ಬೆಳಕು (ಕತೆ)
ಬೆಳಕು
ಶೇಖರ ನನ್ನ ಜೀವದ ಗೆಳೆಯ, ಕಾಲೇಜಿನಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ನಮ್ಮ ಗೆಳೆಯರ ಗುಂಪಿನಲ್ಲಿದ್ದರೂ, ನನಗೆ ಶೇಖರನ ಮೇಲೆ ಅವನಿಗೆ ನನ್ನ ಮೇಲೆ ಎಲ್ಲರಿಗಿಂತಲೂ ಸ್ವಲ್ಪ ಸಲುಗೆ ಜಾಸ್ತಿ, ಸ್ನೇಹ ಜಾಸ್ತಿ. ನಾನು ಗಣ...........
ತನ್ನ ಅಕ್ಕ ನಂದಿನಿ ಮದುವೆಗೆಂದು ನನ್ನನ್ನು ಮಡಿಕೇರಿಗೆ ಕರೆದುಕೊಂಡು ಹೊರಟಿದ್ದ. ಈಗ ಇಬ್ಬರೂ ಕಾಲೇಜು ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದೆವು. ಅಲ್ಲದೇ ಬ್ಯಾಂಕಿಂಗ್ ಪರೀಕ್ಷೆ ಬರೆದ ನನಗೆ, ಸಂದರ್ಶನವೂ ಮಡಿಕೇರಿಯಲ್ಲಿಯೇ ಇತ್ತು, ಹಾಗಾಗಿ ನಾನು ಕೂಡಾ ಹೊರಟೆ.
ಬೆಳಗಿನ ರೈಲು ಹತ್ತಿ ಹೊರಟ ನಾವು, ಹಾಗೇ ಮಾತನಾಡುತ್ತಾ ಇರುವಾಗ ಶೇಖರ ತನ್ನ ಕುಟುಂಬದ ಬಗ್ಗೆ ಹೇಳತೊಡಗಿದ. ಶೇಖರನ ತಂದೆಯ ಹೆಸರು ರಂಗಪ್ಪಗೌಡ, ಅವರು ಮಿಲ್ಟ್ರಿಯಲ್ಲಿ ಸೈನಿಕರಾಗಿ ಸೇವೆಯಲ್ಲಿ ಇದ್ದು, ಈಗ ರಿಟೈರ್ ಆಗಿ ಮನೆಯಲ್ಲಿದ್ದರು. ಅವನ ತಾಯಿ ಶಾರದಾ. ಅಕ್ಕ ಶೋಭಾ, ಶೇಖರ ತನ್ನ ಅತ್ತೆ ಚನ್ನತ್ತೆ, ಅವರ ಮಗ ವಿಶ್ವ, ಮಗಳು ಸ್ವಪ್ನಳ ಬಗೆಗೂ ಹೇಳಿದ. ಸ್ವಪ್ನಗೂ ಶೇಖರನಿಗೂ ಮದುವೆ ಮಾಡಬೇಕು ಎಂಬುದು ಮನೆಯವರ ಯೋಚನೆಯಂತೆ, ಆದರೆ ಅದು ಅವನಿಗೆ ಇಷ್ಟವಿರಲಿಲ್ಲ, ಸ್ವಪ್ನಳಿಗೂ ಅಷ್ಟೇ, ಅವಳು ತನ್ನ ತಾಯಿಯ ಒತ್ತಾಯಕ್ಕೆ ಮಣಿದು ಹೂ ಎಂದಿದ್ದಳಾಗಿ ಹೇಳಿದ.
ಅಲ್ಲದೇ, ಶೇಖರನ ತಂದೆ ಮಿಲ್ಟ್ರಿಯಿಂದ ರಿಟೈರ್ ಆಗಿ ಬಹಳ ವರ್ಷ ಆಗಿದೆ, ಅವರು ಈಗ ತಮ್ಮ ಮೂವತ್ತು ಎಕರೆ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ ಎಂದ.
ಹಾಗೆಯೇ ಊರಲ್ಲಿ ಅವರ ತಂದೆಯೆಂದರೆ ಒಬ್ಬ ಶಿಸ್ತಿನ ಸಿಪಾಯಿ, ಅವರು ತಮ್ಮ ವಂಶಪರಂಪರಾಗತವಾಗಿ ಬಂದ ಗೌಡಕಿ ಪದ್ದತಿ ಅಂದರೆ ನ್ಯಾಯ ಹೇಳುವ ಪದ್ದತಿಯನ್ನು ರೂಢಿಸಿಕೊಂಡು ಬರುತ್ತಿದ್ದದ್ದರಿಂದ, ಇಡೀ ಊರಿಗೆ ಅವರೆಂದರೆ ಅಭಿಮಾನ ಜಾಸ್ತಿ. ಹೀಗೆ ಶೇಖರ ತನ್ನ ತಂದೆಯ ಬಗೆಗೆ ಹೇಳುತ್ತಲೇ ಹೋದ................
ಹಾಗೇಯೇ ಮಾತನಾಡುತ್ತ ಸಾಗಿದ ನಮಗೆ ಮಡಿಕೇರಿ ಬಂದದ್ದೇ ಗೊತ್ತಾಗಲಿಲ್ಲ.
ಅದು ಒಂದು ಸುಂದರವಾದ, ರಮ್ಯ ತಾಣ. ಪ್ರಕೃತಿಯ ಸೊಬಗನ್ನು ತನ್ನಲ್ಲೇ ಹೊದ್ದುಕೊಂಡಿದೆ. ದೂರದಿಂದ ನೋಡಿದರೆ ಹಸಿರು ಸೀರೆ ಉಟ್ಟುಕೊಂಡ ಹೆಣ್ಣು ಮಗಳಂತೆ ಕಾಣುವ ಆ ಪ್ರಕೃತಿಯ ಸೊಬಗು, ನನ್ನ ಕಣ್ಣುಗಳು ಮತ್ತಷ್ಟು ಮೊಗದಷ್ಟು ಎಂದು ಬೇಡುವಂತೆ ಮಾಡಿತ್ತು.
ರೈಲು ನಿಲ್ದಾಣದಿಂದ ಇಳಿದ ನಾವು ಅಟೋ ಮೂಲಕ ಮನೆ ಸೇರಿಕೊಂಡೆವು. ಅಲ್ಲಿ ನನ್ನ ಸ್ವಾಗತವಂತೂ ಅದ್ಭುತವಾಗಿತ್ತು. ನಾನು ಮನೆಯ ಎಲ್ಲ ಸದಸ್ಯರ ಪರಿಚಯ ಮಾಡುಕೊಂಡೆ. ಮದುವೆಗೆ ಕೇವಲ ಆರು ದಿನ ಬಾಕಿ ಇರುವುದರಿಂದ ಮದುವೆಯ ಮನೆಯಲ್ಲಿ ಕೆಲಸಗಳು ಜೋರಾಗಿಯೇ ನಡೆದಿದ್ದವು. ಆ ಕಡೆಯ ಮನೆಯ ಶೈಲಿಗಳೇ ಬೇರೆ ಸುತ್ತಲೂ ಹಂಚು ಹಾಕಿರುತ್ತಾರೆ, ಆದರೆ ವರಾಂಡದಲ್ಲಿ ಕಟ್ಟೆ ಮಾಡಿ ಒಳಗಡೆ ಮಳೆ ನೀರು ಸಂಗ್ರಹವಾಗುವಂತೆ ಮಾಡಿರುತ್ತಾರೆ. ಅಂತಹ ಮಾದರಿಯ ಮನೆಗಳನ್ನು ನೋಡಿದ್ದು ಅದೇ ಮೊದಲು, ಆ ರೀತಿಯ ಮನೆ ನನಗೆ ತುಂಬಾ ಹಿಡಿಸಿದ್ದಂತೂ ನಿಜ. ನಂತರ ಮದುವೆಯ ಕೆಲಸಗಳಿಗೆ ಗೆಳೆಯನಿಗೆ ಕೈ ಜೋಡಿಸಿದೆ.
ಒಂದು ಮಧ್ಯಾಹ್ನ ಹಾಗೇ ಊಟ ಮಾಡಿ ತೋಟ ನೋಡಲೆಂದು ಸುತ್ತಾಡಲು ಹೊರಟೆವು. ಅವರದು ಅಲ್ಲಿಯ ಹೆಸರಾಂತ ಮನೆತನವಾಗಿದ್ದರಿಂದ ಅವರಿಗೆ ಆಸ್ತಿಯೂ ಇತ್ತು. ಹೀಗಾಗಿ ಅವರಲ್ಲಿ ಅಡಿಕೆ, ಕಾಫಿ, ಬಾಳೆ ತೋಟಗಳಿಗೆ ಯಾವುದೇ ಕಮ್ಮಿಯಿರಲಿಲ್ಲ. ಅಲ್ಲಿಯ ಪ್ರಕೃತಿಯ ಸೊಬಗನ್ನು ನನ್ನ ಕ್ಯಾಮರಾ ಕಣ್ಣಲ್ಲಿ ಕ್ಲಿಕ್ಕಿಸುತ್ತಾ, ಅಪರೂಪ ಎನಿಸಿದ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುತ್ತಾ ನಮ್ಮ ಸವಾರಿ ಹಾಗೇ ಮುಂದೆ ಸಾಗಿತ್ತು.
ಅದು ಮಳೆಗಾಲವಾದ್ದರಿಂದ ಕೆಸರೂ ಸಹ ನಮ್ಮ ದಾರಿಯಲ್ಲಿ ಸಹಜವಾಗಿತ್ತು. ಶೇಖರ “ನೋಡಿಕೊಂಡು ಬಾರೋ ತುಂಬಾ ಕೆಸರು ಇದೆ” ಎನ್ನುತ್ತ ನಡೆಯುತ್ತಿದ್ದ.
ನಾನು ಕೂಡಾ “ಹೌದು ಕಣೋ, ಹುಷಾರಾಗಿ ನಡಿ ಎನ್ನುತ್ತ ಹೆಜ್ಜೆ ಹಾಕುತ್ತಿದ್ದೆ”.
ಅವರ ಕಾಫಿ, ಅಡಿಕೆ ತೋಟ ನೋಡಿಕೊಂಡು ಬಾಳೆಯ ತೋಟದ ಕಡೆಗೆ ಪಯಣ ಬೆಳೆಸಿದೆವು. ಅಲ್ಲಿ ಅವನು ನನಗೊಂದು ಬಾಳೆಯ ಗಿಡ ತೋರಿಸಿದ, ಅದು ಸುಮಾರು ಏಳರಿಂದ ಎಂಟು ಅಡಿಯಿರಬಹುದು. ಅದರ ಗೊನೆ ಸುಮಾರು ಆರು ಅಡಿ ಎತ್ತರ ಎಂದು ಕಾಣಿಸುತ್ತದೆ. ಅದನ್ನು ನೋಡಿ ನನಗೆ ಪರಮಾಶ್ಚರ್ಯ.
“ಇದು ಯಾವ ತಳಿ?” ಎಂದು ಕೇಳಿದೆ.
“ಇದಕ್ಕೆ ಸಾವಿರ ಕಾಯಿ ಗೊನೆ ಎಂದು ಹೆಸರು” ಅಂದ.
“ಓಹ್, ಅಂದರೆ ಇದರಲ್ಲಿ ಒಂದು ಸಾವಿರ ಬಾಳೆಯ ಹಣ್ಣುಗಳು ಇವೆಯೋ” ಎಂದೆ.
ಶೇಖರ “ಹೆಚ್ಚು ಕಡಿಮೆ ಅಷ್ಟಿರಬಹುದು” ಅಂದ.
ನನಗೆ ನನಷ್ಟೇ ಎತ್ತರವಿರುವ ಆ ಬಾಳೆಯ ಗೊನೆಯ ಜೊತೆಗೆ ಒಂದು ಫೋಟೊ ತೆಗೆಸಿಕೊಳ್ಳಬೇಕು ಎಂಬ ಆಸೆಯಾಯಿತು.
“ಇದರ ಜೊತೆ ಒಂದು ಫೋಟೊ ತೆಗಿಯೋ” ಎಂದೆ.
ಶೇಖರ “ಸರಿ” ಎನ್ನುತ್ತ ನನ್ನ ಕೈಲಿದ್ದ ಕ್ಯಾಮರಾ ತೆಗೆದುಕೊಂಡು ಫೋಟೊ ತೆಗೆದ.
ನಾನೂ ಹತ್ತಿರ ನಿಂತು ಪೋಸು ನೀಡಿದೆ.
ನಂತರ ಮುಂದೆ ಹಾಗೇ ಸಾಗುತ್ತಿದ್ದಾಗ ಕಾಲು ಕೆಸರಿನಲ್ಲಿ ಜಾರಿತು, ನಾನು ಕೂಡಲೇ ರಪ್ಪ ಅಂತ ಕೆಳಗೆ ಬಿದ್ದೆ.
ಶೇಖರ “ಅಯ್ಯೋ, ಏನಾಯ್ತೋ ನೋಡ್ಕೊಂಡು ಬರಬೇಕು ಅಂತ ಗೋತ್ತಾಗಲ್ವೇನೋ ನಿನಗೆ” ಎನ್ನುತ್ತ ನನ್ನನ್ನು ಮೇಲೆತ್ತಿದ.
ಕೈ, ಬಟ್ಟೆ, ಮುಖ ಎಲ್ಲವೂ ಕೆಸರಿನಲ್ಲಿ ತುಂಬಿ ಹೋಗಿತ್ತು. “ಅಮ್ಮಾ” ಎನ್ನುತ್ತ ಮೇಲೆದ್ದೆ.
“ಈಗ ಒಂದು ಫೋಟೋ ತೆಗಿಲೆನೋ” ಎಂದ.
“ತಮಾಷೆ ಮಾಡ್ಬೇಡ, ಮೊದಲು ನೀರು ಎಲ್ಲಿದೆ ತೋರಿಸು” ಎನ್ನುತ್ತ ಸಾವರಿಸಿಕೊಂಡು ಮುಂದೆ ನಡೆದೆ.
“ಮೊದಲೇ ಕರೆಂಟ್ ಇಲ್ಲ, ಇಲ್ಲಿ ನೀರು ಇಲ್ಲ. ಮನೆಗೆ ಹೋಗೋಣ ನಡಿ” ಎಂದ.
ನಾನು “ಎಯ್, ಈ ಅವಸ್ಥೇಲಿ ಮನೆಗೆ ಹೋಗೋದು ಹ್ಯಾಗೋ” ಎಂದು ಕೇಳಿದೆ.
ಶೇಖರ “ಇರು, ಇನ್ನು ಸ್ವಲ್ಪ ಹೊತ್ತು ಕತ್ತಲಾಗೆ ಬಿಡುತ್ತೇ, ಆಮೇಲೆ ಸೀದಾ ಮನೆಗೆ ಹೋಗೋಣ” ಎಂದ.
ನಾನು “ಆಯ್ತಪ್ಪ” ಎನ್ನುತ್ತ ಅಲ್ಲೇ ಕುಳಿತೆ.
ಇಬ್ಬರೂ ಚೆನ್ನಾಗಿ ಹರಟೆ ಹೊಡೆದವು. ಇನ್ನೇನೂ ಕತ್ತಲಾವರಿಸಿತು, ಮನೆಗೆ ಹೊರಡೋಣ ಎನ್ನುವಷ್ಟರಲ್ಲಿ ಯಾರೋ ಮಾತನಾಡಿದ ಶಬ್ದ ಕೇಳಿಸಿತು.
ಶೇಖರ ಹಗುರವಾದ ಧ್ವನಿಯಲ್ಲಿ “ಶ್...... ಯಾರೋ ಇದಾರೆ ಸುಮ್ನೆ ಬಾ” ಎನ್ನುತ್ತ ಮೆಲ್ಲಗೆ ಹೆಜ್ಜೆ ಹಾಕತೊಡಗಿದ. ನಾನು ಅವನ್ನನ್ನೇ ಹಿಂಬಾಲಿಸಿದೆ.
ಯಾರೋ ಇಬ್ಬರು ಬಾಳೆಯ ಗೊನೆಯನ್ನು ಕದಿಯುತ್ತಿದ್ದರು. ಶೇಖರ ಒಂದು ಕೈಯಲ್ಲಿ ಕಟ್ಟಿಗೆ ತೆಗೆದುಕೊಂಡ, ನನಗೂ ಒಂದು ಕಟ್ಟಿಗೆ ಕೊಟ್ಟ ಕತ್ತಲಾದ್ದರಿಂದ ಅವರ ಮುಖ ಅಷ್ಟು ಸ್ಪಷ್ಟವಾಗಿ ನಮಗೆ ಗೋಚರಿಸಲಿಲ್ಲ.
ಆ ಕಡೆಯಿಂದ ಅವರ ಹಿಂದಿನಿಂದ ಬಂದ ಶೇಖರ, ಅವರಿಗೆ ಒಂದು ಏಟು ಹೊಡೆದೇ ಬಿಟ್ಟ, ಅವರು ಆ ನೋವು ತಾಳದೇ ಕಿರುಚಿಕೊಳ್ಳತ್ತ ಅಲ್ಲಿಂದ ಓಡಿ ಹೋದರು. ನಂತರ ನಾವು ಅವರು ಕಡಿದು ಇಟ್ಟಿದ್ದ, ಎರಡು ಬಾಳೆಯ ಗೊನೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮನೆಯ ಕಡೆಗೆ ಬಂದೆವು.
“ಕೆಸರು ಮೆತ್ತಿಕೊಂಡ ನಿನ್ನನ್ನು ನೋಡಿದರೆ ಕೆಲಸದವನ ತರ ಕಾಣ್ತಿಯಾ ನೋಡೊ, ಗಣ” ಎನ್ನುತ್ತಾ ನಗುತ್ತಿದ್ದ.
“ಇರಲಿ ನಡಿಯೋ ನೀನೂ ಒಂದಿನಾ ಬೀಳ್ತಿಯಾ ನೋಡು” ಎನ್ನುತ್ತ ಅವನನ್ನೇ ಹಿಂಬಾಲಿಸಿದೆ.
ಹಾಗೆಯೇ ಮನೆಯ ಹಿಂಬಾಗಿಲಿಗೆ ಬಂದಾಗ ಸುಮಾರು ಎಂಟು ಗಂಟೆ ಆಗಿರಬಹುದು.
ಶೇಖರ “ಇಲ್ಲೇ ಇರೋ, ನಾನು ಹೋಗಿ ನೀರು ತೆಗೆದುಕೊಂಡು ಬರ್ತೀನಿ” ಎನ್ನುತ್ತ ತನ್ನ ಬೆನ್ನ ಮೇಲಿನ ಗೊನೆ ಕೆಳಗಿಳಿಸಿದ.
ನಾನು “ಹಾಗೇ ನನ್ನ ಬಟ್ಟೆನೂ ತೆಗೆದುಕೊಂಡು ಬಾರೋ” ಎಂದೆ.
ಅವನು “ಆಯಿತು” ಎನ್ನುತ್ತ ಒಳನಡೆದ.
ನನ್ನ ಬೆನ್ನ ಹಿಂದೆ ಎನೋ ಶಬ್ದ ಆಯಿತು. ಬಾಳೆ ಗೊನೆ ಬೆನ್ನ ಮೇಲೆ ಹಿಡಿದುಕೊಂಡೆ ಹಿಂದೆ ತಿರುಗಿದೆ ಎನೂ ಇರಲಿಲ್ಲ.
ಆಗ ಮನೆಯ ಹಿಂಬಾಗಿಲಿನಿಂದ ಧ್ವನಿ ಕೇಳಿಸಿತು “ಯಾರು ನೀವು? ಯಾರು ಬೇಕಾಗಿತ್ತು ನಿಮಗೆ?”ಎನ್ನುವ ಮಾತು ಬಂತು.
ನಾನು ತಿರುಗಿ ನೋಡಿದಾಗ ಒಬ್ಬ ಹೆಂಗಸು ನಿಂತಿದ್ದಳು. ಮಡಿಕೇರಿಯ ಹಸಿರು ಪ್ರಕೃತಿ ಆ ಮಂದ ವಿದ್ಯತ್ ಬೆಳಕಲ್ಲಿಯೂ ಅವಳ ಕಣ್ಣಲ್ಲಿ ಕಾಣುತ್ತಿತ್ತು. ಹದಿ ಹರೆಯದ ವಯಸ್ಸೇನೂ ಅವಳದಾಗಿರಲಿಲ್ಲ, ಹಾಗೆಂದು ಅವಳು ತೀರ ವಯಸ್ಸಾದ ಹುಡುಗಿಯೂ ಆಗಿರಲಿಲ್ಲ, ಒಬ್ಬ ಹುಡುಗಿಗಿರಬೇಕಾದ ನೋಟ, ಒಂದು ಗೃಹಿಣಿಗಿರಬೇಕಾದ ಲಕ್ಷಣಗಳು ಅವಳಲ್ಲಿ ತುಂಬಿಕೊಂಡಿದ್ದವು. ಸುಮಾರು 28-30 ವಯಸ್ಸಿರಬಹುದು ಅವಳದು. ಆದರೆ ಯಾಕೋ ಅವಳ ಮುಖದಲ್ಲಿ ಒಂಚೂರು ಲವಲವಿಕೆ ಇರಲಿಲ್ಲ, ಖುಷಿಯಿರಲಿಲ್ಲ. ನಾನೂ ಬಂದು ಎರಡು ದಿನ ಕಳೆದರೂ ಇವರ ಮುಖಪರಿಚಯವೂ ಆಗಿರಲಿಲ್ಲ.
“ನಿಮ್ಮನ್ನೇ ಕೇಳ್ತಾ ಉಂಟು, ಯಾರ್ ಬೇಕು ನಿಮಗೆ?” ಎಂದಳು.
“ನಾನು ಶೇಖರನ್...........” ಎನ್ನುವಷ್ಟರಲ್ಲಿ ತಡೆದು,
“ಯಾಕಪ್ಪಾ, ಚಿಕ್ಕಯಜಮಾನ್ರನ್ನಾ ಹೆಸರುಕೊಟ್ಟು ಕರಿತಿಯಾ?” ಎಂದಳು.
“ನಾನು ತಪ್ಪಾಯ್ತು, ಚಿಕ್ಕಯಜಮಾನ್ರನ್ನ ಸ್ವಲ್ಪ ಕರಿತಿರಾ” ಎಂದೆ.
“ಆಯ್ತು ಸ್ವಲ್ಪ ಇರು” ಎನ್ನುತ್ತ ಒಳನಡೆದಳು.
ಸ್ವಲ್ಪ ಹೊತ್ತಿನಲ್ಲಿಯೇ ಶೇಖರ ಬಂದ “ತಗೋಳಪ್ಪ ನೀರು, ಬೇಗ ಸ್ನಾನ ಮಾಡು ಬಟ್ಟೆ ಇಲ್ಲೇ ಇದೆ” ಎನ್ನುತ್ತ ಒಳಗೆ ಹೋದ. ನಾನು ಸುಮ್ಮನೆ ಸ್ನಾನ ಮಾಡಿದೆ.
ಆದರೆ ತಲೆಯಲ್ಲಿ ಒಂದು ಯೋಚನೆ ಬಂತು `ಯಾರು ಆ ಹುಡುಗಿ?’ ಎಂದು.
ನಂತರ ಶೇಖರ ನಾನು ಮಹಡಿಯ ಮೇಲೆ ಹತ್ತಿ ಕುಳಿತೆವು.
ಆಗ ಶೇಖರ “ಏನಾಯ್ತೋ? ಯೋಚನೆ ಮಾಡ್ತಿದಿಯಾ?, ಬಿದ್ದಾಗ ಎನಾದರೂ ಪೆಟ್ಟಾಯ್ತಾ” ಎನ್ನುತ್ತ ಕಾಫಿ ಕೊಟ್ಟ.
ನಾನು “ಏನಿಲ್ಲಪ್ಪಾ” ಎನ್ನುತ್ತ ಅಲ್ಲೇ ಬಿದ್ದದ್ದ ಒಂದು ಕವರ್ ತೆಗೆದುಕೊಂಡು ನೋಡಿದೆ, ಅದರಲ್ಲಿ ಒಂದು ಪೇಪರ್ ಜೊತೆಗೆ ಒಂದು ಫೋಟೊ ಇತ್ತು.
ನಾನು ಆ ಪೇಪರ್ ತೆಗೆದುಕೊಂಡು ನೋಡಿದೆ. ಅದರಲ್ಲಿ ಒಂದು ಕವನವಿತ್ತು, ಅದನ್ನು ಹಾಗೇ ಮನಸ್ಸಿನಲ್ಲಿಯೇ ಓದತೊಡಗಿದೆ.
ಬಂದೆ ಗೆಲುವೆ, ಬಂದೆ ನಾನು
ಬಿಗಿದಪ್ಪಿಕೊ ನೀ ನನ್ನ
ಉಸಿರಿನ ಊರನ್ನಾ ಬಿಟ್ಟು ಬಂದೆ
ಕನಸಿನ ಊರಿಗೆ ಧಾವಿಸಿ ಬಂದೆ ನಾ ಗೆಲುವೆ,
ಬಂದೆ ನಾನು, ಬಿಗಿದಪ್ಪಿಕೊ ನೀ ನನ್ನ
ಅಪ್ಪನ ಕಷ್ಟವ ನೋಡಿ ಬಂದೆ
ಅಮ್ಮನ ನೋವನ್ನಾ ಅನುಭವಿಸಿ ಬಂದೆ ನಾ ಗೆಲುವೆ,
ಬಂದೆ ನಾನು, ಬಿಗಿದಪ್ಪಿಕೊ ನೀ ನನ್ನ
ನಂಬಿಕೆಯಾ ಚೀಲವಾ ಹೊತ್ತು ಬಂದೆ
ಆಸೆಗಳಾ ಕನಸನ್ನಾ ಬಿತ್ತಿ ಬಂದೆ ಗೆಲುವೆ,
ಬಂದೆ ನಾನು, ಬಿಗಿದಪ್ಪಿಕೊ ನೀ ನನ್ನ
ಮಗುವಿನಾ ನಗುವನ್ನಾ ಮರೆತು ಬಂದೆ
ತಿರುಗಿ ಕೊಡಲು ಈ ಮನಸಿಗೆ ನಾ ಗೆಲುವೆ,
ಬಂದೆ ನಾನು, ಬಿಗಿದಪ್ಪಿಕೊ ನೀ ನನ್ನ
ಕಣ್ಣೀರಿನ ಹನಿಯಾ ಒರೆಸಲು ಬಂದೆ
ಕಷ್ಟಗಳಾ ತೊಳಿಯೊ ಕರವಸ್ತ್ರವಾಗಲು ಗೆಲುವೆ
ಬಂದೆ ನಾನು, ಬಿಗಿದಪ್ಪಿಕೊ ನೀ ನನ್ನ
ನಿನ್ನೊಡಲಾ ಸೇರಲು ಓಡಿ ಬಂದೆ
ನಿನ್ನೆಡೆಗೆ ನಾನು ಜಿಗಿದು ಬಂದೆ
ಓ ಗೆಲುವೆ..... ಬಂದೆ ನಾನು, ಬಿಗಿದಪ್ಪಿಕೊ ನೀ ನನ್ನ
ಈ ಸಾಲುಗಳು ನಿಜಕ್ಕೂ ನನಗೆ ಖುಷಿ ಕೊಟ್ಟವು.
ಅದರ ಕೆಳಗೆ “ಈಗ ತಾನೇ ಕಲಿಯುವುದು ಮುಗಿಯಿತು, ಇಡೀ ನನ್ನ ಜನರು ನನ್ನ ಮೇಲೆ ಇಟ್ಟಂತಹ ನಂಬಿಕೆಯನ್ನೂ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ, ಹೀಗಾಗಿ ಆ ಗೆಲುವಿಗೆ ನನ್ನ ಕೋರಿಕೆಯಿಷ್ಟೇ. ಅದೆಂತಹ ಸಂದರ್ಭ ಬಂದರು, ನಿನ್ನೆಡೆಗೆ ಬರದೇ ಓಡಿ ಹೋಗಲು ಅವಕಾಶ ಕೊಡದೇ, ನನ್ನನ್ನ ನಿನ್ನೆಡೆಗೆ ಕರೆಸಿಕೊಂಡು ನಿನ್ನನ್ನಪ್ಪಿಕೊಳ್ಳುವ ಒಂದು ಅವಕಾಶ ಕೊಡು ಎಂಧು ಕೇಳಿಕೊಳ್ಳುತ್ತೇನಷ್ಟೇ” ಎಂದು ಬರೆದಿತ್ತು.
ನಂತರ ನಾನು ಅಲ್ಲಿಯಿದ್ದ ಫೋಟೊ ತೆಗೆದುಕೊಂಡು ನೋಡಿದೆ. ಅದು ಬೇರೆ ಯಾರದ್ದೂ ಅಲ್ಲ, ಸ್ವಲ್ಪ ಹೊತ್ತಿನ ಮುಂಚೆ ಮಾತನಾಡಿಸಿದ ಆ ಹುಡುಗಿಯದು.
“ಈ ಹುಡುಗಿ ಯಾರು?” ಎಂದು ಶೇಖರನ ಕೇಳಿದೆ.
ಶೇಖರ “ಇದಾ, ಸತ್ತು ಹೋದವರ ಬಗ್ಗೆ ಮಾತು ಯಾಕೋ?” ಎಂದ.
ಆ ಕ್ಷಣ ನನ್ನ ಮೈಯಲ್ಲಾ ಒಮ್ಮೆ ಕಂಪಿಸಿತು “ಏನು ಇವರು ಸತ್ತು ಹೋಗಿದ್ದಾರಾ?, ಸತ್ತಿದ್ದಾರಾ?” ಎಂದೆ.
ಆಗ ಅವನು ಎನೋ ಹೇಳಲು ಹೋದ...... ಅಷ್ಟರಲ್ಲಿ ಅವರ ತಂದೆ ಅಲ್ಲಿಗೆ ಬಂದರು. ನಾನು ಆ ಫೋಟೋವನ್ನು ಅಡಗಿಸಿಟ್ಟೆ.
“ಹೇಗಿದೆಯಪ್ಪಾ ನಮ್ಮ ತೋಟ?” ಎನ್ನುತ್ತ ನಮ್ಮ ಬಳಿಯೇ ಕುಳಿತರು.
ನಾನು “ಚೆನ್ನಾಗಿದೆ ಅಂಕಲ್” ಎಂದೆ.
ಅವರು “ಈಗ ರೋಗ ಬಂದು ಅಡಿಕೆ ಸ್ವಲ್ಪ ಹಾಳಾಗಿ ಹೋಗಿದೆ ಅಷ್ಟೇ, ಆದರೆ ಮೊದಲು ನೀನು ನೋಡ್ಬೇಕಿತ್ತಪ್ಪ ಆಗ ಅಡಿಕೆ ತುಂಬಾ ಚೆನ್ನಾಗಿ ಇತ್ತು” ಎಂದರು.
ಅವರೇ ಮುಂದುವರೆದು “ಅದು ಸರಿ ಇವತ್ತು ತೋಟದಲ್ಲಿ ಎಂತದೋ ಗದ್ದಲ ಆಯಿತಂತಲ್ಲಾ ಏನದು?” ಎಂದರು.
“ಏನಿಲ್ಲಪ್ಪಾ ಕಳ್ಳರು ಅಂತ ಕಾಣಿಸ್ತ, ಬಡಿಗೆ ತಗೊಂಡು ಒಂದು ಬಿಟ್ಟೆ ಅಷ್ಟಕ್ಕೆ ಓಡಿ ಹೋಗ್ಬಿಟ್ರು” ಎಂದ ಶೇಖರ.
“ಆ ನನ್ಮಕ್ಕಳ ಅಂಡಿಗೆ ಹೋಡಿಬೇಕಿತ್ತು, ಕುಂಡ್ರೋವಾಗೆಲ್ಲಾ ನಿನ್ನ ನೆನಸ್ತಿದ್ರು ಅವರು” ಎಂದರು ಅಂಕಲ್ ನಗುತ್ತಾ.
ನಾವೂ ಕೂಡಾ ಅವರೊಂದಿಗೆ ನಗು ಚೆಲ್ಲಿದೆವು.
“ಅಂಕಲ್, ನಿಮ್ಮ ತೋಟಕ್ಕೆ ಇದೆ ಮೊದಲಾ ಕಳ್ಳರು ಬಂದಿದ್ದು?, ಇಲ್ಲಾ ಹೀಗೆ ಕಳ್ಳರ ಹಾವಳಿ ಇರ್ತದಾ?” ಎಂದು ಕೇಳಿದೆ.
ಅಂಕಲ್ “ಇಲ್ಲಾ ಕೂಸೇ, ನಮ್ಮಲ್ಲಿ ಕಳ್ಳತನ ಅಷ್ಟಾಗಿ ಇಲ್ಲ. ಆದರೆ ಇತ್ತೀಚೆಗೆ ಸ್ವಲ್ಪ ಜಾಸ್ತಿ ಅಷ್ಟೇ” ಅಂದರು.
“ನೀವು ಯಾರಿಗಾದ್ರೂ ಹೊಡೆದಿದಿರಾ? ಅಂಕಲ್” ಎಂದು ಕೇಳಿದೆ.
“ಮಿಲ್ಟ್ರಿನಲ್ಲಿ ಇದ್ನಲ್ಲಾ ಆಗ ಬಂದೂಕಿನಿಂದ ಶತ್ರುಗಳಿಗೆ ಹೊಡೆತಿದ್ದೆ. ಆಮೇಲೆ ನನಗೆ ಬೇಟೆಯಾಡೋ ಹುಚ್ಚು ಹೆಚ್ಚಾಯ್ತು ಈ ಕಡೆ ಗಿಡ, ಮರ, ಕಾಡು ಜಾಸ್ತಿಯಲ್ವಾ ಅದಕ್ಕೆ ಬೇಟೆಯಾಡೋಕೆ ಅಂತಾನೇ ಕಾಡಿಗೆ ಹೋಗ್ತಿದ್ದೆ ಆದರೆ ಒಂದು ಘಟನೆ ಅದನ್ನೂ ಬಿಡಿಸಿತು” ಎಂದರು ಸ್ವಲ್ಪ ಭಾವುಕರಾಗಿ.
ನಾನು “ಯಾಕೆ? ಏನಾಯ್ತು ಅಂಕಲ್?” ಎಂದು ಕೇಳಿದೆ.
ಅವರು “ಎನಿಲ್ಲಾ ಗಣ, ನನಗೆ ಬೇಟೆಯಾಡೋ ಹುಚ್ಚು ಜಾಸ್ತಿಯಲ್ವಾ ಹೀಗಾಗಿ ಮಿಲ್ಟ್ರಿಯಿಂದ ರಿಟೈಡ್ ಆದ ಮೇಲೆ ಬೇಟೆಗೆ ಅಂತ ಕಾಡಿಗೆ ಹೋಗ್ತಿದ್ದೆ. ಅಲ್ಲಿ ಆನೆ, ಚಿರತೆ, ಮೊಲ, ಹುಲಿ, ಜಿಂಕೆ, ಹೀಗೆ ಪ್ರಾಣಿ ಇರೋದು, ನಾನು ಅವುಗಳನ್ನು ಹೊಡೆದು ತಂದು ಚರ್ಮ ತೆಗೆದು ಮನೇಲಿ ಹಾಕ್ತಿದ್ದೇ, ಅದರ ಹುಚ್ಚು ನನಗೆ ಬಹಳ ಇತ್ತು. ಆದರೆ ಒಂದು ದಿನ ಬೇಟೇಗೆ ಹೋದಾಗ ಒಂದು ಕರಡಿ ಕಾಣಿಸ್ತು. ಅದಕ್ಕೇ ಗುರಿ ಇಟ್ಕೋಂಡು ನಿಂತಿದ್ದೆ, ಆಗ ನನ್ನ ಹಿಂದೆ ಮೂರು ಕರಡಿಗಳು ಅಟ್ಟಿಸಿಕೊಂಡು ಬಂದವು.
ನಾನು “ಅಯ್ಯೋ” ಅಂತ ಕಿರುಚಿಕೊಂಡು ಓಡೋಕೆ ಶುರುಮಾಡಿದೆ.
ನಾನು “ಹೌದಾ ಅಂಕಲ್” ಎಂದೆ ಕಿರುಗಾಬರಿಯಿಂದ.
ಅವರು “ಹೌದು...... ನಾನು ಗುರಿಯಿಟ್ಟದ್ದು ತಾಯಿ ಕರಡಿಗೆ, ನನ್ನ ಹಿಂದೆ ಬಂದಿದ್ದು ಅದರ ಮಕ್ಕಳು ಅಂತ ಕಾಣಿಸ್ತದೆ” ಎಂದರು.
“ಆಮೇಲೆ, ಮತ್ತೆ ಅಲ್ಲಿಗೆ ಹೋಗ್ಲೇ ಇಲ್ವಾ ಅಂಕಲ್?” ಎಂದು ಕೇಳಿದೆ.
ಅವರು “ಇಲ್ಲಾ ಹೋದೆ, ಮತ್ತೇ ಒಂದಿನಾ ಅದೇ ಜಾಗಕ್ಕೆ ಹೋದೆ. ಆದರೆ ಅವತ್ತು ಯಾವುದೇ ಕರಡಿ ಇರ್ಲಿಲ್ಲಾ. ಹಾಗೇ ನಡ್ಕೋಂಡು ಹೋಗ್ತಾ ಮಧ್ಯಾಹ್ನದವರೆಗೂ ಹುಡುಕಾಡಿದೆ, ತುಂಬಾ ಹಸಿವೆಯಾಯಿತು. ಬಿಸಿಲು ಇದ್ದಿದ್ದರಿಂದ ತುಂಬಾನೇ ಸುಸ್ತಾಗಿತ್ತು. ಹೀಗಾಗಿ ಒಂದು ಗಿಡದ ಕೆಳಗೆ ಕುಳಿತು ಊಟ ಮಾಡೋಕೆ ಅಂತ ಡಬ್ಬಿ ಬಿಚ್ಚಿದೆ. ಅಷ್ಟರಲ್ಲಿ ಹತ್ತಿರದಲ್ಲಿಯೇ ಎನೋ ಸಪ್ಪಳ ಆಯಿತು.
ಏನು ಅಂತ ನೋಡೋಕೆ ಅಲ್ಲಿಂದ ಎದ್ದು ಹೋದೆ, ಆದರೆ ಅಲ್ಲಿ ಏನು ಇರಲಿಲ್ಲ. ಮತ್ತೆ ನಾನು ಊಟ ಮಾಡೋಕೆ ಬಂದು ನೋಡಿದಾಗ ಆಶ್ಚರ್ಯ! ಕಾದಿತ್ತು” ಎಂದರು.
ಶೇಖರ “ಯಾಕೆ? ಅಪ್ಪ, ಏನಾಯ್ತು? ಎಂದು ಕೇಳಿದ.
ಆಗ ಅಂಕಲ್ “ಆ ಜಾಗದಲ್ಲಿ ನಾನು ಊಟ ಮಾಡ್ತಿದ್ದ ತಟ್ಟೆನೇ ಇರಲಿಲ್ಲ, ಅದನ್ನು ಒಂದು ಕರಡಿ ಹಿಡಿದುಕೊಂಡು ಓಡುತ್ತಿತ್ತು. ನಾನು ಕೂಡಲೇ ನನ್ನ ಬಂದೂಕಿನಿಂದ ಕರಡಿಯ ಬೆನ್ನಿಗೆ ಗುರಿ ಇಟ್ಟೆ, ಒಂದೇ ಬುಲೆಟ್ ಹಾರಿಸಿದೆ. ಆ ಬುಲೆಟ್ ಕರಡಿಯ ಬೆನ್ನಿಗೆ ತಾಗಿತ್ತು, ಕೂಡಲೇ ಕರಡಿ ಕೆಳಗೆ ಬಿದ್ದು ಒದ್ದಾಡತೊಡಗಿತು” ಎಂದರು.
“ಆಮೇಲೆ ಏನ್ಮಾಡಿದ್ರಿ ಅಂಕಲ್?” ಎಂದು ನಾನು ಕೇಳಿದೆ.
“ಅಲ್ಲೇ ನಿಂತೆ, ಆ ಕರಡಿಯ ಸುತ್ತಲೂ ರಕ್ತ ಹರಿದಿತ್ತು. ಅಂತಹ ಸ್ಥಿತಿಯಲ್ಲಿಯೂ ಎದ್ದು ನಿಂತು ಕರಡಿ ನನ್ನತ್ತ ತಿರುಗಿತು. ನನಗೆ ಗಾಬರಿಯಾಯಿತು ಅಷ್ಟರಲ್ಲಿ ಆ ಕರಡಿ ಬಗ್ಗಿ ನೆಲಕ್ಕೆ ಕೈಯಿಟ್ಟು ಎದ್ದು ಮತ್ತೇ ನಡೆಯತೊಡಗಿತು” ಎಂದರು.
“ಅಂದರೆ ಅದು ನಿಮಗೆ ನೆಲ ತೋರಿಸ್ತಾ ಅಪ್ಪಾ?” ಎಂದ ಶೇಖರ.
“ಇಲ್ಲ, ನನ್ನ ಬಿಡು ಅಂತ ನೆಲಕ್ಕೆ ನಮಸ್ಕಾರ ಮಾಡಿತು” ಎಂದರು.
“ನೀವು ಅದನ್ನಾ ಬಿಟ್ಟಿರಾ ಅಂಕಲ್?” ಎಂದು ನಾನು ಕೇಳಿದೆ.
“ಇಲ್ಲ, ನಾನು ಅದನ್ನ ಸೂಕ್ಷ್ಮವಾಗಿ ಹಿಂಬಾಲಿಸಿದೆ, ಅದಕ್ಕೆ ಗೊತ್ತಾಗದಂತೆ. ಅದು ಸುಮಾರು ಒಂದು ಮೈಲಿಗಳಷ್ಟು ದೂರ ಹೋಯಿತು. ರಕ್ತ ಸುರಿಯುತ್ತಿದ್ದರೂ ಅದರ ಕಡೆಗೆ ಲಕ್ಷ್ಯ ಕೊಡದೇ ನಡೆಯುತ್ತಿತ್ತು. ಅದು ಹೆಜ್ಜೆಯಿಟ್ಟಲೆಲ್ಲಾ ರಕ್ತ ಕೋಡಿಯಾಗಿ ಹರಿದಿತ್ತು” ಎಂದರು.
ಆಗ ಮೂವರೂ ಭಾವುಕರಾಗಿದ್ದಂತೂ ನಿಜ.
ಅಂಕಲ್ ಮತ್ತೇ ಮುಂದುವರೆಯುತ್ತಾ “ಕಡೆಗೆ ಹರಿಯುವ ನದಿಯ ಹತ್ತಿರ ಹೋಯಿತು. ಅಲ್ಲಿ ಕಲ್ಲು ಬಂಡೆಯ ಒಳಗೆ ಕುಳಿತಿದ್ದ ಮರಿಗಳನ್ನು ಹೊರಗೆ ಕರೆಯುವ ಹಾಗೇ ಶಬ್ದ ಮಾಡಿತು. ಅವುಗಳು ಕೂಡಲೇ ಹೊರಗೆ ಬಂದವು. ತಾಯಿ ಕರಡಿಯ ಕೈಯಲ್ಲಿರುವ ತಿಂಡಿಯನ್ನು ತಿನ್ನತೊಡಗಿದವು” ಎಂದರು.
“ನೀವು ಏನು ಮಾಡಿದಿರಿ ಅಂಕಲ್?” ಎಂದೆ ನಾನು.
“ಇಲ್ಲ, ನಾನು ಅಲ್ಲೇ ಸ್ವಲ್ಪ ದೂರದಲ್ಲಿ ನಿಂತು ನೋಡುತ್ತಿದ್ದೆ. ಅದು ಹಾಗೇ ನರಳುತ್ತಾ ಅಲ್ಲಿಯೇ ಹರಿಯುತ್ತಿರುವ ನೀರನ್ನು ಕುಡಿಯೋಕೆ ಬಂದಿತು. ಆಮೇಲೆ ಆಯತಪ್ಪಿ ಒಮ್ಮೇಲೆ ನಿರಿನಲ್ಲಿ ಬಿದ್ದಿತು. ಆಗ ಅಲ್ಲಿಯೇ ಇದ್ದ ಅದರ ಮರಿಗಳು ಜೋರಾಗಿ ಕಿರುಚುತ್ತ ಅದನ್ನು ಎತ್ತಿ ಹಿಡಿದು ಒಂದು ಬಂಡೆಗೆ ತಂದು ಕೂರಿಸಿದವು. ಅವುಗಳು ಕಿರುಚುವ ಧ್ವನಿ ಇಡೀ ಕಾಡನ್ನೇ ಒಂದು ಕ್ಷಣ ದಂಗುಬಡಿಸಿದವು. ಆದರೆ ಅವುಗಳ ತಾಯಿ ತನ್ನ ಊಸಿರನ್ನೇ ನಿಲ್ಲಿಸಿತ್ತು” ಎಂದರು.
ಆಮೇಲೆ ಅವರೇ ಮುಂದುವರೆದು “ಆ ತಾಯಿ ಕರಡಿಯ ಎದೆಗೆ ಅದರ ಮರಿಗಳು ತಮ್ಮ ಕೈಯಿಂದ ಗುದ್ದಿದವು, ಅದನ್ನು ಎಳೆದು ನೆಲದ ಮೇಲೆ ಹಾಕಿ ಅದರ ಬಾಯಲ್ಲಿ ಗಾಳಿ ಊದಿದವು. ಕೊನೆಗೆ ಅವುಗಳ ತಾಯಿ ಸತ್ತಿದೆ ಅಂತ ತಿಳಿದ ಮೇಲೆ, ಬಂಡೆಗಳಿಗೆ ಗುದ್ದತೊಡಗಿದವು.
ಜೋರಾಗಿ ಚೀರತೊಡಗಿದವು, ನೀರನ್ನು ತಂದು ತಾಯಿಯ ಮೈಮೇಲೆ ಹಾಕತೊಡಗಿದವು. ಆದರೆ ಇದಾವುದರ ಪರಿವೆಯಿಲ್ಲದೆ ಮಲಗಿರುವ ತಾಯಿಯನ್ನು ನೆನೆದು ಕಣ್ಣಿರಿಡುತ್ತಿದ್ದವು. ಇದನ್ನು ನೋಡಿ ನನಗೆ ಅಳು ಬಂದಿತು. ಅಲ್ಲಿಂದ ಕಣ್ಣೊರೆಸಿಕೊಳ್ಳತ್ತ ಮನೆ ಕಡೆಗೆ ಬಂದೆ. ಆದರೆ ಯಾವತ್ತೂ ಆವತ್ತಿನಿಂದ ಬೇಟೆಗೆ ಹೋಗಲಿಲ್ಲ, ಬಂದೂಕು ಹಿಡಿಯಲಿಲ್ಲ.
ಒಂದು ಜೀವವನ್ನು ಸತ್ತಿರುವ ದೇಹಕ್ಕೆ ನೀಡುವ ಶಕ್ತಿ ನಮ್ಮಲಿಲ್ಲ ಎಂದರೆ, ಒಬ್ಬ ಬದುಕಿರುವ ಜೀವದ ಪ್ರಾಣ ತೆಗೆಯುವ ಹಕ್ಕೂ ನಮಗಿಲ್ಲ. ಆ ಮರಿಗಳು ಗೋಳಾಡುತ್ತಿರುವುದನ್ನು ನೋಡಿ ನನ್ನ ಮನ ಒಂದು ಕ್ಷಣ ಕಂಪಿಸಿತು. ಯಾಕಿಷ್ಟು ಕ್ರೂರಿಯಾದೆ ನಾನು, ನನ್ನಲ್ಲಿರುವ ಮನುಷ್ಯತ್ವ ಕಳೆದು ಹೋಯಿತಲ್ಲಾ, ಒಂದು ತಾಯಿಯಿಂದ ಮಕ್ಕಳನ್ನೇ ದೂರ ಮಾಡಿದೆನಲ್ಲಾ ಎಂದೆಲ್ಲಾ ಆಲೋಚನೆಗಳು ನನಗೆ ಬಂದವು” ಎಂದರು.
“ಹೌದು ಅಂಕಲ್...... ನೀವು ಹೇಳಿದ ಮಾತು ನಿಜ. ಪ್ರಾಣ ನೀಡುವವರಿಗೆ ಮಾತ್ರ ಪ್ರಾಣ ತೆಗೆಯುವ ಶಕ್ತಿ ಇದೆ” ಎಂದೆ.
ಅಷ್ಟರಲ್ಲಿ ಅಂಕಲ್ “ಓಹ್, ಬಂದಿದ್ದ ಕೆಲಸವನ್ನೇ ಮರೆತೆನಲ್ಲಾ. ಬನ್ನಿ, ಊಟ ಮಾಡಿ ತುಂಬಾ ಹೊತ್ತಾಯ್ತು” ಎನ್ನುತ್ತಾ ಕೆಳಗೆ ನಡೆದರು.
ನಾವು “ಸರಿ” ಎನ್ನುತ್ತ ಕೆಳಗೆ ನಡೆದೆವು.
ರಾತ್ರಿಯ ರುಚಿಕಟ್ಟಾದ ಊಟಮಾಡಿ ಮುಗಿಸಿದೆವು. ಇನ್ನೇನು ಮದುವೆಗೆ ಕೇವಲ ಎರಡೇ ದಿನ ಬಾಕಿಯಿತ್ತು. ಹೀಗಾಗಿ ಊರಿನಿಂದ ಬರುವ ಸಂಬಂಧಿಗಳ ಸಂಖ್ಯೆಯೂ ಅತಿಯಾಗಿತ್ತು. ಮಹಡಿಯ ಮೇಲಿನ ಕೋಣೆಯಲ್ಲಿ ಮಲಗಿದ್ದ ನಾವು ಅವರ ಧ್ವನಿಯಿಂದ ಒಂದಿಷ್ಟೂ ನಿದ್ದೆ ಮಾಡಲಿಲ್ಲ. ಹೀಗಾಗಿ ನಮ್ಮ ಮಾತಿನ ಮನೆ ಮತ್ತೆ ಪ್ರಾರಂಭವಾಯಿತು. ಆದರೆ ಈ ಬಾರಿ ಇದ್ದದ್ದು ನಾನು ಮತ್ತೆ ಶೇಖರ ಮಾತ್ರ.
ಆವತ್ತು ನಮ್ಮ ಕಾಲೇಜಿನ ದಿನಗಳು ಮಾತಿನಲ್ಲಿ ಬಂದವು. ಕಾಲೇಜಿನ ಎನ್ಟ್ರೇನ್ಸ್ನಲ್ಲಿ ನಿಂತ ನಾವು, ಹೊಸದಾಗಿ ಸೇರಿದ ಹುಡುಗಿಯರಿಗೆ ಕಮೆಂಟ್ ಕೊಡುತ್ತಿದ್ದುದ್ದು, ಕೈ ಬೀಸುತ್ತ ಬರುತ್ತಿದ್ದ ಹುಡುಗಿಯರಿಗೆ ಮೇಜರ್, ಕ್ಯಾಪ್ಟನ್ ಎಂದು ಕಾಡಿಸುತ್ತಿದ್ದದ್ದು, ಗೆಸ್ಟ್ ಲೆಕ್ಚರ್ಗಳು ಬಂದು ಕ್ಲಾಸ್ ರೂಮ ಕೇಳಿದಾಗ ಅವರಿಗೆ ಮೂತ್ರಾಲಯದ ಹಾದಿ ತೋರಿಸಿ ಅಲ್ಲಿಂದ ಜಾರಿಕೋಳ್ಳುತ್ತಿದ್ದುದ್ದು, ಹಾದಿಯಲ್ಲಿ ಫೋನ್ ಎಸೆದು ಅಡಗಿ ನಿಂತು ಯಾರಾದರೂ ಹುಡುಗಿಯರು ಆ ಫೋನ್ ಎತ್ತಿಕೊಂಡಾಗ ಗೆಳೆಯರೆಲ್ಲಾ ಸೇರಿ “ಹೋಯ್” ಎಂದು ಜೋರಾಗಿ ಕಿರುಚಿ ಫೋನ್ ಮರಳಿ ಪಡೆಯುತ್ತಿದ್ದುದ್ದು, ಮಿಸ್ ಮ್ಯಾಚ್ ಡೇ ನಲ್ಲಿ ಕಪಿಯ ರೀತಿ ವೇಷ ಹಾಕಿಕೊಂಡು ಬಂದಿದ್ದು ಇವೆಲ್ಲವುಗಳು ಅದರಲ್ಲಿ ಸೇರಿದ್ದವು.
ಆದರೆ, ಆವತ್ತು ಶೇಖರ ಎಂದಿಗೂ ಹೇಳದ ವಿಷಯವೊಂದನ್ನು ಬಿಚ್ಚಿಟ್ಟ. “ನೋಡು ಗಣ, ಇವತ್ತು ನಿನಗೆ ಒಂದು ವಿಷಯ ಹೇಳ್ತೇನೆ ಕಣೊ. ಆದರೆ ಅದನ್ನು ಯಾರಿಗೂ ಹೇಳಬೇಡ”ಎಂದ.
ನಾನು “ಆಯ್ತು ಹೇಳು” ಎಂದು ಅವನತ್ತ ತಿರುಗಿದೆ.
“ಎನಿಲ್ಲ, ಸುಮಾರು ಐದು ವರ್ಷದ ಹಿಂದೆ ನನ್ನ ಅಣ್ಣ ಅನಂತನ ಮದುವೆಯಾಗಿತ್ತು” ಎಂದ.
ನಾನು “ಹೌದಾ, ಆಮೇಲೆ” ಎಂದೆ ಕೂತುಹಲಕ್ಕೆ....
“ಆ ಮದುವೇಲಿ, ನನ್ನ ಅಣ್ಣನ ಹೆಂಡತಿಯ ತಂಗಿನಾ ನೋಡ್ದೆ ಕಣೋ, ಅನು ಅಂತಾ ಅವಳ ಹೆಸರು” ಎಂದ.
ನಾನು “ಆಮೇಲೆ” ಎಂದೆ.
“ಆವತ್ತು ನಮ್ಮ ಮನೆಯಲ್ಲಿ ಸುಮಾರು ಇಪ್ಪತ್ತೈದು ವರ್ಷದ ನಂತರ ನಡಿತಿರೋ ಮೊದಲನೇ ಮದುವೆಯ ಕಾರ್ಯ ಅಲ್ವಾ, ಅಲ್ಲದೇ ಇಡೀ ಊರಿಗೆ ನ್ಯಾಯ ಹೇಳೋರು ನಮ್ಮ ತಾತ, ತಂದೆ, ದೊಡ್ಡ ಮನೆತನ ಬೇರೆ.
ಹೀಗಾಗಿ ದೊಡ್ಡ ಚಪ್ಪರ, ಜಾತ್ರೆಯಲ್ಲಿ ಕೂಡಿರೋವಷ್ಟು ಜನ ಕಾಲಿಡೋಕೆ ಆಗದಿರುವಷ್ಟು ಗದ್ದಲ ಕಣೋ. ನಮ್ಮ ಸಂಪ್ರದಾಯದಂತೆ ಮದುವೆ ನಡೆಯಿತು. ಆಮೇಲೆ ಗಂಡು ಹೆಣ್ಣು ಇಬ್ಬರೂ ಸ್ಟೇಜ್ ಮೇಲೆ ನಿಂತರು. ಫೋಟೋ ತೆಗಿಯೋಕು ಆಗ್ತಾಯಿಲ್ಲ ಅಷ್ಟೊಂದು ಗದ್ದಲ.
ಸ್ಟೇಜ್ನ ಎಡಬದಿಯ ಮೇಟ್ಟಿಲು ಹತ್ತಿ ಫೋಟೋ ತೆಗೆಸಿಕೊಂಡ ನನಗೆ, ಬಲಬದಿಯ ಮೆಟ್ಟಿಲು ಇಳಿಯೋವಾಗ ಇನ್ನೊಂದೇ ಸ್ಟೇಪ್ ಬಾಕಿಯಿತ್ತು, ಅಷ್ಟರಲ್ಲಿ ಎದುರುಗಡೆ ಒಬ್ಬ ಮುದುಕ ನನಗೆ ಬೆನ್ನು ಮಾಡಿ ಫೋನಿನಲ್ಲಿ ಮಾತನಾಡುತ್ತಿದ್ದ, ಅವನಿಗೆ ತೊಂದರೆ ಕೊಡೊದು ಬೇಡ ಆಮೇಲೆ ಹೋದರಾಯ್ತು ಅಂತ ಸ್ವಲ್ಪ ಹೋತ್ತು ಅಲ್ಲೇ ನಿಂತೆ” ಎಂದ.
ನಾನು “ಆಮೇಲೆನಾಯ್ತೋ” ಎಂದೆ.
ಶೇಖರ “ಆಮೇಲೆ ಹಿಂದಿನಿಂದ ಬಂದ ಅನು, ಯಾರದೋ ಜೊತೆ ಫೋನಿನಲ್ಲಿ ಮಾತನಾಡುತ್ತ ನನ್ನ ಬುಜದ ಮೇಲೆ ಕೈಯಿಟ್ಲು” ಎಂದ
ನಾನು “ಹೌದೇನೋ!” ಎಂದೆ ನಗುತ್ತ.
ಶೇಖರ “ಏಯ್, ಹೌದಪ್ಪ. ಆಮೇಲೆ ನಾನು ಹಿಂತಿರುಗಿ ನೋಡ್ದೆ. ಅವಳು ತನ್ನ ಮಾತಿನಲ್ಲಿ ಬ್ಯೂಸಿ ಇದ್ದಳು. ನಾನು ಅವಳಿಗೆ ಯಾಕೆ ಡಿಸ್ಟರ್ಬ್ ಮಾಡ್ಬೇಕು ಅಂತಾ ಸುಮ್ಮನೆ ನಿಂತೆ” ಎಂದ.
“ನೀನು ಅವಳಿಗೆ ಡಿಸ್ಟರ್ಬ್ ಮಾಡ್ಬಾರ್ದು ಅಂತಾ ಸುಮ್ನೆ ನಿಂತ್ಯೋ, ಇಲ್ಲಾ ಆ ಕ್ಷಣವನ್ನು ಎಂಜಾಯ್ ಮಾಡ್ಬೇಕು ಅಂತಾನಾ” ಎಂದೆ.
ಶೇಖರ “ಎರಡೂ ಹೌದೋ......... ಆಮೇಲೆ ನಾನೇ ಸ್ವಲ್ಪ ಕೈ ತೆಗಿತಿರಾ ಎಂದೆ, ಅವಳು ಓಹ್ ಸಾರಿ ಎನ್ನುತ್ತ ಮರೆನೇ ಆದ್ಲೂ” ಎಂದ.
ನಾನು “ಹೌದಾ, ಮತ್ತೇ ಅವಳನ್ನಾ ಹೇಗೋ ಹುಡುಕ್ದೆ” ಎಂದೆ.
“ಅವತ್ತು ಅವಳನ್ನಾ ಹುಡುಕೋದೆ ಒಂದು ಕೆಲಸ ಆಗಿತ್ತು ಕಣೋ ನನಗೆ. ಯಾಕಂದ್ರೆ ಮೊದಲ್ನೇ ಬಾರಿ ಒಂದು ಹುಡುಗಿ ನನ್ನ ಹೃದಯವನ್ನಾ ಮುಟ್ಟಿದ್ಲು. ಇಡೀ ದಿನಾ ಕಳೆದ್ರೂ ನನಗೆ ಅವಳು ಸಿಗಲೇ ಇಲ್ಲ. ಮದುವೆಯ ದಿನ ಸಂಜೆ ನನ್ನ ಅತ್ತಿಗೆಯ ಮನೆಗೆ ಹೋಗಿದ್ವಿ ಅಲ್ಲೂ ಅವಳ ಹುಡುಕಾಟ ಮುಂದುವರೆದಿತ್ತು.
ನಿನಗೇ ಗೊತ್ತಲ್ವಾ ಬೀಗರು ಮನೆಗೆ ಬಂದಾಗ, ಕುಡಿಯೋ ನೀರಲ್ಲಿ ಉಪ್ಪು ಹಾಕೋದು. ಸಿಹಿ ಪದಾರ್ಥದಲ್ಲಿ ಖಾರ ಸೇರಿಸೋದು ಎಲ್ಲಾ, ಆವತ್ತು ಹಾಗೇ ಆಯ್ತು.
ನನಗೆನೊ ಗೊತ್ತು? ಆ ನೀರಲ್ಲಿ ಉಪ್ಪಿದೆ ಅಂತಾ. ಹಾಗೇ ಕುಡಿದೆ ಉಪ್ಪಿನ ನೀರು ವಾಂತಿ ಬರೋ ಹಾಗೇ ಆಗ್ತಿತ್ತು. ಹೊರಗಡೆ ಬಂದು ವಾಂತಿ ಮಾಡ್ದೇ, ಅಲ್ಲಿದ್ದೋರೆಲ್ಲಾ ನನ್ನ ನೋಡಿ ನಕ್ಕಿದ್ದೇ ನಕ್ಕಿದ್ದು, ಕೊನೆಗೆ ಅಣ್ಣ “ನೋಡ್ಕೊಂಡು ನೀರು ಕುಡಿಬಾರ್ದೆನೊ, ಅಂತ ಸಮಾಧಾನ ಮಾಡಿದ” ಎಂದ.
ನಾನು “ಮುಂದೆ....” ಎಂದು ರಾಗ ಎಳೆದೆ.
“ಮುಂದೇನೋ! ಅನುನೇ ಊಟ ಬಡಿಸೋಕೆ ಬರೋಳು ನನ್ನನ್ನು ನೋಡಿ ಕಿರುನಗೆ ನಗೋಳು” ಎಂದ> ಮುಂದುವರೆದು ತಾನೇ “ಮಾರನೇ ದಿನ ಆ ಊರಿನಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಹೋಗಿದ್ದೆ ಕಣೊ, ಆಗ ಅಲ್ಲಿ ಅನುನು ಬಂದಿದ್ದಳು, ನನಗನಿಸಿತು ಮನಸ್ಸಿನಲ್ಲಿರುವ ಪ್ರೀತಿನಾ ಹೇಳೋಕೆ ಇದೆ ಸರಿಯಾದ ಸಮಯ ಅಂತಾ.
ನಾನು ಅನುನಾ ಕರೆದು “ನಿಮ್ಮನ್ನಾ ನಾನು ತುಂಬಾ ಇಷ್ಟಪಡ್ತೀದಿನಿ ಅಂತಾ ಹೇಳಿ ನನ್ನ ನಂಬರ ಕೊಟ್ಟೆ, ನಿಮ್ಮ ಉತ್ತರ ಏನು ಅಂತಾ ಹೇಳೋಕೆ ಹೇಳಿದೆ” ಎಂದ.
“ಹೌದಾ, ಅವಳು ಮತ್ತೇ ನಿನಗೆ ಫೋನ್ ಮಾಡಿದ್ಲಾ?” ಎಂದು ಕೇಳಿದೆ.
“ಮಾಡಿದ್ಲೂ, ಆದರೆ ಮಾಡಬಾರದ ಸಮಯದಲ್ಲಿ” ಎಂದ.
“ಅಂದರೆ?” ಎಂದು ಪ್ರಶ್ನೆ ಮಾಡಿದೆ.
“ಅಂದರೆ ನಮ್ಮ ಅಣ್ಣನ ಮದುವೆಯ ದಿನವೇ ರಾತ್ರಿ ನಮ್ಮ ಅಡಿಕೆ ತೋಟಕ್ಕೆ ಬೆಂಕಿ ಬಿದ್ದಿತ್ತು. ಅದನ್ನು ಆರಿಸೋ ಅವಸರದಲ್ಲಿ ಅಪ್ಪ ಬೆಂಕಿಯಲ್ಲಿ ಬಿದ್ದಿದ್ದರು. ಚಿಕ್ಕ ಪುಟ್ಟ ಗಾಯಗಳಾಗಿದ್ದ ಅವರನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ರು. ದೇವಸ್ಥಾನದಲ್ಲಿ ಅನುಗೆ ನನ್ನ ನಂಬರ್ ಕೊಟ್ಟಾಗ ಮನೆಯಿಂದ ಫೋನ್ ಬಂತು.
ನನಗೂ ಆವಾಗ್ಲೇ ವಿಷಯ ಗೊತ್ತಾಗಿದ್ದು, ಹೀಗಾಗಿ ನಾನು ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋದೆ. ಅಣ್ಣನಿಗೆ ಹೇಳೊದಕ್ಕೆ ಅನುಗೆ ತಿಳಿಸಿದೆ. ನಾನು ಆಸ್ಪತ್ರೆ ತಲುಪಿದಾಗ ಅಪ್ಪನ ನೋಡಿ ತುಂಬಾ ದು:ಖ ಆಯ್ತು ಕಣೋ.
ಆದರೆ ಡಾಕ್ಟ್ರು “ಏನು ಆಗಿಲ್ಲ ಅವರಿಗೆ. ಅವರು ಆರೋಗ್ಯವಾಗೇ ಇದಾರೆ” ಅಂದಾಗ ಮನಸ್ಸಿಗೆ ನೆಮ್ಮದಿ ಸಿಕ್ತು, ಅಷ್ಟೋತ್ತಿಗೆ ಅಣ್ಣ ನನಗೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಅವರು ಆರೋಗ್ಯವಾಗೇ ಇದಾರೆ. ನೀನೇನೂ ವಿಚಾರ ಮಾಡಬೇಡ ಎಂದು ತಿಳಿಸಿದೆ” ಎಂದ.
“ಆವಾಗ ಅನು ಫೋನ್ ಮಾಡಿದ್ಲಾ” ಎಂದು ಕೇಳಿದೆ.
“ಅಣ್ಣನ ಮದುವೆಯ ನಂತರ ಮನೆಯಲ್ಲಿ ಹಲವಾರು ವಿಘ್ನಗಳು ನಡೆದವು. ಅಂದರೆ ಮನೆಗೆ ಬೆಂಕಿ ಬಿಳೋದು, ನನಗೂ ಒಮ್ಮೆ ಅಪಘಾತವಾಗಿತ್ತು, ಹೀಗೆ ನಡೆದೇ ಇತ್ತು. ಮದುವೆಯಾದ ಒಂದು ತಿಂಗಳಿಗೆ ಅಣ್ಣ ಮತ್ತೇ ಮಿಲ್ಟ್ರಿಗೆ ಹೋದ. ಆದರೆ ವಿಧಿಯಾಟ ನೋಡು, ಅವನು ಹಾಗೇ ಹೋದವನು ಮತ್ತೇ ಜೀವಂತವಾಗಿ ಬರಲೇ ಇಲ್ಲ” ಎಂದ.
ನಾನು “ಅಂದರೆ ನಿಮ್ಮಣ್ಣ ತೀರಿದ್ದಾರಾ?” ಎಂದು ಕೇಳಿದೆ.
“ಹೌದು ಗಣ, ಅವರು ಹೋದಾಗ ಯುದ್ಧದಲ್ಲೇ ಗುಂಡಿಗೆ ಸಿಕ್ಕಿ ಸತ್ತರು” ಎಂದ.
ತಾನೇ ಮುಂದುವರೆದು “ಅಣ್ಣನ ಸಾವಿನ ಶೋಕ ಮನೆಯಲ್ಲಾ ಆವರಿಸಿತ್ತು. ಆಗಲೇ ಅನು ಫೋನ್ ಮಾಡಿದ್ದು, ನನಗೆ ಧೈರ್ಯ ಹೇಳೋಕೆ. ಅವತ್ತು ಅವಳು ನನಗೊಂದು ಮಾತು ಹೇಳಿದ್ಲೂ ಕಣೊ.
ಅದೆನೆಂದರೆ `ಜೀವನ ಅಂದರೆನೇ ಸಮಸ್ಯೆಗಳ ಸಾಗರ. ಅಲ್ಲಿ ನೋವು, ದು:ಖ, ಸಂತೋಷ, ಹಾರಾಟ, ಅರಚಾಟ, ಎಲ್ಲಾನೂ ಇರುತ್ತೇ. ಆ ಸಾಗರವನ್ನು ಯಾವತ್ತೂ ಖಾಲಿ ಮಾಡೋಕೆ ಆಗಲ್ಲಾ ಅಲ್ಲಿ ನಾವು ಈಜಲೇ ಬೇಕಾಗುತ್ತೇ, ನಿನ್ನ ಅಣ್ಣನಿಗೆ ಆ ದಡ ಸಿಕ್ಕಾಯ್ತೂ. ಅವರು ವೈರಿಗಳ ಗುಂಡಿಗೆ ಸಿಕ್ಕಿ ವೀರ ಸ್ವರ್ಗ ಸೇರಾಯ್ತು, ಆದರೆ ನಿನ್ನದು ಇನ್ನೂ ತುಂಬಾ ದೂರ ಇದೆ. ಹೀಗಾಗಿ ಈಜಾಡೋದು ನಿಲ್ಸೋಕೆ ಹೋಗ್ಬೇಡ, ಎಷ್ಟೇ ದು:ಖ ಆದ್ರೂ ತಡೆದು ಮುಂದೆ ನಡಿ ನಿನ್ನ ಪ್ರತೀ ಹೆಜ್ಜೆಯಲ್ಲೂ ನಾನಿರುತ್ತೇನೆ' ಎಂದು ಹೇಳಿದಳು ಗೊತ್ತಾ?” ಎಂದ.
“ಹೌದು ಅವರು ಹೇಳಿದ್ದು ನಿಜ. ಅದರಲ್ಲಿ ಅರ್ಥ ಇದೆ” ಎಂದೆ ನಾನು.
“ಆಮೇಲೆ, ಒಂದು ವಾರದ ನಂತರ ಫೋನ್ ಮಾಡಿ, ಅವಳು ನನ್ನನ್ನು ಪ್ರೀತ್ಸೋದಾಗಿ ಹೇಳಿದ್ಲು” ಎಂದ
ನಾನು “ಅವರು ಈಗ ಅವರು ಮದುವೆಗೆ ಬರೋಲ್ವಾ?” ಎಂದು ಕೇಳಿದೆ.
“ಇಲ್ಲ ಕಣೋ ಆವತ್ತೇ ಕೊನೆ, ಸುಮಾರು ಐದು ವರ್ಷ ಆಯ್ತು. ಅವಳು ಮತ್ತೇ ಫೋನ್ ಮಾಡ್ಲಿಲ್ಲ, ನಾನೂ ಮಾಡೋಕೆ ಹೋಗ್ಲಿಲ್ಲ” ಎಂದ
“ಅರೇ, ಯಾಕೋ ಏನಾಯ್ತೋ?” ಎಂದು ಕೇಳಿದೆ.
“ನನ್ನ ಅತ್ತಿಗೆ ಕಾಲ್ಗುಣ ಚೆನ್ನಾಗಿಲ್ಲ ಅಂತ, ಅವರಿಗೆ ನಮ್ಮ ಮನೆಯ ಹಿಂದಿನ ಕೊಣೆಯಲ್ಲಿ ಇಟ್ಟಿದಾರೆ. ಅವರೆಂದರೆ ಮನೆಯಲ್ಲಿರೊರೆಲ್ಲರಿಗೂ ಇಷ್ಟಾನೇ. ಆದರೆ ಅಪ್ಪನ ನಿರ್ಧಾರಕ್ಕೆ ಯಾರೂ ಎದುರು ಮಾತಾಡೋ ಹಾಗಿಲ್ಲ. ಹಾಗಂತ ಅವರಿಗೆ ಕಷ್ಟ ಕೊಟ್ಟಿಲ್ಲ, ಬೆಳಕಿರೋವಾಗ ಅವರು ಹೊರಗಡೆ ಎಲ್ಲೂ ಕಾಣಿಸಿಕೊಳ್ಳೊ ಹಾಗಿಲ್ಲ. ಅವರಿಗೆ ಊಟ, ತಿಂಡಿ ಎಲ್ಲಾ ಅವರಿರೋ ಕೋಣೆಗೆ ತಲುಪಿಸ್ತಾರೆ”ಎಂದ.
ನಾನು “ಯಾಕೋ ಹಾಗೆ?” ಎಂದು ಕೇಳಿದೆ.
“ನಮ್ಮ ತಂದೆ ಮನೇಲಿ ನಡಿತಿರೋ ಸಮಸ್ಯೆ ಬಗ್ಗೆ ಜ್ಯೋತಿಷಿಯವರನ್ನು ಕೇಳಿದಾಗ, ಅವರು ಇದಕ್ಕೆಲ್ಲಾ ಕಾರಣ ನಿಮ್ಮ ಸೊಸೆ ಎಂದರಂತೆ. ಹೀಗಾಗಿ ಅವತ್ತಿನಿಂದ ಇವತ್ತಿನವರೆಗೂ ಅವರ ಬಾಳು ಬೆಳಕಿಲ್ಲದೇ ಕತ್ತಲಾಗಿದೆ” ಎಂದ.
ನಾನು “ಹೌದಾ, ನಾನು ಅವರನ್ನು ನೋಡಿಯೇ ಇಲ್ವಲ್ಲಾ. ಬಹುಶಃ ಇಲ್ಲಿರೋ ಫೋಟೋ ಅವರದೇ ಅಂತಾ ಕಾಣ್ಸುತ್ತೆ” ಎಂದು ಅಡಗಿಸಿಟ್ಟಿರೋ ಫೋಟೋನಾ ತೋರಿಸಿದೆ.
ಅದನ್ನು ತೆಗೆದುಕೊಂಡು “ಹೌದು ಕಣೋ ಇದೆ, ಅವರ ಫೋಟೋ” ಎಂದ.
ನಾನು “ಮತ್ತೇ ಆಗ್ಲೇ ಇವರು ಸತ್ತು ಹೋಗಿದಾರೆ ಅಂದ್ಯಲ್ಲೋ” ಎಂದೆ.
“ಅವರು ಬದುಕಿದ್ರೂ, ಸತ್ತು ಹೋಗಿರೋ ಜೀವಾ ಕಣೋ” ಎನ್ನುತ್ತ ತನ್ನ ಕೈಲಿರೋ ಫೋಟೋನಾ ಹರಿದು ಹಾಕಿದ.
ನನಗೆ “ನಿದ್ದೆ ಬರ್ತಾ ಇದೆ ಮಲಗ್ತಿನಿ” ಎನ್ನುತ್ತಾ ಮಲಗಿಬಿಟ್ಟ.
ಆದರೆ ನನಗೆ, ಅವರ ಅತ್ತಿಗೆಯ ಪರಿಸ್ಥಿತಿಯ ಬಗ್ಗೆ ನೆನೆದು ತುಂಬಾ ಬೇಸರ ಆಯಿತು. ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂದು ಹಿರಿಯರೇ ಹೇಳಿರೋವಾಗ, ಆಗಿದ್ದ ಕೆಟ್ಟದ್ದಕ್ಕೆಲ್ಲಾ ಅವರನ್ನೇ ಹೊಣೆಗಾರರನ್ನಾಗಿ ಮಾಡಿದರೇ ಅವರು ಮಾಡೋದಾದ್ರೂ ಏನು? ಅನ್ನೋ ಕೆಲವು ಪ್ರಶ್ನೆಗಳು ನನ್ನ ತಲೆಯಲ್ಲಿ ಓಡಾಡತೊಡಗಿದವು.
ಮಾರನೇಯ ದಿನ ಊರಿನಿಂದ ಶೇಖರನ ಸೋದರತ್ತೇ ಚೆನ್ನತ್ತೇ, ವಿಶ್ವ ಮತ್ತು ಸ್ವಪ್ನ ಬಂದರು. ಅವರ ಪರಿಚಯವೂ ನನಗಾಯಿತು.
ಸ್ವಪ್ನ ಹಾಲುಗಲ್ಲದ ಹುಡುಗಿ, ಮಲ್ಲಿಗೆ ಹೂವು ತನ್ನ ಮುಡಿಗೆ ಮುಡಿದುಕೊಂಡು, ಸದಾ ಪಟ ಪಟ ಕಣ್ಣುಗಳನ್ನು ಬದಿಡುಕೊಳ್ಳುತ್ತಾ, ಚಟಪಟಣೆ ಅರಳು ಹುರಿದಂತೆ ಮಾತನಾಡುವ ಹುಡುಗಿ. ಅದ್ಯಾಕೊ ಗೊತ್ತಿಲ್ಲ, ಅವಳನ್ನುಮೊದಲ ಬಾರಿಗೆ ನೋಡಿದಾಗಲೇ ಅದೇನೊ ಒಂದು ವಿಶೇಷವಾದ ಅನುಭವ ನನ್ನಲ್ಲಿ.
ಮರುದಿನವೇ ಮದುವೆ ಇರುವುದರಿಂದ ರಾತ್ರಿಯ ಕೆಲಸ ತುಂಬಾ ಜೋರಾಗಿಯೇ ಇತ್ತು. ಅದು ಅಲ್ಲದೇ ಮನೆಯ ಮುಂದೆಯೇ ಮದುವೆ ಇರುವುದರಿಂದ ರಾತ್ರಿ ಸಾಂಪ್ರದಾಯಿಕ ಮದುವೆ ಕೆಲಸಗಳು ನಡೆದಿದ್ದರೆ ನಾವು ಸ್ಟೇಜ್ ಡೆಕಾರೆಶನ್ ಅದು ಇದೂ ಅಂತಾ ಎಲ್ಲರೂ ಎಚ್ಚರವಾಗಿಯೇ ಇದ್ದೆವು. ಆಗಲೇ ಸ್ವಪ್ನ ಮತ್ತು ನನ್ನ ಪರಿಚಯ ಸ್ವಲ್ಪ ಗಟ್ಟಿಯಾಯಿತು.
ಮದುವೆಯ ದಿನ ಎಲ್ಲಿಲ್ಲದ ಕೆಲಸ ನಮಗೆ. ಅದರಲ್ಲೂ ಬೇರೆ, ಇಡೀ ಊರಿಗೆ ದೊಡ್ಡ ಮನೆತನವಾಗಿದ್ದರಿಂದ ಇಡೀ ಊರಿಗೆ ಊರೇ ಮದುವೆಗೆ ಹರಿದು ಬಂದಿತ್ತು. ಸಾಕಷ್ಟು ಗದ್ದಲ, ಅಬ್ಬಬ್ಬಾ ಎನ್ನುವಷ್ಟು ಜನ ಸೇರಿದ್ದರು, ಜೊತೆಗೆ ಮಧ್ಯಾಹ್ನದ ಮಡಿಕೇರಿಯ ಊಟವಂತೂ ಅತ್ಯದ್ಭುತವಾಗಿತ್ತು, ಊಟವಾದ ಮೇಲೆ ಶೇಖರ ನನ್ನ ಕೈಗೆ ಸಿಗಲಿಲ್ಲ. ಹೀಗಾಗಿ ಅವರ ಮನೆಯ ಮೇಲಿನ ಶೇಖರನ ಕೊಠಡಿಗೆ ಹೋಗಿ ಮಲಗಿಬಿಟ್ಟೆ.
ಸಂಜೆ ಶೇಖರ ಬಂದು ಎಬ್ಬಿಸಿದಾಗಲೇ ನನಗೆ ಎಚ್ಚರವಾಗಿದ್ದು “ಯಾಕೊ?, ಹುಷಾರಾಗಿದ್ದಿಯಾ ತಾನೇ?” ಎಂದ ಶೇಖರ.
“ಏನ್ನಿಲ್ಲ ಹುಷಾರಾಗಿದ್ದಿನಿ, ಮಧ್ಯಾಹ್ನದ ಊಟ ಸ್ವಲ್ಪ ಜಾಸ್ತಿಯಾಯ್ತು ಅದಕ್ಕೆ ನಿದ್ದೆ ಬಂತು” ಎಂದೆ.
ಅವನು ನಗುತ್ತ “ಸರಿ ಬಾ ಎಲ್ಲರೂ ಕೆಳಗೆ ಸೇರಿದ್ದಾರೆ” ಎಂದ.
ನಾನೂ ಅವನೊಡನೆ ಕೆಳಗೆ ನಡೆದೆ. ಅಲ್ಲಿ ಅವನ ಇಡೀ ಕುಟುಂಬವೇ ಮದುವೆ ಮುಗಿಸಿದ ಖುಷಿಯಲ್ಲಿ ಕುಳಿತಿದ್ದರು. ನಾನು ಅವರೊಡನೆ ಕುಳಿತು ಕಾಫಿ ಕುಡಿಯತೊಡಗಿದೆ.
ಶೇಖರನ ತಾಯಿ ಶಾರದಮ್ಮ “ಹೇಗಿತ್ತಪ್ಪ ಮದುವೆ?” ಎಂದು ಕೇಳಿದರು.
ನಾನು “ಅಮ್ಮ, ನಮ್ಮ ಊರಿನ ಜಾತ್ರೆಯಲ್ಲಿ ಮಾತ್ರ ಇಷ್ಟು ಜನಾನ ನೋಡಿದ್ದು. ಬಿಟ್ರೇ ಇಲ್ಲೇ ನೋಡಿದೆ” ಎಂದೆ.
ಎಲ್ಲರೂ ನಕ್ಕರು. ಅಷ್ಟೋತ್ತಿಗೆ ಸ್ವಪ್ನನೂ ಅಲ್ಲಿಗೆ ಬಂದಳು. ನಾನು ಮುಂದುವರೆದು “ಇನ್ನೇನೂ ಅಮ್ಮ, ಅಕ್ಕನ ಮದುವೆಯೂ ಆಯಿತು, ಇನ್ನೂ ಉಳಿದಿರೋದು ಶೇಖರನ ಮದುವೆ ಮಾತ್ರ” ಎಂದೆ.
ಅದಕ್ಕೆ ಅಂಕಲ್ “ಅವನಿಗೆ ಮೊದಲೇ ಕೇಳಿದ್ದೆವಪ್ಪಾ, ಅವನು ಹೂಂ ಅಂದಿದ್ದರೆ ಇವತ್ತಿಗೆ ಅವನ ಮದುವೆನೂ ಮುಗಿಯೋದು” ಎಂದರು.
ನಾನು “ಹೌದೇನೊ ಶೇಖರ, ಮತ್ತೇ ಯಾಕೋ ಆಗ್ಲಿಲ್ಲ?” ಎಂದೆ.
ಅಷ್ಟರಲ್ಲಿ ಚೆನ್ನತ್ತೇ “ಅವನಿಗೆ ನನ್ನ ಮಗಳು ಸ್ವಪ್ನ, ಹಿಡಿಸಲಿಲ್ಲಾ ಅಂತಾ ಕಾಣ್ಸುತ್ತೆ” ಎಂದರು.
ಶೇಖರ “ಹಾಗೇನೂ ಇಲ್ಲಾ ಅತ್ತೇ, ನನಗೆ ಈಗಲೇ ಮದುವೆ ಇಷ್ಟ ಇಲ್ಲ” ಎಂದ.
ಸ್ವಪ್ನ “ಯಾಕೆ ಮದುವೆ ಆಗೋದು ಇಷ್ಟ ಇಲ್ಲ? ಕೇಳಿ ಗಣ” ಎಂದು ನನ್ನತ್ತ ನೋಡಿದಳು.
ನಾನು “ಏನಿಲ್ಲಾ ಅವನಿಗೇ ಅರೇಂಜ್ಡ್ ಮಾರೇಜ್ ಇಷ್ಟ ಇಲ್ವಂತೆ, ಲವ್ ಮ್ಯಾರೇಜ್ ಇಷ್ಟ ಅಂತೆ” ಎಂದು ಶೇಖರನ ಮುಖ ನೋಡಿದೆ.
ಆಗ ಸ್ವಪ್ನ “ಓಹ್.... ಇವನು ಯಾರನ್ನಾದ್ರೂ ಲವ್ ಮಾಡಿದಾನಾ?” ಎಂದು ಕೇಳಿದಳು.
ಶೇಖರ “ಅದೆಲ್ಲಾ ನಿನಗ್ಯಾಕೆ?” ಎನ್ನುತ್ತ ಕೋಪದಿಂದ ಹೊರನಡೆದ.
ಆಗ ಸ್ವಪ್ನ “ಅಮ್ಮ ಇವತ್ತು ದೇವಸ್ಥಾನದಲ್ಲಿ ದೀಪಾರ್ಚನೆ ಇರುತ್ತೇ ಅಲ್ವಾ ಬಾ ಹೋಗೋಣ” ಎಂದಳು.
ಚೆನ್ನತ್ತೆ “ಇಲ್ಲ ತುಂಬಾ ಹೊತ್ತಾಗಿದೆ, ಯಾರನ್ನಾದ್ರೂ ಕರೆದುಕೊಂಡು ಬೈಕ್ ಮೇಲೆ ಹೋಗು” ಎಂದರು.
ಅಷ್ಟರಲ್ಲಿ ಅಂಕಲ್ “ಏಯ್ ಶೇಖರ, ಸ್ವಪ್ನಳನ್ನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬಾರೊ” ಎಂದರು.
ಆ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ.
ನಾನು “ಅಂಕಲ್ ಅವನು ಹೊರಗಿರಬೇಕು. ನಾನೇ ಕರಿತಿನಿ ಇರಿ” ಎನ್ನುತ್ತ ಹೊರಗಡೆ ಬಂದೆ.
ಅಲ್ಲಿ ಶೇಖರ ಏನೋ ಯೋಚನೆ ಮಾಡುತ್ತ ಮಲಗಿದ್ದ.
ನಾನು “ಲೋ, ಶೇಖರ, ನಿನ್ನತ್ತೇ ಮಗಳನ್ನಾ ದೇವಸ್ಥಾನಕ್ಕೆ ಕರೆದುಕೊಂಡು ಹೋಗ್ಬೇಕಂತೆ ನೋಡೊ” ಎಂದೆ ನಗುತ್ತಾ.
“ಮಗನೇ, ನಿನಗೆಲ್ಲಾ ಗೊತ್ತಿದ್ರೂ ಮತ್ತೆ ನನ್ನಾ ರೇಗಸ್ತಿಯೇನೋ” ಎನ್ನುತ್ತ ಎದ್ದು ಕುಳಿತ.
ಅಷ್ಟರಲ್ಲಿ ಸ್ವಪ್ನ ಅಲ್ಲಿಗೆ ಬಂದಳು. ಶೇಖರ ಅವಳನ್ನು ನೋಡಿ ಮತ್ತೆ ಮಲಗಿದ.
ಸ್ವಪ್ನ “ಬಾರೊ ದೇವಸ್ಥಾನಕ್ಕೆ ಹೋಗೋಣ” ಎಂದಳು.
ಶೇಖರ “ಏಯ್ ಹೋಗೆ..... ನನಗೆ ಕಾಲು ನೋವು” ಎನ್ನುತ್ತ ಆ ಕಡೆ ಮುಖ ತಿರುವಿದ.
ಸ್ವಪ್ನ “ಓಕೆ, ನಿನ್ನ ಗೆಳೆಯನ್ನನ್ನಾದರೂ ಕಳುಹಿಸಿ ಕೊಡ್ತಿಯಾ?” ಎಂದು ಕೇಳಿದಳು.
ಅವನು ಕೂಡಲೇ ಎದ್ದು ಕುಳಿತು “ಏಯ್ ಹೋಗೋ........ ಇದೊಳ್ಳೇ ಚಾನ್ಸು ಬಿಡಬೇಡ” ಎಂದ.
ನಾನು “ಏನಂದೇ?” ಎಂದೆ ಸಿಟ್ಟನಿಂದ.
ಶೇಖರ “ನನಗೆ ಸಹಾಯ ಮಾಡೋ ಗೆಳೆಯ......... ಪ್ಲೀಸ್”ಎಂದ.
ನಾನು “ಇಲ್ಲ ಕಣೋ, ನಾನು ದೇವಸ್ಥಾನಾನೇ ನೋಡಿಲ್ಲ ಹೆಂಗೊ ಹೋಗಲಿ. ಅದು ಅಲ್ಲದೇ ನಾನು ಹುಡುಗಿ ಜೊತೆ ಹೋಗೋದಾ! ಸಾಧ್ಯಾನೇ ಇಲ್ಲ” ಎಂದೆ.
ಕೊನೆಗೆ ಸ್ವಪ್ನ “ಪ್ಲಿಸ್ ಬನ್ನಿ. ಇಂದು ತುಂಬಾ ವಿಷೇಶವಾದ ದಿನ ನದಿಗೆ ದೀಪಾರ್ಚನೆ ನಡೆಯುತ್ತೇ” ಎಂದಳು.
ನಾನು ಅವಳ ಆ ಮುದ್ದು ಮುಖದ ಕೋರಿಕೆಗೆ ಸೋತು, “ಆಯಿತು” ಎನ್ನುತ್ತ ನಡೆದೆ.
ಇಡೀ ರಾತ್ರಿ ದೀಪಾರ್ಚನೆ ನೋಡಿದೆವು. ಅದೊಂದು ನಿಜವಾಗಿಯೂ ವಿಷೇಶವಾದಂತಹ ದಿನವಾಗಿತ್ತು. ಎಲ್ಲರೂ ನದಿಯಲ್ಲಿ ದೀಪ ಬಿಡುವ ಆ ಕ್ಷಣ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಂತೂ ಸುಳ್ಳಲ್ಲ.
ಆ ರಾತ್ರಿ ದೇವರ ದರ್ಶನ ಮುಗಿಸಿಕೊಂಡು ಬರೋವಾಗ ತುಂಬಾ ಹೊತ್ತಾಗಿತ್ತು. ಮಳೆ ಬೇರೆ ಒಂದೆ ಸಮನೆ ಸುರಿತಾ ಇತ್ತು. ಮನೆಗೆ ಬಂದಾಗ ಎಲ್ಲರೂ ಮಲಗಿದ್ದರು. ನಾನು ಸ್ವಪ್ನ ಇಬ್ಬರೇ ಊಟ ಮಾಡಿದೆವು. ನಾನು ಎಂದಿನಂತೆ ಮಲಗಲು ಕೊಣೆಗೆ ಮರಳಿದೆ.
ಅಲ್ಲಿ ಶೇಖರ “ಹೇಗಿತ್ತಪ್ಪ ದೇವರ ದರ್ಶನ?' ಎಂದ.
“ಚೆನ್ನಾಗಿತ್ತು” ಎಂದೆ ತಲೆಯಲ್ಲಾಡಿಸುತ್ತ.
“ಬರೀ ದೇವರನ್ನಾ ಮಾತ್ರ ನೋಡಿದ್ಯಾ ಇಲ್ಲಾ...........” ಎಂದು ರಾಗ ಎಳೆದ.
ನಾನು “ಏನೋ ಅದು, ನಿನ್ನ ತಲೆಯಯಲ್ಲಿರೋದು ಏನದು ಅಂತಾ ಹೇಳಿಬಿಡು” ಎಂದೆ.
ಶೇಖರ “ಏನಿಲ್ಲಾ, ಸ್ವಪ್ನ ಜೊತೆ ಹೋಗಿದ್ದೆಯಲ್ಲಾ ಅದಕ್ಕೆ ಕೇಳಿದೆ” ಎಂದ.
ಅಷ್ಟರಲ್ಲಿ ನನ್ನ ಮೊಬೈಲ್ನಲ್ಲಿ ಸಂದೇಶವೊಂದು ಬಂದಿತ್ತು. ಅದನ್ನು ಶೇಖರನೇ ತೆಗೆದು ನೋಡಿ “ಯಾರದೋ ಇದು? ಗುಡ್ನೈಟ್ ಅಂತ ಮೇಸೇಜ್ ಕಳಿಸಿದ್ದಾರೆ” ಎಂದ.
ನಾನು “ಯಾವ ನಂಬರ್ ನೋಡು” ಎಂದೆ.
ಆಗ ನಾನು ನನ್ನ ಫೋನ್ನಲ್ಲಿಯ ಮೇಸೇಜ್ ಬಂದ ನಂಬರನಿಂದ ಅವನ ಫೋನ್ನಲ್ಲಿ ಡೈಲ್ ಮಾಡಿದೆ. ಆದರೆ ಆ ನಂಬರ್ ಶೇಖರನ ಫೋನ್ನಲ್ಲಿ ಸೆವ್ ಇತ್ತು. ಆದರೆ ಅದರ ಹೆಸರು ಚೋಟಿ ಅಂತ ಇತ್ತು”.
ನಾನು “ಯಾರೋ ಇದು ಚೋಟಿ, ಆ ನಂಬರನಾ ಡೈಲ್ ಮಾಡಿದ್ರೆ ಚೋಟಿ ಅಂತಾ ಬರ್ತೀದೆ” ಎಂದು ನಕ್ಕೆ.
ಅವನು “ಹೌದಾ, ಅದು ಸ್ವಪ್ನಳ ನಂಬರ್ ಕಣೋ, ಅವಳು ನಮ್ಮ ಅತ್ತೇಯ ಚಿಕ್ಕ ಮಗಳಲ್ವಾ ಅದಕ್ಕೆ ಚೋಟಿ ಅಂತಾ ಕರಿತಿವಿ, ಅದನ್ನೇ ಸೇವ್ ಮಾಡಿದಿನಿ” ಎಂದ.
ಮುಂದುವರೆದು “ನೀನು ಯಾವಾಗ ನಿನ್ನ ನಂಬರ್ನಾ ಅವಳಿಗೆ ಕೊಟ್ಟೆ?” ಎಂದ.
ನಾನು “ಹೇ, ನಾನು ಕೊಟ್ಟಲ್ಲ, ಬಹುಶಃ ದೇವಸ್ಥಾನದಲ್ಲಿ ಫೋನ್ ಮಾಡ್ತೀನಿ ಅಂತಾ ನನ್ನ ಫೋನ್ ತಗೊಂಡಿದ್ಲೂ. ಆಗ ಎನಾದ್ರೂ ತಗೊಂಡಿರಬಹುದು” ಎಂದೆ.
“ಎನಪ್ಪಾ ಗಣ, ಅಂತೂ ನೀನು ಬ್ಯೂಸಿಯಾಗಿಬಿಟ್ಟೆ ಬಿಡೋ”ಎಂದ ಶೇಖರ.
ನಾನು “ಲೋ ಮಗನೇ, ಅವಳು ನಿನ್ನ ಅತ್ತೇ ಮಗಳು ಕನೊ” ಎಂದೆ.
ಶೇಖರ “ಗೆಳೆಯ ಅಂದ್ರೆ ನೀನೇ ಕಣೋ, ನಾನು ಅನುನಾ ಲವ್ ಮಾಡ್ಬೇಕು ಅಂತಾ, ನನ್ನ ಲವ್ಗೆ ಅಡ್ಡ ಬರೋ ಹುಡುಗಿಗೆ ನೀನು ಕಾಳಾಕ್ದೆ ಅಲ್ವಾ” ಎಂದ.
ನಾನು “ಈ ವಿಷಯ ಬೇರೆಯೆಲ್ಲೋ ಹೊರಟಿದೆ” ಎಂದೆ.
ಅಷ್ಟರಲ್ಲಿ ಮತ್ತೊಂದು ಮೇಸೇಜ್ ಬಂತು. ಅದೇ ನಂಬರ್ನಿಂದ, ವಿಷಯ ಎಲ್ಲೂ ಹೊರಟಿಲ್ಲ, ಇಲ್ಲೇ ಬಾಗಿಲ ಬಳಿನೇ ಇದೆ ಎಂದು ಬರೆದಿತ್ತು.
ಕೂಡಲೇ ನಾನು ಎದ್ದು ಬಾಗಿಲು ತೆಗೆದು ನೋಡಿದೆ ಸ್ವಪ್ನ ಅಲ್ಲೇ ನಿಂತಿದ್ಲೂ “ಸೊಳ್ಳೆ ಬತ್ತಿ ಕೊಟ್ಟು ಬಾ ಅಂತ ಅತ್ತೇ ಕಳಿಸಿದ್ರು” ಎಂದಳು.
ನಾನು “ಅತ್ತೇ ಈಗ ಎದ್ದಿದ್ದಾರಾ?” ಎಂದೆ.
“ಏನ್ರೀ ಗುಡ್ನೈಟ್ ಅಂತಾ ಒಂದು ಮೆಸೇಜ್ ವಾಪಸ್ ಕಳಿಸೋಕೆ ಬರಲ್ವಾ ನಿಮಗೆ. ಅದನ್ನಾ ಹೇಳೋಕೆ ಕೆಳಗಿನಿಂದಾ ಮೇಲೆ ಹತ್ತಿ ಬರಬೇಕಾ?” ಎಂದಳು ಸ್ವಪ್ನ.
ನಾನು “ವಾಪಸ್ ಕಳಿಸ್ತಿದ್ದೆ. ಆದರೆ ಒಂದು ಮೆಸೆಜ್ಗೆ ಐವತ್ತು ಪೈಸೆ ಚಾರ್ಜ ಆಗುತ್ತೇ ಗೊತ್ತಾ” ಎಂದೆ.
ಅವಳು “ಕಂಜೂಸು” ಎಂದು ಗುನುಗುತ್ತಾ ಸೊಳ್ಳೆಬತ್ತಿ ಕೈಗಿಟ್ಟು ಹೋದಳು.
ಆ ಸೊಳ್ಳೆಬತ್ತಿ ಹತ್ತಿಸಿ ಮಂಚದ ಕೆಳಗೆ ಇಟ್ಟೆ, ಮೇಲೆ ಮಲಗಿದ್ದ ಶೇಖರ “ಏನಪ್ಪಾ ಕಂದಾ, ತುಂಬಾ ಬ್ಯೂಸಿ ಆಗೋ ಲಕ್ಷಣ ಬಹಳ ಇದೆ. ಹುಷಾರು”ಎಂದ.
ನಾನು “ಮಲಗೊಲೇ.....” ಎನ್ನುತ್ತ ನಿದ್ದೆಗೆ ಜಾರಿದ್ದೆ.
ಮಾರನೇಯ ದಿನ ಎಲ್ಲರೂ ಬೇಗ ಎದ್ದು ರೆಡಿಯಾಗಿ ವಧು-ವರರ ಸಹಿತ ದೇವರಿಗೆ ಹೋಗೊ ಕಾರ್ಯಕ್ರಮ. ಬೆಳಗ್ಗೆ ಬೇಗ ಎದ್ದು ರೆಡಿಯಾಗಿದ್ದೆ. ನನ್ನ ಕ್ಯಾಮೆರದಲ್ಲಿ ಸೆರೆಹಿಡಿದ್ದ ಫೋಟೋಗಳನ್ನು ಲ್ಯಾಪಟಾಪ್ಗೆ ಇಳಿಸುತ್ತಿದ್ದೆ. ಅಷ್ಟರಲ್ಲಿ ಶೇಖರ “ಬೇಗ ಬಾರೊ, ಎಲ್ಲರೂ ನಿನಗಾಗಿ ಕಾಯ್ತಾ ಇದಾರೆ” ಎನ್ನುತ್ತ ಮೇಲೆ ಬಂದ.
ನಾನು ಅವಸರದಲ್ಲಿಯೇ ಅಲ್ಲಿಂದ ಹೊರಟೆ. ಮದುವೆಯ ಮನೆಯಾಗಿದ್ದರಿಂದ ಬೀಗರು, ನೆಂಟರು,ಸಂಬಂಧಿಕರು. ಹೀಗೆ ಸುಮಾರು ಜನ ಆದರೆ ಮದುವೆಯ ಕೆಲ ಕಾರ್ಯಗಳು ಬಾಕಿ ಇರುವುದರಿಂದ ನಾವು ಸುಮಾರು 15 ರಿಂದ 18 ಜನ ಮಾತ್ರ ಹೊರಟೆವು.
ಶೇಖರ ಮತ್ತು ನಾನು ಹಿಂದಿನ ಗಾಡಿಯಲ್ಲಿ ಕೊನೆಯಲ್ಲಿ ಕುಳಿತೆವು. ನಮ್ಮ ಎದುರಿನಲ್ಲಿ ಸ್ವಪ್ನ ಮತ್ತು ಶೇಖರನ ಸಂಬಂಧಿರೊಬ್ಬರು ಕುಳಿತರು. ವಯಸ್ಸಾದ ಹಿರಿಯರೆಲ್ಲಾ ಒಂದು ಗಾಡಿಯಲ್ಲಿ ವಧು-ವರರ ಜೊತೆಯಲ್ಲಿ ಕುಳಿತಿದ್ದರು. ನಮ್ಮ ಜೊತೆ ಚಿಕ್ಕ ಮಕ್ಕಳು, ಶೇಖರನ ಅಣ್ಣ-ಅತ್ತಿಗೆಯರು ಕುಳಿತಿದ್ದರು. ಸುಮಾರು 5 ರಿಂದ 6 ಘಂಟೆಗಳ ಪ್ರಯಾಣ ಅದಾಗಿತ್ತು.
ದಾರಿಯಲ್ಲಿ ಶೇಖರ ಸ್ವಪ್ನಳ ಬಗ್ಗೆ ಹಲವಾರು ಬಾರಿ ಮಾತಿನಲ್ಲಿ ಕಾಲೆಳೆದ. ಆದರೆ ಸ್ವಪ್ನ ನಕ್ಕು ಸುಮ್ಮನಾಗುತ್ತಿದ್ದಳು. ಹೀಗೆ ನಾವು ಮಾತನಾಡುತ್ತ ದೇವಸ್ಥಾನ ತಲುಪುವುದರಲ್ಲಿ ಮಧ್ಯಾಹ್ನ ಸುಮಾರು ಮೂರು ಘಂಟೆ ಆಗಿರಬೇಕು.
ಆ ದೇವಸ್ಥಾನವಂತೂ ಅತ್ಯದ್ಭುತವಾಗಿತ್ತು. ವಿಶಾಲವಾದ ಹೊರಾಂಗಣ ಹೊಂದಿರುವ ಆ ದೇಗುಲ ಬೆಟ್ಟದ ತುದಿಯಲ್ಲಿದೆ. ಮೋಡಗಳೇ ನಮ್ಮ ಕಾಲಿನಡಿಯಲ್ಲಿರುತ್ತವೆ. ಅಂತಹ ಎತ್ತರದ ಪ್ರದೇಶ ಅದಾಗಿತ್ತು. ದೇವರ ದರ್ಶನದ ನಂತರ ನಮ್ಮ ಊಟವೂ ಅಲ್ಲೇ ಆಯಿತು.
ಆ ನಂತರದ ದೇವಸ್ಥಾನದ ಹಲವಾರು ಫೋಟೋಗಳನ್ನು ತೆಗೆದೆ. ಅಲ್ಲಿಯ ಪ್ರಕೃತಿಯ ಸೌಂದರ್ಯವಂತೂ ವರ್ಣಿಸಲಸಾಧ್ಯವಾದುದು. ಹೀಗಾಗಿ ಆ ಜಾಗದ ಎಲ್ಲ ಫೋಟೋಗಳನ್ನು ಕ್ಲಕ್ಕಿಸಿದೆ. ಅಲ್ಲಿಂದ ಹಿಂದಿರುಗಲು ಹಿರಿಯರು ಆದೇಶಿಸಿದರು. ಅವರ ಆದೇಶದಂತೆಯೇ ನಾವು ಮೊದಲಿನ ಹಾಗೇಯೇ ಎಲ್ಲರೂ ಗಾಡಿಯಲ್ಲಿ ತಮ್ಮ ತಮ್ಮ ಸ್ಥಾನದಲ್ಲಿ ಕುಳಿತುಕೊಂಡೆವು.
ಆದರೆ ಈ ಬಾರಿ ಸ್ವಪ್ನಳ ಪಕ್ಕದಲ್ಲಿದ್ದ ವ್ಯಕ್ತಿ ಹಿರಿಯರು ಬರುತ್ತಿದ್ದ ಗಾಡಿಯಲ್ಲಿ ಹೋದರು. ಆ ಜಾಗದಲ್ಲಿ ಶೇಖರನ ಚಿಕ್ಕಪ್ಪನ ಮಗ ಹರೀಶ ಬಂದ. ಅವನು ಇನ್ನೂ ಕೇವಲ ನಾಲ್ಕು ವರ್ಷದ ಹುಡುಗ.
ಹೊರಗಡೆ ಜೋರಾಗಿ ಮಳೆ ಬರುತ್ತಿದ್ದರೆ ಗಾಡಿಯಲ್ಲಿ ಹಾಡುಗಳ ಸುರಿಮಳೆ ಸುರಿಯುತ್ತಿತ್ತು. ಹಾಗೇ ದಾರಿಯಲ್ಲಿ ಒಂದು ಕಡೆ ಸಣ್ಣ ಹೋಟೆಲ್ ಒಂದು ಕಾಣಿಸಿತು. ಅಲ್ಲಿಯೇ ಕಾಫಿ ಕುಡಿದು ಮತ್ತೇ ನಮ್ಮ ಪ್ರಯಾಣ ಮುಂದುವರೆಸಿದೆವು.
ಆದರೆ ಈ ಬಾರಿ ಗಾಡಿ ನಿಶ್ಯಬ್ಧವಾಗಿತ್ತು. ಎಲ್ಲರು ನಿದ್ದೆಗೆ ಜಾರಿದ್ದರು. ಡ್ರೈವರ್ ಗಾಡಿಯಲ್ಲಿ ಲೈಟ್ ಹಾಕಿದ್ದರೂ ಕೂಡ, ಅದು ಮಂದವಾಗಿ ಕಾಣಿಸುತ್ತಿತ್ತು. ಅಸ್ಪಷ್ಟವಾಗಿ ಮುಖಗಳು ಗೋಚರಿಸುತ್ತಿದ್ದರೂ ಇದು ಇವರೇ ಎಂದು ಹೇಳಬಹುದಿತ್ತು.
ಶೇಖರ “ನಿನಗೆ ನಿದ್ದೆ ಬರ್ತಾ ಇದೆ ಎನೋ?” ಎಂದು ಕೇಳಿದೆ.
ನಾನು “ಇಲ್ಲಪ್ಪ, ನೀನು ಮಲಗು” ಎಂದೆ.
“ನಿನಗ್ಯಾಕೋ ನಿದ್ದೆ ಬರುತ್ತೇ?. ಕನಸಲ್ಲಿ ಕಾಣೋರು, ಎದುರುಗಡೆಯಲ್ಲಿಯೇ ಕಾಣ್ತಾ ಇದಾರಲ್ಲಾ” ಎಂದ.
ನಾನು ನಕ್ಕು ಸುಮ್ಮನಾದೆ, ಸ್ವಪ್ನ ಅವಳ ಪಕ್ಕದಲ್ಲಿ ಕುಳಿತ್ತಿದ್ದ ಹರೀಶನನ್ನು ಮಲಗಿಸುತ್ತ ನಕ್ಕಳು.
ಶೇಖರ “ಸ್ವಲ್ಪ ಜರಗಪ್ಪ” ಎನ್ನುತ್ತ ನನ್ನ ತೊಡೆಯ ಮೇಲೆ ತಲೆಯಿಟ್ಟು ನಿದ್ರೆ ಆರಂಭಿಸಿದ.
ಆದರೆ ಶೇಖರ ಹೇಳಿದ್ದು ಸರಿನೋ ತಪ್ಪೊ ಗೊತ್ತಾಗಲಿಲ್ಲ. ಆದರೆ ನಿದ್ರೆ ಮಾತ್ರ ಬರಲಿಲ್ಲ. ಸ್ವಪ್ನನೂ ನಿದ್ರಿಸಲಿಲ್ಲ. ಆ ಮಂದ ಬೆಳಕಿನಲ್ಲಿ ಅವಳ ಕಣ್ಣುಗಳನ್ನೇ ನೋಡುತ್ತಾ ಕಾಲ ಕಳೆದೆ ನಾನು. ಅಂತೂ ಇಂತೂ ಹೇಗೊ ಮನೆ ತಲುಪಿದೆವು. ನಿದ್ದೆಯ ಗುಂಗಿನಲ್ಲಿಯೇ ಇದ್ದ ಎಲ್ಲರು ಮಂದವಾಗಿ ಮಾತನಾಡುತ್ತ ತಮ್ಮ ತಮ್ಮ ಹಾಸಿಗೆಯ ಮೇಲೆ ಹೊರಳಿದರು. ನಾನು ಶೇಖರ ಮೇಲಿನ ಕೋಣೆಗೆ ಹೋಗಿ ಮಲಗಿದೆವು.
ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದ ಶಬ್ಧವಾಯಿತು. ನಿದ್ದೆಯಲ್ಲಿದ್ದ ಶೇಖರನಿಗೆ ಅದು ಗೊತ್ತಾಗಲಿಲ್ಲ. ನಾನೇ ಹೋಗಿ ಬಾಗಿಲು ತೆಗೆದೆ. ಅಲ್ಲಿ ಸ್ವಪ್ನ ಸೊಳ್ಳೆ ಬತ್ತಿ ಹಿಡಿದು ನಿಂತಿದ್ದಳು.
“ನಿನ್ನ ಹತ್ತಿರ ಒಂದು ಸಹಾಯ ಕೇಳ್ತಿನಿ, ಮಾಡ್ತಿಯಾ ಸ್ವಪ್ನ?” ಎಂದೆ.
ಸ್ವಪ್ನ “ಏನದು? ಖಂಡಿತಾ ಮಾಡ್ತೀನಿ” ಎಂದಳು.
ಅವಳನ್ನು ಕರೆದುಕೊಂಡು ಶೇಖರನ ಅತ್ತಿಗೆ ಆರತಿಯವರಲ್ಲಿಗೆ ಹೋದೆ.
ಸ್ವಪ್ನ ಬಾಗಿಲು ತೆರೆಯುತ್ತಿದ್ದಂತೆ ಆರತಿ “ಯಾರದು?” ಎಂದರು.
ಸ್ವಪ್ನ “ನಾನೇ ಅಕ್ಕ, ಸ್ವಪ್ನ” ಎನ್ನುತ್ತ ಒಳನಡೆದಳು.
ಆ ಕತ್ತಲೆಯ ಕೋಣೆಯಲ್ಲಿ ಸಣ್ಣದೊಂದು ಲೈಟನ್ನು ಉರಿಸಿ ಅಲ್ಲಿರುವ ಪಾರಿವಾಳಗಳನ್ನೇ ನೋಡುತ್ತಾ ಕುಳಿತುಕೊಂಡಿದ್ದರು ಅವರು. ನೀಲಿ ಕೆಂಪು ಬಣ್ಣದ ಸೀರೆ, ಮುಡಿಯಲ್ಲಿ ೊಂದಷ್ಟು ಮಲ್ಲಿಗೆ ಹೂಗಳು, ಇಡೀ ಮನಸ್ಸು ನೋವಿನಿಂದ ತುಂಬಿ ಹೋಗಿದ್ದರು, ಮುಖ ಮಾತ್ರ ಿವರಿಗೆ ಏನೂ ಆಗಿಯೇ ಇಲ್ಲವೇನೊ ಎಂಬಂತೆ ಕಾಣುತ್ತಿತ್ತು. ಅವರು ಆ ಕಷ್ಟಗಳನ್ನಾ ಅನುಭವಿಸಿ ಕಲ್ಲಿನಂತಾಗಿದ್ದರೆಂದು ಅದು ಸೂಚಿಸುತ್ತಿತ್ತು ನನಗೆ.
ಆರತಿ “ಅವರು ಯಾರು?” ಎನ್ನುತ್ತ ನನ್ನತ್ತ ನೋಡಿದರು.
“ಅವರು ಶೇಖರನ ಸ್ನೇಹಿತ, ಗಣ ಅಂತ ಹೆಸರು” ಎಂದಳು.
ಆರತಿ “ಬನ್ನಿ” ಎನ್ನುತ್ತ ಸ್ವಾಗತಿಸಿದರು.
ನಾನು “ಹೇಗಿದ್ದಿರಾ ಅತ್ತಿಗೆ?, ಚೆನ್ನಾಗಿದ್ದಿರಾ?” ಎಂದೆ.
ಆರತಿ “ಚೆನ್ನಾಗಿದ್ದಿನಿ” ಎಂದರು.
ನಂತರ ಅವರ ಜೊತೆ ಅದು ಇದು ಮಾತನಾಡುತ್ತಾ, ನಿಧಾನವಾಗಿ ಕೆಲವೊಂದು ವಿಷಯಗಳನ್ನು ಕೆದಕೊಡಗಿದೆ. ಅವರು ಅಷ್ಟೇ ಆತ್ಮೀಯವಾಗಿ ನನ್ನೊಂದಿಗೆ ಮಾತನಾಡುತ್ತಲೇ ಅವೆಲ್ಲದಕ್ಕೆ ಉತ್ತರ ನೀಡತೊಡಗಿದರು. ನಂತರ ಅವರ ಮನಸ್ಸಿನಲ್ಲಿ ಮನೆಯವರ ಬಗ್ಗೆ ಯಾವ ರೀತಿಯ ಅನಿಸಿಕೆ ಇದೆ ಎಂಬುದನ್ನು ತಿಳಿದುಕೊಂಡೆ. ಇಷ್ಟೇಲ್ಲ ಕಷ್ಟ ಅವರಿಗಿದ್ದರೂ, ಅವರು ಮಾತ್ರ ಒಂಚೂರು ಮನೆಯವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಲಿಲ್ಲ. ಹಾಗೇಯೇ ಅನು ಶೇಖರನನ್ನು ಪ್ರೀತಿ ಮಾಡುತ್ತಿರುವ ವಿಷಯವನ್ನು ಅವರಿಂದಲೇ ನಾನು ತಿಳಿದುಕೊಂಡೆ. ಆಗಲೇ ನಾನು ನಿರ್ಧಾರ ಮಾಡಿದ್ದು ಈ ಕೊಣೆಯಿಂದ ಆರತಿಯವರನ್ನು ಹೊರಗೆ ತರಬೇಕು ಮತ್ತು ಅನು, ಶೇಖರನ ಒಂದು ಮಾಡಬೇಕು ಎಂದು.
ಅಲ್ಲಿಂದ ಹೊರಗಡೆ ಬಂದ ಮೇಲೆ ಸ್ವಪ್ನನಾ ಕೇಳಿದೆ “ನಿನಗೆ ಅನು ಗೊತ್ತಾ?” ಎಂದು.
ಅವಳು “ಗೊತ್ತು. ಅನಂತ ಮಾವನ ಮದುವೇಲೆ ಅವಳು ನನಗೆ ಪರಿಚಯ ಲ್ಲಿಂದ ಇಬ್ಬರೂ ಫ್ರೆಂಡ್ಸ್” ಎಂದಳು.
“ನಾಳೆ ಅವಳನ್ನಾ ಸಿಟಿಗೆ ಬರೋಕೆ ಹೇಳ್ತಿಯಾ” ಎಂದೆ.
ಸ್ವಪ್ನ “ಆಯಿತು. ಆದರೆ ನಾನು ಬರೋದಾದ್ರೆ ಮಾತ್ರ” ಎಂದಳು.
ನಾನು ನಗುತ್ತ “ಆಯಿತು” ಎಂದೆ.
ಮಾರನೇಯ ದಿನ ಬೆಳಗ್ಗೆ ಅನು ಸಿಟಿಗೆ ಬರೋ ವಿಷಯವನ್ನು ಹೇಗಾದರೂ ಮಾಡಿ ಶೇಖರನಿಗೆ ಹೇಳಿ, ಅವನ್ನನ್ನು ಕರೆದುಕೊಂಡು ಹೋಗ್ಬೇಕು ಅಂತಾ ಕಾಯ್ತಿದ್ದೆ. ಅಷ್ಟರಲ್ಲಿ ಶೇಖರ “ಹೇಗಾಯ್ತೋ ನಿನ್ನೆ ಪ್ರವಾಸ” ಎಂದ.
ನಾನು “ಚೆನ್ನಾಗಿತ್ತು” ಎಂದೆ.
ಶೇಖರ “ನಿನ್ನೆ ರಾತ್ರಿ, ಅಷ್ಟೋತ್ತಿಗೆ ಹೊರಗಡೆ ಮಾತಾಡೋಕೆ ಸ್ವಪ್ನ ನೀನು ಹೋಗಿದ್ರಿ ಅಲ್ವಾ” ಎಂದು ಕೇಳಿದ.
ನಾನು “ಹೌದು ಕಣೊ. ಆದರೆ ಅದು ನಿನಗೆ ಹೇಗೋ ಗೋತ್ತು?” ಎಂದೆ.
ಶೇಖರ “ನಾನು ಎಚ್ಚರವಾಗಿಯೇ ಇದ್ದೆ, ಎನೋ ಬಿಡಪ್ಪ ನಿನಗಾದ್ರೂ ನಿನ್ನ ಪ್ರೀತ್ಸೋ ಹುಡುಗಿ ಸಿಕ್ಕಳಲ್ಲಾ” ಎಂದ.
ನಾನು “ ಹೌದು ಕಣೋ, ಆದರೆ ನೀನು ಮನಸ್ಸು ಮಾಡಿದ್ರೆ. ನಿನಗೂ ನಿನ್ನ ಪ್ರೀತ್ಸೋ ಹುಡುಗಿ ಸಿಕ್ತಾಳೆ” ಎಂದು ಅವನ ಬುಜದ ಮೇಲೆ ಕೈಯಿಟ್ಟೆ.
ಶೇಖರ “ಹೇಗೆ?” ಎಂದು ಪ್ರಶ್ನೆ ಹಾಕಿದ.
ನಾನು “ನಿನ್ನ ಪ್ರೀತಿನಾ ಮನೇಲಿ ಹೇಳು” ಎಂದೆ.
ಶೇಖರ “ನನ್ನ ಅತ್ತಿಗೆ ಈ ಮನೇಗೆ ಅಶುಭ ಎಂದು ನನ್ನ ತಂದೆನೇ ಅವರನ್ನು ಹೊರಗಡೆ ಇಟ್ಟಿದಾರೆ, ಅಂತಹದರಲ್ಲಿ ಅವರ ತಂಗಿನಾ ಲವ್ ಮಾಡ್ತಾ ಇದೀನಿ ಅಂತಾ ಗೊತ್ತಾದ್ರೆ, ನನ್ನನ್ನ ಮನೆಯಿಂದಾನೆ ಹೊರಗಾಕ್ತಾರೆ, ನಾನು ನನ್ನ ಕುಟುಂಬವನ್ನು ಬಿಟ್ಟು ಇರೋಕ್ಕಾಗಲ್ವೋ” ಎಂದ.
ನಾನು “ಅಷ್ಟೇನಾ, ಆಯ್ತು ಕೆಲಸ ಇದೆ. ಸಿಟಿಗೆ ಹೋಗ್ಬೇಕು ಬೇಗ ರೆಡಿ ಆಗು” ಎಂದೆ.
ಶೇಖರ “ಆಯ್ತು” ಎನ್ನುತ್ತ ರೆಡಿಯಾದ, ಇಬ್ಬರೂ ರೆಡಿಯಾಗಿ ಟಿಫಿನ್ ಮಾಡಿ ಹೊರಡಲು ಅಣಿಯಾದೆವು, ಅಷ್ಟರಲ್ಲಿ ಚೆನ್ನತ್ತೇ ಬಂದು “ನೋಡು ಶೇಖರ, ಸ್ವಪ್ನ ಸಿಟಿಲಿ ಎನೋ ಕೆಲ್ಸಾ ಇದೆ ಅಂತೆ, ಇವಳನ್ನು ಸಿಟಿಗೆ ಕರ್ಕೋಂಡು ಹೋಗು” ಎಂದರು.
ಶೇಖರ “ಇಲ್ಲಾ ಅತ್ತೇ, ನಾವು ಬೇರೆ ಕಡೆ ಹೊರಟಿದಿವಿ ಬೇಡ” ಎಂದ.
ನಾನು “ಹೋಗ್ಲಿ ಬಿಡೋ...... ಸಿಟಿಗೇ ಅವರನ್ನಾ ಡ್ರಾಪ್ ಮಾಡಿ ಹೋದರಾಯಿತು. ಬಾ” ಎನ್ನತ್ತ ಹೊರಬಂದೆ.
ಅಷ್ಟರಲ್ಲಿ ಸ್ವಪ್ನ “ಜೀಪ್ನಲ್ಲಿ ಅಲ್ವಾ ನಾನು ಬರ್ತೀನಿ” ಎನ್ನುತ್ತ ಹೊರಬಂದಳು.
ದಾರಿಯುದ್ದಕ್ಕೂ ಸ್ವಪ್ನ, ಚಿಕ್ಕವಳಿದ್ದಾಗ ಆಗಿದ್ದ ಆ ಊರಿನ ಸ್ಥಿತಿ ಗತಿಯ ಬಗೆಗೆ ಹೇಳುತ್ತಾ ಬಂದಳು. ಹಾಗೇ ನಾವು ಸಿಟಿ ತಲುಪಿದೆವು. ಮಾಲ್ ಹತ್ತಿರ ನಿಂತಿದ್ದ ಅನುನಾ ನೋಡಿ ಸ್ವಪ್ನ “ಇಲ್ಲೇ ನಿಲ್ಸೋ” ಎನ್ನುತ್ತ ಕೆಳಗಿಳಿದಳು.
ಶೇಖರ “ಅನು ಇಲ್ಯಾಕೆ ಬಂದಿದಾಳೆ?” ಎಂದ.
ನಾನು “ನೋಡು ಶೇಖರ ಯಾವುದಕ್ಕೂ ಹೆದರಬೇಡ ನಾನಿದಿನಿ, ಅನುಗೆ ನಿನ್ನ ಮೇಲೆ ಪ್ರೀತಿ ಇದೆಯಾ ಕೇಳು” ಎನ್ನುತ್ತ ಸ್ವಪ್ನ ಹತ್ತೀರ ಹೋದೆ.
ಅಷ್ಟರಲ್ಲಿ ಸ್ವಪ್ನ ಅನುಗೆ ನನ್ನ ಪರಿಚಯ ಮಾಡಿಸಿದಳು.
ನಾನು “ನಡಿ ಸ್ವಪ್ನ, ನನಗೆ ಈ ಮಾಲ್ ನೋಡ್ಬೇಕು ಅಂತ ಅನಿಸ್ತಿದೆ”ಎಂದೆ.
ಸ್ವಪ್ನ “ಬಾ”ಎನ್ನುತ್ತ ನಡೆದಳು.
ಸುಮಾರು ಒಂದು ಗಂಟೆ ಶೇಖರ ಅನು, ಅಲ್ಲಿಯೇ ಇದ್ದ ಕಾಫಿ ಶಾಪ್ನಲ್ಲಿ ಮಾತನಾಡುತ್ತ ಕುಳಿತರು. ನಾನು ಸ್ವಪ್ನ ಇಡೀ ಮಾಲ್ ಸುತ್ತಾಡಿದೆವು. ನಂತರ ಎಲ್ಲರೂ ಹೋಟೆಲ್ಗೆ ಹೋಗಿ ಊಟ ಮಾಡಿದೆವು. ಆಮೇಲೆ ಅನುಗೆ ಬಿಳ್ಕೊಟ್ಟು ನಾವು ಮನೆಗೆ ಬಂದೆವು.
ಅಷ್ಟರಲ್ಲಿ ಮನೆಯ ಸದಸ್ಯರೋ ನಮಗಾಗಿಯೇ ಕಾಯುತ್ತಿದ್ದಾರೇನೋ ಎಂಬಂತೆ ಕುಳಿತಿದ್ದರು.
ಶೇಖರನ ತಂದೆ “ಎಲ್ಲಿಗೆ ಹೋಗಿದ್ರಿ” ಎಂದರು.
ಶೇಖರ “ಇಲ್ಲೇ ಸಿಟಿಗೆ” ಎಂದ.
ಅವರು “ಎನು ಕೆಲಸ ಇತ್ತು?” ಎಂದರು.
ನಾನು “ನನ್ನ ಜಾಬ್ಗೆ ಸಂಬಂಧಿಸಿದ್ದು ಅಂಕಲ್” ಎಂದೆ.
ಶೇಖರನ ತಾಯಿ “ಏನು ಕೆಲ್ಸ?, ಇವರಿಬ್ಬರೂ ಯಾಕೆ ಬಂದಿದ್ರು?” ಎಂದರು.
ಸ್ವಪ್ನ “ಮಾಲ್ ನೋಡೋಕೆ ಹೋಗಿದ್ವಿ” ಎಂದಳು.
ವಿಶ್ವ “ಬರೀ ಮಾಲ್ ನೋಡೋಕೆ ಹೋಗಿದ್ರಾ, ಇಲ್ಲಾ ಬೇರೆ ಎನಾದ್ರೂ ನಾ......” ಎಂದ. ಮುಂದುವರೆದು “ಅನು ಯಾಕೆ ಅಲ್ಲಿ ಬಂದಿದ್ಲು?” ಎಂದ.
ಶೇಖರ “ಹಾಗೇ ಆಕಸ್ಮಾತಾಗಿ ಬೇಟಿಯಾಗಿದ್ದು” ಎಂದ.
ನಾನು “ಇಲ್ಲ ಶೇಖರ, ಇವತ್ತು ನಿಜ ಹೇಳದಿದ್ದರೆ. ಇನ್ಯಾವತ್ತೀಗೂ ಹೇಳೋಕೆ ಸಾಧ್ಯಾನೇ ಇಲ್ಲಾ” ಎಂದೆ.
ಶಾರದಮ್ಮ “ಎನದು ಸತ್ಯ?” ಎಂದರು.
ಸ್ವಪ್ನ “ಶೇಖರ ಅನು, ಇಬ್ಬರೂ ಪ್ರೀತಿ ಮಾಡ್ತಿದಾರೆ” ಎಂದಳು.
ಆಗ ಎಲ್ಲರೂ ಆಶ್ಚರ್ಯಚಕಿತರಾದರು.
ಅಂಕಲ್ “ಶೇಖರ, ಸ್ವಪ್ನ ಹೇಳ್ತಿರೋದು ನಿಜಾನೇನೋ” ಎಂದರು.
ಶೇಖರ ತಲೆತಗ್ಗಿಸಿಕೊಂಡು ಸುಮ್ಮನೇ ನಿಂತ.
ನಾನು “ಹೌದು ಅಂಕಲ್ ಸ್ವಪ್ನ ಹೇಳ್ತೀರೋದು ನಿಜ, ನಿವೆಲ್ಲಿ ಈ ಮದುವೆಗೆ ಒಪ್ಪಲ್ವೋ ಅಂತಾ, ಅವಳನ್ನಾ ಮರೆಯೋಕೆ ಪ್ರಯತ್ನಿಸುತ್ತಿರೋದು ನಿಜ, ಈ ವಿಷಯ ಹೇಳಿದ್ರ ಎಲ್ಲಿ ನಿಮ್ಮಿಂದ ಅವನನ್ನು ದೂರಾ ಮಾಡ್ತೀರೋ ಅಂತಾ ಈ ವಿಷಯ ಮುಚ್ಚಿಟ್ಟಿರೋದು ನಿಜ” ಎಂದೆ.
ಆಗ ಅವರು “ಇದು ಯಾವತ್ತೀಗೂ ಸಾಧ್ಯ ಇಲ್ಲ” ಎಂದರು ಸಿಟ್ಟಿನಿಂದ.
ನಾನು “ಯಾಕೆ? ಅಂಕಲ್, ಅನು ತುಂಬಾ ಒಳ್ಳೆ ಹುಡುಗಿ. ಅವಳು ಶೇಖರನಿಗೆ ಈ ಮನೇಗೆ ಯಾವ ಕೊರತೆನೂ ಮಾಡಲ್ಲಾ” ಎಂದೆ.
ಅಂಕಲ್ “ಇಲ್ಲಾ ಗಣ, ನೀನು ಇದರಲ್ಲಿ ತಲೆ ಹಾಕ್ಬೇಡ. ಇದರ ಬಗ್ಗೆ ನಿನಗೇನೂ ಗೊತ್ತಿಲ್ಲಾ” ಎಂದರು ಬೆರಳು ತೋರಿಸಿ.
ನಾನು “ಕ್ಷಮಿಸಿ ಅಂಕಲ್, ನಿಮ್ಮ ಎದುರಿಗೆ ಮಾತಾಡೋಕು ಇವರು ಹೆದರ್ತಾರೆ, ಅಂತಾದರಲ್ಲಿ ನಾನು ಮಾತಾಡ್ತಿರೋದು ತಪ್ಪಿರಬಹುದು. ಆದರೆ ಅದರ ಬಗ್ಗೆ ನನಗೆ ಎಲ್ಲಾ ಗೊತ್ತು” ಎಂದೆ.
ಚೆನ್ನತ್ತೇ “ಏನ್ ಗೊತ್ತು ನಿನಗೆ ಇದರ ಬಗ್ಗೆ?” ಎಂದರು.
“ನನಗೆ ಈ ಮನೆಯುಲ್ಲಿ ಒಂದು ಸಂಸ್ಕಾರ ಇದೆ ಅನ್ನೋದು ಗೊತ್ತು, ಒಂದು ಆಚಾರ-ವಿಚಾರ ಇದೆ ಅನ್ನೋದು ಗೊತ್ತು, ಒಂದು ಪದ್ಧತಿ ಇದೆ ಅನ್ನೋದು ಗೊತ್ತು, ಅದರಲ್ಲಿ ಈ ಮನೆ ಮಂದಿ ಭಾಗಿಯಾಗಿದಾರೆ ಅನ್ನೋದು ಗೊತ್ತು. ಒಂದು ಜೀವಾ ಮಾತ್ರ ನಿಮ್ಮ ಜೊತೆ ಸೇರೋಕೆ ಕಾಯ್ತಾ ಇದೆ ಅನ್ನೋದು ಗೊತ್ತು. ಆದರೆ ಈ ವಿಷಯ ಮಾತ್ರ ನಿಮಗೇ ಗೊತ್ತಿಲ್ಲಾ ಅಂಕಲ್” ಎಂದೆ.
ಅಂಕಲ್ “ನೋಡು ಗಣ, ಆರತಿ ಈ ಮನೆಗೆ ಅದೃಷ್ಟ ಲಕ್ಷ್ಮೀಯಾಗಿ ಬರಲಿಲ್ಲ. ಅದು ಅವಳ ದುರಾದೃಷ್ಟ. ಅದು ಅವಳ ಕರ್ಮ......... ಅನುಭವಿಸ್ತಾ ಇದಾಳೆ” ಎಂದರು.
ನಾನು “ನೋಡಿ ಅಂಕಲ್, ಸೀತೆ ರಾಮನ ಹೆಂಡತಿಯಾಗಿದ್ದಾಗ ಅವನು ಕಾಡಿಗೆ ಹೋಗ್ಲಿಲ್ವಾ ಅಥವಾ ದ್ರೌಪದಿ ಪಾಂಡವರ ಹೆಂಡತಿಯಾಗಿದ್ದಾಗ ಅವರು ವನವಾಸ ಮಾಡಲಿಲ್ವ. ಹಾಗಂತಾ ಅವರು ತಮ್ಮ ಹೊಂಡತಿಯನ್ನೇ ಬಿಟ್ಟರಾ, ಅಂತಹ ಮಹಾನುಭಾವರ ಬಾಳಿನಲ್ಲಯೇ ವಿಧಿಯಾಟ ನಡೆಯುವಾಗ ಅನಂತಣ್ಣ, ನಾನು, ನೀವು ಒಂದು ಲೆಕ್ಕಾನಾ ಅಂಕಲ್?” ಎಂದೆ.
ಮುಂದುವರೆದು “ಅಂಕಲ್ ಒಂದು ಹುಡುಗಿ, ತನ್ನ ವಿದ್ಯಾಭ್ಯಾಸ ಮುಗಿದ ಕೂಡಲೇ ತನ್ನ ಿಡೀ ಕುಟುಂಬವನ್ನಾ ಚೆನ್ನಾಗಿ ನೋಡಿಕೊಳ್ಳಬೇಕು. ಮನೆಯಲ್ಲಿ ಹೇಳಿಕೊಳ್ಳುವಂತಹ ಕಷ್ಟವಿಲ್ಲದಿದ್ದರೂ ಸಹಿತ, ತನ್ನ ಕೆಲಸದಿಂದ ಬಂದಂತಹ ಸಂಬಳದಿಂಧ ಏನಾದರೂ ತೆಗೆದುಕೊಂಡು ಹೋಗಿ ಮನೆಯಲ್ಲಿ ಕೊಟ್ಟು ತನ್ನ ತಂದೆ ತಾಯಿಯರ ಮುಖದಲ್ಲೊಂದಷ್ಟು ನಗು ನೋಡಬೇಕೆಂದು ಕೊಂಡಿದ್ದಳು. ಆದರೆ, ಪರಿಸ್ಥಿತಿಯ ಕೈಗೊಂಬೆಯಾಗಿ ಅವಳು ತನ್ನ ತಮದೆ ತಾಯಿಯರ ಮಾತಿನಂತೆ ಮದುವೆಯಾಗಿ ತನ್ನ ಕನಸುಗಳನ್ನಾ ಕೊಂದು ಹಾಕುತ್ತಾಳೆ ಅಂಕಲ್.
ಇಲ್ಲಿ ನೋಡಿ, ಈ ಪತ್ರದಲ್ಲೇನಿದೆ ಅಂತಾನ ನೋಡಿ. ತಾನು ಯಾವುದೇ ಕಾರಣಕ್ಕೂ ಸೋಲಬಾರದೆಂಬ ಆಸೆ ಹೊತ್ತ ಹುಡುಗಿಯೊಬ್ಬಳು, ಆ ಗೆಲುವಿಗೆ ಕೋರಿಕೆ ಸಲ್ಲಿಸುವಂತಹ ಸಾಲುಗಳಿಲ್ಲಿವೆ, ಅಂದರೆ ನೀವೇ ಯೋಚನೆ ಮಾಡಿ ಅಂಕಲ್. ಆ ಗೆಲುವಿಗಾಗಿ ಆಕೆ ಹಂಬಲಿಸಿದ ಪರಿ ಎಂತದಿರಬೇಕು?” ಎಂದು ನಗೆ ಸಿಕ್ಕಂತಹ ಆರತಿಯವರು ಬರೆದಂತಹ ಪತ್ರವನ್ನು ತೆಗೆದು ಅಂಕಲ್ ಕೈಗಿಟ್ಟೆ ಅವರು ಅದನ್ನು ಓದತೊಡಗಿದರು.
ಅದೇ ವೇಳೆ ನನ್ನನ್ನೇ ನೋಡುತ್ತಿದ್ದ ಸ್ವಪ್ನಗೆ ಆರತಿಯವರನ್ನು ಕರೆದು ತರುವಂತೆ ಸನ್ನೆ ಮಾಡಿದೆ.
ಶಾರದಮ್ಮ “ಅದೂ ಹಾಗಲ್ಲಪ್ಪ.......”ಎನ್ನುತ್ತಿದ್ದಂತೆಯೇ ನಾನು “ಇಲ್ಲಮ್ಮ, ಇಡೀ ಊರಿಗೆ ನ್ಯಾಯ ಹೇಳೋರು ಅಂಕಲ್, ಅವರಿಗೆ ಎದುರು ಮಾತಾಡ್ತೀದಿನಿ ಅಂತಾ ತಿಳ್ಕೋಬೇಡಿ. ನನಗೆ ಏನು ಅನಿಸಿತೋ ಅದನ್ನು ಹೇಳಿದೆ ಅಷ್ಟೇ” ಎಂದೆ.
ಅಷ್ಟರಲ್ಲಿ ಆರತಿಯವರು ಅಲ್ಲಿಗೆ ಬಂದರು. ಅವರನ್ನು ನೋಡಿ ಎಲ್ಲರು ಕಣ್ಣರಳಿಸಿದರು.
ಅಂಕಲ್ “ಆರತಿ ಒಳಗೆ.... ನಿನ್ನ ಕೋಣೆಗೆ ಹೋಗು” ಎಂದರು.
ನಾನು “ಇಲ್ಲಾ ಅಂಕಲ್, ಇವತ್ತಾದ್ರೂ ಅವರನ್ನ ಮಾತಾಡೋಕೆ ಬಿಡಿ” ಎಂದೆ.
ಆರತಿ “ಗಣ, ಏನು ಅಂತಾ ಮಾತಾಡಲಿ, ನನ್ನ ಧ್ವನಿ ನನಗೆ ಮರೆತು ಹೋಗಿದೆ. ಈ ಮನೇಲಿ ಒಂದು ದೆವ್ವದ ಥರ ಇದಿನಿ. ಎಲ್ಲರನ್ನೂ ನೋಡ್ತೀನಿ ಅಷ್ಟೇ. ಆದರೆ ಯಾರನ್ನೂ ಮಾತಾಡ್ಸೋಕೆ ಆಗಲ್ಲ.
ನನಗೂ ಆಸೆಗಳಿವೆ ಮಾವ. ನಾನೂ ಒಂದು ಮನಷ್ಯಳೇ. ನನ್ನ ಗಂಡನ ಸಾವಿಗೆ ನಾನೇ ಹೇಗೆ ಕಾರಣವಾಗಬಹುದು ಮಾವ. ಯಾವುದೇ ಹುಡುಗಿ ಮದುವೆಯಾದ ಕ್ಷಣದಿಂದ ತನಗಿಂತ ತನ್ನ ಗಂಡನ ಮೇಲೆ ಪ್ರೀತಿ ಹೊತ್ತು ಜೀವ ಸವಿಸುತ್ತಾಳೆ. ಅಂತದರಲ್ಲಿ ನಾನೇ ಹೇಗೆ ನನ್ನ ಗಂಡನ ಸಾವನ್ನಾ ಕೋರಲಿ ನೀವೇ ಹೇಳಿ ಮಾವ” ಎಂದರು.
ಮುಂದುವರೆದು “ಮಾವ, ನನಗೂ ಆಸೆಗಳಿವೆ. ಗಂಡನಂತೂ ತೀರಿ ಹೋದ. ಸುಖ ಸತ್ತು ಹೋಯಿತು. ಆದರೆ, ನಿಮ್ಮೆಲ್ಲರೊಟ್ಟಿಗೆ ಖುಷಿಯಿಂದ ಇರಬೇಕೆಂದು ಆಸೆ ನನಗೂ ಇದೆ ಮಾವ. ನೀವು ಬೆಳಗ್ಗೆ ಬೇಗ ಎದ್ದು ಪೂಜೆ ಮಾಡುವುದಕ್ಕೂ ಮುಂಚೆ, ದೇವರ ಕೋಣೆಯನ್ನಾ ಕಸ ಗುಡಿಸಿ ನೆಲ ಗುಡಿಸಬೇಕೆಂಬ ಆಸೆ, ಅತ್ತೇ ಮಾಡುವ ಪ್ರತಿ ಕೆಲಸವನ್ನು ತಪ್ಪಿಸಿ ಎಲ್ಲವನ್ನೂ ನಾನೇ ಮಾಡುವ ಆಸೆ ಮಾವ. ನಂದಿನಿಗೆ ತಲೆ ಬಾಚೋವಾಸೆ ಅವಳನ್ನಾ ನನ್ನ ಮಗಳ ತರ ನೋಡಿಕೊಳ್ಳುವ ಆಸೆ. ಇನ್ನೂ ಶೇಖರ, ಅವನಿಗೆ ನಾನೂ ತಾಯಿ ತರ ಮಾವ, ಅವನಿಗೆ ಬೈಯ್ಯೊ ಆಸೆ, ಅವನಿಗೆ ರೇಗಿಸೊ ಆಸೆ, ಅವನಿಗೆ ಒಂದೊಳ್ಳೆ ಹುಡುಗಿ ನೋಡಿ ಮದುವೆ ಮಾಡೋ ಆಸೆ ನನಗೂ ಇದೆ ಮಾವ. ನಾನೇನು ಕೋಟಿ ದುಡ್ಡು ದುಡಿಬೇಕು ಅನ್ನೋ ಆಸೆ ನನಗಿಲ್ಲ ಮಾವ. ಈ ಎಲ್ಲ ಸುಖಗಳಲ್ಲಿ ಕೋಟಿ ಖುಷಿ ಕಂಡು, ಈ ಮನೆಗಾಗಿ ದುಡಿಬೇಕು ಅನ್ನೋ ಆಸೆ ನನಗೂ ಇದೆ ಮಾವ” ಎಂದು ಕಣ್ಣೀರಾದರು.
ಶೇಖರ ತನ್ನ ಕಣ್ಣೊರೆಸಿಕೊಂಡ.
ಮುಂದುವರೆದು “ನಿಮಗೆ ಗೊತ್ತಾ ಮಾವ, ನಾನು ಮದುವೆಯಾಗಿ ಈ ಮನೆಗೆ ಬಂದ ಹೊಸತರಲ್ಲಿ ಒಂದು ಕರಡಿಯನ್ನು ಕೊಂದಿದ್ದಾಗಿ ಹೇಳಿದ್ರಿ, ಆಮೇಲೆ ಅದರಿಂದ ನಿಮಗಾದ ನೋವನ್ನು ಹೇಳಿದ್ರಿ, ಆ ಕರಡಿಯ ಸ್ಥಾನದಲ್ಲಿ ನನ್ನನ್ನು ಇಟ್ಟು ನೋಡಿ ಮಾವ. ಅದನ್ನು ಕೊಂದು ಬಿಟ್ಟ್ರಿ. ಆದರೆ ನನ್ನನ್ಯಾಕ್ ಹೀಗ್ ಕೊಲ್ತಾ ಇದಿರಾ?. ಒಂದೇ ಸಾರಿ ವಿಷಾ ಕೊಟ್ಟು ಸಾಯಿಸಿಬಿಡಿ” ಎಂದರು ಜೋರಾಗಿ ಅಳುತ್ತ.
ಅಲ್ಲಿದ್ದವರೆಲ್ಲಾ ಒಂದು ಕ್ಷಣ ಭಾವುಕರಾದರು. ಎಲ್ಲರ ಕಣ್ಣಲ್ಲೂ ನೀರು. ನಿಶಬ್ಧ ಇಡೀ ಮನೆಯನ್ನು ಆವರಿಸಿಕೊಂಡಿತ್ತು. ಎಲ್ಲರೂ ಒಂದೆರೆಡು ನಿಮಿಷ ಮೂಕರಂತೆ ನಿಂತರು. ಆಗ ಅಂಕಲ್ ಗೆ ಪ್ರಾಣಿಯ ಮೇಲಿರುವ ಕರುಣೆಯನ್ನು ನನ್ನ ಸೊಸೆಯ ಮೇಲೆ ನಾನು ತೋರಲಿಲ್ಲವಲ್ಲಾ ಎನಿಸಿತು.
ಅಂಕಲ್ ಕಣ್ಣಿರನ್ನು ಒರೆಸಿಕೊಳ್ಳುತ್ತಾ “ಇಲ್ಲಮ್ಮ...... ಇಷ್ಟು ದಿನ ನಾನು ತಪ್ಪು ಮಾಡಿಬಿಟ್ಟೆ ನಿನ್ನನ್ನು ಹೀಗೆ ಕಾಡಬಾರದಿತ್ತು. ನನ್ನದು ತಪ್ಪಾಯಿತು ಕ್ಷಮಿಸಿಬಿಡು” ಎಂದರು.
ಆರತಿ “ಇಲ್ಲ ಮಾವ, ವಯಸ್ಸಿನಲ್ಲಿ ದೊಡ್ಡವರು ನೀವು. ಕ್ಷಮೆ ಕೇಳಬೇಡಿ” ಎಂದರು ಕಣ್ಣೊರೆಸಿಕೊಳ್ಳುತ್ತ.
ಆಗ ಅಂಕಲ್ “ನೋಡು ಗಣ, ದೊಡ್ಡವರು ಕೆಲವವೊಮ್ಮೆ ತಪ್ಪು ಮಾಡಿತ್ತಾರೆ. ಆಗ ಚಿಕ್ಕವರೇ ಅದನ್ನು ತಿದ್ದಬೇಕು. ಇವತ್ತು ನೀನು ಮಾಡಿದ್ದು ಅದನ್ನೇ....” ಎಂದರು.
ಆಗ ಆರತಿ “ನೋಡಿ ಗಣ, ನೀವು ಯಾವ ಜನ್ಮದಲ್ಲಿ ಅಣ್ಣನಾಗಿದ್ರೋ ಗೊತ್ತಿಲ್ಲಾ, ಈಗ ಬಂದು ನನ್ನ ಜೀವನವನ್ನೇ ಬದಲಾಯಿಸಿದಿರಿ, ಸಾಯೋವರೆಗೂ ಕತ್ತಲಲ್ಲೇ ಇರ್ತೀನಿ ಅಂತಾ ಅಂದುಕೊಂಡಿದ್ದೆ. ಆದರೆ ಆ ಬದುಕಲ್ಲಿ ನೀವು ಬೆಳಕು ತಂದ್ರಿ, ನಿಮಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲಲ್ಲ” ಎನ್ನುತ್ತ ಅಳೋಕೆ ಪ್ರಾರಂಭ ಮಾಡಿದರು.
ನಾನು “ಇಲ್ಲ ಅತ್ತಿಗೆ ಅಳಬೇಡಿ, ನಿಮ್ಮ ಬದುಕಲ್ಲಿ ಇವತ್ತಿಗೇ ಕೆಟ್ಟ ಘಳಿಗೆ ಹೋಯ್ತು. ಇನ್ನೇನಿದ್ರೂ ಸಂತೋಷವಾಗಿರಿ” ಎಂದೆ.
ಅಂಕಲ್ “ನೋಡು ಗಣ, ನಾಳೆನೇ ಅನು ಮತ್ತು ಶೇಖರನ ಮದುವೆಯ ಬಗೆಗೆ, ಅನು ತಂದೆಯ ಹತ್ತಿರ ಮಾತಾಡ್ತೀನಿ ಆಯಿತಾ” ಎಂದರು.
ನಾನು “ಆಯಿತು ಅಂಕಲ್” ಎಂದೆ, ಶೇಖರನ ಮುಖ ನೋಡುತ್ತ.
ಶೇಖರ ನಕ್ಕ. ಚೆನ್ನತ್ತೇ “ಬನ್ನಿ ಎಲ್ಲರೂ ಊಟ ಮಾಡೋಣ” ಎಂದರು.
ನಂತರ ಎಲ್ಲರೂ ಊಟ ಮಾಡಿ ಅವರವರ ಕೋಣೆಗೆ ಹೋಗಿ ಮಲಗಿಕೊಂಡರು. ನಾನು ಶೇಖರ ಮೇಲೆ ಇದ್ದಾಗ, ಮತ್ತದೇ ಬಾಗಿಲು ಬಡಿದ ಶಬ್ದ ಆಯಿತು. ಆಗ ಶೇಖರ “ಹೋಗಿ ಸರ್, ಸೊಳ್ಳೆ ಬತ್ತಿ ಬಂದಿರ್ಬೇಕು” ಎಂದ ನಗುತ್ತಾ.
ನಾನು ಎದ್ದು ಬಾಗಿಲು ತೆಗೆದಾಗ ಸ್ವಪ್ನ ಸೊಳ್ಳೆ ಬತ್ತಿ ಹಿಡಿದುಕೊಂಡು ನಿಂತಿದ್ದಳು. ನನ್ನ ನೋಡುತ್ತಲೇ ಮಾತಾಡಬೇಕು ಹೊರಗೆ ಬಾಲ್ಕನಿಗೆ ಬಾ ಎಂದಳು. ನಾನು ಅವಳ ಕೈಲಿದ್ದ ಸೊಳ್ಳೆ ಬತ್ತಿಯನ್ನು ಕೋಣೆಯಲ್ಲಿಟ್ಟು, ಶೇಖರನನ್ನೊಮ್ಮೆ ನೋಡಿದೆ.
ಆಗ ಅವನು “ಹೋಗಿ ಸರ್” ಎಂದ.
ನಾನು ಹೊರಗೆ ಬಂದು ಬಾಲ್ಕನಿಯಲ್ಲಿ ನಿಂತುಕೊಂಡೆ, ಸ್ವಪ್ನಳ ಜೊತೆಗೆ.
ಆಗ ಅವಳು ನನ್ನ ಹೆಗಲ ಮೇಲೆ ಕೈ ಹಾಕುತ್ತಾ ಗಣ “ನಮ್ಮ ಮದುವೆ ಬಗ್ಗೆ ಮನೇಲಿ ಹೇಳೋಣ್ವಾ?” ಎಂದು ಕೇಳಿದಳು.
ನಾನು ನಗುತ್ತಾ “ಈವಾಗಲೇ ಬೇಡ, ಸ್ವಲ್ಪ ದಿನ ಲವ್ ಮಾಡೋಣಾ. ಆಮೇಲೆ... ಮದುವೆ ಆಗೋಣ ಬಿಡು: ಎಂದೆ ನಗುತ್ತಾ.....
ಅವಳು ನನ್ನ ಬುಜಕ್ಕೆ ತನ್ನ ತಲೆ ಆನಿಸಿ ಗುತ್ತಾ “ಓಕೆ.........” ಎಂದಳು.
ಮತ್ತೇ ಅದೆನೋ ನೆನಪಾಗಿ “ಹೇಯ್ ಗಣ” ಎಂದಳು.
ನಾನು “ಏನೂ?” ಎಂಧು ಕೇಳಿದೆ.
ಆಗ ಆಕೆ “ಇಲ್ಲಿವರೆಗೂ ನಾವಿಬ್ಬರೂ ಪ್ರಪೋಸ್ ಮಾಡ್ಕೊಂಡೆ ಇಲ್ಲಾ ಕಣೊ” ಎನ್ನುತ್ತಾ “ಐ ಲವ್ ಯೂ” ಎಂದಳು.
ನಾನು ನಕ್ಕೆ. ಆಗ ಅವಳು ಹುಸಿ ಮುನಿಸೊಂದು ಮುಖದ ಮೇಲೆ ತರುತ್ತಾ “ಏಯ್ ನೀನು ನನಗೆ ಐ ಲವ್ ಯು ಟೂ ಅನ್ನಲ್ವೇನೊ?” ಎಂದಳು.
ಅದಕ್ಕೆ ನಾನು “ಆಗಲೇ ಹೇಳಿಲ್ವಾ ನಿನಗೆ ಮದುವೆ ಆಗೋಕೆ ಇನ್ನೂ ತುಂಬಾ ದಿನ ಇದೆ, ಇನ್ನೂ ಚೂರು ಲವ್ ಮಾಡೋಣ. ನೀನು ಇವಾಗಾ ತಾನೇ ಪ್ರಪೋಸ್ ಮಾಡಿದಿಯಾ, ನಾನು ಸ್ವಲ್ಪ ಯೋಚ್ನೆ ಮಾಡಿ ಉತ್ತರ ಹೇಳ್ತಿನಿ ಬಿಡು” ಎಂದೆ ನಗುತ್ತ.
ಆಗ ಅವಳು “ಯೂ.....ರಾಸ್ಕಲ್” ಎನ್ನುತ್ತ ನನ್ನ ಬುಜಕ್ಕೊಂದು ಸಿಹಿ ಗುದ್ದು ಕೊಟ್ಟಳು, ಹುಸಿಕೋಪದಲ್ಲಿ.
ನಾನು ನಗುತ್ತ ಅವಳನ್ನಾ ಗಟ್ಟಿಯಾಗಿ ಅಪ್ಪಿಕೊಂಡು “ಐ ಲವ್ ಯೂ ಟೂ ಕಣೆ.........” ಎಂದೆ.