ಭಾಗ - ೩೦ ಭೀಷ್ಮ ಯುಧಿಷ್ಠಿರ ಸಂವಾದ: ದಾನವೆಂದರೇನು?
ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಧರ್ಮದ ಕುರಿತಾಗಿ ನಿಮ್ಮಿಂದ ಎಷ್ಟೋ ಮಹತ್ತರವಾದ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ದಾನಧರ್ಮಗಳ ಕುರಿತೂ ಸಹ ತಾವು ಸಾಕಷ್ಟು ವಿಶದವಾಗಿ ವಿವರಿಸಿದ್ದೀರಿ. ನಮಗೆ ಮಾರ್ಗದರ್ಶನವನ್ನೂ ಮಾಡಿದ್ದೀರಿ. ಈ ಅದೃಷ್ಟವು ನನಗೆ ದೊರತದ್ದು ನನ್ನ ಪೂರ್ವಜನ್ಮ ಸುಕೃತವೆಂದು ನಾನು ಭಾವಿಸುತ್ತೇನೆ. ಶರಶಯ್ಯೆಯ ಮೇಲೆ ಮಲಗಿರುವ ನಿಮ್ಮ ದೇಹದ ಅಣುವಣುವೂ ಬಾಣಗಳಿಂದುಂಟಾದ ನೋವಿನಿಂದ ಬಳಲುತ್ತಿದ್ದರೂ ಸಹ ಅದ್ಯಾವುದನ್ನೂ ಪರಿಗಣಿಸದೆ ಸಂಯಮವನ್ನು ಕಳೆದುಕೊಳ್ಳದೆ ನಮಗೆ ಅನೇಕಾನೇಕ ಧರ್ಮರಹಸ್ಯಗಳನ್ನು, ಧರ್ಮಸೂಕ್ಷ್ಮಗಳನ್ನು ಹಾಗು ಆಪದ್ಧರ್ಮಗಳನ್ನು ಬೋಧಿಸಿದ್ದೀರಿ. ನಿಜಕ್ಕೂ ನನ್ನ ಜನ್ಮಪಾವನವಾಯಿತು. ನನ್ನ ಜೀವನ ಸಾರ್ಥಕವಾಯಿತು, ನಾನು ಕೃತಕೃತ್ಯನಾದೆ, ಧನ್ಯೋsಸ್ಮಿ! ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳಬೇಕೆಂಬ ಅಭಿಲಾಷೆ ನನಗಿದೆ. ಸಂದೇಹವುಂಟಾಗುವುದು ಒಳಿತೊ ಕೆಡುಕೊ ಎಂದು ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ನನಗೆ ಎಲ್ಲೆಲ್ಲೂ ಸಂದೇಹಗಳೆ, ಎಲ್ಲದರ ಕುರಿತೂ ಸಂಶಯಗಳೆ! ನಿಮ್ಮನ್ನು ನಾನು ಬಾಧಿಸಲಿಚ್ಛುಸುವುದಿಲ್ಲ, ಆದರೂ ಸಹ ಒಂದೇ ಒಂದು ಪ್ರಶ್ನೆಯನ್ನು ಕೇಳಲಿಚ್ಛಿಸುತ್ತೇನೆ."
"ದಾನಧರ್ಮಗಳನ್ನು ಅನೇಕರು ಮಾಡುತ್ತಾರೆ. ದಾನ ಮಾಡುವವರಲ್ಲಿ ನಾನಾ ವಿಧದ ಜನರಿರುತ್ತಾರೆ, ಆದ್ದರಿಂದ ದಾನಗಳಲ್ಲೂ ಸಹ ಹಲವು ವಿಧಗಳಿರುತ್ತವೆ. ಹಾಗಾಗಿ ದಾನವೆಂದರೇನು? ದಾನಗಳಲ್ಲಿ ಎಷ್ಟು ವಿಧ? ಎನ್ನುವುದನ್ನು ವಿವಿರಿಸಿರೆಂದು ನಿಮ್ಮಲ್ಲಿ ಸವಿನಯವಾಗಿ ಪ್ರಾರ್ಥಿಸುತ್ತಿದ್ದೇನೆ".
ಹೀಗೆ ಹೇಳಿದ ಯುಧಿಷ್ಠಿರನು ಅತ್ಯಂತ ವಿನೀತ ಭಾವದಿಂದ ಅಂಜಲಿಬದ್ಧನಾಗಿ, ನತಮಸ್ತಕನಾಗಿ ಶರಶಯ್ಯೆಯಲ್ಲಿ ಪವಡಿಸಿದ್ದ ಭೀಷ್ಮನ ಪಾದಗಳ ಬಳಿಗೆ ಹೋಗಿ ನಿಂತುಕೊಂಡನು.
ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ನಿನ್ನ ವಿನಯಕ್ಕೆ, ನಿನ್ನ ಭಕ್ತಿಗೆ ಸಂತುಷ್ಟನಾದೆ. ಸಂದೇಹವುಂಟಾಗುವುದು ಉತ್ತಮವಾದ ಲಕ್ಷಣವೇ! ಸಂದೇಹಗಳಿಲ್ಲದ ವ್ಯಕ್ತಿ ಒಂದೋ ಪರಿಪೂರ್ಣನಾಗಿರಬೇಕು ಅಥವಾ ಅವನು ಪರಮ ಮೂರ್ಖನಾಗಿರಬೇಕು. ಮಾನವನೆಂದಿಗೂ ಪರಿಪೂರ್ಣ ವ್ಯಕ್ತಿಯಾಗಲಾರ. ನೀನು ಉತ್ತಮನಾದುದರಿಂದ ನಿನಗೆ ಉಂಟಾದ ಸಂದೇಹಗಳನ್ನು ವ್ಯಕ್ತಪಡಿಸಿ ಅವಕ್ಕೆ ಸೂಕ್ತ ಉತ್ತರಗಳನ್ನು ಪಡೆಯಲು ಮುಂದಕ್ಕೆ ಬರುತ್ತಿರುವೆ"
"ದಾನಗಳ ಸಂಗತಿಯನ್ನು ಕುರಿತು ಪ್ರಶ್ನಿಸಿದ್ದೀಯ. ದಾನಗಳನ್ನು ಮಾಡುವವರು ಅನೇಕಾನೇಕ ಕಾರಣಗಳಿಗಾಗಿ ಅವನ್ನು ಮಾಡುತ್ತಿರುತ್ತಾರೆ. ಕೆಲವರು ಭಯದಿಂದ ತಮ್ಮ ಸೊತ್ತನ್ನು ಇತರರಿಗೆ ಕೊಡುತ್ತಾರೆ. ಕೆಲವರು ಪ್ರಲೋಭನೆಗಳಿಗೊಳಪಟ್ಟು ದಾನವನ್ನು ಮಾಡುತ್ತಾರೆ. ಇನ್ನೂ ಕೆಲವರು ಪರಪ್ರತ್ಯಯದಿಂದ ಅಂದರೆ ಯಾರೋ ಹೇಳಿದರೆಂದು ದಾನ ಮಾಡುತ್ತಾರೆ. ಈ ಮೂರು ವಿಧವಾದ ದಾನಗಳು ಎರಡನೇ ಸ್ಥಾಯಿಯವು. ಉತ್ತಮರು ಮಾಡುವ ದಾನವು ದಾನವೆಂದೂ ಸಹ ಅನಿಸುವುದಿಲ್ಲ. ಅದನ್ನು ಏನೆಂದು ಕರೆಯಬೇಕೋ ತಿಳಿಯದು."
ಆಗ ಯುಧಿಷ್ಠಿರನು, "ಪಿತಾಮಹ, ನಿಮ್ಮ ದೇಹದ ನರನರಗಳಲ್ಲಿಯೂ ಉಂಟಾಗಿರುವ ಯಾತನೆಯು ಅಸಹನೀಯವಾಗಿದೆ ಎನ್ನುವುದು ತಿಳಿಯುತ್ತಲೇ ಇದೆ. ನಿಮ್ಮ ಮನಸ್ಸು ಪರಮೇಶ್ವರನ ಪಾದಾರವಿಂದದ ಮಕರಂದವನ್ನು ಸವಿಯುವುದರಲ್ಲಿ ಮಗ್ನವಾಗಿದೆ. ಆದರೂ ಸಹ ನಾನು ನಿಮ್ಮನ್ನು ಪ್ರಶ್ನಿಸದೆ ಸುಮ್ಮನಿರಲಾಗದವನಾಗಿದ್ದೇನೆ. ದಯವಿಟ್ಟು ದಾನದ ಕುರಿತ ಇನ್ನಷ್ಟು ವಿಷಯಗಳನ್ನು ವಿಶದಪಡಿಸಿ" ಎಂದು ಭಿನ್ನವಿಸಿದನು.
"ಮಗೂ, ಧರ್ಮನಂದನನೇ! ಹಿರಿಯರು ಏನಾದರು ಹೇಳುವರೆಂದೋ ಅಥವಾ ಪ್ರಭುತ್ವವು ದಂಡಿಸುವುದೆಂಬ ಭಯದಿಂದಲೊ ತಮ್ಮ ಸಂಪತ್ತನ್ನು ದಾನ ಮಾಡುವ ವ್ಯಕ್ತಿಗಳಿರುತ್ತಾರೆ. ಇನ್ನೂ ಕೆಲವರು ನರಕಕ್ಕೆ ಹೋಗುತ್ತೇವೆನ್ನುವ ಭಯದಿಂದಲೂ ಸಹ ದಾನಧರ್ಮಾದಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ವಿಧವಾದ ದಾನಗಳಿಂದ ಸಮಾಜಕ್ಕೆ ಉಪಕಾರವಾಗುತ್ತದೆನ್ನುವುದೇನೊ ನಿಜ, ಆದರೆ ಇದರಿಂದ ವ್ಯಕ್ತಿಗೆ ದೊರೆಯಬೇಕಾದ ಸಂಸ್ಕಾರ ಮಾತ್ರ ಸಿಗುವುದಿಲ್ಲ."
"ಕೆಲವರು ಏನೋ ಒಂದು ಬಯಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಾನವನ್ನು ಮಾಡುತ್ತಿರುತ್ತಾರೆ, ಅಂದರೆ ಇಂದು ನಾವು ದಾನ ಮಾಡಿದರೆ ಅದರಿಂದ ನಾಳೆ ಬೇರೊಂದು ರೂಪದಲ್ಲಿ ಅದಕ್ಕೆ ತಕ್ಕ ಪ್ರತಿಫಲವು ದೊರೆಯುತ್ತದೆನ್ನುವ ಲೆಕ್ಕದಲ್ಲಿ ಅವರು ದಾನ ಮಾಡುತ್ತಿರುತ್ತಾರೆ. ಅಥವಾ ತನಗೆ ಲೋಕದಲ್ಲಿ ಎಣೆಯಿಲ್ಲದ ಕೀರ್ತಿ ಬರಬಹುದೆನ್ನುವ ಆಸೆಯಿಂದಲೂ ಕೂಡ ಅವರು ದಾನ ಮಾಡುತ್ತಿರಬಹುದು. ಅದು ಏನೇ ಇರಲಿ, ಪ್ರತಿಫಲಾಪೇಕ್ಷೆಯಿಂದ ಕೈಗೊಳ್ಳುವ ದಾನವು ಉತ್ತಮವಾದ ದಾನವೆನಿಸಿಕೊಳ್ಳದು."
"ಇನ್ನೂ ಕೆಲವರಿರುತ್ತಾರೆ. ತಂದೆ-ತಾಯಿಗಳು ಹೇಳಿದರೆಂದೋ ಅಥವಾ ಆಪ್ತರೋ, ಸ್ನೇಹಿತರೋ ಸಲಹೆ ಇತ್ತರೆಂದೋ ಅವರ ಮಾತುಗಳಿಗೆ ಕಟ್ಟು ಬಿದ್ದು ದಾನಾದಿ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಇದೂ ಸಹ ಆದರ್ಶವಾದ ಸ್ಥಿತಿಯಲ್ಲ."
"ಪಾಪ ಇವನು ಬಡವ, ಆದ್ದರಿಂದ ಇವನಿಗೆ ಸಹಾಯ ಮಾಡಬೇಕು. ಅವನು ಅಂಗಲಾಚಿ ಬೇಡುತ್ತಿದ್ದಾನೆ, ಅವನ ಪರಿಸ್ಥಿತಿ ದಯನೀಯವಾಗಿದೆ" ಎನ್ನುವ ಭಾವನೆಯಿಂದ, ಕರುಣೆ ದಯೆಗಳಿಂದ ದಾನ ಮಾಡುವವರೂ ಸಹ ಇರುತ್ತಾರೆ. ಇದು ಒಳ್ಳೆಯದೆ, ಆದರೆ ಇದೂ ಸಹ ಉತ್ತಮವಾದ ದಾನವಲ್ಲ!"
"ಹಾಗಾದರೆ, ಉತ್ತಮವಾದ ದಾನವಾವುದು?"
"ಉತ್ತಮವಾದ ದಾನವನ್ನು ದಾನವೆಂದೂ ಸಹ ಹೇಳಲಾಗದು ಎಂದು ತಿಳಿಸಿದ್ದೇನೆ. ಭಯಂದಿಂದಾಗಲಿ, ಪ್ರತಿಫಲಾಪೇಕ್ಷೆಯಿಂದಾಗಲಿ, ಕನಿಕರದ ಭಾವನೆಯಿಂದಾಗಲಿ ದಾನ ಮಾಡದೆ ಸಮರ್ಪಣಾ ಭಾವದಿಂದ ಮಾಡುವುದೇ ನಿಜವಾದ ದಾನ. ಸಮರ್ಪಣೆ ಎಂದರೆ ಪುನಃ ಹಿಂತಿರುಗಿ ಕೊಡುವುದು. ಅವರದನ್ನು ಅವರಿಗೆ ಕೊಡುತ್ತಿದ್ದೇನೆ ಎನ್ನುವ ಭಾವನೆ. ನನ್ನದನ್ನು ಕೊಡುತ್ತಿದ್ದೇನಲ್ಲ ಅದು ಅವರದು ಹೇಗಾಗುತ್ತದೆಂದು ಕೇಳಬಹುದು. ಇದು ನನ್ನದಲ್ಲ, ಅವರದೇ - ’ಇದಂ ನ ಮಮ’ ಎನ್ನುವ ದೃಷ್ಟಿ ಇರಬೇಕು. ನಿನ್ನ ವಸ್ತುವನ್ನು ನಿನಗೇ ಕೊಡುತ್ತಿದ್ದೇನೆ ಎಂದು ಭಾವಿಸಬೇಕು. ’ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ - ಗೋವಿಂದ ನಿನ್ನದೇ ವಸ್ತುವನ್ನು ನಿನಗೇ ಅರ್ಪಿಸುತ್ತಿದ್ದೇನೆ’ ಎನ್ನುವ ಭಾವನೆಯಿದ್ದರೆ ದಾನವೆನ್ನುವ ಮಾತಾದರೂ ಎಲ್ಲಿಯದು? ಅದು ದಾನವಲ್ಲ, ತ್ಯಾಗವಲ್ಲ, ದಯೆಯಲ್ಲ, ಅದು ಸಮರ್ಪಣೆ. ಭಿಕ್ಷೆ ನೀಡುವಾಗಲೂ ಸಹ ಈ ಸಮರ್ಪಣಾ ಭಾವನೆ ಇರಬೇಕು.
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ಚಿತ್ರಗಳಕೃಪೆ: ಗೂಗಲ್
ಹಿಂದಿನ ಲೇಖನ ಭಾಗ - ೨೯ ಭೀಷ್ಮ ಯುಧಿಷ್ಠಿರ ಸಂವಾದ: ಶಾಂಡಲೀದೇವಿ ಸುಮನ ಸಂವಾದ ಅಥವಾ ಸಾಧ್ವಿಯ ಲಕ್ಷಣಗಳು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AF-...
Comments
ಉ: ಭಾಗ - ೩೦ ಭೀಷ್ಮ ಯುಧಿಷ್ಠಿರ ಸಂವಾದ: ದಾನವೆಂದರೇನು?
ಈ ಲೇಖನದ ಮುಂದಿನ ಭಾಗ - ೩೧ ಭೀಷ್ಮ ಯುಧಿಷ್ಠಿರ ಸಂವಾದ: ಭೀಷ್ಮನ ಅಂತಿಮ ಸಂದೇಶ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A9%E0%B3%A7-...