ಖಡ್ಗಮೃಗಗಳ ಕೊಂಬು ಕತ್ತರಿಸಿದರೆ…..
ಖಡ್ಗಮೃಗದ ಕೊಂಬುಗಳ್ಳರು ಅವನ್ನು ಕೊಲ್ಲುವುದು ಕೇವಲ ಕೊಂಬಿಗಾಗಿ. ಆದ್ದರಿಂದ, ಖಡ್ಗಮೃಗಗಳ ಕೊಂಬನ್ನೇ ಕತ್ತರಿಸಿದರೆ ಹ್ಯಾಗೆ?
ಭಾರತದ ಒಂದು-ಕೊಂಬಿನ ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಹೀಗೊಂದು ಚರ್ಚೆ ಕೆಲವು ವರುಷಗಳಿಂದ ನಡೆಯುತ್ತಿದೆ. ಅಸ್ಸಾಂನಲ್ಲಿ ಖಡ್ಗಮೃಗಗಳನ್ನು ಹೊಂಚು ಹಾಕಿ ಕೊಲ್ಲುವ ದಂಧೆ ನಡೆಯುತ್ತಲೇ ಇದೆ. ಅವನ್ನು ಉಳಿಸಲಿಕ್ಕಾಗಿ ಕೈಗೊಂಡ ಕ್ರಮಗಳು ಹಲವು. ಆದರೆ, ಎಲ್ಲ ಕ್ರಮಗಳೂ ವೈಜ್ನಾನಿಕ ಅಧ್ಯಯನಗಳನ್ನು ಆಧರಿಸಿವೆ ಎನ್ನುವಂತಿಲ್ಲ.
ಉದಾಹರಣೆಗೆ, ರಾಷ್ಟ್ರೀಯ ಉದ್ಯಾನಗಳ ಕಣ್ಗಾವಲಿಗಾಗಿ ಪೈಲಟ್-ರಹಿತ ವಿಮಾನಗಳನ್ನು ಬಳಸಲಾಯಿತು. ಇದರಿಂದಾಗಿ ಸಾರ್ವಜನಿಕ ಹಣ ಪೋಲಾಯಿತು ವಿನಃ ಬೇರೇನೂ ಪ್ರಯೋಜನವಾಗಲಿಲ್ಲ. ಹಾಗೆಯೇ, ಕೊಂಬುಗಳ್ಳರ ಪತ್ತೆಗಾಗಿ ತರಬೇತಾದ ನಾಯಿಗಳನ್ನು ಬಳಸಬೇಕೆಂದು ಕೆಲವು ಸರಕಾರೇತರ ಸಂಸ್ಥೆಗಳ ಸಲಹೆ! ಇತ್ತೀಚೆಗಿನದು ರಾಜ್ಯ ಅರಣ್ಯ ಇಲಾಖೆಯ ಸಲಹೆ: ಖಡ್ಗಮೃಗಗಳ ಕೊಂಬು ಕತ್ತರಿಸುವುದು.
ಜನವರಿ ೨೦೧೪ರಲ್ಲಿ ಜರಗಿದ “ಇಂಡಿಯಾ ರೈನೋ ವಿಷನ್ ೨೦೨೦” ಎಂಬ ಕಾರ್ಯಕ್ರಮದಲ್ಲಿ ಇದರ ಚರ್ಚೆ. ಈ ಯೋಜನೆಯು ಕೊಂಬು ಕತ್ತರಿಸಿದ ಖಡ್ಗಮೃಗಗಳ ಬಗೆಗಿನ ಈ ಮುಂಚಿನ ಅಧ್ಯಯನಗಳ ಫಲಿತಾಂಶಗಳನ್ನೂ ನಿರ್ಲಕ್ಷಿಸಿದೆ. ಆದ್ದರಿಂದ, ಜಿಂಬಾಬ್ವೆ, ನಮಿಬಿಯ ಮತ್ತು ಸ್ವಾಜಿಲ್ಯಾಂಡುಗಳಲ್ಲಿ ಕೊಂಬುಗಳ್ಳರಿಂದ ಖಡ್ಗಮೃಗಗಳನ್ನು ಪಾರು ಮಾಡಲಿಕ್ಕಾಗಿ ಅವುಗಳ ಕೊಂಬು ಕತ್ತರಿಸಿದ್ದನ್ನು ವಿಶ್ಲೇಷಣೆ ಮಾಡಿದ ಅಧ್ಯಯನಗಳನ್ನು ಭಾರತದ ತಜ್ನರು ಪರಿಶೀಲಿಸಬೇಕಾಗಿದೆ.
ಕರೋಲ್ ಕನ್ನಿಂಗ್ಹ್ಯಾಮ್ ಮತ್ತು ಜೋಯಲ್ ಬರ್ಜರ್ ಬರೆದಿರುವ “ಹೋರ್ನ್ ಆಫ್ ಡಾರ್ಕ್ ನೆಸ್: ರೈನೋಸ್ ಆನ್ ದ ಎಜ್” ಎಂಬ ಪುಸ್ತಕದಲ್ಲಿ ಅಂತಹ ಒಂದು ಅಧ್ಯಯನವನ್ನು ಪ್ರಸ್ತಾಪಿಸಿದ್ದಾರೆ. ಪರಿಸರ ರಕ್ಷಣೆಯ ರಾಜಕೀಯದ ನೀಚ ಜಗತ್ತಿಗೆ ಈ ಪುಸ್ತಕ ನಮ್ಮನ್ನು ಒಯ್ಯುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಶಿಸುತ್ತಿರುವ ದೊಡ್ಡ ಸಸ್ತನಿಗಳನ್ನು ರಕ್ಷಿಸುವ ಕಾಯಕದ ಸಂಕೀರ್ಣತೆಗಳನ್ನು ಈ ಪುಸ್ತಕ ಬಹಿರಂಗ ಪಡಿಸುತ್ತದೆ.
“ಖಡ್ಗಮೃಗಗಳ ಕೊಂಬು ಕತ್ತರಿಸಿದರೆ ಅವುಗಳನ್ನು ಕೊಲ್ಲುವವರ ಹಣದಾಶೆಗಳನ್ನೇ ನಾಶ ಮಾಡಿದಂತೆ” ಎಂದು ನಮಿಬಿಯ ದೇಶದ “ಸೇವ್ ದ ರೈನೋ” (ಖಡ್ಗಮೃಗ ಉಳಿಸಿ) ಟ್ರಸ್ಟ್ ಪರಿಣಾಮಕಾರಿಯಾಗಿ ವಾದಿಸಿತು. ಆದರೆ ಆ ಪುಸ್ತಕದ ಲೇಖಕರು ಆಘಾತಕಾರಿ ವಿಷಯವೊಂದನ್ನು ಪತ್ತೆ ಮಾಡಿದ್ದಾರೆ: ಹಲವು ಸಂದರ್ಭಗಳಲ್ಲಿ ಕೊಂಬುಗಳ್ಳರಿಗೆ ಕೊಂಬು ಇರುವ ಮತ್ತು ಕೊಂಬು ಇಲ್ಲದಿರುವ ಖಡ್ಗಮೃಗಗಳ ವ್ಯತ್ಯಾಸವೇ ತಿಳಿಯುವುದಿಲ್ಲ! (ಹಾಗಾಗಿ ಕೊಂಬು ಇಲ್ಲದಿರುವ ಖಡ್ಗಮೃಗಗಳನ್ನೂ ಕೊಂದಾರು.) ಮಾತ್ರವಲ್ಲ, ಖಡ್ಗಮೃಗಗಳ ಕೊಂಬು ಕತ್ತರಿಸಿದರೆ, ಆಕ್ರಮಣಕಾರಿ ಸಿಂಹಗಳು ಮತ್ತು ಹೈನಾಗಳಿಗೆ ಇವು ಸುಲಭ ಬಲಿ ಆಗಬಲ್ಲವು. ಕೊಂಬು ಕತ್ತರಿಸಿದ ತಾಯಿ-ಖಡ್ಗಮೃಗಗಳು ತಮ್ಮ ಮರಿಗಳನ್ನು ಆ ಪ್ರಾಣಿಗಳ ಧಾಳಿಯಿಂದ ರಕ್ಷಿಸಲಾರವು.
ಅಮೆರಿಕನ್ ಪ್ರಾಣಿ ಪರಿಣತೆ ಜಾನೆಟ್ ರಾಚ್ಲೊ ಬಿಳಿ ಖಡ್ಗಮೃಗಗಳ ಬಗ್ಗೆ ನಡೆಸಿದ ಅಧ್ಯಯನ ಇನ್ನೊಂದು ಆಘಾತಕಾರಿ ವಿಷಯ ತೋರಿಸಿಕೊಟ್ಟಿದೆ: ಕೊಂಬು ಕತ್ತರಿಸಿದ ಖಡ್ಗಮೃಗಗಳನ್ನು ಕೇವಲ ೧೮ ತಿಂಗಳೊಳಗೆ ಕೊಂಬುಗಳ್ಳರು ಕೊಂದು ಹಾಕಿದ್ದಾರೆ. ಯಾಕೆಂದರೆ, ಕತ್ತರಿಸಿದ ಕೊಂಬುಗಳು ಬಹು ಬೇಗ ಬೆಳೆಯುತ್ತವೆ.
ಖಡ್ಗಮೃಗಗಳ ಕೊಂಬನ್ನು ಬುಡದಿಂದಲೇ ಕತ್ತರಿಸುವಂತಿಲ್ಲ. ಹಾಗೆ ಕತ್ತರಿಸಿದರೆ, ರಕ್ತಸ್ರಾವದಿಂದ ಅಥವಾ ಅಘಾತದಿಂದ ಖಡ್ಗಮೃಗ ಸತ್ತು ಹೋದೀತು. ೨೦೧೩ರಲ್ಲಿ ಅಸ್ಸಾಂನ ಮಜುಲಿಯಲ್ಲಿ ಹಾಗಾಗಿದೆ: ಅರಣ್ಯ ಇಲಾಖೆಯ ಅಧಿಕಾರಿಗಳು ತಮಗೆ ಪರಿಣತಿ ಇಲ್ಲದಿದ್ದರೂ ಸರ್ಜರಿ ಮಾಡಿ ಖಡ್ಗಮೃಗವೊಂದರ ಕೊಂಬು ಕತ್ತರಿಸಿದರು. ಅದು ಸತ್ತೇ ಹೋಯಿತು.
ಸಂರಕ್ಷಣಾ ಜೀವಶಾಸ್ತ್ರದ ಬಗ್ಗೆ ಕನ್ನಿಂಗ್ ಹ್ಯಾಮ್ ಹಾಗೂ ಬರ್ಜರ್ ಮತ್ತು ಆರ್ಚಿ ಗಾಸೆಬ್ ಹಾಗೂ ಮಲಾನ್ ಲಿಂಡೆಕ್ಯೂ ಬರೆದ ಅಧ್ಯಯನ ಪ್ರಬಂಧದಲ್ಲಿಯೂ ಅದೇ ವಿಷಯವನ್ನು ಬೊಟ್ಟು ಮಾಡಿ ತಿಳಿಸಲಾಗಿದೆ: ನಾಲ್ಕು ವರುಷಗಳ ನಂತರ, ಕೊಂಬುಗಳ್ಳರಿಂದ ಆಗುವ ಅಪಾಯವು ಕೊಂಬು ಇರುವ ಮತ್ತು ಇಲ್ಲದಿರುವ ಖಡ್ಗಮೃಗಗಳಿಗೆ ಸಮಾನ. ಯಾಕೆಂದರೆ ಆ ಅವಧಿಯಲ್ಲಿ ಅವುಗಳ ಕೊಂಬು ಮತ್ತೆ ಬೆಳೆದಿರುತ್ತದೆ!
ಕಳೆದ ದಶಕದಲ್ಲಿ ಪರಿಸರ ಸಂರಕ್ಷಣಾ ವಲಯಗಳಲ್ಲಿ ಖಡ್ಗಮೃಗಗಳ ಕೊಂಬು ಕತ್ತರಿಸುವುದರ ಪರಿಣಾಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ; ಆದರೆ ಭಿನ್ನಾಭಿಪ್ರಾಯಗಳಿವೆ. ಅಸ್ಸಾಂನ ಖಡ್ಗಮೃಗಗಳ ಬಗ್ಗೆ ಗಂಭೀರ ಅಧ್ಯಯನಗಳು ನಡೆದಿಲ್ಲ. ಹಾಗಿರುವಾಗ, ಖಡ್ಗಮೃಗಗಳ ಕೊಂಬು ಕತ್ತರಿಸುವುದು ಅವನ್ನು ರಕ್ಷಿಸಬಹುದು ಎಂದು ಹೇಳಲಾದೀತೇ?
ಮಳೆ ಸುರಿಸಲಿಕ್ಕಾಗಿ “ಮೋಡ ಬಿತ್ತನೆ” ಮಾಡುವುದು, ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಅವುಗಳ ಕೊಂಬು ಕತ್ತರಿಸುವುದು – ಇಂತಹ ಯೋಜನೆಗಳಿಂದಾಗಿ ಸಾರ್ವಜನಿಕ ಹಣದ ಪೋಲು ಗ್ಯಾರಂಟಿ. ಜೊತೆಗೆ, ಇವೆಲ್ಲವೂ ಅಡ್ಡದಾರಿಯಲ್ಲಿ ದುಡ್ದು ಮಾಡುವ ದೊಡ್ಡ ದಂಧೆಗಳಾಗ ಬಹುದು, ಅಲ್ಲವೇ?
ಫೋಟೋ ಕೃಪೆ: ವಿಕಿಪಿಡಿಯ