ಅಲ್ಲಿ ಆದದ್ದೇನು????
ಅದು ಬೆಟ್ಟಗುಡ್ಡಗಳಿಂದ ಕೂಡಿದ್ದ ಅರಣ್ಯ ಪ್ರದೇಶ. ಯಥೇಚ್ಚವಾಗಿದ್ದ ಕಾಡು ಪ್ರಾಣಿಗಳು ಅಲ್ಲಿ ನಿರ್ಭಯವಾಗಿ ಓಡಾಡಿಕೊಂಡಿದ್ದವು. ಅಲ್ಲಿ ಊರುಗಳು ವಿರಳ. ಜನಸಂಖ್ಯೆಯೂ ಕಡಿಮೆ. ಜನರು ಎಲ್ಲಿಗೇ ಹೋದರೂ, ಕತ್ತಲಾಗುವ ಮುನ್ನವೇ ಸುರಕ್ಷಿತವಾದ ತಾಣವೊಂದನ್ನು ಸೇರಲೇಬೇಕು ಎನ್ನುವಂತಹ ವಾತಾವರಣ ಅಲ್ಲಿತ್ತು. ರಾತ್ರಿಯ ವೇಳೆಯಲ್ಲಂತೂ ಅಲ್ಲಿನ ರಸ್ತೆಗಳು ಸಂಪೂರ್ಣವಾಗಿ ನಿರ್ಮಾನುಷವಾಗಿರುತ್ತಿದ್ದವು.
ನಾನು ಮತ್ತು ನನ್ನ ಅಜ್ಜಿ ಆ ಪ್ರದೇಶಕ್ಕೆ ಹೊಸದಾಗಿ ಹೋಗಿ ನೆಲೆಸಿದ್ದೆವು. ಅಜ್ಜಿಯ ಆರೋಗ್ಯ ಸರಿ ಇರಲಿಲ್ಲ. ಅವರ ಬೇಕುಬೇಡಗಳೆಲ್ಲವನ್ನು ನಾನೇ ನೋಡಿಕೊಳ್ಳಬೇಕಿತ್ತು. ಹಾಗಾಗಿ ನನಗೆ ಅವರನ್ನು ಒಂಟಿಯಾಗಿ ಬಿಟ್ಟುಹೋಗುವುದು ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಒಮ್ಮೆ ಪ್ರಮುಖವಾದ ಕೆಲಸವೊಂದರ ಮೇರೆಗೆ ಬೇರೆ ಊರಿಗೆ ಹೋಗಲೇಬೇಕಾದಂತಹ ಸಂದರ್ಭ ಒದಗಿ ಬಂತು. ಅಲ್ಲಿಗೆ ಹೋಗಿ ಕೆಲಸವನ್ನು ಪೂರ್ಣಗೊಳಿಸುವ ವೇಳೆಗೆ ಮುಸ್ಸಂಜೆಯಾಯಿತು. ಕತ್ತಲಾಯಿತು ಎನ್ನುವ ಕಾರಣಕ್ಕೆ ನಾನು ಅಲ್ಲಿಯೇ ಉಳಿದುಕೊಳ್ಳುವುದು ಸಾಧ್ಯವಿರಲಿಲ್ಲ. ಅಜ್ಜಿಯ ಆರೈಕೆಯ ದೃಷ್ಟಿಯಿಂದ ನಾನು ಊರಿಗೆ ಹಿಂದಿರುಗಲೇಬೇಕಿತ್ತು. ಆದ್ದರಿಂದ ನನ್ನ ಜೊತೆಯಲ್ಲಿದ್ದವರು ಬೇಡವೆಂದರೂ ಕೇಳದೆ ಒಂಟಿಯಾಗಿ ಊರಕಡೆಗೆ ಹೊರಟುಬಿಟ್ಟೆ.
ಅದು ಸುಮಾರು ಒಂದುನೂರು ಕಿಲೋ ಮೀಟರ್ ದೂರದ ಹಾದಿಯಿದ್ದಿರಬಹುದು. ಉಬ್ಬುತಗ್ಗುಗಳು ಮತ್ತು ತಿರುವುಗಳಿಂದ ಕೂಡಿದ ಕಿರಿದಾದ ರಸ್ತೆಯಾಗಿದ್ದರಿಂದ ವೇಗವಾಗಿ ಹೋಗುವುದಕ್ಕೂ ಆಗುತ್ತಿರಲಿಲ್ಲ. ತುಂಬಾ ಎಚ್ಚರಿಕೆಯಿಂದ ಬೈಕ್ ಓಡಿಸಬೇಕಾಗಿತ್ತು. ಹಾಗಾಗಿ ಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದೆ. ಆಗಾಗ ಇಲಿಗಳು ಮತ್ತು ಹೆಗ್ಗಣಗಳು ರಸ್ತೆಗೆ ಅಡ್ಡಬರುತ್ತಿದ್ದವು. ಅವುಗಳನ್ನು ಬಿಟ್ಟರೆ ಅಲ್ಲಿ ಬೇರೆಯಾವ ಜೀವಸಂಚಾರವೂ ಇರಲಿಲ್ಲ. ಒಮ್ಮೆ ಮಾತ್ರ, ಗಾಬರಿಗೊಂಡ ಮೊಲವೊಂದು ನೇರವಾಗಿ ರಸ್ತೆಗೆ ನುಗ್ಗಿ, ಬೈಕಿನ ಪಕ್ಕದಲ್ಲೇ ಸ್ವಲ್ಪದೂರ ಓಡುತ್ತಾ ಸಾಗಿ, ಪಕ್ಕದ ಪೊದೆಗಳ ನಡುವೆ ಜಿಗಿದು ಮರೆಯಾಯಿತು.
ಕೆಲಸದ ಒತ್ತಡದಿಂದ ನನಗೆ ಆ ದಿನವೆಲ್ಲಾ ವಿರಾಮವೇ ಸಿಕ್ಕಿರಲಿಲ್ಲ. ತುಂಬಾ ಆಯಾಸವಾಗಿತ್ತು. ಜೊತೆಗೆ ಒಂಟಿಪಯಣ ಮತ್ತು ಏಕತಾನತೆ. ಸಾಲದ್ದಕ್ಕೆ ಪ್ರಯಾಣವೂ ಆಮೆಯ ವೇಗದಲ್ಲಿ ಸಾಗುತ್ತಿತ್ತು. ದಾರಿಯಲ್ಲಿ ಯಾವುದಾದರೂ ಹೋಟೆಲ್ ಸಿಕ್ಕರೆ ಗಾಡಿ ನಿಲ್ಲಿಸಿ ಕಾಫಿ ಕುಡಿಯುವ ಬಯಕೆ ಮೂಡಿತು. ಕಾಫಿ ಕುಡಿದರೆ ಬೇಸರ ಮತ್ತು ಆಯಾಸ ಕಡಿಮೆಯಾಗಿ ಸ್ವಲ್ಪ ಚೈತನ್ಯ ಬಂದಂತಾಗುತ್ತದೆ. ಆದರೆ ಎಷ್ಟು ದೂರ ಹೋದರೂ ಅಂಗಡಿಗಳಾಗಲೀ, ಹೋಟೆಲ್'ಗಳಾಗಲೀ, ಊರುಗಳಾಗಲೀ ಸಿಕ್ಕಲೇ ಇಲ್ಲ. ಖಾಲಿ ರಸ್ತೆಯ ಆ ಕತ್ತಲ ಪಯಣಕ್ಕೆ ಅಂತ್ಯವೇ ಇಲ್ಲವೇನೋ ಅನ್ನಿಸತೊಡಗಿತು. ನೀರಸವಾದ ಪಯಣ ಹೀಗೆಯೇ ಸಾಗುತ್ತಿರಬೇಕಾದರೆ ದೂರದಲ್ಲಿ ಕೆಲವು ಕಣ್ಣುಗಳು ಕೆಂಡಗಳಂತೆ ಹೊಳೆಯುತ್ತಿರುವುದು ಕಾಣಿಸಿತು.
ಸ್ವಲ್ಪ ಗಾಬರಿಯಾಯಿತು. ಆದರೂ ಮುಂದುವರೆದೆ. ಮೊದಲು ಕೆಂಡಗಳ ಹಿಂದೆ ಅಸ್ಪಷ್ಟವಾದ ಆಕೃತಿಗಳು ಮೂಡಿದವು, ಆನಂತರ ಆ ಆಕೃತಿಗಳು ಪ್ರಾಣಿಗಳ ರೂಪವನ್ನು ಧರಿಸಿದವು, ಕೊನೆಗೆ ಆ ಪ್ರಾಣಿಗಳು ಜಿಂಕೆಗಳಾಗಿ ಬದಲಾದವು. ನನ್ನನ್ನು ನೋಡಿದ ಕೂಡಲೇ ಅವು ಗಾಬರಿಯಿಂದ ಓಡಿಹೋಗುತ್ತವೆ ಎಂದು ಭಾವಿಸಿದ್ದೆ. ಆದರೆ ಅವು ನನ್ನನ್ನು ಪೂರ್ತಿಯಾಗಿ ನಿರ್ಲಕ್ಷಿಸಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮುಂದುವರೆಸಿದವು.
ನಾನೂ ಕೂಡಾ ಜಿಂಕೆಗಳನ್ನು ನಿರ್ಲಕ್ಷಿಸಿ ಮುಂದೆ ಸಾಗಿದೆ. ಮತ್ತೆ ಬೇಸರವಾಗತೊಡಗಿತು. ಮನಸ್ಸು ಕಾಲ ದೇಶಗಳನ್ನು ದಾಟಿ ಬೇರೆಲ್ಲೋ ಸುತ್ತಾಡಲು ಹೊರಟಿತು, ಕೇವಲ ಕಣ್ಣುಗಳಷ್ಟೇ ರಸ್ತೆಯ ಮೇಲೆ ನೆಟ್ಟಿದ್ದವು, ಬರುಬರುತ್ತಾ ಸಮಯ ಮತ್ತು ದೂರದ ಲೆಕ್ಕಾಚಾರವೇ ತಪ್ಪಿಹೋಗಿ, ಬುದ್ಧಿಗೆ ಮಂಕು ಕವಿದಂತಾಯಿತು. ತಲೆಬುಡವಿಲ್ಲದ ಆಲೋಚನೆಗಳು ಸುಳಿಯತೊಡಗಿದವು. ತಲೆಯಂತೂ ದೆವ್ವಗಳ ಕಾರ್ಖಾನೆಯಾಗಿ ಮಾರ್ಪಟ್ಟಿತು. ಹೀಗೆ ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿಕೊಂಡು ತೊಳಲಾಡುತ್ತಾ ಮೈಮರೆತಿದ್ದಾಗ, ಏಕಾಏಕಿ ''ಧಡಾರ್'' ಎಂದು ದೊಡ್ಡದಾಗಿ ಸದ್ದಾಯಿತು. ತುಂಬಾ ಸನಿಹದಲ್ಲೇ ಕೇಳಿಬಂದ ಆ ಶಬ್ದದ ತೀವ್ರತೆಗೆ ಎದೆಯೊಡೆದಂತಾಗಿ ಇಡೀ ದೇಹವೇ ಒಮ್ಮೆ ಬಲವಾಗಿ ಕಂಪಿಸಿತು...
ಆ ಊರಿಗೆ ಬಂದ ಮೇಲೆ ಕಾಡುಗಳ್ಳರ ಕತೆಗಳನ್ನು ಸಾಕಷ್ಟು ಕೇಳಿದ್ದೆ. ಅವರನ್ನು ಎದುರು ಹಾಕಿಕೊಂಡವರಲ್ಲಿ ಬಹಳಷ್ಟು ಜನರು ಶಾಶ್ವತವಾಗಿ ನಾಪತ್ತೆಯಾಗಿದ್ದರು ಎಂಬ ಗಾಳಿಸುದ್ದಿ ವ್ಯಾಪಕವಾಗಿ ಹರಡಿತ್ತು. (ಜನರಹಿತವಾದ ಆ ಕಾಡುಗಳಲ್ಲಿ ವ್ಯಕ್ತಿಯೊಬ್ಬನನ್ನು ಕೊಂದುಹಾಕಿ, ಶವವನ್ನು ಮಾಯ ಮಾಡುವುದು ಅಂತಹ ಕಷ್ಟದ ಕೆಲಸವೇನಲ್ಲ.) ಅದರಲ್ಲೂ ರಾತ್ರಿಯ ವೇಳೆಯಂತೂ ಅವರ ಧಂಧೆಗೆ ಹೇಳಿ ಮಾಡಿಸಿದಂತಹ ಸಮಯ. ಕತ್ತಲಿನಲ್ಲಿ ಜನರ ಓಡಾಟವಿರುವುದಿಲ್ಲ. ಯಾರಾದರೂ ಆಕಸ್ಮಿಕವಾಗಿ ಆ ಕಡೆಗೆ ಬಂದರೆ, ಅದು ಅವರಿಗೆ ಸುಲಭವಾಗಿ ಗೊತ್ತಾಗುತ್ತದೆ, ಅಡಗಿಕೊಳ್ಳಲು ಸಾಕಷ್ಟು ಅವಕಾಶವೂ ದೊರೆಯುತ್ತದೆ. ಅಷ್ಟೇ ಅಲ್ಲ, ಕತ್ತಲಿನಲ್ಲಿ ಯಾರಮೇಲೆ ಬೇಕಾದರೂ ಹಲ್ಲೆ ಮಾಡಿ, ಸಾಕ್ಷ್ಯವನ್ನು ಉಳಿಸದೆ ಬಚಾವಾಗಲೂಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ, ಅದು ಕಾಡುಗಳ್ಳರ ಸಾಮ್ರಾಜ್ಯ. ಅಲ್ಲಿ ಅವರು ಏನುಬೇಕಾದರೂ ಮಾಡಬಹುದು. ಅಪಾಯಕಾರಿಯಾದ ಆಯುಧಗಳಂತೂ ಅವರ ಬಳಿ ಇದ್ದೇ ಇರುತ್ತವೆ.
'ಅವರೇನಾದರೂ ನನ್ನನ್ನು ತಮ್ಮ ಶತ್ರು ಅಂತ ಭಾವಿಸಿ ಗುಂಡು ಹಾರಿಸಿರಬಹುದಾ?' ಹಾಗನ್ನಿಸಿದ್ದೇ ತಡ ನನ್ನ ರಕ್ತ ತಣ್ಣಗಾಯಿತು. ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತು. ಹೃದಯಬಡಿತ ನಿಯಂತ್ರಣ ತಪ್ಪಿತು. ಸಾವಿನ ಹೆಬ್ಬಾಗಿಲಿನಲ್ಲಿ ನಿಸ್ಸಹಾಯಕನಾಗಿ ನಿಂತಂತಹ ಅನುಭವವಾಯಿತು. 'ಛೇ ಎಂಥಾ ದೊಡ್ಡ ತಪ್ಪು ಮಾಡಿಬಿಟ್ಟೆ. ಹೇಳಿದ ಬುದ್ಧಿಮಾತನ್ನು ಕೇಳದೆ ಹೊರಟುಬಂದು ವಿನಾಕಾರಣ ಗಂಡಾಂತರಕ್ಕೆ ಸಿಲುಕಿಕೊಂಡೆನಲ್ಲ. ಇಲ್ಲಿಗೆ ನನ್ನ ಕತೆ ಮುಗಿದೇಹೋಯಿತು! ನನ್ನ ಜೀವ ಅಷ್ಟು ನಿಕೃಷ್ಟವಾ? ಅದಕ್ಕೆ ಬೆಲೆಯೇ ಇಲ್ಲವೇ? ನಾನು ಬೀದಿಯ ಹೆಣವಾಗಲಿದ್ದೇನಾ? ನಾನೂ ಕೂಡಾ ಇತರರಂತೆ ಶಾಶ್ವತವಾಗಿ ನಾಪತ್ತೆಯಾಗಲಿದ್ದೇನಾ? ತಲೆಯ ತುಂಬಾ ಉತ್ತರವಿಲ್ಲದ ಪ್ರಶ್ನೆಗಳೇ ಕುದಿಯತೊಡಗಿದವು??
ಏನಾದರೂ ಮಾಡಿ ಜೀವವುಳಿಸಿಕೊಳ್ಳಬೇಕು, ಹೇಗಾದರೂ ಮಾಡಿ ಈ ವಿಪತ್ತಿನಿಂದ ತಪ್ಪಿಸಿಕೊಳ್ಳಬೇಕು. ಅದಕ್ಕಿರುವುದು ಒಂದೇ ಮಾರ್ಗ ಸಾಧ್ಯವಾದಷ್ಟು ಬೇಗ ಆ ಜಾಗದಿಂದ ದೂರಹೋಗುವುದೇ ನನ್ನ ಮುಂದೆ ಉಳಿದಿದ್ದ ಏಕೈಕ ಆಯ್ಕೆ. ಪ್ರಾಣ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ, ಬೈಕಿನ ಆ್ಯಕ್ಸಿಲೇಟರನ್ನು ಪೂರ್ತಿಯಾಗಿ ತಿರುಗಿಸಿದೆ. ಬೈಕ್ ಚಿರತೆಯಂತೆ ಮುನ್ನುಗ್ಗಬೇಕಿತ್ತು...... ನುಗ್ಗಲಿಲ್ಲ. ಇನ್ನೊಮ್ಮೆ ಆ್ಯಕ್ಸಿಲೇಟರನ್ನು ಬಲವಾಗಿ ತಿರುಗಿಸಿದೆ. ವೇಗವೇನೋ ಹೆಚ್ಚಿತು ಅದರ ಜೊತೆಯಲ್ಲಿಯೇ ಮತ್ತೊಮ್ಮೆ ಕೇಳಿಬಂತು ಎದೆನಡುಗಿಸುವ ಆ 'ಧಡಾರ್'ಎಂಬ ಶಬ್ದ.
ಮತ್ತೊಮ್ಮೆ ಬಚಾವಾಗಿದ್ದೆ, ಜೀವ ಉಳಿಸಿಕೊಳ್ಳಲು ಮತ್ತೊಂದು ಅವಕಾಶ ದೊರಕಿತ್ತು. ಆದರೆ ಈ ಬಾರಿಯ ಗುಂಡು ಬಂದೂಕಿನಿಂದ ಸಿಡಿಯುವ ಬದಲು ನನ್ನ ಕಾಲುಗಳ ಬಳಿಯಿಂದ ಸಿಡಿದಿತ್ತು. ಹಾಗಾಗಿ ನನಗೆ ಭಯದ ಜೊತೆಗೆ ಅಚ್ಚರಿಯಾಯಿತು. ಅಚ್ಚರಿಯ ಜೊತೆಗೆ ಅನುಮಾನವೂ ಹುಟ್ಟಿತು. ಇದೇನಾದರೂ ನನ್ನ ಬೈಕಿನ ಕಿತಾಪತಿನಾ??!! ಪರೀಕ್ಷಿಸಲು ಮತ್ತೆ ಆ್ಯಕ್ಸಿಲೇಟರನ್ನು ತಿರುಗಿಸಿದೆ. ಮತ್ತೆ ಅದೇ ಶಬ್ದ ಕೇಳಿ ಬಂತು. ಅದು ಬಂದೂಕಿನಿಂದ ಗುಂಡು ಸಿಡಿದ ಶಬ್ದವಲ್ಲ. ನನ್ನ ಡಬ್ಬಾ ಬೈಕಿನ ಮುದಿ ಎಂಜಿನ್ನು ಅನಾರೋಗ್ಯದಿಂದ ಭಯಂಕರವಾಗಿ ಸೀನಿದ ಶಬ್ದ. ಸೈಲೆನ್ಸರನ್ನೇ ಭೇದಿಸಿಕೊಂಡು ಹೊರನುಗ್ಗುತ್ತಿತ್ತು ಆಸ್ಫೋಟದಂತಹ ಆ ಮಹಾಶಬ್ದ.
ಈ ಭಯವೇ ಅಂತಹದ್ದು. ಅದರ ಸುಳಿಗೆ ಸಿಲುಕಿದ ಯಾವ ಜೀವಿಯೂ ಸರಿಯಾದ ದಿಕ್ಕಿನಲ್ಲಿ ಯೋಚಿಸುವುದು ಸಾಧ್ಯವಿಲ್ಲ. ಭಯಗ್ರಸ್ತನಾದವನಿಗೆ ಹಗ್ಗವು ಹಾವಾಗಿ ಕಾಣುತ್ತದೆ. ಹುಲ್ಲುಕಡ್ಡಿಯು ಹೆಬ್ಬುಲಿಯಂತೆ ಕಾಣುತ್ತದೆ. ನನಗಂತೂ ದೊಡ್ಡ ಗಂಡಾಂತರದಿಂದ ಪಾರಾಗಿ ಬಂದಂತೆನಿಸಿ, ಮನಸ್ಸು ನಿರಾಳವಾಯಿತು. ಗಾಡಿ ನಿಲ್ಲಿಸಿ, ಕೆಳಗಿಳಿದು ಸ್ವಲ್ಪ ಸುಧಾರಿಸಿಕೊಂಡೆ. ಮನಸ್ಸಿನ ಅತಿರೇಕವನ್ನು ನೆನೆದು ನಗುವೂ ಬಂತು. ನನ್ನನ್ನು ಗಮನಿಸಲು ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಜೋರಾಗಿಯೇ ನಕ್ಕೆ. ಆದರೆ ಆ ಸಂತೋಷ ಕ್ಷಣಿಕವಾಗಿತ್ತು. ಏಕೆಂದರೆ, ಮುಂದಿನ ಕೆಲವೇ ನಿಮಿಷಗಳಲ್ಲಿ ನಿಜವಾಗಿಯೂ ದೊಡ್ಡ ಸಮಸ್ಯೆಯೊಂದಕ್ಕೆ ಸಿಲುಕಿಕೊಳ್ಳುವವನಿದ್ದೆ.
ಮೈಮನಸ್ಸುಗಳು ನಿಯಂತ್ರಣಕ್ಕೆ ಬಂದ ಮೇಲೆ ಮತ್ತೆ ಹೊರಟೆ. ಸ್ವಲ್ಪದೂರ ಹೋದ ಬೈಕ್ ಧಡಾರ್.........ಧಡ್..... ಧಡ್' ಎಂದು ಸದ್ದು ಮಾಡುತ್ತಾ ನಿಂತು ಹೋಯಿತು. ಎಷ್ಟು ಕಿಕ್ ಹೊಡದೆರೂ ಸ್ಟಾರ್ಟ್ ಆಗಲಿಲ್ಲ. ಕೆಳಗಿಳಿದು, ನನಗೆ ಗೊತ್ತಿದ್ದ ರಿಪೇರಿಗಳೆಲ್ಲವನ್ನೂ ಮಾಡಿನೋಡಿದೆ. ಯಾವ ಪ್ರಯೋಜನವೂ ಆಗಲಿಲ್ಲ. ನನ್ನ ಬೈಕ್ ನನಗೆ ಸರಿಯಾದ ಸಮಯದಲ್ಲೇ ಕೈಕೊಟ್ಟಿತ್ತು. ದರಿದ್ರ ಬೈಕನ್ನು ಕುಟ್ಟಿ ಪುಡಿಪುಡಿ ಮಾಡುವಷ್ಟು ಸಿಟ್ಟು ಬಂತು. ಮುಂದೇನು ಮಾಡಬೇಕೆನ್ನುವುದು ತೋಚಲಿಲ್ಲ. ಅಸಹನೆಯಿಂದ ಅತ್ತಿತ್ತ ನೋಡಿದೆ.
ಕಾಡನ್ನು ದಟ್ಟವಾದ ಕತ್ತಲು ಆವರಿಸಿತ್ತು. ಚಂದಿರನ ಸುಳಿವಿರಲಿಲ್ಲ. ಬೆಳೆದು ನಿಂತಿದ್ದ ದೈತ್ಯವೃಕ್ಷಗಳು ಆಗಸದೊಂದಿಗೆ ನಕ್ಷತ್ರಗಳನ್ನೂ ಮರೆಮಾಡಿಬಿಟ್ಟಿದ್ದವು. ಅಷ್ಟದಿಕ್ಕುಗಳಿಂದಲೂ ಭಯ ಹುಟ್ಟಿಸುವಂತಹ ನಾನಾವಿಧದ ಶಬ್ದಗಳು ತೂರಿಬರುತ್ತಿದ್ದವು. ಹೀಗಿದ್ದ ಅಪರಿಚಿತವಾದ ಸನ್ನಿವೇಶದಲ್ಲಿ ಸರಿಯಾಗಿಯೇ ಸಿಕ್ಕಿಬಿದ್ದಿದ್ದೆ. ಹಿಂದಿರುಗಿ ಹೋಗುವುದರಲ್ಲಿ ಅರ್ಥವಿರಲಿಲ್ಲ. ಅಲ್ಲಿಯೇ ನಿಲ್ಲುವುದೂ ಸಾಧ್ಯವಿರಲಿಲ್ಲ. ಮುಂದುವರೆಯಲೇಬೇಕಿತ್ತು, ಸುರಕ್ಷಿತವಾದ ಜಾಗವೊಂದನ್ನು ಹುಡುಕಲೇಬೇಕಿತ್ತು. ಅನ್ಯಮಾರ್ಗವಿಲ್ಲದೆ ಯಮಭಾರದ ಬೈಕನ್ನು ತಳ್ಳಿಕೊಂಡು ತಡವರಿಸುತ್ತಾ ನಡೆಯ ತೊಡಗಿದೆ. ಎಷ್ಟೋ ಹೊತ್ತಿನ ಬಳಿಕ, ಒಂದು ಕಡೆ ರಸ್ತೆಯು ಎಡಕ್ಕೆ ತಿರುಗಿತ್ತು. ಆ ತಿರುವನ್ನು ದಾಟಿದ ಕೂಡಲೇ ದೂರದಲ್ಲಿ ಏನೋ ಹೊಳೆದಂತಾಯಿತು.
ಗಮನವಿಟ್ಟು ನೋಡಿದೆ. ಹೌದು, ಬೆಳಕು. ಅಲ್ಲಿ ಒಂದಲ್ಲ ಹಲವು ದೀಪಗಳು ಮಿನುಗುತ್ತಿದ್ದವು. ದೂರದಲ್ಲಿ ಯಾವುದೋ ಊರಿರಬೇಕು ಎಂದು ಊಹಿಸಿದೆ. ಆದರೆ ಆ ದೀಪಗಳು ಚಲಿಸುತ್ತಿದ್ದಂತೆ ತೋರಿತು, ಯಾರೋ ಮನುಷ್ಯರು ದೀಪಗಳನ್ನು ಹಿಡಿದುಕೊಂಡು ಓಡಾಡುತ್ತಿರಬೇಕು ಅನ್ನಿಸಿತು. ಕಾಡುಗಳ್ಳರ ಕತೆ ಮತ್ತೆ ನೆನಪಾಗಿ ಗಾಬರಿಯಾದೆ. ಅಲ್ಲಿಗೆ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿದ್ದಾಗಲೇ ದೀಪಗಳು ಅಡ್ಡಾದಿಡ್ಡಿಯಾಗಿ ಚಲಿಸಿದಂತೆ ಭಾಸವಾಯಿತು. ಮನುಷ್ಯರಾದವರು ಹಾಗೆ ಅಡ್ಡಾದಿಡ್ಡಿಯಾಗಿ ಚಲಿಸುವುದು ಸಾಧ್ಯವೇ ಇಲ್ಲ. ಆ ವೇಗದ ಚಲನೆ ಯಾವ ರೀತಿಯಲ್ಲಿಯೂ ಮಾನವರ ಚಟುವಟಿಕೆಗಳಿಗೆ ಹೊಂದುವುದಿಲ್ಲ. ಅದು ಖಂಡಿತವಾಗಿಯೂ ಮನುಷ್ಯರ ಕೆಲಸವಲ್ಲ. ಹಾಗಾದರೆ ಬೇರೇನು!?!?
ಈ ಹೊಸ ಬೆಳವಣಿಗೆಯಿಂದ ತಲೆಕೆಟ್ಟಂತಾಯಿತು. ಬೆಳಕನ್ನು ಕಂಡರೂ ಮನಸ್ಸು ಸಂಭ್ರಮಿಸಲಿಲ್ಲ. ಅಪಾಯದಿಂದ ಪಾರಾಗಲಿದ್ದೇನೆ ಎಂದು ಸಮಾಧಾನವೂ ಆಗಲಿಲ್ಲ. ಅದು ನಿಜವಾದ ಬೆಳಕೋ ಅಥವಾ ಭ್ರಮೆಯೋ ಎಂಬುದೂ ಗೊತ್ತಾಗಲಿಲ್ಲ. ವಾಸ್ತವ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವ ಶಕ್ತಿಯೇ ನನ್ನಲ್ಲಿ ಇಲ್ಲವಾಯಿತು. ಒಟ್ಟಾರೆ ನನ್ನ ಬುದ್ಧಿಗೇ ಮಂಕು ಕವಿದಂತಾಗಿ, ಹುಚ್ಚು ಹಿಡಿಯುವುದೊಂದು ಮಾತ್ರಬಾಕಿ ಉಳಿದಿತ್ತು.
ನಮ್ಮಜ್ಜಿ ಹೇಳುತ್ತಿದ್ದ ಕತೆಗಳಲ್ಲಿ ಪದೇಪದೇ ಬರುತ್ತಿದ್ದ ಕೊಳ್ಳಿದೆವ್ವಗಳ ಎಲ್ಲಾ ಲಕ್ಷಣಗಳೂ ಆ ಬೆಳಕಿನ ತುಣುಕುಗಳಿಗೆ ಇದ್ದಂತೆ ತೋರಿತು. ಅವು ದೆವ್ವಗಳಿರಬಹುದಾ? ದೆವ್ವಭೂತಗಳನ್ನು ನಾನು ನಂಬುವುದಿಲ್ಲವಾದರೂ ನಾನಿದ್ದ ಆ ಅನಿಷ್ಟ ಸನ್ನಿವೇಶದಲ್ಲಿ ದೆವ್ವಗಳು ನೆನಪಾಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ('ದೆವ್ವಗಳು ತಮ್ಮನ್ನು ನಂಬುವವರ ಮೇಲೆ ಕರುಣೆ ತೋರಿ, ಅವರಿಗೆ ತೊಂದರೆ ಕೊಡದೇ, ಬಿಟ್ಟುಬಿಡುವ ಸಾಧ್ಯತೆಗಳಿರುತ್ತವೆ. ಆದರೆ ನಾಸ್ತಿಕನಾದ ನನ್ನನ್ನು ಯಾವ ಕಾರಣಕ್ಕೂ ಸುಮ್ಮನೆ ಬಿಡಲಾರವು' ಎನ್ನುವ ತಾತ್ವಿಕವಾದ ಮಹದ್ವಿಚಾರವೂ ಸುಳಿಯಿತು)
ಅದು 'ಮನುಷ್ಯರ ಕೆಲಸವಲ್ಲ. ದೆವ್ವಭೂತಗಳು ಅಸ್ತಿತ್ವದಲ್ಲೇ ಇಲ್ಲ, ಆದ್ದರಿಂದ ದೆವ್ವಭೂತಗಳ ಕೆಲಸವೂ ಅಲ್ಲ, ಹಾಗಾದರೆ ಮತ್ತೆಲ್ಲಿಂದ ಬರುತ್ತಿದೆ ಈ ಬೆಳಕು?' 'ಮಿಂಚುಹುಳು'ಗಳ ಕೆಲಸವಿರಬಹುದಾ?' ಇದ್ದರೂ ಇರಬಹುದು, ಆದರೆ ಚಲಿಸುವ ಬೆಳಕಿನ ಕಿಡಿಗಳ ನಡುವೆ ಕೆಲವು ತುಣುಕುಗಳು ಅಲುಗಾಡದೆ ಒಂದೇಕಡೆ ಸ್ಥಿರವಾಗಿ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅದು ಮಿಂಚುಹುಳುಗಳು ಬೀರುವ ಬೆಳಕಿಗಿಂತ ಸಂಪೂರ್ಣ ಭಿನ್ನವಾಗಿದ್ದ ಹಾಗಿದೆ. ಹಾಗಾದರೆ ಅದೇನಿರಬಹುದು!? 'ಇದೊಳ್ಳೆ ವಿಚಿತ್ರ ಕತೆಯಾಯಿತಲ್ಲ! ಆಗಿದ್ದಾಗಲಿ ಅದೇನೆಂದು ನೋಡಲೇಬೇಕೆಂದು ನಿರ್ಧರಿಸಿ,' ಬೈಕನ್ನು ಅಲ್ಲಿಯೇ ಬಿಟ್ಟು, ಮುಂದೆ ಹೋದೆ. ನಾನಂದುಕೊಂಡಂತೆಯೇ ಅಲ್ಲಿ ಮಿಂಚುಹುಳುಗಳು ಹಾರಾಡುತ್ತಿದ್ದವು. ಇನ್ನೂ ಸ್ವಲ್ಪ ಮುಂದೆ ಹೋಗಿ ನೋಡಿದಾಗ ದೂರದಲ್ಲೊಂದು ಊರಿರುವುದೂ ಪತ್ತೆಯಾಯಿತು.
ಅದೊಂದು ಚಿಕ್ಕ ಹಳ್ಳಿ. ಪ್ರಕೃತಿಯ ಮಡಿಲಲ್ಲಿ ನೆಲೆಸಿದ್ದ ಆ ಗ್ರಾಮವು ಆಧುನಿಕತೆಯಿಂದ ದೂರ ಉಳಿದಂತಿತ್ತು. (ಆ ಊರನ್ನು ನೋಡಿದ ತಕ್ಷಣ, ನೂರು ವರ್ಷಗಳ ಹಿಂದೆ ನಮ್ಮೂರು ಕೂಡಾ ಹೀಗೆಯೇ ಇದ್ದಿರಬಹುದು ಎನ್ನಿಸಿತು.) ಅಂದು ಹಬ್ಬವಿದ್ದುದರಿಂದ ಇಡೀ ಊರನ್ನೇ ಬಗೆಬಗೆಯ ದೀಪಗಳಿಂದ ಅಲಂಕರಿಸಿದ್ದರು. ಮನೆಗಳ ಮುಂದೆ ರಂಗೋಲಿ, ತಳಿರುತೋರಣಗಳು ವಿಜೃಂಭಿಸುತ್ತಿದ್ದವು. ಎಲ್ಲರೂ ಸಡಗರದಿಂದ ಹರಟುತ್ತಾ, ನಲಿಯುತ್ತಾ, ಓಡಾಡುತ್ತಿದ್ದರು. ಅಂಜಿಕೆಯಿಂದಲೇ ಊರಿನ ಹೆಬ್ಬಾಗಿಲ ಬಳಿಗೆ ಹೋಗಿನಿಂತಿದ್ದ ನನ್ನನ್ನು ಮಾತನಾಡಿಸಿ, ಒಳಗೆ ಕರೆದರು. ಕೈಕಾಲು ಮುಖ ತೊಳೆದುಕೊಳ್ಳಲು ಅನುವು ಮಾಡಿಕೊಟ್ಟರು. ಆನಂತರ ಹಣ್ಣುಗಳನ್ನು ಮತ್ತು ತಂಪಾದ ಹಾಲನ್ನು ನೀಡಿ ಸತ್ಕರಿಸಿದರು.
ಆಯಾಸ ಪರಿಹಾರವಾದ ಮೇಲೆ ಎಲ್ಲರ ಜೊತೆಗೂಡಿ ಊರು ಸುತ್ತಿದೆ. ಆನಂತರ ಎಲ್ಲರೂ ಒಂದೆಡೆ ಸೇರಿ, ಹರಟೆ ಹೊಡೆಯುತ್ತಾ, ಒಟ್ಟಿಗೆ ಊಟ ಮಾಡಿದೆವು, ಆ ನಡುವೆ ಕೆಲವು ಹುಡುಗರು ಹೋಗಿ ನನ್ನ ಬೈಕನ್ನು ತಳ್ಳಿಕೊಂಡು ಬಂದು ನಿಲ್ಲಿಸಿದ್ದರು.
ಮಲಗುವ ಸಮಯವಾಯಿತು. ಸೆಖೆಯಿತ್ತಾದ್ದರಿಂದ, ಬಯಲಿನಲ್ಲಿದ್ದ ಕಟ್ಟೆಗಳ ಮೇಲೆ ಹಾಸಿಗೆಗಳನ್ನು ಹಾಸಿಕೊಂಡು ಮಲಗಿದೆವು. ಎಲ್ಲರೂ ಮಲಗಿದ ನಂತರ, ಆಗಸದಲ್ಲಿ ಮಿನುಗುತ್ತಿದ್ದ ಚುಕ್ಕಿಗಳನ್ನು ದಿಟ್ಟಿಸುತ್ತಾ, ಅಂದಿನ ಘಟನಾವಳಿಗಳನ್ನು ನೆನಪುಮಾಡಿಕೊಂಡೆ. ಆ ಜನರ ಪ್ರೀತಿ ವಿಶ್ವಾಸ, ಪರೋಪಕಾರಶೀಲತೆ, ಸಹಕಾರೀ ಮನೋಭಾವ, ಹಂಚಿಕೊಂಡು ಬದುಕುವ ಗುಣ, ಒಗ್ಗಟ್ಟು, ಇವೆಲ್ಲವೂ ನನ್ನಲ್ಲಿ ದೊಡ್ಡ ಅಚ್ಚರಿಯನ್ನು ಮೂಡಿಸಿದವು. ಈ ಕಾಲದಲ್ಲಿಯೂ ಇಂತಹ ಊರುಗಳು ಮತ್ತು ಇಂತಹ ಜನರಿರುವುದು ಸಾಧ್ಯವಾ ಎನ್ನಿಸಿತು.
ಬೆಳಿಗ್ಗೆ ಎಚ್ಚರವಾಗುವ ವೇಳೆಗಾಗಲೇ ಸೂರ್ಯನ ಬಿಸಿಲು ಬಲಿತಿತ್ತು. ನನ್ನ ಪಕ್ಕದಲ್ಲಿ ಮಲಗಿದ್ದವರು ಆಗಲೇ ಎದ್ದು ಹೋಗಿದ್ದರು. ಎದ್ದು ಹೋಗಿ ಅವರಿಗಾಗಿ ಹುಡುಕಾಡಿದೆ. ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಪೊದೆಗಳು ಮತ್ತು ಮುಳ್ಳಿನ ಗಿಡಗಳು, ಮುರಿದುಬಿದ್ದ ಕಲ್ಲಿನ ಕಂಬಗಳು, ಚಪ್ಪಡಿಗಳು, ಮಣ್ಣಿನ ಸಣ್ಣಸಣ್ಣ ದಿಬ್ಬಗಳು ಕಣ್ಣಿಗೆ ಬಿದ್ದವು. ಅದೊಂದು ಹಾಳೂರು ಎಂಬುದು ತಕ್ಷಣವೇ ಗೊತ್ತಾಯಿತು. ಅಲ್ಲಿ ಜನರೂ ಇರಲಿಲ್ಲ! ಹಳ್ಳಿಯೂ ಇರಲಿಲ್ಲ! ಹಿಂದಿರುಗಿ ನಾನು ಮಲಗಿದ್ದ ಸ್ಥಳಕ್ಕೆ ಬಂದೆ. ಆ ಜಾಗವು, ನಾನು ಅಂದುಕೊಂಡಂತೆ, ಕಟ್ಟೆಯಾಗಿರಲಿಲ್ಲ, ಬದಲಿಗೆ ಪುರಾತನವಾದ ಸ್ಮಶಾನದ ನಡುವೆ ಇದ್ದ ಒಂದು ಸಮಾಧಿಯಾಗಿತ್ತು.
ಹಾಗಾದರೆ ಕಳೆದ ರಾತ್ರಿ ನನಗೆ ಆಹಾರವನ್ನು ನೀಡಿ, ಆಶ್ರಯವನ್ನು ಕೊಟ್ಟು, ಸತ್ಕರಿಸಿ, ನೆರವು ನೀಡಿದವರು ಯಾರು? ನನ್ನ ಪಕ್ಕದಲ್ಲಿ ಹರಟುತ್ತಾ ಮಲಗಿದ್ದವರು, ಅವರೆಲ್ಲಿಗೆ ಹೋದರು! ಅವರ ಮನೆಗಳು ಏನಾದವು! ಸುಂದರವಾಗಿದ್ದ ಆ ಊರು ಎಲ್ಲಿಹೋಯಿತು!! ಕೆಟ್ಟು ಹೋಗಿದ್ದ ನನ್ನ ಬೈಕನ್ನು ಯಾರು ಸರಿ ಮಾಡಿದರು! ಕಣ್ಣುಗಳ ಮುಂದೆ ಬರೀ ಪ್ರಶ್ನಾರ್ಥಕ ಚಿನ್ಹೆಗಳೇ ಕುಣಿದಾಡತೊಡಗಿದವು.
ಆದರೆ ಮೇಲಿನ ಯಾವ ಪ್ರಶ್ನೆಗಳಿಗೂ ಉತ್ತರವನ್ನು ಕೆದಕುವ ಧೈರ್ಯವಾಗಲಿಲ್ಲ. ಆದಷ್ಟು ಶೀಘ್ರವಾಗಿ ಆ ಅಜ್ಞಾತ ಸ್ಥಳದಿಂದ ತೊಲಗುವ ಏಕೈಕ ಇಚ್ಛೆಯೊಂದಿಗೆ ಬೈಕನ್ನು ಸ್ಟಾರ್ಟ್ ಮಾಡಿದೆ. ಮರುಕ್ಷಣವೇ ಯಾವ ಅಡ್ಡಿ ಆತಂಕಗಳನ್ನೂ ಲೆಕ್ಕಿಸದೆ ಗಾಳಿಯೊಂದಿಗೆ ಸ್ಪರ್ಧೆಗಿಳಿದಿದ್ದೆ. .........
- ಬಿಎಸ್ಎ -