿಗಳನ್ನು ಗೌರವಿಸುತ್ತಾರೆ, ಪ್ರಶಂಸಿಸುತ್ತಾರೆ. ಹಾಗಾದರೆ ಶೀಲವೆಂದರೆ ಏನು? ಶೀಲವನ್ನು ಸಂಪಾದಿಸಿಕೊಳ್ಳುವುದು ಹೇಗೆ? ದಯಮಾಡಿ ಹೇಳುವಂತವರಾಗಿ"
ಭೀಷ್ಮನು ಈ ವಿಧವಾಗಿ ಉತ್ತರಿಸಿದನು. "ಧರ್ಮಜ್ಞ! ಇದೇ ವಿಧವಾದ ಸಂಶಯವು ಹಿಂದೊಮ್ಮೆ ದುರ್ಯೋಧನನಿಗೂ ಉಂಟಾಗಿತ್ತು, ಯಾವಾಗೆನ್ನುವೆಯಾ? ನೀನು ಇಂದ್ರಪ್ರಸ್ಥದಲ್ಲಿ ಸಕಲ ವೈಭೋಗಗಳನ್ನೂ ಹೊಂದಿದವನಾಗಿದ್ದೆ. ನಿನ್ನ ಸೋದರರೊಡಗೂಡಿ ನೀನು ರಾಜಸೂಯ ಯಾಗವನ್ನು ಕೈಗೊಳ್ಳುತ್ತಿದ್ದ ಸಮಯದಲ್ಲಿ ದುರ್ಯೋಧನನು ಅಲ್ಲಿಗೆ ಆಗಮಿಸಿದ. ನಿನ್ನ ಸಿರಿ ಸಂಪದಗಳನ್ನು ನೋಡಿ ಅವನ ಕಣ್ಣು ಕುಕ್ಕಿತು. ಅವನು ಹೊಟ್ಟೆ ಕಿಚ್ಚಿನಿಂದ ಬೆಂದು ಹೋದ. ಅವನು ಕೌರವ ಸಭೆಗೆ ಹೋಗಿ ತನ್ನ ತಂದೆಯಾದ ಧೃತರಾಷ್ಟ್ರನನ್ನು ಇದೇ ಪ್ರಶ್ನೆಯನ್ನು ಕೇಳಿದ. ಧೃತರಾಷ್ಟ್ರನು ದುರ್ಯೋಧನನನ್ನು ಉದ್ದೇಶಿಸಿ, "ಮಗೂ, ಧರ್ಮರಾಯನಿಗಿರುವ ಸಂಪದಗಳು ನಿನಗೂ ಬೇಕಾದ ಪಕ್ಷದಲ್ಲಿ ನೀನು ಶೀಲವಂತನಾಗಬೇಕು" ಎಂದು ಹೇಳಿದನು.
"ಶೀಲವೆಂದರೆ ಏನು? ಅದು ಹೇಗೆ ಲಭಿಸುತ್ತದೆ?" ಎಂದು ದುರ್ಯೋಧನನು ತಂದೆಯನ್ನು ಪ್ರಶ್ನಿಸಿದ. "ಮಗೂ, ಶೀಲವೆನ್ನುವುದು ಕೊಂಡುಕೊಳ್ಳಲು ಸಿಗುವ ವಸ್ತುವಲ್ಲ. ಅದನ್ನು ಕ್ರಮೇಣ ರೂಢಿಗತ ಮಾಡಿಕೊಳ್ಳಬೇಕು. ಅದು ಒಂದು ಸಂಸ್ಕಾರದ ಪ್ರಕ್ರಿಯ. ಶೀಲವನ್ನು ಕುರಿತು ಹೇಳುವಾಗ ನಾರದನು ಹೇಳಿದ ಇತಿ ವೃತ್ತಾಂತವೊಂದು ಇದೆ. ಅದನ್ನು ನಿನಗೆ ಹೇಳುತ್ತೇನೆ ಕೇಳು"
ಪ್ರಹ್ಲಾದನು ರಾಕ್ಷಸರ ಅಧಿಪತಿ. ಅವನು ಶೀಲವಂತ. ತನ್ನ ಸೌಶೀಲ್ಯದ ದೆಸೆಯಿಂದಾಗಿ ಪ್ರಹ್ಲಾದನು ಇಂದ್ರನ ರಾಜ್ಯವನ್ನೂ ಸಹ ಸಂಪಾದಿಸಲು ಶಕ್ತನಾದ. ಮೂರು ಲೋಕಗಳನ್ನೂ ತನ್ನ ವಶಮಾಡಿಕೊಂಡ. ರಾಜ್ಯಭ್ರಷ್ಠನಾದ ಇಂದ್ರನು ಬೃಹಸ್ಪತಿಯ ಆದೇಶದ ಮೇರೆಗೆ ಬ್ರಾಹ್ಮಣನ ವೇಷಧಾರಣೆ ಮಾಡಿಕೊಂಡು ಪ್ರಹ್ಲಾದನ ಬಳಿಗೆ ಬಂದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಕೇಳಿಕೊಂಡನು. ಅದಕ್ಕೊಪ್ಪಿದ ಪ್ರಹ್ಲಾದನನ್ನು ಗುರುವಾಗಿ ಸ್ವೀಕರಸಿದ ಇಂದ್ರನು ಅವನ ಬಳಿಯಲ್ಲಿ ಶಿಷ್ಯವೃತ್ತಿಯನ್ನು ಮಾಡುತ್ತಾ ಅವನ ಸೇವೆಯನ್ನು ಶ್ರದ್ಧಾಭಕ್ತಿಗಳಿಂದ ಮಾಡತೊಡಗಿದನು. ಅವನು ನಿಧಾನವಾಗಿ ಪ್ರಹ್ಲಾದನ ವಿಜಯ ರಹಸ್ಯವನ್ನು ಕೇಳಿ ತಿಳಿದುಕೊಂಡನು. ಶೀಲಸಂಪದದ ಕಾರಣದಿಂದಾಗಿ ತಾನು ಸಕಲ ಸಂಪದಗಳನ್ನೂ ಗಳಿಸಲು ಸಾಧ್ಯವಾಗಿದೆ ಎನ್ನುವುದನ್ನು ಪ್ರಹ್ಲಾದನು ತಿಳಿಸಿದನು. ಅಲ್ಲದೆ, ಇಂದ್ರನ ಸೇವಾನಿಷ್ಠೆಯನ್ನು ನೋಡಿ ಸಂತೋಷಗೊಂಡು ಗುರುವಾದ ಪ್ರಹ್ಲಾದನು, ಅವನನ್ನುದ್ದೇಶಿಸಿ, "ವರವೊಂದನ್ನು ಬೇಡುವಂತವನಾಗು ಅದನ್ನು ನಾನು ನಿನಗೆ ಕರುಣಿಸುತ್ತೇನೆ" ಎಂದು ಹೇಳಿದನು. ಬ್ರಾಹ್ಮಣವೇಷಧಾರಿಯಾಗಿದ್ದ ಇಂದ್ರನು, "ನನಗೆ ನಿಮ್ಮ ಶೀಲವನ್ನು ಪ್ರಸಾದಿಸಿ" ಎಂದು ಅಭ್ಯರ್ಥಿಸಿದ. ಪ್ರಹ್ಲಾದನು, "ತಥಾಸ್ತು" ಎಂದು ಹೇಳಿ ವರವನ್ನು ಅನುಗ್ರಹಿಸಿದನು, ತನ್ನ ಶೀಲವನ್ನು ಅವನಿಗೆ ದಾರೆ ಎರೆದ.
ಶೀಲವನ್ನು ಕಳೆದುಕೊಂಡ ಪ್ರಹ್ಲಾದನಿಗೆ ಅದೇಕೊ ಭಯವುಂಟಾಯಿತು ಜೊತೆಗೆ ದುಃಖವೂ ಉಂಟಾಯಿತು! ಅದೇಕೆಂದು ಅವನಿಗೆ ಅರ್ಥವಾಗಲಿಲ್ಲ. ಅತ್ತ ವರವನ್ನು ಪಡೆದ ಬ್ರಾಹ್ಮಣನು ಹೊರಟು ಹೋಗುತ್ತಿದ್ದಂತೆ ಇತ್ತ ಪ್ರಹ್ಲಾದನು ಆಲೋಚಿಸುತ್ತಾ ಕುಳಿತ. ಅಷ್ಟರಲ್ಲಿ ಒಂದು ಛಾಯಾ ತೇಜಸ್ಸು ಪ್ರಹ್ಲಾದನ ಶರೀರದಿಂದ ಹೊರಬಂದಿತು. ವಿಶಾಲಕಾಯನಾದ ಆ ತೇಜೋಮಯ ಪುರುಷನನ್ನು ನೋಡಿ, "ನೀನು ಯಾರು?" ಎಂದು ಪ್ರಹ್ಲಾದನು ಪ್ರಶ್ನಿಸಿದನು. "ನಾನು ಶೀಲ" ಎಂದು ಆ ಪುರುಷನು ಉತ್ತರಿಸಿ, "ನೀನು ನನ್ನನ್ನು ಬಿಟ್ಟುಬಿಟ್ಟಿರುವ ಕಾರಣ, ನಾನು ನಿನ್ನಿಂದ ದೂರ ಹೊರಟು ಹೋಗುತ್ತಿದ್ದೇನೆ" ಎಂದು ಹೇಳಿದನು.
"ಇಷ್ಟರಲ್ಲಿ ಅವನ ದೇಹದಿಂದ ಮತ್ತೊಂದು ತೇಜಸ್ಸು ಹೊರಬಂದಿತು. "ನೀನು ಯಾರು?" ಎಂದು ಪ್ರಶ್ನಿಸಲಾಗಿ ಅದು "ನಾನು ಧರ್ಮ, ಶೀಲನಿರುವ ಜಾಗದಲ್ಲೇ ನಾನೂ ಇರುತ್ತೇನೆ. ಅವನೊಂದಿಗೆ ನಾನೂ ಹೊರಟು ಹೋಗುತ್ತಿದ್ದೇನೆ!" ಎಂದು ಅದು ಮಾರುತ್ತರಿಸಿತು.
ಈಗ ಪ್ರಹ್ಲಾದನ ಶರೀರದಿಂದ ಮತ್ತೊಂದು ತೇಜಸ್ಸು ಹೊರಬಂದಿತು. ಅದನ್ನು ತಾನಾರೆಂದು ಕೇಳಲಾಗಿ, ಅದು, "ನಾನು ಸತ್ಯ, ಧರ್ಮದ ಬೆನ್ನ ಹಿಂದೆಯೇ ನಾನಿರುತ್ತೇನೆ" ಎಂದು ಹೇಳಿತು.
ಸತ್ಯವನ್ನು ಅನುಸರಿಸಿ ಮತ್ತೊಬ್ಬ ಪುರುಷನು ಹೊರಬಂದನು. ಅವನನ್ನು ಪ್ರಶ್ನಿಸಲಾಗಿ, ಅವನು ತಾನು ಸದಾಚಾರನೆಂದೂ ಮತ್ತು ಸತ್ಯದೊಂದಿಗೆ ತಾನಿರುವುದಾಗಿ ಹೇಳಿದನು.
ಇಷ್ಟರಲ್ಲೇ ಗರ್ಜಿಸುತ್ತಾ ಹೊರಬಂದ ಮತ್ತೋರ್ವ ಪುರುಷನು, "ನಾನು ಬಲನು, ಸದಾಚಾರವಿದ್ದರೇನೆ ಬಲವು ಬರುತ್ತದೆ, ಆದ್ದರಿಂದ ಅವನೊಂದಿಗೆ ಹೋಗುತ್ತಿದ್ದೇನೆ" ಎಂದು ಹೇಳಿದನು.
ಆಗ ಪ್ರಭೆಯನ್ನು ಹೊರಸೂಸುತ್ತಾ ಒಂದು ಸ್ತ್ರೀ ಮೂರ್ತಿಯು ಅಲ್ಲಿಗೆ ಆಗಮಿಸಿತು. "ಅಮ್ಮಾ ನೀನು ಯಾರು?" ಎಂದು ಪ್ರಹ್ಲಾದನು ಪ್ರಶ್ನಿಸಲಾಗಿ, "ನಾನು ಲಕ್ಷ್ಮೀದೇವಿ. ಬಲವಂತನು ಇದ್ದಲ್ಲೇ ನನ್ನ ನಿವಾಸ" ಎಂದು ಆಕೆ ಹೇಳಿದಳು.
"ಈ ವಿಧವಾಗಿ ಎಲ್ಲವೂ ಹೊರಟು ಹೋದವು. ಅಯ್ಯಾ ಧುರ್ಯೋಧನಾ ಇದೇ ಶೀಲದ ಮಹತ್ವ. ಧರ್ಮ, ಸತ್ಯ, ಸದಾಚಾರ, ಬಲ, ಲಕ್ಷ್ಮಿ ಎಲ್ಲವಕ್ಕೂ ಆಧಾರ ಮತ್ತು ಎಲ್ಲವಕ್ಕೂ ಮೂಲ ಕಾರಣವಾಗಿರುವುದು ಶೀಲವೇ!" ಎಂದು ಧೃತರಾಷ್ಟ್ರನು ಹೇಳಿದನು. ಆಗ ದುರ್ಯೋಧನನು, "ಅಷ್ಟಕ್ಕೂ ಶೀಲವೆಂದರೇನು? ಅದನ್ನು ಹೇಗೆ ಸಂಪಾದಿಸಬೇಕೆನ್ನುವುದನ್ನು ಸ್ವಲ್ಪ ವಿವರಿಸುವಂತವರಾಗಿ" ಎಂದು ತನ್ನ ತಂದೆಯಲ್ಲಿ ಬಿನ್ನವಿಸಿದ.
ಧೃತರಾಷ್ಟ್ರನು ಹೀಗೆ ಹೇಳಿದನು, "ಮಗು ದುರ್ಯೋಧನಾ, ಸಂಕ್ಷಿಪ್ತವಾಗಿ ಅದನ್ನು ಹೇಳುತ್ತೇನೆ ಕೇಳು. ಮನೋವಾಕ್ಕಾಯಗಳಿಂದ (ಮನಸ್ಸು, ಮಾತು ಮತ್ತು ಶರೀರದಿಂದ) ಯಾವುದೇ ಪ್ರಾಣಿಗೆ ದ್ರೋಹವನ್ನು ಮಾಡದೇ ಇರುವುದು, ಎಲ್ಲರ ಮೇಲೂ ದಯೆಯನ್ನು ಇಡುವುದು, ದಾನಧರ್ಮಾದಿಗಳನ್ನು ಮಾಡುವುದೇ ಶೀಲವೆಂದು ಅರಿತುಕೊ."
"ಇತರರಿಗೆ ಅಪಕಾರವನ್ನುಂಟು ಮಾಡುವ ಕೆಲಸವನ್ನು ಮಾಡದೆ, ಮತ್ತು ತನ್ನ ಮನಸ್ಸಿಗೆ ನಾಚಿಕೆಯುಂಟಾಗುವಂತಹ ಕೆಲಸವನ್ನು ಮಾಡದೇ ಇರುವುದು - ಇದೇ ಶೀಲವೆಂದರೆ. ಇಷ್ಟೆಲ್ಲಾ ಏಕೆ, ಹಿರಿಯರು ಪ್ರಶಂಸಿಸುವ ಕೆಲಸವನ್ನು ಮಾತ್ರವೇ ಮಾಡುವವನು ಶೀಲವಂತನೆನಿಸಿಕೊಳ್ಳುತ್ತಾನೆ"
"ಸೌಶೀಲ್ಯ ಸಂಪದಗಳನ್ನು ಹೊಂದಿದವನನ್ನೇ ಧನಲಕ್ಷ್ಮಿಯು ವರಿಸುತ್ತಾಳೆ, ರಾಜ್ಯಲಕ್ಷ್ಮಿಯೂ ವರಿಸುತ್ತಾಳೆ!"
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ವಿ.ಸೂ.:- ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ದುರ್ಯೋಧನನು ಧರ್ಮದ ಹಾದಿಯನ್ನೇಕೆ ಉಪಕ್ರಮಿಸಲಿಲ್ಲವೆನ್ನುವ ಪ್ರಶ್ನೆಯು ಮನದಲ್ಲಿ ಏಳಬಹುದು. ಅದಕ್ಕೇ ಅವನೇ ಹೇಳಿರುವ ಪ್ರಸಿದ್ಧವಾದ ಶ್ಲೋಕವೊಂದಿದೆ.
ಜಾನಮಿ ಧರ್ಮಂ ನ ಚ ಮೇ ಪ್ರವೃತ್ತಿಃ l
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ ll
ಭಾವಾರ್ಥ - ನನಗೆ ಧರ್ಮವೇನೆಂದು ತಿಳಿದಿದೆ ಆದರೆ ಅದು ನನ್ನ ಪ್ರವೃತ್ತಿಯಲ್ಲ. ನನಗೆ ಅಧರ್ಮವೇನೆಂದು ತಿಳಿದಿದೆ ಆದರೆ ಅದರಿಂದ ನಾನು ನಿವೃತ್ತನಾಗಲಾರೆ!" :)
ಚಿತ್ರಕೃಪೆ: ಗೂಗಲ್
ಹಿಂದಿನ ಲೇಖನ ಭಾಗ - ೧೦ ಭೀಷ್ಮ ಯುಧಿಷ್ಠಿರ ಸಂವಾದ: ಶರಭಮೃಗದ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...
Comments
ಉ: ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು?
ಈ ಲೇಖನದ ಮುಂದಿನ ಭಾಗ - ೧౨ ಭೀಷ್ಮ ಯುಧಿಷ್ಠಿರ ಸಂವಾದ: ಸಮುದ್ರಸರಿತ್ಸಂವಾದ ಅಥವಾ ಜೊಂಡು ಹುಲ್ಲಿನ ವೃತ್ತಾಂತವು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B1%A8-...