ರಾಮನಾಮ ಸತ್ಯ ಹೈ

ರಾಮನಾಮ ಸತ್ಯ ಹೈ

ಮೊನ್ನೆ ಸಂಜಿಕಡೆ ವಾಕಿಂಗ್ ಮುಗಿಸಿ ಕಾಯಿಪಲ್ಲೆ ತರಲಿಕ್ಕೆ ಅಂತ ಹೊಂಟಾಗ ಒಂದ ದೂಡೋ ಗಾಡಿ ಮ್ಯಾಲೆ ಒಂದ ಮುದುಕಿ ಶವ ಅಂತ್ಯ ಸಂಸ್ಕಾರಕ್ಕ ತೊಗೊಂಡು ನಾಕಾರ ಹರೇದ ಹುಡುಗೂರು ಹೊಂಟಿದ್ರು. ಆ ಹುಡುಗರ ಸಂಘದ ಹೆಸರು #ದಿಗಂತದ_ಸಂಗಾತಿಗಳು, #Companions_till_Horizon.
ಅವರ ಕೆಲಸ ಏನಪಾ ಅಂದ್ರ, ಅನಾಥ ಶವಗಳ ಅಂತ್ಯಕ್ರಿಯೆ ನೆರವೇರಿಸುವುದು. ಅವರೆಲ್ಲ ಸಣ್ಣ ಪುಟ್ಟ ನೌಕರಿ ಮಾಡೋ ಗೆಳ್ಯಾರು. ತಮ್ಮ ಕೈಯಾಗ ರೊಕ್ಕ ಇದ್ರ ಹಾಕಿ ಮಾಡಿಬಿಡತಾರ. ಇಲ್ಲಾಂದರ ಪಟ್ಟಿ ಎತ್ತಿ ಕೆಲಸ ಮುಗಸತಾರ. ಯಾರ ಸತ್ತಿರತಾರ ಅವರ ಜಾತಿ-ಧರ್ಮದ ಪ್ರಕಾರ ೪ನೇ ದಿನ, ೧೦ನೇ ದಿನ, ೧೩ನೇ ದಿನ ಯಾವತ್ತರೇ ಗುಡಿ ಎದುರಗಿನ ಭಿಕ್ಷಾದವರಿಗೆ ಅನ್ನಸಂತರ್ಪಣೆ ಇಡಸತಾರ. ಭಾಳ ಪುಣ್ಯದ ಕೆಲಸ ಮಾಡತಾರ್ರಿ ಹುಡುಗುರು.

ಇರಲಿ, ಈಗ ಸತ್ತಕಿ ಒಬ್ಬ ಸೂಲಗಿತ್ತಿ(midwife) ಅಂದರ ಹೆರಿಗಿ ಮಾಡಸಕಿ. ನಮ್ಮ ವಾಕಿಂಗ್ ಮಿತ್ರರ ಜೊತಿ ಪಾರ್ಕ ಬೆಂಚಮ್ಯಾಲೆ ಅಜ್ಜಿ ಸುದ್ದಿ ಮಾತಾಡಿ ಒಂದ ವಾರ ಅಷ್ಟs ಆಗಿತ್ತು.

ಸಿಸೇರಿಯನ್ ಡೆಲಿವರಿ ಅಗದಿ ಕಾಮನ್ ಆಗಿರೋ ಈ ದಿನಮಾನದಾಗ ಸೂಲಗಿತ್ತಿ ಅಂದರ ಅಕಿ ಯಾರ ವಾರಗಿತ್ತಿ ಅಂತ ಕೇಳೋ ಪರಿಸ್ಥಿತಿ ಬಂದದ. ಈ ಅಜ್ಜಿ ಹೆಸರು #ತಾಯವ್ವ. ಪಾಪ ಯಾವತ್ತೂ ಒಂದು ಕೂಸಿಗೆ ಜನ್ಮ ಕೊಟ್ಟು ತಾಯಾಗಲಿಲ್ಲ ಅಕಿ. ಯಾಕಂದ್ರ ಅಕಿದು ಬಾಲ್ಯ ವಿವಾಹ ಆಗಿತ್ತು. ಮೈನೆರದು ಗಂಡನ ಮನಿಗೆ ಬರೋಹೊತ್ತಿಗೇ ಗಂಡ ಸತ್ತುಹೋದ. ಇನ್ನ ಅಕಿ ಆರಿಸಿಕೊಂಡಿದ್ದ ವೃತ್ತಿಯಿಂದ ಎಲ್ಲಾರಿಗೂ "ಅವ್ವ" ಆಗಿದ್ಲು. ಹೆರಿಗಿ ಅಂದ್ರ ಎಲ್ಲಾ ಹೆಣಮಕ್ಕಳಿಗೂ ಎರಡನೇ ಜನ್ಮನs. ಚೊಚ್ಚಲರ ಇರಲಿ, ಮರಚಲರ ಇರಲಿ. ಹೆರಿಗಿ ಪುನರ್ಜನ್ಮನs. ಆ ಎರಡನೇ ಜನ್ಮಕ್ಕ ಇಕಿನ ಅವ್ವ. ಇದ್ದವರ ಮನಿಯರ ಇರಲೀ, ಇರಲಾರದವರ ಮನಿನರ ಇರಲಿ, ಹಿಂದೂ ಇರಲಿ ಮುಸಲ್ಮಾನರರ ಇರಲಿ ಹೆರಿಗಿ ಟೈಮ್ ಬಂತಂದರ, ತಾಯವ್ವಗ ಬುಲಾವು ಹೋತಂತ. ಅಷ್ಟs ಸೂಕ್ಷ್ಮತನದಿಂದ ಕೆಲಸ ಮುಗಿಸಬರಾಕಿ. ಗರ್ಭಿಣಿ ಜೊತಿ ಮಾತ ಹಚ್ಚಿ ನೋವು ಮರಿಯೋ ಹಂಗ ಮಾಡಿ ಕೂಸಿನ್ನ ಕೈಯಾಗ ಇಟ್ಟು, ಕೊಟ್ಟಷ್ಟು ರೊಕ್ಕ ಇಸಗೊಂಡು ಬಂದಬಿಡಾಕಿ. ಎಂದೂ ಇಷ್ಟು ಅಷ್ಟು ಅನ್ನೋ ಕಂಡಿಷನ್ ಮಾಡತಿದ್ದಿಲ್ಲ. ಭೆಳ್ಳನಿ ಕೂಸು ಹುಟ್ಟಿದ್ರ "ಅಯ್ಯಯ ಚಂದಪ್ಪನ ತುಂಡಾಗೇದ ಕಂದಮ್ಮ, ಬೆಣ್ಣಿಮುದ್ದಿ" ಅಂದೋ, ಸಾದಗಪ್ಪ ಕೂಸಿದ್ರ "ಕಟ್ಟಮಸ್ತ ಕಲ್ಲುಗುಂಡಿನಂಗ ಇದ್ದಾನ" ಅಂದು ಕೈಯಾಗ ಆಡಿಸಿ ತಾಯಂದರ ಮಡಿಲಿನ್ಯಾಗಮಲಗಿಸಿ ಎರಡ ಜೋಗಳ ಹಾಡಿ ಬರತಿದ್ದಳು.

ಈಗಿತ್ಲಾಗ ಯಾರೋ ಹೇಳಿಕೊಟ್ಟಿದ್ದ ಉದ್ಗಾರ ಮಾಡತಿದ್ಲು "ಬೇಬಿ ಇಸ ಸೋ ಕ್ಯೂಟ್" ಅಂತ. ಹಿಂಗ ಅಕಿ ಕೈಯಾಗಿಂದ ಹೆರಿಗಿ ಆದ ಎಲ್ಲ ಕೂಸುಗಳಿಗೂ ತುಂಬು ಮನಸ್ಸಿನಿಂದ ಶತಾಯುಷಿ ಆಗು ಅಂತ ಹರಸಿ ಬರಾಕಿ. ಅಕಿ ಕೈಯಿಂದ ಏನಿಲ್ಲಂದ್ರು ೧೫೦೦ ರಿಂದ ೨೦೦೦ ಹೆರಿಗಿಗಳು ಆಗಿತಬಹುದು. ಜೀವಂತ ಇದ್ದರ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಗ ಹೆಸರ ಬರಸಬಹುದಿತ್ತು.

ಜೀವಂತ ಇದ್ದಷ್ಟ ದಿನಾ ಏನ ತಿಂದಕೊಂಡ ಎಷ್ಟ ಸುಖದಿಂದ ಬಾಳೇ ಮಾಡಿದ್ಲೋ ಏನೋ, ಅತ್ಯ ಸಂಸ್ಕಾರ ಅಂತು ಪದ್ಧತಿಶೀರ ಮಾಡಿಸಿಕೊಂಡಳು. ಯಾರಿಗ್ಗೊತ್ತು ಆ ಹುಡುಗರ ಟೋಳಿ ವಳಗ ಈಕಿ ಹೆರಿಗಿ ಮಾಡಿಸಿ ಹುಟ್ಟಿದವರೂ ಇರಬಹುದು.

*ತಾಯವ್ವನ_ಆತ್ಮಕ್ಕ_ಶಾಂತಿಸಿಗಲಿ*

©ಅಜಿತ್ ಕಾಶೀಕರ್
೧೭/೦೧/೨೦೧೯