ಕಗ್ಗ ದರ್ಶನ - 39(1)
ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ
ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ
ಉಪ್ಪು, ಹುಳಿ, ಕಾರ ಮತ್ತು ಸಿಹಿ - ಇವು ಇಷ್ಟಿಷ್ಟು ಹಿತಮಿತವಾಗಿ ಸೇರಿದರೆ ರುಚಿಯಾಗಿ ಊಟಕ್ಕೆ ಯೋಗ್ಯ (ಭೋಜ್ಯ) ಆಗುತ್ತದೆ; ಹಾಗೆಯೇ ತಪ್ಪು, ಸರಿ, ಬೆಪ್ಪು, ಜಾಣತನ, ಅಂದಚಂದ, ಕುಂದುಕೊರತೆ - ಇಂತಹ ಹಲವಾರು ಗುಣಗಳು ಸೇರಿದರೆ ಬದುಕು ಸೊಗಸಾಗುತ್ತದೆ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ. ಬದುಕಿನ ಬಗೆಗಿನ ಈ ಸರಳ ವಿವರಣೆ ಮನದಟ್ಟಾಗ ಬೇಕಾದರೆ ನಾವು ಓದಬೇಕು ಆತ್ಮಕತೆಗಳನ್ನು ಹಾಗೂ ಜೀವನಕತೆಗಳನ್ನು. ಬಹುಪಾಲು ಆತ್ಮಕತೆಗಳು ೨೦೦ - ೩೦೦ ಪುಟಗಳ ಪುಸ್ತಕಗಳು.
ವಿಠ್ಠಲ ವೆಂಕಟೇಶ ಕಾಮತರದು ಹೋಟೆಲ್ ಉದ್ಯಮದಲ್ಲಿ ದೊಡ್ಡ ಹೆಸರು. ಈ ಉದ್ಯಮದ ಒಳಹೊರಗನ್ನು ತಿಳಿಯಲು ಪಟ್ಟ ಪಾಡನ್ನು ಅವರು ದಾಖಲಿಸಿದ್ದಾರೆ ತಮ್ಮ ಆತ್ಮಕತೆ “ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ”ದಲ್ಲಿ. ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹತ್ತಿರದ ಆರ್ಕಿಡ್ ಹೋಟೆಲನ್ನು ಕಟ್ಟಲು ಶುರು ಮಾಡಿದಾಗ ತನ್ನ ತಮ್ಮನಿಂದಾಗಿ ಅನುಭವಿಸಬೇಕಾದ ಸಂಕಟಗಳನ್ನೂ ಬರೆದುಕೊಂಡಿದ್ದಾರೆ. ಬದುಕಿನಲ್ಲಿ ನುಗ್ಗಿ ಬಂದ ಹತಾಶೆ; ಜೀವನವೇ ಬೇಡವೆನಿಸಿದ್ದು; ಕೊನೆಗೆ ಆರ್ಕಿಡ್ ಹೋಟೆಲನ್ನು ಜಗತ್ತಿನ ಅತ್ಯುತ್ತಮ ಹೋಟೆಲನ್ನಾಗಿ ಮಾಡುತ್ತೇನೆಂಬ ಸಂಕಲ್ಪ ತೊಟ್ಟು, ಆ ಗುರಿ ಸಾಧಿಸಿದ್ದು - ಇವನ್ನೆಲ್ಲ ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ.
ಮನೆಮಾತಾಗಿರುವ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ಆತ್ಮಕತೆ "ಅನಾತ್ಮ ಕಥನ”. ಅದರ ಒಂದು ಪ್ರಸಂಗ ಹೀಗಿದೆ: ಅವರ ಪತ್ನಿಗೆ ಮಾರಕ ಕಾಯಿಲೆ ತಗಲಿದೆಯೆಂದು ತಿಳಿಯುತ್ತದೆ. ಅವರಿಗಿನ್ನು ಆರು ತಿಂಗಳಷ್ಟೇ ಆಯುಸ್ಸು ಎಂದು ಆಪ್ತರಾದ ಡಾ. ಮೂರ್ತಿ ಹೇಳುತ್ತಾರೆ. ಇದನ್ನು ಯಾರಿಗೂ ತಿಳಿಸಬಾರದೆಂದು ನಿರ್ಧರಿಸಿದ ವೆಂಕಟೇಶ ಮೂರ್ತಿಯವರ ಬಿಚ್ಚು ಮಾತು, "ಮನೆಯಲ್ಲಿ ಯಾರಿಗೂ ಈ ವಿಷಯ ತಿಳಿಸಲಿಲ್ಲ. ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡು ಹೇಗೋ ದಿನ ತಳ್ಳಿದೆ….."
ಕನ್ನಡದ ಮಹಾನ್ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು. “ಪರಿಸರದ ಕತೆಗಳು”, “ಕರ್ವಾಲೋ", "ಜುಗಾರಿ ಕ್ರಾಸ್", "ಚಿದಂಬರ ರಹಸ್ಯ” ಇತ್ಯಾದಿ ಕತೆಕಾದಂಬರಿಗಳು ಹಾಗೂ ಮಿಲಿನಿಯಂ ಸರಣಿಯ ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಿತ್ತವರು. ಹುಟ್ಟು ಪ್ರತಿಭಾವಂತರಾದ ತೇಜಸ್ವಿಯವರು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಹಲವಾರು ಎಡರುತೊಡರುಗಳನ್ನು ಎದುರಿಸಿದರು. ಅವನ್ನು "ಅಣ್ಣನ ನೆನಪು" ಪುಸ್ತಕದಲ್ಲಿ ಹೀಗೆ ಮುಕ್ತವಾಗಿ ಬರೆದಿದ್ದಾರೆ: “ನನಗೆ ಮೊದಲಿನಿಂದಲೂ ಲೆಕ್ಕ ಎಂದರೆ ಆಗುವುದೇ ಇಲ್ಲ. ಅಂಕಗಣಿತದಲ್ಲಿ ಏನು ಮಾಡಿದರೂ ಪಾಸ್ ಮಾಡಲು ಸಾಧ್ಯವಾಗದೆ ಎಸ್.ಎಸ್.ಎಲ್.ಸಿ.ಯಲ್ಲಿ ಎರಡು ಸಾರಿ ಡುಮ್ಕಿ ಹೊಡೆದೆ…… ಮತ್ತೆ ಜೂನಿಯರ್ ಇಂಟರಿನಲ್ಲೇ ಡುಮ್ಕಿ. ನನಗೆ ರೇಜಿಗೆ ಹತ್ತಿಹೋಯ್ತು. ವಿದ್ಯಾಭ್ಯಾಸದ ಮೇಲೇ ಬೇಸರ ಬಂದು ನಾನು ಡಿಗ್ರಿ ಪಡೆಯಬಹುದೆಂಬ ಆತ್ಮವಿಶ್ವಾಸವೇ ಹೋಯ್ತು….." ಎಂದು ಮುಕ್ತವಾಗಿ ಬರೆದುಕೊಂಡಿದ್ದಾರೆ.
ಎಲ್ಲರ ಬದುಕು ಹೀಗೆಯೇ…. ವಿವಿಧ ರುಚಿಗಳು ಸೇರಿ ಸವಿಯಾದ ಊಟವಾಗುವಂತೆ, ವಿಭಿನ್ನ ಅನುಭವಗಳು ಸೇರಿ ಬದುಕು ಹಣ್ಣಾಗುತ್ತದೆ, ಅಲ್ಲವೇ?