ಹಾರರ್ ಸಿನಿಮಾ - ಒಂದು ನೆನಪು
ಬೆಚ್ಚನೆಯಾ ರೂಮಿರಲು
ಅದರೊಳೊಂದು ಕಂಪ್ಯೂಟರಿರಲು
ಇಚ್ಛೆಯನರಿವಾ ಸ್ನೇಹಿತರ ಗುಂಪಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ......!!
ಸರ್ವಜ್ಞ ಹೀಗೊಂದು ವಚನವನ್ನು ಖಂಡಿತ ಹೇಳಿಲ್ಲವೆನ್ನುವುದು ನಿಜ.ಆದರೆ ಕಾಲೇಜಿನ ದಿನಗಳಲ್ಲಿ ಹಾಸ್ಟೇಲ್ಲಿನಲ್ಲಿರದೇ ಒಂದಷ್ಟು ಸಮಾನಮನಸ್ಕ ಸ್ನೇಹಿತರೊಡನೆ ಬಾಡಿಗೆಯ ಕೋಣೆಯಲ್ಲಿ ವಾಸಿಸುವುದಿದೆಯಲ್ಲ ಅದರ ನೆನಪುಗಳು ಮಾತ್ರ ಯಾವತ್ತಿಗೂ ಮಧುರವೇ.ಅಸಲಿಗೆ ಕಾಲೇಜು ದಿನಗಳ ನೆನಪೇ ಮಧುರ ಬಿಡಿ.ನಾನೂ ಸಹ ಹೀಗೆ ನಾಲ್ಕು ಜನ ಸ್ನೇಹಿತರೊಡಗೂಡಿ ಬಾಡಿಗೆ ಕೋಣೆಯಲ್ಲಿ ವಾಸವಾಗಿದ್ದವನು.ನಾನು ಮತ್ತೊಬ್ಬ ಹುಡುಗ ಮಾತ್ರ ಕರಾವಳಿಯ ಜಿಲ್ಲೆಯವರು.ಮತ್ತಿಬ್ಬರು ಬಿಜಾಪುರದ ಹುಡುಗರು.ಅದೇಕೊ ಏನೋ,ಮೃದುಭಾಷಿಗಳಾಗಿದ್ದ ನಮ್ಮಿಬ್ಬರಿಗೆ ಆಕರ್ಷಿಸಿದ್ದು ಬಿಜಾಪುರದ ಒರಟು ಹುಡುಗರೇ.ಇಂಜಿನೀಯರಿಂಗ್‌ನ ಮೊದಲ ವರ್ಷ ಒಂದೇ ಕಟ್ಟಡದ ಬೇರೆ ಬೇರೆ ಕೊಠಡಿಗಳಲ್ಲಿ ಇಬ್ಬಿಬ್ಬರಾಗಿ ವಾಸಿಸುತ್ತಿದ್ದ ನಾವುಗಳು,ಎರಡನೇ ವರ್ಷ ನಾಲ್ಕೂ ಜನ ಸೇರಿ ಒಟ್ಟಿಗೆ ವಾಸಿಸುವ ನಿರ್ಧಾರಕ್ಕೆ ಬಂದೆವು.ನಮ್ಮ ಊರುಗಳು ಬೇರೆಬೇರೆ,ನಮ್ಮ ಭಾಷೆಗಳು,ಊಟದ ಅಭಿರುಚಿಗಳು ಬೇರೆ ಬೇರೆ ,ಆದರೂ ತುಂಬ ಆತ್ಮೀಯರು ನಾವು.ಒಟ್ಟಿಗೆ ಇದ್ದ ನಾಲ್ಕೂ ವರ್ಷಗಳ ಕಾಲ ಒಂದು ದಿನಕ್ಕೂ ಸಣ್ಣದ್ದೊಂದು ಕಲಹ ,ಒಂದೇ ಒಂದು ಜಗಳ ಮಾಡಿಕೊಂಡವರಲ್ಲ.ಮೊದಲ ವರ್ಷದ ನಂತರ ಎರಡನೇ ವರ್ಷಕ್ಕೆ ಬೇರೊಂದು ಕೋಣೆಗೆ ವರ್ಗಾವಣೆಯಾಗುತ್ತಲೇ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ಸ್ನೇಹಿತ ಕಂಪ್ಯೂಟರ್ ಖರೀದಿಸಿದ.ಹಾಗೆ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಕಂಪ್ಯೂಟರ್ ಖರೀದಿಸುವುದು ಸಾಮಾನ್ಯ.ಶೈಕ್ಷಣಿಕ ಪಠ್ಯಕ್ರಮ ಬೇಕೋ ಬೇಡವೋ ಗೊತ್ತಿಲ್ಲ,ಕೋಣೆಯಲ್ಲಿ ಒಂದು ಕಂಪ್ಯೂಟರ್ ಬೇಕು..!! ಕನಿಷ್ಟ ಏನಿಲ್ಲವೆಂದರೂ ಸಿನಿಮಾಗಳನ್ನು ನೋಡುವುದಕ್ಕಾದರೂ ಕೋಣೆಯಲ್ಲೊಂದು ಗಣಕಯಂತ್ರವಿರಬೇಕು ಎನ್ನುವುದು ಆವತ್ತಿನ ಕಾಲಕ್ಕೆ ಪ್ರತಿಯೊಂದು ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಯ ಅಘೊಷಿತ ನಿಯಮ.ನಮ್ಮ ಕತೆಯೂ ತೀರ ಭಿನ್ನವೇನಿರಲಿಲ್ಲ.ಎರಡನೇ ವರ್ಷದ ಇಂಜೀನಿಯರಿಂಗ್ ಪಠ್ಯದಲ್ಲಿ ಕಂಪ್ಯೂಟರ್ ಬಳಕೆಯ ವಿಷಯವಾಗಿ ಇದ್ದಿದ್ದು ಒಂದೋ ಎರಡೋ ಮಾತ್ರ.ನಮ್ಮ ಹುಡುಗ ಅಧ್ಯಯನಕ್ಕಾಗಿ ಕಂಪ್ಯೂಟರ್ ಬಳಸಿಕೊಳ್ಳುತ್ತಿದ್ದದ್ದು ತೀರ ಕಡಿಮೆ.ಅದು ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದು ಎರಡು ಕಾರಣಕ್ಕೆ.ಗೇಮ್ಸ್ ಮತ್ತು ಸಿನಿಮಾ.
ಅದೆಷ್ಟು ಸಿನಿಮಾಗಳನ್ನು ನೋಡುತ್ತಿದ್ದೇವೋ ಲೆಕ್ಕವೇ ಇಲ್ಲ.ಅದರಲ್ಲೂ ಹಾರರ್ ಸಿನಿಮಾಗಳೆಂದರೆ ನನ್ನ ಸ್ನೇಹಿತನಿಗೆ ಪಂಚಪ್ರಾಣ.ನಾನು ಹೇಗಿದ್ದರೂ ಹಾರರ್ ಪ್ರಿಯ,ಅದರಲ್ಲಿ ಇನ್ನೊಬ್ಬ ಜೊತೆಯಾಗಿದ್ದ ಅಷ್ಟೇ.ನಾಲ್ಕೂ ಜನಕ್ಕೂ ಹಾರರ್ ಸಿನಿಮಾಗಳೆಂದರೆ ಇಷ್ಟವೇ.ರಾತ್ರಿಯ ಊಟ ಮುಗಿಸಿ ವಾಪಸ್ಸು ಬರುವ ದಾರಿಯಲ್ಲಿದ್ದ ಸಿಡಿ ಅಂಗಡಿಯಲ್ಲಿ ಯಾವುದಾದರೊಂದು ಹಾರರ್ ಸಿಡಿ ಖರೀದಿಸಿ ಕೋಣೆಗೆ ಬಂದು ಡ್ರೈವ್‍ನ ಬಾಯಿಗೆ ಸಿಡಿ ತುರುಕಿ ದೀಪವಾರಿಸಿ ಗಾಢಾಂಧಕಾರದಲ್ಲಿ ಕೂತು ಹಾರರ್ ಸಿನಿಮಾ ನೋಡುವುದರ ಮಜಾವೇ ಬೇರೆ. ಹಾಗೆ ನೋಡುವ ಹಾರರ್ ಸಿನಿಮಾಗಳ ಕತೆ ಚೆನ್ನಾಗಿದ್ದರೆ ಅದು ಬೇರೆಯ ಮಾತು.ಆದರೆ ಅಪರೂಪಕ್ಕೊಮ್ಮೆ ತರುತ್ತಿದ್ದ ಹಾರರ್ ಸಿನಿಮಾಗಳು ಅದೆಷ್ಟು ಕೆಟ್ಟದಾಗಿರುತ್ತಿದ್ದವೆಂದರೆ ಅದು ಹಾರರ್ ಬದಲಾಗಿ ಕಾಮಿಡಿ ಸಿನಿಮಾ ಎನ್ನಿಸಿಬಿಡುತ್ತಿದ್ದವು.ಅಂಥ ಕೆಲವು ಸಿನಿಮಾಗಳ ಸ್ವಾರಸ್ಯಕರ ಕತೆ ಹೇಳುತ್ತೇನೆ ಕೇಳಿ
ಬಿ ಗ್ರೇಡ್ ಹಾರರ್ ಸಿನಿಮಾಗಳು ನಾವು ಬರೆಯುವ ಎಕ್ಸಾಮುಗಳಂತೆ.ಪ್ರತಿ ಪರೀಕ್ಷೆಯ ಮೊದಲ ಪ್ರಶ್ನೆಗೆ ನಾವು ನಿಧಾನವಾಗಿ ಚಿತ್ತುಕಾಟಿಲ್ಲದೇ ಸುಂದರವಾದ ಅಕ್ಷರಗಳಲ್ಲಿ ಉತ್ತರ ಬರೆಯುತ್ತೇವೆ.ಮೊದಲ ಅರ್ಧ ಗಂಟೆಯ ನಂತರ ನಮ್ಮ ಸಹನೆ ಕೊಂಚ ಅತ್ತಿತ್ತ ಸರಿದಾಡುತ್ತದೆ.ಅಕ್ಷರಗಳು ತುಸು ಅತ್ತಿತ್ತ ಅಲುಗಲಾರಂಭಿಸುತ್ತವೆ.ಒಂದು ಗಂಟೆ ಕಳೆಯುವಷ್ಟರಲ್ಲಿ ನಮ್ಮ ಸಹನೆ ತನ್ನ ಸಹನೆಯ ಗಡಿಭಾಗವನ್ನು ತಲುಪಿರುತ್ತದೆ.ಪೆನ್ನು ’ಬೇಗ ಮುಗಿಸೋ ಸಾಕು’ಎನ್ನುವಂತೆ ವೇಗವಾಗಿ ಓಡಲಾರಂಭಿಸುತ್ತದೆ.ಪರೀಕ್ಷೆಯ ಕ್ಲೈಮಾಕ್ಸಿನ ಕೊನೆಯ ಭಾಗವಿದೆ ನೋಡಿ,ಅಲ್ಲಿದೆ ಸಮಸ್ಯೆ. ಆ ಹಂತದಲ್ಲಿ ನಾವು,ನಮ್ಮ ಸಹನೆ,ನಮ್ಮ ಪೆನ್ನು ಎಲ್ಲವೂ ಸುಸ್ತು.’ಈಗೇನು..? ಮುಗಿಸ್ತಿಯಾ ಇಲ್ಲ ಓಡಿಹೋಗಲಾ ’ಎನ್ನುವಂತೆ ತಾನೇ ತಾನಾಗಿ ಓಡುತ್ತಿರುತ್ತದೆ ಪೆನ್ನು.ಅಕ್ಷರಗಳು ಅಕ್ಷರಶ: ಬ್ರಹ್ಮಲಿಪಿ.ಪರೀಕ್ಷೆ ಮುಗಿಸಿ ’ಉಸ್ಸಪ್ಪಾ’ಎಂದು ಕುಳಿತು ಮೊದಲ ಪುಟಕ್ಕೂ ಕೊನೆಯ ಪುಟಕ್ಕೂ ಹೋಲಿಸಿ ನೋಡಿದರೆ,ಮೊದಲ ಪುಟ ಮತ್ತು ಕೊನೆಯ ಪುಟ ಎರಡನ್ನೂ ಬರೆದದ್ದು ನಾನೇನಾ ಎಂಬ ಅನುಮಾನ ಕಾಡಲಾರಂಭಿಸುತ್ತದೆ ಎಷ್ಟೋ ಸಲ.ಎಲ್ಲ ಪುಟಗಳನ್ನು ತುಂಬ ಸುಂದರವಾಗಿ ಬರೆಯುವ ಪ್ರಭೃತ್ತಿಗಳಿದ್ದಾರಾದರೂ ನಾನಿಲ್ಲಿ ಹೇಳುತ್ತಿರುವುದು ನಮ್ಮಂಥಹ ಸಾಮಾನ್ಯ ವಿದ್ಯಾರ್ಥಿಗಳ ಕುರಿತು.
ಹೀಗೆ ಪರೀಕ್ಷೆ ಬರೆದು ಪಾಸೋ ಫೇಲೋ ಆಗಿರಬಹುದಾದ ವಿದ್ಯಾರ್ಥಿಗಳೇ ಮುಂದೆ ಬಿ ಗ್ರೆಡ್ ಹಾರರ್ ಸಿನಿಮಾಗಳ ನಾಯಕರಾಗಿರುತ್ತಾರೇನೋ ಎಂಬ ಅನುಮಾನ ನನಗೆ.ಪ್ರತಿ ಹಾರರ್ ಸಿನಿಮಾದ ಹೆಸರಿನೆದುರು,’ಪುರಾನಾ’ಎಂಬ ಪದವಿರಲೇ ಬೇಕು.’ಪುರಾನಿ ಘಾಟಿ,ಪುರಾನಿ ಹವೇಲಿ, ಪುರಾನಾ ಮಂದಿರ್,ಪುರಾನಿ ಕಬರ್,ಪುರಾನಾ ಮಿನಿಸ್ಟರ್( ಥೋ ಇದಿಲ್ಲ..ಚುನಾವಣೆ ಹತ್ತಿರ ಬಂದ ಪ್ರಭಾವ,ಪ್ರಾಸಕ್ಕೆ ಮಿನಿಸ್ಟರ್ ಸಹ ಸಿಕ್ಕರು ) ಹೀಗೆ. ಪ್ರತಿ ಹಾರರ್ ಸಿನಿಮಾದ ಮೊದಲ ದೃಶ್ಯದಲ್ಲಿಯೂ ಒಂದು ಬಂಗಲೆ ಇರಬೇಕು.ಹಳೇಯದಾದಷ್ಟೂ ತೂಕ ಜಾಸ್ತಿ.ಹಾಳು ಬಂಗಲೆಯ ಎದುರೊಂದು ಟಾರು ರಸ್ತೆ.ರಸ್ತೆಯ ಮೇಲೆ ಚಂದದ ಕಾರು ,ಕಾರಿನಲ್ಲಿ ಚಂದದ ಜೋಡಿ.ಸರಿಯಾಗಿ ಈ ಪುರಾನಿ ಎನ್ನುವ ಬಂಗಲೆಯ ಎದುರಿಗೆ ಬಂದು ಕಾರು ಹಾಳಾಗಬೇಕು.ಹಾಳಾದ ಕಾರಿನಲ್ಲಿ ಕೂತ ಜೋಡಿ ಒಂದೋ ಲವರ್‌ಗಳಾಗಿರಬೇಕು ಅಥವಾ ನವದಂಪತಿಗಳಾಗಿರಬೇಕು.ಕಾರು ಹಾಳಾಗುತ್ತಲೇ ಕಾರಿನಲ್ಲಿ ಕೂತ ಪುರುಷನಿಗೆ ಬಂಗಲೆ ಕಾಣುತ್ತದೆ.ಬಂಗಲೆ ಕಾಣುತ್ತಲೇ ಅವನಿಗೆ ಪ್ರಸ್ಥವನ್ನಾಚರಿಸಿಕೊಳ್ಳುವ ಹುಕಿಯೇಳುತ್ತದೆ(ಮದುವೆ ಆಗಿದೆಯಾ ಇಲ್ಲವಾ ಬೇರೆ ವಿಷಯ).ತನ್ನ ಸಂಗಾತಿಯನ್ನು ಕರೆದುಕೊಂಡು ಹಾಳು ಬಂಗಲೆಗೆ ನಡೆಯುವ ಆತ,ಅದೆಷ್ಟೋ ಕಾಲದಿಂದ ಮಣ್ಣು ಧೂಳು ತುಂಬಿ ಕೊಳಕಾದ,ಅಸಲಿಗೆ ಬೆಳಕಿನ ಕುರುಹೇ ಇರದ ಅಲ್ಲಿ ತನ್ನ ಪ್ರಸ್ಥವನ್ನಾಚರಿಸುವ ಯೋಜನೆ ರೂಪಿಸುತ್ತಾನೆ. ಪ್ರಸ್ಥವನ್ನಾಚರಿಸುವ ಹಂತದಲ್ಲಿ(ಕೆಲವೊಮ್ಮೆ ಅದಕ್ಕೂ ಮುನ್ನ) ದೆವ್ವ ಬಂದು ಇಬ್ಬರನ್ನೂ ಕೊಂದು ಮುಗಿಸುತ್ತದೆ.ಆಗ ಸಿನಿಮಾದ ಟೈಟಲ್ ತೆರೆಯ ಮೇಲೆ ಬೀಳಬೇಕು,ಸಿನಿಮಾ ಶುರುವಾಗಬೇಕು..ಪ್ರತಿಯೊಬ್ಬ ಭಾರತೀಯ ಹಾರರ್ ಸಿನಿಮ ಪ್ರೇಮಿ ಇಷ್ಟರವರೆಗೆ ಕತೆಯನ್ನು ಊಹಿಸಿರುತ್ತಾನೆ.ಏನೇ ಕ್ಲೀಷೆ ಎಂದುಕೊಂಡರೂ ಇಲ್ಲಿಯವರೆಗೆ ಸಹಿಸಿಕೊಂಡು ಬಿಡುತ್ತಾನೆ.ಈ ಹಂತದವರೆಗೆ ಅನೇಕ ನಿರ್ದೇಶಕರು ತಕ್ಕಮಟ್ಟಿಗೆ ಸರಿಯಾಗಿಯೂ ಸಿನಿಮಾ ಮಾಡಿರುತ್ತಾರೆ.ಆದರೆ ಮುಂದಿನದ್ದು ಅಧ್ವಾನ. ನಿರ್ದೇಶಕ ಅಕ್ಷರಶ: ಅರ್ಜೆಂಟಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಯೇ.
ನಾವು ಮೊದಲು ನೋಡಿದ್ದ ಸಿನಿಮಾ ಹಾಗೆ ಇತ್ತು.ಹೆಸರು ನೆನಪಿಲ್ಲ.ಬಂಗಲೆ,ಬಂಗಲೆಯಲ್ಲಿ ರೋಮಾನ್ಸು,ಕೊಲೆ ಎಲ್ಲವೂ ಮುಗಿದು ಸಿನಿಮಾದ ಟೈಟಲ್ಲು ಬಿದ್ದ ಹತ್ತು ನಿಮಿಷಕ್ಕೆಲ್ಲ ಸಿನಿಮಾದ ದಿಕ್ಕೇ ಬದಲಾಗಿತ್ತು.ಮೊದಲ ಐದು ನಿಮಿಷಕ್ಕೆ ಕಂಡ ದೆವ್ವ ಅದೆಷ್ಟೋ ಹೊತ್ತಾದರೂ ಬರಲೇ ಇಲ್ಲ.ಬಂದದ್ದು ಬರೀ ಪ್ರಣಯದ ದೃಶ್ಯಗಳೇ.ಒಂದರಹಿಂದೊಂದರಂತೆ ರೋಮ್ಯಾನ್ಸಿನ ದೃಶ್ಯಗಳು.ಒಂದು ಹಂತಕ್ಕೆ ಅದು ಹಾರರ್ ಸಿನಿಮಾ ಹೌದಾ ಅಲ್ಲವಾ ಎಂಬುದು ನಮಗೆ ಗೊಂದಲವಾಗಿ ಹೋಗಿತ್ತು. ’ಇದೇನೋ ಮಾರಾಯಾ..’ಎಂದು ಗೊಣಗಿಕೊಂಡ ನನ್ನ ಊರಿನ ಸ್ನೇಹಿತ ಒಮ್ಮೆ ಸಿಡಿಯನ್ನ ಡ್ರೈವ್‌ನಿಂದ ಹೊರತೆಗೆದು ತನ್ನ ಚಲ್ಲಣಕ್ಕೆ ಉಜ್ಜಿ ಮರಳಿ ಕಂಪ್ಯೂಟರಿಗೆ ಸೇರಿಸಿದ್ದು ಯಾಕೆನ್ನುವುದು ಇವತ್ತಿಗೂ ನನಗೊಂದು ಯಕ್ಷಪ್ರಶ್ನೆ.ಹಾಗೆ ಉಜ್ಜಿದರೆ ಸಿಡಿಯ ಮೂಲೆಯಲ್ಲೆಲ್ಲೋ ಅಡಗಿ ಕೂತಿರಬಹುದಾದ ದೆವ್ವ ಠಣ್ಣನೇ ಜಿಗಿದು ತೆರೆಯ ಮೇಲೆ ಬರಬಹುದು ಎಂದುಕೊಂಡಿದ್ದನಾ..? ಗೊತ್ತಿಲ್ಲ.ಒಟ್ಟಾರೆ ಕಷ್ಟಪಟ್ಟು ಸಿನಿಮಾ ನೋಡಿದೆವು.ಕ್ಲೈಮಾಕ್ಸ್ ಹೊತ್ತಿಗೆ ನಿರ್ದೇಶಕನಿಗೆ ಬಹಳ ಅರ್ಜೆಂಟಾಗಿತ್ತು ಎನ್ನಿಸುತ್ತದೆ. ನಾಯಕ ತಲೆ ಸುತ್ತಿ ಬಿದ್ದಾಗ ನಾಯಕಿಯನ್ನು ಎತ್ತಿಕೊಂಡು ಹೋಗುವ ಖಳನಾಯಕ ಆಕೆಯನ್ನು ದಪ್ಪ ಸರಪಳಿಯಲ್ಲಿ ಪುರಾನಿ ಬಂಗಲೆಯ ಕಂಬಗಳಿಗೆ ಬಿಗಿದು ಕೊಂಚ ದೂರದಲ್ಲಿ ಗಹಗಹಿಸುತ್ತ ನಿಲ್ಲುತ್ತಾನೆ.ಆಗ ಕಾಣಿಸುತ್ತದೆ ದೆವ್ವ.’ವ್ಯಾವ್ಯಾ..’ಎಂದು ಘರ್ಜಿಸುತ್ತ ನಾಯಕಿಯನ್ನು ಸಮೀಪಿಸುವ ಕರಡಿರೂಪದ ದೆವ್ವವನ್ನು ಕಂಡು ಒಮ್ಮೆ ಜೋರಾಗಿ ಕಿರುಚುತ್ತಾಳೆ ನಾಯಕಿ.ಅಷ್ಟರಲ್ಲಿ ಆಕೆಗೇನೋ ಜ್ಞಾನೋದಯ.ಒಮ್ಮೆಲೇ ಕಣ್ಣುಮುಚ್ಚಿಕೊಂಡು ಗಟ್ಟಿಯಾಗಿ,’ಓಂ ನಮ: ಶಿವಾಯ’ಎಂದು ಮಂತ್ರ ಹೇಳಲಾರಂಭಿಸುತ್ತಾಳೆ.ಇಡೀ ಸಿನಿಮಾದಲ್ಲಿ ಆಕೆ ದೇವರನ್ನು ಪೂಜಿಸುವ,ಕನಿಷ್ಟ ದೇವಸ್ಥಾನದ ಒಂದು ದೃಶ್ಯವಿಲ್ಲ.ಸಂಕಟ ಬಂದಾಗ ಆಕೆಗೆ ವೆಂಕಟರಮಣನ(ಶಿವ..??)ನ ನೆನಪಾಗಿದೆ.ಮಂತ್ರ ಹೇಳಲಾರಂಭಿಸಿದ್ದಾಳೆ.ವಿಚಿತ್ರ ನೋಡಿ,ಹಾಗೆ ಆಕೆ ಮಂತ್ರ ಜಪಿಸಲಾರಂಭಿಸಿದ ಸರಿಯಾಗಿ ಒಂದು ನಿಮಿಷಕ್ಕೆ,ಸುಮಾರು ಐದಾರು ’ಓಂ ನಮ: ಶಿವಾಯ’ಗಳ ನಂತರ ಏಕಾಏಕಿ ಬಂಗಲೆಯ ತಾರಸಿ ಒಡೆಯುತ್ತದೆ.ಅಲ್ಲಿ ಕಾಣುವುದೇನು..?? ಸಾಕ್ಷಾತ ಪರಶಿವನ ತ್ರಿಶೂಲ.!! ಮನೆಯ ಮೇಲ್ಛಾವಣಿಯೊಡೆದು ನೇರವಾಗಿ ಪಿಶಾಚಿಯ ಎದೆಗೆ ಇಳಿಯುತ್ತದೆ ತ್ರಿಶೂಲ.’ಆಆಆಅ’ಎಂದರಚುವ ದೆವ್ವ ಗೊಟಕ್.ನಾಯಕಿಯ ಕೈಗೆ ಬಿಗಿದಿದ್ದ ಸರಪಣಿ ತಾನಾಗಿಯೇ ಬಿಚ್ಚಿಹೋಗುತ್ತದೆ.ಒಂದೇ ಒಂದು ದಿನವೂ ತನ್ನನ್ನು ನೆನೆಯದಿದ್ದರೂ ತಕ್ಷಣವೇ ನಾಯಕಿಯನ್ನು ರಕ್ಷಿಸಿದ ಶಿವ ನಿಜಕ್ಕೂ ದೇವರೆ ಬಿಡಿ.ಆದರೆ ಶಿವನ ಒಳ್ಳೆಯತನ ನನ್ನ ದೈವ ಭಕ್ತ ಸ್ನೇಹಿತನಿಗೆ ಇಷ್ಟವಾಗಲಿಲ್ಲ.’ ಅವ್ನೌನ್..!! ದಿನಾ ಮುಂಜಾನೆಯೆದ್ದು ಜಳಕ ಮಾಡಿ ಇಬತ್ತಿ ಹಚ್ಕೊಂಡ್ ದೇವ್ರ ಪೂಜಿ ಮಾಡಿದ್ರ ಒಮ್ಮೆನೂ ಶಿವಪ್ಪ ಒಲಿಲಿಲ್ಲ.ಒಂದೇ ಗಜ್ಜಿಕ್ ಇಕೀಗೆ ಒಲ್ದ ಬಿಟ್ನಲ್ಲೋ ಗುರಪ್ಪಾ..’ಎನ್ನುತ್ತ ಶಿವನ ಕುರಿತು ನನಗೆ ದೂರಲಾರಂಭಿಸಿದ್ದ.ಅವನಿಗೆ ಸಾಕ್ಷಾತ್ತು ಶಿವನಿಂದಾದ ಅನ್ಯಾಯಕ್ಕೆ ನಾನಾದರೂ ಏನು ಮಾಡಲುಸಾಧ್ಯವಿತ್ತು..? ವಿಚಿತ್ರವೆಂದರೆ ಸಿನಿಮಾ ಅಲ್ಲಿಗೆ ಮುಗಿದು ಹೋಗಿತ್ತು.ತಲೆ ಸುತ್ತಿ ಬಿದ್ದ ನಾಯಕನಿಗೆ ಏನಾಯ್ತು..? ಗಹಗಹಿಸುತ್ತಿದ್ದ ಖಳನಾಯಕ ಏನಾದ..? ಹೀರೊ ಸತ್ತನಾ,ವಿಲನ್ ಸತ್ತನಾ ಅಥವಾ’ಡಬ್ಬಾ ನನ್ಮಗ,ನಿನ್ನ ಒಂದೇ ಏಟಿಗೆ ಬಿದ್ದೋದ,ನಡಿ ನಾವಿಬ್ರೇ ಮದುವೆಯಾಗೋಣ’ಅಂತ ಹೀರೊಯಿನ್ ವಿಲನ್‌ನನ್ನೇ ಪ್ರೀತಿಸಿದಳಾ ..? ಒಂದೂ ಗೊತ್ತಾಗಲಿಲ್ಲ...
ಹಿಂದಿ ಸಿನಿಮಾದ ಕತೆ ಹೀಗಾದರೆ ಕನ್ನಡದ್ದೊಂದು ಸಿನಿಮಾದ ಕತೆ ಇನ್ನೂ ರೋಚಕ.’ರಹಸ್ಯ ರಾತ್ರಿ”ಎನ್ನುವುದು ಸಿನಿಮಾದ ಹೆಸರು.ವಿಷ್ಣುವರ್ಧನ ನಾಯಕ ನಟನಾದರೆ,ಭಾರತಿ ನಾಯಕಿ.ಎಂದಿನಂತೆ ಊಟ ಮುಗಿಸಿ ಸಿಡಿ ಅಂಗಡಿಯನ್ನು ಹೊಕ್ಕರೆ ಅಲ್ಲಿಯ ಕಿಟಕಿ ಪಕ್ಕದ ಗಾಜಿನ ಕಪಾಟಿನಲ್ಲಿದ್ದ ಸಿನಿಮಾದ ಕವರು ಸೆಳೆದಿತ್ತು.ಕವರ್ ಪೇಜಿನ ಮೇಲೆ ಬಲೆಯಲ್ಲಿ ಸಿಲುಕಿಬಿದ್ದ ಡ್ರಾಕುಲಾನ ಮುಖ.ಪಕ್ಕದಲ್ಲಿಯೇ ಕಣ್ಮುಚ್ಚಿ ನಿಂತ ಯುವತಿಯೊಬ್ಬಳ ಕುತ್ತಿಗೆಯ ಮೇಲೆ ಅವನ ಹಲ್ಲುಗಳು.ಕೊಂಚ ಕೆಳಭಾಗದಲ್ಲಿ ವಿಷ್ಣುವರ್ಧನ್‌ರ ಕೋಪಿಷ್ಟ ಮುಖ ಮತ್ತು ಕೊನೆಯಲ್ಲಿ ಭಾರತೀಯ ಸಣ್ಣದ್ದೊಂದು ಭಯಭೀತ ಮುಖ.ಅಷ್ಟು ಸಾಕಲ್ಲ ನಮ್ಮನ್ನು ಹಾಳು ಮಾಡುವುದಕ್ಕೆ..?? ತಕ್ಷಣವೇ ಸಿಡಿಯನ್ನೆತ್ತಿಕೊಂಡು ಬಂದು ಎಂದಿನಂತೆ ಕತ್ತಲೆ ಕೋಣೆಯಲ್ಲಿ ಕುರ್ಚಿಯೆದುರು ಕುಳಿತೇವು.ವಿಷ್ಣುವರ್ಧನ್ ನಟಿಸಿರುವ ಸಿನಿಮಾ ಎಂದರೆ ಕನಿಷ್ಟ ನೋಡುವಷ್ಟಾದರೂ ಇರಬಹುದು ಎಂಬ ನಂಬಿಕೆ ನಮ್ಮದು.ಸಿನಿಮಾ ಶುರುವಾಯಿತು.ಟಿಪಿಕಲ್ ಬಂಗ್ಲೆಗಿಂಗ್ಲೆಯಿಲ್ಲದ ಕಾಲೇಜು ದೃಶ್ಯ.ಇದೇನು ಹೀಗೆ ಶುರುವಾಯ್ತು ಅಂದುಕೊಂಡೆವು.ಬಹುಶ: ಬೇರೆ ತೆರನಾದ ಸಿನಿಮಾ ಎಂದುಕೊಂಡೆವು.ಸಿನಿಮಾ ಶುರುವಾಗಿ ಅರ್ಧಗಂಟೆಯಾದರೂ ಒಂದೇ ಒಂದು ದೆವ್ವದ ದೃಶ್ಯ ಬರಲಿಲ್ಲ.ಕಾಲೇಜು ಹುಡುಗ ಹುಡುಗಿಯರು ಅಲ್ಲಿಂದ ಇಲ್ಲಿ ಓಡಾಡಿದರು,ಒಂದಷ್ಟು ಅಸಂಭದ್ದ ಕೀಟಲೆ ಮಾಡಿದರು,ಏನೋ ಒಂದು ಜಗಳವಾಯಿತು,ಪೋಷಕನಟಿಯೊಬ್ಬಳು,ತನ್ನ ಸ್ನೇಹಿತೆಯತ್ತ ತಿರುಗಿ,ತನ್ನ ತೋರುಬೆರಳನ್ನು ಹಣೆಯಿಂದ ನಿಧಾನಕ್ಕೆ ಮೂಗಿನ ಮೇಲೆ ಇಳಿಸುತ್ತ ತುಟಿಗಳ ಮೇಲೆ ತಂದು ಕಣ್ಮುಚ್ಚಿಕೊಂಡು,’ಕಾಲೇಜು ಲೈಫ್ ಅಂದ್ರೆ.....ಸುಖಾ..ಪಡಬೇಕು’ಎನ್ನುತ್ತ ಕಣ್ಮುಚ್ಚಿ ಭಾವತೃಪ್ತಿ ಹೊಂದಿದ್ದೂ ಆಯಿತು.ಅಷ್ಟಾದರೂ ದೆವ್ವದ ಸುಳಿವಿಲ್ಲ.ನಮಗಾಗಲೇ ಕುಳಿತಲ್ಲಿಯೇ ಸಣ್ಣ ಅಸಹನೆ.ತೆಗೆದುಬಿಡೋಣ ಎಂದುಕೊಳ್ಳುವಷ್ಟರಲ್ಲಿ ಏಕಾಏಕಿ ಕಾಡಿನಲ್ಲೊಂದು ಮನೆ,ಅಲ್ಲಿ ಎದ್ದು ನಿಂತ ಡ್ರಾಕುಲಾ.ಯಾಕೆ ನಿಂತ..? ಅಷ್ಟೊತ್ತು ಏನು ಮಾಡ್ತಿದ್ದ ಕೇಳಬೇಡಿ.ಅಂತೂ ಒಂದೂವರೆ ತಾಸಿನ ಮೇಲೆ ಡ್ರಾಕುಲಾ ದರ್ಶನ.ಕಾಲೇಜಿನಿಂದ ಟ್ರಿಪ್ಪಿಗೆ ಬಂದ ಹುಡುಗರ ಗುಂಪಿನಲ್ಲಿ ಇದ್ದೊಬ್ಬ ಹುಡುಗಿಯನ್ನು ಆತ ಕಚ್ಚಿ ಕೊಂದ.ಅವನನ್ನು ಹುಡುಕಿಕೊಂಡ ಹೊರಟ ವಿಷ್ಣುವರ್ಧನ ಮತ್ತು ಇನ್ನಿಬ್ಬರು ನಾಯಕರ ಕೈಗೆ ಸಿಕ್ಕ.ಮೊದಲ ಬಾರಿ ಕೃತಕ ಕಾಡಿನಲ್ಲಿ(ನಿಜಕ್ಕೂ ಕೃತಕವೇ..ಯಾವುದೋ ಪಾರ್ಕಿನಲ್ಲಿ ಶೂಟ್ ಮಾಡಿದ್ದಾರೆ ನಡುನಡುವೆ ಚಿತ್ರದಂತಿರುವ ಮರಗಳು ಸ್ಪಷ್ಟವಾಗಿ ಗೋಚರಿಸುತ್ತವೆ ತೆರೆಯ ಮೇಲೆ) ನಾಯಕರನ್ನೇ ಹೆದರಿಸುವ ಡ್ರಾಕುಲಾ ತಪ್ಪಿಸಿಕೊಳ್ಳುತ್ತಾನೆ.ಕೊನೆಗೆ ಬಂಗಲೆಯೇ ಅವನ ಆವಾಸಸ್ಥಾನವೆಂದು ಕಂಡುಕೊಳ್ಳುವ ನಾಯಕರು ಅದೊಂದು ದಿನ ಅಲ್ಲಿಯೇ ಹೋಗಿ ಅವನಿಗೆ ಬೆನ್ನು ಹಾಕಿ ನಿಲ್ಲುತ್ತಾರೆ.ದೂರದಿಂದಲೇ ಅವರನ್ನು ಗಮನಿಸುವ ಡ್ರಾಕುಲಾ ಇದೇ ಅವಕಾಶವೆಂದರಿತು ಅವರ ರಕ್ತ ಹೀರಲು ನಿಧಾನಕ್ಕೆ ಬಂದರೆ ಕಹಾನಿ ಮೇ ಟ್ವಿಸ್ಟ್..!! ಸರಕ್ಕನೇ ಸೊಂಟದ ಮೇಲೆ ಕೈ ಕೊಟ್ಟು ಎದುರಿಗೆ ನಿಲ್ಲುತ್ತಾರೆ .ಅವರು ತಿರುಗಿ ನಿಂತರೆ ಕಂಡದ್ದೇನು..? ಅವರ ಟಿ ಶರ್ಟಿನ ಮೇಲೆ ಆಂಜನೇಯನ ಚಿತ್ರ.ಅದನ್ನು ನೋಡಿ ಗಾಬರಿಯಾದ ಡ್ರಾಕುಲಾ ಮತ್ತೊಬ್ಬ ನಟನತ್ತ ಓಡಿದರೆ ಹಿನ್ನಲೆಯಲ್ಲಿ..’ಆಂಜನೇಯ,ಆಂಜನೇಯ,ಆಂಜನೇಯ..’ಎಂಬ ರಾಗ.ಮತ್ತೊಬ್ಬ ನಾಯಕ ತಿರುಗಿ ನಿಂತರೆ ತಿರುಪತಿ ತಿಮ್ಮಪ್ಪ ಅವನಂಗಿಯ ಮೇಲೆ ವಿರಾಜಮಾನ.ಮತ್ತೆ ಡ್ರಾಕುಲಾನ ಓಟ,ಮತ್ತೆ,’ತಿಮ್ಮಪ್ಪ ತಿಮ್ಮಪ್ಪ ತಿಮ್ಮಪ್ಪ..’ಎಂಬ ಬ್ಯಾಕ್‌ಗ್ರೌಂಡ್ ಮ್ಯೂಸಿಕ್.ಕೊನೆಯ ನಾಯಕ ತಿರುಗಿ ನಿಂತರೆ ಅವನ ಉಡುಪಿನ ಮೇಲೆ ಅಯ್ಯಪ್ಪ.ಈ ಬಾರಿ ದೆವ್ವ ಓಡುವಾಗ,’ಅಯ್ಯಪ್ಪ,ಅಯ್ಯಪ್ಪ,ಅಯ್ಯಪ್ಪ,ಅಯ್ಯಪ್ಪಾ..’ಎನ್ನುವ ರಾಗ.ಅಂಥದ್ದೊಂದು ಅಧ್ವಾನವನ್ನು ನೋಡುತ್ತ ಕಂಪ್ಯೂಟರಿನೆದುರು ಕೂತ ನಮ್ಮ ಸ್ಥಿತಿ ಅಯ್ಯಯ್ಯಪ್ಪಾ...!! ಅದ್ಯಾಕೆ ವಿಷ್ಣು ಅಂಥದ್ದೊಂದು ಸಿನಿಮಾ ಮಾಡಿದರು ಎನ್ನುವುದು ರಹಸ್ಯವೇ
ಇವುಗಳಿಗೆ ಹೋಲಿಸಿದರೆ ಇಂಗ್ಲಿಷು ಸಿನಿಮಾಗಳು ಅಷ್ಟಾಗಿ ಮೋಸಮಾಡಲಿಲ್ಲ.ಯಾವುದೋ ಒಂದು ಸಿನಿಮಾದಲ್ಲಿ ದೆವ್ವದ ಕೋರೆಹಲ್ಲು ಊರಿನ ಶೆಟ್ಟರಂಗಡಿಯಲ್ಲಿ ಸಿಗುತ್ತಿದ್ದ ಐವತ್ತು ಪೈಸೆಯ ಕೋರೆ ಹಲ್ಲು ಎನ್ನುವುದೊಂದು ಬಿಟ್ಟರೆ ಉಳಿದೆಲ್ಲವೂ ಸಾಮಾನ್ಯ ಒಳ್ಳೆಯ ಸಿನಿಮಾಗಳೇ.ಇಷ್ಟಾಗಿಯೂ ನೋಡಿದ ಸಿನಿಮಾಗಳೆಲ್ಲವೂ ಕೆಟ್ಟ ಸಿನಿಮಾಗಳೇ ಅಂತೇನಿಲ್ಲ.ಕನ್ನಡದ’ಏಟು ಇದೀರೇಟು’ ಹಿಂದಿಯ ’ಭೂತ್’,’ವಾಸ್ತುಶಾಸ್ತ್ತ್ರ’ದಂತಹ ಅನೇಕ ಸಿನಿಮಾಗಳನ್ನು ನೋಡಿದ್ದು ಕಾಲೇಜಿನ ದಿನಗಳಲ್ಲಿಯೇ.
ನಿನ್ನೆ ಯೂಟ್ಯೂಬಿನಲ್ಲಿ ಏನನ್ನೋ ಹುಡುಕುತ್ತಿದ್ದಾಗ ’ಪುರಾನಿ ಹವೇಲಿ’ಸಿನಿಮಾ ಕಣ್ಣಿಗೆ ಬಿತ್ತು.’ಪುರಾನಿ’ಹೆಸರು ಕಂಡಾಗ ಹಳೆಯದ್ದೆಲ್ಲ ನೆನಪಾಗಿ ಕತೆಯನ್ನು ಹೆಂಡತಿಗೆ ಹೇಳಿದರೆ ಬಿದ್ದುಬಿದ್ದು ನಕ್ಕ ಆಕೆ,’ಕೂತು ಬರೀ ಇದನ್ನ’ಎಂದಳು.ಹಾಗಾಗಿ ಎಲ್ಲವನ್ನೂ ನಿಮ್ಮೆದುರಿಗಿಟ್ಟೆ.
#ಸವಿಸವಿನೆನಪುಸಾವಿರನೆನಪು