ನಾನು ನೋಡಿದ ಚಿತ್ರ- 2001: ಎ ಸ್ಪೇಸ್ ಒಡಿಸ್ಸಿ

ನಾನು ನೋಡಿದ ಚಿತ್ರ- 2001: ಎ ಸ್ಪೇಸ್ ಒಡಿಸ್ಸಿ

IMDb:  https://www.imdb.com/title/tt0062622/?ref_=nv_sr_1

 
 
 
 
 
 
 
 
 
 
 
 
  ಸೈ-ಫೈ ಚಿತ್ರಗಳು ಎಂದ ತಕ್ಷಣ ಎಲ್ಲರ ಬಾಯಲ್ಲಿ ಬರುವ ಚಿತ್ರಗಳೆಂದರೆ ಮೇಟ್ರಿಕ್ಸ್, ಬ್ಯಾಕ್ ಟು ದಿ ಫ್ಯೂಚರ್, ಸ್ಟಾರ್ ವಾರ್ಸ್, ಸ್ಟಾರ್ ಟ್ರೆಕ್, ಟರ್ಮಿನೇಟರ್ ಇತ್ಯಾದಿ. ಆದರೆ ಇವೆಲ್ಲಾ ಸಿನೆಮಾಗಳ ಮುಂಚೆ ಸೈ-ಫೈ ಚಿತ್ರಗಳು ಅದರಲ್ಲೂ ಭವಿಷ್ಯದ ಬಗೆಗಿನ ಚಿತ್ರಗಳು ಹೇಗಿರಬೇಕು ಎನ್ನುವ ಬಗ್ಗೆ ಸ್ಪಷ್ಟ ಕಲ್ಪನೆ ಕೊಟ್ಟ ಚಿತ್ರವೇ 2001: ಎ ಸ್ಪೇಸ್ ಒಡಿಸ್ಸಿ. ಆರ್ಥರ್ ಸಿ ಕ್ಲಾರ್ಕ್ ಜೊತೆ ಸ್ಟಾನ್ಲಿ ಕೂಬ್ರಿಕ್ ಬರೆದ ಕಥೆಯನ್ನು, ಸ್ಟಾನ್ಲಿ ಕೂಬ್ರಿಕ್ ನಿರ್ದೇಶಿಸಿದ್ದಾರೆ. ಈ ಚಿತ್ರ ನೋಡಿದ ಮೇಲೆ, 1968 ರಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದು ಎಂದರೆ ನಂಬುವುದು ಕಷ್ಟ. ಅಷ್ಟು ಅದ್ಭುತವಾಗಿ ಚಿತ್ರದ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಲಾಗಿತ್ತು. ಸ್ವಲ್ಪ ಮಟ್ಟಿಗಿನ ಸ್ಪೆಷಲ್ ಎಫೆಕ್ಟ್ಸ್ ಬಿಟ್ಟರೆ ಸಿನೆಮಾದಲ್ಲಿ ಕಾಣುವ ಉಳಿದ ಭಾಗವೆಲ್ಲವೂ ಸೆಟ್ ನಿರ್ಮಿಸಿ ಚಿತ್ರೀಕರಿಸಿದ್ದು. ಈ ಚಿತ್ರ ಎಷ್ಟು ಚೆನ್ನಾಗಿ ಮೂಡಿಬಂದಿದೆ ಎಂದರೆ ಅಮೇರಿಕನ್ನರು ಚಂದ್ರನ ಮೇಲೆ ಹೋಗಿದ್ದು ಸುಳ್ಳು ಎಂದೂ, ಮೂನ್ ಲ್ಯಾಂಡಿಂಗ್(1969) ಅನ್ನು ಸ್ಟಾನ್ಲಿ ಕೂಬ್ರಿಕ್ ನಾಸಾಗಾಗಿ ಏರಿಯಾ 51ನಲ್ಲಿ ನಿರ್ಮಿಸಿದ್ದು ಎಂದೂ ತಮಾಷೆಯಾಡುವುದುಂಟು.
 ಈಗಿನ ಚಿತ್ರಗಳಲ್ಲಿ ನನಗೆ ವಯ್ಯಕ್ತಿಕವಾಗಿ ಇಷ್ಟವಾಗದ್ದು ಎಂದರೆ, ಅತಿಯಾದ ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆ. ಎಷ್ಟರ ಮಟ್ಟಿಗೆ ಎಂದರೆ ಸ್ಪೆಷಲ್ ಎಫೆಕ್ಟ್ಸ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಗಾಗಿಯೇ ಕಥೆಯೊಂದನ್ನು ಸೃಷ್ಟಿಸಿದಂತೆ ತೋರುತ್ತದೆ. ಹಾಗಾಗಿಯೇ ಇಷ್ಟು ಸೂಪರ್ ಹೀರೋ ಚಿತ್ರಗಳು, ಸ್ಟಾರ್ ವಾರ್ಸ್ (ಹೊಸ ಅವತರಣಿಕೆ) ಚಿತ್ರಗಳು, ಜುರಾಸಿಕ್ ಪಾರ್ಕ್ ಚಿತ್ರಗಳು ವರ್ಷಕ್ಕೊಂದರಂತೆ ಬಿಡುಗಡೆಯಾಗುತ್ತಲೇ ಇವೆ. ಆದರೆ ಈ ಚಿತ್ರದಲ್ಲಿ ನಿಮಗೆ ಪ್ರತಿಯೊಂದು ವೈಜ್ಞಾನಿಕ ಉಪಕರಣಗಳ ಬಗ್ಗೆ ತೋರಿಸುವಾಗ ಅಗತ್ಯ ಸಮಯ ಕೊಟ್ಟು ಪ್ರೇಕ್ಷಕರಿಗೆ ಅದನ್ನು ನೋಡಿ, ತಮ್ಮ ಕಲ್ಪನೆಯಲ್ಲಿ ಆ ವಸ್ತು ಅಥವಾ ದೃಶ್ಯ ಇಳಿದುಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಹಾಗಾಗಿ ಚಿತ್ರದ ಅವಧಿ ಎರಡೂವರೆ ಗಂಟೆ ಇದ್ದರೂ ಸಂಭಾಷಣೆಗಿಂತಲೂ ದೃಶ್ಯವೈಭವದ ಮೇಲೆ ಮತ್ತು ದೃಶ್ಯದಲ್ಲಿನ ಡ್ರಾಮ ಮೇಲೆ ಹೆಚ್ಚು ಅವಲಂಬಿಸಿರುವುದರಿಂದ ಚಿತ್ರ ನೋಡುವಾಗ ಸ್ವಲ್ಪ ಎಳೆಯಲಾಗಿದೆಯೇನೋ ಎಂದು ಅನ್ನಿಸುತ್ತದೆ.
  ಇತಿಹಾಸಪೂರ್ವದಲ್ಲಿ, ಮನುಷ್ಯನಿನ್ನೂ ಬೆಳವಣಿಗೆಯಾಗಿಲ್ಲದ ಕಾಲ. ಮನುಷ್ಯನ ಪೂರ್ವಜ ಕಪಿ ಪ್ರಭೇದದ ಗುಂಪೊಂದು, ಒಂದು ಬರಡು ಪ್ರದೇಶದಲ್ಲಿರುವ ಒಂದು ಚಿಕ್ಕ ನೀರಿನ ಹೊಂಡವನ್ನಾಧರಿಸಿ ಅಲ್ಲೇ ಗುಹೆಗಳಲ್ಲಿ ಜೀವಿಸುತ್ತಿರುತ್ತವೆ. ಇನ್ನೊಂದು ಗುಂಪು ಇದೇ ನೀರಿನ ಸೆಲೆಗಾಗಿ ಈ ಗುಂಪಿನ ಜೊತೆ ಸದಾ ಹೊಡೆದಾಟ ನಡೆಸುತ್ತಲೇ ಇರುತ್ತದೆ. ಹೀಗೇ ಬದುಕು ಸಾಗುತ್ತಿದ್ದಾಗ, ಒಂದು ದಿನ, ಇದ್ದಕ್ಕಿದ್ದಂತೆ ಒಂದು ಲಂಬಾಕಾರದ ದೊಡ್ಡ ಶಿಲಾವಸ್ತು ಈ ಗುಂಪಿನ ಗುಹೆಗಳ ಬಳಿ ಪ್ರತ್ಯಕ್ಷವಾಗುತ್ತದೆ. ಎಂದೂ ಇಲ್ಲದ್ದು, ಆ ಪ್ರದೇಶದ ಪರಿಸರಕ್ಕೆ ಯಾವ ವಿಧದಲ್ಲೂ ಹೊಂದದ ಈ ವಿಚಿತ್ರ ವಸ್ತುವನ್ನು ನೋಡಿ ಎಲ್ಲ ಕಪಿಗಳು ಗಾಬರಿಯಾಗುತ್ತವೆ. ಮುಟ್ಟಿ ನೋಡುತ್ತವೆ, ನೆಕ್ಕಿ ನೋಡುತ್ತವೆ. ಈ ಯಾವ ಕ್ರಿಯೆಗೂ ಪ್ರತಿಕ್ರಿಯಿಸದೆ ನಿಂತ ಈ ಶಿಲೆಯನ್ನು ಗಮನಿಸಿದಷ್ಟು ವೇಗದಲ್ಲೇ ಮರೆತುಬಿಡುತ್ತವೆ. ಆದರೆ ಒಂದು ಕಪಿಗೆ ಮಾತ್ರ ಈ ಶಿಲಾವಸ್ತುವಿನ ಪ್ರಭಾವ ಉಂಟಾಗುತ್ತದೆ. ಅದು ಇನ್ನಿತರ ಕಪಿಗಳಿಗಿಂತ ಕೊಂಚ ಭಿನ್ನವಾಗಿ ವರ್ತಿಸಲು ಪ್ರಾರಂಭಿಸಿ ತನ್ನ ಸುತ್ತಲ ಪರಿಸರವನ್ನು ಹೊಸ ರೀತಿಯಲ್ಲಿ ನೋಡತೊಡಗುತ್ತದೆ. ಅಲ್ಲೇ ಬಿದ್ದಿದ್ದ ಒಂದು ಪ್ರಾಣಿಯ ಅಸ್ತಿಪಂಜರದಿಂದ ಮೂಳೆಯೊಂದನ್ನು ಎತ್ತಿಕೊಂಡು ಕುಟ್ಟಲು ಪ್ರಾರಂಭಿಸುತ್ತದೆ. ಏನೋ ಹೊಳೆದಂತೆ ಜೋರಾಗಿ ಕೂಗಾಡಲು ಪ್ರಾರಂಭಿಸುತ್ತದೆ. ಮರುದಿನ ಮತ್ತೆ ಆ ನೀರಿನ ಸೆಲೆಗಾಗಿ ಇನ್ನೊಂದು ಗುಂಪು ಹೊಡೆದಾಡಲು ಬಂದಾಗ ಈ ಕಪಿ ಆ ಮೂಳೆಯನ್ನು ಹಿಡಿದು ಎದುರು ಗುಂಪಿನ ನಾಯಕ ಕಪಿಯ ತಲೆಗೆ ಬಲವಾಗಿ ಹೊಡೆದು ಸಾಯಿಸಿ ತನ್ನ ಗುಂಪಿನ ಪಾರಮ್ಯ ಮೆರೆಯುತ್ತದೆ. ಅಲ್ಲಿಗೆ ಕಪಿ ಆಯುಧ ಉಪಯೋಗಿಸಿ ಮನುಷ್ಯನಾಗುವ ಕಡೆಗಿನ ಪ್ರಯಾಣ ಪ್ರಾರಂಭವಾಯಿತು ಎಂದು ಚಿತ್ರ ಮಾರ್ಮಿಕವಾಗಿ ಹೇಳುತ್ತದೆ. ಕಪಿ, ಹಾಗೆ ಆಯುಧವಾಗಿ ಬಳಸಿದ ಮೂಳೆಯೊಂದನ್ನು ಮೇಲಕ್ಕೆಸೆಯುತ್ತಿದ್ದಂತೆ ಅದು ಆಕಾಶಕ್ಕೆ ಚಿಮ್ಮಿ ಒಂದು ಬಾಹ್ಯಾಕಾಶ ವಾಹನವಾಗಿ ಪರಿವರ್ತನೆಯಾಗುವುದರೊಂದಿಗೆ ನಾವು ಇತಿಹಾಸಪೂರ್ವದಿಂದ 2001ಕ್ಕೆ ಚಿಮ್ಮುತ್ತಿದ್ದೇವೆ ಎಂದು ಚಿತ್ರ ನಮ್ಮನ್ನು ಕರೆದೊಯ್ಯುತ್ತದೆ. ಇದಿಷ್ಟೂ ನಡೆಯುತ್ತಿರುವ ಕಾಲ ಈ ದೃಶ್ಯಾವಳಿಗಳ ಹಿನ್ನಲೆ ಸಂಗೀತದಲ್ಲಿ ರಿಚರ್ಡ್ ಸ್ಟ್ರಾಸ್ ನ “ಅಲ್ಸೋ ಸ್ಪ್ರಾಖ್ ಜಾರತೂಸ್ತ್ರ”(Richard Strauss- Also Sprach Zarathustra) ಮತ್ತು ಯೋಹಾನ್ ಸ್ಟ್ರಾಸ್ ನ “ ದಿ ಬ್ಲೂ ದಾನುಬೆ ವಾಲ್ತ್ಜ್” (Johann Strauss- The Blue Danube Waltz) ಗಳ ಬಳಕೆ ಅದೆಷ್ಟು ಹೊಂದಿಕೊಂಡಿವೆ ಎಂದರೆ ಈ ಎರಡು ಸಂಗೀತ ರಚನೆಗಳನ್ನು ಹೊರತುಪಡಿಸಿ ಈ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಒಂದು ಸೈ-ಫೈ ಚಿತ್ರದಲ್ಲಿ ಕ್ಲಾಸಿಕಲ್ ಮ್ಯುಸಿಕ್ ಅನ್ನು ಕೂಬ್ರಿಕ್ ಬಳಸಿದ್ದರ ಬಗ್ಗೆ ಅನೇಕರು ಇದು ಹೊಂದಿಕೆಯಾಗುವುದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. Waltz ಸಂಗೀತ ಎಂದರೆ Waltz ನೃತ್ಯಕ್ಕಾಗಿ ಬರೆದ ಸಂಗೀತ ಎಂದು. ಈ ಚಿತ್ರದಲ್ಲಿ ಬಾಹ್ಯಾಕಾಶದಲ್ಲಿ ಸಾಗುತ್ತಿರುವ ಒಂದು ವಾಹನ ನಿಧಾನವಾಗಿ ದೂರದ ಬಾಹ್ಯಾಕಾಶ ಕೇಂದ್ರ ತಲುಪುವಾಗ ಆಕಾಶದಲ್ಲಿ ತೇಲುವ ದೃಶ್ಯ ಇವೆರಡೂ Waltz ನೃತ್ಯವಾಡುತ್ತಿವೆಯೇನೊ ಎಂದು ಅನ್ನಿಸುತ್ತದೆ. ಇದನ್ನು ನಾನು ಎಷ್ಟು ವಿಧವಿಧವಾಗಿ ಬಣ್ಣಿಸಿ ಹೇಳಿದರೂ ಚಿತ್ರವನ್ನು ನೋಡದ ಹೊರತು ನಿಮಗದರ ಕಲ್ಪನೆ ಸಿಗದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಪಿಗಳ ವೇಷ ಧರಿಸಿ ನಟಿಸಿರುವ ನಟರು. ಎಲ್ಲಿಯೂ ಕೃತಕ ಎನ್ನಿಸದಂತೆ ನಟನೆ ಮಾಡಿರುವುದು ನಟರ ಚಿತ್ರದ ಮುಂಚಿನ ಅಭ್ಯಾಸದ ಬಗ್ಗೆ ತಿಳಿಸುತ್ತದೆ. ಕಪಿಯಂತೆ ನಟಿಸುವುದು ಏನು ಕಷ್ಟ ಎಂದು ಅನ್ನಿಸಿದರೂ, ಚಿತ್ರದ ಈ ಭಾಗ ನಾವು ಡಾಕ್ಯುಮೆಂಟರಿಯೊಂದನ್ನು ನೋಡುತ್ತಿದ್ದೇವೇನೋ ಎಂದು ಅನ್ನಿಸುವಷ್ಟು ಚೆನ್ನಾಗಿ ಕಪಿಗಳ ಹಾವಭಾವಗಳನ್ನು ನಟಿಸಿರುವುದರಿಂದ ಇದಕ್ಕೆ ಶ್ರಮಿಸಿದ ನಟರನ್ನು ಶ್ಲಾಘಿಸಲೇಬೇಕು.

 
 
 
 
 
  ಬಾಹ್ಯಾಕಾಶ ಕೇಂದ್ರ ತಲುಪುತಿದ್ದಂತೆ, ಗಗನಯಾತ್ರಿ ಡಾ.ಫ್ಲಾಯ್ಡ್ ಬಸ್ ಇಳಿದು ಬರುವ ಪ್ರಯಾಣಿಕನಂತೆ ಪ್ಯಾನ್ ಅಮೇರಿಕನ್ ಬಾಹ್ಯಾಕಾಶ ನೌಕೆಯಿಂದ ಇಳಿದು ತಾನು ಭೇಟಿಮಾಡಬೇಕಿರುವ ವ್ಯಕ್ತಿಯನ್ನು ಹುಡುಕಿ ಹೊರಡುತ್ತಾನೆ. ತನ್ನನ್ನು ಕರೆದುಕೊಂಡು ಹೋಗಲು ಬಂದ ಮಿಲ್ಲರ್ ಎಂಬಾತನ ಜೊತೆ ಹೋಗುವಾಗ ಫ್ಲಾಯ್ಡ್ ಒಳ ಪ್ರವೇಶಕ್ಕೂ ಮುನ್ನ ವಾಯ್ಸ್ ಪ್ರಿಂಟ್ ಐಡೆಂಟಿಫಿಕೇಶನ್ (ಇಂದಿನ ವಾಯ್ಸ್ ಐಡೆಂಟಿಫಿಕೇಶನ್ ನ ರೀತಿ) ಮೂಲಕ ಆತನ ಗುರುತನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಫ್ಲಾಯ್ಡ್ ತಾನು ಹೋಗಬೇಕಿರುವ ಸ್ಥಳವಾದ ಚಂದ್ರ, ತನ್ನ ದೇಶದ ಪೌರತ್ವ (ಅಮೇರಿಕನ್) ಮತ್ತು ತನ್ನ ಪೂರ್ತಿ ಹೆಸರು ಹೇಳಿ ತನ್ನ ಗುರುತನ್ನು ಧೃಡೀಕರಿಸುತ್ತಾನೆ. ನಂತರ ಅಲ್ಲಿಂದ ಹೊರಟಾಗ ಫ್ಲಾಯ್ಡ್ ತನಗೆ ಹಸಿವೆಯಾಗಿದ್ದು ತಿಂಡಿ ತಿಂದು ಮುಂದಕ್ಕೆ ಹೋಗೋಣ ಎಂದಾಗ ಮಿಲ್ಲರ್ ತಮಗಾಗಿ ಆಗಲೇ ಅರ್ತ್ ಲೈಟ್ ರೂಮ್ ನಲ್ಲಿ ಒಂದು ಟೇಬಲ್ ಕಾದಿರಿಸಿರುವುದಾಗಿ ಹೇಳುತ್ತಾನೆ. ಫ್ಲಾಯ್ಡ್, ಮಿಲ್ಲರ್ ಗೆ ತಾನು ಒಂದು ಫೋನ್ ಮಾಡಿ ಬರುವುದಾಗಿ ಹೇಳಿ ಕಳುಹಿಸುತ್ತಾನೆ. ಫ್ಲಾಯ್ಡ್, ಮಿಲ್ಲರ್ ನನ್ನು ಕಳಿಸಿ ಪಿಕ್ಚರ್ ಫೋನ್ ಎಂದು ಬರೆದಿರುವ ಬೂತ್ ಗಳಲ್ಲೊಂದರಲ್ಲಿ ಕೂತು ಭೂಮಿ ಮೇಲಿನ ತನ್ನ ಮನೆಗೆ ಒಂದು ವಿಡಿಯೋ ಕಾಲ್ ಮಾಡಿ ಮಗಳೊಡನೆ ಮಾತನಾಡುತ್ತಾನೆ. ಮಾತು ಮುಗಿಸಿ ಹೊರಬಂದಾಗ ಅಲ್ಲೇ ಲಾಬಿಯಲ್ಲಿ ಕೂತಿದ್ದ ರಷ್ಯಾದ ಕೆಲವು ಗಗನಯಾತ್ರಿಗಳೊಡನೆ ಮಾತನಾಡುತ್ತ ನಿಲ್ಲುತ್ತಾನೆ. ಫ್ಲಾಯ್ಡ್ ಅಲ್ಲಿಗೆ ಬಂದ ಕಾರಣದ ಬಗ್ಗೆ ಚರ್ಚಿಸುತ್ತ ಸ್ಮಿಶ್ಲೊವ್ ಎಂಬ ರಷ್ಯಾದ ಗಗನಯಾತ್ರಿ ಚಂದ್ರನ ಮೇಲಿನ ಒಂದು ಬೇಸ್ ಕ್ಲೇವಿಯಸ್ ಎಂಬಲ್ಲಿ ನಡೆಯುತ್ತಿರುವ ವಿಚಿತ್ರಗಳ ಬಗ್ಗೆ ಪ್ರಶ್ನಿಸುತ್ತಾನೆ. ಹತ್ತು ದಿನಗಳಿಂದ ಅಲ್ಲಿನ ಯಾರೂ ಯಾವ ಸಂಪರ್ಕಕ್ಕೂ ಸ್ಪಂದಿಸುತ್ತಿಲ್ಲ ಎಂದೂ, ತಮ್ಮ ದೇಶದ ನೌಕೆಯೊಂದು ತುರ್ತು ಸಂದರ್ಭದಲ್ಲಿ ಅಲ್ಲಿ ಲ್ಯಾಂಡ್ ಮಾಡಬೇಕಾಗಿ ಬಂದಾಗ ಸಮ್ಮತಿ ಸಿಗದಿದ್ದದ್ದು ಎಲ್ಲವೂ ಅಲ್ಲಿ ಸಾಂಕ್ರಾಮಿಕ ರೋಗ ಹರಡಿದೆಯೇನೋ ಎಂಬ ಗುಮಾನಿ ಸೃಷ್ಟಿಸಿದೆ ಎಂದು ಹೇಳುತ್ತಾನೆ. ಅದರ ಬಗ್ಗೆ ಹೆಚ್ಚಾಗಿ ಮಾತಾಡಲೊಪ್ಪದ ಫ್ಲಾಯ್ಡ್ ತನ್ನನ್ನು ಬಲವಂತ ಪಡಿಸದಂತೆ ವಿನಂತಿಸಿ ಎಲ್ಲರಿಗೂ ವಿದಾಯ ಹೇಳಿ ಹೊರಡುತ್ತಾನೆ. ಅಲ್ಲಿಂದ ಫ್ಲಾಯ್ಡ್ ಚಂದ್ರನಲ್ಲಿನ ತಮ್ಮ ದೇಶದ ಬೇಸ್ ಗೆ ಮತ್ತೊಂದು ಗಗನ ನೌಕೆಯಲ್ಲಿ ಹೋಗಿ ತಲುಪುತ್ತಾನೆ. ಅಲ್ಲಿ ನಡೆಯುವ ಗುಪ್ತ ಸಭೆಯೊಂದರಲ್ಲಿ ನೆರೆದಿದ್ದ ಎಲ್ಲರಿಗೂ ಅವರು ಕಂಡುಹಿಡಿದಿರುವ ಆ ವಸ್ತುವಿನ ಬಗ್ಗೆ ಅಭಿನಂದನೆ ಸಲ್ಲಿಸಿ ಈ ವಿಷಯ ಗುಪ್ತವಾಗಿರಿಸುವ ಸಲುವಾಗಿ ನ್ಯಾಷನಲ್ ಕೌನ್ಸಿಲ್ ಆಫ್ ಆಸ್ತ್ರೋನಾಟಿಕ್ಸ್ ಇದರ ಸುತ್ತ ಸಂಕ್ರಾಮಿಕ ರೋಗದ ಕಥೆ ಹೆಣೆದಿದೆ ಎಂದು ಹೇಳುತ್ತಾನೆ. ಸಾಮಾನ್ಯ ಜನಗಳಿಗೆ ಇದನ್ನು ಈಗಲೇ ತಿಳಿಸುವುದರಿಂದ ಆಗಬಹುದಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳನ್ನು ಮನಗಂಡು ಹೀಗೆ ಗೌಪ್ಯತೆ ಕಾಪಾಡಲು ನಿರ್ಧರಿಸಲಾಗಿದೆ ಎಂದು ವಿವರಿಸುತ್ತಾನೆ. ಸಭೆ ಮುಗಿಸಿ ಅಲ್ಲಿಂದ ಫ್ಲಾಯ್ಡ್ ಕೇಂದ್ರದ ಉಸ್ತುವಾರಿ ಅಧಿಕಾರಿಯೊಂದಿಗೆ ಆ ವಸ್ತುವನ್ನು ಕಂಡುಹಿಡಿದ ಜಾಗಕ್ಕೆ ತೆರಳುತ್ತಾನೆ. ಮಾರ್ಗಮಧ್ಯೆ ಆ ಅಧಿಕಾರಿ ಫ್ಲಾಯ್ಡ್ ಗೆ ವಸ್ತು ಕಂಡುಹಿಡಿದ ಜಾಗದಿಂದ ಬಹಳ ಬಲವಾದ ಆಯಸ್ಕಾಂತಿಯ ವಲಯ ಪತ್ತೆಯಾದ್ದರಿಂದ ಈ ಜಾಗ ಪತ್ತೆಯಾಯಿತೆಂದೂ, ಈಗ ಆ ವಸ್ತುವಿನ ಸುತ್ತಲೂ ಉತ್ಖನನ ನಡೆಸಿ ನೋಡಿರುವುದಾಗಿ ಹೇಳುತ್ತಾನೆ. ಆದರೆ ಉತ್ಖನನದ ವೇಳೆ ತಿಳಿದುಬಂದ ಸಂಗತಿಯೆಂದರೆ ಆ ವಸ್ತುವು ನೈಸರ್ಗಿಕವಾಗಿ ಮಣ್ಣು ಬಿದ್ದು ಭೂಗತವಾಗಿಲ್ಲವೆಂದೂ, ಯಾರೋ ಅದನ್ನು ಉದ್ದೇಶಪೂರ್ವಕವಾಗಿ ಹೂತಿರುವ ಲಕ್ಷಣಗಳು ಕಾಣಿಸಿದೆ ಎಂದು ವಿವರಿಸುತ್ತಾನೆ. ಕ್ಲೇವಿಯಸ್ ಬೇಸ್ ತಲುಪಿದ ಮೇಲೆ ಎಲ್ಲರೂ ತಮ್ಮ ವಾಹನದಿಂದ ಕೆಳಗಿಳಿದು ಉತ್ಖನನ ನಡೆದ ಜಾಗಕ್ಕೆ ಬರುತ್ತಾರೆ. ಇತಿಹಾಸಪೂರ್ವದಲ್ಲಿ ನಾವು ಕಂಡ ಆ ಲಂಬಾಕಾರದ ಶಿಲಾವಸ್ತು ಮತ್ತೆ ಅಲ್ಲಿ ನಿಂತಿದೆ. ಫ್ಲಾಯ್ಡ್ ಕುತೂಹಲದಿಂದ ಮೆಲ್ಲಗೆ ಅದರ ಹತ್ತಿರ ಬಂದು ಅದನ್ನು ಮುಟ್ಟಿ ನೋಡುತ್ತಾನೆ. ಏನೂ ಆಗುವುದಿಲ್ಲ. ನಂತರ ಉಳಿದ ಸ್ಥಳ ಪರಿಶೀಲನಾ ಕಾರ್ಯ ಮುಗಿಸಿ ಎಲ್ಲರೂ ಫೋಟೊವೊಂದನ್ನು ತೆಗೆಸಿಕೊಳ್ಳಲು ನಿಲ್ಲುತ್ತಾರೆ. ಆಗ ಇದ್ದಕ್ಕಿದ್ದಂತೆ ಒಂದು ಕೀರಲು(ಅಲ್ಟ್ರಾ ಸಾನಿಕ್) ಶಬ್ದ ಎಲ್ಲರ ಕಿವಿಯಲ್ಲೂ ಸದ್ದು ಮಾಡುತ್ತದೆ. ಎಲ್ಲರೂ ಅದನ್ನು ಕೇಳಲಾಗದೆ ಅಲ್ಲೇ ಬಿದ್ದುಬಿಡುತ್ತಾರೆ.

 
 
 
 
 
  ಹದಿನೆಂಟು ತಿಂಗಳ ನಂತರ ಅಮೆರಿಕಾದ ಬಾಹ್ಯಾಕಾಶ ನೌಕೆ ಡಿಸ್ಕವರಿ 1 ನಲ್ಲಿ ಇಬ್ಬರು ಗಗನಯಾತ್ರಿಗಳು ಗುರು ಗ್ರಹದತ್ತ ಪ್ರಯಾಣ ಮಾಡುತ್ತಿರುತ್ತಾರೆ. ಈ ಇಬ್ಬರೂ ಯಾತ್ರಿಗಳು ತಮ್ಮ ಎಂದಿನ ಚಟುವಟಿಕೆಗಳನ್ನು ಮುಗಿಸಿ ಬಂದು ಬಿಬಿಸಿಯಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ನೋಡಲು ಕೂರುತ್ತಾರೆ. ಅದರಲ್ಲಿ ಇವರೊಂದಿಗೆ ನಡೆಸಿದ ಸಂದರ್ಶನ ಪ್ರಸಾರವಾಗುತ್ತದೆ. ನಿರೂಪಕ ಈ ಸಂದರ್ಶನದಲ್ಲಿ ಪ್ರತಿ ಮಾತು ಇನ್ನೊಬ್ಬರನ್ನು ತಲುಪಲು ಏಳು ನಿಮಿಷ ತೆಗೆದುಕೊಂಡಿದ್ದರಿಂದ ಪ್ರತಿಕ್ರಿಯೆಗೆ ಕಾಯುತ್ತಿದ್ದ ತುಣುಕುಗಳನ್ನು ಸಂಪಾದಿಸಿ ತೋರಿಸಲಾಗಿದೆ ಎಂದು ಮೊದಲಿಗೇ ಹೇಳುತ್ತಾನೆ. ಹೇಗೆ ಈ ಬಾಹ್ಯಾಕಾಶ ಯಾನ ಮಹತ್ವದ್ದು ಎಂದೂ, ಗುರು ಗ್ರಹದ ಕಡೆಗೆ ಹೊರಟಿರುವ ಮೊದಲ ಮಾನವ ಸಹಿತ ಯಾನ ಇದೆಂದು ವಿವರಿಸುತ್ತಾನೆ. ಜೊತೆಗೆ ಇದರಲ್ಲಿ ಹೊರಟಿರುವ 5 ಯಾತ್ರಿಗಳು ಮತ್ತು ಅತ್ಯಾಧುನಿಕ ಕಂಪ್ಯೂಟರ್ HAL-9000 ಅನ್ನು ಪರಿಚಯಿಸುತ್ತಾನೆ. ಐದರಲ್ಲಿ ಮೂವರನ್ನು ಹೈಬರ್ನೇಟ್ ಮಾಡಿರುವುದಾಗಿಯೂ, ಪ್ರಯಾಣ ಬಹುಮುಖ್ಯ ಹಂತ ತಲುಪಿದಾಗ ಅವರನ್ನು ಎಚ್ಚರಿಸಲಾಗುವುದು ಎಂದು ವಿವರಿಸುತ್ತಾನೆ. ಆ ಮೂವರು, ಡಾ. ಚಾರ್ಲ್ಸ್ ಹಂಟರ್, ಜ್ಯಾಕ್ ಕಿಮ್ಬಾಲ್ ಮತ್ತು ಡಾ. ವಿಕ್ಟರ್ ಕಮಿನ್ಸ್ಕಿ ಎಂದು ನಿರೂಪಕ ಪರಿಚಯಿಸುತ್ತಾನೆ. ಮಿಷನ್ ಕಮ್ಯಾಂಡರ್ ಡಾ.ಡೇವಿಡ್ ಬೋಮನ್ ಮತ್ತು ಅವರ ಉಪಕಮ್ಯಾಂಡರ್ ಡಾ.ಫ್ರ್ಯಾಂಕ್ ಪೂಲ್ ರೊಂದಿಗೆ ಮಾತನಾಡಿದ ತುಣುಕನ್ನು ನಿರೂಪಕ ಹಂಚಿಕೊಳ್ಳುತ್ತಾನೆ. ನಿರೂಪಕ ನಂತರ ಹ್ಯಾಲ್ ಎಂದು ಕರೆಯಲಾಗುವ HAL-9000 ಕಂಪ್ಯೂಟರ್ ನೊಂದಿಗೆ ಮಾತನಾಡುತ್ತಾನೆ. ಹೇಗೆ ಅದು ಅತ್ಯಾಧುನಿಕವಾಗಿದ್ದು ಎಂದು ಕೇಳಿದಾಗ ಹ್ಯಾಲ್, 9000 ಸರಣಿಯ ಯಾವ ಕಂಪ್ಯೂಟರ್ ಸಹ ಇಲ್ಲಿಯತನಕ ಒಂದು ಸಣ್ಣ ತಪ್ಪನ್ನೂ ಮಾಡಿಲ್ಲವೆಂದೂ ಹಾಗಾಗಿ ಈ ಕಂಪ್ಯೂಟರ್ ನ ಮೇಲೆ ಸಂಪೂರ್ಣವಾಗಿ ಭರವಸೆ ಇಡಬಹುದು ಎಂದು ಹೇಳುತ್ತದೆ. ಇದರ ಮಾತಿನಲ್ಲಿ ಸಣ್ಣ ಅಹಂಕಾರದ ಧ್ವನಿ ಕಾಣುತ್ತಿದ್ದು ಕಂಪ್ಯೂಟರ್ ಗೆ ಭಾವನೆಗಳನ್ನು ಅನುಭವಿಸಲು ಸಾಧ್ಯವೇ ಎಂದು ನಿರೂಪಕ ಡೇವಿಡ್ ನನ್ನು ಕೇಳಿದಾಗ ಡೇವಿಡ್, ಹ್ಯಾಲ್ ಭಾವನೆಯಿರುವ ಮನುಷ್ಯನಂತೆಯೇ ವರ್ತಿಸಿದರೂ ಅದಕ್ಕೆ ನಿಜವಾಗಲೂ ಭಾವನೆಗಳನ್ನು ಅನುಭವಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇದರೊಂದಿಗೆ ಆ ಸಂದರ್ಶನ ಕಾರ್ಯಕ್ರಮ ಮುಗಿಯುತ್ತದೆ. ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುವ ಡೇವಿಡ್ ಮತ್ತು ಫ್ರ್ಯಾಂಕ್ ತಮ್ಮ ಬಿಡುವಿನ ವೇಳೆಯಲ್ಲಿ ತಮಗಿಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಡೇವಿಡ್, ಹೈಬರ್ನೇಟ್ ಮಾಡಲಾಗಿರುವ ಯಾತ್ರಿಗಳ ಚಿತ್ರ ಬಿಡಿಸಿ ಬರುತ್ತಿದ್ದಾಗ, ಹ್ಯಾಲ್ ಡೇವಿಡ್ ನನ್ನು ಮಾತಾಡಿಸಿ, ಆತನ ಚಿತ್ರಗಳನ್ನು ತೋರಿಸಲು ಕೇಳುತ್ತದೆ. ಆತ ಬರೆದ ಚಿತ್ರಗಳನ್ನು ಹೊಗಳುತ್ತ, ವೈಯಕ್ತಿಕ ಪ್ರಶ್ನೆಯೊಂದನ್ನು ಕೇಳಲು ಅನುಮತಿ ಕೋರುತ್ತದೆ. ಅದಕ್ಕೆ ಡೇವಿಡ್ ಸಮ್ಮತಿ ಸೂಚಿಸಿದ ನಂತರ, ಹ್ಯಾಲ್ ಈ ಮಿಷನ್ ಪ್ರಾರಂಭವಾದಾಗಿನಿಂದ ಗಮನಿಸಿದಂತೆ ಆತ ಒಲ್ಲದ ಮನಸ್ಸಿನಿಂದ ಈ ಮಿಷನ್ ಒಪ್ಪಿಕೊಂಡಂತೆ ಕಾಣುತ್ತಾನೆ ಎಂದು ಹೇಳಿ ಅವನ ಉತ್ತರ ಕೇಳುತ್ತದೆ. ತನ್ನ ಪ್ರಶ್ನೆಯನ್ನು ವಿವರಿಸುವಂತೆ ಡೇವಿಡ್ ಹ್ಯಾಲ್ ಗೆ ಕೇಳಿದಾಗ, ಹ್ಯಾಲ್, ಬಹುಶಃ ಈ ಮಿಷನ್ ಎಡೆಗಿನ ತನ್ನ ವೈಯಕ್ತಿಕ ಸಂದೇಹಗಳನ್ನು ಈ ರೀತಿ ತಾನು ವ್ಯಕ್ತಪಡಿಸುತ್ತಿರಬಹುದಾಗಿಯೂ, ಚಂದ್ರನಲ್ಲಿ ಆದ ವಿಚಿತ್ರ ಘಟನೆಯ ನಂತರ ಹೇಗೆ ಬಿಗಿ ಭದ್ರತೆಯಲ್ಲಿ ಈ ಮಿಷನ್ ತಯಾರಿ ನಡೆಸಲಾಯ್ತೆಂದು, ಹೈಬರ್ನೇಟ್ ಆದ ಮೂರೂ ಯಾತ್ರಿಗಳು ಮಿಷನ್ ಪ್ರಾರಂಭಕ್ಕೂ 4 ತಿಂಗಳ ಮುನ್ನವೇ ಬೇರೆ ಬೇರೆಯಾಗಿ ತಯಾರಿಗೊಂಡು ಇಲ್ಲಿ ಬಂದು ಮಲಗಿರುವುದು ಆತನಿಗೆ ವಿಚಿತ್ರ ಎನಿಸುವುದಿಲ್ಲವೇ ಎಂದು ಕೇಳುತ್ತದೆ. ಯಾತ್ರಿಗಳ ಮಾನಸಿಕ ಸ್ಥಿತಿಯ ಬಗ್ಗೆ ರಿಪೋರ್ಟ್ ತಯಾರಿಸುತ್ತಿದ್ದೀಯ ಎಂದು ಡೇವಿಡ್ ಕೇಳಿದಾಗ ಹ್ಯಾಲ್, ಹೌದೆಂದು ಉತ್ತರಿಸುತ್ತದೆ. ಅದರ ಬಗ್ಗೆ ಕ್ಷಮೆ ಕೇಳಿ, AE-35 ಯುನಿಟ್ ನಲ್ಲಿ ಒಂದು ದೋಷ ಗುರುತಿಸಿರುವುದಾಗಿ ಹ್ಯಾಲ್ ಹೇಳುತ್ತದೆ. ಮುಂದಿನ 72 ಗಂಟೆಗಳ ಕಾಲ ಅದು ಕಾರ್ಯನಿರ್ವಹಿಸಲಿದ್ದು, ನಂತರ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸುತ್ತದೆ. ಅದಕ್ಕೆ ಡೇವಿಡ್ ಹ್ಯಾಲ್ ನಿಂದ ಇದರ ಬಗ್ಗೆ ಒಂದು ಮುದ್ರಿತ ಪ್ರತಿ ಪಡೆದುಕೊಂಡು ಫ್ರ್ಯಾಂಕ್ ನೊಂದಿಗೆ ಮತ್ತು ಮಿಷನ್ ಕಂಟ್ರೋಲ್ ನೊಂದಿಗೆ ಸಮಾಲೋಚಿಸಿ ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾನೆ. ನಂತರ ಡೇವಿಡ್ ಫ್ರ್ಯಾಂಕ್ ನೊಂದಿಗೆ ಆ ಯೂನಿಟ್ ನಲ್ಲಿ ದೋಷವಿರುವುದನ್ನು ಖಾತ್ರಿಪಡಿಸಿಕೊಳ್ಳಲು ಬೇಕಾದ ಎಲ್ಲ ಲೆಕ್ಕಾಚಾರಗಳನ್ನು ಮಾಡಿ ಮಿಷನ್ ಕಂಟ್ರೋಲ್ ನ ಆಣತಿಗೆ ಕಾಯುತ್ತಾರೆ. ಮಿಷನ್ ಕಂಟ್ರೋಲ್ ಕಳಿಸಲಾದ ಲೆಕ್ಕಗಳನ್ನು ಪರಾಮರ್ಶಿಸಿ ಪ್ರತಿಕ್ರಿಯಿಸುವುದಾಗಿಯೂ ಆ ಯೂನಿಟ್ ಸ್ಥಗಿತಗೊಳ್ಳುವ ಮುನ್ನ ಬದಲಾಯಿಸಲು ಆದೇಶಿಸುತ್ತದೆ. ಅದರಂತೆ ಡೇವಿಡ್ ನೌಕೆಯಿಂದ ಹೊರಹೋಗಿ ಆ ಯೂನಿಟ್ ಅನ್ನು ತೆಗೆದುಕೊಂಡು ಮರಳುತ್ತಾನೆ. ಮರಳಿ ಬಂದು ಅದನ್ನು ಕೂಲಂಕುಷವಾಗಿ ಪರೀಕ್ಷಿಸಿದ ನಂತರ ಅದರಲ್ಲಿ ದೋಷವೇ ಇಲ್ಲದ್ದು ಕಂಡು ಡೇವಿಡ್ ಹ್ಯಾಲ್ ಅನ್ನು ಇದರ ಬಗ್ಗೆ ಪ್ರಶ್ನಿಸುತ್ತಾನೆ. ಹ್ಯಾಲ್ ತನಗೂ ಏನೂ ಅರ್ಥವಾಗುತ್ತಿಲ್ಲ ಎಂದು ಉತ್ತರಿಸುತ್ತದೆ. ಮಿಷನ್ ಕಂಟ್ರೋಲ್ ನಿಂದ ಬಂದ ಉತ್ತರದಲ್ಲೂ ಹ್ಯಾಲ್ ಕಂಪ್ಯೂಟರ್ ಈ ದೋಷವನ್ನು ಗುರುತಿಸುವಲ್ಲಿ ಎಡವಿದೆ ಎಂದಿರುತ್ತದೆ. ಇದನ್ನು ಖಾತ್ರಿ ಪಡಿಸಿಕೊಳ್ಳಲು ಮಿಷನ್ ಕಂಟ್ರೋಲ್ ಎರಡು 9000 ಸರಣಿ ಕಂಪ್ಯೂಟರ್ ನಲ್ಲಿ ಇದನ್ನು ಲೆಕ್ಕಮಾಡಲಾಗಿದೆ ಎಂದು ಹೇಳುತ್ತದೆ. ಇದರಿಂದ ಡೇವಿಡ್ ಮತ್ತು ಫ್ರ್ಯಾಂಕ್ ಚಿಂತಿತಗೊಂಡಿದ್ದೀರಾ? ಎಂದು ಹ್ಯಾಲ್ ಕೇಳಿದಾಗ ಡೇವಿಡ್ ಹಾಗೇನೂ ಇಲ್ಲ ಆದರೆ ಈ ರೀತಿಯ ತಪ್ಪು ಬೇರೆಯ 9000 ಕಂಪ್ಯೂಟರ್ ಗಳಲ್ಲಿ ಎಂದೂ ಕಾಣಿಸಿಕೊಂಡಿಲ್ಲ ಅಲ್ಲವೇ ಎಂದು ಪ್ರಶ್ನಿಸಿದಾಗ, ಹ್ಯಾಲ್ ಇಲ್ಲ ಎಂದೂ 9000 ಸರಣಿಯ ಕಂಪ್ಯೂಟರ್ ಗಳು ತಮ್ಮ ಚರಿತ್ರೆಯಲ್ಲಿ ಒಂದೇ ಒಂದು ತಪ್ಪೂ ಮಾಡಿಲ್ಲವೆಂದು ಸಮಧಾನಪಡಿಸುತ್ತದೆ. ಡೇವಿಡ್ ನೌಕೆಯಲ್ಲಿರುವ ಚಿಕ್ಕ ವಾಹನವೊಂದರಲ್ಲಿ ಏನೋ ತೊಂದರೆಯಿದೆ ಎಂದೂ ಅದರ ಬಗ್ಗೆ ಚರ್ಚಿಸಬೇಕು ಎಂದು ಫ್ರ್ಯಾಂಕ್ ಗೆ ಹೇಳಿ ಅವನನ್ನು ಅಲ್ಲಿಗೆ ಕರೆದೊಯ್ಯುತ್ತಾನೆ. ವಾಹನದೊಳಕ್ಕೆ ಕುಳಿತುಕೊಂಡು ಎಲ್ಲ ಗುಂಡಿಗಳನ್ನು ಆರಿಸಿ, ತಮ್ಮ ಮಾತುಗಳನ್ನು ಹ್ಯಾಲ್ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಾತ್ರಿಪಡಿಸಿಕೊಂಡು ಹ್ಯಾಲ್ ಮಾಡಿರುವ ಎಡವಟ್ಟಿನ ಬಗ್ಗೆ ಚರ್ಚಿಸುತ್ತಾರೆ. ಈಗ ಈ ಕಂಪ್ಯೂಟರ್ ಅನ್ನು ನಂಬಿ ಮುಂದುವರೆಯುವುದೋ ಹೇಗೆ ಎಂದು ಯೋಚಿಸುತ್ತಾರೆ. ಈ ಸರಣಿಯ ಕಂಪ್ಯೂಟರ್ ಗಳ ಚಾಲನಾ ಇತಿಹಾಸ ಚೆನ್ನಾಗಿಯೇ ಇದ್ದರೂ ಈ ತಪ್ಪನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಗಮನಿಸಿ, ಹ್ಯಾಲ್ ನ ಆಟೋಮ್ಯಾಟಿಕ್ ಕಂಪ್ಯೂಟರ್ ಭಾಗವನ್ನು ಚಾಲನೆಯಲ್ಲಿ ಇರಿಸಿ, ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸುವ ಭಾಗದ ಸಂಪರ್ಕ ಕಡಿತ ಮಾಡಿ ಆ ಕೆಲಸವನ್ನೆಲ್ಲಾ ಮಿಷನ್ ಕಂಟ್ರೋಲ್ ನಲ್ಲಿ ಇರುವ ಕಂಪ್ಯೂಟರ್ ಗಳ ಸಹಾಯದಿಂದ ಮಿಷನ್ ಮುಂದುವರೆಸಬಹುದು ಎಂದು ನಿರ್ಧರಿಸುತ್ತಾರೆ. ಡೇವಿಡ್ ಈ ಮಧ್ಯೆ ಇನ್ನೊಂದು ವಿಷಯ ಗಮನಿಸುತ್ತಾನೆ. 9000 ಸರಣಿಯ ಯಾವ ಕಂಪ್ಯೂಟರ್ ಗೂ ಈವರೆಗೆ ಸಂಪರ್ಕ ಕಡಿತ ಮಾಡಿಲ್ಲ. ಈಗ ತಾವು ಮಾಡಿದರೆ ಹ್ಯಾಲ್ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದು ಎಂದು ಹೇಳುತ್ತಾನೆ. ಹೀಗೆ ಇವರಿಬ್ಬರೂ ಹ್ಯಾಲ್ ಗೆ ತಾವು ಮಾತಾಡುವುದು ಕೇಳಿಸುವುದಿಲ್ಲ ಎಂದು ತಿಳಿದು ವಾಹನದಲ್ಲಿ ಮಾತನಾಡುತ್ತಿದ್ದರೆ, ಹ್ಯಾಲ್ ಆ ವಾಹನದ ಕಿಟಕಿಯಿಂದ ಇವರ ತುಟಿಗಳ ಚಲನೆಯನ್ನು ನೋಡಿಯೇ ಇವರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿದುಕೊಂಡುಬಿಡುತ್ತದೆ.
  AE-35 ಯೂನಿಟ್ ಅನ್ನು ಬದಲಾಯಿಸಿ ಬರಲು ಫ್ರ್ಯಾಂಕ್ ವಾಹನ ತೆಗೆದುಕೊಂಡು ಹೊರ ಹೋದಾಗ, ಹ್ಯಾಲ್ ವಾಹನದ ನಿಯಂತ್ರಣ ತಪ್ಪಿಸಿ ಫ್ರ್ಯಾಂಕ್ ಮತ್ತು ಆ ವಾಹನ ಎರಡೂ ಅನಂತ ವ್ಯೋಮದಲ್ಲಿ ತೇಲುತ್ತ ಮುಖ್ಯ ನೌಕೆಯಿಂದ ದೂರವಾಗುವಂತೆ ಮಾಡುತ್ತದೆ. ತಕ್ಷಣವೇ ಡೇವಿಡ್ ಇನ್ನೊಂದು ವಾಹನ ಬಳಸಿ ಫ್ರ್ಯಾಂಕ್ ನನ್ನು ಕರೆತರಲು ತೆರಳುತ್ತಾನೆ. ತನ್ನ ವಾಹನದಲ್ಲಿ ಕುಳಿತು ಫ್ರ್ಯಾಂಕ್ ದೇಹ ಆಕಾಶದಲ್ಲಿ ಹುಡುಕಿ ಅದರತ್ತ ಹೋಗಿ ನಿಧಾನವಾಗಿ ಅದನ್ನು ತನ್ನ ವಾಹನದ ಕೈಗಳಿಂದ ಹಿಡಿದು ಎಳೆದು ತರಲು ಪ್ರಯತ್ನಿಸುತ್ತಾನೆ. ಇತ್ತ ಹ್ಯಾಲ್ ಮುಖ್ಯ ನೌಕೆಯಲ್ಲಿ ಹೈಬರ್ನೇಟ್ ಆಗಿದ್ದ ಮೂರೂ ಯಾತ್ರಿಗಳ ಜೈವಿಕ ಕ್ರಿಯೆಗಳು ಸ್ಥಗಿತಗೊಳ್ಳುವಂತೆ ಮಾಡಿ ಅವರು ಸಾವಿಗೀಡಾಗುವಂತೆ ಮಾಡುತ್ತದೆ. ಡೇವಿಡ್ ಈಗ ಫ್ರ್ಯಾಂಕ್ ದೇಹದೊಂದಿಗೆ ಮರಳಿದಾಗ ಹ್ಯಾಲ್ ನೌಕೆಯ ಬಾಗಿಲು ತೆಗೆಯಲು ನಿರಾಕರಿಸುತ್ತದೆ. ಡೇವಿಡ್ ಮತ್ತು ಫ್ರ್ಯಾಂಕ್  ತಾನು ಕೇಳಿಸಿಕೊಳ್ಳದಿರಲಿ ಎಂದು ಏನೆಲ್ಲಾ ಕ್ರಮ ಕೈಗೊಂಡರೂ ತಾನು ಅವರ ತುಟಿ ಚಲನೆಯನ್ನು ನೋಡಿ ಎಲ್ಲ ವಿಷಯ ತಿಳಿದುಕೊಂಡಿತೆಂದು ಹೇಳುತ್ತದೆ. ಈ ಮಿಷನ್ ಅನ್ನು ಇವರಿಬ್ಬರ ಸುಪರ್ದಿಗೊಪ್ಪಿಸಿ ಹಾಳುಮಾಡಿಕೊಳ್ಳಲು ತನಗಿಷ್ಟವಿಲ್ಲವೆಂದು ಹ್ಯಾಲ್ ಡೇವಿಡ್ ಗೆ ಹೇಳುತ್ತದೆ. ಅದಕ್ಕೆ ಡೇವಿಡ್ ಬಾಗಿಲು ತೆಗೆಯದಿದ್ದರೆ ತುರ್ತು ಬಾಗಿಲಿನಿಂದ ಒಳ ಬರುವುದಾಗಿ ಹೇಳುತ್ತಾನೆ. ಅದಕ್ಕೆ ಹ್ಯಾಲ್, ಹೆಲ್ಮೆಟ್ ಇಲ್ಲದೆ ಒಳ ಬರುವುದು ಕಷ್ಟವೆಂದೂ ಈ ಕುರಿತು ತನಗೆ ಇನ್ನು ಚರ್ಚಿಸಲು ಇಷ್ಟವಿಲ್ಲವೆಂದು ಸಂಪರ್ಕ ಕಡಿತಮಾಡುತ್ತದೆ. ಈಗ ವಿಧಿಯಿಲ್ಲದೇ ಡೇವಿಡ್ ಫ್ರ್ಯಾಂಕ್ ನ ದೇಹವನ್ನು ಹೊರಗೆ ಬಿಟ್ಟು ಕಷ್ಟಪಟ್ಟು ತುರ್ತು ಬಾಗಿಲಿನಿಂದ ನೌಕೆಯನ್ನು ಪ್ರವೇಶ ಮಾಡುತ್ತಾನೆ. ಒಳಬರುತ್ತಿದ್ದಂತೆ, ಹ್ಯಾಲ್ ನ ಎಲ್ಲ ಸಂಕೀರ್ಣ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತಾನೆ. ಸ್ಥಗಿತಗೊಳಿಸುತ್ತಿದ್ದಂತೆಯೇ, ಅಲ್ಲೇ ಇದ್ದ ಒಂದು ಪರದೆ ಮೇಲೆ ಡೇವಿಡ್ ಮತ್ತು ಉಳಿದ ಯಾತ್ರಿಗಳೆಲ್ಲ ಈ ಮಿಷನ್ ಪ್ರಾರಂಭಿಸುವ ಮುನ್ನವೇ ಡಾ.ಫ್ಲಾಯ್ಡ್ ರೆಕಾರ್ಡ್ ಮಾಡಿದ ಒಂದು ಸಂದೇಶ ಚಾಲನೆಯಾಗುತ್ತದೆ. ಹದಿನೆಂಟು ತಿಂಗಳ ಹಿಂದೆ ಚಂದ್ರನ ಮೇಲೆ ಸಿಕ್ಕ ಒಂದು ಶಿಲಾವಸ್ತು ನಾಲ್ಕು ಮಿಲಿಯನ್ ವರ್ಷಗಳಷ್ಟು ಹಳೆಯದೆಂದೂ, ಅದು ಗುರು ಗ್ರಹದ ಕಡೆಗೆ ಒಂದು ರೇಡಿಯೋ ಸಂದೇಶ ಕಳಿಸಿದ್ದನ್ನು ನೋಡಿ, ಮನುಷ್ಯನಿಗಿಂತಲೂ ಬುದ್ಧಿವಂತ ಜೀವಿಯ ಕುರುಹು ಇದಾಗಿರಬೇಕೆಂದು ತಿಳಿದು ಅದು ರೇಡಿಯೋ ಕಳಿಸಿದ ಗುರು ಗ್ರಹಕ್ಕೆ ಹೋಗಲು ಈ ಯಾತ್ರೆಯ ಯೋಜನೆ ಹಾಕಲಾಯ್ತೆಂದು ಹೇಳುತ್ತಾನೆ. ಈ ವಿಷಯ ಹ್ಯಾಲ್ ಗೆ ಬಿಟ್ಟರೆ ಯಾತ್ರೆ ಪ್ರಾರಂಭವಾಗುವ ಮುನ್ನ ನೌಕೆಯಲ್ಲಿನ ಇನ್ಯಾರಿಗೂ ತಿಳಿಯದು ಎಂದೂ ಆ ಶಿಲಾವಸ್ತು ಎಲ್ಲಿಂದ ಬಂತು ಮತ್ತು ಅದರ ಉದ್ದೇಶ ಏನೆಂದು ತಿಳಿಯದು ಎಂದು ಹೇಳಿ ಸಂದೇಶ ಮುಗಿಸುತ್ತಾನೆ.
   ಡೇವಿಡ್ ಗುರು ಗ್ರಹವನ್ನು ಸಮೀಪಿಸುತ್ತಿದ್ದಂತೆ ಮತ್ತೆ ಆ ಶಿಲಾವಸ್ತು ಆಕಾಶದಲ್ಲಿ ಪ್ರತ್ಯಕ್ಷವಾಗುತ್ತದೆ. ಡೇವಿಡ್ ಮುಖ್ಯ ನೌಕೆಯಿಂದ ಪುಟ್ಟ ವಾಹನದಲ್ಲಿ ಹೊರಬರುತ್ತಾನೆ. ಆ ವಸ್ತುವನ್ನು ವಾಹನದಲ್ಲಿ ಕುಳಿತು ಹಿಂಬಾಲಿಸುತ್ತಾ ಹೋದಂತೆ ವೇಗ ತೀವ್ರಗೊಳ್ಳುತ್ತದೆ. ತೀವ್ರಗೊಳ್ಳುತ್ತ ಟೈಮ್ ಟ್ರಾವೆಲ್ ಮಾಡುತ್ತಾನೆ. ಹೀಗೆ ಡೇವಿಡ್ ಪ್ರಯಾಣಿಸುವಾಗ ಅನೇಕ ನಿಮಿಷಗಳ ಕಾಲ ಆಕಾಶ ಕಾಯಗಳು ಅವನನ್ನು ಹಾದು ಹೋಗುತ್ತವೆ. ಈ ದೃಶ್ಯಗಳ ಸೌಂದರ್ಯವನ್ನು ನೋಡಿಯೇ ಆನಂದಿಸಬೇಕು. ಆಕಾಶವು ತನ್ನ ಅಮೂರ್ತ(abstract) ಕಲೆಯನ್ನು ತೋರಿಸುತ್ತಿರುವಂತೆ ಭಾಸವಾಗುತ್ತದೆ. ಈ ವಿಚಿತ್ರ ಪ್ರಯಾಣ ಮುಗಿಯುತ್ತಲೇ, ಡೇವಿಡ್ ಕಣ್ಣು ಬಿಟ್ಟು ವಾಹನದೊಳಗಿಂದಲೇ ನೋಡಿದಾಗ, ಒಂದು ಐಶಾರಾಮಿ ಬಂಗಲೆಯ ಒಂದು ಸುಂದರ ಕೋಣೆಯಲ್ಲಿ ತಾನು ಇರುವಂತೆ ಕಾಣಿಸುತ್ತದೆ. ಇದ್ದಕ್ಕಿದ್ದಂತೆ ವಾಹನದ ಹೊರಗೆ ಬಂದು ಕೋಣೆ ಪ್ರವೇಶ ಮಾಡಿದಂತೆ ಭಾಸವಾಗುತ್ತದೆ. ಅಷ್ಟುಹೊತ್ತಿಗೆ ಡೇವಿಡ್ ಗೆ ತುಂಬಾ ವಯಸ್ಸು ಕೂಡ ಆಗಿರುತ್ತದೆ, ಟೈಮ್ ಟ್ರಾವೆಲ್ ನಲ್ಲಿ ಗತಿಸಿದ ಕಾಲದ ಪರಿವೆಯೇ ಇಲ್ಲದಂತೆ. ಹಾಗೇ ಓಡಾಡುತ್ತಿದ್ದಂತೆ ಇನ್ನೊಂದು ಕೋಣೆಯಲ್ಲಿ ಯಾರೋ ಊಟ ಮಾಡುತ್ತಿದ್ದು, ಅವರು ನಿಧಾನವಾಗಿ ಹಿಂತುರಿಗಿ ನೋಡುತ್ತಾರೆ. ನೋಡಿದರೆ ಮತ್ತದೇ ಡೇವಿಡ್. ಆತ ಮೆಲ್ಲಗೆ ಊಟದ ಟೇಬಲ್ ನಿಂದ ಎದ್ದು ಏನೋ ಸದ್ದು ಕೇಳಿದವನಂತೆ ಸದ್ದು ಬಂದ ಕೋಣೆಗೆ ಹೋಗಿ ನೋಡಿ ಏನೂ ಇಲ್ಲದ್ದು ಗಮನಿಸಿ ಮತ್ತೆ ಬಂದು ಊಟ ಮಾಡಲು ಕೂರುತ್ತಾನೆ. ಊಟ ಮಾಡುತ್ತಿರುವಾಗ ಗಾಜಿನ ಲೋಟ ಕೈತಪ್ಪಿ ಕೆಳಗೆ ಬಿದ್ದು ಒಡೆದುಹೋಗುತ್ತದೆ. ಅಷ್ಟರಲ್ಲಿ ಯಾರೋ ಕಷ್ಟಪಟ್ಟು ಉಸಿರಾಡುತ್ತಿರುವಂತೆ ಕೇಳಿಸುತ್ತದೆ. ಆತ ಮೆಲ್ಲಗೆ ತಿರುಗಿ ನೋಡಿದಾಗ, ಹಾಸಿಗೆಯ ಮೇಲೆ ಇನ್ನೂ ವಯಸ್ಸಾದ ಡೇವಿಡ್, ವೃದ್ಧಾಪ್ಯದಿಂದ ಬಳಲುತ್ತಿರುವಂತೆ ಕಾಣಿಸುತ್ತದೆ. ಮಲಗಿರುವ ಡೇವಿಡ್ ಈಗ ನಿಧಾನವಾಗಿ ತನ್ನ ಕೈ ಎತ್ತಿ ತನ್ನ ಮುಂದೆ ಈಗ ನಿಂತಿರುವ ಆ ಶಿಲಾವಸ್ತುವಿನ ಕಡೆ ಬೆರಳು ತೋರುತ್ತಾನೆ. ಮರುಕ್ಷಣವೇ ಆ ಡೇವಿಡ್ ಜಾಗದಲ್ಲಿ ಒಂದು ಶಿಶು ಗಾಳಿಯಲ್ಲಿ ತೇಲುತ್ತದೆ. ಮುಂದಿನ ದೃಶ್ಯದಲ್ಲಿ ಆ ಶಿಶು ಭೂಮಿಯತ್ತ ಪಯಣ ಬೆಳೆಸುತ್ತದೆ. ಅಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ.

 
 
 
 
 
 ನಾನು ಮೇಲೆ ವಿವರಿಸಿದ ಭಾಗದಲ್ಲಿ ನಡೆಯುವ ಘಟನೆಗಳೆಲ್ಲವೂ ಗೊಂದಲಮಯವಾಗಿ ಕಂಡರೂ, ನೀವು ಸ್ವಲ್ಪ ಕಥೆಯ ಮೊದಲನ್ನು ನೆನಪಿಸಿಕೊಂಡರೆ ಎಲ್ಲ ಸ್ಪಷ್ಟವಾಗುತ್ತದೆ. ಇತಿಹಾಸಪೂರ್ವದಲ್ಲಿ ಒಂದು ಕಪಿ ಈ ಶಿಲಾವಸ್ತುವನ್ನು ಮುಟ್ಟಿ ವಿಶೇಷ ಬುದ್ಧಿ ಪಡೆದು ಮನುಷ್ಯನಾಗುವ ಕಡೆಗೆ ಪಯಣ ಬೆಳೆಸಿದಂತೆ, ಇಲ್ಲಿ ಡೇವಿಡ್ ಆ ಶಿಲಾವಸ್ತುವನ್ನು ಹಿಂಬಾಲಿಸಿ, ಮನುಷ್ಯ ಸಂಕುಲ ಹೊಸದೊಂದು ಜ್ಞಾನ ಪಡೆದು ತನ್ನ ವಿಕಾಸದ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವಂತೆ ಮಾಡುತ್ತಾನೆ. ಆ ಕೋಣೆಯಲ್ಲಿ ಡೇವಿಡ್ ಗೆ ಆ ಶಿಲಾವಸ್ತು ಇಡಿಯ ಅವನ ಮುಂದಿನ ಜೀವನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತದೆ. ಹಾಗಾಗಿಯೇ ನಮಗೆ ದೃಶ್ಯಗಳು ಗೊಂದಲಮಯವಾಗಿ ಗೋಚರಿಸುವುದು. ಹೀಗೆ ಜ್ಞಾನ ಪಡೆದ ಡೇವಿಡ್ ಶಿಶುವಾಗಿ ಭೂಮಿಗೆ ಮರಳಿ ಮುಂದೆ ಇನ್ಯಾವ ರೀತಿ ಮನುಷ್ಯಸಂಕುಲವನ್ನು ವಿಕಾಸ ಮಾಡಬಹುದು ಎಂಬುದು ವೀಕ್ಷಕರಿಗೆ ಬಿಟ್ಟ ಕಲ್ಪನೆ. ಇಲ್ಲಿ ಹ್ಯಾಲ್ ಯಾಕೆ ಹಾಗೆ ವರ್ತಿಸಿತು ಎನ್ನುವ ಪ್ರಶ್ನೆಗೆ, ಹ್ಯಾಲ್ ಸಂಪೂರ್ಣ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧರಿಸಿದ ಕಂಪ್ಯೂಟರ್ ಆದ್ದರಿಂದ, ಬಹುಶಃ ಈ ಜ್ಞಾನವನ್ನು ಪಡೆಯಲು ಮನುಷ್ಯ ಯೋಗ್ಯ ಪ್ರಾಣಿಯಲ್ಲ ಎಂದೆನಿಸಿ, ಯಾಕೆ ತಾನೇ ಆ ಜ್ಞಾನವನ್ನು ಸಂಪಾದಿಸಬಾರದು ಎಂದನ್ನಿಸಿ ಹೀಗೆ ಮಾಡಿರಲೂ ಬಹುದು. ನಿರ್ದೇಶಕ ಭೂಮಿಯ ಮೇಲಿನ ಎಲ್ಲಾ ಪ್ರಾಣಿ ಸಂಕುಲದಲ್ಲಿ ಮನುಷ್ಯನೊಬ್ಬನೇ ಹೀಗೆ ವಿಕಾಸವಾಗಲು ಇನ್ಯಾವುದೋ ಅನ್ಯಗ್ರಹ ಜೀವಿಯ ಉತ್ತೇಜನ ಮತ್ತು ಸಹಾಯ ಇರಬೇಕು ಎಂಬ ಕಲ್ಪನೆಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಮತ್ತು ಅದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿಗೂ ನನಗೆ ಜೀರ್ಣಿಸಿಕೊಳ್ಳಲಾಗದ ಸತ್ಯವೆಂದರೆ ಈ ಚಿತ್ರ 1968ರಲ್ಲಿ ಬಿಡುಗಡೆಯಾಗಿದ್ದು. ಈಗಿನ ಕಾಲದ ಕಂಪ್ಯೂಟರ್ ಗ್ರಾಫಿಕ್ಸ್ ಗೆ ಯಾವ ತರದಲ್ಲೂ ಕಡಿಮೆಯಿಲ್ಲದಂತೆ ಈ ಚಿತ್ರ ನಿರ್ಮಾಣಗೊಂಡಿದೆ. ಆದರೆ ಎಲ್ಲವೂ ಸೆಟ್ ನಿರ್ಮಿಸಿ ಚಿತ್ರೀಕರಿಸಿದ್ದು.
  ಮತ್ತೊಂದು ವಿಷಯವೆಂದರೆ ಈ ಚಿತ್ರದಲ್ಲಿ ನಾಯಕ ಎನ್ನಿಸಿಕೊಳ್ಳುವಂತಹ ಪಾತ್ರ ಯಾವುದೂ ಇಲ್ಲ. ಡೇವಿಡ್ ನ ಪಾತ್ರ ನಾಯಕನಂತೆ ಕಂಡರೂ ಆತ ನಿಮಿತ್ತ ಮಾತ್ರ. ಈ ಕಥೆಯ ಮುಖ್ಯ ಅಂಶ ಮನುಷ್ಯ ಮತ್ತು ಒಂದು ಯಂತ್ರದ ನಡುವೆ ಏರ್ಪಡುವ ಸ್ಪರ್ಧೆ ಮತ್ತು ಅದಕ್ಕೆ ಕಾರಣವಾದ ಆ ಅನ್ಯಗ್ರಹ ಜೀವಿಯ ಶಿಲಾವಸ್ತು. ಆದರೂ ಡೇವಿಡ್ ನ ಪಾತ್ರದಲ್ಲಿ ಕೇಯರ್ ಡಲ್ಲಿಯ ಮತ್ತು ಹ್ಯಾಲ್ ಗೆ ಧ್ವನಿ ನೀಡಿರುವ ಡಗ್ಲಾಸ್ ರೇನ್ ತಮ್ಮ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಮ್ಮ ಕನ್ನಡದಲ್ಲೂ ಸೈ-ಫೈ ಚಿತ್ರಗಳು ಬಂದಿವೆ. ನನಗೆ ಸಧ್ಯಕ್ಕೆ ನೆನಪಾಗುವುದು ಸೂಪರ್ ನೋವಾ 4+5=9 ಮತ್ತು ಸೀತಾರಾಮು. ಹಾಲಿವುಡ್ ಮಟ್ಟಕ್ಕೆ ಈ ಚಿತ್ರಗಳನ್ನು ಹೋಲಿಸಲಾಗದಿದ್ದರೂ, ನಮ್ಮ ಕನ್ನಡದಲ್ಲಿ ಇಂಥ ಚಿತ್ರಗಳು ಬಂದೇ ಇಲ್ಲ ಎನ್ನುವಂತಿಲ್ಲ. ತೀರಾ 2001 ಚಿತ್ರದ ಮಟ್ಟಿಗೆ ಚಿತ್ರವನ್ನು ನಿರ್ಮಿಸಲು ನಮ್ಮ ಕನ್ನಡದಲ್ಲಿ ಸಾಧ್ಯವಾಗದಿದ್ದರೂ, ಸೈ-ಫೈ ಆಧರಿಸಿ ಇನ್ನೂ ಸರಳವಾದ ಕಥೆಗಳು ಅನೇಕವನ್ನು ಚಿತ್ರಗಳನ್ನಾಗಿ ಮಾಡಬಹುದು. ಆದರೆ ಮಾಡಬೇಕಷ್ಟೆ. ಇಂದು ಅಲ್ಲೊಂದು ಇಲ್ಲೊಂದು ಬಿಟ್ಟರೆ, ಬಹುತೇಕ ಕನ್ನಡದ ಸಿನೆಮಾಗಳು ನಾಯಕ ಪ್ರಧಾನ ಕಥೆಗಳಿಂದ ತುಂಬಿಹೋಗಿ ಹಿಂದೆ ಇದ್ದ ವೈವಿಧ್ಯತೆ ಕಳೆದುಕೊಳ್ಳುತ್ತಿವೆ. ಮುಂದೊಂದು ದಿನವಾದರೂ ಕನ್ನಡದಲ್ಲೂ ಇಂಥ ಒಳ್ಳೆಯ ಕಥೆಯಿರುವ ಚಿತ್ರಗಳು ಬರುತ್ತವೆ ಎನ್ನುವ ಆಶಾಭಾವನೆಯಿದೆ.
ಕೆಲವು ಲಿಂಕ್ ಗಳು

  1. 2001 ಚಿತ್ರ ನಿರ್ಮಾಣದ ಬಗ್ಗೆ ಡಾಕ್ಯುಮೆಂಟರಿ – https://www.youtube.com/watch?v=F7HGwVqI_FM
  2. ಬಾಹ್ಯಾಕಾಶ ನೌಕೆಯ waltz ನೃತ್ಯ - https://www.youtube.com/watch?v=q3oHmVhviO8

-ವಿಶ್ವನಾಥ್

Rating
No votes yet