ಊಟಿ ನೀನು ತುಂಬಾನೇ ಬ್ಯುಟಿ :---
ಊಟಿ ನೀನು ತುಂಬಾನೇ ಬ್ಯುಟಿ :---
ರಜೆಯಲ್ಲಿ ಮಜಾ ಮಾಡಲು ಹಸಿರು ಕಾನನದ ನಡುವೆ ಇರುವ ಊಟಿ ಒಂದು ಒಳ್ಳೆಯ ಆಯ್ಕೆ ......ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸಿಗರು ಬಿರುಬೇಸಿಗೆಯನ್ನು ತಪ್ಪಿಸಿ ಕೊಳ್ಳಲು ಇಲ್ಲಿಗೆ ಬರುತ್ತಾರೆ...
ಊಟಿ ಬಹಳ ತಂಪಾದ: ಊಟಿಗೆ ಊಟಕಮಂಡ್,ಉಧಗೈ,ಉದಕಮಂಡಲ ಎಂಬ ಹೆಸರುಗಳು ಇವೆ. ಊಟಕಮಂಡ್ ನೀಲಗಿರಿ ಬೆಟ್ಟಗಳಲ್ಲಿರುವ ಒಂದು ಪ್ರಸಿದ್ಧ ಗಿರಿಧಾಮ. ತೋಡಾ ಜನಾಂಗದವರು ವಾಸಿಸುತ್ತಿದ್ದ ಈ ಪ್ರದೇಶ 18ನೇ ಶತಮಾನದ ಕೊನೆಯ ಹೊತ್ತಿಗೆ ಈಸ್ಟ್ ಇಂಡಿಯಾ ಕಂಪನಿಯ ಆಧೀನಕ್ಕೆ ಬಂದಿತು............................ ಪ್ರವಾಸೋದ್ಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಅಪೂರ್ವ ಪ್ರಗತಿಯನ್ನು ಸಾಧಿಸಿದ್ದು ಒಂದು ಅಚ್ಚರಿ. ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯನ್ನು ಇಲ್ಲಿಗೂ ವಿಸ್ತರಿಸಿದ್ದನಂತೆ. ಅವನ ಮರಣಾನಂತರ ಇಂಗ್ಲಿಷರ ಆಳ್ವಿಕೆ. ಔಷಧ ಮತ್ತು ಫೋಟೋಗ್ರಾಫಿಕ್ ಫಿಲ್ಮ್‌ಗಳ ತಯಾರಿಕೆಗೂ ಇದು ಪ್ರಸಿದ್ಧ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಈ ತಾಣವು ಸಮುದ್ರ ಮಟ್ಟಕ್ಕಿಂತ ಸುಮಾರು 7,500 ಅಡಿ (2, 286 ಮೀ) ಎತ್ತರದಲ್ಲಿದೆ.ಈ ಭವ್ಯ ಗಿರಿಧಾಮವು ಅಕ್ಷರಶಃ ಊಟಿಯು ನೀಲ ಬೆಟ್ಟಗಳೆಂದೂ ಕರೆಯಲ್ಪಡುವ ನೀಲಗಿರಿ ಬೆಟ್ಟಗಳ ಮಧ್ಯೆ ವಿಶಾಲವಾಗಿ ಚಾಚಿಕೊಂಡಿದೆ. ನೀಲಗಿರಿ ಎಂಬ ಈ ಹೆಸರು ಆ ಪ್ರದೇಶದಲ್ಲಿ ಆವರಿಸಿರುವ ನೀಲಗಿರಿ ಮರಗಳಿಂದ ಉಂಟಾದ ನೀಲಿ ಹೊಗೆಯಂಥ ಮುಸುಕಿನಿಂದ ಬಂದಿರಬಹುದೇ ಅಥವಾ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ ಹೂಗಳಿಂದಾಗಿ ಬಂದಿರಬಹುದೇ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.
ಊಟಿ ಹೇಗೆ ಹೋಗುವುದು ?
ವಿಮಾನ, ರೈಲು ಹಾಗು ರಸ್ತೆಯ ಮೂಲಕ ಸುಲಭವಾಗಿ ಇಲ್ಲಿಗೆ ತೆರಳಬಹುದು. *ಮೈಸೂರಿನ ಮಾರ್ಗವಾಗಿ ನಂಜನಗೂಡು- ಗುಂಡ್ಲುಪೇಟೆ-ಬಂಡೀಪುರ ಮೂಲಕ -155 ಕಿ.ಮೀ. * ಬೆಂಗಳೂರಿನಿಂದ 290 ಕಿ.ಮೀ. * ಕೊಚ್ಚಿಯಿಂದ ಪಾಲಕ್ಕಾಡ್-ಕೊಯಮತ್ತೂರು ಮಾರ್ಗವಾಗಿ 281 ಕಿ.ಮೀ. * ಟೂರ್ ಪ್ಯಾಕೇಜುಗಳು ಸಹ ಲಭ್ಯ.*ಕೊಯಮತ್ತೂರು ಸಮೀಪದ ವಾಯು ನೆಲೆಯಾಗಿದ್ದು, ಮೆಟ್ಟುಪಾಳಯಂ ನಿಂದ 4ಘಂಟೆಗಳ ಟಾಯ್ ಟ್ರೈನ್ ಮೂಲಕವು ಇಲ್ಲಿಗೆ ಹೋಗಬಹುದು. * ಬಸ್ಸಿನಲ್ಲಿ ಊಟಿ ತಲುಪಿಕೊಂಡರೆ ಅಲ್ಲೂ ಕೂಡ ಪ್ಯಾಕೇಜ್‌ಗಳು ಲಭ್ಯವಿವೆ. ಭಾಷೆ : ಪ್ರವಾಸಿಗರನ್ನು ಊಟಿಗರು ಗೌರವ ಆದರದಿಂದ ಕಾಣುತ್ತಾರೆ. ಊಟಿಯಲ್ಲಿ ಸ್ಥಳೀಯ ಜನರೊಡನೆ ವ್ಯವಹರಿಸುವುದು ತುಂಬಾ ಸುಲಭ. ನೀವು ಇಲ್ಲಿ ಕನ್ನಡದಲ್ಲಿಯು ಮಾತನಾಡಬಹುದು. ಅಲ್ಲದೆ ತಮಿಳು,ತೆಲುಗು, ಮಲಯಾಳ೦, ಹಿ೦ದಿ ಹಾಗೂ ಆ೦ಗ್ಲ ಭಾಷೆಗಳಲ್ಲೂ ಸಹ ಜನರು ನಿಮ್ಮೊಡನೆ ಮಾತನಾಡಬಲ್ಲರು.
ತಿಂಡಿ ತಿನಿಸು:
ಮಸಾಲೆ ಚಹಾ : ಊಟಿಯಲ್ಲಿ ಹಲವಾರು ಬಗೆಯ ಚಹಾ ಸವಿಯುವುದೇ ಒಂದು ಅನುಭವ. ಮಸಾಲೆ, ಚಾಕ್ಲೆಟ್ , ನಿ೦ಬೆ ಹೀಗೆ ವಿವಿಧ ಬಗೆಗಳಲ್ಲಿ ದೊರಕುತ್ತವೆ.ನಾವು ಹೋದ ಕಡೆಯೆಲ್ಲಾ ಮಸಾಲೆ ಚಹಾವನ್ನೇ ಕೊ೦ಡೆವು. ಚಹಾ ಬೆಲೆ ಎಲ್ಲೆಡೆ ಒಂದೇ - ೧ ಕಪ್ ಗೆ ರೂ.೭/-. ನೀವು ಊಟಿಗೆ ಹೋದಾಗ ಊಟಿ ಚಹಾದ ವಿವಿಧ ಬಗೆಗಳ ರುಚಿ ಸವಿಯಲು ಮರೆಯದಿರಿ.
ಊಟಿ ಚಾಕ್ಲೆಟ್ : ಊಟಿಯಲ್ಲಿ ಚಾಕ್ಲೇಟು ಮಾಡುವ ಹಲವಾರು ಸಣ್ಣ ಸಣ್ಣ ಘಟಕಗಳನ್ನು ಕಾಣಬಹುದು ನಮಗೆ ಅವುಗಳನ್ನು ಕೊಳ್ಳುವಾಗ ಯಾವ ಫ್ಲೇವರ್ ತೆಗೆದುಕೊಳ್ಳುವುದೆ೦ಬುದೇ ಸಮಸ್ಯೆಯಾಯಿತು. ಅವಕ್ಕೆ ಯಾವುದೇ ನಿರ್ದಿಷ್ಟ ಆಕಾರವಿರಲಿಲ್ಲ.
ನೀಲಗಿರಿ ಎಣ್ಣೆ : ಊಟಿಯು ನೀಲಗಿರಿ ಪರ್ವತ ಶ್ರೇಣಿಯಲ್ಲಿ ಇರುವುದರಿಂದ ನೀಲಗಿರಿ ಎಣ್ಣೆಗೂ ಪ್ರಸಿದ್ದ. ಇಲ್ಲಿಯ ಬಹುತೇಕ ಅ೦ಗಡಿಗಳಲ್ಲಿ ನೀಲಗಿರಿ ಎಣ್ಣೆ ಸಿಗುತ್ತದೆ.
ನಮ್ಮ ಪ್ರವಾಸ
ನವಂಬರಿನ ದೀಪಾವಳಿ ರಜೆಯನ್ನು ಕಳೆಯಲು ನಾನು ನನ್ನ ಗೆಳತಿ ಊಟಿಗೆ ಹೋಗಲು ನಿರ್ಧರಿಸಿ ಬುಧವಾರ ೭ನೇ ತಾರೀಖು ೨೦೧೮ ಮು೦ಜಾನೆ ನಮ್ಮ ಪಯಣ ಮೈಸೂರಿನಿಂದ ಹೊರಡುವ ೬ ಗಂಟೆಯ ಬಸ್ಸಿನಲ್ಲಿ ಪ್ರಾರಂಭಿಸಿದೆವು. ಬಸ್ಸು ಗು೦ಡ್ಲುಪೇಟೆಯ ನ೦ತರ ಬ೦ಡೀಪುರ ಅರಣ್ಯ ಪ್ರದೇಶವನ್ನು ಹೊಕ್ಕು ಹಸಿರು ಕಾನನದ ನಡುವೆ ಹಾದು ಹೋಗುವಾಗ ಕಂಡುಬಂದ ಜಿಂಕೆ ಸಾರಂಗಗಳ ಗುಂಪು,ಆನೆಗಳ ಹಿಂಡು, ಕಾಡೆಮ್ಮೆ, ನವಿಲುಗಳನ್ನು ಕಂಡು ಕಣ್ಣುಗಳು ಕುಣ್ಣಿದಾಡಿದವು ಮನಸ್ಸು ಉಲ್ಲಾಸ ಗೊಂಡಿತು. ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳು ಪ್ರಯಾಣಕ್ಕೆ ಹಿತಕರವಾಗಿತ್ತು. ಕಾಡಿನ ಮಧ್ಯದಲ್ಲಿ ಹರಿಯುವ ರಸ್ತೆಗಳು ಛಾಯಾಚಿತ್ರ ತೆಗೆಯಲು ಆಹ್ವಾನಿಸುವ೦ತಿತ್ತು. ಬ೦ಡೀಪುರದ ಕಾಡು ಕಳೆದು ತಮಿಳು ನಾಡು ಗಡಿ ದಾಟಿ ಮುದುಮಲೈ ಅರಣ್ಯದ ನಡುವೆ ನಮ್ಮ ಪಯಣ ಮು೦ದುವರೆದು ಎತ್ತರವಾದ ಗುಲ್ ಮೊಹರ್
ಮರಗಳಿ೦ದ ಆವೃತವಾದ ಪ್ರದೇಶ ತಲುಪಿತ್ತು ಅಲ್ಲಿ ನೆಲದ ಮೇಲೆ ಹರಡಿದ ಗುಲ್ ಮೊಹರ್ ಹೂಗಳು, ಸಮೀಪದಲ್ಲೊ೦ದು ತೊರೆ ಆ ತೊರೆಯಲ್ಲಿ ಮೀಯುತ್ತಿದ್ದ ಆನೆಗಳ ಹಿಂಡು - ಆ ದೃಶ್ಯ ನೋಡುವುದೇ ಕಣ್ಣಿಗೊ೦ದು ಹಬ್ಬ.ಊಟಿಗೆ ಹೋಗುವ ಮಾರ್ಗದಲ್ಲಿ ತೆಪ್ಪಕಾಡು ಎ೦ಬಲ್ಲಿ ನಮಗೆ ಊಟಿ ತಲುಪಲು ಎರಡು ಆಯ್ಕೆಗಳಿದ್ದವು - ಒ೦ದು ಕಲ್ಹಟ್ಟಿ ಘಾಟಿ ಮಾರ್ಗ(ಸ್ವಂತ ವಾಹನದಲ್ಲಿ ಹೋಗುವವರು ಈ ಮಾರ್ಗದಲ್ಲಿ ಹೋಗಬಹುದು ),ಕಲ್ಹಟ್ಟಿ ದಾರಿಯಲ್ಲಿ ೩೬ ಕಡಿದಾದ ತಿರುವುಗಳನ್ನು ದಾಟಿ ಹೋಗಬೇಕಂತೆ. ಮತ್ತೊ೦ದು ಗುಡಲೂರು ಮೂಲಕವಾಗಿ ಹೋಗುವುದು.ಬಸ್ಸು ಗುಡಲೂರು ಮೂಲಕವಾಗಿ ಊಟಿಯ ಕಡೆ ಸಾಗಿತು..... ಊಟಿಗೆ ಜನನಿಬಿಡ ಪ್ರದೇಶವಾಗಿದ್ದು ಅಷ್ಟೇನು ಜನಜಂಗುಳಿ ಇರಲ್ಲಿಲ್ಲ ಇದ್ದವರಲ್ಲಿ ಹೆಚ್ಚು ಜನ ಪ್ರವಾಸಿಗರೇ - ಉದಕಮ೦ಡಲ, ಒಟಕ್ಮ್೦ಡ್, ಒಟ್ಕಿಮ೦ಡ್ ಅಥವಾ ಊಟಿ ಎ೦ದೆಲ್ಲಾ ಕರೆಯಲ್ಪಡುವ ಈ ಸ್ಥಳ ನಿಸರ್ಗ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಪೂರ್ವದ ಸ್ಕಾಟ್ ಲ್ಯಾ೦ಡ್, ನೀಲಗಿರಿ ಬೆಟ್ಟಗಳ ರಾಣಿ ಎ೦ಬೆಲ್ಲ ವಿಶೇಷಣಗಳು ಊಟಿಯ ವೈವಿಧ್ಯತೆ ಮತ್ತು ಅಗಾಧತೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ನೋಡಿಯೇ ಸವಿಯಬೇಕು.ಹಲವಾರು ಚಹಾ ಉತ್ಪಾದನಾ ಘಟಕಗಳು ಇಲ್ಲಿರುವಾಗ ಅದೇನೂ ಆಶ್ಚರ್ಯವಲ್ಲ ಬಿಡಿ. ಬೆ೦ಗಳೂರಿನಿ೦ದ ಊಟಿ ತಲುಪಲು ನಾವು ಹಿಡಿದ ದಾರಿ ಇಲ್ಲಿದೆ : ಬೆ೦ಗಳೂರು - ಮೈಸೂರು - - ಗು೦ಡ್ಲುಪೇಟೆ - ಬ೦ಡೀಪುರ ಅರಣ್ಯ ಪ್ರದೇಶ - ಮುದುಮಲೈ ಅರಣ್ಯ ಪ್ರದೇಶ - ತೆಪ್ಪಕಾಡು - ಗುಡಲೂರು ಮಾರ್ಗವಾಗಿ ಊಟಿ-ಕೂನೂರು)
ನೀಲಗಿರಿ ಹೆರಿಟೇಜ್ ಟ್ರೈನ್:(ಇದನ್ನು ನೀಲಗಿರಿ ಟಾಯ್ ಟ್ರೈನ್ ಎ೦ದೂ ಕರೆಯಲಾಗುತ್ತೆ)
ನಮಗೆ ಊಟಿಗಿಂತ ಕೂನೂರಿಗೆ ಹೋಗುವ ಆತುರವಿದ್ದುದ್ದರಿಂದ ಪಕ್ಕದ ಗಿರಿಧಾಮವಾದ ಕುನೂರಿನ ಪ್ರೇಕ್ಷಣೀಯ ಸ್ಥಳಗಳನ್ನು ಮೊದಲು ಸ೦ದರ್ಶಿಸುವ ಯೋಜನೆ ಹಾಕಿಕೊ೦ಡೆವು. ೧೧.೩೦ಕ್ಕೆ ಊಟಿ ತಲುಪಿದ ತಕ್ಷಣ ಉದಕಮಂಡಲ ರೈಲ್ವೆನಿಲ್ದಾಣದ ಕಡೆ ಸಾಗಿದೆವು ಇಲ್ಲಿ ರೈಲು ಹೊರಡುವ ಅರ್ಧ ಗ೦ಟೆ ಮು೦ಚೆ ಟಿಕೆಟ್ ಕೊಡಲಾಗುತ್ತೆ ಇದಕ್ಕೆ ಜನಜ೦ಗುಳಿಯಾಗುವ ಸಾಧ್ಯತೆಯಿದ್ದುದರಿ೦ದ ನಾನು ಟಿಕೆಟ್ ಗಾಗಿ ಸಾಲಲ್ಲಿ ನಿ೦ತೆನು (ಒಬ್ಬರಿಗೆ ಗರಿಷ್ಠ ನಾಲ್ಕು ಟಿಕೆಟ್ ಕೊಡಲಾಗುತ್ತದೆ).ಎರಡು ಬಗೆಯ ಟಿಕೇಟುಗಳಿದ್ದವು - ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ. ಇವುಗಳಿಗೆ ಕ್ರಮವಾಗಿ ರೂ. ೭೫ ಹಾಗೂ ರೂ,೩೫ ನಿಗದಿಯಾಗಿತ್ತು. ನಾವು ಪ್ರಥಮ ದರ್ಜೆ ಟಿಕೇಟು ಕೊ೦ಡೆವು. ಆದರೆ ನಮಗೆ ಎರಡು ದರ್ಜೆಗಳಲ್ಲಿ ಮಹತ್ತರ ವ್ಯತ್ಯಾಸವೇನೂ ಕಾಣಲಿಲ್ಲ. ಪ್ರಥಮ ದರ್ಜೆಯಲ್ಲಿ ಸಾಲೊ೦ದರಲ್ಲಿ ೪ ಸೀಟುಗಳಿದ್ದರೆ, ಎರಡನೇ ದರ್ಜೆಯಲ್ಲಿ ೫ ಸೀಟುಗಳಿದ್ದವು. ಪ್ರಥಮ ದರ್ಜೆ ಕುಶನ್ ಸೀಟು ಕೊ೦ಚ ದಪ್ಪಗಿತ್ತು ಬಿಟ್ಟರೆ ಬೇರಾವ ವ್ಯತ್ಯಾಸವಿರಲಿಲ್ಲ. ಮಧ್ಯಾಹ್ನದ ೧೨.೩೦ಕ್ಕೆ ಹೊರಡುವ ರೈಲಿಗೆ ಹೊರಟು ಮಧ್ಯಾಹ್ನ ೨.೩೦ಕ್ಕೆ ಕೂನೂರು ತಲುಪಿದೆವು. ಪ್ರಕೃತಿಯ ನಡುವಿನಲ್ಲಿ ಹಾದೂ ಹೋಗುವ ಟ್ರೈನಿನ ಪ್ರಯಾಣ ಅದ್ಭುತ ಎನಿಸದಿದ್ದರೂ ಆ ಹಸಿರಿನ ನಡುವಿನ ಪಯಣ ಮರೆಯಲಾಗದ ಖುಷಿಯನ್ನು ನೀಡಿತು. ಬಹುಶ: ಅದರ ಬಗ್ಗೆ ಬಹಳವಾಗಿ ಕೇಳಿದ್ದರಿ೦ದ ನನ್ನಲ್ಲಿ ಅತಿ ನಿರೀಕ್ಷೆಗಳಿದ್ದವು.
ಹಿತವಾದ ಹವಾಮಾನ : ಕುನೂರು ಉತ್ತಮ ಹವಾಮಾನಕ್ಕೆ ಹೆಸರುರಾಗಿದ್ದು . ಚಳಿಗಾಲದಲ್ಲಿ ಹೆಚ್ಚು ಚಳಿಯಿದ್ದರೂ, ಬೇಸಿಗೆಯಲ್ಲಿ ಹಿತವಾಗಿರುತ್ತದೆ. ಮುಂಗಾರಿನಲ್ಲಿ ಹೆಚ್ಚು ಮಳೆಯಾಗುವುದರಿಂದ ತುಸು ಕಷ್ಟಕರ. ಭಾರಿ ಮಳೆ ಅಥವಾ ಕೊರೆಯುವ ಚಳಿ ಪ್ರವಾಸಕ್ಕೆ ಯೋಗ್ಯವಲ್ಲದ ಕಾರಣ ಮಳೆಗಾಲದಲ್ಲಿ ಕುನೂರು ಪ್ರವಾಸ ಸೂಕ್ತವಲ್ಲವಂತೆ. ಆದರೂ ಮಳೆಗಾಲದ ತಾಜಾ ಹಸಿರಿನ ಪರಿಸರ ಸವಿಯ ಬಯಸುವವರು ಪ್ರವಾಸ ಮಾಡಬಹುದು.ಕೂನೂರು ತಲುಪಿದ ತಕ್ಷಣ ಊಟ ಮುಗಿಸಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳ ಕಡೆ ಪಯಣ:- ಮೊದಲಿಗೆ ಆಟೋ ಟ್ಯಾಕ್ಸಿ ವಿಚಾರಿಸಿದೆವು ಅದು ದುಬಾರಿ ಎನಿಸಿದ್ದರಿಂದ... ಅಲ್ಲಿನ ಬಸ್ಸು ನಿರ್ವಾಹಕರನ್ನು ವಿಚಾರಿಸಿದಾಗ ಎಲ್ಲ ಕಡೆಗೂ ಬಸ್ಸಿನ ವ್ಯವಸ್ಥೆ ಇರುವುದನ್ನು ತಿಳಿಸಿದರು ಮತ್ತು ಎಲ್ಲ ಪ್ರೇಕ್ಷಣೀಯ ಸ್ಥಳಗಳ ಭೇಟಿಯ ಸಮಯ ಸಂಜೆ ೬ ರವರೆಗೂ ಮಾತ್ರ ಎಂದು ತಿಳಿಸಿದರು. ಮಧ್ಯಾಹ್ನ ೩ ಗಂಟೆ ಆಗಿದ್ದರಿಂದ ನಾವು... ಮೊದಲು ಸಿಮ್ಸ್ ಪಾರ್ಕ್ ಕಡೆ ಹೊರೆಟೆವು ..
ಸಿಮ್ಸ್ ಪಾರ್ಕ್ : ಕುನೂರಿನ ಹೃದಯ ಭಾಗದಲ್ಲಿರುವ ಸಿಮ್ಸ್ ಪಾರ್ಕ್ ೧೦೦೦ ಕ್ಕಿ೦ತಲೂ ಹೆಚ್ಚು ಸಸ್ಯ ತಳಿಗಳು ಮತ್ತು ಗಗನ ಚು೦ಬಿ ಮರಗಳಿರುವ ಹಸಿರಿನ ತಾಣ. ಉದ್ಯಾನವನ ಮಧ್ಯದಲ್ಲಿರುವ ಕೆರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಇದೆ. ಇಲ್ಲಿರುವ ಹಸಿರು ಹುಲ್ಲು ಹಾಸಿನ ಮೇಲೆ ಒರಗಿಕೊ೦ಡು ವಿಶ್ರಾ೦ತಿ ಪಡೆಯಬಹುದು. ಇದಾದ ನ೦ತರ ನಮ್ಮ ಪಯಣ .
ಚಾಕೋಲೆಟ್ ಕಾರ್ಖಾನೆ ಕಡೆಗೆ : ಇಲ್ಲಿನ ಜನರ ಜೀವನಾಧಾರವೇ ಚಹಾ ಬೇಸಾಯ ಹಾಗೂ ಅದರ ವ್ಯಾಪಾರವಾದರೂ .ಇಲ್ಲಿನ ಮತ್ತೊಂದು ವೈಶಿಷ್ಟ್ಯವೆಂದರೆ, ಮನೆಯಲ್ಲಿ ತಯಾರಾಗುವ ಚಾಕೋಲೆಟ್‌ಗಳು. ಕೂನೂರಿನ ಪ್ರತಿಯೊಂದು ಬೀದಿಗಳಲ್ಲೂ ಹೋಮ್ ಮೇಡ್ ಚಾಕೋಲೆಟ್‌ಗಳು ದೊರೆಯುತ್ತವೆ. ಅಲ್ಲಿನ ಚಾಕೋಲೆಟ್ ಸವಿಯುತ್ತಾ ನಮ್ಮ ಪಯಣ .... (ಟೀ ಫ್ಯಾಕ್ಟರಿ) ಚಹಾ ಕಾರ್ಖಾನೆ :ವಿಸ್ತಾರವಾದ ಚಹಾ ತೋಟಗಳ ಸೊಬಗು ಅದರ ಮಧ್ಯೆ ಇರುವ ಚಹಾ ಕಾರ್ಖಾನೆ ಹೊಕ್ಕು ಚಹಾ ಪುಡಿ ಮಾಡುವ ವಿಧಾನವನ್ನು ನೋಡಿದಾಗ ನಾವುಗಳು ಬೆಳ್ಳಿಗೆ ಎದ್ದ ತಕ್ಷಣ ಸವಿಯುವ ಚಹಾದ ಹಿಂದೆ ಎಷ್ಟು ಜನರ ಶ್ರಮ ಅಡಗಿದೆ ..ರೈತರ ಶ್ರಮಜೀವಿಗಳ ಬೆವರಿನ ಹನಿ ಚಹಾ ರೂಪ ಧರಿಸಿ ನಮ್ಮ ಕೈ ಸೇರುತ್ತದೆ .... ಆರೋಗ್ಯವನ್ನು ಕೆಡಿಸುವ ವಿದೇಶಿಯ ಪಾನೀಯಗಳನ್ನು ಸೇವಿಸುವುದಕ್ಕಿಂತ ..ಆರೋಗ್ಯ ಮತ್ತು ಮನಸ್ಸಿಗೆ ಉಲ್ಲಾ ಸ ನೀಡುವ ಚಹಾ ಸವಿಯುತ್ತಾ ನಮ್ಮ ದೇಶದ ರೈತರ ಮತ್ತು ಶ್ರಮಜೀವಿಗಳ ಬದುಕನ್ನು ಹಸನಾಗಿಸೋಣ ................ಸಂಜೆ ಯಾಯಿತು.... ಇಲ್ಲಿಗೆ ಇಂದಿನ ಪ್ರಯಾಣಕ್ಕೆ ಮುಕ್ತಾಯ ಹೇಳಿ .....
ರಾತ್ರಿ ತಂಗುವ ಕೊಠಡಿ ಕೂನೂರು ರೈಲ್ವೆ ನಿಲ್ದಾಣದಲ್ಲಿ ಪ್ರವಾಸಿಗರು ಉಳಿದು ಕೊಳ್ಳುವ ಕೊಠಡಿ (ರಿಟೈರ್ಡ್ ರೂಮ್) ಗಳ ವ್ಯವಸ್ಥೆ ಇದೆ.(ಇಬ್ಬರು ಉಳಿದುಕೊಳ್ಳುವ ಕೊಠಡಿಗೆ ೧೦೦೦+ಜಿ ಎಸ್ ಟಿ ನಾಲ್ಕು ಜನರು ಉಳಿದುಕೊಳ್ಳುವ ಕೊಠಡಿಗೆ ೧೬೦೦+ಜಿ ಎಸ್ ಟಿ) (ಪ್ರತಿ ಕೊಠಡಿಯಲ್ಲೂ ರೂಮ್ ಹೀಟರ್ ಇದೆ) ಅಲ್ಲಿಯೇ ಒಂದನು ಬುಕ್ ಮಾಡಿ .. ಸ್ವಲ್ಪ ಹೂತ್ತು ವಿಶ್ರಾಂತಿ ಪಡೆದು ನಂತರ ರಾತ್ರಿ ಊಟ ಶಾಪಿಂಗ್ .... ರಾತ್ರಿ ಸಮಯದಲ್ಲಿ ತುಂಬಾ ಚಳಿಯಿರುತ್ತದೆ....
ಪ್ರವಾಸದ ೨ನೇ ದಿನ
ಲ್ಯಾ೦ಬ್ಸ್ ರಾಕ್ : ಬೆಳಿಗ್ಗೆಯ ಚಳಿಗೆ ಮಸಾಲ ಚಹಾ ಒಳ್ಳೆಯ ಆಹ್ಲಾದ ನೀಡಿತು. ಚಹ ಕುಡಿದು ಕೂನೂರು ಬಸ್ ನಿಲ್ದಾಣದಿಂದ ೭. ೪೦ಕ್ಕೆ ಹೊರಡುವ ಬಸ್ಸಿನಲ್ಲಿ ಲ್ಯಾ೦ಬ್ಸ್ ರಾಕ್ ಕಡೆಗೆ ಪಯಣ....ಕುನೂರಿನಿ೦ದ ೮ ಕಿ.ಮೀ ದೂರದಲ್ಲಿರುವ ಈ ಸ್ಥಳ ಕೂಡ ಬೆಟ್ಟಗುಡ್ಡಗಳಿ೦ದ ಆವೃತವಾಗಿ ಪ್ರಕೃತಿ ಸೌ೦ದರ್ಯವನ್ನು ಕಣ್ಣಿಗೆ ಉಣ್ಣಬಡಿಸಿತ್ತು. ದಾರಿಯುದ್ದಕ್ಕೂಬಿಳಿ ನೀಲಿ ಮೋಡಗಳ ಆಟ ಅದರ ಮಧ್ಯೆ ಆಗಾಗ ಇಣುಕುವ ಸೂರ್ಯರಶ್ಮಿ ಮಿಂಚು ಇದನ್ನು ನೋಡಿ ಕುವೆಂಪುರವರ ಕವನ (ಬಿತ್ತರದಾಗಸ ಹಿನ್ನಲೆಯಾಗಿರೆ ಪರ್ವತದೆತ್ತರ ಸಾಲಾಗೆಸೆದಿರೆ ಕಿಕ್ಕಿರಿದಡವಿಗಳಂಚಿನ ನಡುವೆ)ನೆನೆಪಾಯಿತು ಟೀ ಎಸ್ಟೇಟ್‌ಗಳು, ಆಳ ಪ್ರಪಾತಗಳ ನಡುವೆ ಪಯಣ ಮನಸ್ಸಿಗೆ ಮುದನೀಡಿತು. ಲ್ಯಾ೦ಬ್ಸ್ ರಾಕ್ ೯.೩೦ಕ್ಕೆ ಡಾಲ್ಫಿನ್ಸ್ ನೋಸ್ ಗೆ ಬಸ್ಸಿರುವುದನ್ನು ನಿರ್ವಾಹಕರಿಂದ ತಿಳಿದು ಕೊಂಡು. ಬಸ್ ಇಳಿದು ಅರ್ಧ ಕಿ ಮೀ ಹಸಿರಿನ ನಡುವೆ ನಡೆದು ಲ್ಯಾ೦ಬ್ಸ್ ರಾಕ್ ಸೇರಿದೆವು.... ಅಲ್ಲಿ ಸ್ವಲ್ಪ ಹೊತ್ತು ಕಳೆದು ಬರುವಷ್ಟರಲ್ಲಿ ಬಸ್ ಬಂತು ..... ಡಾಲ್ಫಿನ್ಸ್ ನೋಸ್ ಕಡೆ ಪಯಣ......
ಡಾಲ್ಫಿನ್ಸ್ ನೋಸ್:ಈ ಸ್ಥಳ ಕೂಡ ಬೆಟ್ಟಗುಡ್ಡಗಳಿ೦ದ ಆವೃತವಾಗಿದ್ದು ಮೋಡಗಳ ಸರಮಾಲೆ ನಡುವೆ ಪಯಣ .... ಲ್ಯಾ೦ಬ್ಸ್ ರಾಕ್ ನಿ೦ದ ೨ ಕಿ.ಮೀ ದೂರದಲ್ಲಿರುವ ಡಾಲ್ಫಿನ್ಸ್ ನೋಸ್ ನಲ್ಲಿ ಬಸ್ ಇಳಿದು ಅರ್ಧ ಕಿ ಮೀ ನಡುವೆ ನಡೆದು ಸಾಗುವ ದಾರಿ ಒ೦ದು ಭಾಗ ಬೆಟ್ಟ ಗುಡ್ಡಗಳಿ೦ದ ಆವೃತವಾಗಿದ್ದರೆ ಮತ್ತೊ೦ದೆಡೆ ಚಹಾ ತೋಟಗಳಿ೦ದ ತು೦ಬಿತ್ತು ... ಡಾಲ್ಫಿನ್ ಮೂಗಿನ೦ತಿರುವ ಯಾವುದೇ ಪ್ರಕೃತಿಯ ಆಕಾರ ಕಾಣದಿದ್ದರೂ ಈ ಸ್ಥಳ ಕೂಡ ರುದ್ರರಮಣೀಯವಾಗಿತ್ತು. ನವಂಬರ್ ೮ ೨೦೧೮ ಬೆಳಿಗ್ಗೆ ನಾವಿಲ್ಲಿ ಭೇಟಿ ಇತ್ತೆವು.(ಬಿತ್ತರದಾಗಸ ಹಿನ್ನಲೆಯಾಗಿರೆ ಪರ್ವತದೆತ್ತರ ಸಾಲಾಗೆಸೆದಿರೆ ಕಿಕ್ಕಿರಿದಡವಿಗಳಂಚಿನ ನಡುವೆ ಮೆರೆದಿರೆ ಜಲಸುಂದರಿ ) ಇಲ್ಲಿ೦ದ ಕ್ಯಾಥರೀನ್ ಜಲಪಾತವನ್ನು ನೀವು ಕಾಣಬಹುದು. ಅಲ್ಲಿ ಸ್ವಲ್ಪ ಸಮಯ ಕಳೆದ ನ೦ತರ ಕುನೂರಿಗೆ ೧೨ಕ್ಕೆ ಇರುವ ಬಸ್ ನಲ್ಲಿ ಹಿ೦ತಿರುಗಿದೆವು... ಊಟ ಮುಗಿಸಿ ಅಲ್ಲಿಂದ ....ಮೆಟ್ಟುಪಾಳ್ಯಮ್ ಕಡೆ .... ಪಯಣ
ಮೆಟ್ಟುಪಾಳ್ಯ೦: ನೀಲಗಿರಿ ಹೆರಿಟೇಜ್ ಟ್ರೈನ್ (ಕುನೂರು ನಿ೦ದ ೩.೧೫ಕ್ಕೆ ಹೊರಟು ೫.೩೦ಕ್ಕೆ ಮೆಟ್ಟುಪಾಳ್ಯ೦ ತಲುಪುತ್ತದೆ. ಇಲ್ಲಿಂದ ಮೆಟ್ಟುಪಾಳ್ಯ೦ ಕೇವಲ ೫ರಿಂದ ೧೦ ಟಿಕೇಟ್ ಮಾತ್ರ ಕೊಡಲಾಗುತ್ತದೆ.ಟ್ರೈನ್ ಬರುವ ಅರ್ಧ ಗಂಟೆ ಮೊದಲು ಟಿಕೇಟ್ ವಿತರಿಸಲಾಗುತ್ತದೆ. ಕುನೂರಿನಿ೦ದ ಮೆಟ್ಟುಪಾಳ್ಯ೦ಗೆ ನೀಲಗಿರಿ ಪ್ಯಾಸೆಂಜರ್ ರೈಲು ಬೆಟ್ಟ-ಗುಡ್ಡಗಳ ನಡುವೆ ಓಲಾಡುತ್ತಾ ಸಾಗುವ ಪರಿಯೇ ಅನನ್ಯ. ದಟ್ಟ ಕಾಡು, ಉದ್ದಾನುದ್ದ ಹರಡಿಕೊಂಡಿರುವ ಬಯಲು, ಟೀ ಎಸ್ಟೇಟ್‌ಗಳು, ಆಳ ಪ್ರಪಾತಗಳ ನಡುವೆ ಸಾಗುವುದು ಎದೆ ಝಲ್ಲೆನಿಸುವ ಅನುಭವ.............. ಟ್ರೈನಿನ ಪ್ರಯಾಣ ಸುರ೦ಗಗಳ ಮೂಲಕ, ಜಲಪಾತ ಬೆಟ್ಟ ಗುಡ್ಡಗಳ ನಡುವಿನಲ್ಲಿ ಹಾದೂ ಹೋಗುವ ದಾರಿ ಅಮೋಘ ಆದ್ಭುತ ಅವಿಸ್ಮರಣೀಯ ... ಟ್ರೈನ್ ಕಿಟಕಿಗಳಿ೦ದ ಕಾಣುವ ಪ್ರಕೃತಿ ಸೊಬಗನ್ನು ಕ್ಯಾಮರಾದಲ್ಲಿ ಸೆರೆಹಿಡಿದ ನಾನು ಟ್ರೈನ್ ಪ್ರಯಾಣದ ಹಲವು ವಿಡೀಯೋಗಳನ್ನು ತೆಗೆದದ್ದರಿ೦ದ ಮೊಬೈಲ್ ಬ್ಯಾಟರಿ ಇನ್ನೇನು ಖಾಲಿಯಾಗತೊಡಗಿತು ...... ಇಲ್ಲಿನ ನೀಲಗಿರಿ ಮೌಂಟೇನ್ ರೈಲ್ವೇ ದೇಶದ ಮೊದಲ ಗುಡ್ಡಪ್ರದೇಶದ ರೈಲು ನಿಲ್ದಾಣ ಅನ್ನೋದು ಕೂಡ ವಿಶೇಷ..... ರೈಲ್ವೆ ಸಂಗ್ರಹಾಲಯ ನೋಡಿಕೊಂಡು ಶಾಪಿಂಗ್ ಮುಗಿಸಿ ಬಸ್ಸಿನಲ್ಲಿ ಊಟಿಗೆ ಕಡೆ ಪಯಣ ...ರಾತ್ರಿ ೯ಕ್ಕೆ ಊಟಿ ತಲುಪಿದೆವು.... ೩ನೇ ದಿನ ಊಟಿಯ ಪ್ರೇಕ್ಷಣೀಯ ಸ್ಥಳಗಳ ಕಡೆಗೆ .... ನಮ್ಮ ಪಯಣ ನೀಲಗಿರಿ ಪರ್ವತ ಶ್ರೇಣಿಯ ನೀಲ ಬೆಟ್ಟಗಳಡೆಯಲ್ಲಿ ನೀಲಿ-ಹಸಿರು ರಾಶಿಯ ನಡುವೆ ಘಮ್ಮನೆಂದು ಮೈ ತಳೆದು ನಿಂತಿರುವ ಭೂಲೋಕದ ಸ್ವರ್ಗವಿದು. ನಿಸರ್ಗದ ಚೆಲುವಿಗೆ ಮನುಷ್ಯ ಕುಸುರಿ ಇಟ್ಟ ಧರೆಗಿಳಿದ ಹಸಿರುಲೋಕವಿದು ದಟ್ಟ ಕಾಡು, ಎತ್ತರೆತ್ತರದ ನೀಲಗಿರಿ ಮರಗಳ ತನ್ಮಯತೆ, ವಿಸ್ತಾರವಾದ ಚಹಾ ತೋಟಗಳ ಸೊಬಗು, ಜಗತ್ತಿನಲ್ಲೆಲ್ಲೂ ಕಾಣದ ಅಪರೂಪದ ಹೂಗಳ ಘಮ, ಇದುವರೆಗೂ ತಿಂದೇ ಇರದ ಹಣ್ಣುಗಳ ಮಧುರ ಸ್ವಾದ. ದಿನವಿಡೀ ಮೇಘಗಳ ಮಾಲೆ, ಒಮ್ಮೆ ದೃಶ್ಯವಾಗಿ ಮತ್ತೊಮ್ಮೆ ಅದೃಶ್ಯವಾಗುವ ಲೀಲೆ. ಊಟಿಗೆ ಊಟಿಯೇ ಸಾಟಿ!
ಶೂಟಿ೦ಗ್ ಮೆದು: ಹೆಸರೇ ಹೇಳುವ೦ತೆ ಇದು ಚಿತ್ರೀಕರಣಕ್ಕೆ ಮೀಸಲಾದ ಸ್ಥಳ. ಇಲ್ಲಿ ಲೆಕ್ಕವಿಲ್ಲದಷ್ಟು ಚಿತ್ರಗಳ ಚಿತ್ರೀಕರಣ ನಡೆದಿದೆಯಂತೆ. ಅದರಲ್ಲೂ ಇಲ್ಲಿ ಹಾಡುಗಳ ಚಿತ್ರೀಕರಣವೇ ಜಾಸ್ತಿಯಂತೆ. ಇಳಿಜಾರಿನಿ೦ದ ಕೂಡಿದ ಹುಲ್ಲುಗಾವಲನ್ನು ಬೆಟ್ಟ, ಗುಡ್ಡ, ಕಾಡುಗಳು ಆವರಿಸಿವೆ. ಇದನ್ನು ನೋಡಿದ ನಂತರ ನಮ್ಮ ಪಯಣ ...
ಕಾಮರಾಜ್ ಸಾಗರ ಜಲಾಶಯ: ಜಲಾಶಯದ ಸುತ್ತಲೂ ಹಚ್ಚಹಸಿರಿನಿ೦ದ ತು೦ಬಿರುವ ಕಾಮರಾಜ್ ಸಾಗರ ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣ. ಪಿಕ್ನಿಕ್ ಗೂ ಹೇಳಿಮಾಡಿಸಿದ ಜಾಗದ೦ತಿದೆ. ತಮಿಳು ಚಿತ್ರ ರೋಜಾ ಚಿತ್ರದ ಅದ್ಬುತ ಕೊನೆ ಭಾಗದ ಚಿತ್ರೀಕರಣ ಮಾಡಿರುವುದು ಇಲ್ಲೇಯಂತೆ. ... ಮುಂದಿನ ಪಯಣ ....೯ ನೇ ಮೈಲಿ ಕಡೆ
೯ನೇ ಮೈಲಿ:
ಪ್ರವೇಶ ದರ ೫ರೂಗಳು ...
ಹಸಿರಿನಿಂದ ಕೂಡಿದ ತುಂಬಾ ತಂಪಾದ ಚಿತ್ರೀಕರಣ ನಡೆಯುವ ಮತ್ತೊಂದು ಸ್ಥಳ ಬೆಟ್ಟ ಗುಡ್ದಗಳಿಂದ ಆವೃತವಾದ ದಟ್ಟಕಾನನದ ನಡುವೆ ಇರುವ ಮನಮೋಹಕ ತಾಣ ಉದ್ದವಾದ ಮರಗಳು .... ಇಲ್ಲಿನ ದಿಬ್ಬವನ್ನು ಹತ್ತುವಾಗ ತಂಪಾಗಿ ಬೀಸುವ ಗಾಳಿ,ಆಕಾಶವೇ ಕೈಗೆಟುಕುತ್ತೆನೋ ಏನೋ ಅನುಭವ ... ಇಲ್ಲಿನ ಗುಡ್ಡದ ಮೇಲೆ ಕುಳಿತು ನೋಡಿದಾಗ ಆಕಾಶ ಭೂಮಿ ಒಂದಾದಂತೆ ಕಾಣುವ ನೋಟ... ಇಲ್ಲಿ ಕುದುರೆ ಸವಾರಿ ಮಾಡಬಹುದು ಒಬ್ಬರಿಗೆ ೧೫೦ರೂಗಳು.... ತೋಡ ಬುಡಕ್ಕಟ್ಟು ಜನಾಂಗಕ್ಕೆ ಸೇರಿದ ಮನೆಯ ನಕಲನ್ನು ಇಲ್ಲಿ ನಿರ್ಮಿಸಿದ್ದಾರೆ ಮತ್ತು ಅವರು ಮದುವೆಯಾಗುವುದು ಒಂದು ಜಾತಿಯ ಮರದ ಕೆಳಗೆ ಆ ಮರವನ್ನು ಇಲ್ಲಿ ಕಾಣಬಹುದು ಮತ್ತು ಅವರು ಮದುವೆಯಾದ ವಧುವರರಿಗೆ ಕಾಲಿನಿಂದ ಆಶೀರ್ವಾದ ಮಾಡುತ್ತಾರಂತೆ.
ಪೈಕಾರ್ ಜಲಪಾತ : ಪ್ರವೇಶ ದರ ೧೦ ರೂಗಳು.. ಪೈಕಾರ್ ಜಲಪಾತಕ್ಕೆ ಒಂದು ಕಿ ಮೀ ನಡೆಯಬೇಕು.... ಝಳ ಝಳ ಹರಿಯುವ ನೀರಿನ ನಾದವನ್ನು ಸವಿಯುತ್ತಾ ಸಣ್ಣದಾದ ಜಲಪಾತ ನೋಡಿದ ನಂತರ ನಮ್ಮ ದಾರಿ ... ಮುದುಮಲೈ ರಾಷ್ಟ್ರೀಯ ಉದ್ಯಾನ
ಮುದುಮಲೈ ರಾಷ್ಟ್ರೀಯ ಉದ್ಯಾನ ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಅಭಯಾರಣ್ಯ ನಿಜವಾಗಿಯೂ ಅತೀವ ಉಲ್ಲಾಸ ನೀಡುವ ಒಂದು ಸುಂದರ ಪ್ರಕೃತಿಯ ತಾಣ. ಇದು ಸ್ಥಿತವಾಗಿರುವ ಸ್ಥಳವನ್ನು ಗಮನಿಸಿದಾಗ, ಇದು ಎಂತಹ ರೋಮಾಂಚಕ ಜಾಗದಲ್ಲಿ ನೆಲೆಸಿದೆ ಅನ್ನಿಸುವುದು ಸುಳ್ಳಲ್ಲ .ಈ ರಕ್ಷಿತ ಅಭಯಾರಣ್ಯದ ಉತ್ತರಕ್ಕೆ ಕರ್ನಾಟಕದ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳಿದ್ದರೆ, ಪಶ್ಚಿಮಕ್ಕೆ ಕೇರಳದ ವಯನಾಡ್ ಅಭಯಾರಣ್ಯ, ದಕ್ಷಿಣಕ್ಕೆ ಮುಕ್ರುತಿ ಹಾಗೂ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನಗಳು ಸ್ಥಿತಗೊಂಡಿವೆಯಂತೆ. ಅಷ್ಟೆ ಅಲ್ಲ, ಪೂರ್ವಕ್ಕೆ ಸಿಗೂರ್ ಪ್ರಸ್ಥಭೂಮಿಯಿದ್ದು ಸತ್ಯಮಂಗಲಂ ಅರಣ್ಯಕ್ಕೆ ಸಂಪರ್ಕ ಬೆಸೆಯುತ್ತದೆಯಂತೆ ಇಲ್ಲಿ ಕಾಡಿನ ಸಂಚಾರ ವ್ಯವಸ್ಥೆ ಇದ್ದು ಪ್ರತಿದಿನ ಸಂಜೆ ೩. ೩೦ಕ್ಕೆ ಸಫಾರಿ ಇರುತ್ತದೆ ಒಬ್ಬರಿಗೆ ೩೫೦ ರೂ. ತೆಪ್ಪಕಾಡು ಆನೆ ಶಿಬಿರ ಇದೆ ಈ ಶಿಬಿರದಲ್ಲಿ ಬೆಳಗ್ಗೆ ಮತ್ತು ಸಂಜೆ ಆನೆ ಸವಾರಿ ಮಾಡುವ ಅವಕಾಶವಿದೆಭೇಟಿಯ ಸಮಯ ; ಬೆಳಗ್ಗೆ ೫. ೩೦ ರಿಂದ ಸಂಜೆ - ೬.00 ಗಂಟೆಯವರೆಗೆ ಪ್ರವೇಶ ಶುಲ್ಕ ೨೦ ರೂಪಾಯಿ. ಹುಲಿ ಮೀಸಲು ಎಂದು ಘೋಷಿಸುವುದಕ್ಕಿಂತ ಮೊದಲು, ಇಲ್ಲಿ ಸುಮಾರು 350 ಕುಟುಂಬಗಳು ವಾಸಿಸುತ್ತಿದ್ದವಂತೆ .ಈ ಅರಣ್ಯದಲ್ಲಿ ಪ್ರಮುಖವಾಗಿ ಮೂರು ಘಟ್ಟಗಳಿದ್ದು, ಪ್ರತಿ ಘಟ್ಟಗಳು ವಿಭಿನ್ನವಾದ ವಾತಾವರಣವನ್ನು ಹೊಂದಿರುವುದು ಇದರ ವಿಶೇಷ. ಆದ್ದರಿಂದ ಒಂದು ಭಾಗದಲ್ಲಿ ಒಂದು ಪ್ರಮಾಣದಲ್ಲಿ ಮಳೆಯಾದರೆ ಇನ್ನೊಂದು ಭಾಗದಲ್ಲಿ ಮತ್ತೊಂದು ಪ್ರಮಾಣದಲ್ಲಿ ಮಳೆ ಬೀಳುವುದು ಸಾಮಾನ್ಯ.ದೇಶದಲ್ಲೆ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಹುಲಿಗಳಿರುವುದು ಮುದುಮಲೈ ಅಭಯಾರಣ್ಯದಲ್ಲಿ. ಪ್ರಸ್ತುತ, ಸುಮಾರು 9 ಚ.ಕಿ.ಮೀ ಪ್ರದೇಶಕ್ಕೆ ಕನಿಷ್ಠ ಒಂದು ಹುಲಿಯಿದೆಯಂತೆ.
ಕಾಡಿನ ತುಂಬೆಲ್ಲ ಹಲವು ಆಕರ್ಷಕ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ವೀಕ್ಷಣಾ ಗೋಪುರ, ಸಫಾರಿ, ಒಂಬೆಟ್ಟ ಕೆರೆ, ವರ್ತುಲ ರಸ್ತೆ, ಮರಳಿನ ರಸ್ತೆ, ಕಾರ್ಗುಡಿಯ ವೀಕ್ಷಣಾ ಕೇಂದ್ರ ಹೀಗೆ ಹತ್ತು ಹಲವಾರು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.ಮೈಸೂರಿನಿಂದ 100 ಕಿ.ಮೀ, ಊಟಿಯಿಂದ 39 ಕಿ.ಮೀ ಹಾಗೂ ಗುಡಲೂರಿನಿಂದ 3 ಕಿ.ಮೀ ದೂರವಿದೆ.....ನೋಡದೆ ಇರುವ ಸ್ಥಳಗಳನ್ನು ಮತ್ತೊಮ್ಮೆ ಬಂದು ನೋಡುವ ಆಸೆ ಹೊತ್ತು,ಪ್ರಕೃತಿಯ ಸುಂದರ ದೃಶ್ಯಗಳನ್ನು ಕಣ್ಣಿನಲ್ಲಿ ತುಂಬಿಕೊಂಡು ಸವಿ ಕ್ಷಣಗಳನ್ನು ಮನದಲ್ಲಿ ಮೆಲುಕು ಹಾಕುತ್ತಾ ಒಲ್ಲದ ಮನಸ್ಸಿನಿಂದ ಊಟಿಗೆ ವಿದಾಯ ಹೇಳಿ ಮೈಸೂರಿನತ್ತ ಪ್ರಯಾಣ ಬೆಳೆಸಿದೆವು....
Comments
ಊಟಿ ನೀನು ತುಂಬಾನೇ ಬ್ಯೂಟಿ...
ಮಾನ್ಯರೇ, ಸಂಪದದ ಹಳೆಯ ಪುಟಗಳನ್ನು ಗಮನಿಸುವಾಗ ನೀವು ಬರೆದ ಊಟಿ ಎಂಬ ಪ್ರವಾಸೀ ತಾಣದ ಬಗ್ಗೆ ಗಮಸಿದೆ. ಮಾಹಿತಿ ಪೂರ್ಣ ಲೇಖನ. ನಾನು ಸುಮಾರು ೨೫ ವರ್ಷಗಳ ಹಿಂದೆ ಹೋದಾಗಿನ ನೆನಪುಗಳು ಮರುಕಳಿಸಿದವು. ನಿಮ್ಮ ಬರಹ ತುಂಬಾ ಸವಿವರವಾಗಿದೆ. ಈ ಕೊರೋನಾ ಮಹಾ ಮಾರಿಯ ದಿಸೆಯಿಂದ ಪ್ರವಾಸ ಹೋಗುವುದೇ ಅಸಾಧ್ಯವಾದರೂ ಮುಂದೊಮ್ಮೆ ಮತ್ತೆ ಪ್ರವಾಸ ಹೋದಾಗ ನಿಮ್ಮ ಲೇಖನ ಉಪಕಾರಕ್ಕೆ ಬರುತ್ತೆ ಎಂದು ನನ್ನ ನಂಬಿಕೆ. ಈ ರೀತಿಯ ಹಾಗೂ ಹೊಸ ಹೊಸ ವಿಷಯಗಳ ಬಗ್ಗೆ ಈಗೇಕೆ ನೀವು ಬರೆಯುತ್ತಿಲ್ಲ? ಬರೆಯಿರಿ
ಅಶ್ವಿನ್