ಜಯದ ಬೆನ್ನಿಗಿರುವ ವಿರಾಟ ಪರಿಶ್ರಮವೇಕೆ ಕಾಣದು..?
2014ರ ಇಂಗ್ಲೆಂಡ್ ಪ್ರವಾಸದ ವೈಫಲ್ಯದ ನಂತರ ನನ್ನ ಬ್ಯಾಟಿಂಗ್ನ ಬಗ್ಗೆ ಅನೇಕರು ಟೀಕೆ ಮಾಡಲಾರಂಭಿಸಿದರು. ಉಳಿದೆಲ್ಲ ಏಷ್ಯನ್ ಆಟಗಾರರಿಗಿಂತ ಈತ ತೀರ ಭಿನ್ನವೇನಲ್ಲ.ಉಪಖಂಡದ ಒಳಗೆ ಮಾತ್ರ ಇವರೆಲ್ಲ ಹುಲಿಗಳು,ಹೊರಗೆ ಬಿದ್ದರೆ ಇಲಿಗಳಷ್ಟೇ ಎಂಬ ಧಾಟಿಯ ಮಾತುಗಳು ನನಗೆ ಕಿರಿಕಿರಿಯುಂಟು ಮಾಡಿದ್ದವು.ಅದಾಗಲೇ ಆಸ್ಟ್ರೇಲಿಯಾ ದ ಪ್ರವಾಸ ಕಣ್ಣೆದುರಿಗಿತ್ತು.ಸರಿಯಾದ ಪೂರ್ವತಯಾರಿ ಇಲ್ಲದೇ ಆಸ್ಟ್ರೇಲಿಯಾಕ್ಕೆ ಹೋದರೆ ನನ್ನ ಕತೆ ಮುಗಿದಂತೆಯೇ ಲೆಕ್ಕ ಎಂಬುದು ನನಗೆ ಅರ್ಥವಾಗಿ ಹೋಗಿತ್ತು ಆಸ್ಟ್ರೇಲಿಯಾದ ಅಂಗಳಗಳು ಇಂಗ್ಲೆಂಡ್ ಪಿಚ್ಗಳಿಗಿಂತ ಹೆಚ್ಚು ಪುಟಿಯುವ ಪಿಚ್ಗಳು.ಹಾಗಾಗಿ ಆಸಿಸ್ ತಂಡವನ್ನು ಎದುರಿಸಲು ಬೇಕಾದ ಎಲ್ಲಾ ತಯಾರಿಗೆ ನಾನು ಮಾನಸಿಕವಾಗಿ ಸಿದ್ಧನಾಗಿದ್ದೆ.ಸಚಿನ್ರಿಂದ ಕೆಲವು ಸಲಹೆ ಸೂಚನೆಗಳನ್ನು ಪಡೆದುಕೊಂಡು,ದಿನ ಬೆಳಿಗ್ಗೆಯೆದ್ದು ಸತತವಾಗಿ ಬ್ಯಾಟು ಬೀಸುತ್ತಿದ್ದೆ.ಕಠಿಣ ಪರಿಶ್ರಮವಿಲ್ಲದೇ ರಣರಂಗ ಗೆಲ್ಲುವುದು ಕಷ್ಟವಿದೆ ಎಂಬುದು ತಿಳಿದಿತ್ತು.ಸತತವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಪ್ರಾಕ್ಟಿಸು ಮಾಡಿ ಎಷ್ಟೋ ಬಾರಿ ಮಾಂಸಖಂಡಗಳ ಸೆಳೆತಕ್ಕೂ ಒಳಗಾಗಿದ್ದಿದೆ.ಹೇಗೆ ಒಂದು ಗಾಲ್ಫ್ ಹೊಡೆತವನ್ನು ಪರಿಪೂರ್ಣವಾಗಿ ಕರಗತ ಮಾಡಿಕೊಳ್ಳಲು ಕನಿಷ್ಟ 400ರಿಂದ 500 ಸ್ಟ್ರೋಕ್ಗಳ ಅವಶ್ಯಕತೆಯಿದೆಯೋ ಹಾಗೆ ಒಂದು ಕ್ರಿಕೆಟ್ಟಿಂಗ್ ಶಾಟ್ನ ಪರಿಪೂರ್ಣತೆಗೂ ಭಯಂಕರ ಪೂರ್ವಾಭ್ಯಾಸದ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ.ಹಾಗಾಗಿ ಆಸಿಸ್ ಪ್ರವಾಸಕ್ಕೂ ಮುನ್ನ ಕಠಿಣ ತರಬೇತಿಯಲ್ಲಿ ನಾನು ಮುಳುಗಿದ್ದೆ.ಮುಂದೆ ಆಸಿಸ್ ಪ್ರವಾಸದಲ್ಲಿ ನಾನು ಸಾಕಷ್ಟು ರನ್ನುಗಳನ್ನು ಗಳಿಸಿದ್ದು ನನ್ನಲ್ಲಿ ಹೊಸ ಆತ್ಮವಿಶ್ವಾಸ ಚಿಗುರಿಸಿತ್ತು.ದೇಶದ ಹೊರಗೆ ವೇಗದ ಬೌಲರ್ಗಳನ್ನು ಎದುರಿಸುವ ಬಗೆ ನನಗರ್ಥವಾಗಿತ್ತು.ನಿಜ ಹೇಳಬೇಕೆಂದರೆ ನಾನು ಸ್ವಾಭಾವಿಕ ಪ್ರತಿಭಾನ್ವಿತ ಆಟಗಾರನಲ್ಲ ಎನ್ನುವುದು ನನಗೆ ತಿಳಿದೇ ಇದೆ.ಹಾಗಾಗಿ ಪ್ರತಿನಿತ್ಯ ನಾನು ನೆಟ್ ಪ್ರಾಕ್ಟಿಸ್ ಮಾಡುತ್ತೇನೆ.ಮ್ಯಾಚ್ ಇಲ್ಲದಿದ್ದರೆ ಬೆಳಿಗ್ಗೆ ಮತ್ತು ಸಂಜೆ ನಾಲ್ಕು ಗಂಟೆಗಳ ಕಾಲ ಜಿಮ್ನಲ್ಲಿ ಕಸರತ್ತು ,ಪಂದ್ಯವಿರುವ ದಿನ ಒಂದೂವರೆ ಗಂಟೆಗಳ ಕಾಲದ ಕಸರತ್ತನ್ನು ಖಡ್ಡಾಯವಾಗಿಸಿಕೊಂಡಿದ್ದೇನೆ.ಆಹಾರ ಪದ್ದತಿಯೂ ಅಷ್ಟೇ,ಪ್ರೋಟಿನ್ ರಿಚ್ ಆಹಾರಕ್ರಮ ನನ್ನದು.ಕಾರ್ಬೋಹೈಡ್ರೇಟ್ ನ ಬಳಕೆ ತುಂಬ ಕಡಿಮೆ.ಜಂಕ್ ಫುಡ್ ತಿನ್ನದೇ ದಶಕಗಳಾಗಿರಬಹುದೇನೋ.ತಿನ್ನಬೇಕು ಎನ್ನಿಸುವುದಿಲ್ಲವಾ ಎಂದು ಕೇಳಿದರು ಯಾರೋ..ಖಂಡಿತವಾಗಿಯೂ ಅನ್ನಿಸುತ್ತದೆ.ಆದರೆ ನನ್ನ ವೃತ್ತಿಜೀವನದೆದುರು ಇನ್ಯಾವುದೂ ನನಗೆ ಮುಖ್ಯವಲ್ಲ.ವೃತ್ತಿಜೀವನ ಮುಗಿದ ನಂತರ ತಿನ್ನುವುದು ಇದ್ದೇ ಇದೆ.ಅಲ್ಲಿಯವರೆಗೂ ನನ್ನ ಕರಿಯರ್ ನನ್ನ ಪ್ರಾಮುಖ್ಯತೆ..'
ವಿರಾಟ್ ಕೋಹ್ಲಿ ಹಿಂದೊಮ್ಮೆ ನುಡಿದ ಮಾತುಗಳು.ತನ್ನ ಆಟದೆಡೆಗೆ ಆತನ ಸಮರ್ಪಣಾಭಾವದ ನುಡಿಗಳಿವು.ಆತನ ಗೆಲುವಿನ ಹಿಂದೆ,ಆತ ಇಂದು ನಿಂತಿರುವ ಔನತ್ಯದ ಹಿಂದೆ ಇರಬಹುದಾದ ಪರಿಶ್ರಮದ ಚಿತ್ರಣ.
'ಬಹುಶ: ಹೊಸ ತಲೆಮಾರಿನ ಆಟಗಾರರ ಪೈಕಿ ನಾ ಕಂಡ ಅತ್ಯಂತ ಪರಿಶ್ರಮಿ ಬ್ಯಾಟ್ಸಮನ್ ಎಂದರೆ ವಿರಾಟ್ ಕೋಹ್ಲಿ.ನನಗಿನ್ನೂ ನೆನಪಿದೆ.ಅದೊಮ್ಮೆ ಅವನುಳಿದುಕೊಂಡಿದ್ದ ಹೊಟೆಲ್ಲೊಂದರಲ್ಲಿ ನಾನು ,ವಸೀಂ ಭಾಯ್ ಉಳಿದುಕೊಂಡಿದ್ದೆವು.ಅದು ಗೊತ್ತಾದ ತಕ್ಷಣವೇ ಆತ ನಮ್ಮ ಬಳಿ ಬಂದಿದ್ದ.ಕೈಯಿಂದ ಪಿಚ್ಗೆ ಬೀಳುವ ಮುನ್ನ ದೂಸ್ರಾ ಹೇಗೆ ಕಾಣುತ್ತದೆ ಎಂದು ಆತನಿಗೆ ಅರಿಯಬೇಕಿತ್ತಂತೆ.ಅದನ್ನು ಆತ ಅರ್ಧಗಂಟೆ ಕೂತು ನನ್ನೊಟ್ಟಿಗೆ ಚರ್ಚಿಸಿದ್ದ.ಹಾಗೆ ವಸೀಂ ಅಕ್ರಂ ಬಳಿ ರಿವರ್ಸ್ ಸ್ವಿಂಗ್ನ ಕುರಿತಾಗಿ ಅನೇಕ ವಿಷಯಗಳನ್ನು ಕೇಳಿ ತಿಳಿದುಕೊಂಡ.ನಮಗೆ ನಿಜಕ್ಕೂ ಖುಷಿಯಾಗಿತ್ತು.ಒಂದೆರಡು ಶತಕಗಳನ್ನು ಬಾರಿಸಿದ ನಂತರ ಅಥವಾ ಒಂದೈವತ್ತು ವಿಕೆಟ್ ತೆಗೆದ ಮರುಕ್ಷಣವೇ ಲೆಜೆಂಡುಗಳಂತೆ ವರ್ತಿಸುತ್ತ ಹಿರಿಯ ಆಟಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ನಮ್ಮ ದೇಶದ ಹುಡುಗರಿಗಿಂತ ವಿರಾಟ್ ತೀರ ವಿಭಿನ್ನವಾಗಿ ನಿಲ್ಲುತ್ತಾನೆ.ಆಟನ ಬಗೆಗಿನ ಅವನ ಆ ಸಮರ್ಪಣಾ ಭಾವ ,ಆ ತೀರದ ದಾಹವೇ ಅವನನ್ನು ಗೆಲ್ಲಿಸುತ್ತಿರುವುದು' ಎನ್ನುತ್ತ ಇದೇ ವಿರಾಟ್ ಕೋಹ್ಲಿಯನ್ನು ಹೊಗಳಿದ್ದು ಪಾಕಿಸ್ತಾನದ ಸ್ಪಿನ್ ದಂತಕತೆ ಸಕ್ಲೇನ್ ಮುಶ್ತಾಕ್
ಇಂದು ವಿರಾಟ್ ಏರಿ ನಿಂತ ಎತ್ತರವನ್ನು ನಾವೆಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತೇವೆ.ಆತನ ಅದೃಷ್ಟದ ಬಗ್ಗೆ ಅಸೂಯೆ ಪಡುತ್ತೇವೆ. ಆದರೆ ಜಯದ ಬೆಟ್ಟವೇರುವ ಮುನ್ನ ಬೆಟ್ಟದಷ್ಟು ಪರಿಶ್ರಮ ಆತನ ಬೆನ್ನಿಗಿದೆ ಎಂಬುದನ್ನು ಮರೆತುಬಿಡುತ್ತೇವೆ. ಇನ್ನೂ ಒಂದಷ್ಟು ಜನ ಅವನ ಕುರಿತಾಗಿ ಮಾತನಾಡುತ್ತ' ವಿರಾಟ್ ಇಸ್ ಜಸ್ಟ್ ಲಕ್ಕಿ,ಅಂಥಹ ಅದ್ಭುತ ಆಟಗಾರನೇನಲ್ಲ ,ವಿಶ್ವ ಕ್ರಿಕೆಟ್ಟಿನಲ್ಲಿ ಈಗ ಒಳ್ಳೆಯ ಗುಣಮಟ್ಟದ ಬೌಲರುಗಳಿಲ್ಲ .ಹಾಗಾಗಿ ಅವನು ಇಷ್ಟು ಯಶಸ್ಸು ಕಾಣಲು ಸಾಧ್ಯವಾಗಿದೆ' ಎನ್ನುತ್ತ ಸರಾಗವಾಗಿ ಟೀಕಿಸುತ್ತೇವೆ.ಹಾಗೆ ಟೀಕಿಸುವಾಗ ಅವನ ಸಮಕಾಲೀನರು,ಅವನೇ ಒಪ್ಪಿಕೊಂಡಂತೆ ಅವನಿಗಿಂತ ಹೆಚ್ಚು ಪ್ರತಿಭಾನ್ವಿತರು ಅವನಷ್ಟು ಯಶಸ್ಸು ಕಂಡಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸುತ್ತೇವೆ. ಟೀಕಿಸುವುದು ಸುಲಭ,ಯಶಸ್ಸು ಕಂಡು ಕರುಬುವುದು,ಯಶಸ್ಸನ್ನು ಅದೃಷ್ಟದ ಬೆನ್ನಿಗೆ ಹೊರಿಸಿಬಿಡುವುದು ಇನ್ನೂ ಸುಲಭ.ಆದರೆ ನಿಜವಾದ ಗಟ್ಟಿ ಯಶಸ್ಸೊಂದು ದೊರಕುವುದು ಕಠಿಣ ಪರಿಶ್ರಮ ಮತ್ತು ಮಾಡುವ ಕೆಲಸದೆಡೆಗಿನ ನಮ್ಮ ಶೃದ್ಧೆಯಿಂದ ಮಾತ್ರ ಎಂಬುದು ವಾಸ್ತವ.ಕಂಡ ಯಶಸ್ಸನ್ನು ಪದೇ ಪದೇ ಉಳಿಸಿಕೊಡುವುದು ಸಹ ಅವೇ ಗುಣಗಳೇ.ಗೆಲುವಿನ ವ್ಯವಸಾಯಕ್ಕೆ ಪರಿಶ್ರಮದ ಬೆವರ ಹನಿಗಳೇ ಮುಖ್ಯ. ಅದಿಲ್ಲವಾದರೆ ಪ್ರತಿಭೆಯ ಫಲವತ್ತು ಭೂಮಿ ಸಹ ಬಂಜರು ನೆಲವಾಗಲು ಹೆಚ್ಚು ಹೊತ್ತು ಬೇಕಿಲ್ಲ ಎಂಬುದು ತಿಳಿದಿರಲಿ.
ಹಿಂದೆ ಯಾವುದೋ ಲೇಖನಕ್ಕಾಗಿ ಹೀಗೊಂದಿಷ್ಟು ಕಚ್ಚಾ ನೋಟ್ಸು ಮಾಡಿಟ್ಟುಕೊಂಡಿದ್ದೆ.ಯಾವುದೋ ಕಾರಣಕ್ಕೆ ಲೇಖನ ಬರೆಯದೇ ಹಾಗೆ ಉಳಿದುಹೋಗಿತ್ತು ಇದು.ಆಸ್ಟ್ರೇಲಿಯಾದ ವಿರಾಟ್ ರೂಪದ ನಂತರ ಇದನ್ನಿಲ್ಲಿ ಹಾಕಬೇಕೆನ್ನಿಸಿತು.