ಕಗ್ಗ ದರ್ಶನ – 43 (2)
ಮಲವಿರದ ಮೈಯಿರದು ಕೊಳೆಯಿರದ ಮನವಿರದು
ಗಳಿಗೆ ಗಳಿಗೆಯ ಬೆವರೆ ಬಾಳಿಕೆಯ ಕುರುಹು
ಕೊಳೆವುದಚ್ಚರಿಯಲ್ಲ, ಕೊಳೆಯದಿಹುದಚ್ಚರಿಯೊ
ಜಳಕವಾಗಿಸು ಬಾಳ್ಗೆ – ಮರುಳ ಮುನಿಯ
ಹೊಲಸಿಲ್ಲದ ಮೈಯಿಲ್ಲ. ಹಾಗೆಯೇ ಕೊಳೆಯಿಲ್ಲದ ಮನಸ್ಸಿಲ್ಲ. ಕ್ಷಣಕ್ಷಣವೂ ಮೈ ಬೆವರುತ್ತದೆ – ಅದುವೇ ನಾವು ಬದುಕಿದ್ದೇವೆ ಎಂಬುದರ ಗುರುತು (ಕುರುಹು). ಮನಸ್ಸಿಗೆ ಕೊಳೆಯಾಗುವುದು ಅಚ್ಚರಿಯಲ್ಲ; ಕೊಳೆಯಾಗದಿರುವುದೇ ಅಚ್ಚರಿ ಎನ್ನುತ್ತಾರೆ ಮಾನ್ಯ ಡಿವಿಜಿ. ಈ ಕೊಳೆ ಕಳೆಯುವ ಉಪಾಯವನ್ನೂ ಅವರು ಸೂಚಿಸುತ್ತಾರೆ: ಜಳಕವಾಗಿಸು ಬಾಳ್ಗೆ. ಅಂದರೆ ದೇಹದ ಹೊಲಸು ತೊಳೆಯಲು ಪ್ರತಿದಿನ ಸ್ನಾನ ಮಾಡುವಂತೆ ಮನದ ಕೊಳೆ ತೊಳೆಯಲು ಪ್ರತಿ ಕ್ಷಣವೂ ಜಳಕ ಮಾಡು; ಮನವನ್ನು ಸದಾ ನಿರ್ಮಲವಾಗಿ ಇರಿಸಿಕೋ.
ನೂರು ಆದರ್ಶ ವ್ಯಕ್ತಿಗಳ ಹೆಸರು ಬರೆಯಿರಿ. ಆ ಪಟ್ಟಿಯಲ್ಲಿ ಇವರ ಹೆಸರು ಇದ್ದೇ ಇರುತ್ತದೆ:ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಬುದ್ಧ, ಮಹಾವೀರ, ಗುರು ನಾನಕ್, ಚಕ್ರವರ್ತಿ ಅಶೋಕ, ಏಸುಕ್ರಿಸ್ತ, ಮಹಮ್ಮದ್ ಪೈಗಂಬರ್, ರಾಮಕೃಷ್ಣ ಪರಮಹಂಸ, ವಿವೇಕಾನಂದ, ರಮಣ ಮಹರ್ಷಿ, ಲಾವೊ ತ್ಸು, ಪ್ಲೇಟೋ, ಸಾಕ್ರೆಟಿಸ್, ಮದರ್ ಥೆರೆಸಾ, ಮಹಾತ್ಮಾ ಗಾಂಧಿ. ಇವರೆಲ್ಲರೂ ಮಾಡಿದ್ದು ಅದನ್ನೇ – ಕ್ಷಣಕ್ಷಣವೂ ಮನಸ್ಸಿಗೆ ಜಳಕ. ಅದರಿಂದಾಗಿ ಅವರ ಮನಸ್ಸಿನಲ್ಲಿ ಒಳ್ಳೆಯ ಯೋಚನೆಗಳೇ ತುಂಬಿದವು. ಎಲ್ಲರಿಗೂ ಒಳಿತಾಗಲಿ ಎಂಬ ಭಾವ ಮನದಲ್ಲಿ ತುಂಬಿ ತುಳುಕಾಡಿದಾಗ, ಆ ಚಿಂತನೆಯನ್ನು ಸರ್ವರಿಗೂ ಹಂಚಲು ಅವರಿಗೆ ಸಾಧ್ಯವಾಯಿತು.
ಇದಕ್ಕೆ ವಿರುದ್ಧವಾಗಿ ಬದುಕಿದರೆ ಏನಾಗುತ್ತದೆ? “ದೇವಮಾನವ”ರೆಂದು ಕರೆಸಿಕೊಂಡು, ಕೆಟ್ಟ ಕೆಲಸಗಳಲ್ಲಿ ತೊಡಗಿದ ಇಬ್ಬರ ಉದಾಹರಣೆ ನಮ್ಮೆದುರಿಗಿದೆ. ಒಬ್ಬರು ಈಗ ಜೈಲಿನಲ್ಲಿರುವ ಆಸಾರಾಮ್ ಬಾಪು. ಇವರ ಮೇಲಿದೆ ಕೊಲೆ ಹಾಗೂ ಮಾನಭಂಗದ ಆಪಾದನೆ. ಈ ಪ್ರಕರಣಗಳ ಇಬ್ಬರು ಪ್ರಮುಖ ಸಾಕ್ಷಿಗಳ ಕೊಲೆಯಾಗಿದ್ದರೆ, ೧೭ ಸಾಕ್ಷಿಗಳ ಮೇಲೆ ಧಾಳಿಯಾಗಿದೆ! ಇನ್ನೊಬ್ಬರು ಇಪ್ಪತ್ತು ವರುಷ ಕಠಿಣ ಶಿಕ್ಷೆ ಅನುಭವಿಸಲಿಕ್ಕಾಗಿ ೨೮ ಆಗಸ್ಟ್ ೨೦೧೭ರಂದು ಜೈಲು ಸೇರಿದ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರುಮೀತ್ ರಾಂ ರಹೀಂ ಸಿಂಗ್. ಇವರ ಮೇಲಿನ ಮಾನಭಂಗದ ಆಪಾದನೆ ಸಾಬೀತಾಗಿದೆ. ಕೊಲೆಗಳ ಆಪಾದನೆಯ ವಿಚಾರಣೆ ಕೊನೆಯ ಹಂತದಲ್ಲಿದೆ. ಕ್ಷಣಕ್ಷಣವೂ ಮನದ ಕೊಳೆ ತೊಳೆಯದಿದ್ದರೆ, ಅಂತಹ ವ್ಯಕ್ತಿಗಳೂ ಎಂತಹ ಅಧೋಗತಿಗೆ ಇಳಿಯುತ್ತಾರೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೇ?