ಅರಣ್ಯ ಕಾಯಿದೆ, ೧೯೨೭ಕ್ಕೆ ತಿದ್ದುಪಡಿ: ಬಂಧನದಿಂದ ಬಿದಿರು ಬಿಡುಗಡೆ
“ಬಿದಿರು ಮರವಲ್ಲ” ಎಂಬ ಸತ್ಯವನ್ನು ಕೊನೆಗೂ ಒಪ್ಪಿಕೊಂಡ ಭಾರತ ಸರಕಾರ, ಈ ನಿಟ್ಟಿನಲ್ಲಿ ಅರಣ್ಯ ಕಾಯಿದೆ, ೧೯೨೭ನ್ನು ತಿದ್ದುಪಡಿ ಮಾಡಿದೆ.
ಇದಕ್ಕಿಂತ ಮುಂಚೆ, ಆ ಕಾಯಿದೆ ಪ್ರಕಾರ ಬಿದಿರನ್ನು ಮರಗಳ ವರ್ಗಕ್ಕೆ ಸೇರಿಸಲಾಗಿತ್ತು. ಇದರಿಂದಾಗಿ, ಕಾಡಿನಲ್ಲಿರುವ ಅಥವಾ ಅಲ್ಲಿಂದ ಕಡಿದು ತಂದ ಬಿದಿರನ್ನು “ಮೋಪು” ಎಂದು ಪರಿಗಣಿಸಿ, ಜನಸಾಮಾನ್ಯರಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಿರುಕುಳ. ಮಾತ್ರವಲ್ಲ, ಬುಟ್ಟಿ ಹೆಣೆದು ಜೀವನೋಪಾಯಕ್ಕಾಗಿ ಬಿದಿರನ್ನು ಬಳಸುತ್ತಿದ್ದ ಕಾಡಿನ ಜನಸಮುದಾಯಗಳ ಆದಾಯಕ್ಕೂ ಧಕ್ಕೆ. ಖಾಸಗಿ ನೆಲದಲ್ಲಿ ಬಿದಿರು ಬೆಳೆದವರೂ ಅರಣ್ಯ ಇಲಾಖೆಯ ಸತಾಯಿಸುವಿಕೆಯಿಂದಾಗಿ ಹೈರಾಣ. ಈ ಕಾರಣಗಳಿಂದಾಗಿ, ಕಾಡಿನ ಜನಸಮುದಾಯಗಳೂ ರೈತರೂ ಹಲವಾರು ದಶಕಗಳಿಂದ ಬಿದಿರಿನ ಅವೈಜ್ನಾನಿಕ ವರ್ಗೀಕರಣವನ್ನು ವಿರೋಧಿಸುತ್ತಿದ್ದರು.
ಪೊಯೆಸಿಯೇ ಎಂಬ ಹುಲ್ಲಿನ ಕುಟುಂಬಕ್ಕೆ ಸೇರಿದ ಬಿದಿರನ್ನು ಒಂದು ಮರದ ಜಾತಿಯೆಂದು ವರ್ಗೀಕರಿಸುವುದಕ್ಕೆ ಯಾವುದೇ ವೈಜ್ನಾನಿಕ ಕಾರಣವಿಲ್ಲ. ಇದೀಗ, ಅರಣ್ಯ ಕಾಯಿದೆ ೧೯೨೭ರ ಸೆಕ್ಷನ್ ೨(೭) ತಿದ್ದುಪಡಿ ಆದಾಗಿನಿಂದ, ಬಿದಿರು ಮರವಲ್ಲ ಮತ್ತು ಕಡಿದ ಬಿದಿರನ್ನು ಮೋಪು ಎಂದು ಪರಿಗಣಿಸುವಂತಿಲ್ಲ. ಹಾಗಾಗಿ ತಮ್ಮ ಖಾಸಗಿ ಜಮೀನಿನಲ್ಲಿ ಬಿದಿರು ಬೆಳೆದಿರುವ ಲಕ್ಷಗಟ್ಟಲೆ ರೈತರು ಅದನ್ನು ಕಡಿಯಲಿಕ್ಕೆ ಮತ್ತು ಸಾಗಾಟ ಮಾಡಲಿಕ್ಕೆ ಅರಣ್ಯ ಇಲಾಖೆಯ ಪರವಾನಗಿ ಪಡೆಯಬೇಕಾಗಿಲ್ಲ. ಈ ರೀತಿಯಲ್ಲಿ, ಬ್ರಿಟಿಷ ಆಳ್ವಿಕೆಯ ಮತ್ತೊಂದು ಪಳೆಯುಳಿಕೆ ಕಳಚಿ ಬಿದ್ದಿದೆ.
ಭಾರತದಲ್ಲಿ ಬೆಳೆಯುತ್ತಿರುವ ಬಿದಿರಿನ ಸ್ಪಿಷೀಸುಗಳ ಸಂಖ್ಯೆ ೧೨೫ಕ್ಕಿಂತ ಜಾಸ್ತಿ. ಈಗ ೧೧.೩೬ ದಶಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಮತ್ತು ಖಾಸಗಿ ಜಮೀನಿನಲ್ಲಿ ಬೆಳೆಯುತ್ತಿರುವ ಬಿದಿರಿನ ವಾರ್ಷಿಕ ಉತ್ಪಾದನೆ ೧೩.೫ ದಶಲಕ್ಷ ಟನ್. ಇದರ ಉತ್ಪಾದನೆ ಹೆಚ್ಚಿಸಲು ಈಗ ಅವಕಾಶಗಳು ವಿಪುಲ. ಈ ಬಿದಿರನ್ನು ಮೌಲ್ಯವರ್ಧಿತ ವಸ್ತುಗಳ ಉತ್ಪಾದನೆಗೆ ಬಳಸಿ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವಕಾಶ ಹೆಚ್ಚಿಸಲಿಕ್ಕೂ ಅವಕಾಶಗಳು ಹೇರಳ.
ಹೊಸ ತಂತ್ರಜ್ನಾನ ಬಳಸಿ, ಬಿದಿರಿನಿಂದ ಮೋಪಿನ ಬದಲಿವಸ್ತುವಾದ, ಮಧ್ಯಮ ಸಾಂದ್ರತೆಯ ನಾರಿನ ಹಲಗೆ (ಫೈಬರ್ ಬೋರ್ಡ್) ಮತ್ತು ಕಣಹಲಗೆ (ಪಾರ್ಟಿಕಲ್ ಬೋರ್ಡ್) ತಯಾರಿಸಬಹುದು. ಅಗರಬತ್ತಿಗಾಗಿ ಬಿದಿರುಕಡ್ಡಿಗಳು, ಎಳೆಬಿದಿರು (ಕಣಿಲೆ), ಇದ್ದಿಲು ಮತ್ತು ಪಟೂಕೃತ (ಆಕ್ಟಿವೇಟೆಡ್) ಇಂಗಾಲ – ಇವೆಲ್ಲ ಬಿದಿರಿನ ಇತರ ಬಳಕೆಗಳು.
“ನೀತಿ ಆಯೋಗ”ದ ಅಂದಾಜಿನ ಪ್ರಕಾರ, ನಮ್ಮ ದೇಶದಲ್ಲಿ ಬಿದಿರಿನಿಂದ ರೂ.೫೦,೦೦೦ ಕೋಟಿ ಮೌಲ್ಯದ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಗಟ್ಟಲೆ ದಿನಗಳ ಉದ್ಯೋಗ ಒದಗಿಸಲು ಸಾಧ್ಯ. ಈಗ, ಬಿದಿರಿನಿಂದ ಲಭ್ಯವಿರುವ ಆದಾಯದ ಮೌಲ್ಯ ಕೇವಲ ರೂ.೫,೦೦೦ ಕೋಟಿ.
ಕಳೆದ ಎರಡು ದಶಕಗಳಲ್ಲಿ ಬಿದಿರು ಆಧಾರಿತ ಕಿರುಉದ್ದಿಮೆಗಳ ಅಭಿವೃದ್ಧಿಗಾಗಿ ಸರಕಾರ ಕೆಲವು ಕಾರ್ಯಕ್ರಮಗಳನ್ನು ಜ್ಯಾರಿ ಮಾಡಿತ್ತು. ಭಾರತೀಯ ಕೈಗಾರಿಕಾ ಕಾನ್ಫೆಡರೇಷನ್ ಮತ್ತು ಭಾರತ ಅಭಿವೃದ್ಧಿ ಪ್ರತಿಷ್ಠಾನ ೨೦೦೭ರಲ್ಲಿ ನಡೆಸಿದ ಅಧ್ಯಯನವು ಈ ನಿಟ್ಟಿನಲ್ಲಿ ಎದುರಾಗುವ ಎಡರುತೊಡರುಗಳನ್ನು ಗುರುತಿಸಿತ್ತು. ಬಿದಿರು ಆಧಾರಿತ ನವೋದ್ಯಮಗಳಿಗೆ ಗುಣಮಟ್ಟದ ಬಿದಿರಿನ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿತ್ತು.
ಕೇಂದ್ರ ಸರಕಾರವು ಅರಣ್ಯ ಕಾಯಿದೆ ೧೯೨೭ಕ್ಕೆ ಮಾಡಿರುವ ತಿದ್ದುಪಡಿಯಿಂದಾಗಿ ಕಾಡಿನಲ್ಲಿರುವ ಬಿದಿರಿನ ಸಂಪತ್ತಿಗೆ ಅಪಾಯವಿದೆ ಎಂಬುದು ಕೆಲವು ಪರಿಸರವಾದಿಗಳ ವಾದ. ಇದಕ್ಕೆ ಆಧಾರವಿಲ್ಲ. ಯಾಕೆಂದರೆ, ಅರಣ್ಯ ಕಾಯಿದೆ ೧೯೨೭ರ ಅನುಸಾರ ಕಾಡಿನಲ್ಲಿರುವ ಬಿದಿರನ್ನು ಅನುಮತಿಯಿಲ್ಲದೆ ಈಗಲೂ ಕಡಿಯುವಂತಿಲ್ಲ. ಹಾಗೆ ಕಡಿದವರನ್ನು ಶಿಕ್ಷಿಸಲು ಅರಣ್ಯ ಇಲಾಖೆಗೆ ಅಧಿಕಾರವಿದೆ.
ಅದಲ್ಲದೆ, ಬಿದಿರಿನ ಬಳಕೆಯ ವಿಧಾನವೇ ಬೇರೆ. ವೇಗವಾಗಿ ಬೆಳೆಯುವ ನೀಲಗಿರಿ, ಅಕೇಶಿಯಾ ಇತ್ಯಾದಿ ಮರಗಳನ್ನು ಕಡಿಯುವುದು ೮-೯ ವರುಷಗಳಿಗೊಮ್ಮೆ; ಗಟ್ಟಿ-ಮೋಪಿನ ತೇಗ ಇತ್ಯಾದಿ ಮರಗಳನ್ನು ಕಡಿಯುವುದು ೪೦-೬೦ ವರುಷಗಳಿಗೊಮ್ಮೆ. ಆದರೆ, ಬಿದಿರು ಮೆಳೆಗಳಿಂದ ಬೆಳೆದ (ಮಾಗಿದ) ಬಿದಿರು ಗಳಗಳನ್ನು ಪ್ರತಿ ವರುಷವೂ ಕಡಿಯಬೇಕು. ಇತರ ಮರಗಳನ್ನು ಕಡಿಯುವಾಗ ಇಡೀ ಮರವನ್ನೇ ಕಡಿದರೆ, ಬಿದಿರು ಮೆಳೆಗಳಿಂದ ಬೆಳೆದ ಗಳಗಳನ್ನು ಮಾತ್ರ ಕಡಿಯುವುದು ವಾಡಿಕೆ. ಆಗ ಮಣ್ಣಿನಲ್ಲೇ ಉಳಿಯುವ ಬಿದಿರಿನ ಬೇರು-ಮೂಲದಿಂದ ಬಿದಿರು ಪುನಃ ಚಿಗುರಿ ಬೆಳೆಯುತ್ತದೆ. ನಿಜ ಹೇಳಬೇಕೆಂದರೆ, ಯಾವುದೇ ಬಿದಿರು ಮೆಳೆಯಿಂದ ಪ್ರತಿ ವರುಷ ಬೆಳೆದ ಗಳಗಳನ್ನು ಕಡಿಯದಿದ್ದರೆ, ಆ ಮೆಳೆ ಚೆನ್ನಾಗಿ ಬೆಳೆಯೋದಿಲ್ಲ.
ತಮ್ಮ ಜೀವನೋಪಾಯಕ್ಕಾಗಿ ಬಿದಿರನ್ನು ಅವಲಂಬಿಸಿದವರಿಗಂತೂ ಈ ತಿದ್ದುಪಡಿಯಿಂದ ಅನುಕೂಲವಾಗಿದೆ. ಯಾಕೆಂದರೆ, ಹಳೆಯ ನಿಯಮಗಳ ಪ್ರಕಾರ, ಕೃಷಿ ಜಮೀನಿನಲ್ಲಿ ಬಿದಿರು ಬೆಳೆಯಲು ಅಡಚಣೆಗಳಿದ್ದವು. ಈಗ, ಕೃಷಿ ಜಮೀನಿನಲ್ಲಿಯೂ ಬಿದಿರು ಬೆಳೆದು, ಬಿದಿರಿನ ಕಲಾತ್ಮಕ ವಸ್ತು ತಯಾರಿಸುವ ಕರಕುಶಲಕರ್ಮಿಗಳಿಗೂ, ಬಿದಿರು ಆಧಾರಿತ ಕಿರುಉದ್ದಿಮೆಗಳಿಗೂ ಸಾಕಷ್ಟು ಕಚ್ಚಾ ಸಾಮಗ್ರಿ ಒದಗಿಸಬಹುದು.
ಬಿದಿರಿನಿಂದ ತಯಾರಿಸುವ ಹೊಸಹೊಸ ವಿನ್ಯಾಸದ ಆಸನಗಳು, ಕಿಟಕಿಗಳಿಗೆ ಬಿಸಿಲು-ತಡೆಗಳು, ಆಕರ್ಷಕ ಸರಗಳು, ಆಟಿಕೆಗಳು, ಕೀಚೈನ್, ಮೊಬೈಲ್ ಫೋನ್ ಹೋಲ್ಡರ್ ಇತ್ಯಾದಿ ದಿನಬಳಕೆ ವಸ್ತುಗಳು – ಇವಕ್ಕೆಲ್ಲ ಬೇಡಿಕೆ ಹೆಚ್ಚುತ್ತಲೇ ಇದೆ. ಇವನ್ನು ತಯಾರಿಸುವ ಕಿರುಉದ್ದಿಮೆ ಹಾಗೂ ಕರಕುಶಲ ಕೇಂದ್ರಗಳಲ್ಲಿ ಲಕ್ಷಗಟ್ಟಲೆ ಯುವಜನರಿಗೆ ಉದ್ಯೋಗದ ಅವಕಾಶಗಳಿವೆ. ಜೊತೆಗೆ, ಇವಕ್ಕಾಗಿ ಕಚ್ಚಾಸಾಮಗ್ರಿಯಾದ ಬಿದಿರು ಒದಗಿಸಲಿಕ್ಕಾಗಿ ಲಕ್ಷಗಟ್ಟಲೆ ಎಕ್ರೆಗಳಲ್ಲಿ ಬಿದಿರು ಬೆಳೆಸಬೇಕಾಗುತ್ತದೆ; ಇದರಿಂದ ಸಾವಿರಾರು ಕೃಷಿಕುಟುಂಬಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ಇನ್ನಾದರೂ ಅರಣ್ಯ ಇಲಾಖೆಯ ಸಿಬ್ಬಂದಿ ಬಿದಿರಿನ ನೆವನದಲ್ಲಿ ಜನಸಾಮಾನ್ಯರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಿ, ಬಿದಿರಿನ ಕೃಷಿ ಹಾಗೂ ಬಳಕೆಯನ್ನು ಪ್ರೋತ್ಸಾಹಿಸಲಿ.