ಕಗ್ಗ ದರ್ಶನ – 33 (1)
ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ
ಭವಿಷಿಯವ ಚಿಂತಿಸದೆ ಬದುಕ ನೂಕುತಿರು
ವಿವರಗಳ ಜೋಡಿಸುವ ಯಜಮಾನ ಬೇರಿಹನು
ಸವೆಸು ನೀಂ ಜನುಮವನು - ಮಂಕುತಿಮ್ಮ
ದಿವಸದಿಂದ ದಿವಸಕ್ಕೆ, ನಿಮಿಷದಿಂದ ನಿಮಿಷಕ್ಕೆ ಭವಿಷ್ಯವನ್ನು ಚಿಂತಿಸದೆ ಬದುಕನ್ನು ನೂಕುತ್ತಿರು. ಯಾಕೆಂದರೆ ನಿನ್ನ ಬದುಕಿನ ವಿವರಗಳನ್ನು ಜೋಡಿಸುವ ಯಜಮಾನ ಬೇರೆ ಇದ್ದಾನೆ. ನಿನ್ನ ಮುಂದಿನ ದಿನ ಅಥವಾ ನಿಮಿಷ ಹೇಗಿರಬೇಕು ಎಂದು ನಿರ್ಧರಿಸುವವನು ಅವನು, ನೀನಲ್ಲ. ಆದ್ದರಿಂದ ಆ ಜಗನ್ನಿಯಾಮಕನ ಮೇಲೆ ನಂಬಿಕೆಯಿಟ್ಟು ನಿನ್ನ ಜನ್ಮವನ್ನು ನೀನು ಸವೆಸು ಎಂದಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು.
ಹೆತ್ತವರು ಕೆಲವರು ತಮ್ಮ ಮಗ/ ಮಗಳನ್ನು ಡಾಕ್ಟರ್ ಮಾಡಲೇ ಬೇಕೆಂಬ ಹಟಕ್ಕೆ ಬೀಳುತ್ತಾರೆ. ಆದರೆ ಮಗ/ ಮಗಳಿಗೆ ಅದರಲ್ಲಿ ಆಸಕ್ತಿಯೇ ಇಲ್ಲ. ಆತ/ ಆಕೆಯ ಆಸಕ್ತಿ ಸಂಗೀತ, ನೃತ್ಯ, ಚಿತ್ರಕಲೆ ಅಥವಾ ಸಾಹಿತ್ಯ ಆಗಿರ ಬಹುದು. ಆದರೂ ಅಪ್ಪಅಮ್ಮನ ಒತ್ತಾಯಕ್ಕಾಗಿ ವೈದ್ಯಕೀಯ ಶಿಕ್ಷಣಕ್ಕೆ ಸೇರುತ್ತಾರೆ. ಒಂದೆರಡು ವರುಷಗಳಲ್ಲಿ “ಅದು ನನ್ನಿಂದ ಸಾಧ್ಯವೇ ಇಲ್ಲವೆಂದು” ಅದನ್ನು ತೊರೆದು, ತಮ್ಮ ಆಸಕ್ತಿಯ ವಿಷಯದ ಶಿಕ್ಷಣದಲ್ಲಿ ಮುಂದುವರಿಯುತ್ತಾರೆ.
ಹಾಗೆಯೇ ಮಗ/ ಮಗಳು ತಮ್ಮ ಜಾತಿಯವರನ್ನೇ ಮದುವೆಯಾಗಬೇಕು ಎಂಬುದು ಬಹುಪಾಲು ಹೆತ್ತವರ ನಿರೀಕ್ಷೆ. ಆದರೆ ಆಧುನಿಕ ಶಿಕ್ಷಣ ಪಡೆದು, ಜಗತ್ತಿನ ವಿವಿಧ ಪ್ರಭಾವಗಳಿಗೆ ಒಳಗಾಗಿ, ಎಲ್ಲಿಯೋ ದುಡಿಯುವ ಮಗ/ ಮಗಳು ಬೇರೆ ಜಾತಿಯ ಸಂಗಾತಿಯನ್ನು ಪ್ರೀತಿಸಲು ತೊಡಗುತ್ತಾರೆ; ಅನಂತರ ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಅಲ್ಲಿಗೆ ಹೆತ್ತವರ ಭವಿಷ್ಯದ ಕನಸು ನುಚ್ಚುನೂರು. ತಮ್ಮ ಮಕ್ಕಳು ಕೊನೆಗಾಲದ ವರೆಗೂ ತಮ್ಮೊಂದಿಗೇ ಇರಬೇಕೆಂಬ ಯೋಜನೆ ಕೆಲವು ಹೆತ್ತವರದ್ದು. ಅದಕ್ಕಾಗಿ ದೊಡ್ಡ ಮನೆ ಕಟ್ಟುತ್ತಾರೆ. ಕೊನೆಗೆ, ದೂರದ ಊರಿನಲ್ಲಿ/ ದೇಶದಲ್ಲಿ ಉದ್ಯೋಗದಲ್ಲಿರುವ ಮಕ್ಕಳು, ತಮ್ಮ ಶಿಕ್ಷಣದ ಬಳಿಕ ಒಂದು ತಿಂಗಳೂ ಈ ಮನೆಯಲ್ಲಿ ವಾಸವಿರುವುದಿಲ್ಲ. ಅದರಿಂದಾಗಿ ಈ ದೊಡ್ಡ ಮನೆ ಖಾಲಿಖಾಲಿ. ಇನ್ನು ಕೆಲವು ಹೆತ್ತವರದ್ದು ಇನ್ನೊಂದು ದೊಡ್ಡ ಕನಸು: ತಮ್ಮ ಮಕ್ಕಳು ಕೊನೆಗಾಲದಲ್ಲಿ ತಮ್ಮೊಂದಿರುತ್ತಾರೆ ಎಂದು. ಆದರೆ, ಅದೇ ಊರಿನಲ್ಲಿದ್ದರೂ ಕೆಲವು ಮಕ್ಕಳು ವೃದ್ಧ ತಂದೆತಾಯಿಯನ್ನು ಭೇಟಿ ಮಾಡುವುದು ಅಪರೂಪ. ವಿದೇಶಕ್ಕೆ ಹೋದರಂತೂ ಮಕ್ಕಳು ಹೆತ್ತವರಿಂದ ದೂರವಾದಂತೆಯೇ. ಪಿಎಚ್-ಡಿ ಮಾಡಲಿಕ್ಕಾಗಿ ಅಮೆರಿಕಾಕ್ಕೆ ಹೋಗುವ ಯುವಜನರಲ್ಲಿ ಶೇ.೯೫ ಜನರು ಹಿಂತಿರುಗಿ ಭಾರತಕ್ಕೆ ಬರುವುದಿಲ್ಲ; ಅಲ್ಲೇ ನೆಲೆಸುತ್ತಾರೆ. ಆದ್ದರಿಂದ ೨ ಕೂಡಿಸು ೨ ಎಂದರೆ ನಾಲ್ಕು ಎಂಬ ಲೆಕ್ಕಾಚಾರ ಗಣಿತಕ್ಕೆ ಸರಿ; ಆದರೆ ಬದುಕಿಗಲ್ಲ. ಬದುಕಿಗೆ ಬೇಕಾದ್ದು ಡಿವಿಜಿಯವರು ಇಲ್ಲಿ ತಿಳಿಸಿರುವ ಸರಳ ತತ್ವದ ಪಾಲನೆ, ಅಲ್ಲವೇ?