ಕಗ್ಗ ದರ್ಶನ 40(2)

ಕಗ್ಗ ದರ್ಶನ 40(2)

ದೈವ ತೋರುವುದು ಕರವಾಳ ವರದಾನಗಳ
ಆವಂದದಾವುದೋ ನಿನಗೆ ಗೊತ್ತಿಲ್ಲ
ನೋವಲ್ತೊಡಲಗಟ್ಟಿಯನಳೆವುಪಾಯವದು
ದೈವ ಸತ್ತ್ವಪರೀಕ್ಷೆ - ಮರುಳ ಮುನಿಯ

ದೈವವು ನಿನಗೆ ಕರವಾಳ (ಕತ್ತಿ) ಮತ್ತು ವರದಾನ - ಎರಡನ್ನೂ ತೋರುತ್ತದೆ. ಆದರೆ ದೈವ ಯಾವಾಗ ನಿನ್ನ ಮೇಲೆ ಕತ್ತಿ ಘಳಪಿಸುತ್ತದೆ ಅಥವಾ ಅನುಗ್ರಹ ತೋರುತ್ತದೆ ಎಂದು ನಿನಗೆ ಗೊತ್ತಿಲ್ಲ. ದೈವ ಕತ್ತಿ ಬೀಸಿದಾಗ ನೋವು ಅಂದುಕೊಳ್ಳಬೇಡ (ನೋವು ಅಲ್ತೆ); ಅದು ದೈವ ನಿನ್ನೊಡಲ ಗಟ್ಟಿತನ ಅಳೆಯುವ ಉಪಾಯ. ಹೀಗೆ ದೈವ ನಿನ್ನ ಸತ್ತ್ವಪರೀಕ್ಷೆ ಮಾಡುತ್ತಲೇ ಇರುತ್ತದೆ ಎಂದು ವಿವರಿಸುತ್ತಾರೆ ಡಿ.ವಿ.ಜಿ.ಯವರು.

ದಿವಂಗತ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಕತೆ “ಅಗ್ನಿಯ ರೆಕ್ಕೆಗಳು”. ಅದರಲ್ಲೊಂದು ಪ್ರಸಂಗವನ್ನು ಬರೆದಿದ್ದಾರೆ. ಅವರು ಎಚ್.ಎ.ಎಲ್.ನಿಂದ ವೈಮಾನಿಕ ಎಂಜಿನಿಯರ್ ಪದವಿ ಪಡೆಯುತ್ತಾರೆ. ಆಗ ಅವರಿಗೆ ಎರಡು ಉದ್ಯೋಗದ ಅವಕಾಶಗಳು ಒದಗಿ ಬರುತ್ತವೆ. ಒಂದು, ಭಾರತೀಯ ವಾಯುದಳದಲ್ಲಿ ಪೈಲಟ್ ಆಗುವುದು. ಇನ್ನೊಂದು, ರಕ್ಷಣಾ ಇಲಾಖೆಯಲ್ಲಿ ವಿಜ್ನಾನಿ ಆಗುವುದು. ಅವರು ಎರಡೂ ಸಂದರ್ಶನಗಳಿಗೆ ಹಾಜರಾಗುತ್ತಾರೆ. ಆದರೆ ವಾಯುದಳಕ್ಕೆ ಅವರು ಆಯ್ಕೆ ಆಗಲಿಲ್ಲ. ಪೈಲಟ್ ಆಗಬೇಕೆಂಬ ಆಶೆ ಕೈಗೂಡದ್ದರಿಂದ ಅವರಿಗೆ ಭಾರಿ ನಿರಾಶೆ. ಅನಂತರ ೧೯೫೮ರಲ್ಲಿ ಅವರು ಸೇರಿಕೊಂಡದ್ದು ರಕ್ಷಣಾ ಇಲಾಖೆಯ ಹಿರಿಯ ವೈಜ್ನಾನಿಕ ಸಹಾಯಕ ಹುದ್ದೆಗೆ. ಅದು ತನ್ನ ವಿಧಿ ಆಗಿದ್ದರೆ ಅದನ್ನು ಸ್ವೀಕರಿಸುತ್ತೇನೆ ಎಂಬ ಮನೋಭಾವದಿಂದ ಮುನ್ನಡೆದರು. ಮುಂದೆ ಅವರು ರಾಕೆಟ್ ಉಡಾವಣೆ ತಂತ್ರಜ್ನಾನದಲ್ಲಿ ಭಾರತವನ್ನು ಮುಂಚೂಣಿಗೆ ತಂದದ್ದು; ಭಾರತದ ಅತ್ಯುನ್ನತ ಅಧಿಕಾರ ಸ್ಥಾನಕ್ಕೇರಿ ರಾಷ್ಟ್ರಪತಿ ಆದದ್ದು; ಲಕ್ಷಗಟ್ಟಲೆ ಯುವಜನರಿಗೆ ಸ್ಫೂರ್ತಿ ಆದದ್ದು - ಇವೆಲ್ಲ ಈಗ ಚರಿತ್ರೆ.

ಉತ್ತರಪ್ರದೇಶದ ಲಕ್ನೋದ ಡಾ. ಸರೋಜಿನಿ ಅಗ್ರವಾಲ್ ಅವರ ಬದುಕಿನಲ್ಲಿಯೂ ಹೀಗೆಯೇ ಆಯಿತು. ಅವರಿಗಿಬ್ಬರು ಗಂಡು ಮಕ್ಕಳ ಜನನ. ಮೂರನೆಯ ಬಾರಿ ಗರ್ಭವತಿಯಾದಾಗ ತನಗೆ ಹೆಣ್ಣು ಮಗುವಾಗಲಿ ಎಂದು ಎಲ್ಲ ದೇವರಿಗೂ ಕೈಮುಗಿದರು. ಆಗ ಹುಟ್ಟಿದ್ದು ಅವಳಿಜವಳಿ ಮಕ್ಕಳು - ಒಂದು ಗಂಡು, ಒಂದು ಹೆಣ್ಣು. ಆ ಹೆಣ್ಣು ಮಗು ಮನೀಷಾ. ದೈವಕೃಪೆಗಾಗಿ ಪಾರವಿಲ್ಲದ ಸಂತೋಷ ಅವರಿಗೆ. ಅದೆಲ್ಲ ಕೆಲವೇ ವರುಷ. ಎಪ್ರಿಲ್ ೧, ೧೯೭೮ರಂದು ಅಪಘಾತದಲ್ಲಿ ಮನೀಷಾಳ ಸಾವು. ಡಾ. ಸರೊಜಿನಿ ಅವರಿಗೆ ಬದುಕೇ ಬೇಡವಾಯಿತು. ಅದಾಗಿ ಕೆಲವೇ ವರುಷಗಳಲ್ಲಿ ವೈದ್ಯರೊಬ್ಬರ ಸಹಕಾರದಿಂದಾಗಿ, ಹೆರಿಗೆಯಾಗಿ ತೀರಿಕೊಂಡಿದ್ದ ತಾಯಿಯೊಬ್ಬಳ ಹೆಣ್ಣುಮಗುವನ್ನು ದತ್ತು ಪಡೆದರು. ಅನಂತರ ಇನ್ನೂ ಹಲವು ಅನಾಥ ಹೆಣ್ಣುಮಕ್ಕಳನ್ನು ಸಲಹತೊಡಗಿದರು. ಅದಕ್ಕಾಗಿ ೧೯೮೪ರಲ್ಲಿ ಮನೀಷಾ ಮಂದಿರ ಎಂಬ ಅನಾಥಾಶ್ರಮವನ್ನೇ ಸ್ಥಾಪಿಸಿದರು. ಒಂದು ಹೆಣ್ಣು ಮಗುವನ್ನು ದೈವ ಕಿತ್ತು ಕೊಂಡರೇನಂತೆ? ಕಳೆದ ೩೩ ವರುಷಗಳಲ್ಲಿ ೮೦೦ಕ್ಕಿಂತ ಅಧಿಕ ಹೆಣ್ಣು ಮಕ್ಕಳಿಗೆ “ತಾಯಿ"ಯಾಗುವ ಅವಕಾಶವನ್ನು ಸರೋಜಿನಿ ಅವರಿಗೆ ದೈವ ಒದಗಿಸಿತು, ಅಲ್ಲವೇ?