ಕಗ್ಗ ದರ್ಶನ – 35 (1)

ಕಗ್ಗ ದರ್ಶನ – 35 (1)

ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ
ಈಗಲೊ ಆಗಲೋ ಎಂದೊ ಮುಗಿವುಂಟೆಂಬ
ಭಾಗ್ಯವನು ನೆನೆದು ನಲಿ - ಮಂಕುತಿಮ್ಮ
ಮನುಷ್ಯರಾಗಿ ಹುಟ್ಟಿದ ನಮಗೆ ಸಾವು ನಿಶ್ಚಿತ. ನಿಜ ಹೇಳಬೇಕೆಂದರೆ, ನಮ್ಮ ಹುಟ್ಟಿನೊಂದಿಗೇ ಸಾವು ಬೆನ್ನಟ್ಟಿಕೊಂಡು ಬರುತ್ತದೆ. ಅಂತಿಮ ಕ್ಷಣದ ವರೆಗೆ ನಮ್ಮ ಬದುಕು ಹಾಗೆಯೋ ಹೀಗೆಯೋ ಅಂದರೆ ಯಾವುದೋ ಒಂದು ರೀತಿಯಲ್ಲಿ ಸಾಗುತ್ತದೆ. ಒಬ್ಬ ವ್ಯಕ್ತಿಯ ಆಯುಸ್ಸು ಮುಗಿದು, ಜೀವನ ಅಂತ್ಯವಾಗುತ್ತದೆ ಎಂಬುದೇ ಒಳ್ಳೆಯ ಸಂಗತಿ (ಸುಕೃತ). ಯಾರೂ ನಿರಂತರವಾಗಿ ಬದುಕಬೇಕಾಗಿಲ್ಲ, ಯಾವಾಗಲೋ ಬಾಳಿಗೆ ಮುಕ್ತಾಯ (ಮುಗಿವು) ಬಂದೇ ಬರುತ್ತದೆ ಎಂಬ ಭಾಗ್ಯವನ್ನು ನೆನೆದು ನಲಿ ಎಂದು ಬದುಕಿನ ಬಗ್ಗೆ ಸಕಾರಾತ್ಮಕ ಅರಿವು ನೀಡಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಇತ್ತೀಚೆಗೆ ೨೦೧೬ನೇ ವರುಷ ಮುಗಿದಿದೆ. ಈ ವರುಷದಲ್ಲಿ ನಮ್ಮನ್ನು ಅಗಲಿದವರಲ್ಲಿ ಸಾಂಸೃತಿಕ ರಂಗಕ್ಕೆ ಅಮೋಘ ಕೊಡುಗೆಯನ್ನಿತ್ತ ಹಲವರಿದ್ದಾರೆ. ಗಾಯಕ ಬಾಲಮುರಳಿಕೃಷ್ಣ, ನೃತ್ಯವಿಶಾರದೆ ಮೃಣಾಲಿನಿ ಸಾರಾಭಾಯ್, ಕವಿ ಅಕಬರ ಅಲಿ, ಸಾಹಿತಿ ಓ.ಎನ್.ವಿ. ಕುರುಪ್, ಪತ್ರಕರ್ತ ಚೋ ರಾಮಸ್ವಾಮಿ, ಚಿತ್ರ ನಿರ್ದೇಶಕ ಗೀತಪ್ರಿಯ. ಮರೆಯಲಾಗದ ಈ ಮಹನೀಯರನ್ನು ಶಾಶ್ವತವಾಗಿ ಕಳೆದುಕೊಂಡೆವಲ್ಲಾ ಎಂದು ದುಃಖವಾಗುತ್ತದೆ. ಆದರೆ ಇವರೆಲ್ಲರೂ ನಮ್ಮ ದೇಶದ ಜನರ ಪ್ರೀತಿ, ಆದರ ಗಳಿಸಿದವರು; ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಶಾಶ್ವತವಾಗಿ ನಮ್ಮ ಮನದಲ್ಲಿ ನೆಲೆಸಿದವರು. ಅವರ ಗಾಯನ, ಗೀತೆ, ಕವನ, ಕತೆ, ಕಾದಂಬರಿ, ಚುಟುಕು, ಬರಹ, ಸಾಹಿತ್ಯ, ನೃತ್ಯ, ಚಲನಚಿತ್ರ – ಇವೆಲ್ಲವೂ ಅವರೆಲ್ಲರ ನೆನಪನ್ನು ಅಮರವಾಗಿಸಿವೆ.
೨೦೧೬ರಲ್ಲಿ ಇಹಲೋಕ ತೊರೆದವರಲ್ಲಿ ರಾಜಕೀಯರಂಗದಲ್ಲಿ ಪ್ರಮುಖರು: ಐದು ಬಾರಿ ತಮಿಳ್ನಾಡಿನ ಮುಖ್ಯಮಂತ್ರಿ ಸ್ಥಾನಕ್ಕೇರಿದ ಜಯಲಲಿತಾ ಮತ್ತು ಎರಡು ಬಾರಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾದ ಮುಫ್ತಿ ಮೊಹಮ್ಮದ್ ಸಯೀದ್. ೨೦೧೬ನೇ ವರ್ಷಾಂತ್ಯದಲ್ಲಿ, ಎರಡು ತಿಂಗಳ ಅನಾರೋಗ್ಯದ ಬಳಿಕ ಜಯಲಲಿತಾ ತೀರಿಕೊಂಡಾಗ ತಮಿಳ್ನಾಡಿನ ಜನತೆಗೆ ಆಘಾತ. ಈ ಆಘಾತ ತಾಳಲಾಗದೆ ಸಾವಿಗೀಡಾದವರು ನೂರಕ್ಕಿಂತ ಅಧಿಕ ಜನರು.
ಆಪ್ತರು ಮೃತರಾದಾಗ ಒಮ್ಮೆ ದುಃಖವಾಗುತ್ತದೆ ನಿಜ. ಆದರೆ, ಪ್ರತಿಯೊಬ್ಬರ ಜೀವನಕ್ಕೂ ಅಂತ್ಯವುಂಟೆಂಬುದು ನಿಜಕ್ಕೂ ಭಾಗ್ಯ. ಇದನ್ನು ನೆನೆದು ನಲಿಯಲೇ ಬೇಕು, ಅಲ್ಲವೇ?
 

Comments