ಆನೆಸ್ನೇಹಿ ಅಸ್ಸಾಂ ಚಹಾ

Submitted by addoor on Sat, 12/29/2018 - 23:27

ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮೊತ್ತಮೊದಲಾಗಿ ತನ್ನ ಚಹಾ ಹುಡಿಗೆ “ಆನೆಸ್ನೇಹಿ ಚಹಾ” ಎಂಬ ಸರ್ಟಿಫಿಕೇಟ್ ಹಾಗೂ ಜಾಸ್ತಿ ಬೆಲೆ ಪಡೆದು ಸುದ್ದಿ ಮಾಡಿದೆ.
ಆ ಚಹಾ ತೋಟದ ಮಾಲೀಕ ತೆನ್ಜಿಂಗ್ ಬೊಡೊಸಾ. ಬ್ರಹ್ಮಪುತ್ರಾ ನದಿ ಕಣಿವೆ ಭೂತಾನಿನ ಬೆಟ್ಟಗಳನ್ನು ಸಂಧಿಸುವಲ್ಲಿ, ರಾಜಕೀಯವಾಗಿ ತಲ್ಲಣದಲ್ಲಿರುವ ಬೋಡೋಲ್ಯಾಂಡ್ ಪ್ರದೇಶದ ಅಂಚಿನಲ್ಲಿದೆ ಆ ಚಹಾ ತೋಟ. ಅದಕ್ಕೆ ಸರ್ಟಿಫಿಕೇಟ್ ನೀಡಿರುವುದು ಯುಎಸ್ಎ ದೇಶದ ಮೊಂಟಾನಾ ವಿಶ್ವವಿದ್ಯಾಲಯದ “ಬ್ರಾಡರ್ ಇಂಪಾಕ್ಟ್ಸ್ ಗ್ರೂಪ್”. ಈ ಯೋಜನೆಗೆ ವೈಲ್ಡ್ ಲೈಫ್ ಫ್ರೆಂಡ್ಲಿ ಎಂಟರ್-ಪ್ರೈಸ್ ನೆಟ್ ವರ್ಕ್ನ (ಡಬ್ಲ್ಯು.ಎಫ್.ಇ.ಎನ್.) ಸಹಭಾಗಿತ್ವ. ಇದು ನಿರ್ವಂಶವಾಗಬಹುದಾದ ವನ್ಯಜೀವಿಗಳ ಸಂರಕ್ಷಣೆಗಾಗಿ ಉತ್ಪನ್ನಗಳು ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಮೀಸಲಾದ ಜಾಗತಿಕ ಸಮುದಾಯ.

ಮೂವತ್ತೊಂದು ವರುಷ ವಯಸ್ಸಿನ ತೆನ್ಜಿಂಗ್ ಬೊಡೊಸಾ ಜಾಗತಿಕ ಮಟ್ಟಕ್ಕೆ ಏರಿಬಂದ ಹಾದಿ ಕುತೂಹಲಕಾರಿ. ಅಸ್ಸಾಂನ ಉದಾಲ್ಗುರಿ ಜಿಲ್ಲೆಯ ದಕ್ಷಿಣ ಕಹಿಬಾರಿ ಗ್ರಾಮದಲ್ಲಿ ಬೊಡೊಸಾ ಅವರ ವಾಸ. ಅಲ್ಲಿಗೆ ವಿದ್ಯುತ್ ಬಂದು ಕೇವಲ ಮೂರು ವರುಷಗಳಾಗಿವೆ, ಅಷ್ಟೇ! ಅಲ್ಲಿನ ನಿವಾಸಿಗಳು ಸಣ್ಣರೈತರು. ಬೊಡೊಸಾರ ಕುಟುಂಬ ಭತ್ತ ಬೆಳೆಸುತ್ತಿತ್ತು. ಅವರ ತಂದೆಯ ಮದುವೆಯಾದಾಗ ಬಳುವಳಿಯಾಗಿ ಬಂದಿದ್ದವು ಕೆಲವು ದನ ಮತ್ತು ಎಮ್ಮೆಗಳು. ಅವುಗಳ ಜೊತೆಗೆ ಕೋಳಿ ಮತ್ತು ಆಡುಗಳ ಸಾಕಣೆ. ಅವರ ಕೃಷಿ ಹೊಂಡಗಳಲ್ಲಿ ಸಾಕಷ್ಟು ಮೀನುಗಳು. “ಬಾಲ್ಯದಲ್ಲಿ ಅದೊಂದು ಅದ್ಭುತ ಬದುಕು. ದಿನನಿತ್ಯ ಬೇಕಾಗುವ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ಹೋಗುವ ಅಗತ್ಯವೇ ಇರಲಿಲ್ಲ” ಎಂದು ನೆನಪು ಮಾಡಿಕೊಳ್ಳುತ್ತಾರೆ ಬೊಡೊಸಾ.

ಆ ಹಳ್ಳಿಯಲ್ಲಿ ಬದಲಾವಣೆಯ ಗಾಳಿ ಬೀಸಿದ್ದು ೧೯೯೦ರ ದಶಕದ ಆರಂಭದಲ್ಲಿ – ಕಪ್ಪುಬಿಳುಪಿನ ಟೆಲಿವಿಷನ್ ಬಂದಾಗ. ಆಗ ಬೊಡೊಸಾರಿಗೆ ಏಳು ವರುಷ ವಯಸ್ಸು. ಲಾರಿಯ ಬ್ಯಾಟರಿಯ ವಿದ್ಯುತ್ತಿನಿಂದ ಆ ಟಿವಿ ಚಾಲೂ ಆಗುತ್ತಿತ್ತು. ಅದನ್ನು ರೀಚಾರ್ಜ್ ಮಾಡಲಿಕ್ಕಾಗಿ ಐದು ಕಿಮೀ ದೂರದ ಪಟ್ಟಣಕ್ಕೆ ಕೈಗಾಡಿಯಲ್ಲಿ ಒಯ್ಯಬೇಕಾಗಿತ್ತು.

ಅದು ಪ್ರಭುತ್ವದ ವಿರುದ್ಧದ ಹೋರಾಟಗಳಿಂದಾಗಿ ಅಸ್ಸಾಂ ತತ್ತರಿಸಿದ ಕಾಲ. ಬೋಡೋ ಪ್ರದೇಶದಲ್ಲಿ ಬೋಡೋ ಲ್ಯಾಂಡ್ ಆಂದೋಲನ ಆರಂಭವಾಗಿ ಹಿಂಸಾತ್ಮಕ ರೂಪ ಪಡೆದಿತ್ತು. ಹಲವು ಜನರು ಸಾವಿಗೀಡಾದರು – ಬೊಡೊಸಾರ ಒಬ್ಬ ಸೋದರನ ಸಹಿತ. ಆದ್ದರಿಂದ, ಮಗ ಸುರಕ್ಷಿತವಾಗಿರಲಿ ಎಂಬ ಆಶಯದಿಂದ ಇವರನ್ನು ಹತ್ತಿರದ ಗೌಹಾತಿ ನಗರಕ್ಕೆ ಕಳಿಸಿದರು ಬೊಡೊಸಾರ ಅಮ್ಮ. ಅಲ್ಲಿ ಶಾಲೆಯೊಂದರಲ್ಲಿ ತೋಟಗಾರನ (ಗಾರ್ಡನರ್) ಕೆಲಸಕ್ಕೆ ಸೇರಿದರು ಬೊಡೊಸಾ.

ಅದೇ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳುವೆನೆಂಬ ಇವರ ಬೇಡಿಕೆಗಳನ್ನು ಆ ಶಾಲೆಯ ಆಡಳಿತವರ್ಗ ಪುರಸ್ಕರಿಸಲಿಲ್ಲ. ಬೇರಾವುದೋ ಸಂಜೆ ಶಾಲೆಗೆ ಸೇರಿಕೋ ಎಂಬುದವರ ಸಲಹೆ. ಹಾಗಾಗಿ, ಆ ಕೆಲಸ ತೊರೆದು, ಒಂದು ಹೋಟೆಲಿನಲ್ಲಿ ವೇಯ್ಟರ್ ಆಗಿ ಸೇರಿಕೊಂಡರು. ಹೀಗೆ ಕೆಲಸಗಳನ್ನು ಬದಲಾಯಿಸುತ್ತ, ಕೆಲವು ವರುಷಗಳ ನಂತರ ಬೊಡೊಸಾ ಬಂದದ್ದು ದೂರದ ಬೆಂಗಳೂರಿಗೆ ಡ್ರೈವರ್ ಮತ್ತು ಮೆಕ್ಯಾನಿಕ್ ಆಗಿ. ಆಗ, ವಯಸ್ಸಾಗಿದ್ದ ಅವರ ತಾಯಿಯಿಂದ ಮನೆಗೆ ಮರಳಬೇಕೆಂಬ ಒತ್ತಾಯ.

ಅಂತೂ ಅಸ್ಸಾಂನ ತನ್ನ ಮನೆಗೆ ಹಿಂತಿರುಗಿದರು ತೆನ್ಜಿಂಗ್ ಬೊಡೊಸಾ. ಈಗ ಅವರಿಗೆ ಎದುರಾದ ಪ್ರಶ್ನೆ, “ಈ ಹಳ್ಳಿಯಲ್ಲೇನು ಮಾಡುವುದು?” ಕೊನೆಗೆ ಕೃಷಿ ಮಾಡುವ ನಿರ್ಧಾರ – ತನ್ನ ತಂದೆ ಹಾಗೂ ಅಜ್ಜನಂತೆ. ಆದರೆ, ಭತ್ತದ ಬದಲಾಗಿ ಚಹಾ ಗಿಡಗಳನ್ನು ಬೆಳೆಸುವ ನಿರ್ಧಾರ. ತನ್ನ ತಂದೆಯ ಸ್ನೇಹಿತರಾದ ಪ್ಲಾಂಟರ್ ಒಬ್ಬರಿಂದ ಚಹಾ ಕೃಷಿಯ ಪ್ರಾಥಮಿಕ ಜ್ನಾನ ಪಡೆದರು. ಆದರೆ, ಟೀ ಎಸ್ಟೇಟಿನಲ್ಲಿ ಸಿಂಪಡಿಸಿದ ರಾಸಾಯನಿಕ ಕೀಟನಾಶಕಗಳಿಂದಾಗಿ, ಒಂದು ಮೊಲ ಮತ್ತು ಕೆಲವು ಮೀನುಗಳು ಸತ್ತಾಗ ಮನನೊಂದರು. ಈ ವಿಷಗಳಿಗೆ ಬದಲಿವಸ್ತುಗಳಿಲ್ಲವೇ ಎಂಬ ಚಿಂತೆ ಅವರಿಗೆ. ಆಗ ನೆನಪಾದದ್ದು ಬೆಂಗಳೂರು ಹತ್ತಿರದ ಚಿಕ್ಕಬಳ್ಳಾಪುರ ಸನಿಹದ ಮರಲೇನಹಳ್ಳಿಯ “ಸಾವಯವ ಯೋಗಿ” ಎಲ್. ನಾರಾಯಣ ರೆಡ್ಡಿಯವರು. ಅವರನ್ನು ಸಂಪರ್ಕಿಸಿದಾಗ, ಸಾವಯವ ಕೃಷಿಯ ಪ್ರಾಥಮಿಕ ಮಾಹಿತಿ ನೀಡಿದರು. ಅನಂತರ, ಅಸ್ಸಾಮಿನಲ್ಲಿ ಕೆಲಸ ಮಾಡುತ್ತಿದ್ದ ಫರ್-ಟೈಲ್ ಗ್ರೌಂಡ್ ಎಂಬ ಕೆನಡಾ ಮೂಲದ ಸರಕಾರೇತರ ಸಂಸ್ಥೆಯ ಸಂಪರ್ಕ. ಬೊಡೊಸಾರ ಗ್ರಾಮಕ್ಕೆ ಬಂದ ಆ ಸಂಸ್ಥೆಯ ಕಾರ್ಯಕರ್ತರಿಂದ ಕಂಪೋಸ್ಟ್ ಹೊಂಡ ಮಾಡಲು ಸಹಾಯ.

ಅಷ್ಟರಲ್ಲಿ. ಚಹಾಪುಡಿ ಉತ್ಪಾದಿಸಲು ತಯಾರಿ ನಡೆಸಿದ್ದರು ಬೊಡೊಸಾ. ಬಹಳಷ್ಟು ಹುಡುಕಾಡಿ, ಚಹಾ ಎಲೆಗಳನ್ನು ಒಣಗಿಸಲು ಸಣ್ಣ ಯಂತ್ರವೊಂದರ ಖರೀದಿ. ಅದನ್ನು ನಿರ್ಮಿಸಿದವರು ಜಾನ್ ಮರ್ಬನಿಯಾಂಗ್ ಎಂಬವರು. ಅನಂತರ ೨೦೦೮ರಲ್ಲಿ ಭೂತಾನ್ ಗಡಿಯಲ್ಲಿ ೨೫ ಎಕ್ರೆ ಕಾಡುಜಮೀನು ಖರೀದಿಸಿದರು ಬೊಡೊಸಾ. ಅಲ್ಲೇ ಟ್ರೀ-ಹೌಸ್ ನಿರ್ಮಿಸಿ, ಅದರಲ್ಲಿ ವಾಸಿಸುತ್ತಾ ಚಹಾ ಕೃಷಿಗೆ ತೊಡಗಿದರು.

ಚಹಾ ತೋಟದಲ್ಲಿ ಆನೆಗಳ ಹಿಂಡು
“ಅದೊಂದು ಹುಣ್ಣಿಮೆ ರಾತ್ರಿ ಶಬ್ದವಾಯಿತು. ನಾನು ಮನೆಯಿಂದ ಹೊರಗೆ ಬಂದಾಗ ಕಂಡದ್ದು ೧೪-೧೫ ಆನೆಗಳ ಹಿಂಡು” ಎಂದು ಆ ದಿನದ ರಾತ್ರಿಯ ಅನಿರೀಕ್ಷಿತ ಘಟನೆ ನೆನಪು ಮಾಡಿಕೊಳ್ಳುತ್ತಾರೆ ತೆನ್ಜಿಂಗ್ ಬೊಡೊಸಾ. ಆ ಪ್ರದೇಶದಲ್ಲಿ ಹಲವಾರು ಆನೆಗಳ ಹಿಂಡುಗಳು ಓಡಾಡಿಕೊಂಡಿವೆ. ನೂರಾರು ಸಂಖ್ಯೆಯಲ್ಲಿರುವ ಆನೆಗಳು ಭೂತಾನ್ ಮತ್ತು ಉತ್ತರ ಬ್ರಹ್ಮಪುತ್ರಾದ ಕಾಡುಗಳಲ್ಲಿ ಸಂಚರಿಸುತ್ತವೆ. ಅವುಗಳ ವಾರ್ಷಿಕ ಓಡಾಟದ ಹಾದಿಗಳು (ಕಾರಿಡಾರ್ಸ್) ಭಾರತ ಮತ್ತು ಭೂತಾನಿನಲ್ಲಿ ಅಪಾಯ ಎದುರಿಸುತ್ತಿವೆ – ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಿದ್ಯುತ್ ಬೇಲಿಗಳಿಂದ ರಕ್ಷಿಸಲ್ಪಟ್ಟ ಚಹಾತೋಟಗಳಿಂದಾಗಿ. ಮಾನವ ಮತ್ತು ಆನೆಗಳ ನಡುವಣ ಸಂಘರ್ಷದಿಂದಾಗಿ ಸಾಯುತ್ತಿರುವ ಮನುಷ್ಯರು ಮತ್ತು ಆನೆಗಳ ಸಂಖ್ಯೆ ಹೆಚ್ಚುತ್ತಿದೆ.

ಈ ಹಂತದಲ್ಲಿ ತೆನ್ಜಿಂಗ್ ಬೊಡೊಸಾ ಸಂಪರ್ಕಿಸಿದ್ದು ಮೊಂಟಾನಾ ವಿಶ್ವವಿದ್ಯಾಲಯದ ಲಿಸಾ ಮಿಲ್ಸ್ ಅವರನ್ನು. ಆಕೆ ಅಸ್ಸಾಂಗೆ ಕಾಲಿಡಲು ಕಾರಣ ಅಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷದ ಬಗೆಗಿನ ಆತಂಕ. “ಏಷ್ಯಾದ ಆನೆಗಳ ಸಂರಕ್ಷಣೆಗಾಗಿ ಸಮುದಾಯ ಆಧಾರಿತವಾದ ಹಲವು ಯೋಜನೆಗಳಲ್ಲಿ ನಾನು ಅನೇಕ ವರುಷಗಳಿಂದ ಕೆಲಸ ಮಾಡುತ್ತಿದ್ದೇನೆ” ಎನ್ನುತ್ತಾರೆ ಲಿಸಾ ಮಿಲ್ಸ್. ಬೊಡೊಸಾರ ಚಹಾ ತೋಟದ ಹತ್ತಿರದಲ್ಲಿ ಆನೆ ಧಾಳಿಯಿಂದಾಗಿ ವ್ಯಕ್ತಿಯೊಬ್ಬರು ಸಾವಿಗೀಡಾದಾಗ, ಬೊಡೊಸಾರಿಗೆ ಫೇಸ್-ಬುಕ್ಕಿನಲ್ಲಿ ಲಿಸಾ ಮಿಲ್ಸ್ ಅವರ ಪರಿಚಯವಾಯಿತು.

ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಆಕೆಯಿಂದ ಮಾಹಿತಿ ಪಡೆದರು ತೆನ್ಜಿಂಗ್ ಬೊಡೊಸಾ. ಅಸ್ಸಾಂನ ಹಲವು ಚಹಾತೋಟಗಳು ಆನೆ ಕಾರಿಡಾರಿನಲ್ಲಿವೆ. ಆನೆಗಳು ಟೀ ಎಲೆಗಳನ್ನು ತಿನ್ನುವುದಿಲ್ಲ. ಆದರೆ ತಮ್ಮ ದೀರ್ಘ ವಲಸೆಯ ಹಾದಿಯಲ್ಲಿರುವ ಚಹಾತೋಟಗಳಲ್ಲಿ ಓಡಾಡುತ್ತವೆ ಮತ್ತು ವಿಶ್ರಾಂತಿಗಾಗಿ ತಂಗುತ್ತವೆ. ವಿದ್ಯುತ್ ಬೇಲಿಗಳು, ನೀರಿಂಗಿಸುವ ಆಳ ಹೊಂಡಗಳು, ರಾಸಾಯನಿಕ ಪೀಡೆನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳು – ಇವುಗಳಿಂದ ಆನೆಗಳಿಗೆ ಭಾರೀ ಅಪಾಯ. ಮರಿಆನೆಗಳಂತೂ ಹೊಂಡಗಳಿಗೆ ಬಿದ್ದು ಹೊರಬರಲಾಗದೆ ಒದ್ದಾಡುತ್ತವೆ. ವಯಸ್ಕ ಆನೆಗಳಿಗೆ ಉಪ್ಪಿನ ಆಕರ್ಷಣೆ. ಅದರಿಂದಾಗಿ, ರಾಸಾಯನಿಕ ಗೊಬ್ಬರಗಳನ್ನು ಅಥವಾ ಪೀಡೆನಾಶಕಗಳನ್ನು ಚಪ್ಪರಿಸಿ ವಿಷಪರಿಣಾಮಕ್ಕೆ ಒಳಗಾಗುತ್ತವೆ.

ಆನೆಸ್ನೇಹಿ ಚಹಾಹುಡಿಗೆ ಜಾಸ್ತಿ ಬೆಲೆ
“ಕೆಲವು ನಿರ್ದಿಷ್ಟ ಕ್ರಮಗಳ ಮೂಲಕ ಮಾನವ-ಆನೆಗಳ ಸಂಘರ್ಷ ಕಡಿಮೆ ಮಾಡಿ, ಹಲವು ದುರ್ಮರಣಗಳನ್ನು ತಪ್ಪಿಸಲು ಸಾಧ್ಯ ಎಂದು ಹಲವು ವರುಷಗಳಿಂದ ಸಂಗ್ರಹಿಸಿದ ಮಾಹಿತಿ ತೋರಿಸುತ್ತದೆ” ಎನ್ನುತ್ತಾರೆ ಲಿಸಾ ಮಿಲ್ಸ್. ಆನೆಗಳ ಓಡಾಟಕ್ಕೆ ಅಡ್ಡಿಪಡಿಸದ ಚಹಾತೋಟಗಳ ಚಹಾಹುಡಿಗೆ ಜಾಸ್ತಿ ಬೆಲೆ ಸಿಗುವಂತೆ ಮಾಡುವುದೂ ಈ ಯೋಜನೆಯ ಅಂಗವಾಗಿದೆ. “ಪ್ರೀಮಿಯಮ್ ಗುಣಮಟ್ಟದ ಚಹಾಹುಡಿಯನ್ನು ಸಣ್ಣ ಟೀ ಶಾಪಿನಲ್ಲಿ ಮಾರುವುದರ ಮೂಲಕ ಇಂತಹ ಯೋಜನೆಗಳನ್ನು ಬೆಂಬಲಿಸಲು ಶುರು ಮಾಡಿದೆವು. ಜಾಗತಿಕ ಟೀ ಎಕ್ಸ್-ಪೋಗೆ ಇಂತಹ ಟೀ ಎಸ್ಟೇಟುಗಳ ಚಹಾಹುಡಿ ಒಯ್ದು, ಇವನ್ನು ಹೆಚ್ಚಿನ ಬೆಲೆಗೆ ಖರೀದಿಸಲು ತಯಾರಿರುವ ಖರೀದಿದಾರರಿಗೆ ಮಾರಾಟ ಮಾಡಲು ಪ್ರಯತ್ನಿಸಿದೆವು” ಎಂದು ವಿವರಿಸುತ್ತಾರೆ ಲಿಸಾ ಮಿಲ್ಸ್.
ಕಹಿಬಾರಿ ಗ್ರಾಮದಲ್ಲಿ ತನ್ನ ಅಸ್ಸಾಂ ಮಾದರಿಯ ಪುಟ್ಟ ಮನೆಯ ಬೆಡ್ ರೂಮಿನಲ್ಲಿ ಚಹಾಹುಡಿಯ ಪೊಟ್ಟಣಗಳನ್ನು ಪೇರಿಸಿಟ್ಟಿರುವ ತೆನ್ಜಿಂಗ್ ಬೊಡೊಸಾ ಸಂತೋಷದ ಸುದ್ದಿಯೊಂದನ್ನು ತಿಳಿಸುತ್ತಾರೆ: ಅವರ ಚಹಾತೋಟದ ಚಹಾ ಹುಡಿಗೆ “ಆನೆಸ್ನೇಹಿ ಚಹಾ” ಎಂಬ ಸರ್ಟಿಫಿಕೇಟ್ ಸಿಕ್ಕಿದ ನಂತರ, ಯುಎಸ್ಎ ದೇಶದ ಮಿಸ್ಸೌಲಾ ಟೀ ಕಂಪೆನಿ ಎಂಬ ಹೊಸ ಖರೀದಿದಾರ, ಈ ಚಹಾಹುಡಿಗೆ ಕಿಲೋಕ್ಕೆ ಎರಡು ಡಾಲರ್ (ಸುಮಾರು ೧೩೦ ರೂಪಾಯಿ) ಜಾಸ್ತಿ ಪಾವತಿಸಲು ಮುಂದಾಗಿದ್ದಾರೆ.

ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (ಐಯುಸಿಎನ್) ಸಂಸ್ಥೆಯ “ಕೆಂಪು ಪಟ್ಟಿ”ಯಲ್ಲಿದೆ ಏಷ್ಯಾದ ಆನೆ. ಅಂದರೆ ಇದು ನಿರ್ವಂಶದ ಅಪಾಯದಲ್ಲಿರುವ ಪ್ರಾಣಿ. ಭೂಮಿಯಲ್ಲಿ ಆನೆ ಅತಿಮುಖ್ಯ ಪ್ರಾಣಿವರ್ಗ. ಇದನ್ನು “ಅಂಬ್ರೆಲ್ಲ ಸ್ಪಿಷೀಸ್” ಎಂದು ಕರೆಯುತ್ತಾರೆ. ಯಾಕೆಂದರೆ, ಇವುಗಳು ಬದುಕಲು ವಿಸ್ತಾರ ಪ್ರದೇಶ ಅಗತ್ಯ. ಹಾಗಾಗಿ, ಇವನ್ನು ಸಂರಕ್ಷಿಸಿದರೆ ಇತರ ಹಲವು ಪ್ರಾಣಿವರ್ಗಗಳನ್ನು ಸಂರಕ್ಷಿಸಲು ಸಾಧ್ಯ. ಆನೆಗಳ ಸಂರಕ್ಷಣೆಗೆ ಅತ್ಯಗತ್ಯ ಕ್ರಮಗಳೆಂದರೆ ಅವುಗಳ ವಾಸಸ್ಥಾನ ಮತ್ತು ಕಾರಿಡಾರುಗಳ ರಕ್ಷಣೆ ಹಾಗೂ ಮಾನವ-ಆನೆ ಸಂಘರ್ಷದ ನಿರ್ವಹಣೆ ಎನ್ನುತ್ತದೆ ಐಯುಸಿಎನ್. ಇದು ಯಶಸ್ವಿಯಾಗ ಬೇಕಾದರೆ “ಆನೆಗಳು ಮಾನವರ ಶತ್ರುಗಳಲ್ಲ, ಮಿತ್ರರು” ಎಂಬ ಭಾವನೆ ರೂಢಿಸಿಕೊಳ್ಳುವುದು ಅವಶ್ಯ.

ಅಂತೂ, ತೆನ್ಜಿಂಗ್ ಬೊಡೊಸಾರಿಗೆ ತಮ್ಮ ಚಹಾತೋಟದಲ್ಲಿ ಆನೆಗಳ ಓಡಾಟಕ್ಕೆ ಅವಕಾಶ ನೀಡಿದ್ದರಿಂದಾಗಿ ಅಧಿಕ ಆದಾಯ ಕೈಸೇರುತ್ತಿದೆ. ಇದಕ್ಕೆ ಕಾರಣ “ಆನೆಸ್ನೇಹಿ ಚಹಾ” ಎಂಬ ಟ್ರೇಡ್-ಮಾರ್ಕ್. “ಇತರ ಉತ್ಪನ್ನಗಳನ್ನೂ ಈ ರೀತಿಯಲ್ಲಿ ಮಾರ್ಕೆಟ್ ಮಾಡಲು ಸಾಧ್ಯವಿದೆ” ಎನ್ನುತ್ತಾರೆ ಲಿಸಾ ಮಿಲ್ಸ್. ಕರ್ನಾಟಕದ ಕೊಡಗಿನಲ್ಲಿ ಆನೆ-ಕಾರಿಡಾರಿನಲ್ಲಿರುವ ಹಲವು ಕಾಫಿ ತೋಟಗಳು ಮಾನವ-ಆನೆ ಸಂಘರ್ಷದ ತಾಣಗಳಾಗಿವೆ. ಇವೂ ಆನೆಸ್ನೇಹಿ ಆದರೆ, “ಆನೆಸ್ನೇಹಿ ಕಾಫಿ” ಮಾರಾಟಕ್ಕೆ ಬಂದೀತು. ಇದರಿಂದಾಗಿ ಇವುಗಳ ಮಾಲೀಕರಿಗೂ ಲಾಭವಾಗಲು ಸಾಧ್ಯ, ಅಲ್ಲವೇ?