ಸಾದ್ಯ ವಿದ್ದರೆ ಒಂದು ಕೈ ನೋಡಿ.........

ಸಾದ್ಯ ವಿದ್ದರೆ ಒಂದು ಕೈ ನೋಡಿ.........

ಮೊನ್ನೆ ನಮ್ಮ ಮನೆಯಲ್ಲಿ ಸೆಕ್ಷನ್ 144 ಜಾರಿ ಮಾಡ ಬೇಕಾದ ಸಂದರ್ಭ ಬಂದಿತ್ತು. ಅಂದರೆ ದೊಡ್ಡ ಕಲಹ ಜಗಳದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಇಷ್ಟೆ, ನಮ್ಮ ಅಣ್ಣ ಮತ್ತು ಮಕ್ಕಳು ಕುಟುಂಬ ಸಮೇತರಾಗಿ ನಮ್ಮ ಮನೆಗೆ ಬಂದಿದ್ದರು. ಸಾಯಂಕಾಲ ದೇವಸ್ಥಾನಕ್ಕೆ ಹೋಗುವುದಿತ್ತು. ಖಾಲಿ ಕೂಡುವುದೇಕೆ, ಮಾರ್ಕೆಟ್ಟಿಗೆ ಹೋಗಿ ಬರೋಣವೆಂದು ಮಕ್ಕಳನ್ನು ಮನೆಯಲ್ಲಿ ಬಿಟ್ಟು ನಾನು ನಮ್ಮಣ್ಣ ಹೋದೆವು.

ತಿರುಗಿ ಬಂದು ಮನೆಯ ಬಾಗಿಲು ತೆಗೆದು ನೋಡಿದರೆ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಟ್ಟೆಗಳು,ನೀರಿನ ಬಾಟಲ್, ಆಟದ ಸಾಮಾನುಗಳು, ಒಬ್ಬನ ಹಣೆ ಊದಿದೆ ಇನ್ನೂಬ್ಬನ ಹಲ್ಲಿನಲ್ಲಿ ರಕ್ತ , ಇವೆಲ್ಲವನ್ನು ನೋಡಿ ದೊಡ್ಡ ಜಗಳವಾಗಿದೆ ಎಂದು ತಿಳಿಯಿತು.

ಇಷ್ಟೆಲ್ಲಾ ಆಗುತ್ತಿದ್ದರೂ ನಮ್ಮ ಧರ್ಮ ಪತ್ನಿಯರು ಎಲ್ಲಿದ್ದಾರೆಂದು ಹುಡುಕಿದರೆ ಅವರು ಬೆಡ್ ರೂಮಿನಲ್ಲಿ ತಮ್ಮ ಅಲಂಕಾರದಲ್ಲಿ ತೊಡಗಿದ್ದರು. ನಮಗೆ ಅರ್ಥವಾಯಿತು ಸಂಜೆಯ ಊಟ ಹೋಟ್ಲೇ ಗತಿ ಎಂದು.
ಅಷ್ಟರಲ್ಲಿ ನಮ್ಮಣ್ಣ ಮಕ್ಕಳನ್ನು ಕರೆದುಕೊಂಡು ಕುಳಿತ.
ಏನಾಯಿತು ಹೀಗೆ ಜಗಳವಾಡಿದ್ದೀರ ಎಂದು ಕೇಳಿದ. ಮಕ್ಕಳು ಮಾತನಾಡಲು ಸುರು ಮಾಡಿದರು ,

ಅವರು ಟಿ ವಿ ನೋಡುತ್ತಾ ಕುಳಿತಿದ್ದಾರೆ, ಕಾರ್ಯಕ್ರಮದಲ್ಲಿ ಹೊಡೆದಾಟದ ದೃಶ್ಯ ನೋಡಿ ಅದರಂತೆ ಆಟ ಶುರುಮಾಡಿದ್ದಾರೆ, ಮುಂದೆ ಆಟ ಹೊಡೆದಾಟಕ್ಕೆ ತಿರುಗಿದೆ.

ಇದನ್ನ ಕೇಳಿದ ನಮ್ಮಣ್ಣ (comment ರಾಜಣ್ಣ) ಬುದ್ದಿವಾದ ಹೇಳಿ.
ಈ ರೀತಿ ಮಕ್ಕಳ ಹೊಡೆದಾಟದ ದೃಶ್ಯಗಳನ್ನ ತೋರಿಸುವ ಆ ನಿರ್ದೇಶಕನದು ತಪ್ಪು . ನೀವು ಜೀವನದಲ್ಲಿ ಯಾವತ್ತೂ ನಿಮ್ಮ ಕಣ್ಣಿಗೆ ಅನ್ಯಾಯ, ಅಕ್ರಮ, ತಪ್ಪುಗಳು ಕಂಡುಬಂದರೆ ಅವುಗಳನ್ನು ಎದುರಿಸಿ ನಿಲ್ಲಬೇಕು. ಪ್ರಶ್ನಿಸಬೇಕು. ಎಂಬುದನ್ನು ಹೇಳಿ ನಿಮ್ಮನ್ನು ಬೆಳೆಸಿದ್ದೇನೆ, ಈಗ ಏಕೆ ಸುಮ್ನ ಹೀಗೆ ಜಗಳವಾಡುತ್ತಾ ಕುಳಿತುಕೊಳ್ಳುತ್ತೀರಿ. ಆ ನಿರ್ದೇಶಕನಿಗೆ ಪತ್ರ ಹಾಕಿ ಮಕ್ಕಳ ಮನೋ ವಿಕಾಸ ಚಿತ್ರಗಳನ್ನ ಮಾಡಲು ಹೇಳಿ, ಈ ರೀತಿಯ ಹಿಂಸಾತ್ಮಕ ದೃಶ್ಯಗಳನ್ನು ಪ್ರಸಾರ ಮಾಡದಂತೆ ಆ ಮಾಧ್ಯಮಕ್ಕೂ ಪತ್ರ ಬರೆಯಿರಿ ಎಂದ.

ಆದರೆ ಮಕ್ಕಳು ಚಾಲಾಕಿಗಳು ಅಯ್ಯೋ .........ಅಪ್ಪಾ ನಾವು ಪತ್ರ ನಾವು ಮಾತ್ರ ಪತ್ರ ಬರೆದು ಏನು ಪ್ರಯೋಜನ ? ಎಂದರು. ಇದನ್ನ ಕೇಳಿದ ನಮ್ಮ ರಾಜಣ್ಣ,

ಮಕ್ಕಳೇ ನಿಮ್ಮ ಒಂದು ಪತ್ರದಿಂದ ಏನಾಗುತ್ತದೆ, ಎಂಬ ಹೇಡಿಗಳ ವಾದ ಬೇಡ. ಕೈ ಕಟ್ಟಿ ಕೂಡುವ ಬದಲು ನಿಮ್ಮ ಪ್ರಯತ್ನ ಮಾತ್ರ ನೀವು ಮಾಡಿ ಈಗಿನ ಪ್ರಯತ್ನ ಮುಂದೊಂದು ದಿನ ಖಂಡಿತವಾಗಿಯೂ ಫಲ ಕೊಡುತ್ತದೆ ಎಂದು ಮಕ್ಕಳನ್ನ ಹುರುದುಂಬಿಸಿದ.

ಪ್ರತೀ ಕೆಲಸದಿಂದಲೂ ನನಗೇನು ಲಾಭ ಎಂಬುದನ್ನು ಯೋಚಿಸದ ನಿಷ್ಕಲ್ಮಶ ಬುದ್ಧಿವಂತ ಮಕ್ಕಳು ತಕ್ಷಣವೇ ಅರಿತುಕೊಂಡು ಹೌದಪ್ಪ ತಪ್ಪು ಮಾಡುತ್ತಿದ್ದಾರೆ, ನಾವು ಅವರಿಗೆ ತಿಳಿ ಹೇಳಲೇ ಬೇಕು, ನಾವು ಅವರಿಗೆ ಪತ್ರದ ಮೂಲಕ ಬರೆದು ವಿಷಯ ತಿಳಿಸುತ್ತೇವೆ ಎಂದು ಎದ್ದು ಹೊರಟರು.

ಅಣ್ಣ ಈ ರೀತಿ ಮಕ್ಕಳು ಚಿಕ್ಕಪುಟ್ಟ ವಿಷಯಗಳಿಗೆಲ್ಲಾ ನಮ್ಮಿಬ್ಬರು ಮಕ್ಕಳು ಪತ್ರ ಬರೆಯುವುದರಿಂದ ಆ ನಿರ್ದೇಶಕನಿಗೆ , ಮಾಧ್ಯಮಕ್ಕೆ ಏನು ಬುದ್ಧಿ ಬಂದು , ಒಳ್ಳೆಯ ಸಮಾಜ ನಿರ್ಮಾಣಕ್ಕಾಗಿ ಬೇಕಾಗಿರುವ ಚಿತ್ರಗಳನ್ನು ಚಿತ್ರಿಸಿ ತೋರಿಸುವರೇ.... ಎಂದು ಪ್ರಶ್ನಿಸಿದೆ .

ನಮ್ಮ ರಾಜಣ್ಣ ನನಗೆ ಬುದ್ಧಿವಾದ ಪ್ರಾರಂಭಿಸಿದ
...............ಅಯ್ಯೋ ಹುಚ್ಚಾ , ಚಿಕ್ಕ ಪುಟ್ಟ, ಇಬ್ಬರು ಮಕ್ಕಳು, ಇದೆಲ್ಲಾ ಲೆಕ್ಕಕ್ಕೆ ತಗೋ ಬಾರದು, ಈ ರೀತಿ 10 ಮಕ್ಕಳು ಬರೆದರೆ, 20 - 30 ಮಕ್ಕಳ ಪತ್ರ ಹೋದರೆ, ಯಾರೇ ಆಗಿರಲಿ ಮುಂದೊಂದು ದಿನ ಬದಲಾಗೇ ಆಗತಾರ .ಎಲ್ಲಾ ತಿಳಿದು ಬರೀ ಗಾಳೀಲಿ ಮಾತಾಡತಾ ಕೂತರೆ ಆ ಮನುಷ್ಯರು ತಾವು ಮಾಡಿದ್ದೇ ಸರಿ ಎಂದು, ಹಾಗೆ ಮಂದುವರೆಯುತ್ತಾರೆ ಈಗಿನಿಂದಲೇ ಉತ್ತಮ ವಿಷಯಗಳಲ್ಲಿ ಪಾಲ್ಗೊಳ್ಳುವಿಕೆಯನ್ನು ರೂಢಿಸಿಕೊಳ್ಳಬೇಕು ಎಂದ.

ಹೌದು 100% ಸತ್ಯ ಭಗವದ್ಗೀತೆಯ "ನಿನ್ನ ಕರ್ಮ ನೀ ಮಾಡು, ಫಲ ನನಗೆ ಬಿಡು " ಎಂಬ ಶ್ರೀ ಕೃಷ್ಣ ವಾಣಿ ನೆನಪಾಯ್ತು. ಹಾಗೆ ನನಗೆ ಜೋರು ನಗು ಬಂದಿತು ನಗಲಾರಂಭಿಸಿದೆ.
ಏಕೋ ನಗತೀಯ ನಾನು ಹೇಳಿರುವುದು ಸರಿ ತಾನೆ ? ಎಂದ. ಹೌದಣ್ಣ. ಸರಿ ಎಂದೆ.

ಅಲ್ಲದೆ ನಾನು ಇನ್ನೊಂದು ಪ್ರಶ್ನೆ ಕೇಳಿದೆ.

ಅಣ್ಣ ಪ್ರತೀ ದಿನ ಇದೇ ರೀತಿ ಹಲವಾರು ವಿಷಯಗಳ ಕುರಿತು ಮಾತನಾಡುವ, ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮದಲ್ಲಿ ನೋಡುವ ಸುದ್ದಿಯಗಳನ್ನ ವಿಶ್ಲೇಷಿಸಿ ಈ ಪಕ್ಷ ಆ ಮಾಧ್ಯಮಗಳು, ಈ ಸಂಸ್ಥೆ, ಆ ಸಂಘಟನೆಯವರು ಹೀಗೆ ಮಾಡಬಾರದಿತ್ತು ಹಾಗೆ ಮಾಡಬೇಡಕಿತ್ತು.

ಒಟ್ಟಿನಲ್ಲಿ ವಿಶ್ವ ಸಂಸ್ಥೆಯಿಂದ ನಮ್ಮ ಬೀದಿಯ ವರೆಗಿನ ಕಾರ್ಯಗಳ ಕುರಿತು. ಪರಿಸರ ನಾಶ, ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಪಿಡುಗುಗಳು, ಭ್ರಷ್ಟಾಚಾರ, ಕೆಟ್ಟ ಮಾಧ್ಯಮ ವ್ಯವಸ್ಥೆಗಳ ಕುರಿತು .ಆಪೀಸ್, ಮನೆ, ಒಳಗೆ ಹೊರಗೆ ದಿನಕ್ಕೆ ಗಂಟೆಗಳವರೆಗೆ ಮಾತನಾಡುವ ನೀನು ಮಾತ್ರ ಯಾವತ್ತೂ ಒಂದೇ ಒಂದು ಪತ್ರ ಬರೆದು ಸಂಬಂಧಪಟ್ಟ ಇಲಾಖೆ ಯವರಿಗಾಗಲಿ, ಅಧಿಕಾರಿ ಗಳಿಗಾಗಲಿ , ಮಾಧ್ಯಮ ದವರಿಗಾಗಲಿ , ರಾಜಕೀಯ ಮುಖಂಡರು ಗಳಿಗಾಗಲಿ ಪತ್ರ ಬರೆದು ನಿನ್ನ ಅತ್ಯುತ್ತಮ ವಿಚಾರಗಳನ್ನು ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಬೇಕಾಗಿರುವ ಸಂಗತಿಗಳನ್ನು ತಿಳಿಸಿದ್ದೀಯಾ ?

ನೀನು ಈ ರೀತಿ ಕಥೆ, ಪುಸ್ತಕ, ಪತ್ರಿಕೆಗಳನ್ನು ಓದಿ ಗಾಳಿಯಲ್ಲಿ ಮಾಡುವ ಕಮೆಂಟ್ಗಳು ಸಂಬಂಧ ಪಟ್ಟವರಿಗೆ ಮುಟ್ಟುತ್ತಿವೆಯಾ?

ಮುಟ್ಟದಿದ್ದರೆ ಅವರಿಗೆ ಹೇಗೆ ಅರ್ಥವಾದೀತು. ಅವರು ಹೇಗೆ ತಿದ್ದಿಕೊಂಡಾರು ಎಂಬುದನ್ನು ಯೋಚಿಸಿದ್ದೀಯಾ?
ನಿನ್ನಿಂದ ಇದು ಏಕೆ ಸಾಧ್ಯವಿಲ್ಲ ?

ಕೇವಲ ಕಮೆಂಟ್ ಮಾಡಲು ಚರ್ಚಿಸಲು ಅಥವಾ ಅವರು ಮಾಡಲಿ, ಇವರು ಮಾಡಲಿ, ನನ್ನೊಬ್ಬನ ಪತ್ರದಿಂದ ಏನು ಸಾಧ್ಯ ಎಂದು ವಿಚಾರಿಸಿ ಸುಮ್ಮನೆ ಕುಳಿತಿರುವುದು ಸರಿಯೇ?

ಎಂದು ಪ್ರಶ್ನಿಸಿದೆ ಇದಕ್ಕೆ ನಮ್ಮ ರಾಜಣ್ಣ ಅಂದರೆ ಕಮೆಂಟ್ ರಾಜಣ್ಣನ ಹತ್ತಿರ ಉತ್ತರ ಇರಲಿಲ್ಲ .

ಮಕ್ಕಳು ಬೇಗ ಅರ್ಥಮಾಡಿಕೊಂಡು ತಮ್ಮ ಕೈಲಾದ ಪ್ರಯತ್ನವನ್ನು ಮಾಡಲು ನಡೆದರು, ಆದರೆ ದೊಡ್ಡವರಾದ ನಾವು ಪತ್ರಿಕೆ ಮಾಧ್ಯಮವನ್ನು ಕೇವಲ ನಮ್ಮ ಸಮಯ ಹರಣ ಮಾಡಲು ಬೇಕಾಗುವ ವಿಷಯಗಳನ್ನ ತಿಳಿದುಕೊಳ್ಳಲು ಇರುವ ಸಾದನದಂತೆ ಬಳಸುತ್ತಿದ್ದೇವಾ? ನಮ್ಮಲ್ಲಿಯ ಒಳ್ಳೆಯ ವಿಚಾರಧಾರೆಗಳನ್ನ ಸಂಬಂಧ ಪಟ್ಟವರಿಗೆ ಕೈಲಾದ ಎರಡು ಅಕ್ಷರಗಳನ್ನು ಬರೆದು ತಿಳಿಸಿದರೆ, ಈ ನಿಟ್ಟಿನಲ್ಲಿ ಮುನ್ನುಗ್ಗಿದರೆ ಸಂಬಂಧಪಟ್ಟ ವರಿಗೆ ಸ್ವಲ್ಪವಾದರೂ ಪರಿವರ್ತನೆ ಬರಬಹುದೇನೋ ! ನಿರೀಕ್ಷೆ ಮಾಡುವುದರಲ್ಲಿ ತಪ್ಪೇನು ?

ಸ್ವಲ್ಪ ಹೊತ್ತು ವಿಚಾರ ಮಾಡುತ್ತಾ ಕುಳಿತ ನಮ್ಮ ಕಮೆಂಟ್ ರಾಜಣ್ಣ ಕೂಡಲೆ ಎದ್ದು ತಮ್ಮಾ.... ಇನ್ನು ತಡ ಮಾಡುವುದಿಲ್ಲ ತಕ್ಷಣ ನಾನು ಈಗಿನ ರಾಜಕೀಯ ಪಕ್ಷದ ಮುಖಂಡರುಗಳಿಗೆ ಮತ್ತು ಮಾಧ್ಯಮದವರಿಗೆ ಕೆಲವು ಸಂದೇಶಗಳನ್ನು ಬರೆದು ಕಳಿಸುತ್ತೇನೆ . ರಾಜಕೀಯ ಪಕ್ಷಗಳು ಮುಂದಿನ ತಮ್ಮ ಪ್ರಣಾಳಿಕೆಯಲ್ಲಿ ಈ ಜಾತಿ, ಸಬ್ಸಿಡಿ , ಎಬಿಸಿಡಿ ಏನೆಲ್ಲಾ ರಾಜಕೀಯ ಇರುತ್ತೊ ಬಿಡುತ್ತೊ ಗೊತ್ತಿಲ್ಲ . ಆದರೆ ನಮ್ಮ ಪರಿಸರ ರಕ್ಷಣೆಗಾಗಿ ಏನೇನು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿ ಬರೆಯುತ್ತೇನೆ .

ಅದೇ ರೀತಿ ನಮ್ಮ ಈ ಮಾಧ್ಯಮಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಗಂಡ ಹೆಂಡತಿಯ ಜಗಳವನ್ನೇ ತೋರಿಸುತ್ತಾ . ಕುಡಿದು ಬಡಿದಾಡುವವರ ಮುಖವನ್ನೇ ಬ್ರೆಕಿಂಗ್ ನ್ಯೂಸ್ ...ಬ್ರೇಕಿಂಗ್ ನ್ಯೂಸ್... ಎಂದು ತೋರಿಸುತ್ತಾ ಕುಳಿತುಕೊಳ್ಳುವುದನ್ನು ಬಿಟ್ಟು , ಉತ್ತಮ ಸಮಾಜಕ್ಕಾಗಿ ಯಾವ ವಿಚಾರ ಧಾರೆಗಳು ನಮಗೆ ಬೇಕು ಅದನ್ನ ತಿಳಿಸಲಿಕ್ಕೆ ಒತ್ತು ಕೊಡಲು ಹೇಳುತ್ತೇನೆ. ಎಂದು ಎದ್ದು ಹೊರಟ.

ಮತ್ತ್...........ಮುಂದ ...... ನಿಮ್ಮದು

ನಮಸ್ಥೆ....

(ಪ್ರತಿ ದಿನ ಓದದವರು, ನಾಲ್ಕಕ್ಷರ ಬರೆಯದವರು ಶಿಕ್ಷಿತರಾಗಿದ್ದರೂ ಅಶಿಕ್ಷಿತರಿಗೆ ಸಮಾನ).

Rating
No votes yet