ಭಯಾನಕ -- ಸಣ್ಣ ಕಲ್ಪನೆ
ಈ ಮನೆಯಲ್ಲಿ ಏನೋ ಸರಿಯಿಲ್ಲ ಎಂದೆನ್ನಿಸಿದ್ದು ಅದೆಷ್ಟನೇಯ ಸಲವೋ ಅವಳಿಗೆ.ಹೊಸಮನೆಗೆ ಬಂದಾಗಿನಿಂದ ದಂಪತಿಗಳ ನಡುವೆ ಜಗಳವಾಗಿದ್ದೇ ಹೆಚ್ಚು.ಬಂದ ಎರಡೇ ತಿಂಗಳಲ್ಲಿ ಏಳೆಂಟು ಕಲಹಗಳು.ಮನೆ ಬದಲಿಸೋಣವಾ ಎಂದು ಗಂಡನನ್ನು ಕೇಳಿದರೆ ನಕ್ಕುಬಿಡುತ್ತಾನೆ ಅವನು.'ಹುಚ್ಚಾ ನಿಂಗೆ.ಬಂದು ಇನ್ನೂ ಎರಡನೇ ತಿಂಗಳಿದು' ಎನ್ನುವುದು ಅವನ ಉತ್ತರವೆನ್ನುವುದು ಅವಳಿಗೆ ಗೊತ್ತು.ಆದರೆ ಅವನಿಗೇನು ಗೊತ್ತು ತನ್ನ ಪರಿಸ್ಥಿತಿ ಎಂದುಕೊಂಡವಳಿಗೆ ಸಣ್ಣಗೆ ನಿಟ್ಟುಸಿರು.ಖ್ಯಾತ ಕಂಪನಿಯೊಂದರ ಮಾರಾಟ ಪ್ರತಿನಿಧಿಯವನು. ಊರಿಂದೂರಿಗೆ ತೆರಳುತ್ತ ಡ್ಯೂಟಿ ಮಾಡುವ ಅವನು ಮನೆಯಿಂದ ಹೊರಗಿರುವುದೇ ಹೆಚ್ಚು.ಹಾಗವನು ಹೊರಗಿದ್ದಾಗ ಮನೆಯಲ್ಲಿ ಇವಳು ಮತ್ತು ನಾಲ್ಕು ವರ್ಷದ ಅಂಕಿತ್ ಮಾತ್ರ.ಇರುವುದು ಇಬ್ಬರೇ ಆದರೂ ಇನ್ನೊಬ್ಬರು ಇದ್ದಂತೆನ್ನಿಸುವುದೇಕೋ ಎನ್ನುವುದು ಅವಳಿಗಿನ್ನೂ ಅರ್ಥವಾಗಿಲ್ಲ.ಅಡುಗೆ ಕೋಣೆಯ ಟೆಬಲ್ಲಿನೆದುರು ಮಗನನ್ನು ಕೂರಿಸಿ ಅಡುಗೆ ಮಾಡುತ್ತಿದ್ದರೆ ಪಕ್ಕನೇ ಬೆಡ್‌ರೂಮಿನಲ್ಲಿ ಯಾರೋ ಇದ್ದಾರೆನ್ನುವ ಭಾವ ಕಾಡುತ್ತದೆ ತನಗೆ.ಮೊದಲು ಸಣ್ಣಗೆ ಶುರುವಾಗುವ ಭಾವ ಒಂದು ಹೊತ್ತಿಗೆ ಅದ್ಯಾವ ಪರಿ ಆವರಿಸಿಕೊಂಡುಬಿಡುತ್ತದೆಂದರೆ ಒಮ್ಮೆ ಹೋಗಿ ನೋಡಿಕೊಂಡು ಬಂದುಬಿಡುವಷ್ಟು.ಅಳುಕುತ್ತಲೇ ಹೋಗಿ ಬೆಡ್‌ರೂಮಿನ ಬಾಗಿಲು ತೆರೆದರೇ ಯಾರೂ ಇರುವುದಿಲ್ಲ.ಬಾಗಿಲ ಪಕ್ಕ ಯಾರಾದರೂ ನಿಂತಿದ್ದಾರೇನೋ ಎಂದುಕೊಂಡು ಇಣುಕಿದರೂ ಮೂಲೆಯಲ್ಲಿ ಬರಿ ಕತ್ತಲು.ಯಾರೂ ಇಲ್ಲದಿದ್ದರೂ ಕಾಡುವ ಅಸಮಾಧಾನ.ಮರಳಿ ಬೆಡ್‌ರೂಮಿನ ಬಾಗಿಲು ಹಾಕಿ ಎರಡು ಹೆಜ್ಜೆ ನಡೆಯುವಷ್ಟರಲ್ಲಿ ಒಳಗೆ ಹಾಸಿಗೆಯ ಮೇಲೆ ಯಾರೋ ಕೂತಿದ್ದಾರೇನೊ ಎನ್ನುವ ಭಾವ.ಆವರಿಸಿಕೊಳ್ಳುವ ಕಿರಿಕಿರಿ.ಈ ಭಯವನ್ನು ಗಂಡನಿಗೆ ಅರ್ಥಮಾಡಿಸುವುದು ಹೇಗೆ ಎಂದಾಲೋಚಿಸುತ್ತಲೇ ಮಲಗಿಕೊಂಡಿದ್ದ ಅವಳಿಗೆ ಎಷ್ಟೊತ್ತಿಗೆ ನಿದ್ರೆ ಹತ್ತಿತ್ತೊ ತಿಳಿಯದು.
ಹಾಗೆ ಗಾಢ ನಿದ್ರೆಯಲ್ಲಿದ್ದವಳನ್ನು ಎಬ್ಬಿಸಿದ್ದು ಆ ಶಬ್ದ.ಕನಸಿನ ಲೋಕದಲ್ಲೆಲ್ಲೋ ತೇಲುತ್ತಿದ್ದವಳು ಪ್ರಶಾಂತ ರಾತ್ರಿಯಲ್ಲಿ ಕೇಳಿದ 'ಠಣ್ ಠಣ್ ಠಣ್' ಎಂಬ ಸದ್ದಿಗೆ ಎದ್ದು ಕುಳಿತಿದ್ದಳು.ಬೆಚ್ಚಿ ಬಿದ್ದ ಕಾರಣಕ್ಕೋ ಏನೊ ಮೈಯಲ್ಲಿ ಸಣ್ಣ ನಡುಕ.ನಿದ್ರೆಯ ಜೋಂಪಿಗೆ ಕಣ್ಣು ಉರಿಯುತ್ತಿತ್ತು. ಬೆಡ್‌ರೂಮಿನಲ್ಲಿ ಸಣ್ಣದ್ದೊಂದು ಜೀರೊ ದೀಪ ಉರಿಯುತ್ತಿದೆಯೆನ್ನುವುದನ್ನು ಬಿಟ್ಟರೆ ಹೊರಗೆ ಗಾಢಾಂದಕಾರವೇ.ಪಾತ್ರೆಯೊಂದು ಅಡುಗೆಮನೆಯಲ್ಲಿ ಬಿದ್ದಿದೆಯೆನ್ನುವುದು ಅವಳಿಗೆ ಗೊತ್ತಾಗಿತ್ತು.ಪಕ್ಕದಲ್ಲಿ ಮಗ ಹಾಯಾಗಿ ನಿದ್ರಿಸುತ್ತಿದ್ದ.ಒಮ್ಮೆಲೇ ಎದ್ದು ಅಡುಗೆಮನೆಗೆ ಹೋಗಲು ಹಿಂಜರಿಕೆ.ಕೊಂಚ ಧೈರ್ಯ ತಂದುಕೊಂಡು ಬೆಡ್‌ರೂಮಿನ ಬಾಗಿಲು ತೆರೆದು ಅಡುಗೆಮನೆಯತ್ತ ನಡೆದಳು. ಬೆಡ್‌ರೂಮಿನಿಂದ ಅಡುಗೆಮನೆಯ ಕೊಂಡಿಯಂತಿರುವ ಪ್ಯಾಸೇಜ್ ಮೂಲಕ ನಡೆಯುತ್ತ ಸಾಗುತ್ತಿದ್ದವಳಿಗೆ ಸಣ್ಣಗೆ ಕಂಪನ.
ಅವಳು ಅಡುಗೆಮನೆಯನ್ನು ತಲುಪುವಷ್ಟರಲ್ಲಿ ಅಷ್ಟೂ ಹೊತ್ತು ನೆಲದ ಮೇಲೆ ತಿರುಗುತ್ತ,'ರವ್,ರವ್,ರವ್,ರವ್' ಎಂದು ಸದ್ದು ಮಾಡುತ್ತಿದ್ದ ಲೋಟ ಒಮ್ಮೆಲೆ ಸ್ಥಬ್ದವಾಗಿತ್ತು.ನಡುರಾತ್ರಿಯ ಕತ್ತಲೆಯ ಮನೆಯಲ್ಲೀಗ ಅಸಹನೀಯ ಪ್ರಶಾಂತತೆ.ಒಂದರೇಕ್ಷಣ ದೀಪ ಹಾಕಲು ಹಿಂಜರಿದವಳ ದೃಷ್ಟಿ ಅಡುಗೆಕೋಣೆ ಮೂಲೆಯೆಡೆಗೆ ಸಾಗಿತ್ತು.ಘೋರ ಕತ್ತಲಲ್ಲಿ ದೊಡ್ಡತಲೆಯ ಸಣಕಲು ಕಾಲುಗಳ ಕಪ್ಪು ಆಕೃತಿಯೊಂದನ್ನು ಮೂಲೆಯಲ್ಲಿ ಕಂಡಂತಾಗಿ ಕಾಲುಗಳ ಶಕ್ತಿಯೇ ಉಡುಗಿ ಹೋದಂತಾಯಿತು ಅವಳಿಗೆ.ಮರುಕ್ಷಣವೇ ಅಡುಗೆಕೋಣೆಯ ಪ್ರವೇಶದ್ವಾರದ ಪಕ್ಕಕ್ಕಿದ್ದ ಎಲ್ಲಾ ಸ್ವಿಚ್ಚುಗಳನ್ನು ರಪರಪನೇ ಒತ್ತಿಬಿಟ್ಟಳು ಆಕೆ.ಕೋಣೆಯ ಕಸಗುಡಿಸಲು ತಂದಿದ್ದ ಪೊರಕೆ ಮತ್ತದರಿಂದ ಕೊಂಚ ಮೇಲಕ್ಕೆ ಮೊಳೆಯೊಂದಕ್ಕೆ ತೂಗಿಸಿಟ್ಟಿದ್ದ ದೊಡ್ಡ ಬಾಣಲಿಯ ಒಟ್ಟು ಚಿತ್ರಣ ಕತ್ತಲಲ್ಲಿ ತನಗೊಂದು ಭ್ರಮೆ ಮೂಡಿಸಿದೆ ಎಂಬುದರಿವಾದಾಗ ಸಮಾಧಾನದ ನಿಟ್ಟುಸಿರು.ಆದರೆ ಭ್ರಮೆ ಹುಟ್ಟಿಸಿದ್ದ ಭಯಕ್ಕೆ ಅವಳ ಎದೆಬಡಿತ ಸ್ವತ: ಅವಳಿಗೆ ಕೇಳಿಸುವಷ್ಟು ಜೋರಾಗಿದ್ದು ಸುಳ್ಳಲ್ಲ.ನಿಧಾನಕ್ಕೆ ಅಡುಗಮನೆಯ ನಡುವೆ ಬಂದವಳು ಬಿದ್ದಿದ್ದ ಲೋಟವನ್ನೆತ್ತಿ ಶೆಲ್ಪಿಗೆ ಸೇರಿಸಿದಳು.ಅಡುಗೆಮನೆಯ ಶೆಲ್ಫಿಗೂ,ಅದರ ಮಧ್ಯಭಾಗಕ್ಕೂ ಕಡಿಮೆಯೆಂದರೂ ಮೂರಡಿಯಷ್ಟು ಅಂತರವಿದೆ.ಲೋಟ ಅಷ್ಟು ದೂರ ಬಿದ್ದದ್ದು ಹೇಗೆ ಎಂಬುದು ಅವಳಿಗೆ ಅರ್ಥವಾಗಲಿಲ್ಲ.ಕೊಂಚವೂ ಬಲಪ್ರಯೋಗವಿಲ್ಲದೆ ಹಾಗದು ಮಧ್ಯಭಾಗಕ್ಕೆ ಬಂದು ಬೀಳುವುದು ಸಾಧ್ಯವೇ ಇಲ್ಲ.ಮನೆಯಲ್ಲಿ ಇಲಿ ಹೆಗ್ಗಣಗಳ ಕಾಟವಿಲ್ಲ.ಕನಿಷ್ಟ ಒಂದು ಹಲ್ಲಿಯೂ ಮನೆಯಲ್ಲಿಲ್ಲ,ಮತ್ತೆ ಹೇಗೆ..? ಎಂದುಕೊಂಡವಳಿಗೆ ಕಣ್ಣೆದುರು ಬಂದಿ ನಿಂತದ್ದು ಮತ್ತದೇ ಮನೆ.
ಗಂಡನಿಲ್ಲದ ಆ ನಡುರಾತ್ರಿಯ ಹೊತ್ತಿಗೆ ತಾನು ಅತಿಯಾಗಿ ಯೋಚಿಸಿದಷ್ಟೂ ತನಗೆ ತೊಂದರೆ ಎಂದುಕೊಂಡವಳು ಮಿಥ್ಯಾ ಸಮಾಧಾನ ತಂದುಕೊಂಡು,ಮತ್ತೊಮ್ಮೆ ಶೆಲ್ಪಿನತ್ತ ಸುಮ್ಮನೇ ದೃಷ್ಟಿಹಾಯಿಸಿ,ನಿಧಾನಕ್ಕೆ ಅಡುಗೆಮನೆಯಿಂದ ಹೊರಗೆ ನಡೆದಳು.ಬಾಗಿಲಲ್ಲಿ ನಿಂತವಳಿಗೆ ಅಡುಗೆಮನೆಯನ್ನು ನೋಡುತ್ತ ದೀಪವಾರಿಸುವ ಧೈರ್ಯವಾಗದೇ ಬೆನ್ನು ತಿರುಗಿಸಿ ತಡಕಾಡುತ್ತ ಅಡುಗೆಮನೆಯ ದೀಪವಾರಿಸಿದಳು.ಒಮ್ಮೇಲೆ ದಟ್ಟವಾದ ಕತ್ತಲು ಆವರಿಸಿಕೊಂಡಿತ್ತು ಅಡುಗೆಮನೆಯಲ್ಲಿ.ಪ್ಯಾಸೆಜಿನ ಬೆಳಕಿನಲ್ಲಿ ಕ್ಷಣಕಾಲ ನಿಂತವಳಿಗೆ ಮತ್ತೆ ಅಸಹನೆ.ದೀಪವಾರುವ ಕೊನೆಯ ಕ್ಷಣದಲ್ಲಿ ಗ್ಯಾಸ್ ಕಟ್ಟೆಯ ಪಕ್ಕ ಯಾರೋ ಕೂತಂತೆನ್ನಿಸಿತು.ತನ್ನ ಓರೆ ದೃಷ್ಟಿಯ ಭ್ರಮಾಸೃಷ್ಟಿಯಿರಬೇಕು ಅದು ಎಂದುಕೊಂಡವಳಿಗೆ ಕತ್ತಲು ತುಂಬಿದ ಅಡುಗೆಮನೆಯನ್ನು ನೋಡುವ ಧೈರ್ಯವಾಗದು.ಸರಸರನೇ ನಡೆದು ಬೆಡ್‌ರೂಮು ತಲುಪಿ ಬಾಗಿಲು ಹಾಕಿಕೊಂಡಳು.ಸರಿದುಹೋಗಿದ್ದ ಮಗನ ಹೊದಿಕೆ ಸರಿಪಡಿಸಿದವಳು ಅವನ ಪಕ್ಕಕೆ ಅಡ್ಡವಾಗಿ ಕಣ್ಣು ಮುಚ್ಚಿದರೆ ನಿದ್ರೆಯ ಸುಳಿವಿಲ್ಲ.ಆಲೋಚನೆಯಷ್ಟೂ ಅಡುಗೆಮನೆ ಕೇಂದ್ರಿತವೇ.
ಹಾಗವಳು ಅಡುಗೆಮನೆಯ ಕುರಿತು ಯೋಚಿಸುತ್ತ ಮಲಗಿದ್ದರೆ,ಬೆಳಕಿಲ್ಲದ ಕಪ್ಪು ನಡುರಾತ್ರಿಯ ಅಡುಗೆಮನೆಯ ಗ್ಯಾಸು ಕಟ್ಟೆಯ ಮೇಲೆ ಕೂತಿದ್ದ ಕರಿಯ ಆಕೃತಿ,ಕಟ್ಟೆಯಿಂದಿಳಿದು ತೇಲುತ್ತ ಗೋಡೆಯೊಳಕ್ಕೆ ಸೇರಿಹೋಯಿತು...!!