ಕೂಪ 4

ಕೂಪ 4

ಚಿತ್ರ

ಕೂಪ
ಅಧ್ಯಾಯ ೨

ಭಟ್ ನ ಐದು ಪುಸ್ತಕಗಳು ಒಮ್ಮೆಲೇ ಬಿಡುಗಡೆಯಾಗುತ್ತಿದ್ದವು. ಹಿನ್ನೆಲೆಯಲ್ಲಿ ಶ್ರೀಮುಖಿಯ ನೆನಪಲ್ಲಿ ಎಂಬ ದೊಡ್ಡ ಫ್ಲೆಕ್ಸನ್ನು ಇಡಲಾಗಿತ್ತು. ಶ್ರೀಮುಖಿಯ ಫೋಟೋ ಮತ್ತು ಅದರಡಿ ದೀಪವೊಂದನ್ನು ಹಚ್ಚಿಡಲಾಗಿತ್ತು. ಸಂಭ್ರಮದ ವಾತಾವರಣದಲ್ಲಿ ಸಜ್ಜನನ್ನ ಕರೆಸಿ ಮಾತನಾಡುತ್ತಿದ್ದ. ಪುಸ್ತಕ ಪರಿಚಯ ಮಾಡುತ್ತಾ ಸಜ್ಜನ, ಕೇಂದ್ರ ಸರಕಾರದ ವಿರುದ್ಧ ಮಾತನಾಡಲು ಶುರುವಿಟ್ಟುಕೊಂಡ. ಭಟ್ ಗೆ ಸ್ವಲ್ಪ ಕಸಿವಿಸಿಯಾಯ್ತಾದರೂ ಅದನ್ನು ತೋರಗೊಡದೆ ನಗುತ್ತಾ ತನ್ನ ವ್ಯಾಪಾರವನ್ನು ಮುಂದುವರೆಸಿದ. ಭಟ್ ನ ಅನೇಕ ಸ್ನೇಹಿತರು ಶ್ರೀಮುಖಿಯ ಬಗ್ಗೆ ಕೇಳುತ್ತಿದ್ದರು. ಕೆಲವರಿಗೆ ಸಜ್ಜನನ್ನು ಕರೆಸಿದ್ದು ಅಷ್ಟಾಗಿ ಇಷ್ಟವಾಗಲಿಲ್ಲ
ಏನಾದರೂ ಗೊತ್ತಾಯ್ತಾ ವಿಷ್ಯ? ಇವನನ್ಯಾಕೆ ಕರೆಸಿದ್ರಿ? ನೋಡಿ ಪುಸ್ತಕದ ಬಗ್ಗೆ ಮಾತಾಡೋದು ಬಿಟ್ಟು ರಾಜಕೀಯ ಮಾತಾಡ್ತಿದಾನೆ. ಇಂಥವನು ನಿಮ್ಮ ಗುಂಪಿನಲ್ಲಿದ್ರೆ ನಿಮಗೆ ಕೆಟ್ಟ ಹೆಸರಲ್ವಾ
ಅವನು ಇರೋದೇ ಹಾಗೆ. ಒಳ್ಳೆ ಕಲಾವಿದ ಅವನಲ್ಲಿರೋ ಕಲೆಯನ್ನ ನೋಡ್ಬೇಕು ಹೊರತು ಅವನ ನಿಲುವುಗಳಿಗಲ್ಲ. ಕಲೆ ಮತ್ತು ಕಲಾವಿದ ಎರಡೂ ಬೇರೆ ಬೇರೆ ಅನ್ನೋದನ್ನ ಅರ್ಥ ಮಾಡಿಕೊಳ್ಳದ ಹೊರತು ಈ ಪ್ರಪಂಚ ಉದ್ಧಾರವಾಗುಲ್ಲ. ಅವನ ನಿಲುವುಗಳನ್ನ ನಾನೂ ವಿರೋಧಿಸ್ತೀನಿ.
ಹಾಗಂತ ನೀವು ಎಲ್ಲೂ ವಿರೋಧಿಸಿದ್ದು ಕಂಡಿಲ್ಲವಲ್ಲ. ಪ್ರಸನ್ನ ನರಸೀಪುರ, ಹೊಸಬ ಹುಡುಗ, ಪತ್ರಿಕೆಗಳಲ್ಲಿ ಇತ್ತೀಚೆಗಷ್ಟೇ ನಿರ್ಭೀತಿಯಿಂದ ಬರೆಯುತ್ತಿದ್ದ. ಹಾಗಾಗಿ ಅವನ ತಲೆ ಕಂಡರೆ ಯಾರಿಗೂ ಆಗುತ್ತಿರಲಿಲ್ಲ
ಹಾಗಂದವನನ್ನ ತಿವಿಯುವಂತೆ ನೋಡಿದ ಭಟ್. ನೀವಿನ್ನೂ ಸಣ್ಣವರು ನಿಮಗಿದೆಲ್ಲಾ ಅರ್ಥವಾಗೊಲ್ಲ. ವಿರೋಧ ವ್ಯಕ್ತ ಪಡಿಸಬೇಕು ಅಂದರೆ ಹ್ಯಾಗೆ ವ್ಯಕ್ತ ಪಡಿಸ್ತೀರ? ನಿಮ್ಮ ಹಾಗೆ ಫೇಸ್ ಬುಕ್ಕಿನಲ್ಲೋ ಅಥವಾ ಟ್ವಿಟ್ಟರಿನಲ್ಲೋ ಹಾಕೋದಾ? ಅದೊಂದು ಹರಟೆ ಕಟ್ಟೆ ಅಷ್ಟೆ. ಅದ್ರಲ್ಲಿನ ವಿರೋಧ- ಪರಗಳನ್ನ ಹೇಗೆ ನಿಲುವುಗಳು ಅಂದುಕೊಳ್ತೀರಾ?. ಫೇಮಸ್ ಫೋಟೊ ಗ್ರಾಫರ್ ಇವರನ್ನೇ ಶೂಟ್ ಮಾಡುತ್ತಿದ್ದ. ಅದನ್ನು ನೋಡಿದ ಕೂಡಲೇ... ಭಟ್, ಶೂನ್ಯದೆಡೆಗೆ ಮುಖ ಮಾಡಿ ದೈವಿಕ/ಬೌದ್ಧಿಕ ಮುಖಭಾವವನ್ನು ಮಾಡುತ್ತಾ, ಅವರವರ ನಿಲುವುಗಳು ಅವರ ವ್ಯಕ್ತಿಗತ ಅವರ ಭಾವಕ್ಕೆ ಅನುಭಾವಕ್ಕೆ ಸಿಕ್ಕಂಥವು. ನಾವು ಅದರ ಗೋಜಿಗೆ ಹೋಗಬಾರದು. ನಮ್ಮದೇನಿದ್ರೂ ಅವರೊಳಗಿನ ಕಲೆಯನ್ನ ಪುರಸ್ಕರಿಸೋದು ಅಷ್ಟೆ. ಸಿಗರೇಟ್ ಸೇದ್ತಾನೆ ಅಂತ ಒಬ್ಬ ಅದ್ಭುತ ಚಿತ್ರಕಾರನ ಚಿತ್ರಗಳನ್ನು ತಗೊಳ್ಲದೆ ಬಿಟ್ಟುಬಿಡ್ತೀವಾ? ಇಲ್ಲವಲ್ಲ ಇದು ಹಾಗೆ. ಕಲೆ ಮತ್ತು ಕಲಾವಿದ ಇಬ್ಬರೂ ಭಿನ್ನರು. ಆ ದೃಷ್ಟಿಯಲ್ಲಿ ನೋಡಿ. ಬೌದ್ಧಿಕ ನೆಲೆಯಲ್ಲಿ ನಿಂತು ನೋಡಿದಾಗ ಕಲೆಯ ಉತ್ಕೃಷ್ಠತೆಯ ಮುಂದೆ ಕಲಾವಿದನ ವ್ಯಕ್ತಿಗತ ಬದುಕು ಗೌಣವಾಗಿಬಿಡುತ್ತೆ. 
ನೀವು ಫೇಸ್ಬುಕ್ಕಲ್ಲೇ ತಾನೆ ಸಾರ್ ನಿಮ್ಮ ನಿಲುವುಗಳನ್ನ ಹಾಕೋದು. ನಿಮಗೆ ಬೇಕಾದಾಗ ಅದನ್ನ ಬಳಸಿಕೊಳ್ತೀರಿ ಆಮೇಲೆ ಅದನ್ನ ಹರಟೆ ಕಟ್ಟೆ ಅಂತೀರಿ. ಅದಿರ್ಲಿ ಸರ್, ಮೊನ್ನೆ ನಾಲ್ಕು ಪುಸ್ತಕಗಳ ಫೋಟೊ ಹಾಕಿ ’ಇವೆಲ್ಲವನ್ನ ನುಂಗುವ ಶಕ್ತಿ ಕೊಡು ದೇವರೇ ’ ಅಂತ ಹಾಕಿದ್ರಲ್ಲ ಅದರರ್ಥ ಏನ್ ಸರ್. ನಾನು ನುಂಗಬಲ್ಲ ಶಕ್ತಿಯಿರುವವನು ಅಂತಲೇ, ನಾನು ಇಷ್ಟೊಂದು ಪುಸ್ತಕಗಳನ್ನ ಓದ್ತೀನಿ ಅಂತಲೇ, ನಾನೊಬ್ಬ ಮಹಾನ್ ಓದುಗ, ವರೋಷಿಯಸ್ ರೀಡರ್ ಎಲ್ಲವನ್ನೂ ಅರಗಿಸಿಕೊಳ್ಳುವವನು ಅನ್ನುವ ಅಹಂಕಾರವಾ?
ಭಟ್ ಗೆ ಸಿಟ್ಟು ಏರುತ್ತಿತ್ತು. ಆದರೆ ತಾನೊಬ್ಬ ಶಾಂತ ಎಂದು ತೋರಿಸಿಕೊಳ್ಳುವ ಅವಶ್ಯಕತೆಯಿತ್ತು. ನಿಮಗೆ ಹೇಗೆ ಬೇಕಾದರೂ ಅಂದುಕೊಳ್ಳಬಹುದು. ಪುಸ್ತಕಗಳ ಫೋಟೊ ಹಾಕಿದ್ರೆ ನಾಲ್ಕು ಜನಕ್ಕೆ ಅದರ ಬಗ್ಗೆ ಗೊತ್ತಾಗುತ್ತೆ ಅವರೂ ಓದಬಹುದು ಅನ್ನೋ ಉದ್ದೇಶ ಅಷ್ಟೆ.
ಸರ್ ಹಾಗಿದ್ದಾಗ ಪುಸ್ತಕ ಪರಿಚಯ ಅಂತ ನಿಮ್ಮ ಪತ್ರಿಕೆಯಲ್ಲೇ ಮಾಡಬಹುದಲ್ಲಾ? ಅದನ್ನ ನೀವೇ ಹೇಳಿದ ಹರಟೆಕಟ್ಟೆಗೆ ಹಾಕುವುದರ ಹಿಂದಿನ ಉದ್ದೇಶ ನಾನು ಇಷ್ಟು ಓದ್ತಿದೀನಿ ಅನ್ನೋದು ತಾನೆ. ನಿಜವಾಗಿ ಪುಸ್ತಕವನ್ನ ಪ್ರಚಾರ /ಪರಿಚಯ ಮಾಡಬೇಕು ಅಂತಿದ್ರೆ, ಇಂಥ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಇಂಥ ಅಂಗಡಿಯಲ್ಲಿ ಸಿಗುತ್ತದೆ ಆಸಕ್ತರು ಕೊಳ್ಳಬಹುದು ಎಂದು ಹಾಕಬಹುದಾಗಿತ್ತು. ಪುಸ್ತಕದ ಪರಿಚಯವನ್ನು ವಸ್ತುನಿಷ್ಟವಾಗಿ/ರೂಪನಿಷ್ಟವಾಗಿ/ಧ್ವನಿನಿಷ್ಟವಾಗಿ ಮಾಡಬಹುದಿತ್ತು. ನುಂಗುವ ಶಕ್ತಿ ಕೊಡು ಎನ್ನುವುದರಲ್ಲಿ ಇರುವ ಧ್ವನಿ ಯಾವುದು ಸರ್. ಇನ್ನೊಂದು ಕಡೆ ಪುಸ್ತಕ ಪರಿಚಯ ಅಂತ ಮಾಡ್ತೀರಿ ಎಲ್ಲ ಪುಸ್ತಕಗಳನ್ನು ಅದ್ಭುತ ಅನ್ನೋ ಹಾಗೆ ಬರಿತೀರಿ . ಪಾತ್ರಗಳನ್ನ ವಿವರಿಸಿ ಹೇಳಿ ಅದನ್ನ ಪುಸ್ತಕ ವಿಮರ್ಶೆ ಅಂತೀರಿ. ಇದು ಸಾಹಿತ್ಯಕ್ಕೆ ಮಾಡುವ ದ್ರೋಹ ಅನ್ನಿಸಲ್ವಾ ಸರ್?  ಇದೇ ರೀತಿ ಇನ್ನೊಬ್ಬರು ಮಾಡಿದ್ದರೆ ಅವರನ್ನ ವ್ಯಂಗ್ಯವಾಗಿ ತಿವಿದು ಪೋಸ್ಟ್ ಹಾಕಿದ್ದಿರಿ. ನಿಮ್ಮ ಸಜ್ಜನ್  ಪುಸ್ತಕ ಬಿಡುಗಡೆಯಲ್ಲಿ ರಾಜಕೀಯ ಮಾತಾಡ್ತಿದಾರೆ ಅದನ್ನೂ ನೀವು ವಿರೋಧಿಸಲ್ಲ. ಇದು ಡಬಲ್ ಸ್ಟಾಂಡರ್ಡ್ ಅನ್ನಿಸುತ್ತೆ ಸರ್
ಫೋಟೋಗ್ರಾಫರ್ ಬೇರೆ ಕಡೆ ಹೋದ.  
ನಾನು ವಿರೋಧಿಸ್ತೀನಿ ಅನ್ನೋದನ್ನ ನಿಮಗೆಲ್ಲಾ ಹೇಳ್ಕೊಂಡು ತಿರ್ಗಕ್ಕೆ ಆಗಲ್ಲವಲ್ಲ ನಿಮ್ಮ ಕೊಳಕು ರಾಜಕೀಯ ಮನಸ್ಥಿತಿಗಳನ್ನ ಇಲ್ಲಿ ತರಲೇ ಬಾರದು. ನಿಮ್ಮ ಓದಿನ ಹರವು ಎಷ್ಟು? ಹಾ... ಎಂದು ಗದರಿಕೊಳ್ಳತೊಡಗಿದ. ಹುಡುಗ ತೆಪ್ಪಗಾದ. ಅಲ್ಲಿದ್ದ ಮತ್ತೊಬ್ಬರು ಅದ್ಯಾಕೆ ಅಷ್ಟು ಸಿಟ್ಟಾಗ್ತೀರಿ?, ಅಂದದ್ದಕ್ಕೆ ಇಂಥವರನ್ನೆಲ್ಲಾ ಬೆಳೆಯಕ್ಕೆ ಬಿಡಬಾರದು . ನನ್ನ ಕಾಲುಗುರಿಗೆ ಸಮ ಇಲ್ಲದವರು . ’ಮಯ್ ಫೂಟ್’ ಎನ್ನುತ್ತಾ ಭಟ್ ಕಿಡಿಕಾರಕೊಳ್ಲತೊಡಗಿದ. ತಕ್ಷಣ ಮುಖದಲ್ಲಿ ಪ್ರಸನ್ನತೆ ತಂದುಕೊಂಡು, ಅದು ಹಾಗಲ್ಲ ಈಗಿನ ಹುಡುಗರಿಗೆ ಓದಿನ ಹರವು ಇರೊಲ್ಲ. ಏನೇನೋ ಓದ್ಕೊಂಡು ಬಿಡ್ತಾವೆ. ಸರಿಯಾದದ್ದನ್ನ ಓದಿರೊಲ್ಲ ನೋಡಿ. ಬಾಯಿಗೆ ಬಂದಂತೆ ಮಾತಾಡ್ತಾವೆ. ಅವರನ್ನ ಸರಿದಾರಿಗೆ ತರಬೇಕಾದರೆ ಈ ಥರ ಸ್ವಲ್ಪ ಗದರಿಕೊಳ್ಲಬೇಕು. ಇಲ್ಲಾಂದ್ರೆ ಹೇಗೆ ಹೇಳಿ. ನಾವು ’ದಾದಾ’ ನ ಸ್ಥಾನದಲ್ಲಿ ನಿಲ್ಲದೆ ಇದ್ರೆ ಅವರು ಸಮಾಜ ಕಂಟಕರಾಗಿಬಿಡೊಲ್ವ? ನಮಗೊಂದು ಸಾಮಾಜಿಕ ಜವಾಬ್ದಾರಿ ಇದೆ , ಇವರನ್ನೆಲ್ಲಾ ಸರಿ ಮಾಡ್ಬೇಕು ಅನ್ನೋದು ಅದರ ಒಂದು ಭಾಗ....ಹೋ! ನೋಡಿ ವೆಂಕಟರಮಣ ಶಾಸ್ತ್ರಿಗಳು ಬಂದರು. ಹಿರಿಯ ಜೀವ. ಅವರ ಕಾಲಿಗೆ ಬಿದ್ದು ಆಶೀರ್ವಾದ ತಗೊಳೋಣ.ಸ್ವಲ್ಪ ದನಿ ಎತ್ತರಿಸಿ ಹೇಳಿದ. ಫೋಟೋಗ್ರಾಫರ್ ಅರ್ಥ ಮಾಡಿಕೊಂಡವನಂತೆ ಕ್ಯಾಮೆರಾ ಇವರ ಕಡೆ ತಿರುಗಿಸಿದ. ಮೊದಲು ಕಾಲಿಗೆ ಬಿದ್ದ ಫೋಟೊ.. ಹಲವಾರು ಫೋಸ್ ಗಳಲ್ಲಿ. ಕಾಲುಗಳನ್ನ ಗಟ್ಟಿಯಾಗಿ ಒತ್ತಿ ಹಿಡಿದು ಭಕ್ತಿಯಿಂದ ಕಣ್ಮುಚ್ಚಿರುವಂತೆ ಫೋಸ್. ನಂತರ ಅವರ ಆತ್ಮೀಯನೆಂಬಂತೆ ಅವರ ಭುಜದ ಮೇಲೆ ಕೈ ಹಾಕಿ ಫೋಟೊ. ತಾನು ಅವರಷ್ಟೇ ದೊಡ್ಡ ಸಾಹಿತಿ ಎನ್ನುವನ್ನು ಜನರ ಮನಸ್ಸಿನಲ್ಲಿ ರಿಜಿಸ್ಟರ್ ಮಾಡುವ ಈ ತಂತ್ರ ಅವನ ಗುಂಪಿನವರಿಗೆಲ್ಲಾ  ಗೊತ್ತಿತ್ತು. 
ಸಂಕೇತ ತಾತನೊಟ್ಟಿಗೆ ಸಮಾರಂಭಕ್ಕೆ ಬಂದ. ಸ್ವತಃ ಭಟ್ ಅವರನ್ನು ಕರೆತಂದು ಮುಂದಿನ ಕುರ್ಚಿಯಲ್ಲಿ ಕೂರಿಸಿದ. ಸಂಕೇತನ ತಾತ ಶ್ರೀನಿವಾಸ ಮೂರ್ತಿಗಳು ಮಾತ್ರ ಆ ಸಭೆಗೆ ’ಹೊಂದದಿರುವ ಜನ’ ಅನ್ನಿಸುತ್ತಿತ್ತು, ವೃತ್ತಿಯಲ್ಲಿ ಸ್ಕೂಲ್ ಮೇಷ್ಟ್ರರಾಗಿ ಹೆಡ್ ಮಾಸ್ಟರಾಗಿ ಕೆಲಸ ಮಾಡಿ ಸಧ್ಯ ತೋಟ ನೋಡಿಕೊಳ್ಳುತ್ತಿರುವ ಅವರು ಈ ಆಡಂಬರದ, ನಾಟಕದ ಸಭೆಗೆ ಹೊಂದದಿರುವ ಮನುಷ್ಯ’. ಸಂಕೇತನ ಪಕ್ಕದಲ್ಲಿ ಭಟ್ ಮತ್ತು ಪಾಟೀಲ್ ಕುಳಿತು ಅವನ ತಲೆಯನ್ನು ನೇವರಿಸತೊಡಗಿದರು. ನೋಡು ನಿಮ್ಮಮ್ಮ ಫೋಟೊ. ಎಷ್ಟು ಸುಂದರವಾಗಿದಾಳೆ. ಎದ್ದು ಬರುವ ಹಾಗಿದಾಳೆ. ನಿನಗೆ ದುಖಃ ಆಗುತ್ತಲ್ವಾ? ಅಳೋದಾದರೆ ಅತ್ತುಬಿಡು. ನಾನು ನಿಮ್ಮಮ್ಮ ಹಾಗೆ ಅಂದ್ಕೋ.. ಅಂದದ್ದು ಪಾಟೀಲ್ ಆಂಟಿ.
ಸಂಕೇತ ಹಿಂದಿರುಗಿ ನೋಡಿದ ತಾತ ಹಿಂದಿನ ಸೀಟಿನಲ್ಲಿ ಕೂತಿದ್ದರು. ತಾತ ನಾನಲ್ಲಿಗೆ ಬರ್ಲಾ? ಅಂದ. ಅವರು ಸುಮ್ಮನೆ ಮುಖ ನೋಡಿ ’ಬಾ...’ ಅಂದರು. ಆದರೆ ಭಟ್ ಮತ್ತು ಪಾಟೀಲ್ ಸಂಕೇತನನ್ನ ಅಕ್ಷರಶಃ ಕಟ್ಟಿ ಹಾಕಿಕೊಂಡಿದ್ದರು. ವೇದಿಕೆಯಲ್ಲಿ ಸಜ್ಜನ ಶ್ರೀಮುಖಿಯ ಪ್ರಸ್ತಾಪ ತೆಗೆದ ಮತ್ತು ಆ ಫೋಟೊ ಗೆ ಹಾರ ಹಾಕಿ ನಮಸ್ಕರಿಸಿದ. ನಮ್ಮೆಲ್ಲರ ಪ್ರೀತಿಯ ಹೋರಾಟಗಾರ್ತಿ ಈಗ ನೆನಪು ಮಾತ್ರ, ಆದರೆ ಅವರ ಹೋರಾಟ ನಮಗೆ ಮುಂದಿನ ದಾರಿದೀಪ. ಸಾವಿರ ಅಡೆಗಳು ಬಂದರೂ ನಾವು ಈ ಸರಕಾರವನ್ನ ಬೀಳಿಸಿ ನಮ್ಮ ಹೋರಾಟಗಾರ್ತಿಯ ಆಶಯವನ್ನು ತರುವ ಸರಕಾರವನ್ನು ತರಬೇಕಿದೆ. 
ದೊಡ್ಡಮಟ್ಟದ ಚಪ್ಪಾಳೆ ಗಿಟ್ಟಿಸಿಕೊಂಡ. ಅಮ್ಮನ ಫೋಟೊ ನೋಡಿ ಸಂಕೇತ್ ಗೆ ಮನಸ್ಸು ಸ್ವಲ್ಪ ಕಲಕಿದಂತಾಯ್ತು. ಜೊತೆಯಲ್ಲೇ ಇದ್ದಂತಹ ಆಕೃತಿ ಮರೆಯಾದಾಗ ಆಗುವ ನೋವಿನ ಗೆರೆ ಅವನ ಮುಖದಲ್ಲಿ ಕಾಣಿಸಿಕೊಂಡು ಕಣ್ಣಿನಲ್ಲಿ ನೀರಿಯ ಪಸೆಯನ್ನುಂಟುಮಾಡಿತು. ಸದಾ ಜೊತೆಗಿಟ್ಟಿಕೊಂಡಿರುತ್ತಿದ್ದ ಅವನ ಡೈರಿಯೊಳಗಿನ ಹಾಳೆಯನ್ನು ತೆಗೆದು ನೋಡಿದ. ಅದೇ ಕ್ಷಣ ಆ ಹಾಳೆಯನ್ನು ಭಟ್ ಮತ್ತು ಪಾಟೀಲ್ ಇಬ್ಬರೂ ನೋಡಿದರು. ಆಹ್ ಎಂಬುದ್ಗಾರ ಇಬ್ಬರ ಬಾಯಿಂದ.
ಪಾಟೀಲ್ ವೇದಿಕೆ ಮೇಲೇರಿ ಹೋರಾಟದ ಕಿಡಿ ನಮ್ಮ ಮುಂದೆಯೇ ಇದೆ. ಶ್ರೀಮುಖಿ ಅವನ ಮಗನ ರೂಪದಲ್ಲಿ ಹೋರಾಟವನ್ನು ಮುಂದುವರೆಸುವ ಸೂಚನೆ ಕೊಟ್ಟಿದ್ದಾಳೆ. ’ಬಾ ಮರಿ ಇಲ್ಲಿ ನಿನ್ನ ಕವನ ಓದು’ ಸಂಕೇತ್ ಗೆ ಕಿರಿಕಿರಿಯಾಯ್ತು . ತಾತನೆಡೆಗೆ ನೋಡಿದ. ತಾತ ಮೌನವಾಗಿದ್ದರು. ಭಟ್ ಅಕ್ಷರಶಃ ನೂಕಿಕೊಂಡು ಸಂಕೇತನನ್ನ ವೇದಿಕೆಯ ಮೇಲೆ ನಿಲ್ಲಿಸಿದ. ಅವನು ಕವನ ವಾಚಿಸಿದ. ಅದರ ಅರ್ಥವನ್ನ ಪಾಟೀಲ್ ಮತ್ತು ಸಜ್ಜನ್ ಹೇಳತೊಡಗಿದರು. 
ಆಕೆಯ ಬಾಲ್ಯ ಮತ್ತು ಶಾಲಾ ಕಾಲೇಜಿನ ಹಾದಿ ಎಷ್ಟು ಕಷ್ಟಕರವಾಗಿತ್ತು ಎನ್ನುವುದನ್ನು ಎರಡೇ ಸಾಲಿನಲ್ಲಿ ಬರೆದಿದ್ದಾನೆ. ಸಾವಿರ ಪದಗಳಲ್ಲಿ ಬರೆಯುವುದನ್ನು ಎರಡೇ ಸಾಲುಗಳಲ್ಲಿ ಬರೆದಿಟ್ಟಿದ್ದಾನೆ ಈ ಪೋರ. ಶ್ರೀಮುಖಿ ಅನುಭವಿಸಿದ ನೋವುಗಳು, ಸ್ತ್ರೀ ಶೋಷಣೆಗಳನ್ನುಗಳನ್ನು ಈ ಸಾಲುಗಳಲ್ಲಿ ಕಾಣಬಹುದು. ಗಂಡಸಿನ ಅಹಂಕಾರದಲ್ಲಿ ಬೆಂದು ತನ್ನ ಹೋರಾಟದ ಹಾದಿಯನ್ನು ಕಂಡುಕೊಂಡ ಮಹಾನ್ ಚೇತನ ನಮ್ಮ ಶ್ರೀಮುಖಿ, ಆಕೆ ಸಾಧಿಸಿದ್ದೇನು ಎನ್ನುವ ಪ್ರಶ್ನೆಗೆ ಉತ್ತರವಾಗಿ ನಾವು ನಿಲ್ಲಬೇಕಿದೆ. ಆಕೆಯ ಸಾಧಿಸಿದ್ದು ಅಲ್ಪವೇ ಆದರೂ ಅಂದುಕೊಂಡದ್ದು ಅಗಾಧ. ಈ ಕವನದಲ್ಲಿನ ಧೋರಣೆಯನ್ನು ನಮ್ಮ ಮಿತ್ರ ಇಕ್ಬಾಲ್ ಖಾನ್ ಹೇಳುತ್ತಾರೆ. ಎನ್ನುತ್ತಾ ಮೈಕನ್ನು ಇಕ್ಬಾಲ್ ಖಾನನಿಗೆ ವರ್ಗಾಯಿಸಿದ. ಇಕ್ಬಾಲ್ ವಚನಸಾಹಿತ್ಯವನ್ನು ಎಳೆದು ತಂದು ಇಡೀ ಕವನ ಶೈವಪರಂಪರೆಯ ವಚನಕ್ಕೆ ಸಮಾನವಾದ ಅಂಶವನ್ನು ಹೊಂದಿದೆ. ವಚನಗಳನ್ನು ಚಳುವಳಿ ಅಥವಾ ಹೋರಾಟ ಸಾಹಿತ್ಯದ ಹಾದಿಯಾಗಿ ಗುರುತಿಸಿದ್ದೇವೆ ಅದೇ ಹಾದಿಯಲ್ಲಿ ಈ ಪುಟ್ಟ ಹುಡುಗ ತನ್ನ ತಾಯಿಯ ಮೂಲಕ ಲೋಕದಲ್ಲಿ ಅನಾಚಾರ ಮತ್ತು ಶೋಷಣೆಗಳನ್ನು ಪದಗಳ ಮೂಲಕ ಮುಟ್ಟಿಸಿದ್ದಾನೆ, ಈತ ಮುಂದಿನ ಕಾಲದಲ್ಲಿ ಶರಣರ ಸಾಲಿನಲ್ಲಿ ಸೇರಬಹುದಾಗ ಹೋರಾಟಗಾರ. 
ದೊಡ್ಡ ಚಪ್ಪಾಳೆ. 
 
ಶ್ರೀನಿವಾಸ ಮೂರ್ತಿಗಳು ಎದ್ದು ನಿಂತರು...... 
ಸಂಕೇತ ವೇದಿಕೆಯಿಂದ ಕೆಳಗಿಳಿದು ತಾತನನ್ನು ಅನುಸರಿಸಿದ....
 
#ಕೂಪ ಮುಂದುವರೆಯುವುದು...
 

Rating
No votes yet