ನಾನು ನೋಡಿದ ಹಳೆಯ ಸಿನಿಮಾ- ಶ್ರೀ ರಾಮಾಂಜನೇಯ ಯುದ್ಧ(ಕನ್ನಡ ಕುಲ ಪುಂಗವ ಹನುಮನ ಜಯಂತಿ ಪ್ರಯುಕ್ತ)
ಇದು ರಾಜಕುಮಾರ್ ಅವರ 50ನೇ ಚಿತ್ರ . ಶ್ರೀರಾಮಚಂದ್ರ ನಾಗಿ ಅವರು ನಟಿಸಿದ ಮೊದಲನೇ ಸಿನಿಮಾ ಅಂತೆ. ಶ್ರೀ ರಾಮ ಮತ್ತು ಆಂಜನೇಯ ಏಕೆ ಯುದ್ಧ ಮಾಡಿದರು ಸರಿ ನೋಡೋಣ ಅಂತ ನೋಡಲಾರಂಭಿಸಿದೆ.
ಮೊದಲ ದೃಶ್ಯದಲ್ಲಿ ಆಂಜನೇಯನು ರಾಮನನ್ನು ಬಿಟ್ಟು ಹೋಗಲು ಸಿದ್ಧನಿಲ್ಲ. ಆದರೆ ರಾಮ ಒತ್ತಾಯಿಸಿ ಅವನನ್ನು ಕಳುಹಿಸುತ್ತಿದ್ದಾನೆ, ಏಕೆ? ಆತನ ತಾಯಿ ಅವನನ್ನು ಕಳಿಸುವಂತೆ ಅಂಗಲಾಚುತ್ತಿದ್ದಾಳೆ ಅಂತ. ಮತ್ತೆ ಅಂಗದ ಸುಗ್ರೀವ ಮುಂತಾದವರು ಒತ್ತಾಯಿಸುತ್ತಿದ್ದಾರೆ. ಅನಿವಾರ್ಯವಾಗಿ ಶ್ರೀರಾಮ ಅವನನ್ನು ಕಳಿಸುತ್ತಿದ್ದಾನೆ.
ಮತ್ತೆ ಅವನನ್ನು ಕಳಿಸದಿದ್ದರೆ ಲೋಕ ಅವನನ್ನು ನಿರ್ದಯ ಅನ್ನುತ್ತದೆ ಅನ್ನುವ ಚಿಂತೆ. ಸಹಜವೇ , ಜನ ಏನನ್ನುತ್ತಾರೆ ಎಂದು ಮುಂದೊಮ್ಮೆ ಸೀತೆಯನ್ನು ಬಿಡುವವನು ಹನುಮಂತನನ್ನು ಇಟ್ಟುಕೊಳ್ಳುವುದು ಸಾಧ್ಯವೇ ? ಮತ್ತೆ ಇಲ್ಲಿ ಶ್ರೀರಾಮ ಒಂದು ಮಾತನ್ನು ಹೇಳುತ್ತಾನೆ ಲೋಕದಲ್ಲಿ ಹುಟ್ಟಿದವನು ಲೋಕ ಧರ್ಮವನ್ನು ಪಾಲಿಸಬೇಕು. ವಾಹ್ , ಎಂಥ ಮಾತು! ಮನಸ್ಸಿಲ್ಲದಿದ್ದರೂ ಗಟ್ಟಿ ಮನಸ್ಸಿನಿಂದ ಅವನಿಗೆ ತೆರಳುವಂತೆ ಆಜ್ಞೆ ಮಾಡುತ್ತಾನೆ ಶ್ರೀರಾಮ.
ರಾಜನಾದವನಿಗೆ ಪ್ರಜೆಗಳ ಸೇವೆ ಮುಖ್ಯ , ಸ್ವಂತ ಸುಖ ಇಚ್ಛೆಗಳಲ್ಲ. ರಾಮ ಸ್ವತಃ ನಡೆದು ತೋರುವ ದಾರಿ. ಇದು ರಾಮ ರಾಜ್ಯದ ತತ್ವ ಎಂದು ಲೋಕ ಅರ್ಥಮಾಡಿಕೊಳ್ಳುತ್ತದೆ.
ಜಗದೀಶನಾಡುವ ಜಗವೇ ನಾಟಕ ರಂಗ ಎಂಬ ಹಾಡು ಇಲ್ಲಿದೆ ಈ ನಾಟಕವನ್ನು ಜಗತ್ತಿನಲ್ಲೆಲ್ಲ ಸಂಚರಿಸಿ ನಾರದ ನೋಡುತ್ತಾನಂತೆ !
ಮುಂದಿನ ದೃಶ್ಯದಲ್ಲಿ ನಾರದನು ಶಿವ ಪಾರ್ವತಿ ಅವರನ್ನು ಭೇಟಿಯಾಗುತ್ತಾನೆ. ಆದಿಶಕ್ತಿ ಪಾರ್ವತಿಯನ್ನು ಸ್ತುತಿಸುತ್ತ ಹೀಗೆ ಕೇಳಿಕೊಳ್ಳುತ್ತಾನೆ- ಇಂದು ವಿಜಯದಶಮಿ, ಲೋಕದಲ್ಲಿ ಶಕ್ತಿ ಪೂಜೆ, ಆಯುಧ ಪೂಜೆ ನಡೆದಿದೆ. ಭಕ್ತಿಯ ಯುಗ ಮುಗಿಯಿತು, ಆದ ಕಾರಣ ನನಗೂ ಒಂದು ಹಳೆಯದೋ ಅಥವಾ ತುಕ್ಕು ಹಿಡಿದದ್ದೋ
ಒಂದು ಆಯುಧವನ್ನು ದಯಪಾಲಿಸು ಅಂತ!
ಇದು ಈಶ್ವರನಿಗೆ ಪಾರ್ವತಿಯೊಂದಿಗೆ ಜಗಳ ಹಚ್ಚಿ ಕೊಡುವ ಹುನ್ನಾರ ಅಂತ ಕಂಡು ಅವನು ನಾರದನನ್ನು - ಯಾಕಯ್ಯ, ರಾಮ ರಾಜ್ಯ ಸ್ಥಾಪನೆಯಾದ ಮೇಲೆ ನಿನಗೆ ಕೆಲಸವಿಲ್ಲದಂತಾಗಿದೆ ಅಂತ ಕಾಣಿಸುತ್ತದೆ! - ಅಂತ ಛೇಡಿಸುತ್ತಾನೆ !! ಭಕ್ತ ರಾವಣನ ಕೊನೆಯಾದದ್ದು ಭಕ್ತಿಯ ಸೋಲಲ್ಲ ಆದರೆ ಅಹಂಕಾರದ ಸೋಲು ಅಷ್ಟೇ , ಶಕ್ತಿಗಿಂತ ಭಕ್ತಿ ಮೇಲು, ಅದನ್ನು ಕಾಲವೇ ನಿರೂಪಿಸುತ್ತದೆ ಅಂತ ಶಿವನು ಹೇಳಿ, ಶಕ್ತಿ ದೇವತೆ ಪಾರ್ವತಿಗೆ ಸಿಟ್ಟು ಬಂದು ಎದ್ದು ಹೋಗುತ್ತಾಳೆ ! ಇದು ರಾಮಾಂಜನೇಯ ಯುದ್ಧದ ಕತೆಗೆ ಪೀಠಿಕೆ ಹಾಕುತ್ತದೆ. ಈ ಕತೆಯು ಶಕ್ತಿ ಮತ್ತು ಭಕ್ತಿಗಳ ಸಂಘರ್ಷದ ಕಥೆ ಎಂದು ತೋರುತ್ತದೆ.
ದೇವರು ಭಕ್ತರ ಪರೀಕ್ಷೆ ಮಾಡುವುದನ್ನು ಕೇಳಿದ್ದೇವೆ, ಆದರೆ ಭಕ್ತರು ದೇವರ ಪರೀಕ್ಷೆ ಮಾಡಬಾರದಂತೆ. ಇದು ಇಲ್ಲಿನ ಒಂದು ಮಾತು.
I
ಶ್ರೀ ರಾಮಭಕ್ತನೂ ಸಜ್ಜನನೂ ಆದ ಚಂದ್ರಭಾನು ಎಂಬ ರಾಜನಿಂದ ವಿಶ್ವಾಮಿತ್ರನ ಯಜ್ಞಕ್ಕೆ ತೊಂದರೆಎಂಬ ತಪ್ಪು ತಿಳುವಳಿಕೆಯಿಂದ ವಿಶ್ವಾಮಿತ್ರನು ಶ್ರೀರಾಮನ ಹತ್ತಿರ ಹೋಗಿ ಚಂದ್ರ ಭಾನುವಿನ ಶಿರಚ್ಛೇದನಕ್ಕೆ ಪ್ರೇರೇಪಿಸುತ್ತಾನೆ . ರಾಮನಿಗೆ ' ಈ ಕುರಿತು ನನಗೆ ವಚನ ಕೊಡು' ಎಂದು ವಿಶ್ವಾಮಿತ್ರ ಹೇಳಿದರೆ ಅವನು ಏನು ಹೇಳುತ್ತಾನೆ ಗೊತ್ತೆ? ನನ್ನ ಮಾತೇ ನನ್ನ ವಚನ, ನನ್ನ ವಂಶ ಅಂಥದ್ದು ' ಅಂತ ಹೇಳುತ್ತಾನೆ. ನನಗೆ ಇಲ್ಲಿ ಹಿಂದೆ ಓದಿದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ತೆಲುಗು ಭಾಷೆಯ ನಾಟಕದ ಅನುವಾದ 'ಸೀತೆಯ ಭವಿಷ್ಯ' ಮತ್ತು ಅ.ನ. ಮೂರ್ತಿರಾಯರ 'ಪೂರ್ವಸೂರಿಗಳೊಡನೆ' ಎಂಬ ಪುಸ್ತಕ ನೆನಪಾದವು.
ಅತ್ತ ಚಂದ್ರಭಾನುವಿಗೆ ಹನುಮಂತನ ರಕ್ಷಣೆ ದೊರೆಯುತ್ತದೆ ಈಗ ಚಂದ್ರ ಭಾನುವಿನಿಂದಾಗಿ ರಾಮ ಮತ್ತು ಹನುಮಂತರ ನಡುವೆ ಬಿಕ್ಕಟ್ಟು ತಲೆದೋರಿದೆ! ಅದನ್ನು ಸೈದ್ಧಾಂತಿಕ ಬಿಕ್ಕಟ್ಟು ಅನ್ನೋಣವೇ?!
ಆಡಿದ ಮಾತನ್ನು ತಪ್ಪೋದಿಲ್ಲ ನನ್ನ ವಂಶವು ಅಂತಹದ್ದಲ್ಲ ಎಂಬ ಹೆಮ್ಮೆಯ ರಾಮನು ಸಾರಾಸಾರ ವಿಚಾರ ಮಾಡದೇ ದುಡುಕಿ ಮಾತನ್ನು ಕೊಡುತ್ತಾನೆ. ಹನುಮಂತ ಕೂಡ ಹಾಗೇ ದುಡುಕಿನಿಂದ ಮಾತನ್ನು ಕೊಟ್ಟು ರಾಮನ ಎದುರಿಗೆ ನಿಲ್ಲುವ ಪ್ರಸಂಗ ಬರುತ್ತದೆ. ಇದು ಜಗದೀಶನಾಡುವ ನಾಟಕ ಮತ್ತು ಇದರಲ್ಲಿ ಜಗಳ ತಂದಿಡುವ ನಾರದನ ಕುಚೋದ್ಯವೂ ಇದೆ. ಗರ್ವ ಉಳ್ಳವರ ಗರ್ವಭಂಗವಾಗಲಿ ಎಂಬುದು ನಾರದನ ಆಶಯ. ಗರ್ವ ಉಳ್ಳವರು ಯಾರು ಎಂಬುದನ್ನು ಕಾಲವೇ ನಿರ್ಧರಿಸಲಿದೆ ಏನೋ.
ಮುಂದೇನು ? ರಾಮ ಹನುಮರು ಧರ್ಮಸಂಕಟದಲ್ಲಿ ಸಿಲುಕಿದ್ದಾರೆ, ಅವರು ತಾನೇ ಆಡಿದ ಮಾತನ್ನು ಮುರಿಯಬೇಕು ಇಲ್ಲವೆ ಪರಸ್ಪರ ಪ್ರೇಮ ಭಕ್ತಿ ಉಳ್ಳ ಅವರು ಯುದ್ಧ ಮಾಡಬೇಕು ! ಆ ಯುದ್ಧ ತಪ್ಪದ ಹಾಗೆ ನಾರದ ಪ್ರಯತ್ನ ಮಾಡುತ್ತಿದ್ದಾನೆ!!
ಇಲ್ಲಿ ವಸಿಷ್ಠ ವಿಶ್ವಾಮಿತ್ರರ ಹಳೆಯ ಜಗಳ ಮುಂದುವರಿದಿದೆ!
ಹಿಂದೆ ಮುಂದೆ ನೋಡದೆ ಮಾಡಿದ ಕೆಲಸಗಳು ದುಃಖಕ್ಕೆ ಕಾರಣವಾಗುವುದು ಖಂಡಿತ. ಆವೇಶ ಅನರ್ಥಕ್ಕೆ ಕಾರಣ, ಕೋಪ ಪರಿತಾಪಕ್ಕೆ ಕಾರಣವಂತೆ.
ಧರ್ಮಸಂಕಟದಲ್ಲಿ ಸಿಲುಕಿದವರಿಗೆ ಧರ್ಮವನ್ನು ಸರಿಯಾಗಿ ತಿಳಿದವರು ದಾರಿ ತೋರಬೇಕು. ಇಲ್ಲಿ ವಸಿಷ್ಠ ನು ಹೇಳುವುದೇನೆಂದರೆ ಧರ್ಮ-ಅಧರ್ಮಗಳು ಎದುರಾದಾಗ ಯಾವುದು ಸರಿ ಯಾವುದು ತಪ್ಪು ಎಂದು ಹೇಳುವುದು ಸುಲಭ ಆದರೆ ಧರ್ಮ-ಧರ್ಮಗಳು ಎದುರಾದಾಗ ಯಾವುದು ಸರಿ ಎಂದು ಯಾವುದು ತಪ್ಪು ಯಾವುದು ಹಿತ ಎಂದು ಹೇಳುವುದು ಸರ್ವಜ್ಞ ನಿಗೂ ಸಾಧ್ಯವಿಲ್ಲ.
ಲಕ್ಷ್ಮಣನು ವಾನರ ವೀರ ಅಂಗದನನ್ನು ಕೃತಘ್ನ ಎಂದು ಜರಿದಾಗ ಅವನು ವಾನರರಿಗೆ ಕೃತಘ್ನತೆ ಎಂಬುದು ಗೊತ್ತೇ ಇಲ್ಲ ಅದನ್ನು ನರರಿಂದ ಕಲಿತುಕೊಳ್ಳಬೇಕು ಎಂದು ಮರು ನುಡಿಯುತ್ತಾನೆ! ಇದು ನರರ ವಾನರರ ನಡುವಣ ಜಗಳದ ರೂಪವನ್ನು ಕೂಡ ಹೊಂದುತ್ತದೆ!!
ದಾರಿ ಕಾಣದ ಶ್ರೀರಾಮಚಂದ್ರ ಮೊರೆ ಹೋಗುವುದು ತಮ್ಮ ಪೂರ್ವಜರನ್ನು. ಅದು ಹೇಗೆ ಅಂತೀರಾ? ತನ್ನ ಪೂರ್ವಜರ ಪ್ರತಿಮೆಗಳನ್ನು ಇಟ್ಟಿರುವ ಪ್ರತಿಮಾ ಗೃಹಕ್ಕೆ ಹೋಗುವುದರ ಮೂಲಕ. ಭಾಸನ ಯಾವುದೋ ನಾಟಕದಲ್ಲೋ ಮತ್ತೆಲ್ಲಿಯೋ ನೀವು ಓದಿರಬಹುದಾದ ಪ್ರತಿಮಾ ಗೃಹವನ್ನು ಈ ಸಿನಿಮಾದಲ್ಲಿ ನೋಡಬಹುದು.
ಚಂದ್ರಭಾನುವೇ ತನ್ನ ಒಬ್ಬನಿಂದಾಗಿ ನರ ವಾನರರ ನಡುವೆ ಯುದ್ಧ, ಮತ್ತೆ ಅದರಿಂದ ನರ ವಾನರರ ಸಾವು ನೋವು ಏಕೆ ಎಂದು ರಾಮನ ಬಳಿಗೆ ಹೋಗಿ ಅವನಿಂದ ಸಾಯಲು ಸಿದ್ಧನಾಗಿ ಹೋದರೆ ಹನುಮಂತ ಅದನ್ನು ಆಗಲು ಬಿಡನು!
ಲಕ್ಷ್ಮಣ ಮತ್ತು ಅಂಗದ ಇವರ ನಡುವೆ ಮಾತಿನ ಸಮರದಲ್ಲಿ ಅಂಗದನು ಲಕ್ಷ್ಮಣನಿಗೆ ' ಹುಷಾರಾಗಿರು , ನೀನೇನಾದರೂ ಎಚ್ಚರ ತಪ್ಪಿದರೆ ಮತ್ತೆ ಹನುಮಂತನೇ ಸಂಜೀವಿನಿ ತರಲು ಹೋಗಬೇಕಾದೀತು' ಎಂದು ಎಚ್ಚರಿಸುವನು! ಅಷ್ಟೇ ಅಲ್ಲದೆ
ಭರತನಿಗೆ 'ನಿನಗೇಕೆ ಯುದ್ಧ ಪ್ರಸಂಗ ? ಎಲ್ಲಿಯಾದರೂ ಹಳೆಯ ಪಾದುಕೆಗಳನ್ನು ಹುಡುಕಿ ಕೊಂಡು ಹೋಗು ' ಎಂದು ಹಳಿಯುತ್ತಾನೆ!!!
ಕೊನೆಗೆ ರಾಮ ಹನುಮರೇ ಎದುರುಬದಿರಾಗುತ್ತಾರೆ. ರಾಮನು ಹನುಮಂತನಿಗೆ 'ತಾ ಕೆಟ್ಟ ಕೋತಿ ವನವನ್ನೆಲ್ಲ ಕೆಡಿಸಿತಂತೆ ' ಅಂತ ಹೀಗಳೆಯುತ್ತಾನೆ!
'ನೀನು ನನ್ನ ಸೇವಕನಾದದ್ದೇ ಆದರೆ ಚಂದ್ರಭಾನುವನ್ನು ನನಗೆ ಒಪ್ಪಿಸು' ಎಂದು ರಾಮ ಹೇಳಿದರೆ ಅವನು - 'ಒಡೆಯನು ಸೌಮ್ಯವಾಗಿದ್ದಾನೆಂದು ಸೇವಕರು ಹೇಗೆ ಸಲಿಗೆಯನ್ನು ತೆಗೆದುಕೊಳ್ಳಬಾರದೋ ಹಾಗೆ ಒಡೆಯನು ಕ್ರೋಧದಲ್ಲಿದ್ದಾನೆಂದು ಹೆದರಲೂಬಾರದು. ಸದಾ ಒಡೆಯನ ಹಿತ ಚಿಂತನೆ ಮಾಡುವುದೇ ಸೇವಕರ ಧರ್ಮ ' ಎಂದು ಹೇಳುತ್ತಾನೆ.
ಭಕ್ತ ಹನುಮನು ರಾಮದೇವರಿಗೇ ಧರ್ಮದ ಉಪದೇಶ ಮಾಡುವನು. ಹನುಮನು ರಾಮನ ಅಧರ್ಮ ಕಾರ್ಯಗಳನ್ನು ಎತ್ತಿ ತೋರುವನು!!
ಈ ಚಿತ್ರದ ಅಂತಿಮ ತೀರ್ಮಾನ ? ಈ ಎಲ್ಲ ಘಟನಾವಳಿಗಳು ಭಕ್ತಿಯ ಮಹತ್ವವನ್ನು ಲೋಕಕ್ಕೆ ತಿಳಿಸಬೇಕು ಎಂಬ ದೈವಸಂಕಲ್ಪದ ಫಲ. ಸಕಲ ಸೃಷ್ಟಿಯೂ ಶಕ್ತಿಯ ಅಧೀನ. ಶಕ್ತಿಯು ದೈವದ ಅಧೀನ. ದೈವವು ಭಕ್ತಿಯ ಅಧೀನ.
ಧರ್ಮಾಧರ್ಮಗಳ ವಿವೇಕ , ವಿವೇಚನೆ , ಮತ್ತು ಒಂದಿಷ್ಟು ಹಾಸ್ಯಮಯ ಸಂಭಾಷಣೆ ಇಲ್ಲಿದೆ. ಒಟ್ಟಿನಲ್ಲಿ ಈ ಚಿತ್ರ ಒಳ್ಳೆಯದು. ರಾಮ ಹನುಮ ರ ಪಾತ್ರಧಾರಿಗಳ ಅಭಿನಯ ತುಂಬ ಚೆನ್ನಾಗಿದೆ. ಈ ಚಿತ್ರ ಯೂಟ್ಯೂಬ್ ನಲ್ಲಿ ಈ ಮುಂದಿನ ಕೊಂಡಿಯಲ್ಲಿದೆ- https://youtu.be/qIv9D334AVg