ಕಗ್ಗ ದರ್ಶನ – 34 (2)
ಸಜ್ಜೀವನಕೆ ಸೂತ್ರವೆರಡು ಮೂರದು ಸರಳ
ಹೊಟ್ಟೆಪಾಡಿಗೆ ವೃತ್ತಿ ಸತ್ಯ ಬಿಡದಿಹುದು
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು
ಮೈತ್ರಿ ಲೋಕಕ್ಕೆಲ್ಲ – ಮರುಳ ಮುನಿಯ
ಒಳ್ಳೆಯ ಜೀವನ ನಡೆಸಲು ಎರಡು ಮೂರು ಸರಳ ಸೂತ್ರಗಳ ಪಾಲನೆಯೇ ಸಾಕೆಂದು ಈ ಮುಕ್ತಕದಲ್ಲಿ ಸಾರಿದ್ದಾರೆ ಡಿವಿಜಿಯವರು. ಆ ಮೂಲಕ ಒಳ್ಳೆಯ ಬದುಕು ಎಷ್ಟು ಸರಳ ಎಂಬದನ್ನು ಮನಗಾಣಿಸಿದ್ದಾರೆ. ಮೊದಲ ಸೂತ್ರ: ಹೊಟ್ಟೆಪಾಡಿಗೊಂದು ವೃತ್ತಿ ಮಾಡುವುದು. ಅದು ಕೃಷಿಯಂತಹ ಸ್ವ-ಉದ್ಯೋಗ ಆಗಿರಬಹುದು ಅಥವ ಕಚೇರಿ ಕೆಲಸದಂತಹ ಸಂಬಳದ ಉದ್ಯೋಗ ಆಗಿರಬಹುದು. ಅಂತೂ, ಮನುಷ್ಯನಿಗೆ ಏನಾದರೂ ಉದ್ಯೊಗ ಬೇಕೇಬೇಕು. ಇಲ್ಲವಾದರೆ, ನಮ್ಮ ಮನಸ್ಸೆಂಬುದು ದೆವ್ವಗಳ ಮನೆಯಂತೆ ಅನಗತ್ಯ ಹಾಗೂ ದಿಕ್ಕೆಟ್ಟ ಯೋಚನೆಗಳ ಗೂಡಾದೀತು.
ಸತ್ಯವನ್ನು ಬಿಡದಿರುವುದು ಒಳ್ಳೆಯ ಜೀವನದ ಎರಡನೇ ಸೂತ್ರ. ಬಸವಣ್ಣನವರೂ ತಮ್ಮ ಪ್ರಸಿದ್ಧ ವಚನದಲ್ಲಿ ಇದನ್ನೇ ಹೇಳಿದ್ದಾರೆ: ಹುಸಿಯ ನುಡಿಯಲು ಬೇಡ…. ಇದುವೇ ಕೂಡಲಸಂಗಮ ದೇವನೊಲಿಸುವ ಪರಿ. ಮಹಾತ್ಮ ಗಾಂಧಿ ಸತ್ಯವೇ ದೇವರೆಂದು ನಂಬಿ ಬದುಕಿದವರು.
ಸುಳ್ಳಿನ ಹಾದಿ ಹಿಡಿದವನಲ್ಲಿ ಯಶಸ್ಸಿನ ಸಾಧನೆಗೆ ಅದು ಸುಲಭದ ದಾರಿ ಎಂಬ ಭ್ರಮೆ ಹುಟ್ಟುತ್ತದೆ. ಆದರೆ, ಆ ದಾರಿಯಿಂದ ಎಂದಿಗೂ ಗುರಿ ಮುಟ್ಟಲಾಗದು ಎಂಬುದೇ ಸತ್ಯ. ಈಗ ಹಲವರ ಜೀವನವೇ ಸುಳ್ಳಿನ ಕಂತೆಯಾಗಿದೆ. ಹಾಗಾಗಿ, ಯಾರು ಸತ್ಯದ ದಾರಿಯಲ್ಲಿದ್ದಾರೆ ಎಂದು ತಿಳಿಯುವುದೇ ಸವಾಲಾಗಿದೆ. ಬ್ಯಾಂಕಿನಿಂದ ಪಡೆದ ಸಾಲದ ನಿಯತ್ತಿನ ಮರುಪಾವತಿಯ ಷರತ್ತನ್ನು ಒಪ್ಪಿಕೊಂಡಿದ್ದ ವಿಜಯ ಮಲ್ಯ, ರೂ.೭,೦೦೦ ಕೋಟಿ ಸಾಲ ಮರುಪಾವತಿಸದೆ, ದೇಶ ಬಿಟ್ಟು ಹೋಗಿದ್ದಾರೆ! ರೈತರಿಗೆ ಸಾವಿರಾರು ಕೋಟಿ ರೂಪಾಯಿ ಸಬ್ಸಿಡಿ ಕೊಡುತ್ತಿದ್ದೇವೆ ಎನ್ನುವ ಸರಕಾರ ಅದನ್ನು ನಿಜವಾಗಿ ಕೊಡುತ್ತಿರುವುದು ರಾಸಾಯನಿಕ ಗೊಬ್ಬರ ಉತ್ಪಾದಿಸುವ ಕಾರ್ಖಾನೆಗಳಿಗೆ!
ಡಿವಿಜಿಯವರು ತಿಳಿಸುವ ಮೂರನೇ ಸೂತ್ರ “ಈಶನೊಳು ಚಿತ್ತ” ಇರಿಸುವುದು ಅಂದರೆ ದೇವರನ್ನು ನಂಬುವುದು; ಆ ಮೂಲಕ ಚಿಂತೆ ಬಿಟ್ಟು ಬದುಕುವುದು. ದೇವರ ಬಗೆಗಿನ ಚರ್ಚೆಯ ಬದಲಾಗಿ, ದೇವರು ಇದ್ದಾನೆ ಎಂಬಂತೆ ಬದುಕುವುದು ನಿರಾಳ. ಈ ಭೂಮಿಯನ್ನು ಆಧರಿಸಿರುವ ಶಕ್ತಿ ಇರುವುದು ಸತ್ಯ. ಆ ಸತ್ಯಕ್ಕೆ ಶರಣಾದರೆ, ಈ ಲೋಕದ ಎಲ್ಲದರೊಂದಿಗೆ ಮೈತ್ರಿಯಿಂದ ಬಾಳಲು ಸಾಧ್ಯ. ಇವು ಮೂರೇ ನೆಮ್ಮದಿಯ ಬದುಕಿಗೆ ಬೇಕಾದ ಸರಳ ಸೂತ್ರಗಳು.