ಕಗ್ಗ ದರ್ಶನ - 37(1)

ಕಗ್ಗ ದರ್ಶನ - 37(1)

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ

ನೀನೆಷ್ಟು ಉಂಡರೇನು? ಅದರಲ್ಲಿ ನಿನ್ನ ದೇಹದ ಪುಷ್ಟಿಗೆ ಒದಗುವುದು ನಿನ್ನ ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕಿದ್ದೆಲ್ಲ ಕಸವಾಗಿ ನಿನ್ನ ಶರೀರದಿಂದ ಹೊರಗೆ ಹೋಗುತ್ತದೆ - ಈ ಸಾರ್ವಕಾಲಿಕ ಸರಳ ವಿಷಯವನ್ನು ಎತ್ತಿ ಹೇಳುತ್ತಾ, ಅದರ ಆಧಾರದಿಂದ ಗಹನ ವಿಚಾರವೊಂದನ್ನು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ಹೀಗೆ ಮಂಡಿಸುತ್ತಾರೆ: ನೀನೆಷ್ಟು ಗಳಿಸಿದರೂ ನಿನಗೆ ದಕ್ಕುವುದೆಷ್ಟು? ಒಂದು ಮುಷ್ಟಿ ಪಿಷ್ಟ, ಅಲ್ಲವೇ?

ಈ ಮುಕ್ತಕದ ಮೊದಲನೆಯ ಸರಳ ವಿಷಯವನ್ನು ನಾವೆಲ್ಲರೂ ಅನುಭವಿಸಿ ಅರಿತಿದ್ದೇವೆ. ಊಟ ರುಚಿಯಾಗಿತ್ತೆಂದು ಹೆಚ್ಚು ತಿಂದರೆ ಏನಾಗುತ್ತದೆ? ಆರೋಗ್ಯ ಹದಗೆಡುತ್ತದೆ; ಅಜೀರ್ಣವಾಗಿ ವಾಂತಿ ಭೇದಿಯಾಗುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ಹಾಗಾಗಿ, ಆಹಾರ ಎಷ್ಟೇ ರುಚಿಯಾಗಿದ್ದರೂ ನಮ್ಮ ಹೊಟ್ಟೆಯ ಹದವರಿತು ತಿನ್ನುತ್ತೇವೆ.

ಹಣ ಗಳಿಸುವ ವಿಚಾರದಲ್ಲಿಯೂ, ನಮಗೆ ಸಲ್ಲಬೇಕಾದ್ದಕ್ಕಿಂತ ಹೆಚ್ಚಿಗೆ ಗಳಿಸಿದರೆ ಅದನ್ನು ದಕ್ಕಿಸಿಕೊಳ್ಳಲಾಗದು ಎಂಬುದು ನಮಗೆ ಗೊತ್ತಿದೆ. ಆದರೆ, ನಮ್ಮ ದುರಾಶೆ ನಮ್ಮ ವಿವೇಕಕ್ಕೆ ಮಂಕು ಕವಿಸುತ್ತದೆ. ನಮ್ಮ ರಾಜ್ಯದ ಕಬ್ಬಿಣದ ಅದಿರನ್ನು ಕೊಳ್ಳೆ ಹೊಡೆದು ಗಳಿಸಿದ ಕೋಟಿಗಟ್ಟಲೆ ಹಣವನ್ನು ಕರ್ನಾಟಕದ ಮಾಜಿ ಮಂತ್ರಿಯೊಬ್ಬರಿಗೆ ದಕ್ಕಿಸಿಕೊಳ್ಳಲಾಯಿತೇ? ತಿರುಪತಿ ತಿಮ್ಮಪ್ಪನಿಗೆ ೪೫ ಕೋಟಿ ರೂಪಾಯಿಯ ಕಿರೀಟ ಒಪ್ಪಿಸಿದರೂ ಅನ್ಯಾಯದ ಹಣವನ್ನೆಲ್ಲ ದಕ್ಕಿಸಿಕೊಳ್ಳಲಾಗಲಿಲ್ಲ. ನ್ಯಾಯಾಧೀಶರಿಗೆ ೧೦ ಕೋಟಿ ರೂಪಾಯಿ ಲಂಚ ಕೊಟ್ಟರೂ ಅವರು ಜೈಲುವಾಸ ತಪ್ಪಿಸಿಕೊಳ್ಳಲಾಗಲಿಲ್ಲ.

ಗ್ರೀಕ್ ಸಾಮ್ರಾಟ ಅಲೆಗ್ಸಾಂಡರ್, ಜಗತ್ತಿನ ದೇಶಗಳನ್ನೆಲ್ಲ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ದಂಡಯಾತ್ರೆ ಹೊರಟ; ಹಲವು ಸಾಮ್ರಾಜ್ಯಗಳನ್ನು ಗೆದ್ದ. ಕೊನೆಗೆ, ತನ್ನ ಸಾವಿನ ಸೂಚನೆ ಸಿಕ್ಕಾಗ ತನ್ನ ಸಹವರ್ತಿಗಳಿಗೆ ಹೀಗೆಂದು ಆದೇಶ ನೀಡಿದನಂತೆ: "ನನ್ನ ಶವಯಾತ್ರೆಯಲ್ಲಿ, ನನ್ನ ಎರಡೂ ಕೈಗಳು ಶವಪೆಟ್ಟಿಗೆಯಿಂದ ಹೊರಗೆ ನೇತಾಡುತ್ತಿದ್ದು, ನೆರೆದ ಜನರಿಗೆಲ್ಲ ಕಾಣಿಸಬೇಕು. ಚಕ್ರಾಧಿಪತಿ ಅಲೆಗ್ಸಾಂಡರ್ ಈ ಭೂಮಿ ಬಿಟ್ಟು ಹೋಗುವಾಗ ತನ್ನ ಸಂಪತ್ತಿನಲ್ಲಿ ಏನನ್ನೂ ಒಯ್ಯಲಿಲ್ಲ; ಎಲ್ಲವನ್ನೂ ಇಲ್ಲೇ ಬಿಟ್ಟು ಬರಿಗೈಯಲ್ಲೇ ಹೋದ ಎಂಬುದು ಎಲ್ಲ ಜನರಿಗೂ ತಿಳಿಯಲಿ."

ಈ ಸಾರ್ವಕಾಲಿಕ ಸತ್ಯವನ್ನು ಒಪ್ಪಿಕೊಳ್ಳೋಣ. ನಮಗೆ ಸಲ್ಲಬೇಕಾದ್ದಕ್ಕಿಂತ ಹೆಚ್ಚು ಗಳಿಸಿ, ಸಂಪತ್ತನ್ನು ಕೂಡಿ ಹಾಕುವ ಚಟ ಬಿಟ್ಟು ಬಿಡೋಣ.