ಅವಸರದ ಮನುಷ್ಯ ಜಗತ್ತು ಮತ್ತು ಹಾರಲಾಗದ ಪಾರಿವಾಳ
ಮುಂಬೈಯಲ್ಲಿ ಬಹುಪಾಲು ಜನ ಓಡಾಡುವುದು ಲೋಕಲ್ ಟ್ರೈನ್ ಗಳ ಮೂಲಕವೇ. ಹಾಗಾಗಿ ಎಲ್ಲರೂ ಮುಂಜಾನೆ ಹೊತ್ತು ಸ್ಟೇಷನ್ ಗಳತ್ತ ಧಾವಿಸುತ್ತ ಇರುತ್ತಾರೆ . ನಿನ್ನೆಯೂ ಹಾಗೆಯೇ . ನಾನು ಎಲ್ಲರ ಹಾಗೆ ಅವಸರದಲ್ಲಿ ಅಂಧೇರಿ ಸ್ಟೇಷನ್ ಕಡೆ ಹೋಗುತ್ತಿದ್ದೆ. ಆ ಬೀದಿಯೋ ಬಲು ಇಕ್ಕಟ್ಟು . ಆ ಇಕ್ಕಟ್ಟಿನ ರಸ್ತೆಯಲ್ಲಿಯೇ ತಲೆ ಮೇಲೆ ಮೆಟ್ರೋ ಹಾದು ಹೋಗಿದೆ. ( ರಸ್ತೆಯನ್ನು ಅಗಲಗೊಳಿಸಲು ಅಲ್ಲಿನ ವ್ಯಾಪಾರಿಗಳು ವಿರೋಧಿಸಿದರು . ರಸ್ತೆಯನ್ನು ಅಗಲ ಮಾಡದೆಯೇ ಮೆಟ್ರೋ ರೈಲಿನ ನಿರ್ಮಾಣ ಆಯಿತು ) ಎರಡೂ ಪಕ್ಕದಲ್ಲಿ ಅಂಗಡಿಗಳು. ಆ ರಸ್ತೆ ಒನ್ ವೇ ಇರುವುದರಿಂದ ಎದುರಿನಿಂದ ಬರುವ ಬಸ್ಸುಗಳು ಆಟೋಗಳು ಮುಂತಾದವು ಒಮ್ಮೆ ಆ ಮೆಟ್ರೋ ಕಂಬಗಳ ಎಡ ಪಕ್ಕದಲ್ಲಿ, ಇನ್ನೊಮ್ಮೆ ಬಲಪಕ್ಕದಲ್ಲಿ , ಹೇಗೆ ಹೇಗೋ ಜಾಗ ಮಾಡಿಕೊಂಡು ಓಡುತ್ತಿವೆ. ನಾನು ಸ್ಟೇಷನ್ ಕಡೆಗೆ ಅವಸರದಿಂದ ಹೋಗುತ್ತಿದ್ದೆ. ಎದುರಿಂದ ಆಟೋಗಳ ಸಾಲು . ಹಾಗೆಯೇ ಎದುರಿನಿಂದ ಜನಗಳು . ಎದುರಿಂದ ಬರುವಾತ ಹಾಗೂ ನಾನು ಒಂದು ಪಾರಿವಾಳವನ್ನು ನಮ್ಮ ಕಾಲಿನ ಬದಿ ನೋಡಿದೆವು . ಅದು ಏಕೋ ಹಾರುತ್ತಿರಲಿಲ್ಲ; ಆದರೆ ನಡೆಯುತ್ತಾ ರಸ್ತೆಯನ್ನು ದಾಟುತ್ತಾ ಇತ್ತು. ಎದುರಿನಿಂದ ಬಂದಾತ ಒಂದು ಕ್ಷಣವೂ ತಡ ಮಾಡದೆ ಹಿಂದಿನ ಆಟೋಗಳಿಗೆ ತಡೆಯುವಂತೆ ಕೈಯಿಂದ ಸನ್ನೆ ಮಾಡಿದ. ತಾನೂ ಅರೆಗಳಿಗೆ ನಿಂತ. ಆಟೋಗಳೂ ನಿಂತವು. ಪಾರಿವಾಳವು ನಡೆದುಕೊಂಡು ಆಟೋಗಳಷ್ಟು ಅಗಲ ಜಾಗವನ್ನು ದಾಟಿತು. ಮರುಕ್ಷಣವೇ ಮುಂದುವರಿದ. ಆಟೋಗಳು ಕೂಡ ಮುಂದಕ್ಕೆ ನುಗ್ಗಿದವು. ಹಾಗೆಯೇ ನಾನು ಕೂಡ!