ಪೊಲೀಸರ ಮೇಲೆ ಅನುಮಾನ...ಸರೀನಾ?

ಪೊಲೀಸರ ಮೇಲೆ ಅನುಮಾನ...ಸರೀನಾ?

ಬರಹ

ಮಲೆನಾಡಿನಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳನ್ನು ನಕ್ಸಲ್ ನಿಗ್ರಹ ಪಡೆ ಬಿಡುಗಡೆ ಮಾಡಿ ವಾರ ಕಳೆದಿದೆ. ಅದರ ಹಿಂದೆ ಗೃಹ ಮಂತ್ರಿ ಅದನ್ನು ವಾಪಸ್ಸು ಪಡೆದದ್ದೂ ಆಯಿತು.
ನಕ್ಸಲೀಯರ ಚಟುವಟಿಕೆಗಳನ್ನು ಪ್ರೆತ್ಸಾಹಿಸುತ್ತಿರುವ ವ್ಯಕ್ತಿಗಳ ಪಟ್ಟಿಯಲ್ಲಿದ್ದ ಇಬ್ಬರ ಹೆಸರನ್ನು ಮೊದಲು ತೆಗೆಸಲಾಗಿದೆ. ಪೊಲೀಸರ ಮೇಲೆ ದಾವೆ ಹೂಡುವ ಪ್ರಯತ್ನವೂ ಸಾಗಿತು. ಇದು ಒಂದು ಹಂತ.
ಪಟ್ಟಿ ಬಹಿರಂಗಗೊಂಡ ಕೆಲವೇ ಗಂಟೆಗಳಲ್ಲಿ ಗದ್ದಲ, ಪೊಲೀಸರ ಮೇಲೆ ಅನುಮಾನ ಹುಟ್ಟುವ ಸಂಗತಿಗಳು ನಡೆದವು. ಅದು ಯಾರಿಂದ ಹುಟ್ಟಿತು ಏಕೆ ಹುಟ್ಟಿತು ಎಂಬುದು ಬೇರೆ ಮಾತು. ಅದೂ ಒತ್ತಿಟ್ಟಿಗಿರಲಿ.
ಆದರೆ ಪೊಲೀಸರು ಇಟ್ಟ ಹೆಜ್ಜೆಯೇ ತಪ್ಪು ಎಂದು ಪ್ರತಿಭಟನೆ, ಹೇಳಿಕೆ ನೀಡುತ್ತಿರುವುದು ಸೋಜಿಗದ ಸಂಗತಿ.
ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿರುವ ಎಡಿಜಿಪಿ ಶಂಕರ್ ಬಿದಿರಿ ಅವರು ಬಿಡುಗಡೆ ಮಾಡಿರುವ ನಕ್ಸಲ್ ಕುರಿತ ವರದಿಯನ್ನು ಪಕ್ಕಕ್ಕೆ ತಳ್ಳುವ ಪರಿಸ್ಥಿತಿ ನಿರ್ಮಾಣ ಮಾಡುವ ಮಟ್ಟಿಗೆ ನಾವು ಇಳಿದಿದ್ದೇವೆ. ಅದಕ್ಕಾಗಿ ಪ್ರತಿಭಟನೆ, ಹೇಳಿಕೆ, ಪ್ರತಿಕೃತಿ ದಹನ ಮಾಡುವುದಕ್ಕೂ ಸಿದ್ಧ.
ಪೊಲೀಸ್ ಇಲಾಖೆಯನ್ನು ವಿವಿಧ ಘಟನೆಗಳಲ್ಲಿ ಅನುಮಾನಿಸುವುದು ಸಹಜ. ಆದರೆ ಇಂಥ ಒಂದು ಅಸಾಮಾನ್ಯವಾದ ವಿಷಯದಲ್ಲಿ ಪೊಲೀಸರ ಕಾರ್ಯವನ್ನು ಸಣ್ಣ ಮಕ್ಕಳಂತೆ ಬಿಂಬಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ.
ಬಿಡುಗಡೆ ಮಾಡಲ್ಪಟ್ಟಿರುವ ಪಟ್ಟಿಯಲ್ಲಿ ನಕ್ಸಲರ ಹುಟ್ಟು, ಮಲೆನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಕ್ಸಲೀಯರ ವಿರುದ್ಧ ದಾಖಲಾದ ಪ್ರಕರಣಗಳ ವಿವರಗಳು, ಮಲೆನಾಡಿನಲ್ಲಿ ನಕ್ಸಲೀಯರ ಚಟುವಟಿಕೆಗಳನ್ನು ಪ್ರೆತ್ಸಾಹಿಸುತ್ತಿರುವ ಸಂಘಟನೆಗಳ ಮತ್ತು ವ್ಯಕ್ತಿಗಳ ವಿವರಗಳು, ನಕ್ಸಲೀಯರ ವೈಯಕ್ತಿಕ ಮಾಹಿತಿ ಹೀಗೆ ಇಂಚಿಂಚೂ ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಸಿದ್ಧಪಡಿಸಿದ್ದಾರೆ.
ಹೀಗಿರುವಾಗಿ ಏಕ್‌ದಮ್ ಆ ವರದಿಯ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರ್ವಥಾ ಸರಿಯಲ್ಲ.
ವರದಿಯ ಪ್ರಕಾರ ಮಲೆನಾಡಿನಲ್ಲಿ ನಕ್ಸಲೀಯರ ಚಟುವಟಿಕೆಗಳು ೨೦೦೧-೦೨ನೇ ಸಾಲಲ್ಲಿ ಪ್ರಾರಂಭವಾಯಿತು. ಇದಕ್ಕೂ ಮುಂಚೆ ಸಿಪಿಐ(ಎಂ.ಎಲ್) ಇವರು ಮಲೆನಾಡಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಒಂದು ಸಮೀಕ್ಷೆಯನ್ನು ಸಹಾ ಮಾಡಿರುವರೆಂದು ತಿಳಿದುಬಂದಿರುತ್ತದೆ. ಕರ್ನಾಟಕ ವಿಮೋಚನಾ ರಂಗ ಎಂಬ ಸಂಸ್ಥೆಯು ಮಲೆನಾಡಿನಲ್ಲಿ ದಳಗಳ ಸಂಘಟನೆಯನ್ನು ಮಾಡಿರುತ್ತಾರೆ. ಕಾಲ ಕ್ರಮೇಣ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೇ ಅಲ್ಲದೇ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಯುವಕ ಯುವತಿಯರು ನಕ್ಸಲೀಯರು ಸೇರ್ಪಡೆಗೊಂಡಿರುತ್ತಾರೆ.
ಇದಕ್ಕೆ ಪುಷ್ಠಿ ನೀಡುವಂಥ ಪರಿಪೂರ್ಣ ಅನೇಕ ದಾಖಲೆಗಳು ಸಿಕ್ಕಿವೆ. ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಕಾರ್ಯ ಚಟುವಟಿಕೆಗೆ ಹುಟ್ಟಿಕೊಂಡಿದ್ದು ಅನೇಕ ಸಂಘಟನೆಗಳು. ನಕ್ಸಲೀಯರ ಚಟುವಟಿಕೆಗಳನ್ನೂ ಪ್ರೆತ್ಸಾಹಿಸುತ್ತಿರುವ ಸಂಘಟನೆಗಳನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ.
ಮುಖ್ಯವಾದುದ್ದೆಂದರೆ ನಕ್ಸಲ್ ವ್ಯಕ್ತಿಯ ಹೆಸರು, ತಂದೆ, ತಾಯಿ, ಎತ್ತರ, ವಯಸ್ಸು, ಕುಲ ಗೋತ್ರ, ಭಾಷೆ, ವೈವಾಹಿಕ ಜೀವನ ಸಂಪರ್ಕ ಹೊಂದಿರುವ ವ್ಯಕ್ತಿ, ಕಾರ್ಯಕ್ಷೇತ್ರ, ಅವರ ಬಳಿ ಈಗ ಇರುವ ಆಯುಧ, ಹೀಗೆ ಅಣುಅಣುವನ್ನು ಜಾಲಾಡಿದ್ದಾರೆ.
ಭಗತ್ ಸಿಂಗ್ ಯುವಜನ ವೇದಿಕೆ, ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಒಕ್ಕೂಟ, ಜಾತಿ ವಿನಾಶ ವೇದಿಕೆ, ಕರ್ನಾಟಕ ವಿಮೋಚನ ರಂಗ, ಮಹಿಳಾ ಜಾಗೃತಿ, ಜಾಗೃತ ವಿದ್ಯಾರ್ಥಿ ಯುವಜನ ವೇದಿಕೆ, ಶಾಂತಿಗಾಗಿ ನಾಗರಿಕ ವೇದಿಕೆ... ಹೀಗೆ ಪ್ರತಿ ಸಂಘಟನೆ ಹೆಜ್ಜೆಯನ್ನು ಪೊಲೀಸರು ಗಮನಿಸಿ ದಾಖಲಿಸಿದ್ದಾರೆ. ಕಣ್ಣಿನಲ್ಲಿ ಕಂಡಿದ್ದಾರೆ. ಅದನ್ನು ದಾಖಲಿಸಲಾಗಿದೆ.
ಹೀಗೆ ನಕ್ಸಲೀಯರನ್ನು ಪ್ರೆತ್ಸಾಹಿಸುವ ವ್ಯಕ್ತಿಗಳ ವಿವರವನ್ನು ಕಲೆ ಹಾಕಿದ್ದಾರೆ. ಆದರೆ ಇಷ್ಟು ವರ್ಷದಿಂದ ಕಾಡು ಮೇಡು, ನಗರ ಹಳ್ಳಿಗಳಲ್ಲಿ ತಿರುಗಿ ಸಂಗ್ರಹಿಸಿದ ಮಾಹಿತಿಗೆ ಬೆಲೆ ಇಲ್ಲವೆಂಬ ಎಂಬ ಮಾತು ಕೇಳಿಬರುತ್ತಿದೆ.
ಒಂದು ಸಣ್ಣ ಉದಾಹರಣೆ ಈ ರೀತಿ ಇದೆ. ಖ್ಯಾತ ವಿಚಾರವಾದಿ ಪ್ರೆ. ಗೋವಿಂದ ರಾವ್ ಹೇಳುವ ಪ್ರಕಾರ ತಾವು ‘ರೈತ ಮುಖಂಡ ಕಡಿದಾಳ್ ಶಾಮಣ್ಣ, ಲೇಖಕ ಪ್ರೆ. ರಾಜೇಂದ್ರ ಚೆನ್ನಿ, ನಾನು ಕೋಮು ಸೌಹಾರ್ದ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆವು. ಕರ್ನಾಟಕದಲ್ಲಿ ತಲೆ ಎತ್ತುತ್ತಿರುವ ಕೋಮುವಾದಕ್ಕೆ ಪ್ರತಿಯಾದ ಒಂದು ಸಶಕ್ತ ಸಂಘಟನೆ ಇದು ಎಂಬುದು ನಮ್ಮ ನಂಬಿಕೆ ಆಗಿತ್ತು. ಆದರೆ ಕೋಮು ಸೌಹಾರ್ದ ವೇದಿಕೆ ನಕ್ಸಲ್ ಸಿದ್ಧಾಂತದ ಸಂಘಟನೆಯ ಮತ್ತೊಂದು ರೂಪ ಎಂದು ನಮಗೆ ದೃಢವಾದ ಕೂಡಲೇ ನಾವೆಲ್ಲರೂ ಸಂಪೂರ್ಣವಾಗಿ ಈ ಸಂಘಟನೆಯೊಡನೆ ಸಂಬಂಧ ಕಳಚಿಕೊಂಡೆವು’.
ಹೀಗೆ ಆ ಸಂಘಟನೆಗಳಲ್ಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈಗ ಹೊರ ಬಂದಿರುವ ಅನೇಕರು, ನಕ್ಸಲರೊಂದಿಗೆ ಈ ಪಟ್ಟಿಯಲ್ಲಿರುವ ಅನೇಕ ಮುಖಂಡರು, ಸಂಘಟನೆಗಳ ನಿಜ ಬಣ್ಣವನ್ನು ರಾಜಾರೋಷವಾಗೇ ಬಯಲು ಮಾಡಿದ್ದಾರೆ. ಹೀಗಿದ್ದೂ ಪೊಲೀಸರ ವರದಿಯನ್ನು ಸರ್ಕಾರದ ಮಟ್ಟದಲ್ಲೇ ತುಳಿಯಲಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈಗಾಗಲೇ ಮಲೆನಾಡಲ್ಲಿ ರಕ್ತದ ಕಲೆ ಬಿದ್ದಿದೆ. ಅಶಾಂತಿ ನಿರ್ಮಾಣವಾಗಿದೆ. ಮತ್ತೆ ಮಲೆನಾಡನ್ನು ಶಾಂತಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮೊದಲ ಹೆಜ್ಜೆಯಾಗಿ ಕೈಗೊಂಡ ದಾಖಲೆ ಸಂಗ್ರಹಕ್ಕೆ ಪೆಟ್ಟುಕೊಟ್ಟು, ಅದನ್ನು ನಿಯಂತ್ರಿಸುವ ಕೆಲಸ ಮುಂದುವರಿದರೆ, ಕರ್ನಾಟಕ ಆಂಧ್ರವಾದಿತೂ.
ರಾಜಕೀಯ ಒತ್ತಡ ತಂದು, ಕಾನೂನಿನ ಮೊರೆ ಹೋಗಿ ಪಟ್ಟಿಯಿಂದ ಹೆಸರು ತೆಗೆಸಿದರೂ ಸತ್ಯ ಸುಳ್ಳಾಗದು. ಯಾರ ಮನೆಯಲ್ಲಿ ಯಾರ್‍ಯಾರು ಬಂದು ಉಳಿದು ಹೋಗಿದ್ದರು, ಯಾರ ಮುದ್ರಣಾಲಯದಲ್ಲಿ ಕರ ಪತ್ರಗಳು ಮುದ್ರಣಗೊಂಡಿದ್ದವು, ಯಾರು ಪ್ರಚೋದಿಸಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಪೊಲೀಸರ ಬಳಿ ನಿಖರವಾಗೇ ಇದೆ.
ಅಶಾಂತಿ ಹರಡಲು ಬಂದವರನ್ನು ಬುಡ ಸಮೇತ ಕಿತ್ತು ಮತ್ತೆ ಮಲೆನಾಡಲ್ಲಿ ಶಾಂತಿ ತರಲು ಹೊರಟ ಪೊಲೀಸರಿಗೆ ಬೇಕಿರುವುದು ಈಗ ಜನತೆಯ ಬೆಂಬಲ, ಸಹಕಾರ ಅಷ್ಟೇ.