ಕೂಪ

ಕೂಪ

ಚಿತ್ರ

ಕೂಪ
***************
ಅಧ್ಯಾಯ ೧

 
ಮಂಡಿ ಮಡಚಿ ಕೂತ ಭಂಗಿಯಲ್ಲೇ ಕೈಗಳೆರಡನ್ನೂ ಅದರ ಸುತ್ತ ಬಳಸಿ ಬಿಕ್ಕಳಿಸುತ್ತಿದ್ದ ಸಂಕೇತ. ಬೆಳಗ್ಗೆ ಹಾಲಿನವನು ಬಂದಾಗ ಅಮ್ಮ ಮಲಗೇ ಇದ್ದಳು. ’ಇಷ್ಟೊತ್ತಿಗೆ ಅಮ್ಮ ಎದ್ದು ಹಾಲು ಕಾಸಿ ಅದೇನೋ ಓದ್ತಾ ಕೂತ್ಕೊಳೋ ಹೊತ್ತು, ಇನ್ನೂ ಎದ್ದಿಲ್ಲ ಅಂದ್ರೆ’ ಮೆಲ್ಲಗೆ ಅಮ್ಮನ ಹತ್ರ ಬಂದವನೇ ’ಅಮ್ಮಾ’ ಅಂದ. ಅಮ್ಮನ ಮೈ ತಣ್ಣಗಾಗಿತ್ತು. ಇಷ್ಟು ತಣ್ಣಗೆ ಯಾರದಾದರೂ ಮೈ ತಣ್ಣಗಿರಕ್ಕೆ ಸಾಧ್ಯನಾ? ಮತ್ತೊಮ್ಮೆ ’ಅಮ್ಮಾ’ ಅಂದ. ಇಲ್ಲ ಆ ಕಡೆಯಿಂದ ಉತ್ತರವಿಲ್ಲ. ಸಿನಿಮಾಗಳಲ್ಲಿ ತೋರಿಸೋ ಹಾಗೆ ಮೂಗಿನ ಹತ್ರ ಬೆರಳಿಟ್ಟು ನೋಡಿದ. ಇಲ್ಲ ಉಸಿರಾಟ ಇಲ್ಲ. ಎದೆಯ ಏರಿಳಿತ ಇಲ್ಲ. ಅಂದ್ರೆ ಅಮ್ಮ ಸತ್ತು ಹೋಗಿದಾಳೆ. ಮುಂದೆ... ಯಾರಿಗೆ ಹೇಳೋದು? ಸ್ವಂತದವರು ಅಂತ ತಕ್ಷಣಕ್ಕೆ ಯಾರ ಹೆಸರೂ ಗೊತ್ತಾಗ್ತಿಲ್ಲ. ನನಗೆ ಗೊತ್ತಿರೋರೆಲ್ಲಾ ನನ್ನ ಫ್ರೆಂಡ್ಸ್. ಅವರಿಗೆ ನನ್ನಷ್ಟೇ ಗೊತ್ತಿರುತ್ತೆ. ಪಕ್ಕದ ಮನೆ ಅಂಕಲ್ ಆಂಟಿಯನ್ನ ಎಬ್ಬಿಸೋಣ ಅಂದ್ರೆ ಅವರು ನಮ್ಮನ್ನ ನೋಡೋ ರೀತೀನೆ ಬೇರೆ. ಆದರೂ ಒಂದು ಮಾತು ಹೇಳೋಣ’. ಮೆಟ್ಟಿಲಿಳಿದು ಹೊರಗೆ ಬಂದ. ಎದುರಿಗೆ ಆಂಟಿ ರಂಗೋಲಿ ಬಿಡಿಸುತ್ತಾ ನಿಂತಿದ್ದರು. ’ಆಂಟಿ ’ ಕೂಗಿದ. ’ತಿರುಗಿದರಲ್ಲ ಅಬ್ಬ, ಅಂದ್ರೆ ಅವರಿಗೆ ನಮ್ಮ ಮೇಲೆ ಸ್ವಲ್ಪ ಒಳ್ಳೆಯ ಭಾವನೆ ಇರಬಹುದು’ . ’ಏನ್ ಸಂಕೇತ್?’. ’ಆಂಟಿ ಅಮ್ಮ ಸತ್ತು ಹೋಗಿದಾಳೆ’. ’ಏನು?’. ’ಅಮ್ಮ ಸತ್ತೋಗಿದಾಳೆ’. ’ಏನ್ ಮಾತಾಡ್ತಿದಿಯೋ ನಿನ್ನೆ ತಾನೆ ಟಿವಿಲಿ ಪ್ಯಾನೆಲ್ ಡಿಸ್ಕಶನ್ ಲಿ ನೋಡಿದೀನಿ. ಕಿರುಚ್ತಾ ಇದ್ಳು’. ’ ಇಲ್ಲ ಅಂಟಿ ಮೈ ಎಲ್ಲಾ ತಣ್ಣಗಾಗಿದೆ, ಉಸಿರಾಡ್ತಿಲ್ಲ, ನಂಗೆ ಗೊತ್ತಾಗ್ತಿಲ್ಲ ಪ್ಲೀಸ್ ಸ್ವಲ್ಪ ನೋಡಿ’. ಆಂಟಿ ಬಂದು ನೋಡಿ ಕಂಫರ್ಮ್ ಮಾಡಿದ್ರು. ಮುಂದೆ... ಮತ್ತೆ ಮಂಡಿಗೆ ಕೈಕೊಟ್ಟು ಕೂತೆ. ಆಂಟಿ ಯಾರನಾದ್ರೂ ಕರ್ಕೊಂಡು ಬರ್ತಾರೆ ಮುಂದಿನ ಕೆಲ್ಸ ಅವರು ನಿಭಾಯಿಸ್ತಾರೆ ಅಂತ. ಇಲ್ಲ ಆಂಟಿ ಹೋಗಿ ಅವರ ಮನೆ ಪಕ್ಕದ ಮನೆ ಎಲ್ಲರಿಗೂ ಸುದ್ದಿ ಮುಟ್ಟಿಸಿದ್ರು. ಯಾರೂ ಬರಲಿಲ್ಲ. ಕಿಟಕಿಯಲ್ಲಿ ಇಣುಕಿ ನೋಡಿದ್ರು. ಇನ್ನೂ ಕೆಲವರು ಬಂದು ನನ್ನ ಭುಜದ ಮೇಲೆ ಕೈಯಿಟ್ಟು ’ನಿಮ್ ಕಡೆಯೋರಿಗೆ ಹೇಳಿದ್ಯಾ? ಅಂದ್ರು. ಯಾರಿದಾರೆ ನಮ್ ಕಡೆಯವರು? ನನಗೆ ಅಕ್ಕ, ಅಪ್ಪ, ಅತ್ತೆ, ಅಜ್ಜಿ, ಅಜ್ಜ, ಮಾವ ಯಾರೂ ಗೊತ್ತಿಲ್ಲ. ನಾವ್ಯಾವತ್ತೂ ಯಾರ ಮನೆಗೂ ಹೋದವರೇ ಅಲ್ಲ. ಅಮ್ಮನಿಗೆ ಅವರ್ಯಾರೂ ಬೇಕಿರಲಿಲ್ಲ. 
’ನನಗೆ...?’
ಅಮ್ಮ ಎಲ್ಲರನ್ನ ದ್ವೇಷಿಸ್ತಾ ಇದ್ಳು. ’ಸ್ವಾತಂತ್ರನ ಕಿತ್ಕೊಳೋ ಸಂಬಂಧಗಳು ಬೇಡ ಕಣೋ ಸಂಕೇತ್’ ಅನ್ನೋಳು. ಯಾರನ್ನ ಕರೀಲಿ? ಒಬ್ಬನಿಗೇ ಭಯವಾಗ್ತಿದೆ. ಫ್ರೆಂಡ್ಸ್ ಗೆ ಫೋನ್ ಮಾಡ್ತೀನಿ. ಡಯಲ್ ಮಾಡಿ ಮಾತಿಗೆ ಸಿಕ್ಕ ಫ್ರೆಂಡ್ ಹತ್ರ ಹೇಳಿದ. ’ ಲೇಯ್ ಅಮ್ಮ ಹೋಗ್ಬಿಟ್ಳು ಕಣೋ’ . ’ಓ! ಇವತ್ತು ಸ್ಕೂಲಿಗೆ ಬರಲ್ವಾ ನೀನು?, ಸಾರಿ, ಏನ್ ಮಾಡ್ತೀಯೋ ಮುಂದೆ? ನಾನು ಟೀಚರ್ ಗೆ ಹೇಳ್ತೀನಿ’. ’ಅದಲ್ಲ ಕಣೋ ಮಂಚದ ಮೇಲೆ ಅಮ್ಮ ಮಲ್ಗಿದಾಳೆ ಆಮೇಲೆ ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಸಿನಿಮಾಗಳಲ್ಲಿ ತೋರಿಸ್ತಾರಲ್ಲ ಹಂಗೆಲ್ಲಾ ಮಾಡ್ಬೇಕಲ್ಲ. ನಂಗೇನು ಗೊತ್ತಿಲ್ಲ. ನೀನ್ ಬಾರೋ.’ ’ನಾನ್ ಬಂದು ಏನ್ ಮಾಡ್ಲಿ?’. ಹಾಗಲ್ವೋ ಒಬ್ಬನಿಗೇ ಭಯವಾಗ್ತಿದೆ. ನಿಮ್ ಅಪ್ಪ ಅಮ್ಮನಿಗೆ ಹೇಳೋ ಅವರಾದ್ರೂ ಬಂದು ಹೀಗ್ ಹೀಗೆ ಅಂತ ಹೇಳಲಿ’. ’ನಿಂಗೊತ್ತಲ್ಲಾ ಅವತ್ತು ನಿಮ್ಮಮ್ಮ ಟೌನ್ ಹಾಲಲ್ಲಿ ದನದ ಮಾಂಸ ತಿಂದ್ಳು, ಅದಕ್ಕಿಂತ ಮೊದ್ಲು ಆ ಥರ ಏನೇನೋ ಮಾತಾಡ್ತಿದ್ರು. ನಮ್ಮಪ್ಪ ಅಮ್ಮ ನಿಂಜೊತೆ ಸೇರೋಕೆ ಬಿಡೊಲ್ಲ ಇನ್ನು ನಿಂಗೆ ಹೆಲ್ಪ್ ಮಾಡ್ತಾರಾ?’. ’ನಮ್ ತಾತ ಅಜ್ಜಿನಾದ್ರೂ ಬಂದ್ರೆ ಚೆನ್ನಾಗಿರುತ್ತೆ. ಆದರೆ ಅವರು ಬರೊಲ್ಲ.ಇವತ್ತು ಎಸ್ ಕೆ ಸರ್ ದು ಟೆಸ್ಟ್ ಇದೆ. ಫ಼ುಲ್ ಪ್ರಿಪೇರ್ ಆಗಿದ್ದೆ.ಈಗೇನ್ ಮಾಡೋದೋ?’. ’ನಿಮ್ಮಮ್ಮನ ಫ್ರೆಂಡ್ಸ್ ಗೆ ಫೋನ್ ಮಾಡೋ’. ’ಅಮ್ಮನ ಪ್ರೆಂಡ್ಸ್ ನಂಬರ್ ಗಳು ನನ್ ಹತ್ರ ಇಲ್ಲ. ಇರು, ಒಂದಿಬ್ಬರದಿರಬೇಕು. ಎಲ್ಲಾ ನಂಬರ್ ಗಳು ಅಮ್ಮನ ಫೋನ್ ನಲ್ಲಿದೆ. ಅಮ್ಮ ಫೋನ್ ಲಾಕ್ ಮಾಡಿಟ್ಟಿರ್ತಾಳೆ. ಅದರ ಪಾಸ್ವರ್ಡ್ ನನಗೆ ಗೊತ್ತಿಲ್ಲ. ಅಳು ಬರ್ತಿದೆ. ಆದರೆ ಕಣ್ಣಲ್ಲಿ ನೀರು ಬರ್ತಿಲ್ಲ.ಏನ್ ಮಾಡ್ಲೋ?’. ’ನಾವಿನ್ನೂ ಏಳನೇ ಕ್ಲಾಸ್ ನನಗೇನ್ ಗೊತ್ತಿದ್ಯೋ. ನಿನ್ ಹತ್ರ ಇರೋ ನಂಬರ್ ಗೆ ಫೋನ್ ಮಾಡು. ಆ ಟಿವಿ ಅಂಕಲ್ ಇದಾರಲ್ಲ ಯಾವಾಗ್ಲೂ ಜಗಳ ಮಾಡ್ತಾರಲ್ಲ ಅವರಿಗೆ ಫೋನ್ ಮಾಡು. ಏನಾದ್ರೂ ಸಹಾಯ ಮಾಡಬಹುದು. ನಾನು ಸ್ಕೂಲಿಗೆ ರೆಡಿ ಆಗ್ಬೇಕೋ, ಸರ್ ಗೆ ನಾನು ಹೇಳ್ತೀನಿ. ಬರ್ಲಾ. ಬೈ’.’ಬೈ’
ಸಂಕೇತ ಫೋನ್ ಹಚ್ಚಿದ. ’ಅಂಕಲ್ ಜೊತೆ ಏನ್ ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ.ನನ್ನ ಪರಿಚಯ ಅವರಿಗೆ ಪೂರ್ತಾ ಇಲ್ಲ. ಇಷ್ಟು ಬೆಳಗ್ಗೆ ಅವರು ಎದ್ದಿರ್ತಾರೋ ಇಲ್ವೋ’. ಹಲವಾರು ಪ್ರಶ್ನೆಗಳು ಒಮ್ಮೆಲೇ ನುಗ್ಗಿ ಬರತೊಡಗಿದವು. ಅಮ್ಮ ನನಗೆ ಬೌದ್ಧಿಕತೆಯನ್ನ ಹೇಳಿಕೊಟ್ಟಿದ್ದಾಳೆ. ಹೇಳಿಕೊಟ್ಟರೆ ಬರೋದಾ ಅದು ಅನ್ನೋ ಪ್ರಶ್ನೆ ನನಗೂ ಇದೆ. ನಾನು ಸ್ಕೂಲಿನಲ್ಲಿ ಒಬ್ಬ ಸಾಮಾನ್ಯ ಹುಡುಗನ ರೀತಿ ಇರೋಕೆ ಕಷ್ಟ ಪಡ್ತಾ ಇದೀನಿ. ಇಲ್ಲಿ ಇವಳು ನನ್ನಲ್ಲಿ ಸುಮಾರು ವಿಷಯಗಳನ್ನ ತುಂಬ್ತಾಳೆ. ನಾನು ಅವಳ ಹೆಜ್ಜೆಯಲ್ಲಿ ನಡೀಬೇಕು. ಪ್ರತಿಯೊಂದನ್ನೂ ವಿರೋಧಿಸಬೇಕು. ಹೋರಾಟ ಮಾಡಬೇಕು. ಅದೇ ಸ್ಥಿತಿಯಲ್ಲಿ ಅಲ್ವಾ ನಾನು ಸ್ಕೂಲಿನ ಲೀಡರ್ ಪೊಸಿಷನ್ ಗೆ ಹೊಡೆದಾಡಿದ್ದು. ಹೆಡ್ ಮಾಸ್ಟರ್ ಕರೆದು , ತುದಿಗಣ್ಣಲ್ಲಿ ನೋಡ್ತಾ.. ಏನಿತ್ತು ಆ ಕಣ್ಣಲ್ಲಿ? ’ನೀನಾ ಓ ಆ ಯಮ್ಮನ ಮಗ’ ಅನ್ನೋ ಭಾವ ಇತ್ತಾ? ಸರಿ ಬಿಡು ಅಂತ ಲೀಡರ್ ಪೊಸಿಷನ್ ಕೊಟ್ರು. ಅಸಹ್ಯ ಅನ್ನಿಸಿಬಿಟ್ಟಿತ್ತು. ನನ್ನ ಅಮ್ಮ ಟೇಕನ್ ಫಾರ್ ಗ್ರಾಂಟೆಡ್. ಪಬ್ಲಿಕ್ ಫಿಗರ್ ಅನ್ನೋ ಕಾರಣಕ್ಕೆ ಟೇಕನ್ ಫಾರ್ ಗ್ರಾಂಟೆಡ್ ಅನ್ನೋ ಆಲೋಚನೆ ಮನಸ್ಸಲ್ಲಿ ಬಂದುಬಿಟ್ಟಿತು. ಯಾರಿಗೆ ಫೋನ್ ಮಾಡಲಿ. ಅಗ್ನಿಮುಖ ಚಾನೆಲ್ ನ ಆ ಅಂಕಲ್ ಗೆ ಮಾಡ್ತೀನಿ. ’ಹಲೋ ಅಂಕಲ್ ನಾನು ಸಂಕೇತ್’.
ಆ ಕಡೆಯಿಂದ.’ಯಾವ ಸಂಕೇತ್... ಮಗು’
ಅದೇ ಅಂಕಲ್ ಶ್ರೀಮುಖಿ ತಂಬ್ಳಿಕಟ್ಟೆ ಅವರ ಮಗ
ಓ ಹೇಳು ಸಂಕೇತ್ ಏನ್ ಸಮಾಚಾರ
ಅಮ್ಮ ಸತ್ತೋಗಿದಾಳೆ ಅಂಕಲ್
ವಾಟ್
ಹೌದು ಅಂಕಲ್ ಅಮ್ಮ ಸತ್ತೋಗಿದಾಳೆ. ಬೆಳಗ್ಗೆ ಹಾಲಿನವನು ಬಂದು ಬಾಗಿಲು ತಟ್ತಿದ್ದ. ನನಗೂ ನಿದ್ದೆ. ಎಷ್ಟೊತ್ತಾದ್ರೂ ಅಮ್ಮ ಎದ್ದು ಹಾಲು ಇಸ್ಕೊಳ್ಳಿಲ್ಲ. ಎದ್ದು ಬಂದು ನೋಡಿದೆ ಅಮ್ಮನ ಮೈ ತಣ್ಣಗಾಗಿತ್ತು. ಮೂಗಿನ ಹತ್ರ ಬೆರಳಿಟ್ಟು ನೋಡಿದೆ ಗಾಳಿ ಬರ್ತಾ ಇರ್ಲಿಲ್ಲ. ಅಲುಗಾಡಿಸಿ ಎಬ್ಬಿಸಕ್ಕೆ ನೋಡಿದೆ ಏಳಲಿಲ್ಲ. ಆಮೇಲೆ ಪಕ್ಕದ ಮನೆ ಆಂಟಿನ ಕರೆದೆ ಅವರು ಬಂದು ನೋಡಿ ಕಂಫರ್ಮ್ ಮಾಡಿದ್ರು. ಅಮ್ಮ ಸತ್ತೋಗಿದಾಳೆ ಅಂಕಲ್.
ಓ ಸೋ ಸ್ಯಾಡ್. ನೀನು ಈ ವಿಷ್ಯಾನ ಇನ್ಯಾರಿಗೂ ಹೇಳಲಿಲ್ಲ ಅಲ್ಲ.
ಇಲ್ಲ ಅಂಕಲ್.
ಗುಡ್ ಸಧ್ಯ ಯಾರಿಗೂ ಹೇಳ್ಬೇಡ. ನಾವೇ ಫಸ್ಟ್ ನ್ಯೂಸಲ್ಲಿ ಹಾಕ್ತೀವಿ. ನಾನು ಇನ್ನೊಂದು ಹತ್ತು ನಿಮಿಷದಲ್ಲಿ ಅಲ್ಲಿರ್ತೀನಿ
ಅಂಕಲ್ ಅಮ್ಮನ್ನ ಏನ್ ಮಾಡ್ಬೇಕು. ಸಿನಿಮಾದಲ್ಲಿ ತೋರಿಸ್ತಾರಲ್ಲ ಹಾಗೆ ಮನೆ ಮುಂದೆ ಮಲಗಿಸ್ಬೇಕಾ? ನಾನೇನ್ ಮಾಡ್ಲಿ ಅಂಕಲ್?
ಎಲ್ಲಾ ನಾನ್ ಬಂದು ನೋಡ್ಕೋತೀನಿ ಆಯ್ತಾ? ಬೇರೆ ಯಾರಿಗೂ ಫೋನ್ ಮಾಡಿ ಹೇಳ್ಬೇಡ?
ಫೋನ್ ಇಟ್ರು.
ಅಗ್ನಿಮುಖ ಚಾನೆಲ್, ಮನೀಶ್ ಸಾರೆಕೋಟೆ ಅಂಕಲ್. ಅದ್ಯಾವಾಗ ಅಮ್ಮನಿಗೆ ಪರಿಚಯವಾದ್ರು ಅನ್ನೋ ವಿವರಗಳು ನನಗೆ ಗೊತ್ತಿಲ್ಲ. ಎರಡು ತಿಂಗಳಿಗೊಮ್ಮೆ ಮನೆಗೆ ಬರೋರು. ಹೂವು, ಹಣ್ಣು ಮಕ್ಕಳಿಗೆ ತರೋ ಹಾಗೆ ಬಿಸ್ಕಟ್ ಪ್ಯಾಕೆಟ್ ಎಲ್ಲಾ ತರೋರು. ಒಳ್ಳೆ ಮನುಷ್ಯ. ನನ್ನನ್ನ ಈ ಸ್ಕೂಲಿಗೆ ಸೇರ್ಸಕ್ಕೆ ರೆಕೆಮೆಂಡ್ ಮಾಡಿ ಸೀಟ್ ಕೊಡ್ಸಿದ್ದೆ ಅವರು. ಅಮ್ಮನನ್ನ ಪ್ಯಾನೆಲ್ ನಲ್ಲಿ ಕೂರಿಸೋರು. ಒಂಥರದಲ್ಲಿ ಅಮ್ಮನಿಗೆ ಪಾಪ್ಯುಲಾರಿಟಿ ಕೊಟ್ಟಿದ್ದು ಅವರೇ. ಅವರು ಬರ್ತಾರೆ ಅಂತಾದರೆ ಸ್ವಲ್ಪ ಸಮಾಧಾನ. ಹತ್ತು ನಿಮಿಷದಲ್ಲಿ ಮನೆ ಹತ್ರ ವ್ಯಾನ್ ಬಂತು. ನನಗೆ ಸ್ವಲ್ಪ ಸಮಾಧಾನ ಅನ್ನಿಸ್ತು. ಅಮ್ಮನನ್ನ ಕರ್ಕೊಂಡು ಹೋಗೋ ಗಾಡಿ ಬರುತ್ತೆ. ಮನೆ ಮುಂದೆ ಬೆಂಕಿ ಹಾಕ್ತಾರೆ. ಅದಕ್ಕೆ ಬೇಕಾದ ಏರ್ಪಾಟಾಗುತ್ತೆ ಅಂತೆಲ್ಲಾ ನೋಡ್ತಿದ್ದೆ. ಇಲ್ಲ ಅಂಕಲ್ ಕ್ಯಾಮೆರಾ ಹಿಡ್ಕೊಂಡೇ ಬಂದ್ರು. ಅವರೊಟ್ಟಿಗೆ ಕ್ಯಾಮೆರಾಮೆನ್. ನನ್ನನ್ನ ಅಮ್ಮನ ಪಕ್ಕ ಕೂರಿಸಿದ್ರು. ವೀಡಿಯೋ ಲೈವ್ ಕವರೇಜ್ ಆಗ್ತಾ ಇದೆ ಅಂತ ಆಗ ಗೊತ್ತಾಯ್ತು. ಮೈಕ್ ಹಿಡ್ಕೊಂಡಿದ್ದ ರಿಪೋರ್ಟರ್ ಕೂಗ್ತಿದ್ದ.”ಪ್ರಸಿದ್ದ ಹೋರಾಟಗಾರ್ತಿ ಶ್ರೀಮುಖಿ ತಂಬ್ಳಿಕಟ್ಟೆ ಅವರ ಮನೆಯಲ್ಲಿಂದ ನೇರ ಪ್ರಸಾರ ಆಗ್ತಿದೆ. ಶ್ರೀಮುಖಿ ಪ್ರಗತಿ ಪರ ಚಳುವಳಿ ಸ್ತ್ರೀವಾದಿ ಚಳವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಂತಹ ವ್ಯಕ್ತಿ. ಸಾಯುವಂತಹ ವಯಸ್ಸಲ್ಲ. ನೀವು ನೋಡ್ಬಹುದು ಅವರ ಸಣ್ಣ ಮಗ ಕೂಡ ಇಲ್ಲಿ ಬ್ಲಾಂಕಾಗಿ ಕೂತಿದಾನೆ’. (ಫೋಕಸ್ ಮಾಡು) ಅಂಕಲ್ ಹೇಳ್ತಿದಾರೆ ಕ್ಯಾಮೆರಾ ನಿನ್ ಕಡೆ ಬರ್ತಿದೆ ನೀನು ಅಳ್ಬೇಕು. ಅಳು ನಗು ಒಳಗಿಂದ ತಾನೇ ತಾನಾಗಿ ಬರಬೇಕಲ್ವಾ. ಬಲವಂತವಾಗಿ ಬಾ ಅಂದ್ರೆ ಬರೋಕೆ ಅದೇನು ನ್ಯೂಸ್ ಸ್ಕ್ರೋಲಿಂಗಾ? ನಾನು ಅತ್ತ ಹಾಗೆ ನಟಿಸಿದೆ. ಅಮ್ಮನ ಸಾವು ನಾನೊಬ್ಬ ನಟ ಅನ್ನೋದನ್ನ ತೋರಿಸಿಕೊಡ್ತಿದೆ. ಮತ್ತೆ ರಿಪೋರ್ಟರ್ ಕಿರುಚ್ತಿದಾನೆ. ಈ ಸಾವು ಸ್ವಾಭಾವಿಕನಾ? ಅಸ್ವಾಭಾವಿಕನಾ? ಯಾರದಾದ್ರೂ ಕುತಂತ್ರಕ್ಕೆ ಬಲಿಯಾದ್ರಾ ನಮ್ಮ ನೆಚ್ಚಿನ ಹೋರಾಟಗಾರ್ತಿ ಅನ್ನೋ ವಿಷಯಗಳ ಬಗ್ಗೆ ಎಕ್ಸ್’ಕ್ಲೂಸಿವ್ ಆಗಿ ಅಗ್ನಿಮುಖ ಚಾನೆಲ್ ನಲ್ಲಿ ನೋಡ್ತಿರಿ.ಇದು ನಮ್ಮಲ್ಲಿ ಮಾತ್ರ. (ಕಟ್) ನಾನು ಅಂಕಲ್ ನ ಕೇಳಿದೆ. ’ಅಂಕಲ್ ಮುಂದೆ ಏನು?’. ನ್ಯೂಸ್ ಈಗ ಹರಡಿದೆ. ಎಲ್ರೂ ಬರ್ತಾರೆ. ಎಲ್ರೂ ನೋಡ್ಬೇಕಲ್ಲ. ಆಮೇಲೆ ಅವರು ಹೇಗೆ ಡಿಸೈಡ್ ಮಾಡ್ತಾರೋ ಹಾಗೆ. ನೀನು ಯೋಚಿಸ್ಬೇಡ. ಎಲ್ಲಾರೂ ಸೇರಿ ಡಿಸೈಡ್ ಮಾಡ್ತೀವಿ.
ಸಾವು ಮನೆಗೆ ಸಂಬಂಧಿಸಿದ್ದು. ವ್ಯಕ್ತಿಗತವಾಗಬೇಕಾದ ಕ್ರಿಯೆ. ನಮ್ಮಮ್ಮನ ಸಾವು ಇವರಿಗೆ ನ್ಯೂಸ್, ಸಂಸ್ಕಾರವನ್ನ ಎಲ್ರೂ ಸೇರಿ ಡಿಸೈಡ್ ಮಾಡ್ತಾರೆ. ಆ ಎಲ್ಲರೂ ಅನ್ನೋರದಲ್ಲಿ ನಮ್ಮ ಮನೆಯವರು ಮನೆತನದವರು ಯಾರೂ ಇರೊಲ್ಲ. ಇದೊಂಥರಾ ಮುನ್ಸಿಪಾಲಿಟಿಯ ಸಂಸ್ಕಾರದ ಕ್ರಿಯೆ ಅನ್ನಿಸ್ತಿದೆ. ನಾನೇನ್ ಮಾಡ್ಬೇಕು? ಅಳಬೇಕು, ಕ್ರಿಯೆಗಳಲ್ಲಿ ಇರಬೇಕು, ಆದರೆ ಇದು ಸಾರ್ವಜನಿಕ ಕ್ರಿಯೆ ಆಗೋಗ್ತಿದೆ. ನನ್ನ ಪಾತ್ರ ಏನೂ ಇರಲ್ಲ. ನನ್ನಮ್ಮ ನನಗೆ ಸ್ವಂತವಾಗಲೇ ಇಲ್ಲ. ಸ್ವಂತವಾಗಿಲ್ಲ. ಜನ ಬರೋಕೆ ಶುರು ಮಾಡ್ತಿದಾರೆ. ಮನೆ ತುಂಬಾ ಜನ. ಆಗ್ತಿದಾರೆ. ಎಲ್ರೂ ನನ್ನ ಹತ್ರ ಬಂದು ಸಮಾಧಾನ ಅಂತ ಮಾಡ್ತಿದಾರೆ. ಆದರೆ ನನಗೆ ನಾಟಕ ಮಾಡೋಕೆ ಬರ್ತಾನೆ ಇಲ್ಲ. ಅಳು ಬರ್ತಿಲ್ಲ. ನ್ಯೂಸ್ ಪೇಪರ್ ನ ಸುಂದರೇಶ ಭಟ್ ಅಂಕಲ್, ಗಣೇಶ ಶಾಸ್ತ್ರಿ, ಸಿನಿಮಾ ಆಕ್ಟರ್ ಇಕ್ಬಾಲ್ ಖಾನ್, ದಿಲೀಪ್ ಸಜ್ಜನ್ ಬಂದಿದಾರೆ. ಅಮ್ಮ ಯಾವಾಗ್ಲೂ ಹೇಳ್ತಿದ್ದ ದಾದ, ದೀದಿಗಳು ಎಲ್ರೂ ಭೋರಂತ ಅಳ್ತಿದಾರೆ. ಕಣ್ಣಲ್ಲಿ ನೀರು ಹರೀತಿದೆ. ಅಂದ್ರೆ ಅವರೆಲ್ಲಾ ಅಮ್ಮನ್ನ ಅಷ್ಟೊಂದೆ ಹಚ್ಚಿಕೊಂಡಿದ್ರಾ? ಸ್ವಂತ ಮಗ ನನಗೇ ಏನೂ ಅನ್ನಿಸ್ತಿಲ್ಲ. ಇವರದ್ದು ನಟನೆನಾ? ನಿಜಾನ?. ಅಮ್ಮನ್ನ ಹೊರಗೆ ತಂದಿದಾರೆ. ತಲೆಯ ಹತ್ರ ದೀಪ ಇಟ್ರು. ಲೋಟದಲ್ಲಿ ಊದಿನಕಡ್ಡಿಗಳನ್ನ ಹಚ್ಚಿಟ್ಟಿದ್ದಾರೆ. ಬೇರೆ ಬೇರೆ ಚಾನೆಲ್ ಗಳ ಕ್ಯಾಮೆರಾಗಳು ಬರ್ತಿದಾವೆ. ಇನ್ನೊಂದು ರೂಮಲ್ಲಿ ಚರ್ಚೆ ಶುರುವಾಯ್ತು. ಸಜ್ಜನ್ ಅಂಕಲ್ ಹೇಳ್ತಿದಾರೆ’ ಇದೊಂದು ಒಳ್ಳೆ ಅವಕಾಶ ಇದನ್ನ ಬಳಸಿಕೊಂಡು ಹೋರಾಟ ಗಟ್ಟಿ ಮಾಡ್ಕೊಳೋಣ. ಇವಳ ಆಶಯಗಳನ್ನ ಪೂರೈಸೋಕೆ ನಾವು ಸಭೆ ಸಮಾರಂಭ ಸೆಮಿನಾರ್ ಗಳನ್ನ ಮಾಡೋಣ. ನಾರ್ತ್ ನಲ್ಲಿರೋ ಹೋರಾಟಗಾರರನ್ನ ಕರ್ಸೋಣ. ಈ ಸರ್ತಿ ದೊಡ್ಡ ಫಂಕ್ಷನ್ ಮಾಡೋಣ. ಈ ಸರ್ಕಾರ ಬೀಳಿಸಲೇ ಬೇಕು ಅಂತ ಮೇಲಿಂದ ಪ್ರೆಶರ್ ಇದೆ. ಅಲ್ಲ ಇಂಥದ್ದನ್ನೆಲ್ಲಾ ಬಳಸಕೋಬಾರದು ಹೌದು, ಆದರೆ ನಮಗೆ ನಮ್ಮ ಹೋರಾಟನೂ ಮುಖ್ಯ ಅಲ್ವಾ? ಈ ಕಾಮ್ರೇಡ್ ನ ಬಲಿ ನಮ್ಮ ಹೋರಾಟಕ್ಕೆ ಪುಷ್ಟಿ ಕೊಡತ್ತೆ ಅಂತಾದರೆ, ಯಾಕಾಗಬಾರದು. ಈ ಅವಕಾಶನ ಬಿಡೋದು ಬೇಡ’. ಎಲ್ರೂ, ಸರಿ ಸರಿ’ ಅಂತಿದಾರೆ. ಹೊರಗೆ ಊದಿನ ಕಡ್ಡಿ ಬೂದಿಯಾಗ್ತಿದೆ. ಇಲ್ಲಿ ಇವರು ನನ್ನ ರೂಮಲ್ಲಿ ಸಿಗರೇಟ್ ಉರಿಸ್ತಿದಾರೆ. ನನ್ನಮ್ಮನ ಸಾವು ಇವರಿಗೆ ಅವಕಾಶ. 
ನಾನು ಇಷ್ಟು ದೊಡ್ಡ ದೊಡ್ಡ ಮಾತಾಡ್ತೀನಿ ಅಂತ ನನಗೇ ಗೊತ್ತಿರಲಿಲ್ಲ. ಅಮ್ಮ ದಿನಾ ನನ್ನ ಹತ್ರ ಹೀಗೇ ಮಾತಾಡೋಳು. ದೊಡ್ಡ ದೊಡ್ಡ ಪದಗಳು ಹೇಳೋಳು. ಅದೇ ಅಭ್ಯಾಸ ಆಗೋಯ್ತು .ಆಮೇಲೆ ಆ ಪದಗಳ ಅರ್ಥಾನೂ ಗೊತ್ತಾಗ್ತಾ ಬಂತು. ನನ್ನ ಫ್ರೆಂಡ್ಸ್ ಯಾರೂ ಈ ಥರ ಮಾತಾಡೊಲ್ಲ. ಮೊದ್ ಮೊದಲು ನಾನು ಹೀಗೆ ಮಾತಾಡಿದ್ದಕ್ಕೆ ಎಲ್ರೂ ಕಣ್ಣು ಬಾಯಿ ಬಿಟ್ಕೊಂಡು ನೋಡಿ ದೂರ ಹೋಗ್ಬಿಟ್ರು. ನನಗರ್ಥವಾಗಲಿಲ್ಲ, ಯಾಕೆ ಹಾಗೆ ಹೋದ್ರು ಅಂತ. ನಿಧಾನಕ್ಕೆ ಅರ್ಥ ಆದಮೇಲೆ ನಾನು ಬದಲಾಯಿಸಿಕೊಂಡೆ. ಎಷ್ಟಾದರೂ ನನ್ನ ಪ್ರೆಂಡ್ಸ್ ನನ್ನನ್ನ ಅವರ ಅಂತರಂಗದ ಗೆಳೆಯನನ್ನಾಗಿ ಮಾಡಿಕೊಳ್ಳಲಿಲ್ಲ. ನಾನ್ಯಾವತ್ತೂ ಅವರಿಗೆ ಅಪಥ್ಯ. ಅಸಹ್ಯ. ಇವನಾ ಬಜಾರಿ ಅಮ್ಮನ ಮಗ, ಎಡವಟ್ಟು ಅಮ್ಮನ ಮಗ, ಯಾವಾಗ್ಲೂ ಉಲ್ಟಾ ಮಾತಾಡೋ ಆ ಯಮ್ಮನ ಮಗ, ದನದ ಮಾಂಸ ತಿಂದೋಳ ಮಗ, ಎಲ್ರೂ ಸೈನಿಕರನ್ನ ಹೊಗಳಿದ್ರೆ ಈ ಯಮ್ಮ ಬೈತಾಳೆ. ತನ್ನ ಎಲ್ಲಾ ಕೆಟ್ಟ ಕೆಲ್ಸಗಳನ್ನ ಫೇಸ್ ಬುಕ್ಕಿನಲ್ಲಿ ಹಾಕಿ ಅದೇ ಸತ್ಯ ಅನ್ನೋ ಹಾಗೆ ಕೊಚ್ಚಿಕೊಳ್ತಾಳೆ. ಹೀಗೆಲ್ಲಾ ಇಂಪ್ರೆಷನ್ ಇದೆ. ಅವರ ಅಮ್ಮಂದಿರು ತಮ್ಮ ಮಕ್ಕಳನ್ನ ಸ್ಕೂಲಿಗೆ ಕಳ್ಸೋದು, ಆಫೀಸ್ ಗೆ ಹೋಗೋದು, ಮನೆ ಕೆಲ್ಸ ಮಾಡೋದು, ಒಳ್ಳೆ ತಿಂಡಿಗಳನ್ನ ಮಾಡಿ ಕಳ್ಸೋದು. ಡ್ಯಾನ್ಸ್ ಮಾಡಿದ್ರೆ ಖುಷೀಲಿ ಕಣ್ಣೀರು ಹಾಕಿ ನಗೋದು. ತಪ್ಪು ಮಾಡಿದ್ರೆ ಒಮ್ಮೊಮ್ಮೆ ರೋಡಲ್ಲೆ ಬೈದು ಹೊಡೆದು ಎಲ್ಲಾ ಮಾಡ್ತಾರೆ. ಆದರೆ ನನಗೆ ಆ ಆಪ್ಷನ್ ಇಲ್ಲ. ಅಮ್ಮ ಯಾವಾಗ ಮನೆಯಿಂದ ಹೊರಡ್ತಾಳೋ , ಯಾವಾಗ ಬರ್ತಾಳೋ ಗೊತ್ತಿಲ್ಲ. ಟಿವಿಲಿ ಬರ್ತಾಳೆ, ಪೇಪರ್ ನಲ್ಲಿ ಫೋಟೊ ಬರುತ್ತೆ, ಸೋಷಿಯಲ್ ಮೀಡಿಯಾದಲ್ಲಿ ಸದಾ ಇರ್ತಾಳೆ. ನನಗೇಂತ ತಿಂಡಿ ಮಾಡಿದ್ದು ಅಪರೂಪ. ಒಂದ್ವೇಳೆ ಮಾಡಿದ್ರೆ ಅದರ ಫೋಟೊ ತೆಗೆದು ಮೊದಲು ಫೇಸ್ ಬುಕ್ಕಿಗೆ ಹಾಕಿ ಆಮೇಲೆ ನನಗೆ ತಿನ್ನಿಸಕ್ಕೆ ಬರ್ತಾಳೆ . ಆಗ್ಲೂ ಸೆಲ್ಫಿ ತಗೊಂಡು ಫೇಸ್ ಬುಕ್ಕಿಗೆ ಹಾಕಿ ಕಣ್ಣೀರನ್ನ ತೋರಿಸ್ತಾಳೆ. ’ನನ್ನ ಮಗ ಎಷ್ಟು ಬೆಳೆದಿದಾನೆ. ಆದ್ರೂ ನಾನು ಅವನಿಗೆ ತಿನ್ನಿಸಿದ್ರೆ ನನ್ನ ಮನಸಿಗೆ ಸಮಾಧಾನ’ ಪ್ರೀತಿ ವ್ಯಾಮೋಹ ಅಂದ್ರೆ ಇದೇನಾ?’ ಅಂತ ಪ್ರಶ್ನಿಸ್ತಾಳೆ, ಆ ನಾಟಕದ ಪಾಟೀಲ್ ಸಿನಿಮಾದ ಸಜ್ಜನ್ ಮೀಡಿಯಾದ ಅಂಕಲ್ ಗಳು ಇನ್ನೂ ಸಾವಿರಾರು ಫಾಲೋಯರ್ಸ್ ಅದಕ್ಕೆ ಲೈಕು ಕಣ್ಣೀರಿನ ಕಾಮೆಂಟ್ ಗಳನ್ನ ಹಾಕ್ತಾರೆ. ಅದೊಂದು ಅದ್ಭುತ ಕ್ರಿಯೆ ಅಂತಾರೆ. ಮಮತೆ ವಾತ್ಸಲ್ಯ ಅಂತೆಲ್ಲಾ ಬರೀತಾರೆ. ವಿಚಿತ್ರ ಅಂದ್ರೆ ನನ್ನ ಫ್ರೆಂಡ್ಸ್ ಅಮ್ಮಂದಿರು ದಿನಾಗ್ಲೂ ಅದನ್ನೇ ಮಾಡ್ತಾರೆ. ಆದರೆ ಯಾರೂ ಅದನ್ನ ಹಾಗೆ ಹಾಕಿಕೊಳ್ಳಲ್ಲ. ನಮ್ಮಮ್ಮನ ಈ ವಿಚಿತ್ರಾನ ನನ್ನ ಪ್ರೆಂಡ್ಸ್ ಫೇಸ್ ಬುಕ್ಕಿನಲ್ಲಿ ನೋಡ್ತಾರಂತೆ, ನನ್ನ ಫ್ರೆಂಡ್ಸ್ ನ ಅಪ್ಪ ಅಮ್ಮಂದಿರು ತೋರಿಸಿ ಆಡಿಕೊಳ್ತಾರಂತೆ. ’ನಿನ್ನ ಫ್ರೆಂಡ್ ಅಮ್ಮನಿಗೆ ತುಂಬಾ ಬಿಡುವಿದ್ಯಪ್ಪ. ನಮಗಿಲ್ಲ’ ಅಂತ ಕೊಂಕಿ ಮಾತಾಡ್ತಾರೆ. ಇದೆಲ್ಲಾ ಅಮ್ಮನ ಹತ್ರ ಹೇಳೋಕೆ ಅಮ್ಮ ಕೈಗೆ ಸಿಗೊಲ್ಲ. ಮನೆಗೆ ಬಂದಾಗ ಕುಡಿದು ಬಂದಿರ್ತಾಳೆ. ನಿನ್ನೆ ಥರ. ಬಂದ ತಕ್ಷಣ, ಸಚ್ಚಿ... ತುಂಬಾ ಓದೋಕಿದ್ಯಾ? ಓದ್ಕೋ... ಜೆ ಎನ್ ಯು ನಲ್ಲಿ ಓದಿಸ್ತೀನಿ ನಿನ್ನ. ಎಷ್ಟು ಖರ್ಚಾದರೂ ಪರ್ವಾಗಿಲ್ಲ’. ಅಂದು ಮಲಗ್ತಾಳೆ. ಅಮ್ಮನ್ನ ಅಪ್ಪಿಕೊಂಡು ಮಲಗೋ ಆಸೆಯಾದ್ರೂ ವಾಸನೆಗೆ ಹೆದರಿ ನನ್ನ ರೂಮಲ್ಲಿ ಮಲಗ್ತೀನಿ. 
ಯಾರೋ ಬಂದ್ರು. ’ಏ ಮರಿ, ನಿಮ್ಮ ಅಮ್ಮನ ಬಗ್ಗೆ ನಿನಗೇನು ಗೊತ್ತು. ಅಂಥಾ ದೊಡ್ಡ ಹೋರಾಟಗಾರ್ತಿಯನ್ನ ಅಮ್ಮನಾಗಿ ಪಡೆದ್ಯಲ್ಲ ಅದೇ ನಿನ್ನ ಭಾಗ್ಯ ಕಣೋ’ ಅಂದ್ರು. ಯಾರದು? ಹಾಗಂದದ್ದು. ಓ! ಥಿಯೇಟರ್ ಆರ್ಟಿಸ್ಟ್ ಕರುಣಾ. ಅಮ್ಮನ ಶವವನ್ನ ಅಪ್ಪಿಗೊಂಡು ಗೋಳಾಡ್ತಿದಾನೆ. ಇನ್ನೊಂದು ಕೈಲಿ ನನ್ನ ತಲೆ ನೇವರಿಸ್ತಿದಾನೆ. ಬೆನ್ನು ನೇವರಿಸ್ತಾ ನನ್ನ ಸೊಂಟಾನ ತಬ್ಬಿಕೊಂಡು ಗೊಳೋ ಅಂತ ಅಳ್ತಿದಾನೆ. ಯಾಕೋ ಅಸಹ್ಯ ಅನ್ನಿಸ್ತಿದೆ... ಏನ್ ಮಾಡ್ಲಿ... ಜೋರಾಗಿ ಕಿರುಚಿಕೊಂಡು ಓಡಿಹೋಗೋಣ ಅನ್ನಿಸ್ತಿದೆ... ಏನ್ ಮಾಡಲಿ...?. 
ಮೀಡಿಯಾದವರು ಅಭಿಪ್ರಾಯ ಶೇಖರಣೆ ಶುರುಮಾಡಿದರು. ಒಬ್ಬೊಬ್ಬರನ್ನ ಕೇಳ್ತಿದಾರೆ. ಎಲ್ರೂ ಕಣ್ಣಲ್ಲಿ ನೀರು ತುಂಬಿಕೊಂಡು ಗಂಭೀರವಾಗಿ ಹೇಳ್ತಿದಾರೆ. ಅವೇ ಹಳಸಲು ಪದಗಳು. ’ತುಂಬಲಾರದ ನಷ್ಟ’, ’ಹೋರಾಟದ ಜೀವ’, ’ಕ್ರಾಂತಿಕಿಡಿಯ ಅವಸಾನ’. ’ಇದು ಅಸ್ವಾಭಾವಿಕ ಸಾವು ಅನಿಸುತ್ತೆ. ತನಿಖೆಯಾಗಬೇಕು’, ’ಹಳಸಲು ಆಚರಣೆಯ ವಿರುದ್ಧ ನಿಂತವರು’, ’ಕೋಮುವಾದಿಗಳ ಬಾಯಿ ಬಂದ್ ಮಾಡುತ್ತಿದ್ದವರು’. ಇವಕ್ಕೆಲ್ಲಾ ಏನರ್ಥ? ಅಮ್ಮನಂಥ  ಮನಸ್ಥಿತಿಯ ಸುಮಾರು ಜನರಿದ್ದಾರೆ. ಅಮ್ಮನ ಹಾಗೇ ಪ್ಯಾನೆಲ್ ನಲ್ಲಿ ಕೂಗಾಡೋ ಪಾಟೀಲ್ ಆಂಟಿ, ಸಜ್ಜನ್ ಅಂಕಲ್, ಯಾರ್ಯಾರೋ ಇದ್ದಾರೆ. ತುಂಬಲಾರದ್ದು ಅಂದ್ರೆ ಏನರ್ಥ. ನನ್ನ ಪರಿಸ್ಥಿತಿ ಏನು? ನನಗಲ್ವಾ ತುಂಬಲಾರದ ನಷ್ಟ?. ಒಂದೇ ಮನೆಯಲ್ಲಿ ಇದ್ವಿ. ಒಂದು ಆಕೃತಿ ಕಣ್ಣ ಮುಂದೆ ಇತ್ತು. ಅದರ ಹೆಸರು ಅಮ್ಮ ಅಂತಾಗಿತ್ತು. ಈಗ ಅದಿಲ್ಲ. ಇನ್ಮುಂದೆ ಆ ಆಕೃತಿ ಕಣ್ಮುಂದೆ ಸುಳಿಯಲ್ಲ. ಆ ಜಾಗ ಖಾಲಿ ಆಗಿದೆ. ಸಮಯ ಇದ್ದಾಗ, ಅಮ್ಮನಿಗೆ ಮೂಡ್ ಇದ್ದಾಗ, ನಾನು ಅವಳ ಹತ್ರ ಏನಾದರೂ ಹೇಳಿಕೊಳ್ಳೋದಿತ್ತು. ಆದರೆ ಈಗ ಅದಿಲ್ಲ. ಎಲ್ಲವನ್ನ ಯಾರ ಹತ್ತಿರ ಹೇಳ್ಕೊಳ್ಳೋದು. ಯಾರೂ ನೆಂಟರು ಅಂತ ಇಲ್ಲ. ಇದ್ದವರನ್ನ ಅಮ್ಮನೇ ದೂರ ಇಟ್ಟಿದ್ದಾಳೆ. ಈಗ ಅವಳು ಸತ್ತಿದಾಳೆ ಅವರು ಬಂದು ನನ್ನೊಟ್ಟಿಗೆ ಇರಬಹುದು ಅಥವಾ ನಾನೇ ಅವರೊಟ್ಟಿಗೆ ಹೋಗಬಹುದು. ಆದರೆ ಅವರೆಲ್ಲಾ ನನ್ನನ್ನ ನೋಡೋ ರೀತಿ ಹೇಗಿರುತ್ತೆ? ಆ ಕುಹಕದ ವಾತಾರಣದಲ್ಲಿ ನಾನಿರಬೇಕಾ? 
ಓಪನ್ ಗಾಡಿ ಬಂತು. ಯಾವ ನಾಮ ಸ್ಮರಣೆ ಇರದೆ (ಸಿನಿಮಾಗಳಲ್ಲಿ ತೋರಿಸೋ ಹಾಗೆ) ಅಮ್ಮ ಹೊರಟ್ಳು. ನಾನ್ಯಾವ ಡ್ರೆಸ್ ಹಾಕ್ಕೋ ಬೇಕಿತ್ತು? ಗೊತ್ತಿಲ್ಲ. ಪಂಚೆಯುಟ್ಟು, ಶಲ್ಯ ಹೊದೆಯಬೇಕಿತ್ತು. ಆದರೆ ಅಮ್ಮ ಇದನ್ನೆಲ್ಲಾ ಕಂದಾಚಾರ ಅಂತ ತಳ್ಳಿಹಾಕಿದ್ಳು. ಮೌನವಾಗಿ ಗಾಡಿ ಹೊರಡ್ತಿದೆ. ನನ್ನ ಪಕ್ಕದಲ್ಲಿ ಸಜ್ಜನ್ ಮತ್ತೆ ಕರುಣಾ ಕೂತಿದಾರೆ. ಅವರಿಬ್ಬರನ್ನ ನೋಡಿದ್ರೆ ಮೈ ಉರಿಯುತ್ತೆ. ಯಾರನ್ನೂ ಸಹಿಸೊಲ್ಲ, ಅಮ್ಮನನ್ನ ಹಾಳು ಮಾಡಿದೋರು ಇವರು. ಅಮ್ಮನ ಮೈ ಮೇಲೆ ಅವರ ಹೋರಾಟದ ಬಾವುಟ ಹೊದೆಸಿದ್ರು. ಅಗ್ನಿಮುಖ ಟಿವಿಯವರು ಫುಲ್ ಕವರೇಜ್ ಮಾಡ್ತಿದಾರೆ. ನನ್ ಮುಖಾನ ನನ್ ಪ್ರೆಂಡ್ಸ್ ನೋಡ್ತಿರ್ತಾರೆ. ಅಮ್ಮನ ಸಾವಿನ ತನಿಖೆ ಆಗಬೇಕು ಅಂದವನು ಕೂಗ್ತಿದ್ದ. ಈ ಸಾವಿನ ತನಿಖೆ ಆಗಲಿ. ಸಜ್ಜನ್ ಮತ್ತೆ ಕರುಣಾ ಪಿಸುಗುಟ್ಟಿಕೊಂಡರು. ’ಲಿವರ್ ಹಾಳಾಗಿದೆ. ನಿನ್ನೆ ಫುಲ್ ಬಾಟಲ್ ಎರಡು ಮುಗ್ಸಿದಾಳೆ. ಎಷ್ಟು ಹೇಳಿದ್ರು ಕೇಳಲಿಲ್ಲ. ದುಡ್ಡು ಬೇರೆ ಬರ್ಲಿಲ್ಲಾಂತ ಟೆನ್ಶನ್ ಇತ್ತು. ಥೋ! ಈ ಡಿಮಾನಿಟೈಸೇಶನ್ ಇಂದ ಎಲ್ಲಾ ಉಲ್ಟಾ ಆಗೋಯ್ತು’. ’ಅವನು ಕಿರುಚ್ತಿದಾನೆ, ಆ ಇಕ್ಬಾಲ್ ಗೆ ಸುಮ್ನಿರೋಕೆ ಹೇಳ್ಬೇಕು’. ’ಇಲ್ಲ ಇದನ್ನ ನಯವಾಗಿ ಕೋಮುವಾದಿಗಳ ತಲೆಗೆ ಕಟ್ಟೋಣ. ತರ್ಕ ಹುಡುಕಿ. ಲಿಂಕ್ ಸಿಗುತ್ತೆ’. 
ಇವರಿಬ್ಬರ ಮಧ್ಯೆ ನಾನು ಕೂತಿದೀನು. ನನ್ನೆದುರಿಗೆ ನನ್ನಮ್ಮನ ಸಾವನ್ನ ಅವರ ಅವಕಾಶಕ್ಕೆ ಬಳಸಿಕೊಳ್ತಿದಾರೆ. ಅಮ್ಮನಿಗೆ ದುಡ್ಡು ಹೇಗೆ ಬರ್ತಿತ್ತು? ಕೇಳಬೇಕು. ಪೋಸ್ಟ್ ಮಾರ್ಟಮ್ ಮಾಡಕ್ಕೆ ಕರ್ಕೊಂಡು ಹೋಗ್ತಾರ? ಕೇಳಿದೆ. ಇಲ್ಲಾಂದ್ರು. ಸ್ಮಶಾನದ ಮಧ್ಯೆ ಅಮ್ಮನನ್ನ ಗುಂಡಿ ತೆಗೆದು ಹೂತು, ಸಮಾಧಿ ಮಾಡಿದ್ರು. ಈಗ ಬಂದ ಅಳು ನಿಜವಾದದ್ದು. ಕಣ್ಣೆದುರಿಗಿದ್ದ ಜೀವ ಇನ್ನು ಇರೊಲ್ಲ. ಅ ಭಯಾನಕ ಸತ್ಯವನ್ನ ಈಗ ನಾನು ಅರ್ಥ ಮಾಡಿಕೊಳ್ಳಬೇಕಿತ್ತು. ಹನ್ನೆರಡು ವರ್ಷದ ಹುಡುಗ, ವಯಸ್ಸಿಗೆ ಮೀರಿ ಪ್ರಬುದ್ಧತೆಯನ್ನ ಆವಾಹಿಸಿಸಿಕೊಂಡವನು. ಆದರೂ ನಾನು ಚಿಕ್ಕವನೇ ಅಲ್ವಾ? ಬಲವಂತವಾಗಿ ನನ್ನನ್ನು ಅರಳಿಸಿದ್ದೇಕೆ? ಯಾರನ್ನ ಕೇಳಲಿ? ಪ್ರಶ್ನೆಗಳಲ್ಲಿ ಸಂಕೇತ ಮುಳುಗಿಹೋಗುತ್ತಿದ್ದ.
****************************
 
ಅಧ್ಯಾಯ ೧
 ೨
ಉರೀತಿರೋ ಸಿಗರೇಟಿನ ಹೊಗೆಯಲ್ಲಿ ಸಜ್ಜನ ಮತ್ತು ಕರುಣಾ ಕೂತಿದಾರೆ. ಸಜ್ಜನ್ ಮಾತಿಗಾರಂಭಿಸಿದ ’ಸಿಕ್ಕಾಪಟ್ಟೆ ಗಲಾಟೆ ಮಾಡಿಬಿಟ್ಳು ಲೌಡಿ. ಇನ್ನಿಲ್ಲದ ಹಾಗೆ ಹೇಳಿದ್ದೆ. ಎರಡೂ ಕಡೆ ಕಾಲಿಟ್ಟು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಂತ ಓಡಾಡ್ತಿರು. ಒಂದೇ ಕಡೆ ಇದ್ರೆ ದುಡ್ಡು ಬರೊಲ್ಲ. ಅಂತ. ಸಿದ್ದಾಂತ ಅಂತ, ಅತಿಯಾಗಿ ಈ ಪಕ್ಷವನ್ನ ನಂಬಿದ್ಳು. ಮತಾಂತರ ಆದ ಕ್ರಿಶ್ಚಿಯನ್ ಥರ ಎಲ್ಲವನ್ನ ಅತೀ ಮಾಡಿಕೊಂಡ್ಳು. ಜಾಗರೂಕತೆಯಿಂದ ಅಲ್ವಾ ನಿಭಾಯಿಸಬೇಕಾದದ್ದು. ಥೋ ಗಲೀಜು ಮಾಡಿಕೊಂಡುಬಿಟ್ಳು ಲೌಡಿ. ಈ ರಾಜ್ಯದಲ್ಲಿ ನಮ್ಮ ಅಸ್ತಿತ್ವ ಇದೆ. ಇದನ್ನ ಭದ್ರ ಮಾಡ್ಕೊಂಡು ಮುಂದಿದ್ದಕ್ಕೆ ಹೆಜ್ಜೆ ಇಡ್ಬೇಕು. ಇಲ್ಲಿ ಎಲ್ಲರನ್ನ ಮತಾಂತರ ಮಾಡಕ್ಕೆ ಟ್ರೈ ಮಾಡ್ಬೇಕು ಅಷ್ಟೆ. ಚಿಕ್ಕ ಹುಡುಗೀರು, ಕಾಲೇಜಿನೋರು ಅವರನ್ನ ಎಳ್ಕೊಂಡ್ರೆ ಆದಷ್ಟು ಕೆಲ್ಸ ಸುಲಭ. ದುಡ್ಡನ್ನ ನಾನು ಹೊಂದಿಸಿಕೊಡ್ತೀನಿ ಅಂದಿದ್ದೆ. ಆ ಎಡಪಂಥೀಯ ಸಪೋರ್ಟ್ ಪಕ್ಷ ದುಡ್ಡು ಸುರೀತಿದೆ. ಸಿಕ್ಕಷ್ಟು ಬಾಚಿಕೊಂಡು ಬದುಕ್ಬೇಕು. ಹೆಸರು ಬರಕ್ಕೆ ವಿವಾದ ಮಾಡ್ಬೇಕು. ಇವಳಿಗೆ ಅರ್ಥವೇ ಆಗಲಿಲ್ಲ. ಒಂದನ್ನೇ ನೆಚ್ಚಿಕೊಂಡ್ಳು. ಸಿನಿಮಾಗಳಲ್ಲಿ ಮಾಡ್ತೀನಿ. ಬರೋ ದುಡ್ಡನ್ನ ಹೀಗೆ ಸೆಟಲ್ ಮಾಡಿ ಹೆಸರು ತಗೋಳೋಣ ಅಂತ ಅನ್ನೋವಷ್ಟರಲ್ಲಿ ಇವಳು ಹೋಗ್ಬಿಟ್ಳು. ಇಲ್ಲಿಗೆ ಬಂದಾಗ ಒಂದು ಮನೆ ಇತ್ತು. ಈಗ ಇನ್ನೊಂದು ಮನೆ ನೋಡ್ಕೋಬೇಕು. ಅವಳ ಮಗನ್ನ ದತ್ತು ತಗೋತೀನಿ ಅಂತ ಒಂದು ಪ್ರೆಸ್ ಕಾನ್ಫೆರೆನ್ಸ್ ಮಾಡಿ ಹೇಳ್ಬೇಕು. 
ಕರುಣಾಗೆ ಇದು ವಿಚಿತ್ರ ಅನ್ನಿಸಿತು. ಸಜ್ಜನ್ ದತ್ತು ತಗೋಬೇಕಾದ ಅವಶ್ಯಕತೆ ಏನಿದೆ? ಅವನ ಹತ್ರ ಅವರಮ್ಮನ ದುಡ್ಡು ಬೇಕಾದಷ್ಟಿದೆ. ಅದು ಅವನ ಬದುಕಿಗೆ ಸಾಕು. ಅವನಿಗೆ ಮಾರಲ್ ಸಪೋರ್ಟ್ ಕೊಡ್ತೀವಿ. ಜೊತೇಲಿ ನಿಲ್ತೀವಿ ಅಷ್ಟು ಹೇಳಿದ್ರೆ ಸಾಕಾಗುತ್ತೆ. ಅವರ ನೆಂಟರನ್ನ ಕರೆದು ಹೇಳೋಣ. ಯಾರದಾದ್ರೂ ಮನೆಯಲ್ಲಿ ಇರಲಿ ಅವನು. 
ಇಲ್ಲ. ಅಷ್ಟು ಸಾಲೊಲ್ಲ. ಈ ಹೋರಾಟಕ್ಕೆ ಬಲ ಅಂದ್ರೆ ಅವಳ ಸಾವು. ಅವಳ ಮಗನ್ನ ನಾವು ದತ್ತು ಅಂತ ತಗೊಂಡ್ರೆ ಆಗ ಜನಗಳ ಕಣ್ಣಲ್ಲಿ ನಾವು ಮಹಾನ್ ಆಗ್ತೀವಿ. ಸಾವಿರದಲ್ಲಿ ಒಬ್ಬನು ನಮ್ ಪರ ನಿಂತ್ರೆ ಅವನನ್ನ ಬಳಸಿ ದುಡ್ಡು ಎಳ್ಕೋಬಹುದು. ಇದೆಲ್ಲಾ ಟ್ರಿಕ್ ಗಳು ನಿನಗೆ ಇನ್ನೂ ಅರ್ಥಾವಾಗೊಲ್ಲ. ಸಿನಿಮಾಗಳಲ್ಲಿ ಮಾಡಿದ ಹಾಗೆ ಇಲ್ಲೂ... ಜಾಸ್ತಿ ನಟನೆ, ಸ್ವಲ್ಪ ಬುದ್ದಿ ಅಷ್ಟೆ. 
ಆದರೆ ಅವನು ಒಪ್ಕೋಬೇಕಲ್ಲ. 
ಒಪ್ಕೋಳೋ ಹಾಗೆ ಮಾತಾಡ್ಬೇಕು. ಅವನಮ್ಮನ ಗುಣಗಾನ ಮತ್ತು ಅವನ ಅಸಹಾಯಕತೆಯೆಲ್ಲವನ್ನ ಬಣ್ಣಕಟ್ಟಿ ಹೇಳಬೇಕು. ಅದರ ಜೊತೆಗೆ ಅವನನ್ನ ನಮ್ಮ ಹೋರಾಟದ ಅಸ್ತ್ರವಾಗಿ ತಯಾರು ಮಾಡಬೇಕು. ಆ ಸಾವಿಗೆ ಕಾರಣ ಕೋಮುವಾದಿಗಳು ಅನ್ನೋದನ್ನ ತಾರ್ಕಿಕವಾಗಿ ಒಪ್ಪಿಸಬೇಕು. ಅವಳ ಮನೆಗೆ ಹೋಗೋಣ. ಅವನು ಏನ್ ಮಾಡ್ತಿದಾನೋ ನೋಡೋಣ. ಜೊತೆಯಲ್ಲಿ ಕೂತು ಮಾತಾಡಿ ವ್ಯವಹಾರ ಕುದುರಿಸಿಕೊಳ್ಳೋಣ ನಡಿ. ಆದರೆ ಒಂದು ಮಾತು. ನೀನು ಅವನ ಸುತ್ತಾ ಹರಡಿಕೊಂಡು ನಿಲ್ಲಬೇಡ. ಮೊನ್ನೆ ನೀನು ಮಾಡ್ತಿದ್ದ ರೀತಿಗೆ ಅವನು ನಿನ್ನನ್ನ ಅಸಹ್ಯದಿಂದ ನೋಡ್ತಾನೆ, ಸ್ವಲ್ಪ ದೊಡ್ಡವನಾಗಲಿಬಿಡು. ಆಮೇಲೆ ಅವನನ್ನ ಬಳಸಿಕೊಳ್ಳೋದು ನಿನಗೆ ಬಿಟ್ಟದ್ದು. 
ಹಾಗಲ್ಲ ಚಿಗುರು ಮೀಸೆ ಬರದ ಎಳೇ ಹುಡುಗ ಅಂತ ಸ್ವಲ್ಪ ಸಲಿಗೆಯಿಂದ ಇದ್ದೆ. ಅದನ್ಯಾಕೆ ತಪ್ಪಾಗಿ ಅಂದ್ಕೋತೀರ?
ಗೊತ್ತಿದೆ, ನಿನ್ನ ಚೇಷ್ಟೆಗಳು. ಥೋ ಆ ಟೈಮಲ್ಲೇನೋ ಅದನ್ನ ಎಕ್ಸಿಗ್ಯೂಟ್ ಮಾಡೋದು. ಸಮಯ ಸಿಕ್ಕಾಗ ನೋಡಿ ಮಾಡ್ಬೇಕು. ನನ್ನನ್ನೇ ನೋಡು. ನನಗೂ ಗಂಡಸರಂದ್ರೆ ಇಷ್ಟ. ಹಾಗಂತ ನಾನು ಗಂಡಸ್ತನ ಇಲ್ಲದೋನೇನಲ್ಲ. ನನಗೂ ಎರಡು ಮಕ್ಕಳಿವೆ. ಆದರೆ ಹುಡುಗರ ಬಗ್ಗೆ ಮೋಜಿದೆ. ಆದರೆ ಅದನ್ನ ಎಲ್ಲ ಕಡೆ ಪ್ರಯೋಗಿಸಲ್ಲ. ಟೈಮ್ ನೋಡ್ಕೊಳ್ತೀನಿ. ಅವರನ್ನ ಆ ಕ್ರಿಯೆಗೆ ಒಪ್ಪಿಸಿ ಆಮೇಲೆ ಅಲ್ವಾ ಮಿಕ್ಕದ್ದು. ಹಾಂ! ಇದೊಂದು ನೆನಪಿಟ್ಕೋ ಈ ವಿಷಯದ ಬಗ್ಗೆನೂ ನಾವು ಹೋರಾಟ ಮಾಡ್ಬೇಕು. ಸಲಿಂಗ ಕಾಮ ಅನ್ನೋದು ಸ್ವಾಭಾವಿಕ. ಅದರಿಂದ ಯಾವ ಹಾನಿಯೂ ಇಲ್ಲ. ಅತೃಪ್ತ ಕಾಮ ಅಂತಲ್ಲ. ಮುಕ್ತ ಲೈಂಗಿಕತೆಯ ಮತ್ತೊಂದು ರೂಪ ಅಷ್ಟೆ. ಅನ್ನೋದನ್ನ ನಾವು ಪ್ರತಿಪಾದಿಸಬೇಕು. ನಾನು ಹೊರಗಿನಿಂದ ಬೆಂಬಲ ಕೊಡ್ತೀನಿ. ತರ್ಕಬದ್ಧವಾದ ವಾದ ಸರಣಿಯನ್ನ ಬರೆದುಕೊಡ್ತೀನಿ. ನೀನು ಅದರ ಮುಂದಾಳಾಗು.
ಕರುಣಾ ಮನಸ್ಸಿನಲ್ಲಿಯೇ ನಾಯಕತ್ವದ ಆನೆ ಹತ್ತಿದ. ತಾನು ಮುಂಚೂಣಿಯಲ್ಲಿ ನಿಂತಂತೆ ಹಾರ ತುರಾಯಿಗಳು, ಕ್ರಾಂತಿಯ ಬೀಜವಾದಂತೆ ಕನಸು ಕಟ್ಟಲು ಆರಂಭಿಸಿದ. ಆದರೂ ಮನಸ್ಸಿನಲ್ಲಿ ಕೊರೆತ. ಈ ಆಕ್ಟರ್ ಬಡ್ಡೀಮಗ ತಾನು ಸಿಕ್ಕಿಹಾಕಿಕೊಳ್ಳದೆ ಎಲ್ಲರನ್ನ ಸಿಕ್ಕಿಸ್ತಾನೆ. ನನ್ನ ಮುಂಚೂಣಿಯಲ್ಲಿ ಬಿಟ್ಟು ತಾನು ಬೇಳೆ ಬೇಯಿಸಿಕೊಳ್ತಾನೆ. ಅವರ ಅಮ್ಮ ಅಪ್ಪನ ಹತ್ರ ತಾನು ’ಹಾಗಲ್ಲ’ ಗಂಡಸು ಅನ್ನೊದನ್ನ ಹೇಳಿರ್ತಾನೆ. ಹೊರಗಡೆ ಸಲಿಂಗರತಿಯನ್ನೂ ನಡೆಸ್ತಾನೆ. ಹೆಂಡತಿ ಮಕ್ಕಳಿಗೆ ತಾನು ಸಂಭಾವಿತ. ಅವರೇನಾದರೂ ಕೇಳಿದರೆ ಅದಕ್ಕೆ ಇವನ ಉತ್ತರ, ’ಅದೊಂದು ಹೋರಾಟ , ಪಾಪ ಅವರಿಗೆ ಬೆಂಬಲ ಕೊಡಬೇಕು. ಅವರ ತಪ್ಪೇನು ಅದರಲ್ಲಿ. ಶಾಸ್ತ್ರದಲ್ಲಿಯೇ ಅದರ ಬಗ್ಗೆ ಇದ್ಯಲ್ಲ. ಇಷ್ಟಕ್ಕೂ ನಾನೇನು , ’ನಾನು ಸಲಿಂಗ ಕಾಮಿ’ ಅಂತ ಹೇಳಿಕೊಳ್ತಿಲ್ಲವಲ್ಲ. ಅವರಿಗೆ ಸಪೋರ್ಟ್ ಕೊಡ್ತಿದೀನಿ ಅಷ್ಟೆ. ಅದು ಹೊರಾಟಕ್ಕೆ ಬೆಂಬಲ. ಅದರಿಂದ ಹೆಸರಾಗುತ್ತೆ’. ಅಂತೆಲ್ಲಾ ನಂಬಿಸ್ತಾನೆ. ಭಂಡ. ನನ್ನನ್ನೂ ಈ ಕೂಪಕ್ಕೆ ತಳ್ಳಿದ್ದು ಅವನೇ ಅಲ್ವಾ? ಈಗ ಇದರಲ್ಲೇ ರುಚಿ ಹತ್ತಿದೆ. ಅವನು ಬುದ್ಧಿವಂತ. ತನಗೆ ಬೇಕೆನಿಸಿದಾಗ ಮಾತ್ರ ಹುಡುಕ್ತಾನೆ. ಛೆ ಅವನಷ್ಟು ಇಂದ್ರಿಯ ನಿಗ್ರಹ ಇಲ್ಲ ನನಗೆ. ಅದೇನೇ ಇರಲಿ. ಇದರಿಂದ ನಾನ್ನು ಸಲಿಂಗ ಕಾಮದ ಮುಕ್ತತೆಯ ನಾಯಕನಾಗ್ತೀನಿ. ಒಂದು ಟ್ರೆಂಡ್ ನನ್ನಿಂದ ಸೃಷ್ಟಿಯಾಗುತ್ತೆ. ಇದನ್ನೆಲ್ಲಾ ಕತೆಯ ರೂಪದಲ್ಲಿ ಬರೀಬೇಕು.
ಏನು ಯೋಚಿಸ್ತಿದೀ? , ಸಜ್ಜನ್ ನನ್ನ ಆಲೋಚನೆಗೆ ಬ್ರೇಕ್ ಹಾಕಿದ.
ಏನಿಲ್ಲ. ಯಾವದ ಶ್ರೀಮುಖಿ ಮನೆಗೆ ಹೋಗೋದು?
ನಾಳೆ ಹೋಗ್ಬರೋಣ. ನೀನಲ್ಲಿ ಸುಮ್ನೆ ಕೂತ್ಕೋ ಅಷ್ಟೆ. ಅ ಸುಂದರೇಶ್ ಭಟ್, ಇಕ್ಬಾಲ್ ಖಾನ್ ನ್ನೂ ಬರಕ್ಕೆ ಹೇಳು.
ಇಕ್ಬಾಲ್ ಖಾನ್ ಯಾಕೆ. ಅವರ ಕಡೆ ದತ್ತು ಎಲ್ಲಾ ಇಲ್ಲವಲ್ಲ. 
ಇರಬಹುದು ಆದರೆ ಇದು ಜಾತ್ಯಾತೀತ ಅಂತ ತೋರಿಸಿಕೊಳ್ಳಕ್ಕೆ ಬೇಕಾಗುತ್ತೆ. 
******
ಶ್ರೀಮುಖಿ ಮನೆಗೆ ಬಂದಾಗ ಗಂಟೆ ಹತ್ತು. ಅವನು ಸ್ಕೂಲಿಗೆ ಹೋಗಿರಲಿಲ್ಲ. ಒಳಗೆ ಸುಮ್ಮನೆ ಕೂತಿದ್ದ. ಅವನ ಮನೆಯವರಿದ್ರು. ಯಾರು ಆ ಮುದುಕ? ಎಲ್ಲೋ ನೋಡಿದಂತಿದ್ಯಲ್ಲ. ಶ್ರೀಮುಖಿಯ ಮಾವ. ಶ್ರೀಮುಖಿಯ ಮೊದಲನೇ ಗಂಡನ ತಂದೆ. ಅಂದ್ರೆ ಸಂಕೇತನ ತಾತ ಅನ್ನಬಹುದು. ಅವನ ಪಕ್ಕ ಕೂತು ಅವನ ತಲೆಯನ್ನ ನೇವರಿಸ್ತಿದ್ರು. ಅವನು ಅವರ ತೊಡೆ ಮೇಲೆ ಜಾರಿ ನಿದ್ದೆಗೆ ಹೋಗುತ್ತಿದ್ದ. ನಮ್ಮ ಸಪ್ಪಳ ಕೇಳಿ ಅವನಿಗೆ ಎಚ್ಚರವಾಯ್ತು. ನನ್ನನ್ನ ನೋಡಿ ಮುಗುಳ್ನಕ್ಕ. ಕರುಣಾನನ್ನ ನೋಡಿ ಮುಖ ಕಿವುಚಿಕೊಂಡ. ಸುಂದರೇಶ ಮತ್ತು ಇಕ್ಬಾಲ್ ತಮ್ಮ ರೂಪಗಳನ್ನ ತೋರಿಸಿ ಎದುರುಗಡೆಯ ಸೋಫಾದ ಮೇಲೆ ಕೂತರು. ಅವರ ತಾತನಿಗೆ ನಮ್ಮೆಲ್ಲರ ಉಪಸ್ಥಿತಿ ಅಸಹ್ಯವಾದಂತಾಗಿ ಒಳಗೆ ಹೋಗ್ಬಿಟ್ರು. ನಾನೇ ಶುರು ಮಾಡಿದೆ.
ಏನ್ ಮರಿ ಹೇಗಿದೀಯ? ಅಮ್ಮನ ನೆನಪಾಗುತ್ತಾ ನಿನಗೆ? (ಛೆ ಎಂತಹ ಅಸಂಬದ್ಧ ಪ್ರಶ್ನೆ? ಸ್ವಲ್ಪ ಗಟ್ಟಿಯಾದ ಪ್ರಶ್ನೆ ಕೇಳ್ಬೇಕು. ಕುಶಲ ವಿಚಾರಗಳು ಸಾಂದ್ರಗೊಂಡು ಆ ವಾಕ್ಯದಲ್ಲಿ ಇಳಿಬೇಕು). ನಮಗೆಲ್ಲರಿಗೂ ಆಗೋ ನೆನಪಿಗೂ ನಿನಗೂ ವ್ಯತ್ಯಾಸ ಇದೆ. ಸದಾ ಅಮ್ಮನ ನೆರಳಲ್ಲೇ ಇದ್ದೆ. ಅದೊಂದು ಜೀವ ನಿನ್ನೊಟ್ಟಿಗೆ ದಿನವಿಡೀ ಇರ್ತಿತ್ತು. ನೋವಾಗುತ್ತೆ ನಿಜ. ನಾವೆಲ್ಲಾ ಇದೀವಿ ನಿನಗೆ. (ಮುಗುಳ್ನಗ್ತಿದಾನೆ. ಅಂದ್ರೆ ಅವನಿಗೆ ನಾವು ಇಷ್ಟ ಆಗ್ತಿದೀವಿ. ಈಗ ಪಾಯಿಂಟ್ ಗೆ ಬರ್ಬೇಕು). ಯಾವಾಗಿಂತ ಸ್ಕೂಲಿಗೆ ಹೋಗ್ತೀಯ ಹೇಳು ನನ್ನ ಕಾರ್ ಡ್ರೈವರ್ ಬರ್ತಾನೆ ಕರ್ಕೊಂಡು ಹೋಗಿ ಬಂದು ಮಾಡ್ತಾನೆ.
ಬೇಡ ಅಂಕಲ್. ಅಮ್ಮನ ಕಾರ್ಯಗಳು ಆಗಲಿ. ನಾನೇ ಹೋಗ್ತೀನಿ. ನನಗೆ ಬಸ್ ನಲ್ಲಿ ಹೋಗಕ್ಕೆ ಬರುತ್ತೆ. ಮೇಲಾಗಿ ಅಮ್ಮನ ಕಾರಿದೆ. ತೀರ ಬೇಕನ್ನಿಸಿದ್ರೆ ಕೇಳ್ತೀನಿ.. ಥ್ಯಾಂಕ್ಸ್
ಅಮ್ಮನ ಕಾರ್ಯಗಳು ಅಂದ್ರೆ ?
ಸತ್ತ ಮೇಲೆ ಮಾಡೋ ಕಾರ್ಯಗಳು ಇರುತ್ತಲ್ಲ ಅಂಕಲ್, ನಿಮಗೆ ಗೊತ್ತಿಲ್ವಾ? ಅದನ್ನ ತಾತ ಹೇಳ್ತಿದ್ರು.
ನಿಮ್ಮಮ್ಮನಿಗೆ ಅವುಗಳ ಮೇಲೆ ನಂಬಿಕೆಯಿಲ್ಲ. ಮೇಲಾಗಿ ಅವು ಯಾರೋ ಬಲವಂತವಾಗಿ ಹೇರಿರೋದು. ನಿನಗಿದು ದೊಡ್ಡವನಾದ ಮೇಲೆ ಅರ್ಥವಾಗುತ್ತೆ. ಮರಿ ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡ್ಕೋಬೇಡ. ನಿಮ್ಮಮ್ಮನ ವಾರಸುದಾರ ನೀನು, ಅವಳ ಆಸೆಯನ್ನು ಪೂರೈಸಬೇಕಲ್ವಾ? ಅವಳಿಗೆ ಇಷ್ಟವಿಲ್ಲದೆ ಇರೋದನ್ನ ಮಾಡಿದ್ರೆ ಅವಳಿಗೆ ನೋವಾಗಲ್ವಾ?
ಅಂಕಲ್ ಫಾರ್ ಗಾಡ್ ಸೇಕ್ ಪ್ಲೀಸ್ ಅಮ್ಮನನ್ನ ಅವಳು ಇವಳು ಅನ್ಬೇಡಿ. ನಿಮಗೆ ಫ್ರೆಂಡ್ ಇರಬಹುದು ಆದರೆ ನನಗೆ ಅಮ್ಮ. ಸಿಂಗ್ಯುಲರ್ ನಲ್ಲಿ ಕರೆದ್ರೆ ಹಿಂಸೆಯಾಗುತ್ತೆ. 
ಓಕೆ ಸಾರಿ. ನಿಮ್ತಾಯಿಯವರಿಗೆ ಈ ಥರದ ಆಚರಣೆಗಳು ನಂಬಿಕೆಗಳ ಮೇಲೆ ಅಸಹ್ಯವಿತ್ತು ಅಲ್ವ? ಮತ್ಯಾಕೆ ಅವನ್ನೆಲ್ಲಾ ಮಾಡ್ತೀರಿ. 
ಗೊತ್ತಿಲ್ಲ ಅಂಕಲ್, ಮಾಡ್ಬೇಕು ಅಂತ ನನಗೆ ಅನ್ನಿಸ್ತು. ಅದಕ್ಕೆ ತಾತನನ್ನ ಕೇಳಿದೆ. ಯಾವತ್ತೂ ಬರದೆ ಇರೋ ತಾತ ಅಮ್ಮ ಹೋದ್ಮೇಲೆ ಬಂದ್ರು. ನನಗೆ ಗುರುತು ಕೂಡ ಸಿಗಲಿಲ್ಲ. ತಾವೇ ಪರಿಚಯ ಮಾಡ್ಕೊಂಡ್ರು. ಜೊತೇಲೇ ಇದಾರೆ. ನನಗೆ ಸಮಾಧಾನ ಮಾಡ್ತಾ?
ಸುಂದರೇಶ್ ಭಟ್ , ಇಷ್ಟು ದಿನ ಇಲ್ಲದೋರು ಈಗ ಬಂದಿರೋದು ನೋಡಿದ್ರೆ ನಿನಗೇನನ್ಸುತ್ತೆ. ನೀನಿನ್ನೂ ಚಿಕ್ಕೋನು. ನಿರ್ಧಾರಗಳನ್ನ ತಗೋಳೊದನ್ನ ನಮಗೆ ಬಿಡು. ನಿಮ್ಮಮ್ಮನ ಜೊತೆ ಹೆಚ್ಚಾಗಿ ಒಡನಾಡಿದೋರು ನಾವು. ಆಗೆಲ್ಲಾ ಇಲ್ಲದಿದ್ದೋರು ಈಗ ಬಂದು ನಿಂತು ಅವರ ಮತವನ್ನ ಹೇರೋದು ಸರಿಯಲ್ಲ. ಇದನ್ನ ಅವರ ಹತ್ರನೇ ಮಾತಾಡ್ತೀವಿ. ನೀನು ಸುಮ್ಮನಿರು. 
ಅಂಕಲ್ ಅಮ್ಮನ ವಿಷ್ಯಕ್ಕೆ ಜಗಳ ಆಗೋದು ಬೇಡ. ಆಮೇಲೆ ಅಮ್ಮ ನಮಗೆ ಸೇರಿದೋಳು ಅಲ್ವಾ. ಬಿಟ್ಬಿಡು ನಮ್ಮನ್ನ.
ಇಕ್ಬಾಲ್ ಖಾನ್, ಬೇಟಾ ಅಮ್ಮನ ನೆನಪಲ್ಲಿ ಸೆಮಿನಾರ್ ಗಳನ್ನ ಆಯೋಜನೆ ಮಾಡ್ತಿದೀವಿ. ಅದು ಅವರಿಗೆ ಕೊಡೋ ಗೌರವ. ಅದು ಬಿಟ್ಟು ಶ್ರಾದ್ದ, ವೈಕುಂಠ ಸಮಾರಾಧನೆ ಅಂತ ಮಾಡ್ತಾ ಕೂತ್ರೆ ಅವರ ಸಿದ್ಧಾಂತಕ್ಕೆ ಬೆಂಕಿ ಹಚ್ಚಿದಂಗೆ ಅಲ್ವ? ಯೋಚ್ನೆ ಮಾಡು.
ಖಾನ್ ಅಂಕಲ್, ಆ ಸೆಮಿನಾರ್ ಗಳನ್ನ, ಸಿದ್ಧಾಂತಗಳನ್ನ ನೀವು ಮಾಡಿ. ತುಂಬಾ ಸಂತೋಷ. ಬೇಡಾನ್ನಲ್ಲ. ಆದರೆ ಅಮ್ಮ ನನಗೆ ಸ್ವಂತ. ಈ ವಿಷ್ಯ ನಾನು ತಾತ ನೋಡ್ಕೋತೀವಿ. ಪ್ಲೀಸ್ ಇಲ್ಲಿಗೆ ನಿಲ್ಸಿ.
ಇಕ್ಬಾಲ್ ಖಾನ್, ಆ ಮುದುಕ ಇವನ ಬ್ರೈನ್ ವಾಷ್ ಮಾಡಿದಾನೆ. ಬದುಕಿದ್ದಾಗ ಕ್ಯಾರೇ ಅನ್ನದೊರು ಈಗ ಬಂದು ಬ್ಯಾಳೆ ಬೇಯಿಸಿಕೊಳ್ಳೋದರ ಹಿಂದೆ ಇರೋ ಮರ್ಮ ನಮ್ಗೆ ಗೊತ್ತು. ಜೋರಾಗಿ ಹೇಳಿದ
ಸಂಕೇತ್, ಖಾನ್ ಅಂಕಲ್ ಪ್ಲೀಸ್, ನಿಮ್ ಬಗ್ಗೆ ಗೌರವ ಇದೆ, ಆದರೆ ಮಾತು ಪರ್ಸನಲ್ ಆಗಿ ಹಿಟ್ ಆಗ್ತಿದೆ. ಬೇಜಾರು ಮಾಡ್ಕೋಬೇಡಿ, ಹೊರಡಿ.
ಮನೆಯಿಂದ ಹೊರಟು ಬರುವಾಗ ಕಾರಿನಲ್ಲಿ ಭಟ್ ಮಾತಿಗಿಳಿದರು. ಆ ಮುದುಕ ಬಂದು ನಮ್ಮ ಪ್ಲಾನ್ ನ ಹಾಳು ಮಾಡಿಬಿಟ್ಟ ಅನ್ಸುತ್ತೆ. ನ್ಯೂಸ್ ಪೇಪರಿನಲ್ಲಿ ಇಂತಹ ಹೇರಿಕೆಯ ವಿರುದ್ಧ ಲೇಖನ ಬರೀಬೇಕು. ಅವಳಿಗಾದ್ರೂ ಬುದ್ಧಿ ಬೇಡ್ವಾ ಮಗನನ್ನ ಇಷ್ಟು ಲೂಸಾಗಾ ಬೆಳೆಸೋದು? ಅವನಿಗೆ ಖಚಿತವಾಗಿ ನಿರ್ಧಾರ ತಗೋಳೋ ಬೌದ್ಧಿಕತೆಯನ್ನ ಕಲಿಸ್ಬೇಕಿತ್ತು. ಇದನ್ನ ತಡೆಹಿಡೀಬೇಕು. ಇಲ್ಲಾಂದ್ರೆ ಜನ್ಮ ಪೂರ್ತಿ ಬ್ರಾಹ್ಮಣ್ಯದ ವಿರುದ್ದ ಹೋರಾಡಿದ ಬ್ರಾಹ್ಮಣನೊಬ್ಬ ಕಡೆಗಾಲದಲ್ಲಿ ಹರ ಹರ ಅಂತ ಅಂದು ಸತ್ತನಂತೆ, ಹಂಗಾಗುತ್ತೆ. 
ಸಜ್ಜನ್, ಸಾಕು ಸುಮ್ನಿರಪ್ಪ, ಮೊನ್ನೆ ನೀವ್ ಮಾಡಿದ್ದೇನು. ಮಗನಿಗೆ ಉಪನಯನ ಮಾಡಿದ್ರಿ, ಯಾಕ್ ಬೇಕಿತ್ತು ಅದು. ಹೇಳೋದು ಒಂದು ಮಾಡೋದು ಇನ್ನೊಂದು. 
ಮನೆಯಲ್ಲಿ ನಿರ್ಧಾರಗಳನ್ನ ನಾನೊಬ್ನೆ ತಗೊಳೋಕೆ ಆಗುತ್ತಾ? ಮೇಲಾಗಿ ನಮ್ ಮಾವ ತುಂಬಾ ಪವರ್ ಫುಲ್, ಅವರ ದುಡ್ಡಲ್ಲಿ ನಾನು ಪೇಪರ್ ನಡೆಸ್ತಿದೀನಿ. ನಾನು ಲೆಫ್ಟಿಸ್ಟ್ ಅಂತ ಗೊತ್ತು ಅವರಿಗೆ ಆದ್ರೂ ನಮ್ ಮದ್ವೆ ಮಾಡಿದ್ರು. ಆ ಕತೆ ಗೊತ್ತಲ್ಲ. ನಾನು ಅವಳು ಕಾಲೇಜಿನಲ್ಲಿ ಲವ್ ಮಾಡಿದ್ವಿ , ಅವಳು ಬಸಿರಾದ್ಳು. ತೆಗೆಸ್ಕೊಂಡುಬಿಡ್ತಾಳೆ ಅಂತೆಲ್ಲಾ ಅಂದ್ಕೊಂಡೆ. ಅವಳು ಸಾಕ್ಷಿಗಳನ್ನ ಇಟ್ಕೊಂಡೇ ಮಾತಾಡಿದ್ಳು. ಅವರಪ್ಪ ಮಧ್ಯೆ ಬಂದು ದಬಾಯಿಸಿದ. ಹುಡುಗತನದಲ್ಲಿ ಮಾಡಿದ್ದು, ಅದೇ ಹುಡುಗತನದಲ್ಲಿ ಹೆದರಿ ಅವಳನ್ನ ಕಟ್ಕೊಂಡೆ. ಅವಳಪ್ಪಂಗೆ ಅಳಿಯಾನೂ ನಮ್ ಪೈಕಿ ಅನ್ನೋ ಅಭಿಮಾನನೂ ಇತ್ತು. ಮದ್ವೆ ಗ್ರಾಂಡ್ ಆಯ್ತು. ಆಗ ಅವರು ಹೇಳಿದ್ದೊಂದೇ. ನಿನ್ನ ಸಿದ್ಧಾಂತ ನಿನಗೆ ಮಾತ್ರ, ಮನೆಯೊಳಗೆ ಅದನ್ನ ತಂದ್ರೆ ನಿನ್ನ ಬಂಡವಾಳ ಬಯಲು ಮಾಡ್ತೀನಿ’ಅಂತ. ಮಾವನಿಗೆ ರೌಡಿ ಗ್ಯಾಂಗ್ ಎಲ್ಲಾ ಗೊತ್ತಿದೆ. ಅವರ ಬಲವಂತಕ್ಕೆ ಉಪನಯನ ಎಲ್ಲಾ.
ನಿನ್ನ ಸತ್ಯ ನಿನಗೆ ಮಾತ್ರ. ನೀನು ಅವಕಾಶವಾದಿ ಅಂತ ಗೊತ್ತು. ಇಷ್ಟಕ್ಕೂ ಆ ಮುದುಕನ ಬಗ್ಗೆ ಏನ್ ಬರೀತೀಯ ಪೇಪರಿನಲ್ಲಿ. 
ವೈದಿಕ ಧರ್ಮವನ್ನ ಆಚರಣೆಗಳನ್ನ ಬಲವಂತವಾಗಿ ಒಬ್ಬ ಹೋರಾಟಗಾರ್ತಿಯ ಮಗನ ಮೇಲೆ ಹೇರಲು ಬಂದ ವೃದ್ದ. ಬದುಕಿನುದ್ದಕ್ಕೂ ಮಗಳನ್ನು ದ್ವೇಷಿಸಿ ಸತ್ತ ಮೇಲೆ ಮೊಮ್ಮನನ್ನ ತಮ್ಮ ಬಲೆಯಲ್ಲಿ ಕೆಡವಿಕೊಳ್ಳಕ್ಕೆ ಅಂತ ಬಂದಿದಾರೆ. ಅರ್ಥಹೀನ ಆಚರಣೆಗಳಾದ ತಿಥಿ, ಧರ್ಮೋದಕ, ವೈಕುಂಠ ಸಮಾರಾಧನೆ ಎಲ್ಲವನ್ನ ಎಳೆ ಹುಡುಗನ ಮನಸಲ್ಲಿ ತುಂಬಿ ಅವನಲ್ಲಿ ಬರಬೇಕಾದ ಪ್ರಗತಿಪರ ವಿಚಾರವನ್ನ ಧ್ವಂಸ ಮಾಡ್ತಿದಾರೆ. ಅಂತ ಬರೀತೀನಿ.
ಗುಡ್, ಯಾರ ಹೆಸರಲ್ಲಿ ಹಾಕ್ತೀಯ ಬರಹ.
ಗೊತ್ತಾಯ್ತು. ನಿನ್ನ ಹೆಸರಲ್ಲಿ ಹಾಕ್ತೀನಿ ಬಿಡು. ನಿನ್ನ ಎಲ್ಲಾ ಬರಹಗಳ ಘೋಸ್ಟ್ ರೈಟರ್ ನಾನೇ ಅಲ್ವಾ? ಸರಿ. 
ಸಜ್ಜನನ ಮನಸ್ಸು ತನ್ನ ಮುಂದಿನ ಸೆಮಿನಾರ್ ಕಡೆ ಗಮನ ಹರಿಸುತ್ತಿತ್ತು. ’ಸಂವಿಧಾನ ಉಳಿಸುವಲ್ಲಿ ಧರ್ಮದ ಪಾತ್ರ’ ಎಂಬ ವಿಷಯದ ಬಗ್ಗೆ ಆ ಸೆಮಿನಾರ್ ನಲ್ಲಿ ಮಾತಾಡಬೇಕಿತ್ತು. 

 
 
#ಕೂಪ ಮುಂದುವರೆಯುವುದು...
 

 

Rating
No votes yet